ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ಗುಹೆಗಳಲ್ಲಿದ್ದರೂ ಒಬ್ಬರೊಡನೆ ಒಬ್ಬರು ಮಾತನಾಡಲು ಕೂಡ ಅವರಿಗೆ ಅವಕಾಶವಾಗುತ್ತಿರಲಿಲ್ಲ. ಅವರ ಸಾಧನೆಯ ಸಂಯಮವು ಅಷ್ಟಿತ್ತು! ಆ ಅರ್ಹತರ ಪ್ರಭಾವಕ್ಕೆ ಸೋತು ರಾಜಗೃಹದ ಆಸ್ತಿಕರೆಲ್ಲರೂ ತಮ್ಮ ತಮ್ಮ ಸರ್ವಸ್ವವನ್ನೂ ತಂದು ತಂದು ಅವರ ಅಡಿಗಳಲ್ಲಿ ವಿನಿಯೋಗಿಸುತ್ತಿದ್ದರು.
ಹೀಗಿರಲು, ಆ ಅರ್ಹತರು ನಿರ್ವಾಣಪದದ ಕಡೆ ಏರಿದ ಒಂದೊಂದು ಮೆಟ್ಟಲೂ, ತಾನು ಅಧೋಗತಿಗೆ ಇಳಿದ ಒಂದೊಂದು ಮೆಟ್ಟಲೆಂದು ಮಾರಪಿಶುನನು ಎಣಿಸಿದನು. ರಾಗಗಳ ಅಧಿದೇವತೆಯಾದ ಮಾರನಿಗೆ ಸಂತರ ಅಭ್ಯುದಯವು ಎಂದೂ ಸಂತೊಷಕಾರಕವಲ್ಲ. ಅದುಸಲುವು ರಾತ್ರಿ ಹಗಲೆನ್ನದೆ ಅನಿಮೇಷನಾಗಿ ಹೊಂಚುತ್ತಿದ್ದು, ಮಾರನು, ಒಂದು ದಿನ ಆ ಇಬ್ಬರು ಅರ್ಹತರನ್ನೂ ಒಟ್ಟಿಗೆಯೆ ಬುಟ್ಟಿಗೆ ಹಾಕಿಕೊಂಡನು.
ಧರ್‍ಮಪಥದಿಂದ ಓರೆಯಾದ ಆ ಅರ್ಹತರು ಒಬ್ಬನ ನಡತೆಯನ್ನು ಇನ್ನೊಬ್ಬನಿಗೆ ತಿಳಿಸದೆ, ಅವಸರವಸರವಾಗಿ ರಾಜಗೃಹಕ್ಕೆ ಓಡಿದರು. ಓಡುವಾಗ, ಆಸ್ತಿಕವೃಂದವು ತಮತಮಗಿತ್ತ ಧನಕನಕಗಳು ಆದಷ್ಟನ್ನು ಕಟ್ಟಿಕೊಂಡು ಓಡಿದರು. ಓಡಿಬಂದು, ರಾಜಗೃಹದಲ್ಲಿ ಮೂರು ದಿನ ನಿಂತರು. ಆ ಮೂರು ದಿವಸಗಳಲ್ಲಿ ಅಭಕ್ಷ್ಯ ಭೋಜನ, ಅಪೇಯಪಾನ, ಅಗಮ್ಯಾಗಮನಗಳಲ್ಲಿ ರಮಿಸಿ, ದಶಶೀಲಗಳಿಗೆ ತಿಲಾಂಜಲಿಯಿತ್ತು ನಾಲ್ಕನೆಯ ದಿವಸ ಗೃಧ್ರಕೂಟದೆಡೆಗೆ ಹಿಂದಿರುಗಿದರು.
ಆ ಇಬ್ಬರು ಅರ್ಹತರಲ್ಲಿ ಒಬ್ಬನ ಹೆಸರು ದೇವಪುತ್ರ. ಇನ್ನೊಬ್ಬನ ಹೆಸರು ಜಿನಪುತ್ರ. ದೇವಪುತ್ರನು ದಾರಿಯ ಉದ್ದಕ್ಕೂ ಅಳುತ್ತ ಹುಯ್ಯಲಿಡುತ್ತ ಬರುತ್ತಿದ್ದ. ಜಿನಪುತ್ರನು ಅವನ ಪಕ್ಕದಲ್ಲಿ ನಗು ಮುಖನಾಗಿ ಬರುತ್ತಿದ್ದ.
“ಪಾಪಿ ನಾನು, ಪಾತಾಳಕ್ಕಿಳಿದವನು ನಾನು. ನಾನು ಮಾಡಿರುವ ಪಾಪಕಾರ್‍ಯಗಳ ಫಲವು ಮುಗಿಯಲು ಎಷ್ಟು ಶತಕೋಟಿ ಜನ್ಮವಾದರೂ ಸಾಲದಯ್ಯೋ! ನನ್ನ ಶೀಲಾನುಷ್ಠಾನ ಜಪತಪ ಧ್ಯಾನಗಳೆಲ್ಲವೂ ಮಣ್ಣು ಗೂಡಿದುವಲ್ಲಾ! ಪಾಪದ ಹಾದಿಯನ್ನು ಇಂದು ತುಳಿಯುವ ಈ ಮಹಾಪುಣ್ಯಕ್ಕೆ ಇದುವರೆಗೆ ನಿರ್ವಾಣಸಾಧನೆಗೆ ನಾನೇಕೆ ಅವಿರತವಾಗಿ ಶ್ರಮಿಸಬೇಕಿತ್ತು? ಅಯ್ಯೋ! ಕೆಟ್ಟೆನಯ್ಯೋ!” ಎಂದು ದೇವಪುತ್ರನು ಅಳುತ್ತ ಬರುತ್ತಿದ್ದ.
ಜಿನಪುತ್ರನು ಅಕ್ಷತಮನಸ್ಕನಾಗಿ ಧರ್ಮಪದವನ್ನು ಕೀರ್ತಿಸುತ್ತ ಬರುತ್ತಿದ್ದ.
“ಅಯ್ಯೋ! ಪಾಪ ಮಾಡಿದುದರ ಫಲವಾಗಿ ನಿನಗೆ ಹುಚ್ಚು ಹಿಡಿಯಿತೇ? ಪಾಪಿ!” ಎಂದು ದೇವಪುತ್ರನು ನಗುತ್ತಿದ್ದ ಜಿನಪುತ್ರನ ಕಡೆ ತಿರುಗಿದ.
“ಏಕೆ? ಭಿಕ್ಷು!” ಎಂದು ಜಿನಪುತ್ರನೆಂದ.
“ಪಾಪಿ! ಮಾಡಿದುದಕ್ಕೆ ಪರಿತಾಪವಾಗದೆ ನಿನಗೆ?”
“ಪರಿತಾಪಪಡುವಂತಹದು ನಾನೇನು ಮಾಡಿರುವೆ ಭಿಕ್ಷು?”
“ರಾಜಗೃಹ! ರಾಜಗೃಹ! ಮರೆತೆಯಾ ರಾಜಗೃಹವ?”
“ರಾಜಗೃಹ! ಅಹುದು! ಭಗವಾನ್ ಬುದ್ಧದೇವನ ಅಸದೃಶವಾದ ಧರ್‍ಮಕ್ಕೆ ಮಾರುವೋದ ಮಾನವಕೋಟಿಯ ಪುಣ್ಯ ನಿವಾಸವದು! ಅಹುದು! ಅದೇ ರಾಜಗೃಹ!”
“ರಾಜಗೃಹದಲ್ಲಿ ನಾವೇನು ಮಾಡಿದೆವು? ಮರೆತೆಯಾ ಮತಿಹೀನ?”
“ನಾವೇನ ಮಾಡಿದೆವು! ಒಯ್ದ ಧನಕನಕಗಳನ್ನು ಬಡವರಿಗೆ ಹಂಚಿದೆವು. ಸುತ್ತು ಮುತ್ತಿನ ಚೈತ್ಯಸ್ತೂಪಗಳನ್ನು ಸಂದರ್ಶಿಸಿದೆವು. ರಕ್ತಚಂದನಾರಾಮದಲ್ಲಿ ಆರ್ಯ ಸದಾನಂದನ ಅಮೃತವಾಣಿಯಿಂದ ತಣಿದೆವು. ಭಗವಾನನ …”
ದೇವಪುತ್ರನು ಕಳೆಗುಂದಿ ದಿಗ್ಭ್ರಾಂತನಾಗಿ ಜಿನಪುತ್ರನ ಕಡೆ ದಿಟ್ಟಿಸಿದನು.
“ಜಿನಪುತ್ರ! ಗುರುವಾರ ಮಧ್ಯಾಹ್ನ … ಆ ವೇಶ್ಯಾವಾಟದಲ್ಲಿ … ಮರೆತೆಯಾ?”
“ಭಿಕ್ಷು! ಆ ಗುರುವಾರವನ್ನು ಮರೆಯುವುದೆ! ಉಪಾಸಕ ಕಾಶ್ಯಪನ ಮನೆಯಲ್ಲಿ ನಡೆದ ಆ ಆತಿಥ್ಯವನ್ನು ಮರೆಯುವುದೆ!”
“ದೇವ! ದೇವ! ಮತಿಭ್ರಷ್ಟವಾಯಿತೆ ನಿನಗೆ, ಪಾಪಿ! ಹೋಗಲಿ, ಭೃಗುವಾರ ಯಾರೊಡನೆ ಕುಡಿದು ಕುಣಿದಾಡಿದೆವು … ಅದನ್ನಾದರೂ ಹೇಳುವೆಯ?”
“ಬೃಗುವಾರ? ಅಂದು ತಥಾಗತನ ಮಹಾಭಿನಿಷ್ಕ್ರಮಣ ಮಹೋತ್ಸವದ ಸ್ಮಾರಕವಲ್ಲವೆ ಭಿಕ್ಷು! ಅನುಮಾ ತರಂಗಿಣಿಯ ಶೀತಲ ಸಲಿಲವನ್ನೀಂಟಿ ಉತ್ಸವದ ಮುಂದುಗಡೆ ಹಾಡಿ ನಡೆದೆವಲ್ಲವೆ!”
“ಪಾಪಿ! ಪಾಪಿ! ನಾವು ಯಾರ ಕಾಲ ಕೆಳಗೆ ಉರುಳಿದ್ದೆವು ನೆನಪಿದೆಯೇ?”
“ಯಾರ ಕಾಲ ಕೆಳಗೆ? ಆಸೇತು ಹಿಮಾಚಲ ಪರೀತವಾದ ಈ ಭಾರತವರ್ಷದಲ್ಲಿ ಬೌದ್ಧ ಧರ್ಮಕ್ಕೆ ಮೂರ್ಧಾಭರಣದಂತಿರುವ ಆರ್ಯ ಸುಮಂಗಲನ ಪಾದಕಮಲದಲ್ಲಲ್ಲವೆ ನಾವು ಕೆಡೆದಿದ್ದುದು!”
“ನನ್ನನ್ನೇಕೆ ಅಣಕಿಸುವೆ, ಪಾಪಿ? ನೆನ್ನೆ ಮೊನ್ನೆಯ ಪಾಪ ಕರ್ಮಗಳ ಫಲವಾಗಿ ಮಾರನು ನಿನ್ನನ್ನು ಪೂರ್ಣವಾಗಿ ಮುರಿದನೇ! ನೀನು ಇದ್ದುದು ಪಾಪಿಗಳ ಗೋಷ್ಠಿ! ಪಾಪಿಗಳ ಗೋಷ್ಠಿ!”
ಜನಪುತ್ರನು ದೇವಪುತ್ರನ ಕಡೆ ನೋಡಿದನು.
“ಭಿಕ್ಷು! ಮಾರನು ನಿನ್ನನ್ನು ಮುರಿದಿರುವನೊ ನನ್ನನ್ನು ಮುರಿದಿರುವನೊ ಹೇಳಲು ಸಾಧ್ಯವಿಲ್ಲ. ಭಗವಾನನನ್ನು ಕೀರ್ತಿಸಿ, ಅವನ ಆಸ್ತಿಕ್ಯದಲ್ಲಿ ರಮಿಸಿದವನು ನಾನು. ವಿಹಾರಗಳನ್ನು ವೇಶ್ಯಾವಾಟಗಳೆಂದೂ, ಪವಿತ್ರ ಅನುಮಾ ಸಲಿಲವನ್ನು ಮದ್ಯವೆಂದೂ, ಆರ್ಯರನ್ನು ವೇಶ್ಯೆಯರೆಂದೂ ಕರೆಯುವವನು ನೀನು. ಮಾರನು ಯಾರನ್ನು ಒಟ್ಟಿರುವನು ನೋಡು” ಎಂದನು.
ದೇವಪುತ್ರನು ತಡೆಯಲಾರದೆ ಹೋದನು. ಬಾಯಿಗೆ ಬಂದ ಬೈಗುಳನ್ನೆಲ್ಲ ಸಿಡಿಸುತ್ತ, ಜಿನಪುತ್ರನ ಮೇಲೆ ಬಿದ್ದು ಅವನನ್ನು ಕೊಲ್ಲ ಹೋದನು. ಅದು ಸಾಗದೆ, ಸಾಕಾಗಿ, ಇಬ್ಬರೂ ಮುಂದೆ ನಡೆದ್ರು, ದೇವಪುತ್ರನು ರೋದಿಸುತ್ತ ಎದೆ ಎದೆ ಚೆಚ್ಚಿಕೊಳ್ಳುತ್ತ ನಡೆದ. ಜಿನಪುತ್ರನ ಬಾಯಿ ಧರ್ಮಪದಕ್ಕೆ ಬೀಡಾಗಿತ್ತು.
ಮರುದಿನ ಬೆಳಿಗ್ಗೆ ದೇವಪುತ್ರನು ಎದ್ದನು.
“ಅಲ್ಲ! ನನ್ನ ಸಾಧನೆಗಳಿಂದ ಋದ್ಧಿ ಸಾಕ್ಷಾತ್ಕ್ರಿಯೆಯೇ ಮುಂತಾದ ಅತಿಮಾನುಷ ಸಾಮರ್ಥ್ಯಗಳನ್ನು ಪಡೆದಿದ್ದೆ. ಈ ಕ್ಷಣಿಕವಾದ ಭೋಗಕ್ಕೆ ಸೋತು ದಶಶೀಲಗಳನ್ನೂ ಮುರಿದೆ. ಇನ್ನು ನನಗೆ ಉದ್ಧಾರವೆಲ್ಲಿ? ಇಳಿದುದು ಇಳಿದಾಯ್ತು; ಇನ್ನು ಇಳಿತಕ್ಕೆಡೆಯೆಲ್ಲಿ!” ಎಂದು ಚಿಂತಿಸಿ, ನೆಟ್ಟನೆ ರಾಜಗೃಹಕ್ಕೆ ಬಂದನು. ಒಂದು, ಬಾಳಬಾರದ ಬದುಕನ್ನು ಬದುಕಿ, ಕಡೆಗೊಂದು ದಿವಸ, ಕೈಲಿ ಕಾಸಿಲ್ಲದೆ, ಜತೆಯ ಕೆಡುಕರನ್ನು ಕೂಡಿ, ದಾರಿಗರನ್ನು ಲೂಟಿಮಾಡಿ ಕೊಂದನು; ನಗರಾಧಿಕಾರಿಗಳ ಕೈಗೆ ಸಿಕ್ಕಿದನು; ಶೂಲವನ್ನೇರಿತ್ತನು ; ಅಪವರ್ಗಕ್ಕಿಳಿದನು.
ಇತ್ತ ಜಿನಪುತ್ರನು ಎಂದಿನಂತೆ ತನ್ನ ಸತ್ಕರ್ಮಗಳನ್ನು ನಡೆಸಿ, ಎಂದೂ ಯಾರೂ ಅರಿಯದ ಅದ್ಭುತಶಕ್ತಿಗಳನ್ನು ಪಡೆದನು; ಅನೇಕ ಪವಾಡಗಳನ್ನು ಮೆರೆದನು. ಕಡೆಗೆ, ನಿರ್ವಾಣ ಪಡೆದಾಗ, ಒಣಗಿ ಓಟುಗರಿಯಾಗಿದ್ದ ಅವನ ಶುಷ್ಕ ದೇಹವು ಹದಿನಾರರ ಪ್ರಾಯದವರ ಹಾಗೆ ಸರ್‍ವ ಲಕ್ಷಣ ಸಮನ್ವಿತವಾಗಿ ಸುಕುಮಾರವಾಯಿತು. ಸ್ವರ್ಗಿಯವಾದ ಸುವಾಸನೆಯೊಂದು ಸುತ್ತಲೂ ಹಬ್ಬಿತು. ಅವನ ಅವಶೇಷಗಳ ಮೇಲೆ ಎತ್ತಿದ ಸ್ತೂಪವನ್ನು ಸಂದರ್ಶಿಸಲು ಭಕ್ತರು ಮೂಲೆ ಮೂಲೆಗಳಿಂದ ಬಂದು, ಮಾನಿಸುತ್ತಿದ್ದರು.
* * *
ಕುಕ್ಕುಟಪಾದಗಿರಿಯಲ್ಲಿ ಆರ್ಯ ಮಹಾಶಿಷ್ಯನು ತನ್ನ ಮುಂದಿನ ಗೋಷ್ಠಿಗೆ ಈ ಕತೆಯನ್ನು ನುಡಿದು, ಕಡೆಗೆ “ಭಿಕ್ಷುಗಳೆ! ದೇವಪುತ್ರ ಜಿನಪುತ್ರರು ಇಬ್ಬರೂ ಒಂದೇ ಕಾಲದಲ್ಲಿ ಒಂದೇ ಕೆಲಸವನ್ನು ಮಾಡಿದರೂ, ಒಬ್ಬನ ಗತಿಯು ಇನ್ನೊಬ್ಬನ ಗತಿಗೆ ಮೇರುವಿನ ಅಂತರದಲ್ಲಿ ಹೋಗಿ ನಿಂತಿತು. ಇದಕ್ಕೆ ಕಾರಣವನ್ನು ಸಾವಧಾನವಾಗಿ ಮನದಲ್ಲಿ ತಿರುವಿ. ನುಡಿ ನಡೆಗಳು ಮುಖ್ಯವಹುದು. ಆದರೆ ಮನವನ್ನು ಉಳಿದ ನುಡಿನಡೆಗಳು ನುಡಿನಡೆಗಳೇ ಅಲ್ಲ. ಭಿಕ್ಷುಗಳೇ! ಮೂಲವೆಲ್ಲಕ್ಕು ಮನಸು” ಎಂದನು.
*****









