(ಸುಶೀಲೆಯು ಗಂಡನಿಗೆ ಬರೆದ ಕಾಗದ)
ಸಿರಿಪುರ
೮-೯-೧೯೨೬
ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು.
. . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ ಹೆಂಡತಿಯೆಂದು ಮದುವೆಯಾಗಿ, ಹತ್ತಾರು ವರ್ಷ ಲಂಡನ್ನಿನಲ್ಲಿ ಹೋಗಿ ನಿಂತು, ಈಗ ನನ್ನನ್ನು ಆಡಿದರೆ ನನ್ನ ತಪ್ಪೆ? ನಾನೇನು ಮನುಷ್ಯಳಲ್ಲವೆ? ಇಷ್ಟಾಗಿ ಲಂಡನ್ನಿನಲ್ಲಿ ನೀವೇನೇನು ಮಾಡಿದ್ದೀರೊ ನನಗೆ ಗೊತ್ತೆ! ಅದೆಲ್ಲ ಈಗ ಬೇಡ.
ನೀವು ಊಹಿಸಿರುವುದು ಸರಿ. ಹೌದು, ಇ. ಟಿ. ರಾಯರು. ಇದೇ ಸಮಯದಲ್ಲಿ ನೀವು ಎರಡು ವರ್ಷದ ಹಿಂದೆ ಬರೆದ ಕಾಗದವನ್ನು ನಿಮಗೆ ನೆನಪು ಕೊಡುವುದು ಒಳ್ಳೆಯದು. ನನ್ನ ಸ್ನೇಹಿತೆ ಮಾಲುವು ಇದೇ ಇ. ಟಿ. ರಾಯರ ಜತೆಯಲ್ಲಿ ಒಂದು ವಾರ ಎಲ್ಲಿಯೋ ಹೋಗಿದ್ದಳೆಂದುದಕ್ಕೆ ನೀವೇನು ಬರೆದಿದ್ದಿರಿ, ನೆನಪಿದೆಯೆ? ಇ. ಟಿ. ರಾಯರ ಜತೆಯಲ್ಲಿ ಯಾರು ಬೇಕಾದರೂ ಹೋದಾರು. ನಾನು ಹೆಂಗಸಾಗಿದ್ದಿದ್ದರೆ ನಾನೂ ಹೋಗುತ್ತಿದ್ದೆ!” ನಾನು ಆ ಕಾಗದವನ್ನು ಬಹಳವಾಗಿ ಓದಿ ಹಿಂದುಮುಂದು ನೋಡಿ ನಡೆದಿದ್ದೇನೆ. ನಾನೇನೂ ಓಡಿಹೋಗಿಲ್ಲ. ಈಗ ರತ್ನದಂತಹ ಒಂದು ಮಗುವಿದೆ. ಈಗ ಕೂಗಾಡಿದರೆ ಏನು ಬಂತು? ಮುಂದೇನು ಮಾಡಬೇಕೆನ್ನುತ್ತೀರಿ? ಪ್ರಪಂಚಕ್ಕೆಲ್ಲ ಡಂಗುರ ಹೊಯ್ಯುತ್ತೀರೇನು? ಏನು ಬಂದ ಹಾಗಾಯಿತು ? ನಾನೆಲ್ಲೂ ನಮಗೆ ಬಿ.ಎ. ಗೆ ಇಟ್ಟಿದ್ದ ಪುಸ್ತಕದಲ್ಲಿ ಓದಿದ್ದೆ : “ಗಿಡದಲ್ಲಿ ಬಿಟ್ಟ ಹಣ್ಣು ಗಿಡವನ್ನು ಪಡೆದವನದಲ್ಲ; ಹಣ್ಣನ್ನು ಕಿತ್ತು ತಿನ್ನುವವನದು” ಎಂದು.
ಮುಖ್ಯ ನಾನು ಹೇಳುವುದಿಷ್ಟು; ನಾನೇನು ದೇವತೆಯಲ್ಲ, ಸಂನ್ಯಾಸಿನಿಯಲ್ಲ. ಈ ಸಿರಿಪುರ ಬಿಟ್ಟರೆ ಪ್ರಪಂಚದಲ್ಲಿ ಬೇರೆ ಊರೇ ಇಲ್ಲವೆನ್ನುತ್ತೀರೇನು?
ಎಲ್ಲವನ್ನೂ ಬರೆದಿದ್ದೇನೆ. ಸಾವಕಾಶವಾಗಿ ಯೋಚಿಸಿ ಕಾಗದ ಬರೆಯಿರಿ. ದುಡುಕಬೇಡಿ.
ಇತಿ ನಿಮ್ಮವಳಾದ
ಶೀಲ
* * *
(ಸುಬು ತಂದೆಗೆ ಬರೆದ ಕಾಗದ)
ಸಿರಿಪುರ
೧೬-೫-೧೯೩೧
ತಿ||ರೂ!! ತಂದೆಯವರಲ್ಲಿ ಸುಬ್ಬನ ನಮಸ್ಕಾರಗಳು,
ಅದಾಗಿ ಉಭಯಕುಶಲೋಪರಿ ಸಂಪ್ರತಿ. ಇದ್ದ ಆಕೆಯ ನೆರಳೂ ಮರೆಯಾಯಿತು. ಗಂಗಮ್ಮನು ಇಂದು ಗಂಡು ಕೂಸು ಹಡೆದಳು. ಈಗ ಹತ್ತು ತಿಂಗಳ ಹಿಂದೆ ನಮ್ಮ ರೇವಣ್ಣನು ಸತ್ತಾಗ, ಅವನ ಹೆಂಡತಿ ಗಂಗಮ್ಮನಿಗೆ ಮಕ್ಕಳಿಲ್ಲದ್ದರಿಂದ ಅವನ ಆಸ್ತಿ ನಮಗೆ ಬರಬೇಕಾಗಿತ್ತಲ್ಲವೆ? ಆದರೆ ಆಗ ಗಂಗಮ್ಮನು ತಾನು ಗರ್ಭಿಣಿಯೆಂದುದರಿಂದ ಕಾಲವನ್ನು ಕಾಯಬೇಕಾಯಿತು. ರೇವಣ್ಣನು ಹಾಸಿಗೆ ಹಿಡಿದು ಒಂದು ವರ್ಷದ ಮೇಲಾಗಿರುವಾಗ ಈ ಆಶ್ಚರ್ಯವು ಏನೆಂದು ನೀವು ಕೇಳ ಬಹುದು. ಅದರ ಗುಟ್ಟು ನನಗೆ ಗೊತ್ತು.
ರೇವಣ್ಣನು ಸತ್ತ ಮಾರನೆಯ ದಿನ, ಗಂಗಮ್ಮನೆದುರು ಸಿರಿಪುರದ ಅಮಲದಾರರು ಇ. ಟಿ. ರಾಯರು, ಇನ್ನೊಂದು ಹತ್ತು ತಿಂಗಳೊಳಗಾಗಿ ಅವಳಿಗೆ ಮಗುವಾದರೆ ಆಸ್ತಿಯು ಅವಳ ಕೈ ಬಿಟ್ಟು ಹೋಗುವುದಿಲ್ಲವೆಂದು ಹೇಳುತ್ತಿದ್ದುದನ್ನು ನಾನೇ ಕೇಳಿದೆ. ಇದಾದ ಕೆಲವು ರಾತ್ರಿಗಳು ಗಂಗಮ್ಮನು ಇ. ಟಿ. ರಾಯರ ಮನೆಗೆ ಹೋಗುತ್ತಿದ್ದೂದೂ
ನನಗೆ ಗೊತ್ತು. ಆದರೇನು! ನಾವು ಬಾಯಿಬಿಡುವ ಹಾಗಿಲ್ಲ. ಈ ವಿಚಾರವನ್ನು ಹೊರಗೆಳೆದರೆ, ಸತ್ತ ರೇವಣ್ಣನ ಮಾನವೇನಾಯಿತು? ಅದರಿಂದ ನಮ್ಮ ಮಾನವೇನಾಯಿತು? ಮಾನವನ್ನು ಕಳಕೊಂಡು ಹಣ ಸಂಪಾದಿಸಬೇಕೆ? ಶಿವ ಕೊಟ್ಟ ಗಂಜಿಯೆ ಸಾಕು. ಅಲ್ಲದೆ ನಾವು ಬಡವರು. ಸಾಹೇಬರು ಇ. ಟಿ. ರಾಯರ ಎದುರು ನಿಂತರೆ ನಮ್ಮನ್ನು ಸಡ್ಡೆ ಮಾಡುವವರಾರು? ಈ ಎಲ್ಲ ಕಾರಣಗಳಿಂದ ನಮ್ಮ ಬಡತನವೇ ನಮಗೆ ಭಾಗ್ಯವೆಂದೂ, ಮಾಡಿದವರ ಪಾಪ ಆಡಿದವರ ಬಾಯಲ್ಲೆಂದೂ ನಾನು ಸುಮ್ಮನಿದ್ದರೆ, ನಾನು ಸರಿಯಾಗಿ ನಡೆದಿರುವೆನೆಂದಲ್ಲದೆ ತಾವು ಅನ್ಯಥಾ ಹೇಳಲಾರಿರೆಂದು ನಂಬುತ್ತೇನೆ. ಇದರ ಮೇಲೆ ತಾವು ಸೂಕ್ತವಿದ್ದಂತೆ ಹಿತವಾದ ಬರೆಯುವುದು.
ಇಂತಿ ನಮಸ್ಕಾರಗಳು
ಸುಬ್ಬ
* * *
(ಶಾಮರಾವ್ ಸ್ನೇಹಿತನಿಗೆ ಬರೆದ ಕಾಗದ)
ಸಿರಿಪುರ
೧೯-೧೦-೧೯೩೨
ರಂಗಣ್ಣ,
ನಿನ್ನ ಕಾಗದ ಬಂತು. ನನಗೆ ಬಹಳ ಜಂಭ ಬಂದಿತು ಎನ್ನುತ್ತೀಯೆ. ಯಾವ ಮಹಾಪದವಿ ಬಂದಿರುವುದಕ್ಕೆ ಜಂಭ ಬರಬೇಕು? ಹೌದು. ನಾನು ಅಮಲದಾರರ ಹೆಡ್ ಕ್ಲಾರ್ಕು, ಅರುವತ್ತು ರೂಪಾಯಿ ಸಂಬಳ ಬರುತ್ತೆ! ಆದರೆ, ರಂಗಣ್ಣ, ನನ್ನ ಪದವಿ ನನ್ನ ಶತ್ರುವಿಗೂ ಬೇಡ. ನಮ್ಮ ಅಮಲದಾರರ ಕಚೇರಿಯಲ್ಲಿ ಹೆಡ್ ಕ್ಲಾರ್ಕ್ ಕೆಲಸ ಏನು ಗೊತ್ತ? ಮಿಕ್ಕ ಅಮಲದಾರರ ಹೆಡ್ಕ್ಲಾರ್ಕುಗಳು ಮಾಡುವ ಕೆಲಸಗಳಲ್ಲದೆ ಬೇರೆ ಇನ್ನೂ ಕೆಲಸ ಉಂಟು. ನೋಡು, ನಮ್ಮ ಅಮಲದಾರರು ದಿನಕ್ಕೊಂದೊಂದು ಊರು ಜಮಾಬಂದಿಗೆ ಹೋಗುತ್ತಾರೆ. ಅವರು ಹೊರಡುವ ಹಿಂದಿನ ದಿವಸ ನಾನು ಹೋಗಬೇಕು. ಹೋಗುವಾಗ ಅವರ ಪೆಟ್ಟಿಗೆಯೊಂದನ್ನು ಹೊತ್ತು ಕೊಂಡು ಹೋಗಬೇಕು. ಆ ಪೆಟ್ಟಿಗೆಯಲ್ಲೇನಿದೆ ಗೊತ್ತ, ರಂಗಣ್ಣ? ಒಂದು ಥಳಕಿನ ಸೀರೆ, ಕುಪ್ಪಸ, ಇಮಿಟೇಷನ್ ಒಡವೆ ಹತ್ತಾರು; ಒಂದು ಜತೆ ಸೆಂಟು ಬಾಟಲು. ನಾನು ಹೋಗಿ ಸರಿಯಾದ ಪಾತ್ರವನ್ನು ಆರಿಸಿ, ಮೈ ಕೈ ತೊಳೆಯಿಸಿ, ವೇಷಭೂಷಣಗಳನ್ನಳವಡಿಸಿ, ಅಮಲದಾರರು ಬರುವವೇಳೆಗೆ ಸಿದ್ದ ಪಡಿಸಬೇಕು. ಒಂದು ಕಡೆ ನಗುಬರುತ್ತದೆ, ಒಂದು ಕಡೆ ಅಳು ಬರುತ್ತದೆ, ರಂಗಣ್ಣ, ನನಗೆ ಏನಿಲ್ಲವೆಂದರೂ ತಿಂಗಳಿಗೆ ಇಪ್ಪತ್ತು ದಿವಸ ಈ ಕೆಲಸ ವಿರುತ್ತದೆಂದರೆ, ನನ್ನ ಪದವಿಯಲ್ಲಿ ನನಗೆಷ್ಟು ಜಂಭವಿರಬೇಕು, ಹೇಳು! ವ್ಯವಧಾನವಿಲ್ಲದೆ ನಿನಗೆ ಕಾಗದ ಬರೆಯಲಿಲ್ಲವಲ್ಲದೆ ಬೇರೆಯಲ್ಲ, ರಂಗಣ್ಣ. ಇ. ಟಿ. ರಾಯರ ಹೆಸರನ್ನು ಕೇಳಿದ್ದೀಯಾ ನೀನು? ಕೇಳಿಲ್ಲದಿದ್ದರೆ ತಿಳಿದುಕೊ ರಂಗಣ್ಣ. ಅವರೆಯೆ ನಮ್ಮ ಸಾಹೇಬರು.
ಆದರೆ ನಾನೇಕೆ ಈ ಕೆಲಸ ಮಾಡುತ್ತೇನೆಂದು ನೀನು ಕೇಳಬಹುದು. ಒಂದು, ಅರುವತ್ತು ರೂಪಾಯಿ ಬರುತ್ತೆ, ಎರಡು, ಎಂತಹ ಕೆಲಸವಾದರೂ ಸರಿಯೆ, ನಾನೆಷ್ಟು ಅವನತಿಯನ್ನನುಭವಿಸಿದರೂ ಸರಿಯೆ, ತಾಯಿಲ್ಲದ ನನ್ನ ಮಗುವನ್ನು ಸುಖವಾಗಿರಿಸಬೇಕೆಂದು ಇಷ್ಟು ಒದ್ದಾಡುತ್ತಿದ್ದೇನೆ. ಸೋಮನಪೇಟೆಗೆ ಹೋಗಲು ಹೊತ್ತಾಯಿತು, ರಂಗಣ್ಣ, ಪುನಃ ಬರೆಯುತ್ತೇನೆ.
ಶಾಮರಾವ್
* * *
(ಪಾತು ರುಕ್ಕುಗೆ ಬರೆದ ಕಾಗದ)
ಸಿರಿಪುರ ೪-೬-೧೯೩೩
ರುಕ್ಕು,
ನಿನಗೆ ಕಾಗದ ಬರೆದು ಓಬೀರಾಯನ ಕಾಲವಾಯಿತಲ್ಲವೇನೆ. ಉಪ್ಪು ಹುಳಿ ಕಾರ ಇಲ್ಲದೆ ಅದೆಂತ ಕಾಗದ ಬರೆಯೋದೆ? ಈಗ ಅಂದರೆ, ಉಪ್ಪು, ಹುಳಿ, ಕಾರ, ಜತೆಗೆ ಒಗ್ಗರಣೇನೂ ಇದೆ. ಶಾಕೂಗೆ ಇನ್ನೂ ಒಂದು ಮಗು ಕಣೆ! ಹೆಣ್ಣು! ಶಾಕೂ ಯಾರು ಜ್ಞಾಪಕ ಇದೆಯೆನೆ ? ಇ. ಟಿ. ರಾಯರ ಹೆಂಡತಿ, ಜ್ಞಾಪಕ ಇದೆಯೆ ೧೯೧೪ರಲ್ಲಿ ಅವರಿಗೆ ಮದುವೆ ಆದ್ದು! ಅಲ್ಲವೆ, ೧೯೧೬ರಿಂದ ೧೯೩೨ ಅಂದರೆ ೧೬ ವರ್ಷಕ್ಕೆ ೬ ಗಂಡು ! ೮ ಹೆಣ್ಣು ! ಅಬ್ಬ ! ಶುದ್ಧ ಮೃಗಗಳು ! ಲೇ ಸಮಾಚಾರ ಮುಗೀತು. ಈ ಸುದ್ದಿ ಕಾರ್ಡಿನಲ್ಲಿ ಬರೀಬಾರದು ಅಂತ ಕವರಿನಲ್ಲಿ ಬರೆದಿದ್ದೇನೆ. ಕವರಿಗೆ ಒಂದೂಕಾಲಾಣೆ ಕೊಡಬೇಕೂಂದರೆ ಹೊಟ್ಟೆ ಉರಿದುಹೋಗುತ್ತಮ್ಮ.
ಶಾಕೂಗೆ ಮಗು ಹುಟ್ಟಿದ್ದನ್ನು ಊರಲ್ಲಿ ಎಲ್ಲರಿಗೂ ಹೇಳು. ಮರೀ ಬೇಡ. ಅಯ್ಯೋ ಪಾಪ !
ಪಾತು
* * *
(ಸಿರಿಪುರದ ವಾರ್ತಾತರಂಗ’ದ ಸುದ್ದಿ)
ಸಿರಿಪುರದ ವಾರ್ತಾತರಂಗ
=======================================
ಸಂಪುಟ ೪. ೨೫-೯-೧೯೩೩ ಸಂಚಿಕೆ ೪೫
=======================================
ದೈವಕ್ಕೆ ಕಣ್ಣಿಲ್ಲ
ನಮ್ಮ ಪತ್ರಿಕೆಯ ಘನಪೋಷಕರೂ, ಸಿರಿಪುರದ ಮಾನ್ಯ ಅಮಲದಾರರೂ ಆದ ಶ್ರೀಮಾನ್ ಇ. ಟಿ. ರಾಯರು ಈ ದಿನ ಬೆಳಿಗ್ಗೆ ೧೦|| ಗಂಟೆಯಲ್ಲಿ ಪರಶಿವನ ಪಾದಧೂಳಿಯಲ್ಲಿ ಐಕ್ಯರಾಗಲು, ಕೈಲಾಸಗಿರಿವರದ ತುಂಗಶೃಂಗಗಳನ್ನು ಏರಿದರೆಂದು ತಿಳಿಸಲು ಬಹಳ ವಿಷಾದಪಡುತ್ತವೆ. ಶ್ರೀಯುತರು ತಮ್ಮ ಅಮಲದಾರಗಿರಿಯಲ್ಲಿ ಎಲ್ಲರ ಪ್ರೀತಿಯನ್ನೂ ಸಂಪಾದಿಸಿಕೊಂಡು ಪ್ರಜೆಗಳಿಗೆ ಅಚ್ಚು ಮೆಚ್ಚಾಗಿದ್ದರು. ಇವರ ಅಕಾಲ ಮರಣದಿಂದ ಇಡೀ ಸಿರಿಪುರವೇ ಶೋಕಪಾಷಾಣದ ಕೆಳಗೆ ಸಿಕ್ಕಿ ಹೋಗಿದೆ. ಎಷ್ಟು ಹೇಳಿದರೇನು? ನಾವು ಹುಲುಮನುಜರು ಏನು ಮಾಡಲು ಸಾಧ್ಯ? ಎಲ್ಲವೂ ದೈವೇಚ್ಛೆ. ಮುಖ್ಯ ಆ ದೈವಕ್ಕೆ ಕಣ್ಣಿಲ್ಲ. ಆ ಪಾಪಿ ದೈವಕ್ಕೆ ಕಣ್ಣಿದ್ದಲ್ಲಿ ಶ್ರೀಯುತರ ಜೀವನಯಾತ್ರೆಯನ್ನು ಅವರ ೪೦ನೆಯ ವಯಸ್ಸಿನಲ್ಲಿಯೆ ಕೊನೆಗಾಣಿಸುತ್ತಿರಲಿಲ್ಲ. ಶ್ರೀಯುತರ ಪರಲೋಕ ಪ್ರಯಾಣಕ್ಕೆ ನಾವು ಕಣ್ಣೀರಿಡುತ್ತ, ಅವರ ಕುಟುಂಬದ ಅಪಾರವಾದ ದುಃಖಸಾಗರದಲ್ಲಿ ನಾವೂ ಭಾಗಿಗಳೆಂದು ಮಾತ್ರ ಹೇಳಬಲ್ಲೆವು.
*****









