ಮಲಗಿರುವ ಕನ್ನಡಿಗ ಎದ್ದೇಳಲಿ
ಎದ್ದಿರುವ ಕನ್ನಡಿಗ ಮುನ್ನಡೆಯಲಿ
ಮುನ್ನಡೆವ ಕನ್ನಡಿಗ ಹಿಂಜರಿಯದಿರಲಿ
ಹಿಂಜರಿದರೆ ಬದುಕು ಯಾಕೆ ಹೇಳಿ? //
ಕನ್ನಡಿಗ ಈ ನೆಲದಿ ಸಾರ್ವಭೌಮ
ಉದ್ಯೋಗ ಪಡೆವಲ್ಲಿ ಪಂಗನಾಮ
ಆದರೂ ಧ್ವನಿಯಿಲ್ಲ ಯಾಕೊ ಏನೊ
ಮಹಿಷಿ ವರದಿಯ ಇಲ್ಲಿ ಹೂತರೇನೊ!
ಕನ್ನಡದ ನುಡಿನೆಲ ಗಡಿರಾಜ್ಯಗಳಲಿ
ದತ್ತು ಮಕ್ಕಳ ಆರ್ತನಾದ ಜೊತೆಯಲ್ಲಿ
ಹೇಗೊ ಬಂದಿತು ವರದಿ ಹೆಸರು ಮಹಾಜನ
ಇದರ ಜಾರಿಗೆ ಎಲ್ಲಿ ನಮ್ಮ ಮಹಾಜನ!
ಸಾವಿರದ ನಮ್ಮ ನುಡಿ ಸಾಯುತಿದೆ ಇಲ್ಲಿ
ಉದ್ಯೋಗ ಶಿಕ್ಷಣ ಪಡೆವ ಭ್ರಮೆಗಳಲಿ
ಇಂತಹ ಇಂಗ್ಲೀಷು ಹಾರವೊ ಉರುಳೊ
ಎದೆಹಾಲ ಕುಡಿದ ಬಲ್ಲವರೆ ಹೇಳಿ?
*****