ರಾಧೆಯ ಸ್ವಗತ

ರಾಧೆಯ ಸ್ವಗತ

ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: “ರಾಧೆ, ಈ ಮುಖ ಹೀಗೆ ಪ್ರಪುಲ್ಲಿತವಾಗಿರುವಾಗಲೇ, ನಿನ್ನ ದೇಹದ ಕಣಕಣಗಳಿಗೆ ಮುಪ್ಪಡರುವ ಮುನ್ನ ನಾನು ಸತ್ತು ಹೋಗಬೇಕು. ನಾನು ಮುದುಕನಾದಾಗ ನೀನು ನನ್ನನ್ನು ಸಹಿಸಬಲ್ಲೆ. ಆದರೆ ನನ್ನ ರಾಧೆಯನ್ನು ಮುದುಕಿಯಾಗಿ ಕಲ್ಪಿಸಿ ಕೊಳ್ಳಲಿಕ್ಕೆ ನನ್ನಿಂದ ಸಾಧ್ಯವೇ ಇಲ್ಲ.”

ನಾನು ಎಷ್ಟೋ ಬಾರಿ ಅಂದುಕೊಂಡದ್ದಿತ್ತು, ಆ ಸೃಷ್ಟಿಕರ್ತ ನನ್ನನ್ನು ಮೊದಲು ಕರೆಸಿ ಕೊಳ್ಳಬೇಕಿತ್ತು ಎಂದು. ನಾನೇ ಮೊದಲು ಸತ್ತು ಹೋಗಿರುತ್ತಿದ್ದರೆ ನೀನು ನನ್ನನ್ನು ನೆನಪಿನ ಗುಡಿಯಲ್ಲಿಟ್ಟು ಪೂಜಿಸಲು ಸಾಧ್ಯವಿತ್ತೆ? ನಿನ್ನ ತಾರುಣ್ಯದಲ್ಲಿ ಮುತ್ತಿಕೊಳ್ಳುತ್ತಿದ್ದ ಚೆಲುವೆಯರ ನೆಪದಲ್ಲಿ ನನ್ನನ್ನು ಎಲ್ಲಿ ಮೂಲೆಪಾಲು ಮಾಡುತ್ತಿದ್ದೆಯೊ? ನಿನ್ನಲ್ಲಿ ನಾನು ನೆನಪಿಟ್ಟುಕೊಳ್ಳುವಂತದ್ದೇನಿದೆ ಎಂದು ಎಷ್ಟು ಬಾರಿ ಪ್ರಶ್ನಿಸಿಲ್ಲ ನೀನು? ಆದರೆ ಕೃಷ್ಣಾ, ನನಗೊಂದು ಆಸೆಯಿತ್ತು, ಒಂದೇ ಒಂದು. ನಿನ್ನ ತೊಡೆಯಲ್ಲಿ ನನ್ನ ತಲೆ ಇರಿಸಿ, ನೀನು ನನ್ನ ಕೈ ಹಿಡಕೊಂಡು ಅಲೌಕಿಕ ಆನಂದ ನೀಡುವಾಗ, ನಿನ್ನ ಕಣ್ಣಿಂದ ಜಾರುವ ಒಂದು ಹನಿ ನನ್ನ ಕಪೋಲದ ಮೇಲೆ ಬೀಳುವ ಆ ದಿವ್ಯ ಕಣದಲ್ಲಿ ನನ್ನ ಪ್ರಾಣಶಕ್ತಿ ನಿನ್ನಲ್ಲಿ ಲೀನವಾಗಬೇಕೆಂದು. ಅದಾಗಲಿಲ್ಲ ಕೃಷ್ಣ. ನಾವು ಅಂದುಕೊಂಡದ್ದೆಲ್ಲಾ ಎಲ್ಲಾಗುತ್ತದೆ?

ನಾನು ಒಬ್ಬಳು ಅನಾಮಿಕ ಹೆಣ್ಣು. ನೀನಲ್ಲದಿರುತ್ತಿದ್ದರೆ ನನಗೊಂದು ಅಸ್ತಿತ್ತ್ವವಾದರೂ ಎಲ್ಲಿತ್ತು? ಲೌಕಿಕ ಸಂಬಂಧದಲ್ಲಿ ನೀನು ನನಗೆ ಏನೂ ಅಲ್ಲ. ಆದರೆ ನೀನು ನನಗೆ ಎಲ್ಲವೂ ಆಗಿದ್ದೆ; ನನ್ನ ಜೀವ, ನನ್ನ ಪ್ರಪಂಚ. ನೀನೋ ಎಲ್ಲರಿಗೂ ಬೇಕಾಗಿದ್ದವ, ಅಂಧಕಾರಕ್ಕೆ ಬೆಳಕಾಗಿ; ಉಸಿರಿಲ್ಲದವರಿಗೆ ಕೊಳಲ ಗಾನವಾಗಿ. ಇಡೀ ಆರ್ಯಾವರ್ತವೇ ನಿನ್ನನ್ನು ಪೂಜಿಸಿ, ಹಾಡಿ ಹೊಗಳುತ್ತಿತ್ತಲ್ಲಾ? ಎಲ್ಲೋ ಕಾಡಲ್ಲಿ ಯಾವನೋ ಒಬ್ಬ ಅನಾಮಿಕ ವ್ಯಾಧನ ಬಾಣ ತಾಗಿ ಸಾಯುವಾಗ ನಿನ್ನ ಬಳಿ ಯಾರಿದ್ದರು? ಆಗ, ಪ್ರಾಣವಾಯು ದೇಹದಿಂದ ಹೊರಚಿಮ್ಮುವಾಗ ರಾಧಾ ಎಂದು ನೀನು ಕರೆದಿರಬಹುದೆ? ನೀನು ಆಗಾಗ ಹೇಳುತ್ತಿದ್ದುದು ಈಗ ನೆನಪಾಗುತ್ತದೆ; ಹುಟ್ಟು ನಮ್ಮ ಕೈಯಲ್ಲಿಲ್ಲ; ಸಾವು ನಮ್ಮ ಕೈಯಲ್ಲಿಲ್ಲ. ಹುಟ್ಟು ಸಾವಿನ ಮಧ್ಯದ ಜೀವನಕ್ಕೆ ಮಾತ್ರ ಸಂಪೂರ್ಣವಾಗಿ ನಾವೇ ಹೊಣೆ.”

ಎಳವೆಯಲ್ಲಿ ನಿನ್ನ ಸಾಹಸಗಳನ್ನು ಕೇಳಿ ಬೆರಗುಗೊಳ್ಳುತ್ತಾ ಬೆಳೆದೆ. ನಿನ್ನ ಸುತ್ತ ಗೋಪಾಲಕರ ಹಿಂಡಿತ್ತು. ನಿನ್ನನ್ನು ಸದಾ ಸುತ್ತುವರಿಯುತ್ತಿದ್ದ ಗೋಪಿಕೆಯರ ಕೋಟೆಯನ್ನು ಭೇದಿಸಿ ನಾನು ಬಯಸಿದ್ದನ್ನು ಪಡೆಯುವ ಶಕ್ತಿ ನನ್ನಲ್ಲಿ ಎಲ್ಲಿತ್ತು? ಆದರೆ ನೀನು ಅದು ಹೇಗೆ ಅಷ್ಟು ಮಂದಿ ಗೋಪಾಲಕರ, ಸುತ್ತುವರಿದಿದ್ದ ಗೋಪಿಕೆಯರ ಕಣ್ಣು ತಪ್ಪಿಸಿ ನನ್ನಲ್ಲಿಗೆ ಬರುತ್ತಿದ್ದೆಯೊ? ಅದು ಹೇಗೆ ನೀನು ನನ್ನ ಏರು ಯವ್ವನಕ್ಕೆ ನೂತನ ಭಾಷ್ಯ ಬರೆಯುತ್ತಿದ್ದೆಯೋ, ಈಗ ಒಂದೂ ಅರ್ಥವಾಗುತ್ತಿಲ್ಲ. ನೀನಿರುವಾಗ ಜೀವಂತವಾಗಿದ್ದ ಸಹಸ್ರ ಸಹಸ್ರ ಕನಸುಗಳೆಲ್ಲಾ ಕರಗಿ ಹೋಗಿ ಕ್ರೂರವಾದ ವಾಸ್ತವವೊಂದೇ ಕಣ್ಣೆದುರು ಕಾಲಭೈರವನಾಗಿ ತಾಂಡವನೃತ್ಯ ಮಾಡುವಾಗ, ಕಣ್ಣು ನಿನ್ನನ್ನು ಕಾಣಲು, ಕಿವಿ ನಿನ್ನ ಮೋಹನ ಮುರಳಿಯ ಸಪ್ತಸ್ವರ ಕೇಳಲು ಕಾತರಿಸುತ್ತಿವೆ. ಏನು ಮಾಡಲಿ?

ನೀನು ಮುರಳಿ ನುಡಿಸಿದರೆ ರಾಗಜ್ಞಾನವಿಲ್ಲದ ಗೋಪಾಲಕರು ನಾದೋಪಾಸಕರಾಗುತ್ತಿದ್ದರು. ಅಷ್ಟೂ ಗೋಪಿಕೆಯರ ಮೈಯಲ್ಲಿ ನಾಟ್ಯಸರಸ್ವತಿಯ ಆವಾಹನೆ. ನನ್ನದು ಭಿನ್ನ ಅನುಭೂತಿ. ಈ ಸಮಸ್ತ ಬ್ರಹ್ಮಾಂಡವನ್ನು ನೀನು ಆವರಿಸಿಕೊಂಡಂತೆ, ಅದರಲ್ಲಿ ನಾನು ನಾದ ಶರೀರಿಯಾಗಿ ಸಂಚರಿಸಿದಂತೆ. ನನಗೆ ಗೋಪಿಕೆಯರಂತೆ ಕುಣಿಯಲು ಆಗುತ್ತಿರಲಿಲ್ಲ. ಗೋಪಾಲಕರಂತೆ ನಿನ್ನ ಮುರಳಿಯ ಶ್ರುತಿಯಲ್ಲಿ ಹಾಡಲು ಬರುತ್ತಿರಲಿಲ್ಲ. ಆದರೆ ನಿನ್ನೊಡನೆ ನಿನ್ನ ಮುರಳಿಯ ನಾದವನ್ನು ನನ್ನದನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗುತ್ತಿತ್ತು. ಅದನ್ನು ನೀನು ಪೂರ್ಣತ್ವದಿಂದ ಪೂರ್ಣತ್ವವನ್ನು ಪಡೆಯುವ ಸ್ಥಿತಿಯೆನ್ನುತ್ತಿದ್ದೆ. ನಿನ್ನ ಭಾಷೆ ನನಗೆ ಆಗ ಅರ್ಥವಾಗಿರಲಿಲ್ಲ. ಮುರಳಿಯ ನಾದವಿಲ್ಲದ ಬ್ರಹ್ಮಾಂಡ ಅರ್ಥಶೂನ್ಯವೆಂಬ ಅನುಭವ ಈಗ ಆಗುತ್ತಿದೆ.

ಹೆಣ್ಣು ಗಂಡನ್ನು ಸುಲಭವಾಗಿ ಒಲಿಯುವುದಿಲ್ಲ ಕೃಷ್ಣಾ. ಅವಳ ದೃಷ್ಟಿಯಲ್ಲಿ ಮೀಸೆ ಇರುವವರೆಲ್ಲಾ ಗಂಡಸರಾಗುವುದಿಲ್ಲ. ಬುದ್ಧಿಯ ಭಾವವಾಗಲು ಯಾವನಿಗೆ ಸಾಧ್ಯವಾಗುತ್ತದೋ ಅವನು ನಿಜವಾದ ಗಂಡು. ನಾನು ಎಲ್ಲೇ ಇರಲಿ, ಏನೇ ಮಾಡುತ್ತಿರಲಿ ಆಗೆಲ್ಲಾ ನೀನು ನನ್ನೆದುರು ಅಮೂರ್ತವಾಗಿ ನಿಂತುಕೊಂಡಿರುವಂತೆ, ನೀನು ನನ್ನ ಬುದ್ಧಿಯೊಳಗಣ ಭಾವವಾಗಿರುವಂತೆ ಅನ್ನಿಸುತ್ತಿತ್ತು. ಮೈಮೇಲಿನ ಎಲ್ಲಾ ಅಡೆತಡೆಗಳನ್ನು ಕಳಚಿ ಸ್ವಚ್ಛಂದ ಮಜ್ಜನ ಮಾಡುವಾಗ ಗುಹ್ಯಾತಿಗುಹ್ಯ ಭಾಗಗಳಲ್ಲೆಲ್ಲಾ ನಿನ್ನ ಸುಕೋಮಲ ಕರಸ್ಪರ್ಶವಾಗುತ್ತಿದೆಯೆಂದೆನ್ನಿಸುವ ಪುಳಕಿತ ಭಾವ. ನೀನು ಗೋಪಿಕೆಯರೊಡನೆ ರಾಸಕ್ರೀಡೆಯಾಡುತ್ತಿದ್ದವನು. ನನ್ನೊಡನೆ ಹೀಗೆ ದಿನಾ ಅಮೂರ್ತವಾಗಿ ರಾಸಕ್ರೀಡೆಯಾಡುತ್ತಿರುವುದನ್ನು ನಿನ್ನಲ್ಲಿ ಹೇಳಿ ನಾನು ಸಣ್ಣವಳಾಗಲಿಲ್ಲ. ಆದರೆ ನೀನು ಎಷ್ಟೋ ಬಾರಿ ಹೇಳಿದ್ದಂತೆ ಇಬ್ಬರೇ ಇಬ್ಬರು ನಾವು ಒಂದೇ ಒಂದು ಬಾರಿಯಾದರೂ ರಾಸಕ್ರೀಡೆಯಾಡಬೇಕು. ಆದರದು ಸಾಧ್ಯವಾಗಲೇ ಇಲ್ಲ. ಏಕೆಂದರೆ ನನಗೆ ಈಜು ಬರುತ್ತಿರಲಿಲ್ಲ. ನಿನ್ನ ಹಾಗೆ ಈಜಬಲ್ಲವರು ನಂದಗೋಕುಲದಲ್ಲಿ, ಮಥುರೆಯಲ್ಲಿ ಯಾರಿದ್ದರು? ನೀನು ಭವಸಾಗರವನ್ನು ದಾಟಿಸುವವನೆಂದು ಭಾವುಕರು ಹೇಳುತ್ತಿದ್ದರು. ನನ್ನನ್ನು ನೀನು ಒಮ್ಮೆಯೂ ಯಮುನೆಯನ್ನೂ ದಾಟಿಸಿರಲಿಲ್ಲ!

ನಿನ್ನ ಕೊಳಲಗಾನಕ್ಕೆ ನಾನು ನನ್ನದೆನ್ನುವದೆಲ್ಲವನ್ನೂ ಕಳಕೊಂಡ ಆ ಅಮೃತಗಳಿಗೆಯಲ್ಲಿ ನೀನು ಮಧುರ ಧ್ವನಿಯಲ್ಲಿ ಪಿಸುಗುಟ್ಟಿದ್ದೆ. ಗಾನ ಮತ್ತು ನರ್ತನ ನಮ್ಮನ್ನು ಪ್ರಾಪಂಚಿಕತೆಯಿಂದ ಆಧ್ಯಾತ್ಮದತ್ತ ಒಯ್ಯಬೇಕು. ಕವಿಜನರು ಹೇಳುವ ಸ್ಪೂರ್ತಿ ಅದೇ. ಯೋಗೀಶ್ವರರ ತತ್ತ್ವವಿಚಾರವದು. ಅದುವೇ ವಿರಹಿಗಳ ಸಿಂಗಾರ. ನಾನು ಕೊಳಲಿಂದ ನುಡಿಸಿದ್ದೆಲ್ಲಾ ಅಲೌಕಿಕ ಆಮೋದವಾದದ್ದು ನನ್ನ ರಾಧೆಯಿಂದಾಗಿ. ಹೆಣ್ಣುಗಳು ಎಷ್ಟೂ ಇರುತ್ತಾರೆ. ಅಲೌಕಿಕ ಸ್ಪೂರ್ತಿ ಕೊಡಲು ಎಲ್ಲರಿಂದ ಸಾಧ್ಯವಾಗುವುದಿಲ್ಲ. ನನ್ನನ್ನು ಸದಾ ಸುತ್ತುವರಿಯುತ್ತಿದ್ದ ಗೋಪಿಕೆಯರ ಸಮೂಹ ಉನ್ಮಾದದಿಂದ ನನಗೆ ಏನನ್ನೂ ಪಡೆಯಲಾಗುತ್ತಿಲ್ಲ. ನಿನ್ನ ಮೌನವೂ ಮಾತಾಡುತ್ತದೆ. ಅರಿತಷ್ಟೂ ಅರಿಯಲಾಗದ ನಿಗೂಢ ನೀನು. ಕಣ್ಣಿಗೆ ಕಾಣುವ ಈ ನಿಸರ್ಗದೆಲ್ಲೆಡೆಯಲ್ಲಿ ಕಣ್ಣಿಗೆ ಕಾಣದಂತೆ ನೀನು ಪಸರಿಸಿ ಕೊಂಡಿದ್ದಿ ಎಂಬ ಅನುಭೂತಿಯಿಂದ ಕೊರಳಿಗೆ ಚೈತನ್ಯ ಸಿಗುತ್ತದೆ. ಬುದ್ಧಿಯಲ್ಲಿ ಭಾವ ಅರಳುತ್ತದೆ. ಆಗ ಬಿದಿರ ತುಂಡಿನಲ್ಲಿ ನಾದವೆಂಬ ಜೀವ ಸಂಚಾರವಾಗುತ್ತದೆ. ನನ್ನ ಕೊಳಲ ಗಾನಕ್ಕೆ ನಾದ ತುಂಬಿದವಳು ನೀನು. ನಾನು ಇಷ್ಟೂ ವರ್ಷ ಹುಡುಕುತ್ತಿದ್ದ ನಾದ ಈಗ ನನ್ನದಾಗಿದೆ. ಇನ್ನು ನನ್ನಿಂದ ಅದು ಬೇರಾಗುವುದಿಲ್ಲ” ಎಂದಿದ್ದೆ. ಆದರೀಗ ನಿನ್ನ ನಾದವನ್ನು ಇಲ್ಲೇ ಬಿಟ್ಟು ನೀನು ಹೊರಟೇ ಹೋದೆ.

ಹಾಗೆ ನಾನು ನಿನ್ನ ನಾದವಾದ ಮೇಲೆ ನನ್ನನ್ನು ಮದುವೆಯಾಗಲಿರುವವನಿಗೆ ನಾನು ಏನಾಗುತ್ತೇನೆ ಎಂಬ ಭಾವ ಕಾಡಿದ್ದು ಅದೆಷ್ಟು ಸಲ? ನೀನು ನಂದಗೋಕುಲದ ಗೋವಳತ್ವದಿಂದ ಮಥುರೆಯ ಅರಸತ್ವಕ್ಕೆ ಏರಿದೆ. ನಾನು ನಂದಗೋಕುಲದ ಮಗಳಾಗಿದ್ದವಳು ಮಥುರೆಯ ಸೊಸೆಯಾಗಿ ಬಂದೆ. ಕುಲದ ಬಲ, ಅರಸೊತ್ತಿಗೆಯ ಹಿನ್ನೆಲೆ ಇಲ್ಲದ ಹೆಣ್ಣು ಮಕ್ಕಳು ಎಷ್ಟು ಎತ್ತರಕ್ಕೆ ಏರಲು ಸಾಧ್ಯ ಹೇಳು? ಅಲ್ಲದೆ ಇದ್ದುದೆಲ್ಲವನ್ನೂ ನಿನಗೆ ಅರ್ಪಿಸಿ ನಿನ್ನ ಕೊಳಲ ನಾದವಾದ ಮೇಲೆ ಅವನಿಗೆ ಕೊಡಲು ನನ್ನಲ್ಲಿ ಏನಿತ್ತು? ನನ್ನ ಬುದ್ಧಿಯ ಭಾವ ನೀನಾದ ಮೇಲೆ ಅವನಿಗೆ ಸಿಕ್ಕಿದ್ದು ಅವನು ಮುಟ್ಟಿದರೆ ಅರಳದ ಗೊಡ್ಡು ದೇಹ. ಗಂಡಂದಿರಿಗೆ ಬೇಕಾಗಿರುವುದು ಹೆಂಡತಿಯರ ದೇಹ ಮಾತ್ರವೆಂದು ನನ್ನಮ್ಮ ಹೇಳುತ್ತಿದ್ದಳು. ಅದು ಅಮ್ಮನ ಅನುಭವವಾಗಿರಬೇಕು. ನನ್ನ ಪಾಲಿಗೂ ಅದು ನಿಜವಾಯಿತು. ಗಂಡ ಹೆಂಡತಿಯ ದೇಹದ ಸಾಮಾಜಿಕ ಒಡೆಯನಾಗಬಹುದು. ಹೆಂಡತಿಯ ಬುದ್ಧಿ ಭಾವಗಳ ಒಡೆಯರಾಗುವ ಭಾಗ್ಯ ಭುವನದ ಎಷ್ಟು ಗಂಡಂದಿರಿಗಿರಬಹುದು?

ಹಾಗೆ ನಿನ್ನ ನಾದ ನಾನಾದಂದು ನಿನ್ನ ಕಣ್ಣಿನಲ್ಲಿದ್ದ ಕಾಂತಿಯನ್ನು ಇಂದಿಗೂ ನಾನು ಕಾಣುತ್ತಿದ್ದೇನೆ. ಆಗ ನೀನು ಹೇಳಿದ್ದೆ: “ಹೆಣ್ಣು ಯಾವ ಪ್ರತಿಫಲವನ್ನೂ ಅಪೇಕ್ಷಿಸದೆ ಹೀಗೆ ಮನಪೂರ್ವಕವಾಗಿ ತನ್ನದೆಲ್ಲವನ್ನೂ ಅರ್ಪಿಸುವುದಿದೆಯಲ್ಲಾ ಅದು ಇರದುದರೆಡೆಗೆ ತುಡಿಯುವ ದಿವ್ಯ ಕಣ. ನಿನ್ನಿಂದ ನಾನು ಯಾವಾಗ ಏನನ್ನು ಬೇಕಾದರೂ ಕೇಳಿ ಪಡೆಯ ಬಹುದು. ಆದರೆ ನೀನಾಗಿಯೇ ನನ್ನದೇನಿಲ್ಲ ಎಲ್ಲವೂ ನಿನ್ನದೇ” ಎಂದೂ ಪೂರ್ಣವಾಗಿ ನಿರ್ವಾಣವಾಗುವಾಗ ಸಿಗುವ ಅನುಭೂತಿಗೆ ಉಪಮೆಯೇ ಇಲ್ಲ. ಎಷ್ಟೋ ಹೆಣ್ಣುಗಳ ನಡುವೆ ಹಂಚಿ ಹೋದವನು ನಾನು. ಆದರೆ ಪೂರ್ಣತ್ವ ಸಿಗುವುದು ನಿನಗೆ, ನಿನಗೆ ಮಾತ್ರ” ಎಂದು ನನ್ನ ಮೈ ಮರೆಯಿಸಿದ್ದೆ. ಹಾಗಂದವನು ನಂದ ಗೋಕುಲದಿಂದ ಮಥುರೆಗೆ ಹೋಗುವಾಗ ಒಂದೇ ಒಂದು ಮಾತು ಹೇಳದೆ ಮಾಯವಾಗಿದ್ದೆ!

ಮಥುರೆಯಲ್ಲಿ ನಿನ್ನ ಕೊಳಲನ್ನು ಅಷ್ಟು ದಿನ ಎಲ್ಲಿ ಇಟ್ಟಿದ್ದೆ? ನಾನು ಮಥುರೆಯ ಸೊಸೆಯಾಗಿ ಪತಿಯ ಮನೆ ಸೇರಿದಂದು ಮಥುರೆ ನಿನ್ನ ಕೊಳಲಿನ ನಾದದಲ್ಲಿ ತೇಲಿತಲ್ಲಾ? ಎಂದೋ ನಂದಗೋಕುಲದಲ್ಲಿ ನುಡಿಸಿದ್ದು ಇಂದು ಕೃಷ್ಣನಿಗೆ ಯಾಕೆ ನೆನಪಾಯಿತು ಎಂದು ಪತಿಗೃಹದವರು ಪ್ರಶ್ನಿಸುವಾಗ ನಾನು ಏನೆಂದು ಉತ್ತರಿಸಿಯೇನು? “ನನ್ನ ಜೀವವೇ, ಮತ್ತೆ ನಿನ್ನ ಕೊಳಲಿನ ನಾದವಾದೆ. ನಂದಗೋಕುಲದಲ್ಲೇ ನನ್ನ ಸಮಸ್ತವನ್ನೂ ನಿನಗೆ ಅರ್ಪಿಸಿದ್ದಾಗಿದೆ. ನನ್ನ ಬುದ್ಧಿ ಭಾವಗಳ ಒಡೆಯನೇ, ಅವೆರಡನ್ನೂ ನಿನಗೆಂದೇ ಇಟ್ಟು, ದೇಹವನ್ನು ನನ್ನ ಕೈ ಹಿಡಿದವನಿಗೆ ಕೊಡುತ್ತಿದ್ದೇನೆ ಎಂದು ಪದೇ ಪದೇ ಹೇಳಿಕೊಂಡಿದ್ದೆ. ಅಂದು ಅವನು ಅದೇನು ಸುಖಪಟ್ಟನೊ? ಅಂದು ಎಂದೇನು? ಅವನು ಬುದ್ಧಿಭಾವಗಳ ಬಗ್ಗೆ ಯೋಚಿಸುವವನಾದರೆ ಎಂದೆಂದೂ ಸುಖ ಪಟ್ಟಿರಲಾರ. ಆದರೆ ಅವನ ಮುಖದಲ್ಲಿ ಸಂತೃಪ್ತಿಯಿತ್ತು. ನಂದಗೋಕುಲದ ಹೆಣ್ಣೊಬ್ಬಳು ಕೃಷ್ಣನಿಗೆ ಒಲಿಯದೆ ತನ್ನ ಕೈ ಹಿಡಿದದ್ದು ದೊಡ್ಡ ಸಾಧನೆಯೆಂದು ಅವನು ತಿಳಿದುಕೊಂಡಂತಿತ್ತು. ಪ್ರೀತಿಯೆಂದರೇನೆಂದೇ ಅರಿಯದೆ ಮದುವೆಯಾಗುವವರೆಲ್ಲಾ ಇವನ ಹಾಗೆ ಇರುತ್ತಾರಾ? “ಅಂತರಂಗದ ಆಳಕ್ಕಿಳಿದು ಶೋಧಿಸಲಾಗದವರು ಬಾಹ್ಯ ಆಚರಣೆಗಳಿಗೆ ಪ್ರಾಶಸ್ತ್ಯ ನೀಡುತ್ತಾರೆ. ಹೃದಯಗಳು ಒಂದಾಗಬೇಕಿರುವ ಮದುವೆಗಳು ಕುಲಪ್ರತಿಷ್ಠೆಯ ವಿಷಯಗಳಾಗಿ ಬಿಡುತ್ತವೆ” ಎಂದು ನೀನಂದದ್ದು ನೆನಪಾಗುತ್ತಿದೆ.

ನೀನು ಕೃಷ್ಣಾ, ನಿನ್ನನ್ನು ಇಷ್ಟಪಟ್ಟವರನ್ನೆಲ್ಲಾ ಮದುವೆಯಾಗುತ್ತಾ ಹೋದೆ. ಜಾತಿ, ಜಾತಕ, ಪಂಚಾಂಗ, ಮಹೂರ್ತ ಒಂದನ್ನೂ ನೋಡಲಿಲ್ಲ. ಜಾತಿ ಮತ್ತು ವರ್ಣಗಳು ಹುಟ್ಟಿನಿಂದ ಬರುವುದಲ್ಲ; ಅವು ಸ್ವಭಾವದಿಂದ ಆರೋಪಿತವಾಗುತ್ತವೆ ಎಂದು ಹೇಳುತ್ತಾ ಹೋದೆ. ಹಾಗೆ ಮದುವೆಯಾದವರನ್ನೆಲ್ಲಾ ಇಷ್ಟಪಡಲು ನಿನಗೆ ಸಾಧ್ಯವಾಯಿತಾ? ನಾನು ನಿನ್ನನ್ನು ಮದುವೆಯಾಗೆಂದು ಕೇಳಲಿಲ್ಲ. ಭಕ್ತ ಕೇಳದಿದ್ದರೆ ಯಾವ ದೇವರು ತಾನಾಗಿಯೇ ವರವನ್ನು ಕೊಡುತ್ತಾನೆ? ಆದರೆ ನಮ್ಮ ಸಂಬಂಧವನ್ನು ಮದುವೆಯ ಚೌಕಟ್ಟಿನೊಳಗೆ ಬಂಧಿಸಿಡಲು ನನಗೆ ಇಷ್ಟವಾಗಲಿಲ್ಲ. ನಿನ್ನನ್ನು ಮದುವೆಯಾದವರಿಗೆ ನಿನ್ನ ಕೀರ್ತಿ ಬೇಕಿತ್ತು. ಮಥುರೆಯ ಅಪರಿಮಿತ ಸಂಪತ್ತು ಬೇಕಿತ್ತು. ನನಗೆ ಬೇಕಿದ್ದುದು ನೀನು ಮಾತ್ರ. ನೀನು ಸಿಕ್ಕಿದ್ದೂ ನನಗೆ ಮಾತ್ರ. ನಿನ್ನ ಹೆಸರಿನ ಹಿಂದೆ ಸೇರಿಕೊಂಡಿರುವುದೂ ನನ್ನ ಹೆಸರು ಮಾತ್ರ. ರಾಧಾಕೃಷ್ಣ!

ನಂದಗೋಕುಲದಲ್ಲಿ ಅಂದು ನನ್ನ ಸಮಸ್ತವನ್ನೂ ನಿನಗೆ ಅರ್ಪಿಸಿದ ಮೇಲೆ ಆತಂಕದಲ್ಲೇ ಕಾಲ ಕಳೆದೆ. ಬುದ್ಧಿ ಭಾವಗಳ ಒಡೆಯನಾದವನು ದೇಹಕ್ಕೂ ಒಡೆಯನಾಗಿ ತನ್ನ ಪುಂಸ್ತ್ವದಿಂದ ನನ್ನಲ್ಲಿ ಎಲ್ಲಿ ತನ್ನ ಪಡಿಯಚ್ಚನ್ನು ಮೂಡಿಸಿಬಿಡುತ್ತಾನೋ ಎಂದು ಹೆದರಿದ್ದೆ. ಮದುವೆಗೆ ಮುಂಚೆ ಹಾಗೆಲ್ಲಾ ಆಗುವುದು ಸರಿಯಲ್ಲವೆಂದು ನನಗೂ ಗೊತ್ತು. ಆದರೆ ಕೃಷ್ಣಾ, ನೀನೆಂದರೆ ಸಾಕು, ದೇಹವೂ ನನ್ನ ಮಾತು ಕೇಳುವುದಿಲ್ಲ. ನೀನು ಬಾಳಲ್ಲಿ ಪ್ರವೇಶಿಸಿದ ಮೇಲೆ ಬೇರೆ ದೇವರನ್ನು ನಾನು ನಂಬಿದವಳಲ್ಲ. ನಿನಗೇ ಸ್ಪೂರ್ತಿ ದೇವರು ಎಂದು ಹೆಸರಿಟ್ಟಿದ್ದೆನಲ್ಲಾ! ಅದೊಂದು ತಿಂಗಳು ಮಾತ್ರ ಕಂಡ ಕಂಡ ದೇವರಿಗೆಲ್ಲಾ ಕೈಮುಗಿದೆ, ನನ್ನ ಸ್ಪೂರ್ತಿ ದೇವರು ನನ್ನದೇ ಉದರದಲ್ಲಿ ಹುಟ್ಟಿ ಬಾರದಿರಲಿ ದೇವರೇ, ಎಂದು ಎಷ್ಟೋ ಹರಕೆ ಹೊತ್ತೆ.

ಎಷ್ಟೊಂದು ಆತಂಕದಿಂದ ಆ ತಿಂಗಳನ್ನು ಕಣವೊಂದು ಯುಗವಾಗಿ ಕಳೆಯಬೇಕಾಯಿತು? ಸ್ತ್ರೀಯರಿಗೆ ರಜಸ್ವಲೆಯರಾಗುವ ಸಂಕಟವಿದೆಯಲ್ಲಾ, ದಮ್ಮಯ್ಯ ದೇವರೇ, ಹೆಣ್ಣು ಜನ್ಮವೇ ಬೇಡವೆನ್ನಿಸುತ್ತದೆ. ಅದರ ಮೇಲೆ ನಾಲ್ಕು ದಿನ ಮನೆಯಿಂದ ಹೊರಗಿದ್ದು ತಾನು ರಜಸ್ವಲೆಯಾಗಿದ್ದೇನೆಂದು ಲೋಕಕ್ಕೆಲ್ಲಾ ತಿಳಿಯಪಡಿಸುವುದು ಇದೆಯಲ್ಲಾ, ಅದು ಆತ್ಮಬಲವನ್ನೇ ಕುಗ್ಗಿಸಿಬಿಡುತ್ತದೆ. ರಜೋದರ್ಶನಕ್ಕೆ ಏಳೆಂಟು ದಿನ ಮೊದಲೇ ಆರಂಭ ವಾಗುತ್ತದೆ. ಅಸಾಧ್ಯ ಕಾಲು ಸೆಳೆತ ಮತ್ತು ಕಿಬ್ಬೊಟ್ಟೆ ನೋವು. ಕೂತಾಗ, ನಿಂತಾಗ ಸಿಡಿಮಿಡಿ. ಪುರುಷ ಸಂಕುಲವನ್ನು, ಹೆಚ್ಚೇಕೆ ದೇವರನ್ನೂ ದ್ವೇಷಿಸಿಬಿಡುವ ಸಮಯವದು. ಹೆಣ್ಣಿಗೆ ಮಾತ್ರ ಆ ನೋವನ್ನು ಕೊಟ್ಟವನನ್ನು ದ್ವೇಷಿಸದಿರಲು ಸಾಧ್ಯವಾ? ದೇಹದ ಅಂಗೋಪಾಂಗಗಳೆಲ್ಲಾ ಮುನಿಯುವ ಆ ದಿನಗಳಲ್ಲಿ ದುರ್ಭಿಕ್ಷದಲ್ಲಿ ಅಧಿಕ ಮಾಸವೆಂಬಂತೆ ಬಾಯಲ್ಲಿ ಹುಣ್ಣುಗಳು. ಏನನ್ನೂ ಸರಿಯಾಗಿ ತಿನ್ನುವ ಹಾಗಿಲ್ಲ.

ಆದರೂ ಕೃಷ್ಣ, ಅದೊಂದು ತಿಂಗಳು ಬೇಗ ರಜೋದರ್ಶನ ಆಗಿ ಬಿಡಲಿ ದೇವರೇ ಎಂದು ನಾನು ಕ್ಷಣ, ಕ್ಷಣ ಪ್ರಾರ್ಥಿಸುತ್ತಿದ್ದೆ. ನಮಗೆ ಇಷ್ಟವೇ ಇಲ್ಲದ್ದು ಆಪ್ಯಾಯಮಾನವಾಗಿ ಬಿಡುವುದೆಂದರೆ! ಅದೊಂದು ವಿಷಯದಲ್ಲಿ ನನ್ನ ಲೆಕ್ಕ ಒಮ್ಮೆಯೂ ಸರಿಯಾದುದಿಲ್ಲ. ಕೆಲವೊಮ್ಮೆ ನಾನಂದುಕೊಂಡದ್ದಕ್ಕಿಂತ ಮುಂಚೆ; ಕೆಲವೊಮ್ಮೆ ಏಳೆಂಟು ದಿನ ತಡ. ಆ ತಿಂಗಳು ಐದು ದಿನ ಮುಂದಕ್ಕೆ ಹೋಗಿ, ದೇವರೇ ಮನಸ್ಸಿನ ತಳಮಳವನ್ನು ಮೌನವಾಗಿ ನಿನ್ನಲ್ಲಿ ನಿವೇದಿಸಿಕೊಳ್ಳುತ್ತಿದ್ದೆ. ಕದಿಯಬಾರದು, ಕದ್ದರೆ ಸಿಕ್ಕಿ ಬೀಳಬಾರದು. ಕದ್ದಾಗಿದೆ; ಇನ್ನು ಸಿಕ್ಕಿಬಿದ್ದು ಜೀವಮಾನವಿಡೀ ಏನೇನು ಅನುಭವಿಸಬೇಕಾಗುತ್ತದೋ ಎಂದು ಭೀತಳಾಗಿದ್ದೆ. ಅದಕ್ಕೆ, ಒಮ್ಮೆ ರಜಸ್ವಲೆ ಯಾಗುವಂತೆ ಮಾಡಪ್ಪಾ ಎಂದು ಕಂಡ ಕಲ್ಲು ಗಳಿಗೆಲ್ಲಾ ಕೈಮುಗಿದೆ. ದೇವರು ನನ್ನ ಮೊರೆ ಕೇಳಿದ. ಅಂದು ನೀನು ನನ್ನ ಉದರದಲ್ಲಿ ಜನಿಸಲಿಲ್ಲ. ಅಂದು ಎಂದಲ್ಲ, ಎಂದೆಂದೂ.

ಮದುವೆಯಾದ ಮೇಲೆ ಅದೊಂದು ಭೀತಿ ನನ್ನಿಂದ ದೂರಾಗಲೇ ಇಲ್ಲ. ನಾನು ಬೆಳ್ಳಗಿದ್ದೇನೆ. ನನ್ನ ಕೈಹಿಡಿದವನು ಕ್ಷೀರಶ್ವೇತ ವರ್ಣ. ನೀನೋ, ನೀರಲ್ಲದ್ದಿದ ಕೆಂಡ. ನೀನೆಲ್ಲಾದರೂ ನನ್ನ ಗರ್ಭದಲ್ಲಿ ನಿನ್ನದೇ ಬಣ್ಣದಿಂದ ಪಡಿಮೂಡಿದರೆ? ನಿನ್ನನ್ನು ಮನಸಾರೆ ದ್ವೇಷಿಸುವ ನನ್ನ ಕೈ ಹಿಡಿದವನು ನನ್ನನ್ನು ಮನೆಯಿಂದ ಹೊರತಳ್ಳುತ್ತಾನೆ. ನೀನು ನನ್ನ ಕೈಹಿಡಿಯುವಂತಿಲ್ಲ. ನಂದಗೋಕುಲದ ತವರು ಮನೆ ಅತ್ತಿಗೆಯಂದಿರ ಸಾಮ್ರಾಜ್ಯವಾಗಿದೆ. ನಿನ್ನನ್ನು ಹೊತ್ತು ಹೆತ್ತು ಸಂಭ್ರಮಿಸಬೇಕೆಂದು ಅದೆಷ್ಟು ಹೆಣ್ಣುಮಕ್ಕಳು ಕಾದಿದ್ದಾರೆ! ನನಗೆ ಅಂತಹ ಸಂಭ್ರಮ ಬೇಕೆಂದು ಒಮ್ಮೆಯೂ ಅನ್ನಿಸಿರಲಿಲ್ಲ. ಪೂರ್ಣವಾಗಿ ನೀನೇ ದೊರಕಿರುವಾಗ, ಮಾಯೆ ಹರಿದ ಮೇಲೆ, ಛಾಯೆ ಯಾಕೆ ಬೇಕು?

ನೀನು ಜರಾಸಂಧನ ಉಪಟಳದಿಂದ ಪಾರಾಗಲು ಸಾಗರದ ಮಧ್ಯದಲ್ಲಿ ದ್ವಾರಕೆಯನ್ನು ನಿರ್ಮಿಸಿಕೊಂಡೆಯಲ್ಲಾ? ಮಥುರೆಗೆ ಮಥುರೆಯೇ ನಿನ್ನ ಹಿಂದೆ ಬಂದುಬಿಟ್ಟಿತು. ನಾನು ಬರಲಿಲ್ಲ. ನನ್ನ ಕೈ ಹಿಡಿದವನು ಬಂದರಲ್ಲವೇ ನಾನು ಬರುವುದು? ನೀನು ಯಾವುದೋ ಮಾಯಾಜಾಲದಲ್ಲಿ ನನ್ನನ್ನು ಸಂಧಿಸುತ್ತಿದ್ದುದು ಊರಿಡೀ ಸುದ್ದಿಯಾಗುವಾಗ ಅವನಿಗೆ ಗೊತ್ತಾಗದಿರುತ್ತದೆಯೆ ? ಅವನಾದರೂ ಎಷ್ಟು ದಿನವೆಂದು ಕಣ್ಣಲ್ಲಿ ಕಣ್ಣಿಟ್ಟು ಕಾಯಬಲ್ಲ? ಅವನು ಜಗಳ ತೆಗೆದಾಗಲೆಲ್ಲಾ “ನಮ್ಮದು ದೈವಿಕ ಪ್ರೇಮ; ನಿನ್ನ ತಿಳಿವಿಗೆ ಮೀರಿದ್ದು” ಎಂದು ಉತ್ತರಿಸುತ್ತಿದ್ದೆ. ಅವನಿಗೆ ಯಾರಾದರೂ ಗೆಳತಿಯರಿದ್ದಾರೆಯೇ ಎಂದು ನಾನೆಂದೂ ವಿಚಾರಿಸ ಹೋಗಲಿಲ್ಲ. ಹೆಣ್ಣುಗಳನ್ನು ಪ್ರೀತಿಯಿಂದ ಗೆಲ್ಲಬೇಕಲ್ಲದೆ ಕುಲ, ಬಲ, ಸಂಪ್ರದಾಯಗಳ ಬಂಧನದಿಂದಲ್ಲ ಎನ್ನುವುದು ಗಂಡು ಜಾತಿಗೆ ಅರ್ಥವಾಗುವುದು ಯಾವಾಗ?

ನೀನೇನೋ ಮಥುರೆಯಿಂದ ದ್ವಾರಕೆಗೆ ಹೋಗಿಬಿಟ್ಟೆ. ಇಲ್ಲಿ ನನ್ನ ಕಥೆ ಏನಾಗಬೇಕು? ಜರಾಸಂಧ, ಶಿಶುಪಾಲರನ್ನು ವಧಿಸಿದ ಮೇಲೆ ನಿನ್ನ ರಾಜಕಾರಣ ಅಖಿಲ ಆರ್ಯಾವರ್ತಕ್ಕೆ ವಿಸ್ತರಿಸಿ ಕೊಂಡಿತಲ್ಲಾ? ಮತ್ತೆ ನಿನಗೆ ಮಥುರೆಗೆ ಬರಲು ಬಿಡುವಾದರೂ ಎಲ್ಲಿ ಸಿಗಬೇಕು? ಸಿಕ್ಕರೂ ನನ್ನನ್ನು ಕಾಣಲು ಮೊದಲಿನಂತೆ ಬರಲಾಗುತ್ತದೆಯೆ? ನೀನು ಆಮೇಲೆ ಕೊಳಲೇ ನುಡಿಸಲಿಲ್ಲವಂತೆ. ನಾದ ಮಥುರೆಯಲ್ಲಿರುವಾಗ ದ್ವಾರಕೆಯಲ್ಲಿ ಕೊಳಲು ನುಡಿಸುವುದಾದರೂ ಹೇಗೆ? ನೀನು ನನಗೆ ಸಿಗುವುದಿಲ್ಲ; ಆದರೆ ನಿನ್ನೊಡನೆ ಕಳೆದ ರಸಗಳಿಗೆಗಳನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿರಲಿಲ್ಲ. ಕಳೆದು ಹೋದ ಸುಖವನ್ನು ನೆನಪಿಸಿಕೊಳ್ಳುವಷ್ಟು ದೊಡ್ಡ ದುಃಖ ಇನ್ನೊಂದಿಲ್ಲ. ಆದರೇನು ಮಾಡುವುದು? ಕಟು ವಾಸ್ತವವನ್ನು ಎದುರಿಸಲು ಶಕ್ತಿ ನೀಡುವುದೇ ಅದು!

ಮಹಾಭಾರತ ಯುದ್ಧಪೂರ್ವದಲ್ಲಿ ನೀನು ಅರ್ಜುನನಿಗೆ ಗೀತೋಪದೇಶ ಮಾಡಿದೆಯಂತೆ. ಅದು ಋಷಿ ಮುನಿಗಳಿಂದಾಗಿ ಮಥುರೆಗೂ ಮುಟ್ಟಿತಲ್ಲಾ? ಈ ಬ್ರಹ್ಮಾಂಡದಲ್ಲಿ ನನ್ನದೆನ್ನುವುದೇನಿಲ್ಲ; ನನ್ನಿಂದ ಏನೂ ಆಗುವುದಿಲ್ಲ; ನಾನು ನಿಮಿತ್ತ ಮಾತ್ರನು ಎಂದು ಅರಿತುಕೊಳ್ಳಬೇಕು. ಸುಖ ದುಃಖಗಳನ್ನು ಸಮಾನವಾಗಿ ಪರಿಭಾವಿಸುವ ಸ್ಥಿತಪ್ರಜ್ಞತೆ ಬೆಳೆಸಿಕೊಳ್ಳಬೇಕು. ನೀರಲ್ಲಿದ್ದರೂ ಒದ್ದೆಯಾಗದ ಕಮಲ ಪತ್ರದಂತಿರಬೇಕು. ಸಂಕಷ್ಟ ಸಮಯದಲ್ಲಿ ಕೂರ್ಮದಂತೆ ಸುಪ್ತವಾಗಬೇಕು. ನೀನು ಅರ್ಜುನನಿಗೆ ಹೀಗೆಲ್ಲಾ ಉಪದೇಶಿಸಿದೆಯೆಂದು ಮಥುರೆಯ ದೇವಾಲಯಗಳಲ್ಲಿ ಪ್ರತಿದಿನ ಋಷಿ ಮುನಿಗಳು ಪ್ರವಚನ ನೀಡುತ್ತಿದ್ದರು. ಅವರಲ್ಲಿ ಅದು ಹೊಸತೊಂದು ಆಧ್ಯಾತ್ಮವೆಂಬ ಸಂಭ್ರಮವಿತ್ತು. ಆದರೆ ಕೃಷ್ಣಾ ಇದನ್ನೆಲ್ಲಾ ನೀನು ನನಗೆ ಎಷ್ಟೋ ಮುಂಚೆ, ಹೇಳಿದ್ದೆಯಲ್ಲಾ? ಪ್ರಪಂಚದಲ್ಲಿದ್ದೂ ಪ್ರಾಪಂಚಿಕ ಬಂಧನಗಳಿಂದ ನಾವು ಮುಕ್ತರಾಗಿರಬೇಕು ಎಂದು ನೀನು ಅಂದು ನಂದಗೋಕುಲದಲ್ಲಿ ಹೇಳಿಕೊಡದಿರುತ್ತಿದ್ದರೆ ನಿನ್ನೊಡನೆ ನಾನು ಪಾಪಪ್ರಜ್ಞೆಯಿಲ್ಲದೆ ಒಂದಾಗಲು ಎಲ್ಲಿ ಸಾಧ್ಯವಿತ್ತು?

ಮಹಾಭಾರತ ಯುದ್ಧ ನಿಂತ ಮೇಲೆ ನೀನು ಮಥುರೆಗೆ ಬಂದಾಗ ನಾನು ನಿನ್ನನ್ನು ನಂದನವನದಲ್ಲಿ ಭೇಟಿಯಾಗಿದ್ದೆ. ನೀನು ಅಂದು ಕೊಳಲು ನುಡಿಸಿದ್ದೆ. ಮಥುರೆಗೆ ಮಥುರೆಯೇ ಸಂಭ್ರಮಪಟ್ಟಿತ್ತು. ನನ್ನ ಬುದ್ಧಿ ಭಾವಗಳ ಒಡೆಯನಾಗಿದ್ದ ನಿನ್ನನ್ನು ಅಂದು ನನ್ನ ದೇಹದ ಒಡೆಯನ್ನಾಗಿ ಸ್ವೀಕರಿಸಲಾಗಲಿಲ್ಲ. ದೇಹಭಾವ ಸತ್ತುಹೋದ ಅಪೂರ್ವ ಗಳಿಗೆಯದು. ದೇಹಾತೀತ ಪ್ರೇಮದ ಅನುಭೂತಿಗೆ ಸರಿ ಮಿಗಿಲಾದುದು ಇನ್ನ್ಯಾವುದಿದೆ? ಅಂದು ನಿನ್ನೊಡನೆ ನಾನಿರುವುದನ್ನು ನನ್ನ ಕೈ ಹಿಡಿದವನು ನೋಡಿದ್ದ. ಏನೂ ಹೇಳಿರಲಿಲ್ಲ. ಅವನಿಗೆ ನೀನೇರಿದ ಎತ್ತರದ ಅರಿವಿತ್ತು. ಅಷ್ಟು ಎತ್ತರಕ್ಕೆ ಏರಿದವನು ದೇಹದ ಮಟ್ಟಕ್ಕೆ ಇಳಿಯಲಾರ ಎನ್ನುವುದು ಅರ್ಥವಾಗಿತ್ತು. ಅವನಿಗೆ ದೇಹ ಮಟ್ಟಕ್ಕಿಂತ ಮೇಲಕ್ಕೇರಲಾಗದ ನೋವಿತ್ತು.

ಅಂದು ಅವನು ರಾತ್ರೆ ನನ್ನೊಡನೆ ಹೇಳಿದ್ದ: “ಕೊಳಲು ನುಡಿಸಲು ನಾನು ಕಲಿಯುತ್ತಿದ್ದರೆ ನೀನದರ ದನಿಯಾಗುತ್ತಿದ್ದೆಯೇನೊ? ಸಂಪ್ರದಾಯಗಳ ಬಂಧನವಿರುವುದು ದೇಹಕ್ಕೆ ಮಾತ್ರ. ಭಾವಕ್ಕೆ ಯಾವ ಬಂಧನವಿರಲು ಸಾಧ್ಯ?” ಅವನ ಬಗ್ಗೆ ನನಗೆ ವಿಷಾದ ಮೂಡಿದ್ದೇ ಅಂದು. ಹಾಗಂದವನು ಹೆಚ್ಚು ದಿನ ಬದುಕಲಿಲ್ಲ. ಅರಿವೇ ಮೋಕ್ಷ ಎಂದು ನೀನಂದದ್ದು ನನಗೆ ಆಗ ನೆನಪಾಯಿತು.

ಅದೇ ನಾನು ನಿನ್ನನ್ನು ಕೊನೆಯ ಸಲ ನೋಡಿದ್ದು. ನಿನ್ನನ್ನು, ಕಾಡಲ್ಲಿ ಬೇಡನ ಬಾಣಕ್ಕೆ ಬಲಿಯಾಗಿ ಸತ್ತವನನ್ನು ದ್ವಾರಕೆಗೆ ತಂದಾಗ, ಮಥುರೆಗೆ ಮಥುರೆಯೇ ನೋಡಲು ಹೋಗಿತ್ತಲ್ಲಾ? ಅಪರ ಕರ್ಮದಲ್ಲಿ ಭಾಗವಹಿಸಿತ್ತಲ್ಲಾ? ನನಗೆ ಕಣ ಕಣ ಪರಿಚಯವಿದ್ದ ಆ ನಿನ್ನ ದೇಹ ಸುಟ್ಟು ಕರಿಕಲಾಗುವುದನ್ನು ನೋಡಲು ನನ್ನಿಂದ ಸಾಧ್ಯವೇ ಇರಲಿಲ್ಲ. ನಾನಂದು ದ್ವಾರಕೆಗೆ ಬಂದಿದ್ದರೂ ನಿಶ್ಚಲವಾಗಿದ್ದ ನಿನ್ನ ಕೊಳಲ ನಾದವಾಗಲು ಹೇಗೆ ತಾನೇ ಸಾಧ್ಯವಿತ್ತು? ಬುದ್ಧಿ ಭಾವಗಳಲ್ಲಿ ನೀನು ಬದುಕಿಯೇ ಇರುತ್ತೀಯಾ. ಹುಟ್ಟು ಮತ್ತು ಸಾವು ಜೀವದ ಅನಿವಾರ್ಯ ಅವಸ್ಥೆಗಳು. ಯಾವುದು ಸಹಜವೋ ಅದಕ್ಕಾಗಿ ಶೋಕಿಸಕೂಡದು ಎಂದು ನೀನಂದದ್ದು ನೆನಪಾಯಿತು ಕೃಷ್ಣಾ. ನನ್ನ ಕೈ ಹಿಡಿದವನು ಸತ್ತಾಗ ನನ್ನ ಮೈ ಮೇಲಿನ ಮಂಗಳ ಚಿಹ್ನೆಗಳನ್ನೊಂದನ್ನೂ ನಾನು ತೆಗೆದಿರಲಿಲ್ಲ. ಆಗ ಕೃಷ್ಣ ಇರುವವರೆಗೆ ನೀನವುಗಳನ್ನು ತೆಗೆಯಬೇಕಾಗಿಲ್ಲ ಬಿಡು ಎಂದು ಮಥುರೆಯ ನಿತ್ಯ ಸುಮಂಗಲಿಯರು ಕೊಂಕು ಹೇಳಿದ್ದರು. ನೀನು ಸತ್ತ ಮೇಲೂ ನಾನಿವನ್ನು ತೆಗೆಯಲು ಹೇಗೆ ಸಾಧ್ಯ, ನೀನು ನನ್ನ ಬುದ್ಧಿಭಾವಗಳಲ್ಲಿ ಜೀವಂತವಾಗಿರುವಾಗ?

ಆದರೆ ಕೃಷ್ಣಾ, ನಿನ್ನ ಕೃತಕ ಸೃಷ್ಟಿ ದ್ವಾರಕೆಯ ಕತೆ ಏನಾಗಿ ಹೋಯಿತು ನೋಡು. ನಿನ್ನ ಅಪರಕರ್ಮ ಮುಗಿದ ಕೆಲವೇ ದಿನಗಳಲ್ಲಿ ಮ್ಲೇಂಚರು ದ್ವಾರಕೆಗೆ ನುಗ್ಗಿ ಧನ, ಧಾನ್ಯ, ಹೆಣ್ಣುಗಳನ್ನು ಕೊಳ್ಳೆ ಹೊಡೆದುಕೊಂಡು ಹೋಗಿ ಬಿಟ್ಟರು. ಆಮೇಲೆ ನಿನ್ನ ಹಿಂಬಾಲಕರು ಯಾದವೀ ಕಲಹದಲ್ಲಿ ಮಡಿದು ಹೋದರು. ಅದು ಸಾಲದೆಂಬಂತೆ ಇಡೀ ದ್ವಾರಕೆಯನ್ನು ಸಮುದ್ರರಾಜ ಆಪೋಶನ ತೆಗೆದುಕೊಂಡು ಬಿಟ್ಟ. ಯಾಕೆ ಹೇಳು? ಅಲ್ಲಿ ಕೃಷ್ಣನ ಕೊಳಲಿಗೆ ದನಿಯಾಗಿ ರಾಧೆ ಎಲ್ಲಿದ್ದಳು? ಆದರೆ ಮಥುರೆಗೇನೂ ಆಗಲಿಲ್ಲ. ಏಕೆಂದರೆ ನೀನು ಹುಟ್ಟಿದ್ದು ಇಲ್ಲಿ. ನಿನ್ನ ನನ್ನ ಪ್ರೇಮ ಅರಳಿದ್ದು ಇಲ್ಲಿ. ನಾವು ದೇಹಾತೀತ ಅಲೌಕಿಕ ಪ್ರೇಮದ ಔನ್ನತ್ಯಕ್ಕೇರಿದ್ದು ಇಲ್ಲಿ. ಎಲ್ಲಿ ನೈಜ ಪ್ರೇಮವಿರುತ್ತದೋ ಅಲ್ಲಿ ಪ್ರಕೃತಿ ಮುನಿಯುವುದಿಲ್ಲ. ಮಥುರೆಯಲ್ಲಿ, ಯಮುನೆಯ ದಂಡೆಯಲ್ಲಿ ರಾಧೆಯೊಡನೆ ಕೃಷ್ಣ ಅಮರ ಪ್ರೇಮದ ಸಂಕೇತವಾಗಿ ಎಂದೆಂದೂ ಉಳಿಯುತ್ತಾನೆ. ಕೇಳುವ ಕಿವಿಗಳಿಗೆ ಯಮುನೆಯ ಅಲೆಗಳಲ್ಲಿ ಮುರಳಿಯ ನಾದ ಕೇಳಿಸುತ್ತಲೇ ಇರುತ್ತದೆ. ಯುಗಾಂತರದಲ್ಲಿ ರಾಧಾಕೃಷ್ಣರ ಅಮರ ಪ್ರೇಮದ ಸಂಕೇತವೊಂದು ಯಮುನೆಯ ದಂಡೆಯಲ್ಲಿ ತಲೆಯೆತ್ತಿ ನಿಲ್ಲಲೂಬಹುದು. ಕಾಲದ ಪರಿಭ್ರಮಣವನ್ನು ಅರ್ಥವಿಸಲು ನಿನ್ನಿಂದಲೇ ಆಗಲಿಲ್ಲ. ಅಂದ ಮೇಲೆ ನನ್ನಿಂದ ಹೇಗೆ ಸಾಧ್ಯವಾದೀತು ಹೇಳು? ಕಾಲಾಯ ತಸ್ಮೈ ನಮಃ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಕ್ಕೆ
Next post ಮಿಂಚುಳ್ಳಿ ಬೆಳಕಿಂಡಿ – ೬೮

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…