ವ್ಯಾಕರಣ ಮತ್ತು ದೇವರು

ವ್ಯಾಕರಣ ಮತ್ತು ದೇವರು

ವ್ಯಾಕರಣ ಇರೋವರೆಗೆ ದೇವರನ್ನು ಏನೂ ಮಾಡುವ ಹಾಗಿಲ್ಲ ಎಂಬ ಫ್ರೆಡರಿಕ್ ನೀತ್ಸೆಯ ಪಸಿದ್ಧವಾದೊಂದು ಹತಾಶೆಯ ಹೇಳಿಕೆಯಿದೆ (Twilights of the idols ದೈವಗಳ ಮುಸ್ಸಂಜೆ). ದೇವರು ಸತ್ತ ಎಂಬುದಾಗಿ ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ಪ್ರವಾದಿ ಜರಾತೂಷ್ಟ್ರನಿಂದ ಘೋಷಣೆ ಹಾಕಿಸಿದ ಈ ಜರ್ಮನ್ ತತ್ವಜ್ಞಾನಿಯೇ ಮೇಲಿನ ಮಾತನ್ನೂ ಹೇಳಿದುದು. ಹಾಗಾದರೆ ದೇವರು ಇದ್ದಾನೆ ಎಂದೇ ಅಥವಾ ಇಲ್ಲವೆಂದೇ? ವ್ಯಾಕರಣ ಇಲ್ಲದೆ ಭಾಷೆ ಇರೋಹಾಗಿಲ್ಲ. ವ್ಯಾಕರಣವನ್ನು ಬದಲಾಯಿಸಬಹುದು, ಆದರೆ ಇಲ್ಲದೆ ಮಾಡುವ ಹಾಗಿಲ್ಲ. ಯಾಕೆಂದರೆ ಭಾಷೆಯ ರಚನಾಸೂತ್ರವೇ ವ್ಯಾಕರಣ. ಕಟ್ಟಡವೊಂದರ ಪಂಚಾಂಗ, ಗೋಡೆ, ಬಾಗಿಲು, ಮಾಡುಗಳ ಹಿಂದಿರುವ ಅಮೂರ್ತ ರಚನಾಸೂತ್ರದಂತೆ ವ್ಯಾಕರಣಸೂತ್ರವೂ ನಮ್ಮ ಕಣ್ಣಿಗೆ ಕಾಣಿಸುವಂಥದಲ್ಲ. ಆದರೆ ಅಂಥದೊಂದು ಸೂತ್ರ ಮಾತ್ರ ಪ್ರತಿ ಭಾಷೆಯ ಹಿಂದೆಯೂ ಅಡಗಿದೆ. ಈ ವ್ಯಾಕರಣವೂ ಕಾಲದಿಂದ ಕಾಲಕ್ಕೆ ಬದಲಾಗುತ್ತ ಹೋಗುತ್ತದಾದರೂ, ಇದನ್ನು ಯಾವೊಬ್ಬ ವ್ಯಕ್ತಿಯಾಗಲಿ, ಸಮಿತಿಯಾಗಲಿ ಮಾಡುವುದಲ್ಲ. ಇದು ‘ಸಹಜ’ವಾಗಿ ಎಂಬಂತೆ ಆಗುವ ಸಂಗತಿ. ಹಾಗೂ ಒಂದೇ ಭಾಷೆಯೊಳಗೆ ಹೀಗೆ ಬದಲಾಗುವ ಸ್ಥಿತಿಯಲ್ಲಿರುವ ಹಲವು ಉಪಪದ್ಧತಿಗಳೂ ಇರುವುದು ಸಾಧ್ಯ. ಈಚೆಗೆ ನಾನು ಟೀವಿಯಲ್ಲಿ ಕೆಲವು ಕನ್ನಡಿಗರು, ‘ಅವಳನ್ನು ಅಲ್ಲಿ ಬಿಟ್ಟಿ ಬಂದೆ’ (‘ಬಿಟ್ಟು ಬಂದೆ’ಗೆ ಬದಲಾಗಿ), ‘ಇದನ್ನು ಕೊಟ್ಟಿ ಹೋದ’ (‘ಕೊಟ್ಟು ಹೋದ’ಕ್ಕೆ ಬದಲಾಗಿ), ‘ಬಿದ್ದಿ ಬಿಟ್ಟ’ (‘ಬಿದ್ದು ಬಿಟ್ಟ’ಕ್ಕೆ ಬದಲಾಗಿ) ಮುಂತಾದ ಪ್ರಯೋಗಗಳನ್ನು ಕೇಳಿದ್ದೇನೆ. ಸಾಮಾನ್ಯವಾಗಿ, ಉಕಾರಾಂತದ ಬಿಡು, ಕೊಡು, ಬೀಳು ಮುಂತಾದ ಕ್ರಿಯಾಪದಗಳ ಅಪೂರ್ಣ ರೂಪಗಳಿಗೆ ಕೊನೆಯಲ್ಲಿ ಇಕಾರ ಬರುವುದಿಲ್ಲ, ಬದಲಿಗೆ ಅವುಗಳ ಭೂತಕಾಲವಾಚಕಕ್ಕೆ ಉಕಾರ ಬರುತ್ತದೆ (ಬಿಟ್ಟು, ಕೊಟ್ಟು, ಬಿದ್ದು). ಕೆಲವೇ ಕ್ರಿಯಾಪದಗಳಿಗೆ ಮಾತ್ರವೇ ಇಕಾರ ಬರುತ್ತದೆ: ಉದಾಹರಣೆಗೆ, ಹೇಳು (ಹೇಳಿ), ಕೇಳು (ಕೇಳಿ), ಆಡು (ಆಡಿ), ಇತ್ಯಾದಿ. ಆದ್ದರಿಂದ, ಬಿಡು, ಕೊಡು, ಬೀಳು ಮುಂತಾದ ಪದಗಳನ್ನು ಅಪವಾದವಾಗಿ ತಿಳಿದುಕೊಳ್ಳಬೇಕಾಗುತ್ತದೆ. ಆದರೆ ಮೇಲೆ ಹೇಳಿದ ಕೆಲವು ಭಾಷಿಕರ ಮಾತಿನಲ್ಲಿ ಬಿಟ್ಟಿ, ಕೊಟ್ಟಿ, ಮತ್ತು ಬಿದ್ದಿ ಎಂಬ ರೂಪಗಳು ಬರುತ್ತವೆ ಎಂದರೆ ಅವು ಕೂಡಾ ಚಾಲ್ತಿಯಲ್ಲಿವೆ ಎಂದಾಯಿತು. ಇದರ ಅರ್ಥ ಅವರು ತಪ್ಪು ಮಾತಾಡುತ್ತಾರೆ ಎಂದೋ, ಅವರಿಗೆ ಕನ್ನಡ ಬರುವುದಿಲ್ಲ ಎಂದೋ ಅಲ್ಲ; ಅವರ ಮಟ್ಟಿಗೆ ಈ ಪದಪ್ರಯೋಗಗಳು ವ್ಯಾಕರಣಬದ್ಧವೇ ಆಗಿವೆ. ಮತ್ತು, ಯಾರಿಗೆ ಗೊತ್ತು ಮುಂದಿನ ಕನ್ನಡ ಈ ದಾರಿಯಲ್ಲಿ ಸಾಗಿದರೂ ಸಾಗಬಹುದು.

ಭಾಷಾವಿಜ್ಞಾನದಲ್ಲಿ ಜನರ ಮಾತನ್ನು ‘ತಪ್ಪು’ ಎಂದು ಹೇಳುವ ಕ್ರಮವೇ ಇಲ್ಲ. ‘ತಪ್ಪು’ ಎಂದು ನಾವು ಸಾಮಾನ್ಯವಾಗಿ ತಿಳಿದುಕೊಳ್ಳುವ ಮಾತೂ ವಿಚಾರಿಸಿ ನೋಡಿದರೆ ವ್ಯಾಕರಣಬದ್ದವೇ ಆಗಿರುತ್ತದೆ. ಭಾಷೆಯನ್ನು ಕಲಿಯಲು ಆರಂಭಿಸುತ್ತಿರುವ ಒಂದು ಮಗುವಿನ ತೊದಲು ಮಾತು ಕೂಡಾ ತಪ್ಪಿನದ್ದಲ್ಲ; ಅದೇ ರೀತಿ, ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿ ಮಾಡುವ ‘ತಪ್ಪೂ’ ಭಾಷಾವಿಜ್ಞಾನದ ದೃಷ್ಟಿಯಿಂದ ತಪ್ಪಲ್ಲ. ಗಮನಿಸಿ ನೋಡಿದರೆ ಇವೆಲ್ಲವುಗಳ ಹಿಂದೆಯೂ ವ್ಯಾಕರಣ ನಿಯಮಗಳನ್ನು ಕಾಣಬಹುದು. ಇವು ಮುಖ್ಯವಾಹಿನಿಯ ‘ಸ್ವೀಕೃತ” ಕನ್ನಡದ ವ್ಯಾಕರಣದಂತಿರುವುದಿಲ್ಲ ಎನ್ನುವುದು ಬೇರೆ ವಿಷಯ. ಆಧುನಿಕ ಮನೋವಿಜ್ಞಾನದಲ್ಲೂ ಈಗ ‘ಹುಚ್ಚ’ ಎಂಬ ವೈಜ್ಞಾನಿಕ ಪ್ರಕಾರ ಇರುವುದಿಲ್ಲ; ಯಾಕೆಂದರೆ, “ಹುಚ್ಚರು” ಕೂಡಾ ಅವರವರ ಮಟ್ಟಿಗೆ ‘ನಾರ್ಮಲ್’ ಆಗಿಯೇ ಇರುತ್ತಾರೆ; ಅರ್ಥಾತ್ ಅವರ ವರ್ತನೆಗಳನ್ನು ನಿರ್ದೇಶಿಸುವ ಕಾರಣಗಳು ಇತರರ ಹಾಗೆ ಇರುವುದಿಲ್ಲ ಎನ್ನುವುದು ಮಾತ್ರ ವ್ಯತ್ಯಾಸ.

ಎಂದರೆ ತಪ್ಪು ಎಂಬ ಕಲ್ಪನೆಯೇ ಇಲ್ಲವೆಂದಾಯಿತೆ? ಹಾಗೆಂದೂ ಹೇಳಲಾಗುವುದಿಲ್ಲ. ಯಾಕೆಂದರೆ, ಒಳಿತು-ತಪ್ಪು ಎಂಬ ಕಲ್ಪನೆಗಳು ಸಮಾಜವ್ಯವಸ್ಥೆಗೆ ಸೇರಿದವು. ಇಂಥ ಕಲ್ಪನೆಗಳಿಲ್ಲದೆ ಸಮಾಜ ವ್ಯವಹರಿಸುವುದು ಸಾಧ್ಯವಿಲ್ಲದಾಗುತ್ತದೆ. ಭಾಷೆಯಮಟ್ಟಿಗೆ ಹೇಳುವುದಾದರೆ, ಭಾಷೆಯ ಒಂದು ಪ್ರಧಾನ ಉಪಯೋಗ ಅರ್ಥಸಂವಹನ. ಆದ್ದರಿಂದ ಇತರ ಯಾರಿಗೂ ಅರ್ಥವಾಗದ ಭಾಷೆ ಭಾಷೆಯೇ ಆಗುವುದಿಲ್ಲ. ಎಂದರೆ, ಆಯಾ ಭಾಷಾಸಮಾಜದ ಎಲ್ಲರಿಗೂ ಅರ್ಥವಾಗುವ ಒಂದು ಸೂತ್ರವ್ಯವಸ್ಥೆಯಿದ್ದರೆ ಮಾತ್ರವೇ ಭಾಷೆಯೆಂಬ ಸಂಕೇತಪದ್ಧತಿಯಿಂದ ಉಪಯೋಗವಾಗುವುದು; ಇಂಥ ಸೂತ್ರವ್ಯವಸ್ಥೆಗೆ ನಾವು ವ್ಯಾಕರಣ ಎನ್ನುತ್ತೇವೆ. ಅರ್ಥವಾಗುವುದಕ್ಕೆ ಈ ವ್ಯವಸ್ಥೆಯನ್ನು ಎಲ್ಲರೂ ಒಪ್ಪಲೇಬೇಕೆಂದೇನೂ ಇಲ್ಲ, ಆದರೆ ಅದು ಎಲ್ಲರಿಗೂ ಗೊತ್ತಿರಬೇಕಾಗುತ್ತದೆ.

ಆದರೆ ಇದಕ್ಕೂ ದೇವರಿಗೂ ಏನು ಸಂಬಂಧ? ದೇವರು ಸತ್ತ ಎಂದು ಜರಾತೂಷ್ಟ್ರನಿಂದ ಹೇಳಿಸಿದ ನೀತ್ಸೆ ಯಾಕೆ ವ್ಯಾಕರಣ ಇರುವ ತನಕ ದೇವರನ್ನು ಏನೂ ಮಾಡುವುದು ಸಾಧ್ಯವಿಲ್ಲ ಎಂದ? ನೀತ್ಸೆಯ ಮಾತನ್ನು ನಾವು ಅಕ್ಷರಶಃ ತೆಗೆದುಕೊಳ್ಳಬಾರದು. ದೇವರನ್ನೂ ಕೂಡ ಅಕ್ಷರಶಃ ತೆಗೆದುಕೊಳ್ಳಬಾರದು. ವಾಸ್ತವದಲ್ಲಿ ಹೆಚ್ಚಿನವರೂ ಹಾಗೆ ತೆಗೆದುಕೊಳ್ಳುವುದೂ ಇಲ್ಲ ಎನ್ನುವುದೇ ಸತ್ಯ. ದೇವರು ಎನ್ನುವುದೊಂದು ರೂಪಕ. ನೀತ್ಸೆಯ ಅರ್ಥದಲ್ಲಿ ದೇವರು ಎಂದರೆ ಪರಂಪರಾಗತವಾಗಿ ಬಂದಂಥ ಒಂದು ‘ರಾಜಕೀಯ’ ಕಲ್ಪನೆ. ಇಲ್ಲಿ ರಾಜಕೀಯ ಎಂದರೆ, ಒಂದು ಸಮೂಹ ವ್ಯವಸ್ಥೆ ಎಂದು ಅರ್ಥ. ರಾಜಪ್ರಭುತ್ವವೋ, ಸರ್ವಾಧಿಕಾರವೋ, ಧರ್ಮಾಡಳಿತವೋ, ಪಾಳೇಗಾರಿಕೆಯೋ, ಪ್ರಜಾಪ್ರಭುತ್ವವೋ ಏನಾದರೂ ಒಂದು ಅಧಿಕಾರ ವ್ಯವಸ್ಥೆ ಮನುಷ್ಯ ಸಮಾಜವನ್ನು ಆಳುವುದಕ್ಕೆ ಬೇಕೇ ಬೇಕಾಗುತ್ತದೆ. ಯಾವುದೇ ಆಡಳಿತವಿಲ್ಲದ ‘ಅರಾಜಕಕತ್ವ’ವನ್ನು ನಮಗೆ ಊಹಿಸುವುದೇ ಅಸಾಧ್ಯ. ನಮಗೆಲ್ಲ ಪರಿಚಯವಿರುವ ವಾಹನಸಂಚಾರ ವ್ಯವಸ್ಥೆಯನ್ನೇ ತೆಗೆದುಕೊಳ್ಳಬಹುದು: ಈ ವ್ಯವಸ್ಥೆ ಹಲವಾರು ನಿಯಮಗಳ ಮೇಲೆ ನಿಂತಿದೆ. ಈ ನಿಯಮಗಳು ದೇಶದಿಂದ ದೇಶಕ್ಕೆ, ಕಾಲದಿಂದ ಕಾಲಕ್ಕೆ, ಕೆಲವೊಮ್ಮೆ ವಿಶೇಷ ಪರಿಸ್ಥಿತಿಗಳಲ್ಲಿ ಕೂಡಾ ಬದಲಾಗಬಹುದು. ಆದರೂ ನಿಯಮಗಳಿಲ್ಲದೆ ವಾಹನಗಳು ರಸ್ತೆಯ ಮೇಲೆ ಸಂಚರಿಸುವುದು ಸಾಧ್ಯವಿಲ್ಲ. ವ್ಯಾಕರಣವೆಂದರೆ ಇದೇ. ನೀತ್ಸೆ ದೇವರನ್ನೂ ಭಾಷೆಯನ್ನೂ ಇಂಥ ವ್ಯವಸ್ಥೆಯಾಗಿ ಪರಿಗಣಿಸಿದ. ಅವನ ಜಗಳವಿದ್ದುದು ವಾಸ್ತವದಲ್ಲಿ ವ್ಯಾಕರಣದ ವಿರುದ್ದವಾಗಲಿ, ದೇವರ ವಿರುದ್ದವಾಗಲಿ ಆಗಿರಲಿಲ್ಲ, ಬದಲಿಗೆ ಮನುಷ್ಯರನ್ನು ದುರ್ಬಲಗೊಳಿಸುವ ಕೆಲವು ನಂಬಿಕೆಗಳ ಬಗ್ಗೆ; ಈ ನಂಬಿಕೆಗಳಲ್ಲಿ ಕ್ರಿಶ್ಚಿಯಾನಿಟಿ ಮತ್ತು ಕ್ರಿಶ್ಚಿಯನ್ ಧರ್ಮ ನಂಬಿರುವಂಥ ಯೇಸು ಕ್ರಿಸ್ತ ಹಾಗೂ ದೇವರ ಪರಿಕಲ್ಪನೆಗಳು ಸೇರಿಕೊಂಡಿದ್ದುವು.

ನೀತ್ಸೆಯ ಮೊತ್ತ ಮೊದಲ ಪ್ರಸಿದ್ದ ಪುಸ್ತಕದ ಹೆಸರು ‘ಗ್ರೀಕ್ ದುರಂತನಾಟಕದ ಜನನ’ ಎಂದು. ಇದರಲ್ಲಿ ನೀತ್ಸೆ ಗ್ರೀಕ್ ದೇವತೆಗಳಾದ ಅಪೊಲ್ಲೋ ಮತ್ತು ಡಯೊನೀಶಿಯಸ್‌ರನ್ನು ತುಲನೆ ಮಾಡುತ್ತಾನೆ. ಅಪೊಲ್ಲೋ ಸುಸಂಸ್ಕೃತ ದೇವತೆ, ವಿವೇಚನೆಗೆ ಹೆಸರಾದವನು; ಆದರೆ ಡಯೊನೀಶಿಯಸ್ ಭಾವುಕ, ಉದ್ರೇಕಕ್ಕೆ ಒಳಗಾಗುವಂಥವನು. ನೀತ್ಸೆಯ ಒಲವು ಡಯೊನೀಶಿಯಸ್ ಕಡೆಗೆ ಇರುವುದು ಈ ಪುಸ್ತಕದಿಂದ ಯಾಕೆಂದರೆ, ಡಯೊನೀಶಿಯಸ್ ನೀತ್ಸೆಯ ಪಕಾರ ಅದಮ್ಯವಾದ ಶಕ್ತಿಮೂಲ. (ಡಿ. ಆರ್. ನಾಗರಾಜರ ‘ಶಕ್ತಿ ಶಾರದೆಯ ಮೇಳ’ ಎಂಬ ಪುಸ್ತಕ ಮತ್ತದರ ಶೀರ್ಷಿಕೆ ನೀತ್ಸೆಯ ಅಪೊಲ್ಲೋ-ಡಯೊನೀಶಿಯಸ್ ಸೈದ್ಧಾಂತಿಕ ಯುಗಳದಿಂದ ಪ್ರೇರಿತವಾಗಿರುವುದನ್ನು ಗಮನಿಸಬಹುದು.) ಅಪೊಲ್ಲೋನಲ್ಲಿ ಕಾಣುವುದು ಇದರ ನಿಯಂತ್ರಣ. ಮುಂದೆ ಕ್ರಿಶ್ಚಿಯನ್ ಧರ್ಮವೂ ಮನುಷ್ಯ ಶಕ್ತಿಯನ್ನು ಸ್ವಯಂ ನಿಯಂತ್ರಿಸಿಕೊಳ್ಳುವುದರ ಮೇಲೆ ಒತ್ತು ಹಾಕಿತು. ಇದರಿಂದ ಮನುಷ್ಯರು ದುರ್ಬಲರಾಗುತ್ತ ಹೋದರು ಎನ್ನುತ್ತಾನೆ ನೀತ್ಸೆ. ಅವನ ಪ್ರಕಾರ, ಗ್ರೀಕ್ ಮೂಲಕ್ಕೆ ಮನುಷ್ಯರು ಮರಳುವುದರಿಂದ ಮಾತ್ರವೇ ದೇವರಿಗೆ ಸರಿಸಮನಾದ ಶಕ್ತಿಯನ್ನು ಗಳಿಸುವುದು ಸಾಧ್ಯ. ನೀತ್ಸೆಯ ಪ್ರವಾದಿ ಜರಾತೂಷ್ಟ್ರ ಪ್ರತಿಪಾದಿಸುವುದು ಇದನ್ನೇ. ಆದ್ದರಿಂದ ವ್ಯಾಕರಣದ ಬಗ್ಗೆ ನೀತ್ಸೆ ಅಸಹನೆ ವ್ಯಕ್ತಪಡಿಸುತ್ತಿರುವಾಗ ಆತ ಹತಾಶನಾಗುವುದು ಮನುಷ್ಯನನ್ನು ದುರ್ಬಲಗೊಳಿಸುವ ನಿಯಂತ್ರಣದ ಬಗ್ಗೆಯಲ್ಲದೆ ಇನ್ನು ಯಾತರ ಬಗ್ಗೆಯೂ ಅಲ್ಲ. ದೇವರೆನ್ನುವುದೊಂದು ಕಲ್ಪನೆ ಮಾತ್ರ. ನಾವು ಅದು ಇದೆಯೆಂದರೆ ಇದೆ, ಇಲ್ಲವೆಂದರೆ ಇಲ್ಲ; ಆದರೆ ಭಾಷೆ (ವ್ಯಾಕರಣ) ಕಲ್ಪನೆಯಲ್ಲ, ನಿಜವಾದದ್ದು. ಅದು ನಮ್ಮನ್ನು ಯಾವಾಗಲೂ ನಿಯಂತ್ರಿಸುತ್ತಲೇ ಇರುತ್ತದೆ. ಆದ್ದರಿಂದ, ಎಲ್ಲೀವರೆಗೆ ವ್ಯಾಕರಣವನ್ನು ನಾವು ಏನೂ ಮಾಡಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ದೇವರನ್ನು ಏನೂ ಮಾಡಲಾರೆವು ಎನ್ನುವ ಮಾತು. ಅರ್ಥಾತ್, ಮನುಷ್ಯ ಸಂಪೂರ್ಣ ಸ್ವತಂತ್ರನಲ್ಲ. ಮುಂದೆ ಇಪತ್ತನೆಯ ಶತಮಾನದಲ್ಲಿ ಇನ್ನೊಬ್ಬ ಪ್ರಸಿದ್ಧ ಜರ್ಮನ್ ತತ್ವಜ್ಞಾನಿ ಹೈಡೆಗ್ಗರ್ ಇದನ್ನೇ ‘ನಾವು ಭಾಷೆಯನ್ನು ಮಾತಾಡುವುದಿಲ್ಲ, ಭಾಷೆ ನಮ್ಮನ್ನು ಮಾತಾಡುತ್ತದೆ’ ಎಂದು ರೋಚಕ ನುಡಿಗಟ್ಟಿನಲ್ಲಿ ಹೇಳುತ್ತಾನೆ.

ಈ ಹಿನ್ನೆಲೆಯಿಂದ ನೋಡಿದರೆ, ವ್ಯಾಕರಣಕ್ಕೂ ದೇವರಿಗೂ ಹಲವಾರು ರೀತಿಯ ಸಾದೃಶ್ಶಗಳೂ, ಸಂಬಂಧಗಳೂ ಇವೆ: ದೇವರಂತೆಯೇ ವ್ಯಾಕರಣವೂ ಸನಾತನವಾದುದು. ಮನುಷ್ಯನೆಂಬ ಪ್ರಾಣಿ ಅರಿವಿಗೆ ಬಂದಾಗಲೇ ಭಾಷೆಯೂ ಇದ್ದಿತಾದ್ದರಿಂದ ಭಾಷಾಲೋಕವನ್ನು ಆಳುವಂಥ ವ್ಯಾಕರಣ ಇಲ್ಲದಿದ್ದ ಕಾಲವೊಂದನ್ನು ಊಹಿಸುವುದೇ ನಮಗೆ ಕಷ್ಟಸಾಧ್ಯ. ಭಾಷೆ ಎನ್ನುವುದನ್ನು ಯಾರೊಬ್ಬನೂ ಬೇಕೆಂತಲೇ ನಿರ್ಮಿಸಿದ್ದಲ್ಲ, ಅದು ನಮಗೆ ಚಿಕ್ಕಂದಿನಿಂದಲೇ ಬಳುವಳಿಯಾಗಿ ಬಂದುದು. ಹೀಗೆ ಬಳುವಳಿಯಾಗಿ ಬಂದಂಥ ಭಾಷೆಯನ್ನು ನಾವು ‘ನೈಸರ್ಗಿಕ ಭಾಷೆ’ ಎಂದು ಕರೆಯುತ್ತೇವೆ. ಯಾಕೆಂದರೆ, ಮನುಷ್ಯರು ‘ಕೃತಕ’ವಾದ ಸಂಕೇತವ್ಯವಸ್ಥೆಗಳನ್ನು ಸೃಷ್ಟಿಸಬಲ್ಲರು; ಇವು ನೈಸರ್ಗಿಕ ಭಾಷೆಯಂತೆ ಕಂಡುಬಂದರೂ ಆ ರೀತಿ ಇರುವುದಿಲ್ಲ. ಈಗ ನಾವು ಉಪಯೋಗಿಸುತ್ತಿರುವ ಕಂಪ್ಯೂಟರ್‌ನ ತಾಂತ್ರಿಕ ಭಾಷೆ ಇಂಥ ಕೃತಕ ಭಾಷೆಗೆ ಒಂದು ಉದಾಹರಣೆ. ದೇವರು ಎನ್ನುವ ಕಲ್ಪನೆಯೂ ನಾವು ಯಾರೂ ಬೇಕೆಂದೇ ಸೃಷ್ಟಿಸಿದ್ದಲ್ಲ. ಚರಿತ್ರಪೂರ್ವದಲ್ಲೇ ‘ದೇವರು’ ನಮ್ಮ ಜತೆಗಿದ್ದ ಮತ್ತು ನಮ್ಮನ್ನು ಆಳುತ್ತಿದ್ದ.

ಭಾಷೆಯನ್ನು ನಮಗೆ ಬೇಕಾದಂತೆ ಬದಲಾಯಿಸುವ ಹಾಗಿಲ್ಲ. ಯಾವೊಬ್ಬ ವ್ಯಕ್ತಿಯ ಆಜ್ಞೆಗೂ ಅದು ತಲೆಬಾಗುವುದಿಲ್ಲ. ಆತ ಎಷ್ಟೇ ಪ್ರಬಲನಾಗಿದ್ದರೂ. ಅದೇ ರೀತಿ ಯಾವೊಂದು ಪಂಗಡವೂ ಅದರ ಗತಿಯನ್ನು ನಿರ್ಧರಿಸಲಾರದು. ಆದರೂ ಭಾಷೆ ಬದಲಾಗುತ್ತಲೇ ಇರುತ್ತದಲ್ಲವೇ, ಇದು ಹೇಗೆ ಸಾಧ್ಯ ಎಂದು ಕೇಳಬಹುದು. ಭಾಷೆ ಬದಲಾಗುವುದಕ್ಕೆ ಹತ್ತು ಹಲವು ಕಾರಣಗಳಿರುತ್ತವೆ: ಜನಜೀವನ ಬದಲಾಗುವುದು. ಬೇರೆ ಭಾಷೆಯ ಸಂಪರ್ಕ ಉಂಟಾಗುವುದು, ಹಾಗೂ ಮನುಷ್ಯಸಹಜವಾದ ಹೊಸತರ ಅನ್ವೇಷಣೆ ಮೊದಲಾದುವು ಇವುಗಳಲ್ಲಿ ಕೆಲವು. ಹೀಗೆ ಪ್ರತಿಯೊಂದು ಭಾಷೆಯಲ್ಲೂ ಮಾನವ ಇತಿಹಾಸ ಅಡಗಿದೆ. ದೇವರ ವಿಷಯವೂ ಹಾಗೇನೇ. ದೇವರ ಕಲ್ಪನೆ ಬೇರೆ ಬೇರೆ ರೀತಿಗಳಲ್ಲಿ ಸಮಾಜದ ಮೇಲೆ ಪ್ರಭಾವ ಬೀರಿದೆ ಹಾಗೂ ಈ ಕಲ್ಪನೆ ಕೂಡಾ ಕಾಲದಿಂದ ಕಾಲಕ್ಕೆ ಬದಲಾಗುತ್ತ ಹೋಗಿದೆ; ಮತಧರ್ಮಗಳಲ್ಲೂ ದೇವರ ಪ್ರಭಾವವನ್ನು ವ್ಯಾಪಕವಾಗಿ ಕಾಣಬಹುದು. ದೇವರ ಇತಿಹಾಸ ಮನುಷ್ಯರ ಇತಿಹಾಸಕ್ಕಿಂತ ಭಿನ್ನವಾದ್ದಲ್ಲ.

ಹತ್ತೊಂಬತ್ತನೆಯ ಶತಮಾನದ ಮಧ್ಯಕಾಲದಲ್ಲಿ ಯುರೋಪ್ ಮತ್ತು ರಶಿಯಾದ ಕೆಲವು ಭಾಗಗಳಲ್ಲಿ ‘ಅರಾಜಕತೆ’ (ಅನಾರ್ಕಿಸಂ) ಎನ್ನುವದೊಂದು ರಾಜಕೀಯ ಸಿದ್ಧಾಂತ ಸಾಕಷ್ಟು ಜನಪ್ರಿಯವಾಗಿತ್ತು. ’ಅರಾಜಕತೆ’ಯೆಂದರೆ ಸ್ವೇಚ್ಛಾಚಾರ ಅಲ್ಲ; ಜನರ ಮೇಲಿನ ಅತಿಯಾದ ಸರಕಾರಿ ನಿಯಂತ್ರಣದ ವಿರುದ್ಧವಾದ ಒಂದು ಸಿದ್ದಾಂತ ಇದು. ಜನರು ಸ್ವೇಚ್ಚೆಯಿಂದಲೂ ಪರಸ್ಪರ ಸಹಕಾರದಿಂದಲೂ ಸಾಮೂಹಿಕ ಜೀವನವನ್ನು ರೂಪಿಸಲು ಶಕ್ತರಾಗಿದ್ದಾರೆ ಎಂಬ ನಂಬಿಕೆ ಇಲ್ಲಿ ಕೆಲಸ ಮಾಡುತ್ತದೆ. ಕಾರ್ಲ್ ಮಾರ್ಕ್ಸ್‌ನ The state withers away ‘ಸರಕಾರ ಜೀರ್ಣವಾಗುತ್ತದೆ (ಇಲ್ಲದಾಗುತ್ತದೆ)’ ಎಂಬ ಪ್ರಸಿದ್ಧವಾದ ಮಾತಿನಲ್ಲಿ ಈ ಸಿದ್ಧಾಂತದ ಪ್ರಭಾವವನ್ನು ಕಾಣುತ್ತೇವೆ. ಸರಕಾರ ಜನರದೇ ಆದ ಮೇಲೆ ಸರಕಾರವೇ ಇರೋದಿಲ್ಲ ಎನ್ನುವುದು ಮಾರ್ಕ್ಸ್‌ ವಾದವಾಗಿತ್ತು. ಇಂಥ ಅರಾಜಕೀಯ ಸಿದ್ಧಾಂತಕ್ಕೆ ಬದ್ಧವಾದ ಕಥಾಪಾತ್ರಗಳನ್ನು ರಶಿಯನ್ ಕಾದಂಬರಿಕಾರರಾದ ದೊಸ್ತೊವ್‌ಸ್ಕಿ, ತುರ್ಗಿನೇವ್ ಮುಂತಾದವರ ಕೃತಿಗಳಲ್ಲಿ ಕಾಣಬಹುದಾಗಿದೆ. ನೀತ್ಸೆ ಕೂಡಾ ಅರಾಜಕೀಯತೆಯತ್ತ ವಾಲಿದ ವ್ಯಕ್ತಿ; ಪ್ರತಿಯೊಬ್ಬ ವ್ಯಕ್ತಿ ತನ್ನ ಸಾಮರ್ಥ್ಯವನ್ನು ಗಗನದಷ್ಟು ಎತ್ತರಕ್ಕೆ ಬೆಳೆಸಿಕೊಳ್ಳುವುದು ಸಾಧ್ಯ ಎನ್ನುತ್ತಾನೆ ಅವನ ಜರಾತೂಷ್ಟ್ರ. ಹೀಗಾಗಬೇಕಾದರೆ ಆತ ಸಂಪೂರ್ಣ ಸ್ವತಂತ್ರನಾಗಿರುವುದು ಅಗತ್ಯವಾಗುತ್ತದೆ. ಈ ಸಂದರ್ಭದಲ್ಲೇ ನೀತ್ಸೆಗೆ ವ್ಯಾಕರಣ ಒಂದು ಅಡ್ಡಿಯಾಗಿ ತೋರುವುದು. ಎಲ್ಲವನ್ನೂ ಮೀರಬಹುದು, ಆದರೆ ವ್ಯಾಕರಣವನ್ನು ಹೇಗೆ ಮೀರುವುದು?

ಸ್ವತಃ ಕವಿಯೂ ಆಗಿದ್ದ ನೀತ್ಸೆ ತತ್ವಜಾನವನ್ನು ಒಬ್ಬ ಕವಿಯಂತೆ ನಿಭಾಯಿಸಿದವನು. ತತ್ವಜ್ಞಾನಕ್ಕೆ ಪ್ರಸಿದ್ಧವಾದ ಜರ್ಮನ್ ಭಾಷೆಯ ಶೈಲಿಯನ್ನೇ ಆತ ಬದಲಿಸಿದ. ಆದರೂ ಕೊನೆ ಕೊನೆಗೆ ಬರೆಯುವುದನ್ನೇ ಬಿಟ್ಬುಬಿಟ್ಟ ಅವನಿಗೆ ಬುದ್ಧಿಭ್ರಮಣೆ ಹಿಡಿಯಿತು ಎನ್ನುತ್ತಾರೆ. ಅಂತೂ ಎಲ್ಲರಂತೆ ಮಾತಾಡುವುದು, ಚಿಂತಿಸುವುದು ಅವನಿಗೆ ಅಸಾಧ್ಯವಾಯಿತು. ವ್ಯಾಕರಣವನ್ನೂ ದೇವರನ್ನೂ ಉಲ್ಲಂಘಿಸಿದವನಿಗೆ ಒಂದೋ ಬಡಬಡಿಕೆ ಇಲ್ಲವೇ ಮೌನ ಗತಿಯೇ? ಪ್ರತಿಯೊಬ್ಬ ಕವಿಯೂ ನೀತ್ಸೆಯ ಸ್ಥಿತಿಯನ್ನು ಒಂದಲ್ಲ ಒಂದು ಕ್ಷಣ ಅನುಭವಿಸಲೇಬೇಕು.
*****

One thought on “0

  1. ಭಾಷೆ ಸಾಹಿತ್ಯ ಸಂಸ್ಕೃತಿ ವ್ಯಾಕರಣ ಛಂದಸ್ಸು ಅಲಂಕಾರ ಭಾಷಾ ಚರಿತ್ರೆ ಈ ಎಲ್ಲ ಎಲ್ಲವೂ ನಮ್ಮ ನಮ್ಮೆಲ್ಲರ ಮೈಮನಗಳಲ್ಲಿ ಹೃದಯದ ದಮನಿ ದಮನಿಗಳಲ್ಲಿ ರಕ್ತದ ಕಣ ಕಣಗಳಲ್ಲಿ ಚೆನ್ನಾಗಿ ತುಂಬಾ ಚೆನ್ನಾಗಿ ತುಂಬಿ ತುಳುಕಾಡುತಲಿರಬೇಕು..

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
    jayakumarcsj@gmail.com

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಗ್ರಹ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…