ಅಲಂಕಾರವು ಕೀಳಾದರೆ ತಪ್ಪಿದಾತನು ಸೊನೆಗಾರ
ಭಂಗಾರದ್ದೇನು ತಪ್ಪು?
ಮೂರ್ತಿ ಕೆಟ್ಟರೆ ದೋಷಕ್ಕೆ ಗುರಿ ಚಿತ್ರಗಾರ
ಮಣ್ಣೇನು ಮಾಡೀತು?
ಮನೆ ಡೊಂಕಾದರೆ ಕೆಡಿಸಿದವನು ಉಪ್ಪಾರ
ಕಟ್ಟೇನು ಮಾಡ್ಯಾವು?
ನಾನು ಗುಣಹೀನನಾದರೆ, ದೇವಾ
ನೀನು ಹೊಣೆಗಾರನು.
ಒಬ್ಬ ಸೊನಗಾರ ಕೆಲಸ ಕೆಡಿಸಿದರೆ ಮತ್ತೊಬ್ಬ ದೊರೆಯುವನೆಂದು ಜನರಿಗೆ ನಂಬಿಕೆ. ಆದರೆ ಸೃಷ್ಟಿಕರ್ತನು ಬೀದಿ-ಬೀದಿಗೆ ದೊರಕುವದುಂಟೆ? ದೇವಾ ನೀ ಮಾಡಿದ ತಪ್ಪನ್ನು ಮತ್ತಾರು ತಿದ್ದುವರು? ಜೀವಿಗಳನ್ನು ನಿರ್ಮಿಸುವಾಗ್ಗೆ ಎಚ್ಚರಿರಬೇಡವೆ? ನನ್ನಂಥ ಪಾಮರರನ್ನು ಜನಿಸಿಸಿ ನಿನ್ನ ಹೆಸರಿಗೆ ನೀನೇ ಕುಂದು ತಗಲಿಸುವದುಚಿತವೆ?
ಕುಂಬಾರನಿಂದ ಒಡಕ ಗಡಿಗೆಗಳನ್ನಾರೂ ಕೊಳ್ಳುವದಿಲ್ಲ. ಕೊಳಕು ಹಣ್ಣುಗಳು ಮಾರಾಟವಾಗುವದಿಲ್ಲ. ಒಡಕ ಗಡಿಗೆಗಳು ತಿರುಗಿ ಕುಂಬಾರನ ಮನೆಗೇ ಹೋಗುವವು. ಎಲೈ ಭವಚಕ್ರನಾಡಿಸುವ ಕುಂಬಾರನೇ! ನನ್ನಂಥ ನಿರ್ಗುಣಿಗಳು ತಿರುಗಿ ನಿನ್ನೆಡೆಗೆಯೇ ಬರುವರು ಎಚ್ಚರಿಕೆ.
ನನ್ನ ಪೂರ್ವ ಕರ್ಮದ ಫಲವೆಂದು ನೀನು ದೋಷ ತಪ್ಪಿಸಲು ಯತ್ನಿಸಬಹುದು, ಆದರೆ ಪೂರ್ವ ಕರ್ಮವನ್ನಾದರೂ ಮಾತಾಡಿಸಿದವರಾರು?
*****