ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅಶ್ವತ್ಥ ಕಟ್ಟೆ, ಒಂದು ಭಾವಿ ಇಷ್ಟನ್ನೂ ಒಬ್ಬನೇ ಮಾಡಿಸಿಕೊಟ್ಟಿದ್ದಾನೆ. ಇಂತಹ ಪಟೇಲನನ್ನು ಕಂಡರೆ ಯಾರು ತಾನೇ ಗೌರವಿಸುವುದಿಲ್ಲ?
ಈ ಹಳ್ಳಿಗೆ ಕಳೆ ತುಂಬಿಕೊಡುವವರು ಮತ್ತೊಬ್ಬರು ಇದ್ದಾರೆ. ಅವರೇ ಉಪಾಧ್ಯಾಯರು. ಅದೇ ಸ್ಥಳದವರು. ಕನ್ನಡ ಭಾಷೆಯಲ್ಲಿ ಚೆನ್ನಾಗಿ ನುರಿತವರು. ಈಗಿನ ಬಿ.ಎ., ಎಂ.ಎ. ತರಗತಿಗಳಿಗೆ ಕನ್ನಡ ಪಾಠವನ್ನು ಅವರು ಹೇಳಿಕೊಡಬಲ್ಲರು. ಓದಿರುವುದು ಹಳೆಯಕಾಲದ ಲೋವರ್ ಸೆಕೆಂಡರಿ, ಆದರೂ ಪಾಂಡಿತ್ಯ ಬಹು ಚೆನ್ನಾಗಿದೆ. ಈ ಊರಿನ ಅನೇಕ ಮಂದಿ ಇವರ ಶಿಷ್ಯರೇ, ಇವರ ಮಾತಿಗೆ ಬದಲಿಲ್ಲ, ಅಡ್ಡವಿಲ್ಲ. ಪಟೇಲನೂ ಸಹ ಇವರ ಶಿಷ್ಯನೇ, ಯಾವ ಸುದ್ದಿ ತಿಳಿಯಬೇಕಾದರೂ, ಯಾವ ಪತ್ರವ್ಯವಹಾರ ನಡೆಯಬೇಕಾದರೂ ಇವರ ಹತ್ತಿರವೇ ಬರಬೇಕು. ಇವರು ಈಗಿನ ಕಾಲದ ನಾಗರಿಕತೆಗೆ ಮನಸೋಲದಿದ್ದರೂ, ವೃತ್ತಪತ್ರಿಕೆಗಳು, ಮಾಸಪತ್ರಿಕೆಗಳು ಮೊದಲಾದುವುಗಳನ್ನು ತರಿಸಿಕೊಂಡು ತಾವೂ ಓದಿ ಇತರರಿಗೂ ಓದಿ ಹೇಳುತ್ತಾರೆ. ಹೀಗಿರುವುದರಿಂದ ಗ್ರಾಮಸ್ಥರಲ್ಲಿ ಅನೇಕ ಮಂದಿ ಸ್ವಲ್ಪ ಮಟ್ಟಿಗೆ ನಡೆನುಡಿಯನ್ನು ತಿದ್ದಿ ಕೊಂಡಿದ್ದಾರೆ. ಆದರೆ ಹೆಂಗಸರೊ?
* * *
ಅಂದು ಊರು ಹಬ್ಬ, ಎಲ್ಲರ ಮನೆಯಲ್ಲೂ ಸಡಗರ, ಹೊಸ ಸೀರೆ, ಹೊಸ ಉಡುಪು, ಮಕ್ಕಳ ಅಂಗಿಯೆಲ್ಲಾ ರಂಗುರಂಗು, ಪಟೇಲನ ಮನೆಯಲ್ಲಿ ಅಡಿಗೆ ಸ್ವಲ್ಪ ವಿಶೇಷ. ಅವನ ಮನೆಯಲ್ಲಿ ಎರಡು ನಾಯಿಗಳು-ಅವಕ್ಕೂ ವಿಶೇಷವೇ. ಹಬ್ಬವಲ್ಲವೆ? ಮಕ್ಕಳ ಓಡಾಟದಲ್ಲಿ ನಾಯಿಗಳಿಗೆ ದಿಕ್ಕೇ ತೋಚಲಿಲ್ಲ. ಸಂಜೆಯ ಹೊತ್ತಿಗೆ ಸರಿಯಾಗಿ ಯಾವುದೋ ಎರಡು ಹುಡುಗರು ಸೇರಿ ಆ ನಾಯಿಗಳ ಸರಪಳಿಯನ್ನು ಸಡಲಿಸಿ ಬಿಟ್ಟು ಬಿಟ್ಟರು. ಅವು ಚೆನ್ನಾಗಿ ತಿಂದು ಸೊಕ್ಕಿ ಮೆರೆದವು.
ಅದೇ ಹೊತ್ತಿಗೆ ಕೆಳಗಿನ ಬೀದಿ ಸಣ್ಣಪ್ಪನ ಮಗ ಪಟೇಲನ ಮನೆಯ ಮುಂದೆ ಹಾದುಹೋಗುತ್ತಿದ್ದ. ಆ ನಾಯಿಗಳು ತಮ್ಮ ಪದ್ಧತಿಗನುಸಾರವಾಗಿ ಬೊಗಳಿದವು. ಪುಟ್ಟ ಹುಡುಗ ಸುಮ್ಮನೆ ಇರದೆ ಕಲ್ಲುಗಳನ್ನು ತೆಗೆದುಕೊಂಡು ಅವುಗಳಿಗೆ ಹೊಡೆದನು. ಅವು ರೇಗಿ ಎಗರಿಬಿದ್ದು ಕಚ್ಚಿಯೇ ಬಿಟ್ಟವು. (ಕಚ್ಚಿದ್ದು ಒಂದು ನಾಯಿ ಮಾತ್ರ) ಸಣ್ಣಪ್ಪನ ಮಗ ಅಳುತ್ತಾ ಅಲ್ಲಿಯೇ ಉರುಳಿದನು.
ಕೂಡಲೇ ಜನಸಂದಣಿ ಸೇರಿತು. ಸಣ್ಣಪ್ಪನ ಹೆಂಡತಿ ಓಡಿಬಂದಳು. ಮಗುವನ್ನು ಕಂಡು, ಬಾಯಿಗೆ ಬಂದಂತೆ ಆ ನಾಯಿಗಳನ್ನೂ ಪಟೇಲನ ಮನೆಯವರನ್ನೂ ಬೈಯ್ಯ ತೊಡಗಿದಳು. ಸಣ್ಣಪ್ಪ ಸಣ್ಣಗಿದ್ದರೂ ಅವನ ಹೆಂಡತಿ ಯಾವುದರಲ್ಲಿಯೂ ಸಣ್ಣವಳಲ್ಲ. ಬಾಯಿ ಬಲು ದೊಡ್ಡದು. ಬಾಯಿಂದ ಅನೇಕ ಮಾತುಗಳು ಹೊರಬಿದ್ದುವು. ಈ ಮಾತುಗಳು ಪಟೇಲನ ಹೆಂಡತಿಯನ್ನು ಕೆರಳಿಸಿದುವು. ಅವಳಿಗೂ ಸ್ಮೃತಿ ತಪ್ಪಿತು. ಪಟೇಲನೇನೋ ಊರಿಗೆ ಉಪಕಾರಿ ಆಗಿರಬಹುದು. ಆದರೆ ಅವನ ಹೆಂಡತಿ ಹಾಗಲ್ಲ. ಸಣ್ಣಪ್ಪನ ಹೆಂಡತಿಗೂ ಪಟೇಲನ ಹೆಂಡತಿಗೂ ವಾಗ್ಯುದ್ಧ ಬಿರುಸಾಗಿಯೇ ನಡೆಯಿತು. ಈ ಅವಾಂತರದಲ್ಲಿ ಆ ಮಗುವನ್ನು ವಿಚಾರಿಸುವವರೇ ಇಲ್ಲವಾಯಿತು. ಅದು ಅಳುತ್ತಾ ಇದ್ದರೆ ಇವರು ಬಾಯಿ ಬಡಿಯುತ್ತಾ ಇರುವುದು, ಇವುಗಳ ಜೊತೆಗೆ ನಾಯಿಗಳೂ ಬೊಗಳುವುದು. ಹೀಗಾಗಿ ಗದ್ದಲವೋ ಗದ್ದಲ, ಊರೆಲ್ಲಾ ಇದೇ ಮಾತೆ ಸರಿ, ಕೆಲವರು ಪಟೇಲನ ಹೆಂಡತಿಯ ಕಡೆ ವಾದಿಸಿದರು, ಕೆಲವರು ಸಣ್ಣಪ್ಪನ ಹೆಂಡತಿಯ ಕಡೆ ವಾದಿಸಿದರು.
* * * *
“ನಾಯಿಗಳಿಗೇನು ಬುದ್ದಿ ಇದೆಯೇ ? ಏನೋ ತಿಳಿಯದೆ ಕಚ್ಚಿ ಬಿಟ್ಟವು. ಅದಕ್ಕೆ ಹೀಗೆಲ್ಲಾ ಹಠಮಾಡುವುದೇ?”
“ನಾಯಿಗೆ ಬುದ್ಧಿ ಇದೆ ಎಂದು ಯಾರು ಹೇಳಿದವರು ? ಅವುಗಳನ್ನು ಕಟ್ಟಿಹಾಕಬೇಡವೆ ? ಸುಮ್ಮನೆ ಬಿಟ್ಟರೆ ಏನು ಗತಿ ? ಈವತ್ತು ಈ ಮಗುವನ್ನು ಕಚ್ಚಿತು. ನಾಳೆ ಇನ್ನು ಯಾರನ್ನಾದರೂ ಕಚ್ಚುತ್ತದೆ.”
“ಆಗಲಿ, ಈ ಮಾತುಗಳೆಲ್ಲಾ ನೋಡಿದ್ದೇನೆ. ನಿಮ್ಮ ಮಗು ಬಹಳ ಸಾಚಾ ಅಲ್ಲವೆ? ಕಲ್ಲು ತಗೊಂಡು ಏಕೆ ಹೊಡೆಯಬೇಕು ? ಆ ಮಗು ಸುಮ್ಮನಿರೋ ಮಗುವೆ ? ಅವರಮ್ಮ ಎಷ್ಟು ಬಜಾರಿಯೋ ಅಷ್ಟೇ ಆ ಮಗುವೂ.”
“ಹೌದು ಹೌದು. ಹಲ್ಲು ಹಿಡಿದು ಮಾತನಾಡು, ಮಗುವಿನ ತಾಯಿ ಬಜಾರಿಯಂತೆ. ಓಹೋ! ನೀವೆಲ್ಲಾ ಬಲು ಸಾಭ್ಯಸ್ಥರೋ ? ”
ಇಷ್ಟೆಲ್ಲಾ ಆಗುವಾಗ್ಗೆ ರಾತ್ರೆ ಹತ್ತಾಯಿತು. ಯಾರಿಗೂ ಕಾಲದ ಮೇಲೆ ಜ್ಞಾನವೇ ಇಲ್ಲ. ಹೆಂಗಸರ ಜಗಳ ಗಂಡಸರಿಗೂ ಬಂತು. ಪಟೇಲ ತೋಟಿಯನ್ನು ಕರೆದು, “ಬೆಳಗಾಗೋ ಹೊತ್ತಿಗೆ ಎಲ್ಲರೂ ಗೌಡನ ಮನೆಗೆ ಬರಬೇಕು ಎಂದು ಸಾರಿಬಿಟ್ಟು ಬಾ” ಎಂದು ಹೇಳಿದನು.
ಮರುದಿನ ಊರೆಲ್ಲಾ ಸೇರಿ ಪಂಚಾಯಿತಿ, ತಪ್ಪು ಯಾರದು ? ನಾಯಿಗಳದೇ ಅಥವಾ ಮಗುವಿನದೇ, ಇದು ತೀರ್ಮಾನವಾಗಬೇಕು. ಒಬ್ಬ ರೈತ ಮೇಲಕ್ಕೆದ್ದು, ಸಲಹೆ ಕೊಟ್ಟ “ನಾಯಿಗೂ ಬುದ್ಧಿಯಿಲ್ಲ. ಮಗುವಿಗೂ ಬುದ್ಧಿಯಿಲ್ಲ, ಆದ್ದರಿಂದ ಇಬ್ಬರೂ ತಪ್ಪಿತಸ್ಥರಲ್ಲ.” ಇನ್ನೊಬ್ಬ ಹೇಳಿದ “ನಾಯಿ ಕಚ್ಚಿತು; ಮಗು ಅತ್ತಿತ್ತು, ಆದರೆ ಸಣ್ಣಪ್ಪನ ಹೆಂಡತಿ ಆ ಮಗುವಿನ ತಾಯಿ ಬಾಯಿಗೆ ಬಂದ ಹಾಗೆ ಬೊಗಳಿದಳಲ್ಲಾ, ಅವಳಿಗೇನು ಶಿಕ್ಷೆ? ”
ಸಣ್ಣಪ್ಪನೇ ಮೇಲೆಕ್ಕೆದ “ ಏನು! ನನ್ನ ಹೆಂಡತಿಗೆ ಶಿಕ್ಷೆಯೇ ? ಸರಿ ಸರಿ. ಹಾಗೇನಾದರೂ ಮಾಡೋದಾದರೆ ಪಟೇಲನ ಹೆಂಡತಿಗೆ ಎಂತಹ ಶಿಕ್ಷೆ ಗೊತ್ತೇನು? ಅವಳನ್ನು ನಡುದಾರಿಯಲ್ಲಿ ನಿಲ್ಲಿಸಿ, ತಣ್ಣೀರು ಸುರಿದು ಮಂಗಳಾರತಿ ಮಾಡಬೇಕು” ಎಂದು ಅಬ್ಬರಿಸಿ ನುಡಿದ.
ಪಟೇಲನಿಗೆ ಸ್ವಲ್ಪ ಕೋಪ ಬಂತು. ಸಣ್ಣಪ್ಪನನ್ನು ಕುರಿತು “ಅಯ್ಯಾ, ಸಣ್ಣಪ್ಪ, ನೀನು ನನ್ನ ಮೇಲೆ ಇಷ್ಟು ಕೋಪವಾಗಿದ್ದಿ ಅಂತ ನಾನು ತಿಳಿದಿರಲಿಲ್ಲ. ಈವತ್ತಿಗಾಯಿತು. ಇನ್ನು ಮುಂದೆ ಏನಾದರೂ ನನ್ನ ಹೆಂಡತಿ ಸುದ್ದಿ ಎತ್ತಿದೇ ನೋಡಿಕೋ-ನಿನ್ನನ್ನು ಈ ಊರು ಬಿಟ್ಟು ಓಡಿಸಿಬಿಡ್ತೀನಿ, ಎಚ್ಚರಿಕೆ ” ಎಂದು ಸೂಚನೆ ಕೊಟ್ಟ.
ಸಣ್ಣಪ್ಪ ಗೊಣಗಾಡಿದ. ಪಕ್ಕದಲ್ಲಿದ್ದವರು ಸಮಾಧಾನ ಹೇಳಿ ಅವನನ್ನು ಕುಳ್ಳಿರಿಸಿದರು. ಅಷ್ಟರಲ್ಲಿ ಕುಂಟವೆಂಕಟ ಮೇಲಕ್ಕೆದ್ದ. “ಬುದ್ದೀ ನಾನೊಂದು ಉಪಾಯ ಹೇಳ್ತೀನಿ. ಧರ್ಮರಾಯನಿಗೆ ರಾಮರು, ಎಷ್ಟೊಂದು ಹೇಳಿದರು. ಧರ್ಮರಾಯನ ಕರಗ ಯಾತಕ್ಕೆ ನೋಡೋದು. ರಾಮದೇವರ ಪಟಕ್ಕೆ ಹೂವ ಹಾಕುವುದು, ಹಾಗೇನೇ ನಮ್ಮ ಹಳ್ಳಿ, ಪಟೇಲ ನಮಗೆಲ್ಲಾ ಉಪಕಾರ ಮಾಡವ್ನೆ, ಅಕಸ್ಮಾತ್ ಆ ನಾಯಿ ಮಗಾನ ಕಚ್ಚಿಬಿಡ್ತು. ಈಕಿತ್ತ ಮಾಫ್ ಮಾಡಿಬಿಡಿ. ಆಂಜನೇಯನ ದೇವಸ್ಥಾನದಲ್ಲಿ ನಾಳೆ ಪೂಜೆ ಮಾಡಿ ಪರ್ಸಾದ ತಕೊಂಡ್ಡಿದ್ರೆ ಎಲ್ಲಾ ಸರಿಹೋಗ್ತೈತೆ” ಎಂದು ತನಗೆ ತೋಚಿದ ಮಾತು ಹೇಳಿದ.
ರಾಮಯ್ಯ ದುಪಟ ಹೊದ್ದುಕೊಂಡು ಬಾಯಿ ಬಿಟ್ಟ “ನೋಡು. ಗೌಡಾ ಇಷ್ಟೆಲ್ಲಾ ಬೇಡ. ನಿನ್ನ ಹೆಂಡರು ಐದು ರೂಪಾಯಿ ದಂಡ ಕೊಡಲಿ. ಸಣ್ಣಪ್ಪನ ಹೆಂಡರು ಐದು ರೂಪಾಯಿ ದಂಡ ಕೊಡಲಿ. ಎಲ್ಲಾ ಸೇರಿಸಿ, ದೇವರಿಗೆ ಪೂಜೆ ಮಾಡಿಸಿಬಿಡೋಣ. ಇದೇ ಸರಿ.”
ಕೆಲವರು ಪಟೇಲನ ಕಡೆ ಶಿಫಾರಸು ಮಾಡುತ್ತಾ “ಸಣ್ಣಪ್ಪನ ಹೆಂಡತೀನೆ ಹತ್ತು ರೂಪಾಯಿ ಕೊಡಲಿ ” ಎಂದು ವಾದಿಸಿದರು. ಇನ್ನು ಕೆಲವರು “ನಾಯಿಯ ಮಾಲೀಕರು ಯಾರು ? ಅವರೇ ದಂಡ ಕೊಡಲಿ ” ಎಂದರು.
ಕಡೆಗೆ ತೀರ್ಮಾನವೇ ಆಗಲಿಲ್ಲ. ಅನುಮಾನ, ಅಸಮಾಧಾನಗಳಿಂದಲೇ ಪಂಚಾಯಿತಿ ಮುಗಿದು ಹೋಯಿತು.
ಹತ್ತು ಹದಿನೈದು ದಿನಗಳು ಕಳೆದ ಬಳಿಕ ಸಣ್ಣಪ್ಪ ಯಾವುದೋ ಕೆಲಸಕ್ಕೆ ಬೆಂಗಳೂರಿಗೆ ಬಂದ, ಅಲ್ಲಿ ಸ್ನೇಹಿತರೊಬ್ಬರ ಮನೆಯಲ್ಲಿ ಇಳಿದು ಕೊಂಡ, ಊಟಮಾಡ್ತಾ ನಾಯಿ ಕಚ್ಚಿದ ಕತೆಯನ್ನೆಲ್ಲಾ ಹೇಳಿದ. ಅವರು ಹೇಳಿದರು “ ನೀನು ಒಂದು ನೋಟೀಸ್ ಲಾಯರ್ ಮೂಲಕ ಕೊಡಿಸು. ನಿನ್ನ ನಾಯಿಗಳಿಂದ ನನ್ನ ಮಗು ಪ್ರಾಣವೇ ಹೋಗುತ್ತಿತ್ತು. ಇಂತಹ ನಾಯಿಗಳನ್ನು ನೀನು ಸಾಕಕೂಡದು. ಇಲ್ಲವೇ ಭದ್ರವಾಗಿ ಕಟ್ಟಿಹಾಕಬೇಕು. ಈಗ ನಿನ್ನ ನಾಯಿ ನನ್ನ ಮಗುವನ್ನು ಕಚ್ಚಿದ್ದರಿಂದ ನನಗೆ ಬಹಳ ನಷ್ಟವಾಗಿದೆ. ಅದನ್ನು ನೀನೇ ಕೊಡಬೇಕು ಎಂದು ಮುಂತಾಗಿ ಬರೆಸು” ಎಂಬುದಾಗಿ ಸಲಹೆ ಕೊಟ್ಟರು. ಸಣ್ಣಪ್ಪನಿಗೆ ಸರಿ ಎನ್ನಿಸಿತು. ಊರಿಗೆ ಹಿಂದಿರುಗಿದ ಕೂಡಲೇ ಒಬ್ಬ ಲಾಯರನ್ನು ಗೊತ್ತು ಮಾಡಿ, ನೋಟೀಸ್ ಕೊಡಸಿದ.
ಪಟೇಲನಿಗೆ ಗಾಬರಿಯಾಯಿತು. ಅವನು ಬೆಂಗಳೂರಿಗೆ ಬಂದು ಇನ್ನೊಬ್ಬ ಲಾಯರ ಸಂಗಡ ಮಾತನಾಡಿ, ಇವನ ಮೇಲೆ ಕೇಸ್ ಹಾಕಿಸಿದ. “ಸಣ್ಣಪ್ಪ ನನ್ನ ಮೇಲೆ ಇಲ್ಲದ್ದೆಲ್ಲಾ ಹೇಳಿ, ಅವಮಾನ ಮಾಡುತ್ತಿದ್ದಾನೆ. ಸಣ್ಣಪ್ಪನ ಮಗುವನ್ನು ನಮ್ಮ ನಾಯಿ ಕಚ್ಚಲೇ ಇಲ್ಲ. ಯಾವ ನಾಯಿ ಕಚ್ಚಿತೋ ಯಾರಿಗೆ ಗೊತ್ತು ?” ಎಂದು ವಾದಿಸಿದ. ಹೀಗೆ ಇಬ್ಬರೂ ಕೋರ್ಟು ಹತ್ತಿದರು. ಲಾಯರ್ ಮನೆ ತಿರುಗಿದರು. ಮೂರು ನಾಲ್ಕು ಸಲ ಕೇಸ್ ಮುಂದುವರಿಯಿತು. ಆರು ತಿಂಗಳ ಮೇಲೆ ಕೇಸ್ ‘ಡಿಸ್ಮಿಸ್’ ಆಗಿಹೋಯಿತು.
ಅಂದಿನಿಂದ ನಮ್ಮೂರಲ್ಲಿ ಶಾಂತಿಯೇ ಇಲ್ಲ. ಪಾಠಶಾಲೆ, ಗ್ರಾಮ ಪಂಚಾಯಿತಿ, ರಸ್ತೆ, ದೇವಸ್ಥಾನ ಇವುಗಳಲ್ಲಿ ಯಾರಿಗೂ ಆಸಕ್ತಿಯಿಲ್ಲ. ಉಪಾಧ್ಯಾಯರು ಮಾತ್ರ ಹಾಗೆಯೇ ಇದ್ದಾರೆ. ಅವರ ಮನೆಗೆ ಸಣ್ಣಪ್ಪನು ಪಟೇಲನಿಲ್ಲದಾಗಲೂ, ಪಟೇಲನು ಸಣ್ಣಪ್ಪನಿಲ್ಲದಾಗಲೂ ಹೋಗುತ್ತಾರೆ. ಪಟೇಲನ ಪಕ್ಷ, ಸಣ್ಣಪ್ಪನ ಪಕ್ಷ ಎಂದು ಎರಡು ಪಂಗಡಗಳಾಗಿವೆ. ಉಪಾಧ್ಯಾಯರು ತಮ್ಮ ಕೈಲಾದ್ದನ್ನು ಮಾಡುತ್ತಾ ಇದ್ದಾರೆ. ಇನ್ನೇನು ಅವರೂ ಇಷ್ಟರಲ್ಲಿಯೇ ಪೆನ್ಷನ್ ತೆಗೆದುಕೊಳ್ಳುತ್ತಾರೆ. ಆಮೇಲೆ ಊರಿನ ನ್ಯಾಯಕ್ಕೆ ಪ್ರವೇಶ ಮಾಡಬಹುದು.
*****









