Home / ಕಥೆ / ಸಣ್ಣ ಕಥೆ / ಸುಭದ್ರೆ

ಸುಭದ್ರೆ

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ.
“ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.”
“ಎಷ್ಟು ದಿನ ಈ ನಿನ್ನ ಮಾತೊಂದನ್ನೇ ನಂಬಿಕೊಂಡಿರುವದು? ಹತ್ತಿರ ಹಾಯಗೊಡುವದಿಲ್ಲ ನೀನು.”
“ಸಮಯ ಬರಲಿ ಶ್ರೀಧರ…ಛೇ. ನಾಲ್ಕು ಹೊಡೆದು ಬಿಟ್ಟಿತು. ಇನ್ನು ನಾನು ಹೊರಡುತ್ತೇನೆ.”
“ನಾಳೆ ಬರುವಿಯಲ್ಲ ?”
“ಬರದೆ?….”
ಏನೋ ನೆನಪಾಗಿ ಹತ್ತು ಹೆಜ್ಜೆ ಹೋದವಳು ಹಿಂದಿರುಗಿ ಬಂದು “ಮರತೇ ಹೋಯಿತು. ಮುದ್ದಾಂ ಕೇಳಬೇಕೆಂದು ಮಾಡಿಕೊಂಡಿದ್ದೆ….”
“ಗೊತ್ತಾಯಿತು ಬಿಡು. ಎಷ್ಟು ?”
“ಹತ್ತು ಸಾಕು.”
“ನನ್ನಿಂದ ಮಾತ್ರ ನೀನು ಸುಲಿದುಕೋ, ನೀನು ಮಾತ್ರ….”
“ಬೇಡ, ಕೊಡುವದು ಬೇಡ, ನಾನು ದರಿದ್ರೆಯೆಂದು ನಿನ್ನ ಹೇಳಿಕೆಯಲ್ಲವೇ? ಆಗಲಿ.” ಕೋಪಿಸಿಕೊಂಡವಳಂತೆ ನಟಿಸಿದಳು.
“ಸುಭದ್ರಾ…” ಹಣಕೊಡುವ ನೆವದಿಂದಾದರೂ ಅವಳನ್ನು ಮುಟ್ಟಲು ಯತ್ನಿಸಿದ ಶ್ರೀಧರ, ಆದರೆ ಪ್ರಯೋಜನವಾಗಲಿಲ್ಲ.“ ಎಂಟಿದೆ. ನಾಳೆ ಬಾ ಮತ್ತೆರಡು ಕೊಡುವೆ!” ಒಂದು ಅರೆನಗೆಯ ಪ್ರತ್ಯುಪಕಾರ ನೀಡಿದಳು ಸುಭದ್ರೆ.
‘ಜಂಬದ ಚೀಲ’ ( Vanity bag ) ದಲ್ಲಿ ನೋಟು ತುರುಕುತ್ತ ಅವಳು ಗೇಟು ದಾಟಿದಳು.
“ಬಹಳ ಪಕ್ಕಾ! ಹತ್ತಿರ ಹಾಯದೆಯೇ ನನ್ನ ಸುಲಿಗೆ ನಡೆಸಿದ್ದಾಳೆ.” ಕಿಡಕಿಯಿಂದ ಸುಭದ್ರೆಯು ಹೋಗುವುದನ್ನೇ ನೋಡುತ್ತ ಅಂದುಕೊಂಡ ಶ್ರೀಧರ.
* ** *
“ಧಾಂದಲೆ ಹಾಕಬೇಡಿ, ಏನೋ ಅಂಗಿ ತಂದು ಹತ್ತು ನಿಮಿಷ ಆಗಲಿಲ್ಲ ಈಗಲೇ ಇಷ್ಟು ಕೆಸರು…. ಸುಮ್ಮಗಿರು ಕಮಲು, ನಾಳೆ ನಿನಗೆ ಅಣ್ಣನ ಅಂಗಿ ಗಿಂತ ಚೆಂದದ ಗೌನು ತಂದುಕೊಡುತ್ತೇನೆ. ಸುಮ್ಮನಿರು ಮಗು.”
“ಆಯಿ, ಅಪ್ಪ ಬಂದ!… ಅಪ್ಪ ನಂಗೆ ಹೊಸಂಗಿ ತಂದಾಳೆ ಆಯಿ!….’ ಗೋಪಾಲ ಕುಣಿಯುತ್ತ ಹೋಗಿ ತಂದೆಯನ್ನು ಇದಿರುಗೊಂಡು ಬಂದ.
ನಿತ್ಯದಂತೆ ಗಂಡನ ಕೋಟು ಕಳಚಿ ಒಳಗೆ ಕರೆದೊಯ್ದು ಚಹ ಸೋಸಿದಳು ಸುಭದ್ರೆ. ತಾಯಿಯು ಮಗನನ್ನು ಉಪಚರಿಸುವ ಅವಳ ಬಗೆಗೆ ಶ್ರೀಪತಿ ಮಾರುಹೋಗಿದ್ದ. ದಣಿದು ಬರುವ ಜೀವಕ್ಕೆ ಬೇಕಾದುದೂ ಅದೇ ಆಗಿತ್ತು.
“ಇಂದು ಶ್ರೀಧರರಾಯನಿಗೆ ಎಷ್ಟು ನಾಮ ಹಾಕಿದೆ?” ಅರೆ ನಗೆಯಿಂದ ಕೇಳಿದ.
“ಹತ್ತು ರೂಪಾಯಿ ಬೇಕು ಅಂದೆ. ಎಂಟು ಕೊಟ್ಟ. ನಾಳೆ ಮತ್ತೆ ಎರಡು ಕೊಡುವೆನೆಂದಿದ್ದಾನೆ” ತೀರ ಸಹಜವಾಗಿಯೇ ಹೇಳಿದಳು ಸುಭದ್ರೆ.
“ಹಾಗಾದರೆ ನಾಳೆ ನೀನು ಅವನಲ್ಲಿಗೆ ಹೋಗುವವಳು.”
“ಹಣ ಬೇಕಾದರೆ ಹೋಗಬೇಕು, ಏನು ಮಾಡಲಿ?”
“ಸುಭದ್ರೆ, ನನಗೇಕೋ ನೀನು ಹೀಗೆ ಮಾಡುವದು ಸರಿಯೆನಿಸುವದಿಲ್ಲ.”
“ಸಂಶಯ ಅಲ್ಲವೇ?”
“ಸಂಶಯ ಸಹಜವಲ್ಲವೇ? ಮೇಲಾಗಿ ಜನ ಏನೆಂದುಕೊಂಡಾರು?”
“ಜನ ಮಣ್ಣು ತಿಂದಿತು. ನಾವು ಹೇಗಿದ್ದರೆ ಅವರಿಗೇನು? ಅವರೇನೂ ಕೊಟ್ಟು ನಡಿಸಬೇಕಾಗಿಲ್ಲ.”
“ಆದರೂ….”
“ನನ್ನಲ್ಲಿ ನಂಬಿಗೆಯಿಲ್ಲ ನಿಮಗೆ, ಆಣೆ ಮಾಡಿ ಹೇಳುತ್ತೇನೆ. ನನ್ನ ಮೈಯನ್ನು ಸೋಕುವ ಧೈರ್ಯ ಶ್ರೀಧರನಿಗಿಲ್ಲ. ಏನೋ ನಾನೆಂದರೆ ಅವನಿಗೆ ಹುಚ್ಚು ಕೇಳಿದಷ್ಟು ಕೊಡುತ್ತಾನೆ. ಪಾಪ! ಏನೋ ಆಸೆ ಕಟ್ಟಿಕೊಂಡು ಉದಾರಿಯಂತೆ ನಡೆಯುತ್ತಾನೆ. ಆದರೆ ಅವನು ಬಯಸಿದ ಔದಾರ್ಯ ಈ ಮೈ-ಮನಗಳಿಂದಾಗದು.”
“ನೀನು ಅವನನ್ನು ವಂಚಿಸುತ್ತೀ.”
“ಜಗತ್ತೇ ಹಾಗೆ ನಡೆದಿದೆ. ಅಲ್ಲದಿದ್ದರೆ ಶ್ರೀಮಂತ ಬಡವನೆಂಬ ಭೇದವೆಲ್ಲಿರುತ್ತಿತ್ತು?”
“ನನ್ನ ಮಡದಿ ಹೀಗೆ ಹಣ ತರುವದು ನನಗೇ ಸೇರದು. ನಿನ್ನಲ್ಲಿ ನಂಬಿಗೆಯಿಲ್ಲ ಅಂತಲ್ಲ. ಆದರೂ….”
“ನನ್ನಲ್ಲಿ ನಂಬಿಗೆಯಿದೆ; ನಿಮ್ಮ ಪಗಾರು ತಿಂಗಳಿಗೆ ೩೫ ರೂಪಾಯಿ; ಮನೆಯಲ್ಲಿ ನಾಲ್ಕಾರು ಮಕ್ಕಳು; ನಾನು ಹೀಗೆ ಯುಕ್ತಿಯಿಂದ ಹಣ ತಂದರೆ ನಿಮ್ಮ ಗೌರವಕ್ಕೆ ಭಂಗ, ನೀವೇ ಹೆಚ್ಚು ಹಣ ತನ್ನಿ.”
“ಕದ್ದರೆ ಹೆಚ್ಚು ಸಿಗಬಹುದು.”
“ಹಾಗಾದರೆ ಸುಮ್ಮನಿರಿ.”
“ಬಡತನದಲ್ಲಿಯೇ ಆದರೂ ಮರ್ಯಾದೆಯಿಂದ ಇರಲು ಬರುತ್ತದೆ.”
“ಓಹೋ, ನಾನು ತರುವ ಹಣ ನನ್ನ ಮೈ ಒತ್ತಿಯಿಟ್ಟು ಎಂದೇ ನಿಮ್ಮ ಗ್ರಹಿಕೆ! ನನಗೆ ಅರ್ಧ ಹೊಟ್ಟೆ ಉಂಡು ಇರಲು ಬರುವದಿಲ್ಲ. ನಿಮ್ಮಿಂದ ಹೆಚ್ಚು ತರಲು ಸಾಧ್ಯವಿಲ್ಲ.
“ಸಾಕುಮಾಡು ನಿನ್ನ ಪುರಾಣ ಸುಭದ್ರೆ.”
“ಅಯ್ಯೋ! ೩೫ ಕ್ಕಿಂತ ಒಂದು ಕಾಸು ಹೆಚ್ಚಿಗೆ ಹುಟ್ಟಿಸಲಾಗದವರಿಗೆ ಇಂಥ ಮಾತೆಂದರೆ ಸಿಟ್ಟು, ಸುಮ್ಮನಿರಿ ಯಾಕೆ ಕೋಪಿಸಿಕೊಳ್ಳುವದು?
ನನ್ನಲ್ಲಿ ಸಂಶಯ? ನಾನು ಪರಪುರುಷನನ್ನು ಬಯಸಿಲ್ಲವೆಂದು ಆಣೆ ಮಾಡಿ ಹೇಳಿದೆ. ನಂಬಿಗೆಯಿಲ್ಲ ನಿಮಗೆ, ನನಗೆ ಒಂದು ವೇಳೆ ಅಂಥ ಚಟವಿದ್ದರೆ ಹೀಗೆಲ್ಲ ಬಿಚ್ಚಿ ಹೇಳುತ್ತಿದ್ದೆನೇ? ಹಗಲು ಹನ್ನೆರಡು ತಾಸು ಎಲ್ಲಿಯೋ ಕಚೇರಿಯ ಮೂಲೆಯಲ್ಲಿ ಗೀಚುತ್ತ ಕುಳಿತುಕೊಳ್ಳುವ ನಿಮಗೆ ಅದು ತಡೆಯುವದಾದರೂ ಸಾಧ್ಯವೇ? ಬೇರೆಯವರ ಮುಂದೆ ಬೆಡಗು ಮಾಡಿ ಅವರಿಗೆ ಟೊಪ್ಪಿ ಹಾಕಿದರೆ ಮಾನ ಕಳೆದುಕೊಂಡಂತಾಯಿತೆ? ಒಟ್ಟೂ ಗಂಡಸರಿಗೆ ಮತ್ಸರ, ಆ ಮತ್ಸರದಿಂದ ಎಲ್ಲ ನೀತಿಗಳ ಬೇಲಿ, ಸ್ತ್ರೀಯರಿಗೆ ಸ್ವಾತಂತ್ರ್ಯ ಕೊಡಬೇಕು ಅನ್ನುವವರೂ ನೀವೆ. ಸ್ವಾತಂತ್ರ ವಹಿಸಿ ಮರ್ಯಾದೆಯಿಂದಲೇ. ಕೇವಲ ಪ್ರದರ್ಶನದಿಂದಲೇ ಗಳಿಸಿದರೆ ಹೊಟ್ಟೆ ಕಿಚ್ಚು ಖರೆಯಾಗಿ ಹೇಳಿ: ನಾನು ನಾಚಿಕೆಗೇಡಿಯಾಗುತ್ತಿದ್ದೇನೆಂಬ ಭೀತಿಯೇ ಅಥವಾ ಶ್ರೀಧರನ ಹುಚ್ಚಿನಿಂದ ಪುರುಷ ಪ್ರಪಂಚಕ್ಕಾಗುವ ಅಪಮಾನಕ್ಕಾಗಿ ಸಿಟ್ಟ?….”
“ಅರೆ ಅರೆ ಅರೆ! ಏನು ನಿನ್ನ ಭಾಷಣ! ಹ್ಞ!”
“ಭಾಷಣ ಅಲ್ಲ. ಗೀಷಣ ಅಲ್ಲ. ವಸ್ತುಸ್ಥಿತಿ ಹೇಳಿದೆ. ನೀವು ಎಷ್ಟೇ ಹೇಳಿದರೂ, ಏನೇ ತಿಳಕೊಂಡರೂ, ನೀವು ಹೆಚ್ಚಿಗೆ ಸಂಪಾದಿಸದನಕ ನಾನು ನನ್ನ ಮಕ್ಕಳು ಮನೆಗಾಗಿ ಶ್ರೀಧರನಂಥ ಕೆಲವು ಶ್ರೀಮಂತ ಕುರಿಗಳಿಗೆ ಮಾತಿನ ಸವಿಯನ್ನೇ ಉಣಿಸಿ ಹಣ ತರುವದನ್ನು ನಿಲ್ಲಿಸುವದಿಲ್ಲ. ಸ್ನೇಹದಿಂದ ಒಂದು ಮಾತಾಡಿದರೆ, ಹೀಗೊಮ್ಮೆ ನೋಡಿದರೆ, ಕೇಳಿದಷ್ಟು ರೊಕ್ಕ ಕೊಡುತ್ತಾರೆ ಅವರು. ಇದು ನೀವು ಸಂಶಯ ಪಡುವ ಹಾದರ ಗೀದರ ಏನೂ ಅಲ್ಲ. ತಿಳಿಯಿತೇ? ಇನ್ನು ಬೇರೆ ಗಂಡಸರೊಡನೆ ಮಾತಾಡಕೂಡದು; ಅವರನ್ನು ನೋಡಲೂ ಕೂಡದು; ಅವರು ಕೊಡುವ ಕಾಣಿಕೆಗಳನ್ನು ತೆಗೆದುಕೊಳ್ಳ ಕೂಡದು- ಅನ್ನಲಿಕ್ಕೆ ಇದೇನೂ ಘೋಷಾಯುಗವಲ್ಲ. ಮಾನ ಮರ್ಯಾದೆಯೆಲ್ಲ ನಮ್ಮ ಕೈಯಲ್ಲೇ ಇದೆ. ಅದು ಬೇರೆಯವರ ಹಾ ಹೂಗಳಿಂದ ಹಾರಿ ಹೋಗುವ ಹಕ್ಕಿಯಲ್ಲ….
“ಛೇ, ಛೇ, ಛೇ. ತಾರಾ ಮಂಡೋದರಿಗಳೇ ಎಲ್ಲಾ!”
“ಎಲ್ಲ ಗಂಡಸರೂ ಭೀಮಾರ್ಜುನರೇ ಹಾಗಾದರೆ!”
“ಚಹ ಆರಿಹೋಯಿತು. ಕುಡಿಯಲೇ ಇಲ್ಲವಲ್ಲ. ಬೇಡ. ಆರಿದೆ ಅದು; ಹೊಸದಾಗಿ ಮಾಡಿಕೊಡುತ್ತೇನೆ. ಅಷ್ಟರಲ್ಲಿ ನೆತ್ತಿಗೆ ಇಷ್ಟು ಎಣ್ಣೆ ಹಾಕಿಕೊಳ್ಳಿ. ಬೆಳಿಗ್ಗೆ ತಡವಾಯಿತೆಂದು ಸ್ನಾನ ಮಾಡದೆ ಹೋದಿರಿ. ಮೈಯೆಲ್ಲ ನೋವು ಅನ್ನುತ್ತಿದ್ದಿರಿ. ಎಣ್ಣೆ ಹಚ್ಚಿ ತಿಕ್ಕಿ ಕೊಡುತ್ತೇನೆ. ನೀರು ಕಾದಿದೆ. ಬಿಸಿ ಬಿಸಿ ಮಿಂದರೆ ಮೈ ಹಗುರವಾಗುತ್ತದೆ.”
“ಇಷ್ಟೆಲ್ಲ ಆರೈಕೆ ಬೇಡ ನನಗೆ…….. ”
“ಬೇಡ ಅಂದರೆ, ಅದೆಲ್ಲ ಸಾಧ್ಯವಿಲ್ಲ.”
“ನನ್ನ ತಲೆ ಕಿವಿಗಳಿಗೆ ಎಣ್ಣೆ ಹಾಕಿಕೊಳ್ಳಲಿಕ್ಕೆ ನಿನ್ನ ಒತ್ತಾಯವೇಕೆ?”
“ಒತ್ತಾಯವೇ, ನಾನು ಕೇಳುವವಳಲ್ಲ. ಕುಳಿತುಕೊಳ್ಳಿ ಅಂದರೆ….”
“ಬೇಡ.”
“ನನ್ನಾಣೆಯಿದೆ………”
ಸುಭದ್ರೆ ಬಿಡಲೇ ಇಲ್ಲ. ಗಂಡನಿಗೆ ಚಹ ಕುಡಿಸಿ, ಎಣ್ಣೆ ಹಚ್ಚಿ ತಿಕ್ಕಿ ಮೀಯಿಸಿ ಮಲಗಿಸಿದಳು. ಮಕ್ಕಳು ಆಡುತ್ತ ಬಂದವು. ಅವರನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಗಂಡನೊಡನೆ ಹರಟುತ್ತ ಕುಳಿತಳು.
“ಸುಭದ್ರೆ, ನೀನು ನಾಳೆಯಿಂದ ಶ್ರೀಧರನ ಮನೆಗೆ ಹೋಗಕೂಡದು.”
“ಅಷ್ಟು ನಿಮ್ಮ ಒತ್ತಾಯವಿದ್ದರೆ ಹೋಗುವದಿಲ್ಲ, ಆಯಿತೇ? ನನಗೇನು?”
“ಸಿಟ್ಟು ಬಂತೇ?”
“ಸಿಟ್ಟೂ ಇಲ್ಲ. ಗಿಟ್ಟೂ ಇಲ್ಲ. ಆಗುವದೆಲ್ಲ ಆಗಲಿ. ನೋಡಲಿಕ್ಕೆ ನೀವು ಇದ್ದೀರಲ್ಲ.”
ಶ್ರೀಪತಿಗೆ ಏನು ಹೇಳಬೇಕೆಂಬುದೇ ಹೊಳೆಯಲಿಲ್ಲ. ಸುಭದ್ರೆ ಸೆಟೆದು ಕೊಂಡು ಕುಳಿತಳು.
ಕೆಲಹೊತ್ತಿನ ಮೇಲೆ ಶ್ರೀಪತಿಯೇ ಮಾತೆತ್ತಿದ. “ನನ್ನನ್ನು ಮುಟ್ಟಿ ಹೇಳು ಸುಭದ್ರೆ, ನೀನು ಪವಿತ್ರೆ ಅಂತ.”
“ನಿಮ್ಮನ್ನಲ್ಲ, ಉರಿಯುವ ಬೆಂಕಿಯನ್ನು ಬೇಕಾದರೂ ಹಿಡಿದು ಹೇಳುತ್ತೇನೆ. ನಾನು ಪವಿತ್ರ, ನನ್ನ ಮನ, ತನು ನಿಮ್ಮನ್ನು ಬಿಟ್ಟು ಇನ್ನೊಬ್ಬರನ್ನು ಸೋಕಿಲ್ಲ.”
“ನಿಜವಲ್ಲ ?”
“ಸತ್ಯ.”
“ಸುಳ್ಳಾಡಿದರೆ ನಾಲಿಗೆ ಉದುರೀತು.”
“ದೇವರ ಕಣ್ಣಿನಲ್ಲಿ ನಾನು ಯೋಗ್ಯಳಾಗಿದ್ದೇನೆ. ಆದರೆ ಯಾರಿಂದ ನಾನು ಹಣ ತರುತ್ತೇನೆಯೋ ಅವರೆದುರು ನಟನೆ ಮಾಡುತ್ತೇನೆ.”
“ಹಾಗಾದರೆ ನಿನ್ನ ಮನಸ್ಸಿಗೆ ಬಂದಂತೆ ಮಾಡು.”
“ಮಾನಕ್ಕೆ ಕುಂದು ಬರದಿದ್ದರಾಯಿತೋ ಇಲ್ಲೋ?”
*****
Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...