ಭಾಷೆ ಮತ್ತು ಸಂದರ್ಭ ಮುಕ್ತತೆ

ಭಾಷೆ ಮತ್ತು ಸಂದರ್ಭ ಮುಕ್ತತೆ

ಲೋಕದ ಎಲ್ಲಾ ಪ್ರಾಣಿಗಳೂ ಸಂದರ್ಭಕ್ಕೆ ಬದ್ಧವಾದುವು. ಸಂದರ್ಭ ಬದ್ಧತೆಯೆಂದರೆ, ತಂತಮ್ಮ ಸದ್ಯತೆಗೆ ಕಟ್ಟಹಾಕಿಕೊಂಡಿರುವುದು. ‘ಇಲ್ಲಿ-ಈಗ’ ಎನ್ನುವುದು ಸದ್ಯತೆ. ಈಗಿನ ಸ್ಥಿತಿಗೆ ಅನುಗುಣವಾಗಿ ವರ್ತಿಸುವುದು ಇದರ ಲಕ್ಷಣ. ಇದು ಒಂದೊಂದು ಪ್ರಾಣಿಯಲ್ಲೂ ಬೇರೆ ಬೇರೆ ರೀತಿ ಪ್ರಕಟಗೊಳ್ಳಬಹುದು. ಐದನೆಯ ಮಹಡಿಯಿಂದ ನಾನು ಕೆಳಗಿನದೊಂದು ಮನೆ ಮಾಡನ್ನು ನೋಡಿದರೆ, ಅಲ್ಲಿ ಒಂದು ಬೆಕ್ಕು ಆಗಾಗ ಇನ್ನೊಂದನ್ನು ಅಟ್ಟಿಸಿಕೊಂಡು ಹೋಗುವುದು ಕಾಣಿಸುತ್ತದೆ; ಈ ಎರಡೂ ಪ್ರಾಣಿಗಳು, ಹಲ್ಲು ಮಸೆಯುತ್ತವೆ, ಪರಸ್ಪರ ಆಕ್ರಮಿಸುವುದೂ ಇದೆ. ಬೆಕ್ಕುಗಳ ಮಧ್ಯದ ಈ ಹೋರಾಟ ತಂತಮ್ಮ ಸೀಮಾವಲಯಗಳನ್ನು ಕಾಪಾಡಿಕೊಳ್ಳುವುದಕ್ಕೆ. ಇಂಥದೇ ಹೋರಾಟ ನಾಯಿಗಳ ನಡುವೆಯೂ ಕಂಡುಬರುತ್ತದೆ. ಆದರೆ ಬೆಕ್ಕಾಗಲಿ, ನಾಯಿಯಾಗಲಿ ಈ ತರ ಉದ್ರೇಕಗೊಳ್ಳುವುದು ತಮ್ಮ ಜಾತಿಯ ಇತರರನ್ನು ಕಂಡಾಗ ಮಾತ್ರ ಎಂದರೆ ಅವು ತಮ್ಮ ಸದ್ಯತೆಯೊಳಗಡೆ ಬಂದಾಗ. ಇದರ ಹೊರತು, ಏನೇನೋ ಯೋಜನೆಗಳನ್ನು ಹಾಕಿಕೊಂಡು ತಮ್ಮ ವಿರೋಧಿಗಳನ್ನು ದಮನಿಸುವ ಪ್ರವೃತ್ತಿ ಈ ಪ್ರಾಣಿಗಳಲ್ಲಿಲ್ಲ. ಮನುಷ್ಯನಲ್ಲಾದರೆ ಆತನಿಗೆ ದತ್ತವಾದ ವಿಶಿಷ್ಟವಾದ ಭಾಷೆಯ ಕಾರಣದಿಂದ ಇದು ಸಾಧ್ಯ. ಎಂದರೆ ಮನುಷ್ಯನಿಗೆ ಇತರ ಪ್ರಾಣಿಗಳ ಸದ್ಯತೆಯಿದ್ದರೂ, ಆತ ಈ ಸದ್ಯತೆಗೆ ಕಟ್ಟುಬಿದ್ದಿಲ್ಲ. ಸದ್ಯತೆಯ ಆಚೀಚೆ ಯೋಚಿಸುವುದು ಕೂಡಾ ಮನುಷ್ಯನಿಗೆ ಸಾಧ್ಯ-ಬಹುಶಃ ಸಕಲ ಜೀವಿಗಳಲ್ಲಿ ಮನುಷ್ಯನಿಗೆ ಮಾತ್ರವೇ ಇದು ಸಾಧ್ಯ. ಇದನ್ನೇ ನಾವು ಸಂದರ್ಭ ಮುಕ್ತತೆ ಎಂದು ಕರೆಯುವುದು. ಈ ಸಂದರ್ಭ ಮುಕ್ತತೆ ಮನುಷ್ಯನಿಗೊದಗಿರುವ ಅದ್ಭುತವಾದ ಸ್ವಾತಂತ್ರ್ಯವೇ ಸರಿ. ಹಾಗೂ ಈ ಸ್ವಾತಂತ್ರ್ಯವನ್ನು ಆಗುಮಾಡಿದುದು ಮನುಷ್ಯನಿಗೆ ಮಾತ್ರವೇ ವಿಶಿಷ್ಟವಾಗಿರುವ ಭಾಷೆ. ಈ ಮಾನವ ಭಾಷೆ ಯಾವುದೇ ಇರಬಹುದು-ಕನ್ನಡ, ಇಂಗ್ಲಿಷ್, ಮರಾಠಿ, ಹಿಂದಿ, ಆರ್ಮೇನಿಯನ್, ಜಪಾನೀ, ಚೈನೀಸ್ ಮುಂತಾಗಿ. ಹಾಗೂ ಇವುಗಳಲ್ಲಿ ಹಲವು ಹೊರಗಿಂದ ಬೇರೆ ಬೇರೆ ರೀತಿಗಳಲ್ಲಿ ಭಿನ್ನವಾಗಿಯೋ ಹತ್ತಿರವಾಗಿಯೋ ಕಾಣಬಹುದು; ಪರಸ್ಪರ ಸ್ವಲ್ಪಮಟ್ಟಿಗೆ ಅರ್ಥವಾಗಬಹುದು. ಅಥವಾ ಏನೂ ಅರ್ಥವಾಗದೆಯೂ ಇರಬಹುದು. ಏನೇ ಇದ್ದರೂ ಇವಕ್ಕೆಲ್ಲ ಇರುವ ಸಮಾನಾಂಶವೆಂದರೆ ಇವು ನೈಸರ್ಗಿಕವಾಗಿ ಮನುಷ್ಯರಿಗೆ ಓದಗಿಬಂದಂಥವು ಎನ್ನುವುದು. ಹುಟ್ಟಿದ ಮಗುವಿಗೆ ಇವುಗಳಲ್ಲಿ ಯಾವುದೇ ಒಂದು ಭಾಷೆ ತಾಯ್ನುಡಿಯಾಗಿಯೋ, ಸುತ್ತಲಿನ ಭಾಷಾಸಮಾಜದ ಆಡುನುಡಿಯಾಗಿಯೋ ಸಿಕ್ಕಿದರೆ, ಆ ಮಗು ಅದನ್ನು ಯಾವುದೇ ಪ್ರಯಾಸವಿಲ್ಲದೆ ತನ್ನದಾಗಿಸಿಕೊಳ್ಳುತ್ತದೆ. ಬೆಳೆದ ಮೇಲೆಯೂ ಭಾಷೆಯನ್ನು ಕಲಿತುಕೊಳ್ಳುವುದು ಸಾಧ್ಯವಾದರೂ, ಇದಕ್ಕೆ ಸ್ವಲ್ಪ ಪರಿಶ್ರಮ ಬೇಕಾಗುತ್ತದೆ. ಹೀಗೆ ‘ಬಾಲ ಭಾಷೆ’ಯಾಗಿ ಒದಗಿಬರುವ ಭಾಷೆಯನ್ನು ನಾವು ನೈಸರ್ಗಿಕ ಭಾಷೆಯೆಂದು ಕರೆಯುತ್ತೇವೆ. ಎಂದರೆ, ನಿಸರ್ಗವೇ ನಮಗೆ ಈ ಭಾಷೆಗಳನ್ನು ರಚಿಸಿಕೊಟ್ಟಿತು ಎಂದು ಅರ್ಥ; ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಎಲ್ಲಾ (ಎಂದರೆ, ಈಗಿರುವ, ಈಗಾಗಲೇ ಆಗಿಹೋಗಿರುವ, ಅಥವಾ ಮುಂದೆ ಬರಬಹುದಾದ) ಮಾನವ ಭಾಷೆಗಳ ಕುರಿತಾದ ಮೂಲ ವ್ಯಾಕರಣ ತತ್ವಗಳು ಜನ್ಮತಃ ನಮಗೆ ಒದಗಿಬಂದಿವೆ ಎಂದು. ಈ ಮಾತು ಕೆಲವರಿಗೆ ವಿಚಿತ್ರವಾಗಿ ಎನಿಸಬಹುದು. ಹುಟ್ಟುವಾಗಲೇ ವ್ಯಾಕರಣ ತತ್ವಗಳೂ ನಮ್ಮ ತಲೆಯೊಳಗಿರುವುದೆಂದರೇನು? ಎಂದರೆ ಕನ್ನಡದ ಮಕ್ಕಳಿಗೆ ಕನ್ನಡ ಭಾಷೆಯ ವ್ಯಾಕರಣ ತತ್ವಗಳೂ, ತಮಿಳು ಮಕ್ಕಳಿಗೆ ತಮಿಳು ಭಾಷೆಯ ವ್ಯಾಕರಣ ತತ್ವಗಳೂ ಜನ್ಮತಃ ಒದಗಿಬಂದಿರುತ್ತವೆಯೇ? ಇಲ್ಲ, ಇಲ್ಲಿ ನಾವು ಮಾತಾಡುತ್ತಿರುವುದು ಯಾವುದೇ ಒಂದು ನೈಸರ್ಗಿಕ ಭಾಷೆಯ ವ್ಯಾಕರಣ ತತ್ವಗಳ ಬಗ್ಗೆಯಲ್ಲ; ಮಾನವರಿಗೆ ಸಾಧ್ಯವಾಗಬಹುದಾದ ಎಲ್ಲಾ ನೈಸರ್ಗಿಕ ಭಾಷೆಗಳ ಮೂಲ ವ್ಯಾಕರಣ ತತ್ವಗಳ ಬಗ್ಗೆ. ಲಿಂಗ, ವರ್ಣ, ದೇಹಾಕಾರ, ಹುಟ್ಟಿದ ಪ್ರದೇಶ ಮುಂತಾದ ಹಲವಾರು ಭಿನ್ನತೆಗಳನ್ನು ಮೀರಿ ಮನುಷ್ಯರೆಲ್ಲರೂ ಮೂಲತಃ ಒಂದೇ ಆಗಿರುವಂತೆ, ಹೊರ ಮಟ್ಟದ ವ್ಯತ್ಯಾಸಗಳಿಗೆ ಅತೀತವಾಗಿ ಸಕಲ ಮಾನವ ಭಾಷೆಗಳೂ ಆಂತರ್ಯದಲ್ಲಿ ಒಂದೇ ಆಗಿವೆ ಎನ್ನುವ ಸಿದ್ಧಾಂತ ಇದು.

ಆದರೆ ಇಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಭಾರೀ ಪ್ರಚಾರದಲ್ಲಿದ್ದ ವರ್ತನಾವಾದ (behaviourism) ಬೇರೆಯೇ ಸಿದ್ಧಾಂತವೊಂದನ್ನು ಮುಂದೊತ್ತಿತು. ಇದರ ಪ್ರಕಾರ ‘ಭಾಷೆ’ಯೆನ್ನುವುದು ಮೂಲತಃ ಒಂದು ಸಂವಹನ ಮಾಧ್ಯಮವೆನ್ನುವುದನ್ನು ಒಪ್ಪಿಕೊಂಡರೆ, ಮನುಷ್ಯಭಾಷೆ ಇತರ ಪ್ರಾಣಿಗಳ ‘ಭಾಷೆ’ಯಂತೆಯೇ ಒಂದು ಉಪಕರಣ; ವ್ಯತ್ಯಾಸವಿರುವುದು ಮನುಷ್ಯ ಭಾಷೆಯ ತೌಲನಿಕವಾದ ಕ್ಲಿಷ್ಟತೆಯಲ್ಲಿ ಮಾತ್ರ; ಇತರ ಪ್ರಾಣಿಗಳಿಗಿಂತ ಹೆಚ್ಚು ವಿಕಾಸ ಹೊಂದಿದ ಮನುಷ್ಯವರ್ಗದ ಭಾಷೆ ಹೆಚ್ಚು ಕ್ಲಿಷ್ಟವಾಗಿರುವುದು ಸಹಜವೇ. ಮಾತ್ರವಲ್ಲ, ಇತರ ಪ್ರಾಣಿಗಳಲ್ಲಿರುವಂತೆ ಮಕ್ಕಳೂ ಕೂಡಾ, ಅನುಕರಣೆ, ಆವರ್ತನೆಗಳ ಮೂಲಕ ತಂತಮ್ಮ ‘ಮಾತೃಭಾಷೆ’ಗಳನ್ನು ಕಲಿಯುತ್ತಾರೆ. ಪ್ರಾಣಿಗಳ ವರ್ತನೆಗಳನ್ನು ಪ್ರೋತ್ಸಾಹ ಮತ್ತು ಶಿಕ್ಷೆಗಳ ಮೂಲಕ ಹೇಗೆ ನಾವು ತಿದ್ದಬಹುದೋ ಅದೇ ರೀತಿ ಮನುಷ್ಯರ ವರ್ತನೆಗಳನ್ನೂ ಬೇಕಾದಂತೆ ತಿದ್ದುವುದು ಸಾಧ್ಯ ಎನ್ನುತ್ತದೆ ವರ್ತನಾವಾದ. ಯಾಕೆಂದರೆ ಈ ವಾದದ ಪ್ರಕಾರ ಯಾವುದೇ ಕಲಿಕೆಯೂ ಮೂಲತಃ ಚೋದನೆ ಮತ್ತು ಪ್ರತಿಕ್ರಿಯೆ (stimulus and response) ಎಂಬ ಎರಡು ವಿದ್ಯಮಾನಗಳ ಮೇಲಿಂದ ನಡೆಯುವಂಥ ಸಂಗತಿ. ಪ್ರಾಣಿಯೊಂದು ತನ್ನ ಇಂದ್ರಿಯಗಳ ಮೂಲಕ ಹೊರಗಿನ ಚೋದನೆಗಳಿಗೆ ಪ್ರತಿಕ್ರಿಯೆ ನೀಡುತ್ತಲೇ ಇರುತ್ತದೆ. ಹಾಗೆ ನೀಡಿದ ಕೆಲವು ಪ್ರತಿಕ್ರಿಯೆಗಳು ಅದಕ್ಕೆ ಅನುಕೂಲಕರವಾಗಬಹುದು, ಇನ್ನು ಕೆಲವು ಪ್ರತಿಕೂಲಕರವೂ ಆಗಿರಬಹುದು. ಅನುಕೂಲಕರ ಪ್ರತಿಕ್ರಿಯೆಗಳನ್ನು ಅದು ಮತ್ತೆ ಅಂಥದೇ ಚೋದನೆಗಳು ಒದಗಿದಾಗ ಆವರ್ತಿಸುತ್ತದೆ; ಪ್ರತಿಕೂಲ ಪ್ರತಿಕ್ರಿಯೆಗಳನ್ನು ಅದು ಆವರ್ತಿಸುವುದಿಲ್ಲ. ಈ ತರದಲ್ಲಿ ಪ್ರಾಣಿ ತನಗೆ ಬೇಕಾದುದನ್ನೆಲ್ಲ ಕಲಿತುಕೊಳ್ಳುತ್ತದೆ ಎನ್ನುತ್ತದೆ ವರ್ತನಾವಾದ. ಆದರೆ ಈ ವಾದಕ್ಕೆ ಮನುಷ್ಯಭಾಷೆಯ ಕ್ಲಿಷ್ಟತೆ ನಿಜಕ್ಕೂ ಒಂದು ದೊಡ್ಡ ಸವಾಲು. ಈ ಸವಾಲನ್ನು ನೇರವಾಗಿ ಎದುರಿಸಲು ಪ್ರಯತ್ನಿಸಿದ್ದು ಅಮೇರಿಕದ ವಿದ್ವಾಂಸ ಬಿ. ಎಫ್. ಸ್ಕಿನ್ನರ್. ಈತ ಮನುಷ್ಯ ಭಾಷೆಯನ್ನು ದ್ವಿತೀಯ ಹಂತದ ಚೋದನೆ-ಪ್ರತಿಕ್ರಿಯೆಗಳ ಪದ್ಧತಿ ಎಂದು ಕರೆಯುತ್ತಾನೆ. ಭಾಷೆಯ ಮೂಲಕವೇ ನಾವು ಚೋದನೆ-ಪ್ರತಿಕ್ರಿಯೆಗಳನ್ನು ಸಾಧಿಸಬಹುದಾಗಿದೆ. ಉದಾಹರಣೆಗೆ, ಪ್ರಶ್ನೋತ್ತರ. ಇತರ ಜೀವಿಗಳಿಗೆ ಈ ಸೌಲಭ್ಯ ಇಲ್ಲ. ಪ್ರಾಣಿಯೊಂದು ತನ್ನ ಮೂಲಕ ಪ್ರಶ್ನೆಯನ್ನು ಕೇಳಲಾರದು, ಉತ್ತರಿಸಲೂ ಆಗದು.

ಇಪ್ತತ್ತನೆಯ ಶತಮಾನದ ದ್ವಿತೀಯಾರ್ಧದಲ್ಲಿ ಮನುಷ್ಯಭಾಷೆಯ ಕುರಿತಾದ ಈ ವರ್ತನಾಸಿದ್ಧಾಂತವನ್ನು ತಲೆಕೆಳಗುಮಾಡಿದವನು ಅಮೇರಿಕದ ಇನ್ನೊಬ್ಬ ಪ್ರಸಿದ್ಧ ವಿದ್ವಾಂಸ, ಭಾಷಾವಿಜ್ಞಾನಿ, ರೂಪಾಂತರ ವ್ಯಾಕರಣದ ಪವರ್ತಕ ನೋಮ್ ಚಾಮ್ಸ್ಕಿ. ಈತನ ಪ್ರಕಾರ ಮನುಷ್ಯಭಾಷೆಯೆನ್ನುವುದು ಇತರ ಜೀವಿಗಳ ಸಂವಹನ ಮಾಧ್ಯಮಗಳಿಗಿಂತ ತೀರಾ ಭಿನ್ನವೂ ವಿಶಿಷ್ಟವೂ ಆದದ್ದು. ನಮಗೆ ಸುಮಾರಾಗಿ ಗೊತ್ತಿರುವ ಯಾವುದೇ ಗಣಕ ಪದ್ಧತಿಗಳೂ-ಉದಾಹರಣೆಗೆ, ಗಣಿತ, ಸಂಖ್ಯಾಶಾಸ್ತ್ರ, ಕಂಪ್ಯೂಟರ್ ಭಾಷೆ, ರಸಾಯನ ಅಥವಾ ಭೌತವಿಜ್ಞಾನ ಮುಂತಾದುವು-ನೈಸರ್ಗಿಕ ಭಾಷೆಯ ವ್ಯಾಕರಣವನ್ನು ವಿವರಿಸಲಾರವು. ವ್ಯಾಕರಣದ ವೈಶಿಷ್ಠ್ಯವನ್ನು ತಿಳಿಯಲು ನಾವು ಬೇರೇ ತತ್ವಗಳನ್ನು ರೂಪಿಸಿಕೊಳ್ಳೆಬೇಕಾಗುತ್ತದೆ. ಚಾಮ್ಸ್ಕಿಯ ರೂಪಾಂತರ ವ್ಯಾಕರಣತತ್ವದ ಹುಟ್ಟು ಮತ್ತು ಬೆಳವಣಿಗೆ ಈ ನಿಟ್ಟಿನಲ್ಲಿ ನಡೆಸಿರುವಂಥ ಒಂದು ದೊಡ್ಡ ಸಾಹಸ. ವರ್ತನಾವಾದಿಗಳು ಕೇವಲ ಹೊರಪದರದ ವಿಶ್ಲೇಷಣೆಗೆ ಬದ್ಧರಾಗಿದ್ದರೆ, ರೂಪಾಂತರ ವ್ಯಾಕರಣಿಗಳು ವಾಕ್ಯಗಳ ಹಿಂದೆ ನಿಂತು ಅವುಗಳ ‘ಒಳರಚನೆ’ಗಳನ್ನು ಪರಿಶೀಲಿಸುತ್ತಾರೆ. ಕಣ್ಣಿಗೆ ಕಾಣಿಸದಂಥ ಒಳರೂಪಗಳೇ ಆಧುನಿಕ ವಿಜ್ಞಾನದ ಆಸಕ್ತಿವಿಷಯಗಳಾದ್ದರಿಂದ, ರೂಪಾಂತರ ವ್ಯಾಕರಣ ಹೆಚ್ಚು ವೈಜ್ಞಾನಿಕವೆನ್ನುವುದರಲ್ಲಿ ಸಂಶಯವಿಲ್ಲ. ವರ್ತನಾವಾದಿಗಳ ಕಲಿಕಾಸಿದ್ಧಾಂತವನ್ನೂ ಚಾಮ್‍ಸ್ಕಿ ಒಪ್ಪುವುದಿಲ್ಲ. ಮಕ್ಕಳು ಹುಟ್ಟುವಾಗಲೇ ತಮ್ಮ ನರಮಂಡಲದಲ್ಲಿ ಮನುಷ್ಯಬಾಷೆಯ ಮೂಲವ್ಯಾಕರಣಕ್ಕೆ ಸಂಬಂಧಿಸಿದ ತತ್ವಗಳನ್ನು ಪಡೆದುಕೊಂಡು ಬಂದಿರುತ್ತಾರೆ-ಹೇಗೆ ಅವರು ಶ್ವಾಸಕೋಶ, ಹೃದಯ, ಜೀರ್ಣಾಂಗ ಮುಂತಾದುವನ್ನು ಪಡೆದಿರುತ್ತಾರೋ ಅದೇ ರೀತಿ-ಎನ್ನುತ್ತಾನೆ ಚಾಮ್‍ಸ್ಕಿ. ಮೇಲು ನೋಟಕ್ಕೆ ಇದನ್ನು ಒಪ್ಪಲು ನಮಗೆ ಕಷ್ಟವೆನಿಸಬಹುದು. ಆದರೆ ವಿಶ್ವದ ಎಲ್ಲಾ ಕಡೆ, ಮಕ್ಕಳು ಯಾರೂ ಕಲಿಸದೆಯೇ, ಕೇವಲ ಕೆಲವೇ ಅವಸರವಸರದ ಅಸಂಬದ್ಧ ಮಾತುಗಳನ್ನು ಆಲಿಸಿವುದರಿಂದಲೇ ತಂತಮ್ಮ ಮಾತೃ (ಅರ್ಥಾತ್ ಪರಿಸರದ) ಭಾಷೆಯನ್ನು ಸರಿಸುಮಾರು ಒಂದೇ ಪ್ರಾಯಾವಧಿಯಲ್ಲಿ ಕಲಿತುಕೊಳ್ಳುತ್ತಾರೆ ಎನ್ನುವುದನ್ನು ನೋಡಿದರೆ, ನೈಸರ್ಗಿಕ ಭಾಷೆಗಳ ಆದಿಮ ವ್ಯಾಕರಣತತ್ವಗಳು ಮಿದುಳಿನ ನರಮಂಡಲದ ಭಾಗವೇ ಆಗಿರಬೇಕೆನ್ನುವುದನ್ನು ಒಪ್ಪಲೇಬೇಕಾಗುತ್ತದೆ. ರೂಪಾಂತರ ವ್ಯಾಕರಣ ಈ ಆದಿಮ ತತ್ವಗಳ ಸಂಶೋಧನೆಯಲ್ಲಿ ನಿರತವಾಗಿರುವ ಆಧುನಿಕ ಭಾಷಾವಿಜ್ಞಾನದ ಒಂದು ಜ್ಞಾನಶಾಖೆ. ಇದು ಜ್ಞಾನಗ್ರಹಣಕ್ಕೂ ಸಂಬಂಧಿಸಿದ್ದಾದ್ದರಿಂದ ಮನೋವಿಜ್ಞಾನದ ಭಾಗವೂ ಆಗಿರುತ್ತದೆ.

ಈ ಮೂಲ ವ್ಯಾಕರಣ ತತ್ವಗಳು ನಿಖರವಾಗಿ ಯಾವುದೆನ್ನುವುದು ನಮ್ಮ ಪ್ರಜ್ಞೆಗೆ ದತ್ತವಾಗಿ ಬಂದ ಸಂಗತಿಯಲ್ಲ; ಅವು ನಾವು ಕಂಡುಹಿಡಿಯಬೇಕಾದ್ದು. ಆದರೂ, ಸ್ವಪ್ರಜ್ಞೆಯನ್ನು ಇನ್ನೂ ತಲುಪದಿರುವ ಮಕ್ಕಳಿಗೆ ಇವುಗಳ ಕುರಿತಾದ ಒಳ ಅರಿವು ಇರಲೇಬೇಕು. ಆದ್ದರಿಂದಲೇ ಮಕ್ಕಳು ಮಾತೃಭಾಷೆಯನ್ನು ಮಾತಾಡಲು ಅಭ್ಯಾಸದ ಸಹಾಯವಿಲ್ಲದೆ ಕಲಿಯುವುದು ಸಾಧ್ಯವಾಗುವುದು. ಚಾಮ್‍ಸ್ಕಿಯ ಪ್ರಕಾರ, ಈ ಮೂಲತತ್ವಳೆಂದರೆ ಒಂದು ಸೀಮಾರೇಖೆಯಿದ್ದ ಹಾಗೆ. ನೀವು ಇಂಥಿಂಥ ಗಡಿಗಳಾಚೆಗೆ ಹೋಗದೆ ಏನುಬೇಕಾದರೂ ಆಡಿಕೊಳ್ಳಬಹುದು ಎಂದು ಮಕ್ಕಳನ್ನು ಆಡುವುದಕ್ಕೆ ಬಿಡುವ ರೀತಿಯದು. ಆದ್ದರಿಂದಲೇ ಲೋಕದಲ್ಲಿ ಅನೇಕ ಭಾಷೆಗಳು ಇರುವುದು, ಬದಲಾಗುವುದು. ಇವೆಲ್ಲವೂ ಆಟದ ’ಗಡಿ’ಯೊಳಗೇ ಬಂದಂಥವು. ಮನುಷ್ಯ ಭಾಷೆಗಳು ಕೂಡ ಮೂಲ ವ್ಯಾಕರಣದ ಗಡಿಯೊಳಗೇ ಹುಟ್ಟಿಬೆಳೆದಂಥವು. ಅದರೊಳಗೇ ಬದಲಾಗುವಂಥವು ಕೂಡಾ. ಮಕ್ಕಳಿಗಿರುವುದು ಈ ಗಡಿಗಳ ಆಂತರಿಕ ಅರಿವು. ಈ ಮಿತಿಯೊಳಗೆ ಸಾಕಷ್ಟು ಸ್ವಾತಂತ್ರ್ಯವಿರುವುದರಿಂದ ಇಲ್ಲಿ ವೈವಿಧ್ಯತೆ, ವ್ಯತ್ಯಾಸ ಹಾಗೂ ಚರಿತ್ರೆಗೆ (ಅರ್ಥಾತ್ ಬದಲಾವಣೆಗೆ) ಅವಕಾಶವೂ ಇದೆ.

ಆದರೆ ಮಾನವ ಭಾಷೆ ಸಾಧ್ಯವಾಗಿಸುವ ಇದಕ್ಕಿಂತಲೂ ಮಿಗಿಲಾದ ಇನ್ನೊಂದು ಸ್ವಾತಂತ್ರ್ಯವಿದೆ. ಅದೆಂದರೆ ಸಂದರ್ಭ ಮುಕ್ತತೆ. ಆರಂಭದಲ್ಲೇ ಹೇಳಿದಂತೆ ಪ್ರಾಣಿಗಳು ಸಂದರ್ಭ ಬದ್ಧವಾದಂಥವು. ನಿಜ, ಕೆಲವು ಪ್ರಾಣಿಗಳಿಗೆ ಕೆಲವೊಂದು ವಿಶೇಷ ಚಳಕಗಳನ್ನು ನಾವು ಕಲಿಸಬಹುದು-ಪಾರಿವಾಳಗಳಿಗೆ ಅಂಚೆಯನ್ನು ಕೊಂಡೊಯ್ಯಲು, ನಾಯಿಗಳಿಗೆ ವಾಸನೆಯ ಜಾಡು ಹತ್ತಿ ಕಳ್ಳರನ್ನು ಹಿಡಿಯಲು ಕಲಿಸುವಂತೆ. ಆದರೆ ಇವೆಲ್ಲ ಯಾಂತ್ರಿಕವಾದ ಕಲಿಕಾ ಸಂಗತಿಗಳು. ಪಾರಿವಾಳವೊಂದು ತಾನು ನಿರ್ದಿಷ್ಟ ವಿಳಾಸಕ್ಕೆ ಹಾರಲು ಕಲಿತರೂ, ಅದು ಇನ್ನೊಂದು ಪಾರಿವಾಳಕ್ಕೆ ಇದನ್ನು ಕಲಿಸಲಾರದು. ಆನೆಯನ್ನು ಪಳಗಿಸಲು ಆನೆಯನ್ನು ಉಪಯೋಗಿಸುತ್ತಾರೆ ನಿಜ; ಆದರೆ ಈ ಕಲಿಕೆ ಕೂಡಾ ಯಾಂತ್ರಿಕವೇ. ಮನುಷ್ಯ ಭಾಷೆ ಯಾಕೆ ಸದ್ಯತೆಯಿಂದ ಮುಕ್ತವಾಗಿದೆಯೆಂದರೆ, ಅದರ ಬಹು ಹಂತಗಳ ರಚನೆಯಿಂದಾಗಿ. ಪ್ರಾಣಿಗಳ ‘ಭಾಷೆ’ಯಲ್ಲಿ ನಾವು ಕಾಣುವುದು ಹೆಚ್ಚಾಗಿ ಸೂಚಕ ಮತ್ತು ಸೂಚ್ಯಗಳ ನಡುವೆ ಇರುವ ನೇರ ಸಂಬಂಧ. ಉದಾಹರಣೆಗೆ, ಆಕ್ರಮಣ ನಡೆಸುವುದನ್ನು ನಾಯಿ ಹಲ್ಲು ತೋರಿಸಿ ಗುರ್ ಎನ್ನುವುದರ ಮೂಲಕ ಸೂಚಿಸುತ್ತದೆ. ಓಲೈಸುವುದನ್ನು ಬಾಲ ಆಡಿಸುವುದರ ಮೂಲಕ ಸೂಚಿಸಬಹುದು. ಹೀಗೆ ಪ್ರತಿಯೊಂದು ಪ್ರಾಣಿವರ್ಗಕ್ಕೂ ಅದರದೇ ಆದ ಕೆಲವು ಪರಿಮಿತ ಸಂಜ್ಞಾವಿಧಾನವಿರುತ್ತದೆ. ಆದರೆ ತನ್ನ ಈ ಸೀಮಿತ ಸಂಜ್ಞೆಗಳನ್ನು ಬೇರೆ ಬೇರೆ ವಿಧಾನದಲ್ಲಿ ಸಂಯೋಜಿಸಿ ಇನ್ನೇನೋ ಹೇಳುವುದಕ್ಕೆ ಯಾವುದೇ ಪ್ರಾಣಿವರ್ಗಕ್ಕೆ ಸಾಧ್ಯವಾಗದು. ಆದ್ದರಿಂದಲೇ, ಪ್ರಾಣಿಗಳಲ್ಲಿ ಮನುಷ್ಯನಿಗೆ ಸಮೀಪವಾದ ಚಿಂಪಾಂಜಿ ಕೂಡಾ, ಒಂದು “ಕತೆ” ಕಟ್ಟಿ ಹೇಳಲಾರದು. ಚಿಂಪಾಂಜಿಯ ಮುಂದೆ ಮೇಲ್ಗಡೆ ಅದಕ್ಕೆ ಬರಿಗೈಗೆ ಸಿಗದಂತೆ ಒಂದು ಬಾಳೆಹಣ್ಣಿನ ಗೊನೆಯನ್ನು ತೂಗಹಾಕಿದೆ ಎಂದುಕೊಳ್ಳೋಣ. ಮುಂದುಗಡೆ ಅದಕ್ಕೆ ಕಾಣಿಸುವಂತೆ, ಒಂದು ಬಡಿಗೆಯನ್ನೂ ಇರಿಸಿದರೆ ಚಿಂಪಾಂಜಿ ಬಡಿಗೆಯನ್ನು ಕೈಯಲ್ಲಿ ತೆಗೆದುಕೊಂಡು ಬಾಳೆ ಹಣ್ಣುಗಳನ್ನು ಉದುರಿಸಿ ತಿನ್ನಬಹುದು. ಆದರೆ, ಬಡಿಗೆಯನ್ನು ಅದರ ಹಿಂದೆ ಇರಿಸಿದ್ದರೆ ಜಿಂಪಾಂಜಿ ಅದನ್ನು ಎಷ್ಟೇ ಬಾರಿ ಕಂಡಿದ್ದರೂ ಹಣ್ಣು ಉದುರಿಸುವುದಕ್ಕೆ ಉಪಯೋಗಿಸಲಾರದು. ಹಣ್ಣು ಉದುರಿಸುವುದಕ್ಕೆ ಬಡಿಗೆಯನ್ನು ಅದು ಉಪಯೋಗಿಸಬೇಕಾದರೆ, ಚಿಂಪಾಂಜಿಯ ದೃಷ್ಟಿವಲಯದಲ್ಲಿ ಗೊನೆಯೂ ಬಡಿಗೆಯೂ ಒಂದೇ ಕಾಲಕ್ಕೆ ಒಟ್ಟಿಗೇ ಇರಬೇಕಾಗುತ್ತದೆ. ಸದ್ಯತೆಗೆ ಬದ್ಧನಾಗಿರುವುದೆಂದರೆ ಇದೇ! ಇದಕ್ಕೆ ವಿರುದ್ಧವಾಗಿ ಮನುಷ್ಯನಿಗಾದರೆ, ಚಿಕ್ಕ ವಯಸ್ಸಿನಲ್ಲಿ ಕೂಡಾ, ಬಡಿಗೆಯಿಂದ ಹಣ್ಣುಗಳನ್ನು ಉದುರಿಸುವ ಕಲೆ ಯಾರೂ ಪ್ರತ್ಯೇಕವಾಗಿ ಕಲಿಸಿಕೊಡದಿದ್ದರೂ ಗೊತ್ತಿರುತ್ತದೆ. ಇದಕ್ಕೆ ಕಾರಣ ಮಗುವಿಗೆ ಆಗಲೇ ಬಡಿಗೆ, ಹಣ್ಣು ಮುಂತಾದ ಘಟಕಗಳು ಅಥವಾ ಅದಕ್ಕೆ ಸಮೀಪದ ಇಂಥದೇ ಘಟಕಗಳು-ಭಾಷೆಯಲ್ಲಿ ಒದಗಿಬಂದಿದ್ದು ಅವುಗಳ ಕುರಿತು ‘ಕತೆ’ ಕಟ್ಟುವುದಕ್ಕೆ ಸಾಧ್ಯವಾಗಿರುವುದು. ‘ಕತೆ’ ಕಟ್ಟುವುದು ಸಾಧ್ಯವಾಗಬೇಕಾದರೆ, ಸೂಚಕ ಮತ್ತು ಸೂಚ್ಯಗಳ ನಡುವೆ ನೇರ ಸಂಬಂಧವಿರದೆ, ಅದು ಮಧ್ಯವರ್ತಿ ವಿಧಾನಗಳಿಂದ ಸಾಧಿಸಿದ್ದಾಗಿರಬೇಕು. ಮಾನವ ಭಾಷೆ ಈ ರೀತಿಯದು. ಮನುಷ್ಯ ಜನಾಂಗದ ಈ ಕತೆ ಕಟ್ಟುವ ಗುಣವೇ ಎಲ್ಲಾ ನಾಗರಿಕತೆಗೂ ಸಂಸ್ಕೃತಿಗೂ ಕಾರಣವೆನ್ನುವುದನ್ನು ಪರಿಗಣಿಸಿದರೆ ಇದರ ಮಹತ್ವ ವೇದ್ಯವಾಗುತ್ತದೆ.

ಈ ಮಹತ್ವದ ಸ್ವಾತಂತ್ರ್ಯ ಮನುಷ್ಯರ ಮೇಲೆ ಅಷ್ಟೇ ಘನವುಳ್ಳ ಹೊಣೆಯನ್ನೂ ಹೊರಿಸುತ್ತದೆ: . ಸದ್ಯತೆಗೆ ಬದ್ಧವಾಗಿರುವುದು ಪ್ರಾಣಿಗಳಿಗೆ ಅನಿವಾರ್ಯ. ಈ ಬದ್ಧತೆಯಿಲ್ಲದೆ ಅವು ಬದುಕಲಾರವು. ಆದರೆ ಮನುಷ್ಯರಿಗೆ ಅದು ಅನಿವಾರ್ಯವಲ್ಲ, ಅನುಕೂಲಕರವೂ ಅಲ್ಲ. ಆದರೂ ಹಲವು ಸಂದರ್ಭಗಳಲ್ಲಿ ನಾವು ಹಿಂದು ಮುಂದು ಯೋಚಿಸದೆ ಪ್ರಾಣಿಗಳಂತೇ ವರ್ತಿಸುತ್ತೇವೆ-ಮುಖ್ಯವಾಗಿ, ನಮ್ಮ ಆಕ್ರಮಣಕಾರಿ ಪ್ರವೃತ್ತಿಯಲ್ಲಿ. ಭಾಷೆಯಿರುವ ಮನುಷ್ಯರು ಯೋಚಿಸಿ ಕ್ರಮ ತೆಗೆದುಕೊಳ್ಳೆಬೇಕೇ ವಿನಾ ಯೋಚಿಸದೆ ಅಲ್ಲ. ದೇವರು ನಮಗೆ ಭಾಷೆಯಿತ್ತುದು ಯುಕ್ತಾಯುಕ್ತತೆಯನ್ನು ಯೋಚಿಸುವುದಕ್ಕೆಂದೇ. ಆದ್ದರಿಂದಲೇ ನಮ್ಮ ವರ್ತನೆಗೆ ನಾವು ಹೊಣೆಯಾಗಿರುತ್ತೇವೆ. ಪ್ರಾಣಿಗಳಲ್ಲಿ ಈ ಹೊಣೆಗಾರಿಕೆಯಿಲ್ಲ; ಯಾಕೆಂದರೆ ಅವುಗಳಿಗೆ ‘ಭಾಷೆ’ಯೂ ಇಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಲಗಿರುವ ಕನ್ನಡಿಗ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೬

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…