ಕರ್ನಾಟಕದ ೫೦ನೆಯ ರಾಜ್ಯೋತ್ಸವ ಸುವರ್ಣಕರ್ನಾಟಕ ಎ೦ಬ ಹೆಸರಿನಲ್ಲಿ ನವಂಬರ್ ಒಂದರನ್ನು ವಿಜೃಂಭಣೆಯಿಂದ ಆಚರಿಸಲ್ಪಟ್ಟಿತು. ಕರ್ನಾಟಕದಿಂದ ದೂರವಿರುವ ನಾನು ಇದರ ಕೆಲವು ಕಾರ್ಯಕ್ರಮಗಳನ್ನು ದೂರದರ್ಶನದ ಮೂಲಕ ವೀಕ್ಷಿಸಿದ್ದು ಮಾತ್ರ. ಈಟೀವಿ ಪ್ರಸ್ತುತಪಡಿಸಿದ ಕನ್ನಡದ ಭಾವಗೀತೆಗಳ ಕಾರ್ಯಕ್ರಮಗಳು ಮನೋಜ್ಞವಾಗಿದ್ದುವು. ಇಂಥ ಉತ್ಸವಗಳು ನಡೆದಾಗಲೆಲ್ಲ ಇವು ಯಾತಕ್ಕೆ, ಇವಕ್ಕೆ ಸುರಿಯುವ ಹಣವನ್ನು ಬಡಬಗ್ಗರಿಗೆ ನೀಡಬಾರದೇ ಅಥವಾ ಇನ್ನಿತರ ಜನೋಪಯೋಗೀ ಕೆಲಸಗಳಿಗೆ ವಿನಿಯೋಗಿಸಬಾರದೇ ಎಂಬ ಪ್ರಶ್ನೆಗಳು ಏಳುತ್ತವೆ. ಕೆಲವರು ಇವನ್ನು ವ್ಯಕ್ತವಾಗಿ ಕೇಳುತ್ತಾರೆ ಕೂಡಾ. ಪ್ರತಿ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗಲೂ ಇಂಥವೇ ಪ್ರಶ್ನೆಗಳು ಮುಂದೆ ಬರುತ್ತವೆ. ಮೈಸೂರಿನಲ್ಲಿ ವಿಶ್ವಕನ್ನಡ ಸಮ್ಮೇಳನ ಜರುಗಿದಾಗಲೂ ಹೀಗೇ ಆಯಿತು. ಆಗ ಶಿವರಾಮ ಕಾರಂತರು ಇದಕ್ಕೆ ಬಹಳ ಒರಟಾಗಿ ಉತ್ತರಿಸುತ್ತ, “ಕ್ಷಾಮ ಇದೆ ಎಂದು ಮಸಾಲೆದೋಸೆ ತಿನ್ನುವುದನ್ನು ಬಿಟ್ಟಿದ್ದೀರಾ?”ಎಂದು ಕೇಳಿದರು. ಇದಕ್ಕೋಸ್ಕರ ಅವರನ್ನು ಅಷ್ಟೇ ಒರಟಾಗಿ ‘ಅಸಾಲೆದೋಸೆ ಸಾಹಿತಿ’ ಎಂದು ಗೇಲಿಮಾಡಿದವರೂ ಇದ್ದಾರೆ. ಜನ ಕಷ್ಟದಲ್ಲಿರುವಾಗ ಇಂಥ ಉತ್ಸವಗಳು ಅಗತ್ಯವೇ ಎಂದು ಕೇಳುವುದರಲ್ಲಿ ಯಾವ ತಪ್ಪೂ ಇಲ್ಲ. ಕೇಳಬೇಕಾದ್ದೇ. ಕಾರಂತರು ಸ್ವಲ್ಪ ಮೆಲುದನಿಯಲ್ಲಿ ಉತ್ತರಿಸುತ್ತಿದ್ದರೆ ಬಹುಶಃ ಇಂಥ ಉತ್ಸವಗಳು ಒಂದು ರಾಜ್ಯದ ಜೀವನದ ದೃಷ್ಟಿಯಿಂದ ಅಗತ್ಯ ಎಂದು ಹೇಳಬಹುದಿತ್ತೇನೋ. ಇದು ನಾವು ನಮ್ಮ ಮೇಲೇ ಕೆಲವೊಮ್ಮೆ ಅಗತ್ಯವಿಲ್ಲದ ಖರ್ಚು ಮಾಡುವ ಹಾಗೆ. ಇಂಥ ಖರ್ಚುಗಳನ್ನು ನಾವು ದಿನವೂ ಮಾಡುವುದಿಲ್ಲ. ಆದರೆ ಯಾವ ಕಾಲಕ್ಕೂ ಹೀಗೆ ಮಾಡದ ವ್ಯಕ್ತಿಯೊಬ್ಬನನ್ನು ಊಹಿಸಿಕೊಳ್ಳಿ. ಅಂಥ ವ್ಯಕ್ತಿಯಿದ್ದರೆ ಅವನು ಅಸಾಮಾನ್ಯನೆನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಇದನ್ನು ಎಲ್ಲರಿಂದಲೂ ಅಪೇಕ್ಷಿಸುವುದು ಸರಿಯಾಗದು. ನಾವು ಯಾವುದನ್ನು ಅನಗತ್ಯ ಎನ್ನುತ್ತೇವೆಯೋ ಅದು ಕೆಲವರ ದೃಷ್ಟಿಯಿಂದ ಅಗತ್ಯವಿರಬಹುದು.
ರಾಜ್ಯೋತ್ಸವ, ಸಾಹಿತ್ಯ ಸಮ್ಮೇಳನ ಇಂಥ ಉತ್ಸವಗಳು ಒಂದು ಸಮೂಹ ಸಂಸ್ಕೃತಿಯ ದೃಷ್ಟಿಯಿಂದ ಅಗತ್ಯ. ಇವೆಲ್ಲವೂ ಹಿತಮಿತವಾಗಿದ್ದರೆ ಒಳ್ಳಯದೆಂಬುದರಲ್ಲಿ ಚರ್ಚೆಯಿಲ್ಲ. ಆಡಂಬರದ ಖರ್ಚು ಯಾವತ್ತೂ ಖಂಡನೀಯ. ಹಣ ಪೋಲು ಮಾಡದೆ ಈ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಮಾಡುವುದು ಹೇಗೆ ಎಂಬ ಕುರಿತು ಚರ್ಚೆಯಾಗಬೇಕು. ಚರ್ಚೆಯಾಗಬೇಕಾದ ಇನ್ನೊಂದು ವಿಷಯವೆಂದರೆ ಇಂಥ ಸಮಾರಂಭಗಳಲ್ಲಿ ಸರಕಾರ ಎಷ್ಟು ಪಾಲುಗೊಳ್ಳಬೇಕು ಎಂಬುದರ ಬಗ್ಗೆ. ರಾಜ್ಯೋತ್ಸವ ಇಡೀ ರಾಜ್ಯವೇ ಅಸ್ತಿತ್ವಕ್ಕೆ ಬಂದುದರ ಆಘೋಷವಾದ್ದರಿಂದ ಅದು ಸರಕಾರಿ ಕಾರ್ಯಕ್ರಮವಾದರೆ ಆಶ್ಚರ್ಯವಿಲ್ಲ. ಆದರೆ ಸಾಹಿತ್ಯಸಮ್ಮೇಳನಗಳು ಕೂಡಾ ಹೀಗಾಗಬೇಕೇ? ಸರಕಾರ ಅನುದಾನ ನೀಡುತ್ತದೆ ಎನ್ನುವ ಕಾರಣಕ್ಕೆ ಸಾಹಿತ್ಯ ಸಮ್ಮೇಳನಗಳು ರಾಜಕೀಯ ವ್ಯಕ್ತಿಗಳ ಶಕ್ತಿಪ್ರದರ್ಶನದ ವೇದಿಕೆಯಾಗುವ ಅಗತ್ಯವಿದೆಯೇ? ವಾಸ್ತವದಲ್ಲಿ ಹೇಳುವುದಾದರೆ, ಜನಜೀವನದಲ್ಲಿ ಎಲ್ಲೂ ಸರಕಾರದ ಹಸ್ತಕ್ಷೇಪ ಇರಲೇಬಾರದು. ಇದ್ದೂ ಇಲ್ಲದಂತಿರುವುದೇ ‘ಉತ್ತಮ ಪ್ರಭುತ್ವ’ದ ಗುಣ. ಎಲ್ಲ ಕಡೆ ಢಾಳಾಗಿ ಕಾಣಿಸಿಕೊಳ್ಳುವುದು ಕೆಟ್ಟ ಪ್ರಭುತ್ವ.
ಇಂಥ ಸಾಮೂಹಿಕ ಉತ್ಸವಗಳು ನಮ್ಮ ಸಾಂಸ್ಕೃತಿಕ ಜೀವನದ ಸೆಲೆಗಳು. ಇವುಗಳ ಆಚರಣೆಯನ್ನು ನಾವು ಮುಂದಕ್ಕೆ ಹಾಕುತ್ತ ಹೋದರೆ, ಸಮೂಹ ಮರೆವುಗಳು ಜಾಸ್ತಿಯಾಗುತ್ತ ನಮ್ಮ ವಿಸ್ಮೃತಿಲೋಕ ವಿಸ್ತರಿಸುತ್ತದೆ. ಸಂಸ್ಕೃತಿ ವಿಮರ್ಶಕರು ಜನಪ್ರಿಯಗೊಳಿಸಿರುವ ಈ ವಿಸ್ಕೃತಿಯೆಂಬ ಕಲ್ಪನೆಯ ಆಯ್ದ ಉಪಯೋಗ ಕೆಲವು ಕಡೆ ನಡೆದಿದೆ. ಮುಕ್ತಮಾರುಕಟ್ಟೆ, ಜಾಗತೀಕರಣ ಮುಂತಾದ ವಿದ್ಯಮಾನಗಳನ್ನು ವಿರೋಧಿಸುವಲ್ಲಿ ನಾವೀ ಕಲ್ಪನೆಯ ಉಪಯೋಗ ಪಡೆದುಕೊಳ್ಳುತ್ತೇವೆ. ಎಂದರೆ, ಈ ಜಾಗತಿಕ ವಿದ್ಯಮಾನಗಳಿಂದಾಗಿ ನಮ್ಮ ರಾಷ್ಟ್ರೀಯ ಹಾಗೂ ಪ್ರಾದೇಶಿಕ ವೈಶಿಷ್ಠ್ಯಗಳು ನಾಶವಾಗುತ್ತಿವೆ ಎನ್ನುತ್ತೇವೆ. ಇದು ನಿಜವಾದ ಮಾತು. ಆದರೆ ಕೇವಲ ಈ ಜಾಗತಿಕ ಆಕ್ರಮಣಗಳನ್ನು ತಾತ್ವಿಕವಾಗಿ ವಿರೋಧಿಸುವುದರಿಂದಲೇ ನಮ್ಮ ಸಂಸ್ಕೃತಿ ಉಳಿಯಲಾರದು; ಅದು ಉಳಿಯಬೇಕಾದ್ದು ಅರ್ಥಪೂರ್ಣವಾದ ಆಚರಣೆಯಲ್ಲಿ.
ಸ್ಮೃತಿ ಮತ್ತು ಸಂಸ್ಕೃತಿಯ ಕಲ್ಪನೆಗಳು ಒಟ್ಟೊಟ್ಟಿಗೇ ಚರ್ಚೆಗೊಳಗಾಗಬೇಕಿವೆ. ಇಂಗ್ಲಿಷ್ ಕಲಿತೊಡನೆ ಕನ್ನಡ ಬಿಟ್ಟುಬಿಡುವುದು, ಪಾಪ್ ಸಂಗೀತದ ಪರಿಚಯವಾದೊಡನೆ ನಮ್ಮದೇ ಸಂಗೀತ ಕೇಳದಿರುವುದು, ಹೊಸ ಸಾಹಿತ್ಯ ಓದಿದೊಡನೆ ಹಳೆ ಸಾಹಿತ್ಯ ಇವೆಲ್ಲವೂ ವಿಸ್ಮೃತಿಯ ಕುರುಹುಗಳೇ. ಸಂಸ್ಕೃತಿಯ ಬಗ್ಗೆ ಮಾತಾಡುವ ನಾವು ಸಂಸ್ಕೃತಿ ಎಂದರೇನು ಎಂದು ಕೇಳಬೇಕಾಗಿದೆ.
ಸತ್ಯ, ನ್ಯಾಯ, ತ್ಯಾಗ, ಔದಾರ್ಯ, ಅನುಕಂಪ, ಆತಿಥ್ಯ ಇತ್ಯಾದಿ ಮೌಲ್ಯಗಳೇ ಸಂಸ್ಕೃತಿಯೆನ್ನುವ ಅಭಿಪ್ರಾಯವೊಂದಿದೆ. ಇವೆಲ್ಲ ಸಂಸ್ಕೃತಿಯ ಅಡಿಪಾಯದಲ್ಲಿ ಇರಬಹುದು; ಆದರೆ ಇವೇ ಸಂಸ್ಕೃತಿಯಲ್ಲ. ಯಾಕೆಂದರೆ ಇವೆಲ್ಲವೂ ವಿಶ್ವದ ಎಲ್ಲೆಡೆ ಗೌರವಿಸಲ್ಪಡುವಂಥ ತತ್ವಗಳು. ಈ ತತ್ವಗಳು ಆಯಾ ಪ್ರದೇಶಕ್ಕೆ ವಿಶಿಷ್ಟವಾಗಿ ಆಚರಣೆಯಲ್ಲಿ ಬಂದಾಗಲೇ ಸಂಸ್ಕೃತಿಯ ನಿರ್ಮಾಣವಾಗುವುದು.
ಪರಂಪರಾಗತವಾಗಿ ಬಂದಿರುವಂಥ ಸತಿ, ಅಸ್ಪೃಶ್ಯತೆ, ಜಾತಿಪದ್ಧತಿ, ಬಾಲ್ಯವಿವಾಹ ಮುಂತಾದ ಹಲವಾರು ಜೀವವಿರೋಧಿ ಆಚರಣೆಗಳನ್ನು ನಾವಿಂದು ಪೂರ್ತಿಯಾಗಿ ಬಿಟ್ಟುಬಿಡಚೇಕಾಗಿದೆ. ಆದರೆ ನಮ್ಮ ಗುರುಕುಲ ಪದ್ಧತಿ, ಆಯುರ್ವೇದ, ಯೋಗಾಭ್ಯಾಸ, ಆಹಾರಪದ್ಧತಿ ಮುಂತಾದವನ್ನು ಕೈಬಿಡಬೇಕಾಗಿಲ್ಲ. ಮತ್ತೆ ಕೆಲವನ್ನು ನಮ್ಮ ಇತರ ಮೌಲ್ಯಗಳಿಗೆ ಹೊಂದುವಂತೆ ಬದಲಾಯಿಸಿಕೊಳ್ಳಲೂ ಬೇಕಾಗುತ್ತದೆ. ಅಜ್ಜ ನೆಟ್ಟ ಆಲದ ಮರಕ್ಕೆ ನಾವು ನೇಣು ಹಾಕಿಕೊಳ್ಳುವ ಅಗತ್ಯವಿಲ್ಲ; ಆದರೆ ಅದನ್ನು ಕಡಿಯುವುದೂ ಬೇಕಿಲ್ಲ. ಒಂದು ಉದಾಹರಣೆಯನ್ನು ಕೊಡುವುದಾದರೆ, ನಮ್ಮ ಸಂಸ್ಕೃತಿಯಲ್ಲಿ ನಾವು ಗುರುಗಳನ್ನು ಕಾಣುವ ರೀತಿ. ‘ಗುರುಸಾಕ್ಷ್ಯಾತ್ ಪರಬ್ರಹ್ಮ’ ಎನ್ನುತ್ತೇವೆ. ಇದು ನಮ್ಮ ಆಚರಣೆಯಲ್ಲಿ ಗುರುಗಳನ್ನು ಕಂಡರೆ ಎದ್ದು ನಿಂತುಕೊಳ್ಳುವುದು, ವಂದಿಸುವುದು, ಅವರು ಕೂತುಕೋ ಎನ್ನುವ ಮೊದಲು ಕೂತುಕೊಳ್ಳದಿರುವುದು, ಅವರೆದುರು ಕುಳಿತಾಗ ಕಾಲ ಮೇಲೆ ಕಾಲು ಹಾಕದಿರುವುದು, ಗಹಗಹಿಸಿ ನಗದಿರುವುದು, ಎದುರುತ್ತರ ನೀಡದಿರುವುದು, ಗುರುಗಳು ಹೇಳಿದ ‘ಚಾಕರಿ’ಗಳನ್ನು ಮಾಡುವುದೇ ಮುಂತಾದ ರೂಪಗಳಲ್ಲಿ ಪ್ರಕಟವಾಗುತ್ತದೆ. ಆದರೆ ಇಂದಿನ ನಮ್ಮ ಆಧುನಿಕ ವಿದ್ಯಾಭ್ಯಾಸ ಕ್ರಮ ಇವನ್ನೆಲ್ಲ ಕಡೆಗಣಿಸಿದೆ. ಕೆಲವರಿಗಿದು ಸೋಗಲಾಡಿತನವೆಂದೂ ಅನಿಸಬಹುದು. ಶಿಕ್ಷಣದ ವ್ಯವಹಾರೀಕರಣದಿಂದಾಗಿ ಈಗ ಶಾಲಾಕಾಲೇಜುಗಳಿಗೂ ಬಹುರಾಷ್ಟ್ರೀಯ ಸಂಸ್ಥೆಗಳಿಗೂ ವ್ಯತ್ಯಾಸವೇ ಇಲ್ಲದಾಗಿದೆ. ಅಧ್ಯಾಪಕರು ಇಂದು ಕೇವಲ ನೌಕರರು. ಶಾಲೆಗಳಿಗೆ ಮಕ್ಕಳನ್ನು ಕಳಿಸುವ ಹೆತ್ತವರು ಇವರ ಮಾಲೀಕರು. ಇದೊಂದು ಸಂಪೂರ್ಣವಾದ ಪಲ್ಲಟ. ಇಂಥ ಕಡೆ ಗುರು ಎನ್ನುವ ಕಲ್ಪನೆಯಿಲ್ಲ; ಇನ್ನು ಗುರುಶಿಷ್ಯ ಸಂಬಂಧದ ಮಾತು ದೂರವೇ ಉಳಿಯಿತು. ಆದರೆ ಇಂದಿಗೂ ಶಾಸ್ತ್ರೀಯ ಸಂಗೀತ, ನೃತ್ಯ, ಶಿಲ್ಪ, ಚಿತ್ರಕಲೆ ಮುಂತಾದೆಡೆ ಇನ್ನೂ ಸ್ವಲಮಟ್ಟಗೆ ಗುರು ಪರಂಪರೆ ಉಳಿದುಕೊಂಡು ಬಂದಿರುವುದು ಗಮನಾರ್ಹ. ಸಂಗೀತ ವಿದ್ವಾಂಸರು ಗುರುಗಳ ಪಾದಮುಟ್ಟಿ ಈಗಲೂ ನಮಸ್ಕರಿಸುತ್ತಾರೆ. ಶಾಲೆ ಕಾಲೇಜುಗಳಲ್ಲಿ ಇದು ಮನ್ನಾ. ಆದರೆ ಸ್ವಲ್ಪಮಟ್ಟಿಗಾದರೂ ಈ ಗುರು ಶಿಷ್ಯ ಪರಂಪರೆಯನ್ನು ಇಲ್ಲೂ ನಾವು ಉಳಿಸಿಕೊಳ್ಳುವುದು ಸಾಧ್ಯ. ಆಧುನಿಕರಾದ ಜಪಾನೀಯರೂ ಕೂಡಾ ಮುಂದಕ್ಕೆ ಬಾಗಿ ನಮಸ್ಕರಿಸುವ ತಮ್ಮ ಪರಂಪರಾಗತ ಪದ್ಧತಿಯನ್ನು ಬಿಟ್ಬುಕೊಟ್ಟಿಲ್ಲ. ಅರಬರು ಪರಸ್ಪರ ಭೇಟಿಯಾದಾಗ ತಬ್ಬಿಕೊಂಡು ಕೆನ್ನೆಗೆ ಮುತ್ತುಕೊಡುತ್ತಾರೆ. ದಾರಿಯಲ್ಲಿ ಹಿಂದಿಕ್ಕಬೇಕಾಗಿಬಂದಾಗ ನಮಸ್ಕರಿಸಿಯೇ ಮುಂದೆ ಹೋಗುತ್ತಾರೆ. ಅಪರಿಚಿತರಿಗೆ ಕೂಡಾ ವಂದಿಸುತ್ತಾರೆ. ನಮ್ಮಲ್ಲಿ ಮಾತ್ರ ಶಿಷ್ಯರು ಗುರುಗಳ ಕಾಲಿಗೆರಗಿದರೆ ನಾವದನ್ನು ಮೂಢನಂಬಿಕೆಯೆ೦ದು ತಿರಸ್ಕಾರದಿಂದ ನೋಡುತ್ತೇವೆ! ಆಧುಕತೆಯೆಂದರೆ ಸಕಲ ‘ಗುರುತ್ವಾಕರ್ಷಣೆ’ಗಳನ್ನು ಕಳೆದುಕೊಳ್ಳುವುದಲ್ಲ; ಇಂಥ ‘ಆಕರ್ಷಣೆ’ಗಳಿಲ್ಲದೆ ಈ ನೆಲದಲ್ಲಿ ನಾವು ನಡೆಯಲಾರೆವು. ದೈವ ವಿಶ್ವಾಸಿ ಪರಿಸರದಲ್ಲಿ ಬೆಳೆದು ಬಂದರೂ ನಾನು ವೈಯಕ್ತಿಕವಾಗಿ ವಿಶ್ವಾಸಿಯೇನಲ್ಲ. ಆದರೂ ಚಿಕ್ಕಂದಿನಲ್ಲಿ ದೇವಾಲಯಗಳ ಉತ್ಸವ ಜಾತ್ರೆಗಳಿಗೆ ಹೋಗುತ್ತಿದ್ದೆ. ಒಂದೊಂದು ದೇವಾಲಯದಲ್ಲಿ ಒಂದೊಂದು ದೇವರು; ಅವರಿಗೆ ಸಲ್ಲುವ ಪೂಜೆ ಪುರಸ್ಕಾರಗಳು ಬೇರೆ ಬೇರೆ. ಗರ್ಭಗುಡಿಯಲ್ಲಿ ಪೂಜೆಗೊಳಗಾಗುವ ಪೂಜಾಮೂರ್ತಿ ಒಂದಾದರೆ, ಉತ್ಸವದಲ್ಲಿ ಹೊತ್ತು ತಿರುಗುವ ಉತ್ಸವಮೂರ್ತಿ ಬೇರೆಯೇ. ಈ ದೇವರನ್ನು ಹೊರುವ ವ್ಯಕ್ತಿ ಇಡೀ ದಿನ ಉಪವಾಸ ಕುಳಿತು ಮಡಿಯಲ್ಲಿರಬೇಕೆಂದು ಕೇಳಿದ್ದೇನೆ. ಪೂಜೆ ತೀರ್ಥ ಎಲ್ಲ ಮುಗಿದು ದೇವರ ಹೊರುವಿಕೆ ಸುರುವಾದಾಗ ರಾತ್ರಿ ತುಂಬ ತಡವಾಗುವುದು. ಅಷ್ಟರಲ್ಲಿ ನನಗೆ ನಿದ್ದೆ ಬಂದುಬಿಡುವುದು. ಎಲ್ಲಾದರೂ ಗೋಪುರದಲ್ಲಿ ಸಿಕ್ಕ ಜಾಗದಲ್ಲಿ ನಾನ ಮುರುಟಿ ನಿದ್ದೆ ಹೋಗುವವನು. ಹೊರಗೆ ಚಂಡೆ ಜಾಗಟೆ ಭಜನೆಯೆಂದು ಗದ್ದಲವೋ ಗದ್ದಲ. ರಾತ್ರಿ ಎಚ್ಚರಾಗಿ ನೋಡಿದಾಗ ದೇವರನ್ನು ಹೊತ್ತು ಸುತ್ತುಬರುವುದು ವಿವಿಧ ಸುತ್ತುಗಳಲ್ಲಿ ವಿವಿಧ ರೀತಿಗಳಲ್ಲಿ ನಡೆಯುತ್ತಲೇ ಇರುತ್ತದೆ. ಹಲವು ಸಲ ದೇವರನ್ನು ತಲೆಯಲ್ಲಿರಿಸಿಕೊಂಡ ವ್ಯಕ್ತಿ ಕೈಬಿಟ್ಟು ಓಡಿಕೊಂಡು ಚಕ್ರಾಕಾರವಾಗಿ ಸುತ್ತಿಕೊಂಡು ಪ್ರದಕ್ಷಿಣೆ ಹಾಕುವುದು ನಡೆಯುತ್ತಿತ್ತು. ಆಗಲೆಲ್ಲ ಈತನ ತಲೆಯಿಂದ ದೇವರ ಮೂರ್ತಿ ಸಂಪುಟ ಸಮೇತ ಬಿದ್ದುಬಿಟ್ಟರೆ ಅನಾಹುತವಾಗುತ್ತದಲ್ಲ, ಹಾಗಾಗದಿರಲಿ ಎಂದು ನಾನು ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದೆ. ಕೆಲವು ಸುತ್ತುಗಳಲ್ಲಿ ಭೇತಾಳ ಎಂಬ ಒಂದು ದೈತ್ಯ ಬಟ್ಟೆ, ಬೈಹುಲ್ಲು ಮುಂತಾದವುಗಳಿಂದ ಮಾಡಿದ ತನ್ನ ನೀಳವಾದ ತೋಳುಗಳನ್ನು ಸುತ್ತಲೂ ಬೀಸಿಕೊಂಡು, ಜನರನ್ನು ಚದುರಿಸುತ್ತ, ಜನರ ಬೆರಗಿಗೂ ತಮಾಷೆಗೂ ಒಟ್ಟಿಗೇ ಗುರಿಯಾಗುತ್ತ ನಡೆಯುತ್ತಿತ್ತು. ಈ ಮರದ ಭೀಕರ ಆಕೃತಿಯೊಳಗೆ ಯಾರಿಗೂ ಗೋಚರಿಸದಂತೆ ಮನುಷ್ಯನೊಬ್ಬ ಇರುತ್ತಿದ್ದ. ಇನ್ನು ಕೇರಳದಿಂದ ಬಂದಂಥ ಚೆಂಡೆಯವರು ಸಾಮೂಹಿಕವಾಗಿ ದೇವರ ಮುಂದೆ ನಿಂತು ಜೋರಾಗಿಯೂ ಲಯಬದ್ಧವಾಗಿಯೂ ಹೊಡೆಯುತ್ತಿದ್ದರು. ಇವರು ದೇವರಿಗೆ ಮುಖಮಾಡಿ ನಿಲ್ಲಬೇಕಾದ್ದರಿಂದ ಹಿಂದೆ ಹಿಂದಕ್ಕೆ ನಡೆಯಬೇಕಾಗುತ್ತಿತ್ತು. ಇವೆಲ್ಲವೂ ನನಗೆ ಆಕರ್ಷಣೆಯ ಸಂಗತಿಗಳಾಗಿದ್ದುವು. ಈಗಲೂ ಈ ಭೇತಾಳನ ಕಲ್ಪನೆ ನನಗೆ ಅದ್ಭುತವೆನಿಸುತ್ತದೆ.
ಆದರೆ ಇವೆಲ್ಲಕ್ಕಿಂತಲೂ ಹೆಚ್ಚು ನನ್ನನ್ನು ಬರಸೆಳೆಯುತ್ತಿದ್ದುದು ದೇವಾಲಯದ ಪಕ್ಕದ ಒಣಗದ್ದೆಗಳಲ್ಲಿ ಬೆಳಕಿನಲ್ಲಿ ಜಗಜಗಿಸುತ್ತ ತಾತ್ಕಾಲಿಕವಾಗಿ ತಲೆಯೆತ್ತಿ ನಿಂತ ಸಂತೆ! ಜಾತ್ರೆಗೆ ಬಂದವರೆಲ್ಲರೂ ಸಂತೆಗೂ ಬರುತ್ತಿದ್ದರು, ಏನಾದರೂ ಕೊಳ್ಳುತ್ತಿದ್ದರು. ಇಲ್ಲಿ ಸಿಗದ ವಸ್ತುಗಳೇ ಇಲ್ಲ; ವಿಶೇಷವಾಗಿ ಹೆಂಗಸರನ್ನು, ಮಕ್ಕಳನ್ನು ಆಕರ್ಷಿಸುವ ಸಾಮಾನುಗಳು. ಇವುಗಳ ಕುರಿತಾಗಿ ಬರೆಯಲು ಇಲ್ಲಿ ಸ್ಥಳಾವಕಾಶವಿಲ್ಲ; ಆದರೆ ನನ್ನನ್ನು ಒಬ್ಬ ಕವಿಯಾಗಿ ರೂಪಿಸಿದ್ದರಲ್ಲಿ ಇಂಥ ಸಂತೆಗಳು ಮಹತ್ವದ ಪಾತ್ರ ವಹಿಸಿವೆ ಎನ್ನುವುದನ್ನು ಹೇಳಬೇಕು. ದೊಡ್ಡ ನಗರಗಳ ಮಾಲ್‌ಗಳಲ್ಲಿ ಸಂಚರಿಸುವವರಿಗೆ ಇಂಥ ಅನುಭವಗಳು ಸಿಗುವುದಿಲ್ಲ. ಅದೊಂದು ನಷ್ಟವೆಂದೇ ನಾನು ತಿಳಿದಿದ್ದೇನೆ. ಯಾಕೆಂದರೆ, ಉತ್ಸವ, ಜಾತ್ರೆ, ಸಂತೆ ಮೊದಲಾದುವು ನಮ್ಮ ಸಂಸ್ಕೃತಿಯ ಕೆಲವು ಪ್ರಧಾನ ಆಚರಣೆಗಳು. ಇವುಗಳಲ್ಲಿ ಭಾಗವಹಿಸಲು ನಾವು ದೈವ ವಿಶ್ವಾಸಿಗಳೇ ಆಗಿರಬೇಕೆಂದೇನೂ ಇಲ್ಲ.
ನಮ್ಮ ಸಾಹಿತ್ಯ ಸಮ್ಮೇಳನಗಳು ಜಾತ್ರೆಗಳಾಗುತ್ತಿವೆಯೆ೦ದು ಕೆಲವರು ಟೀಕಿಸುತ್ತಾರೆ. (‘ಮೇಳ’ವೆಂದರೇ ಈ ಅರ್ಥವಿದೆ!) ಅಲ್ಲಿ ಪ್ರಬುದ್ಧವಾದ ವಿಚಾರಸಂಕಿರಣಗಳು ನಡೆಯುವುದು ಸಾಧ್ಯವಿಲ್ಲ ಎನ್ನುವುದು ಇದಕ್ಕೆ ಕಾರಣ. ಇದು ನಿಜವಿರಬಹುದು. ಆದರೂ, ಈ ಆರೋಪದ ಹಿಂದೆ ಸಾಹಿತ್ಯವೆಂದರೆ ಅದೊಂದು ಮೇಲ್ವರ್ಗದ ಸಂಪತ್ತು, ಇದರಲ್ಲಿ ವಿಚಾರವಾದಿಗಳಲ್ಲದ ಸಾಮಾನ್ಯ ಜನರಿಗೆ ಏನೂ ಕೆಲಸವಿಲ್ಲ, ಅವರು ಬಂದರೆ ಸಮ್ಮೇಳನ ಸಂತೆಯಾಗುತ್ತದೆ. ನಮ್ಮ ಚರ್ಚೆಗಳ ಗುಣಮಟ್ಟ ಕುಸಿಯುತ್ತದೆ ಎಂಬ ಒಂದು ಗ್ರಹಿಕೆ ಕೆಲಸ ಮಾಡುತ್ತಿದೆ; ಇದು ಸರಿಯಲ್ಲ. ಸಾಹಿತ್ಯ ಸಮ್ಮೇಳನಗಳಿಂದ ಸಾಮಾನ್ಯರನ್ನು ದೂರವಿಡುವ ಅಥವಾ ಸಾಮಾನ್ಯರು ಬರುತ್ತಾರೆನ್ನುವ ಕಾರಣಕ್ಕೆ ಸಮ್ಮೇಳನಗಳನ್ನೇ ನಡೆಸದಿರುವ ಕ್ರಮ ಸರಿಯಾದುದಲ್ಲ. ಜನ ಸಾಮಾನ್ಯರಿಗೆ ಸಾಹಿತ್ಯವಿಷಯಗಳಲ್ಲಿ ಭಾಗವಹಿಸುವ ಒಂದೇ ಅವಕಾಶವೆಂದರೆ ಇಂಥ ಸಮ್ಮೇಳನಗಳು. ಆದ್ದರಿಂದಲೇ ಇವಕ್ಕೆ ಜಾತ್ರೆಯ ಸ್ವರೂಪ ಬರುವುದು. ಜಾತ್ರೆಯೇ ಬೇಡವೆಂದರೆ ಮತ್ತೆ ಪೂಜೆಗೆ ಏನೂ ಅರ್ಥವಿರುವುದಿಲ್ಲ.
ಜನ ಮರುಳೋ ಜಾತ್ರೆ ಮರುಳೋ ಎಂಬ ಗಾದೆಯಿದೆ ನಿಜ. ಜನ ಸೇರಿದ್ದಾರೆಂದು ನಾವೂ ಸೇರುವುದಕ್ಕೆ ಈ ಗಾದೆಮಾತನ್ನು ಹೇಳುತ್ತಾರೆ. ಆದರೆ ಜನವಿದ್ದಲ್ಲಿ ಜಾತ್ರೆ, ಜಾತ್ರೆಯಿದ್ದಲ್ಲಿ ಜನ ಇದ್ದೇ ಇರುತ್ತಾರೆ. ಇವು ಯಾವುವೂ ಬೇಡವೆಂದರೆ ಜನಜೀವನ ಶುಷ್ಕವಾಗುತ್ತದೆ. ಯಾಕೆಂದರೆ ಆಮೇಲೆ ಮದುವೆ, ಮುಂಜಿ, ಶ್ರಾದ್ಧ, ಪೂಜೆ, ಪುರಸ್ಕಾರ, ಔತಣಕೂಟ, ಸಂಭ್ರಮ, ಸಡಗರ ಎಲ್ಲವೂ ಒಂದೊಂದಾಗಿ ಇಲ್ಲದಾಗುತ್ತ ಹೋಗುತ್ತವೆ. ಇದರರ್ಥ ನಾವು ಸಮೂಹದ ಒತ್ತಡಕ್ಕೆ ಒಳಗಾಗಬೇಕೆಂದೇನೂ ಅಲ್ಲ. ಜಾತ್ರೆಗಳು ಸಂತೆಗಳು ಪ್ರತಿದಿನ ಇರುವಂಥವಲ್ಲ. ಇವು ಯಾವುವೂ ಇಂದು ನಮ್ಮ ವಿಚಾರವಾದಕ್ಕೆ, ವಿಮರ್ಶಾಬುದ್ಧಿಗೆ ಸವಾಲೊಡ್ಡುವ ಸ್ಥಿತಿಯಲ್ಲಿಲ್ಲವಾದ್ದರಿಂದ ಇವುಗಳ ಆಚರಣೆಯಿಂದ ನಮಗೆ ಯಾವ ಅಪಾಯವೂ ಇದೆಯೆನಿಸುವುದಿಲ್ಲ. ಅನಾಮಿಕರ ಜತೆ ಸಮಾನರಾಗಿ ಬೆರೆಯುವ ಅವಕಾಶ ಒದಗಿಸುವುದೇ ಇಂಥ ಜಾತ್ರೆಗಳು. ಇವುಗಳಲ್ಲಿ ಭಾಗವಹಿಸುವುದು, ಬಿಡುವುದು ಅವರವರ ಆಯ್ಕೆ. ಅವು ಬೇಡವೇ ಬೇಡವೆಂದು ಒತ್ತಾಯಿಸುವುದು ಮಾತ್ರ ಸರಿಯಲ್ಲ.