Home / ಕಥೆ / ಸಣ್ಣ ಕಥೆ / ಕಳೆದ ಮುತ್ತು

ಕಳೆದ ಮುತ್ತು

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂಡ್ರಿಸಿಕೊಂಡು ತನ್ನೆಲ್ಲಾ ಸಂಗತಿಯನ್ನು ತೋಡಿಕೊಳ್ಳುತ್ತಿದ್ದಳು. ಸಿದ್ಧರಾಮನಿಗೆ ಇದರ ಬಗ್ಗೆ ಎಷ್ಟೋ ಸಾರೆ ಹೇಳಿದ್ದೂ ಉಂಟು. ಆದರೇನು? ಅವಳ ತಾಯಿಯೊಬ್ಬಾಕೆ ಇದ್ದಾಳಲ್ಲ! ನಿಂಬೆಮ್ಮ!! ಅವಳ ಕೈಯ್ಯಲ್ಲಿ ಗೊಂಬೆ ಈತ. ಅವಳ ಒಂದೂ ಮಾತು ಮೀರುವಂತಿಲ್ಲ.

ಒಂದು ಪ್ರಸಂಗ ನೋಡಿರಿ:- ಸುಮಾರು ಒಂಬತ್ತು ಗಂಟೆ ರಾತ್ರಿಯಾಗಿರಬಹುದು. ಒಂದು ಕೋಣೆಯಲ್ಲಿ ರೋಗಗ್ರಸ್ತಳಾದ ಆ ಹೆಣ್ಣು ಮಗಳು ಮಲಗಿದ್ದಾಳೆ. ಅವಳ ಸ್ಥಿತಿ ನಿರಾಶಾಜನಕವೆಂದು ಕಂಡರೂ ಹತ್ತಿರದಲ್ಲಿ ಕುಳಿತು ಅವಳ ಗತಿಯನ್ನು ವಿಚಾರಿಸಿ ಸಂತೈಸುವವರಾರೂ ಇಲ್ಲ. ಅವಳ ನರಳುವ ಧ್ವನಿಯೊಂದಿಗೆ, ಎಳೆಯುವ ಉಸಿರೊಂದಿಗೆ ಅವಳ ಬೇನೆಯ ತಾಪದೊಡನೆ ಹೃದಯದ ಸಂತಾಪವೂ ಒಡೆದು ಕಾಣುತ್ತಿತ್ತು. ಉರುಟಾದ ಆಕೆಯ ಹಾಸಿಗೆಯ ಮುಳ್ಳುವೇದನೆಯು ಒಳಗಿನ ತಾಪಕ್ಕೆ ಪೂರಕವೇ ಆಗಿತ್ತೆನ್ನಬಹುದು. ಸಾಮಾನುಗಳಿಂದ ತುಂಬಿದ ಆ ಸಣ್ಣದಾದ ಕೋಣೆಯಲ್ಲಿ ಒಂದು ದೀವಿಗೆಯು ಮಾತ್ರ ಹತ್ತಿರದಲ್ಲಿ ಕುಳಿತು ಯಾವ ಭವಿಷ್ಯವನ್ನು ಹೇಳಲು ಧ್ಯಾನಮಾಡುತ್ತಿತ್ತೊ ಯಾರಿಗೆ ಗೊತ್ತು? ತನ್ನ ಕುರುಡಾದ ಕಣ್ಣುಗಳನ್ನು ಒಮ್ಮೊಮ್ಮೆ ಮುಚ್ಚುತ್ತಲೂ ತೆರೆಯುತ್ತಲೂ ಯಾರನ್ನು ಕೋಪಿಸಿಯೋ ಏನೋ ಕಪ್ಪಾದ ಹೊಗೆಯನ್ನು ಒಂದೇ ಸಮನೇ ಕಾರುತ್ತಾ ನಿಂತಿತ್ತು.

ಆಕೆಯ ವಯಸ್ಸೇನು ಮುಪ್ಪೆನುವಿರಾ? ಇಲ್ಲ. ತುಂಬಾ ಪ್ರಾಯ. ಹದಿನೆಂಟು ವರುಷವೆಂದರೆ ಬಹಳವೆನ್ನಿರಿ. ವಯಸ್ಸಿಗೆ ತಕ್ಕಂತೆ ಚೆಲುವೆಯೂ ಹೌದು. ಆಕೆಯ ಬಣ್ಣ ಅಷ್ಟೇನೂ ಬಿಳುಪವಲ್ಲ, ಸ್ವಲ್ಪ ನಸುಗೆಂಪು; ನೀಳವಾದ ಮೂಗು; ತುಂಬಿದ ಗಲ್ಲ; ಅದಕ್ಕೆ ತಕ್ಕ ಹಣೆ. ಆ ಹಣೆಯಮೇಲೆ ಹರಿದಾಡುವ ಮುಂಗುರುಳು. ಹೊಳೆಯುವ ಅಗಲವಾದ ಕಣ್ಣುಗಳು. ಒಟ್ಟಿನ ಮೇಲೆ ಅವಳ ಮುಖ ಒಳ್ಳೆ ಲಸಲಸ! ಇಂಥ ಮುಖವುಳ್ಳ ಮುದ್ದಿನ ಗೌರಿಯನ್ನು ಅವಳ ಪ್ರೀತಿಯವರಾರಾದರೂ ಈಗ ನೋಡಿದರೆ ನಿಶ್ಚಯವಾಗಿಯೂ ಎದೆಯೊಡಕೊಳ್ಳದೆ ಇರಲಾರರು. ಬೇನೆಯ ಬೆಂಕಿ ಮತ್ತು ಹೃದಯದ ಕಿಚ್ಚುಗಳಲ್ಲಿ ಕಲ್ಲುಗಳೂ ಕೂಡ ಬೆಂದು ಹೋಗುತ್ತಿರುವಲ್ಲಿ ಇಂಥ ಕೋಮಲೆಯಾದ ಒಬ್ಬ ಅನಾಥ ಬಾಲೆಯು ಸುಟ್ಟು ಸುಣ್ಣಾಗಿ, ಬಾಡಿ ಬೆಂದಿರುವುದರಲ್ಲಿ ಏನು ಆಶ್ಚರ್‍ಯವಿದೆ?

ಅರ್‍ಧ ಮುಚ್ಚಿಕೊಂಡ ದೊಡ್ಡದಾದ ಕಣ್ಣುಗಳನ್ನು ಭಾರವಾಗಿ ಹೊತ್ತುಕೊಂಡು ಮೇಲೆ ನೋಡುತ್ತಿದ್ದಾಳೆ. ಒಮ್ಮೊಮ್ಮೆ ಕಣ್ಣನ್ನು ತುಂಬಾ ಅರಳಿಸಿ, ಸುತ್ತೆಲ್ಲ ನೋಡಿ, ದೊಡ್ಡದೊಂದು ಉಸಿರನ್ನು ಹಾಕಿ ಮಗ್ಗುಲಾಗಿ ಹೊರಳುವಳು. ತಾಪವು ಹೆಚ್ಚಿದಾಗ ಮತ್ತೆ ಹೊರಳಿ “ಅಯ್ಯೋ ನೀರು! ಅತ್ತೆಯವರೇ ನೀರು!!” ಎಂದು ಒದರುವಳು. ಹೀಗೆ ನಾಲ್ಕಾರು ಸಾರೆ ಹಲುಬಿದರೂ ಮರುದನಿ ಬಾರದಿರಲು ಮತ್ತು ಒಮ್ಮೆ ಹೊರಳಿ “ಅಯ್ಯೋ ಶಿವನೆ! ಎಂಥಾ ವೇಳೆ ತಂಬ” ಎಂದೆಂದು ಉಸುರುಗರೆಯುವಳು. ಕಣ್ಣೀರಿಡುವಳು.

ಒಮ್ಮೊಮ್ಮೆ, ಒಮ್ಮೆಲೆ ಹೊರಗೆ ಗದ್ದರಣೆ ಸುರುವಾದಂತಾಗುವುದು. ಪಾಪ! ಹಾಸಿಗೆಯಲ್ಲಿ ಹೊರಳಾಡುವ ಗಂಗಮ್ಮ ತನ್ನ ಮೇಲೆಲ್ಲಾದರೂ ಸಿಡಿಲು ಕಡಿದು ಬೀಳುವುದೋ ಎಂದು ಗಾಬರಿಯಾಗುವಳು. ಅದು ನಿಜವಾಗಿಯೂ ಮುಗಿಲಲ್ಲಿ ಗದ್ದರಿಸುವ ಗದ್ದರಣೆಯಲ್ಲ. ಅವಳಲ್ಲಿ ಲಿಂಬೆಮ್ಮನ ಬಾಯಿ ಗದ್ದರಣೆಯೆಂಬುದು ಅವಳು ತನ್ನ ಬೇನೆಯ ವೇದನೆಯಲ್ಲಿ ಮರೆಯುತ್ತಿದ್ದಳು. ಈಗ ನಾಲ್ಕಾರುಸಾರೆ “ನೀರು! ನೀರು!!” ಎಂದು ಗಂಗಮ್ಮ ಹಲುಬಿ ದಾಗ ಒಮ್ಮೆಲೆ ಗುಡುಗು ಗುಡುಗುಡಿಸಹತ್ತಿತು. “ನೀಯಾಕ ಸತ್ತಿಯೇ ಸೋಗಲಾಡಿ! ನೀಯಾಕ ಸತ್ತಿ!! ನೀರ್‍ಕುಡಿದು ಇನ್ನೂ ಜೀಂವಾ ಹಿಡಿಬೇಕಂತಿ?” ಎಂದು ಅನ್ನುತ್ತ ಲಿಂಬೆಮ್ಮ ರೌದ್ರಾವತಾರವನ್ನು ತಾಳಿ ಎರಡು ಸಿಂಪಿ ನೀರುಳ್ಳ ಒಂದು ದೊಡ್ಡ ತಂಬಿಗೆಯನ್ನು ತಂದು ಗಂಗಮ್ಮನ ಕೈಗೆ ನಿಲುಕದ ಸ್ಥಳದಲ್ಲಿ ದಪ್ಪನೆ ಇಕ್ಕರಿಸಿ ಹೊರಟುಹೋದಳು. ನಿಜವಾಗಿಯೂ ಸಿಡಿಲು ಬಡೆದಿದ್ದರೆ ಗಂಗಮ್ಮನಿಗೆ ವಾಸಿಯಾಗುತ್ತಿತ್ತೋ ಏನೋ! ಇವಳ ಮಾತು ಸಿಡಿಲಿಗಿಂತ ಹೆಚ್ಚು ವೇದನೆ ಮಾಡದೆ ಇರಲಿಲ್ಲ. “ಸಿಡಿಲು ಬೀಳುತ್ತವೆ; ಆದರೆ ಪ್ರಾಣತೆಗೆದುಕೊಂಡು ಹೋಗುವ ಸಿಡಲು ಬೀಳಲೊಲ್ಲವಲ್ಲ! ಜೀವನ್ನಿಟ್ಟು ಗೋಳಿಡಿಸುವ ಸಿಡಿಲು ಬೀಳುತ್ತಿವೆಯಲ್ಲಾ!!” ಎಂದು ಕಂಬನಿಗೆರೆವಳು. “ಸಿಡಿಲು ಬಿದ್ದರೂ ಬೀಳಲಿ ಈ ನನ್ನ ತಪ್ತ ಹೃದಯವನ್ನು ಸಂತವಿಸಲು ತಂಪು ನೀರಾದರೂ ಸಿಕ್ಕಿತಲ್ಲಾ!” ಎಂದು ಅಂದುಕೊಂಡು ನೀರಿಗಾಗಿ ಕೈಚಾಚುವಷ್ಟರಲ್ಲಿ ಲಿಂಬೆಮ್ಮನ ಸ್ವಾರಿಯು ಯಾವ ಕೆಲಸಕ್ಕೋ ಏನೋ ಬೈಗಳ ಮಳೆಯನ್ನು ಸುರಿಸುತ್ತಾ ಮತ್ತೆ ಒಳಗೆ ಬಂದಿತು. ಆಗ ಗಂಗಮ್ಮ “ಅತ್ತೆಯವರೇ ನನ್ನ ಬೇನೆನೆಟ್ಟಗಾದಮೇಲೆ ನೀವೆಷ್ಟು ಕಾಡ ಬೇಕಾಗಿದೆಯೋ ಕಾಡಿರಿ. ನಾನೀಗ ಬೇನೆಯವಳು, ನಿನ್ನ ಮಗಳ ಸರಿ ನಾನು. ನನ್ನನ್ನು ಕಾಪಾಡಿರಿ. ನಾನು ಮಾಡಿದ ತಪ್ಪಾದರೂ ಏನು ನನಗಿಷ್ಟು ಕಾಡಲಿಕ್ಕೆ? ಇಗೋ ನೋಡಿರಿ, ನಿಮ್ಮ ಕಾಲು ಬೀಳುತ್ತೇನೆ. ಪರದೇಶಿ ಮಗಳು ನಾನು!” ಎಂದು ಮಲಗಿದಲ್ಲಿಯೇ ಕಾಲುಬೀಳುವಳು. “ಅವ್ವವ್ವಾ! ನಿನಸೋಗೆಲ್ಲಾ ನಾ ಬಲ್ಲೆ! ಕಾಲ್ಬೀಳ್ತಾಳ ಕಾಲ, ಕಾಲ್ಬಿದ್ರ-ಅತ್ರ-ನಾ ಬಿಡಿತೀನಂತ ತಿಳದೀದೇನು? ನಿನ್ನ ಹೆಣಾ ಗ್ವಾಡೀಗಿ ಕೂಡಿಸ್ತೀನಿ. ನನ್ನ ಮಗಳಾಕ್ತಾಳಂತ ಮಗಳು! ಹೊಲ್ಯಾರ ಮಗಳಾಗು, ಹೊಲ್ಯಾರ ಮಗಳು! ನಿಮ್ಮವ್ವಾ, ನಮ್ಮ ಕಾಕಾನ ಮಗಳ ಮಗಳೀಗಿ ಕಾಡ್ಯಾಳ ಹೊಯ್ಮಲ್ಲಿ! ನಿನಗಿನ್ನಾ ಭೂತಾಗಿ ಬೆನ್ನ ಹತೀನಿ, ಭೂತಾಗಿ! ಏನಂತ ತಿಳದಿ?” ಎಂದು ಲಿಂಬೆಮ್ಮಾ ಗುಡುಗು ಹಾಕುತ್ತ ಹೊರಗೆ ಹೋಗುವಳು. ಆಗ ಗಂಗಮ್ಮನು “ನಮ್ಮ ತಾಯಿ, ನಿಮ್ಮ ಕಕ್ಕನ ಮಗಳ ಮಗಳೀಗಿ ಕಾಡಿದರೆ ನನ್ನ ತಪ್ಪೆ? ದೇವರೇ ಏನು ನ್ಯಾಯವಿದು?” ಎಂದು ಅಳುವಳು. ನಿತ್ರಾಣವಾದ ಕೈಗಳನ್ನು ಚಾಚಿ ಹಬ್ಬು ಹಾಕಿ ತಂಬಿಗೆಯನ್ನು ತೆಗೆದುಕೊಳ್ಳುವಾಗ ಅದು ಜಾರಿಬಿದ್ದು ಇದ್ದ ಬಿದ್ದ ಒಂದೆರಡು ಸಿಂಪಿ ನೀರೂ ಚೆಲ್ಲಿ ಹೋಯಿತು. ಮತ್ತೆ “ಅಯ್ಯೋ” ಅಂದಳು. “ಇನ್ನಾರಿಗೆ ಕೇಳುವುದು?” ಅಂದಳು. ಈ ನೀರನ್ನು ಸಂಗ್ರಹಿಸಲು ಏಸು ಸಿಡಲಿನ ಏಟನ್ನು ತಡೆಯಬೇಕಾಯಿತೊ, ಮತ್ತೆ ಬೇಡಿದರೆ ಇನ್ನೇಸು ಸಿಡಿಲು ಬಡಿಸಿಕೊಳ್ಳಬೇಕಾಗುವುದೋ! ದೇವರೆ! ಪ್ರಾಣವನ್ನಾದರೂ ಬೇಗನೆ ಎಳೆದೊಯ್ಯಬಾರದೆ? ಎಂದು ಗೋಳಾಡಿದಳು.

ಇತ್ತ ಸಿದ್ಧರಾಮನಾದರೂ ಏನು ಕೆಟ್ಟವನೆ? ಆತನೂ ಒಳ್ಳೇ ಯುವಕ. ಅದರಂತೆ ಚಲುವನೂ ಹೌದು. ವಿದ್ಯೆ ಬುದ್ಧಿಗಳೂ ಉಂಟು. ತಕ್ಕಷ್ಟು ಶರೀರ ಸಂಪತ್ತನ್ನೂ ಸಂಪಾದಿಸಿದ್ದಾನೆ. ಗಂಗಮ್ಮನೊಡನೆ ಆತನ ಪ್ರೀತಿ ಮೊದಲಿನಿಂದಲೂ ಹೆಚ್ಚು. ಆದರೆ ಅದು ಗೌಪ್ಯ, ಪರದೇಶಿಯಾದ ಗಂಗಮ್ಮ ಸಿದ್ಧರಾಮನ ಸೋದರತ್ತೆಯ ಮಗಳು. ತಾಯಿ ಸತ್ತೊಡನೆ ಆಕೆಯನ್ನು ಇಲ್ಲೇ ಕರೆದು ಕೊಂಡು ಬಂದಳು. ಸಿದ್ಧರಾಮನ ಅಜ್ಜಿ-ಗಂಗಮ್ಮನ ತಾಯಿ “ಸಿದ್ಧರಾಮನಿಗೆ ಗಂಗೆಯನ್ನು ಕೊಡಿರಿ” ಎಂದು ಸಾಯುವಾಗ ಹೇಳಿ ಸತ್ತಿದ್ದಳಂತೆ. ಮದುವೆಯಾಗದಿದ್ದರೂ “ಗಂಗೆ-ಸಿದ್ಧರಾಮರು ಗಂಡ-ಹೆಂಡರು” ಎಂದು ಅನ್ನುತ್ತಿದ್ದರು ಅವರ ಮನೆಯವರು. ತಿಳುವಳಿಕೆ ಬಂದ ಮೇಲೆ ಅದು ಆ ಭಾವೀ ದಂಪತಿಗಳಿಗೆ ನಾಚಿಕೆಯನ್ನುಂಟು ಮಾಡದೆ ಹೇಗೆ ಬಿಟ್ಟಿತು? ಆದ್ದರಿಂದ ಬಹಿರಂಗವಾಗಿ ಮಾತಾಡುವ ಸಾಹಸವನ್ನು ಅವರೆಂದೂ ಮಾಡಲಿಲ್ಲವೆಂದೇ ಹೇಳಬೇಕು. ಒಂದೆರಡು ಸಾರೆ ಗಂಗಮ್ಮನೇ ಗಟ್ಟಿ ಜೀವ ಮಾಡಿ, ಯಾರು ಇಲ್ಲದಾಗ ತನ್ನ ಬಗೆಯ ಮಾತನ್ನು ಬಿಚ್ಚಿ ಹೇಳಿಕೊಂಡದ್ದುಂಟಂತೆ. ಆಯ್ತು ಮುಂದೆ ಅಜ್ಜಿ ಸತ್ತ ಮೇಲೆ ಲಿಂಬೆಮ್ಮನ ಕೈಯಲ್ಲಿ ಅಧಿಕಾರ ಬಂತು. ಅದಕ್ಕೆ ಸರಿಯಾಗಿ ಗಂಗಮ್ಮನ ದುರ್‍ದೈವದ ಕಾಲವೂ ಬಂತೆನ್ನ ಬೇಕು. ಲಿಂಬೆಮ್ಮ, ಗಂಗಮ್ಮನನ್ನು ಮನವಾರೆ ಕಾಡಹತ್ತಿದಳು. ಗಂಗಮ್ಮ ಮೈನೆರದು ಆರು ವರುಷಗಳಾಗಿದ್ದರೂ ಹೃದಯದ ಮಾತಂತೂಬಿಡಲಿ, ಸಿದ್ದರಾಮನೊಡನೆ ಸುಮ್ಮನೆ ಮಾತಾಡುವ ಪ್ರಸಂಗ ಬಂದಿದೆಯೋ ಇಲ್ಲವೋ ಹೇಳಲಾರೆ. ಹಗಲು ಹೊತ್ತಂತೂ ಅವರ ಭೆಟ್ಟಿಯ ಸಂಭವವೇ ಇದ್ದಿಲ್ಲ. ರಾತ್ರಿ, ಅವರು ಏಕಾಂತದಲ್ಲಿದ್ದಾಗ್ಗೆ ನಾಲ್ಕು ನಾಲ್ಕು ತಾಸು, ಲಿಂಬೆಮ್ಮ ಬಾಗಿಲಲ್ಲಿ ಸೂರು (ಸುಳಿವು) ಹಿಡಿದು ನಿಲ್ಲುವಳು. ಅವರು ಏನೋ ಮಾತಾಡುತ್ತಿದ್ದಾರೆ ಎಂದು ಅವಳಿಗೆ ಅನಿಸಿದರೆ ಆಗಲೇ ಗದರಿಸುವಳು. “ಯಾಕೆ ಎಲಗೇ? ಏನು ಮಾತಾಡುತ್ತ ಇದ್ದಿಯೇ?” ಎನ್ನುವಳು. ಅಷ್ಟರಿಂದಲೇ ಗಂಗಮ್ಮನ ಎದೆಯೊಡದು ನೀರಾಗುವುದು. ಬಾಯಿಗೆ ಮಾತೂ ಕೂಡ ಬರುತ್ತಿರಲಿಲ್ಲ! ಸಿದ್ಧರಾಮನದೂ ಅದೇಗತಿ! ಹೀಗಿರುವುದರಿಂದ ಬಳಲುವ ತನ್ನ ಹೆಂಡತಿಯ ಶುಶ್ರೂಷೆ ಮಾಡಲು ಆತನು ಕಳ್ಳನಾಗಿ ಕುಳಿತನು.

ಆಯ್ತು ಈಗ ನೀರಿಲ್ಲದೆ ಕಸವಿಸಿಯಾಗುತ್ತ ಗಂಗಮ್ಮ ಬಿದ್ದಿದ್ದಾಳೆ. “ಸಾಯುವ ಕಾಲಕ್ಕೆ ಗಂಡನ ಮೋರೆಯನ್ನಾದರೂ ನೋಡಲಾರನೇ ನಾನು! ಅವರ ಕೂಡ ಒಂದೆರಡು ಮಾತನ್ನೂ ಆಡಲಾರೆನೆ!! ಇಷ್ಟು ನನ್ನ ದೈವವು ಕೆಟ್ಟದ್ದೆ??” ಎಂದೆಂದು ಶೋಕಿಸುವಳು. ಆತನನ್ನು ನೆನಿಸಿ ನೆನಿಸಿ ಅಳುವಳು. ಆತನ ರೂಪನ್ನು ತನ್ನ ಕಣ್ಣಿದಿರಿಗೆ ತರುವಳು. “ದೇವರೇ! ನಮ್ಮಯವರಿಗೆ ಬುದ್ಧಿಯನ್ನೇಕೆ ಕೊಡಬಾರದು? ಮನಸ್ಸನ್ನೇಕೆ ತಿರುಗಿಸಬಾರದು?? ನನ್ನನ್ನವರು ಪ್ರೀತಿಸುವಂತೇಕೆ ಮಾಡಬಾರದು???” ಎಂದು ದೇವರನ್ನು ಬೇಡಿಕೊಳ್ಳುವಳು. ಮತ್ತೆ ಈ ನನ್ನ ಪ್ರಾರ್ಥನೆಯು ದೇವರಿಗೆ ಕೇಳಿಸುವುದೇ? ನನ್ನ ಪ್ರಾಣಾಂತ್ಯದ ಕಾಲಕ್ಕಾದರೂ ಬಂದು ನನ್ನನವರು ಭೆಟ್ಟಿಯಾಗುವಂತೆ ಆತನು ಮಾಡುವನೆ?? ದೇವಾ! ಹಾಗೆ ಮಾಡು. ಇದೊಂದು ನನ್ನ ಕೆಲಸವನ್ನು ಮಾಡು. ಕಡೆಗೊಮ್ಮೆ ಅವರನ್ನು ಕಣ್ಣು ತುಂಬಾ ನೋಡಿ ನನ್ನ ಪ್ರಾಣ ಬಿಡುವೆನು. ಎಂದೆನ್ನುವಷ್ಟರಲ್ಲಿಯೇ ಬಾಗಿಲು ಧಡಕ್ಕೆಂದಿತು. ಒಮ್ಮೆಲೆ ಗಂಗಮ್ಮ ಬೆಚ್ಚಿ ಬಿದ್ದಳು! ಅತ್ತೆಯವರು ಮತ್ತೆ ಬಂದರೋ ಏನೋ ಎಂದು ಕೊಂಡಳು. ಅಲ್ಲ ಯಾರೋ ಗಂಡಸರು! ಆಕೆಯ ಆರಾಧ್ಯದೇವನಾದ ಸಿದ್ಧರಾಮನು! ಆಗ ಆಕೆಯ ಹಿಗ್ಗು ಹೇಳಲಾಗಲ್ಲ. ಅವಳ ದುಃಖವೆಲ್ಲಾ ಆಗ ಯಾವ ಪಾತಾಳಕ್ಕಡಗಿ ಹೋಯಿತೋ ಯಾರು ಬಲ್ಲರು? ಇಷ್ಟು ಬಾಡಿ ಬೆಂದಿದ್ದರೂ ಕೂಡ ಗಂಗಮ್ಮನ ಕಮಲ ಮುಖ ಇವರನ್ನು ನೋಡಿ ಹೀಗೆ ಸ್ವಲ್ಪ ಅರಳಿತು. “ಬಂದಿರಾ? ಕಡೆಗೊಮ್ಮೆ ಈ ಪಾಪಿಗೆ ನಿಮ್ಮ ದರ್‍ಶನ ಕೊಟ್ಟು ಪುನೀತಳನ್ನಾಗಿ ಮಾಡಿದಿರಾ?? ಹೃದಯವನ್ನು ಶಾಂತಗೊಳಿಸಿದಿರಾ???” ಎಂದೆನ್ನುತ್ತ ಕಣ್ಣೀರನ್ನು ಸುರಿಸಿದಳು. “ಯಾಕೆ ಗಂಗಾ! ಯಾಕೆ ಅಳುತ್ತಿ? ನಿನ್ನನ್ನು ನಾನು ಪ್ರೀತಿ ಮಾಡುವುದಿಲ್ಲವೆಂದು ತಿಳಿದಿರುವಿಯಾ? ನಿಜವಾಗಿಯೂ ನಿನ್ನ ಮೇಲೆ ನನ್ನ ಪ್ರೀತಿಯಿದೆ. ಆದರೆ…..
ಬೇರೆ ಏನೂ ಭಾವಿಸಬೇಡ ನೋಡು ಗಂಗಾ! ಎಂದು ಸಿದ್ಧರಾಮನು ಅವಳ ಕೈಯನ್ನು ತನ್ನ ಕೈಯಲ್ಲಿರಿಸಿಕೊಂಡು ಅನ್ನುವನು.- “ನಾನೇನೂ ನಿಮ್ಮ ಮೇಲೆ ಮುನಿದಿಲ್ಲ. ಭಾವಿಸಿಲ್ಲ. ನಾವಿಬ್ಬರು ಗಂಡಹೆಂಡರು ಪ್ರೇಮದಿಂದ ಮಾತಾಡುವುದು, ಕಲೆಯುವುದು, ನಮ್ಮ ದೈವದಲ್ಲಿಯೇ ದೇವರು ಬರೆದಿಲ್ಲ. ಬಿಡಲಿ. ಗುಪ್ತವಾಗಿಯೇ ಇರಲೊಲ್ಲದೇಕೆ, ನಿಮ್ಮ ಪ್ರೇಮ ನನ್ನ ಮೇಲೆ ಇದ್ದರೆ ಸಾಕು. ಆದರೆ ನಾನು ಈಗ ಜಡ್ಡಿನವಳು. ಸಾಯುವ ಸ್ಥಿತಿಯಲ್ಲಿದ್ದೇನೆ. ಯಾರ ಮೋರೆ ನೋಡಿ ಹೊತ್ತುಗಳೆಯಲಿ? ನನಗಾರು ದಿಕ್ಕು?? ನೀರಡಿಸಿದಾಗ ಒಂದು ಗುಟುಕು ನೀರನ್ನಾದರೂ ಯಾರು ಕೊಡುವರು? ಅತ್ತೆಯವರು ನಿಮಗೆ ಮತ್ತೊಂದು ಒಳ್ಳೆಯ ಹೆಣ್ಣು ತಂದು ಲಗ್ನ ಮಾಡುತ್ತೇನೆನ್ನುವರು. ನಿಮಗೆ ಇನ್ನೊಂದು ಲಗ್ನ ಮಾಡಲಿ ನಾನೇನೂ ಬೇಡವೆನ್ನುವುದಿಲ್ಲ. ನನಗೆ ಸಂತೋಷವೇ ಇದೆ. ನಿಮಗೆ ತಕ್ಕವಳು ನಾನೊಬ್ಬಳೇ ಹೆಂಡತಿ ಎಂದು ನಾನಂದು ಕೊಳ್ಳುವುದಿಲ್ಲ. ನಿಮಗನುರೂಪವಾದ ಹೆಣ್ಣು ಈ ಮನೆಗೆ ಬಂದು ನಿಮ್ಮ ಕೂಡ ಸಂತೋಷದಿಂದ ನಕ್ಕು ನಲಿದು ಬಾಳ್ವೆ ಮಾಡಿದರೆ ನನಗೆಷ್ಟೋ ಹಿಗ್ಗು. ‘ನನ್ನಂಥ ದುರ್‍ದೈವಿಯನ್ನು ಕೈ ಹಿಡಿದು ನೀವು ಸುಖವನ್ನು ಅನುಭವಿಸಲಿಲ್ಲವಲ್ಲಾ!’ ಎಂದು ನನಗೊಂದು ದುಃಖವಿದೆ. ನೀವು ಮದುವೆ ಮಾಡಿಕೊಂಡಿದ್ದಾದರೆ ಅದೊಂದು ನನ್ನ ಹೊರೆ ಇಳಿದಂತಾಗುತ್ತದೆ. ಆದರೆ ನಾನು ಸಾಯುವವರೆಗೆ ನನಗೆ ನಿಮ್ಮ ಮುಖವನ್ನು ತೋರಿಸುತ್ತಿರಿ. ಅತ್ತೆಯವರು ನೀರು ಹಾಕದೆ ಬಿಡಲಿ, ಅನ್ನ ಹಾಕದೆ ಬಿಡಲಿ, ನಿಮ್ಮ ಮುಖವನ್ನು ನೋಡಿದರೆ ಅನ್ನ ನೀರುಗಳಿಗಿಂತ ನನಗೆ ಹೆಚ್ಚು ತೃಪ್ತಿಯಾಗುತ್ತದೆ. ನನಗೀ ಜಡ್ಡು ಸುರುವಾದಾಗ ನೀವು ಮೊದಮೊದಲು, ಊಟಕ್ಕೆ ಬಂದ ಹೊತ್ತಿನಲ್ಲಿ ಇದೇ ಕೋಣೆಯಲ್ಲಿ ಅಂಗಿ ಕೋಟುಗಳನ್ನು ತೆಗೆದಿಟ್ಟು ಹೋಗುತ್ತಿದ್ದಿರಿ. ಆಗ ನಿಮ್ಮ ಮುಖ ನೋಡುತ್ತಿದ್ದೆ. ಆ ಆನಂದದಲ್ಲಿ ನನ್ನ ಸರ್‍ವ ದುಃಖಗಳನ್ನೂ ಸಹಿಸಿಕೊಂಡು ಇರುತ್ತಿದ್ದೆ. ಯಾವ ಕಾರಣದಿಂದೋ ಏನೋ ಮುಂದೆ ಇಲ್ಲಿ ಬರುವುದನ್ನು ನೀವು ನಿಲ್ಲಿಸಿದಿರಿ. ಆಗಿನಿಂದ ನನಗಾಗುವ ತಾಪ ಎಷ್ಟೆಂದು ಹೇಳಲಿ?…..” ಎಂದು ಬಿಕ್ಕಿ ಬಿಕ್ಕಿ ಅಳುತ್ತ ಇನ್ನೂ ಏನೇನೋ ಹೇಳಿದಳು.

ಸುದೈವದಿಂದ ಲಿಂಬೆಮ್ಮನಿಗೆ ಆಗ ನಿದ್ರೆಹತ್ತಿತ್ತು! ಈದಿನ ಸಿದ್ಧರಾಮನು ತಾಯಿಯ ಕಟ್ಟನ್ನು ಹರಿದು ಹೆಂಡತಿಯೊಡನೆ ಮಾತಾಡ ಬಂದಿದ್ದನು. ಆದ್ದರಿಂದ ಅವರು ಅಂಜದೆ ಮನದ ಮಾತನ್ನೆಲ್ಲ ಬಿಚ್ಚಿ ಬಿಚ್ಚಿ ಆಡಿಕೊಂಡರು. ನಿಜವಾಗಿಯೂ ಈರಾತ್ರಿ ಗಂಗಮ್ಮನಿಗೆ ದೇವಲೋಕದ ಹಬ್ಬವಾದಂತಾಗಿರಬೇಕು. ಆಯ್ತು, ಅದೇ ಹಿಗ್ಗಿನಲ್ಲಿಯೇ ಇಹಲೋಕದ ಯಾತ್ರೆಯನ್ನು ಮುಗಿಸಿ ಅವಳು ಹೊರಟುಹೋದಳು.

ಗಂಗಮ್ಮನ ಸಾವಿನ ದಾರಿಯನ್ನೇ ಕಾಯುತ್ತಿದ್ದ ಲಿಂಬೆಮ್ಮ ಒಡನೆಯೇ ಒಂದು ಹೆಣ್ಣು ತಂದು ಮಗನ ಲಗ್ನ ಮಾಡಿದಳು. ಈಗ ಬಂದಾಕೆ ಬಲು ಮಾಟಗಾರ್‍ತಿ! ಗಂಡನನ್ನೂ ಅತ್ತೆಯನ್ನೂ ಕರಡಿ ಕುಣಿಸಿದ ಹಾಗೆ ಕುಣಿಸುತ್ತಲಿದ್ದಾಳೆ! ಅದಕ್ಕೀಗ ಇವರಿಗೆ ಬೇನೆಯಾಗಿದೆ. ಆಗಲಿ ಮಾಡಿದ ಆ ಪಾಪಕ್ಕೆ ಪಶ್ಚಾತ್ತಾಪ ಪಡಬೇಕಲ್ಲವೆ? ಮೊನ್ನೆ ನನ್ನದೊಂದು ಕೆಲಸಕ್ಕಾಗಿ ಸಿದ್ಧರಾಮನ ಮನೆಗೆ ಹೋಗಿದ್ದೆ. ಆತನ ಕೊಠಡಿಯ ಕದ ಮುಂದಕ್ಕೆ ಮಾಡಿತ್ತು. ಮೊದಲು ಒಂದೆರಡು ಸಾರೆ ಆತನಿಗೆ ಒದರಿದೆ. ಓ ದೊರೆಯಲೇ ಇಲ್ಲ. ಬಾಗಿಲ ತಟ್ಟಿದೆ. ಒಳಗೆ ನೋಡಲು ಆತನು ಒಂದು ಖುರ್ಚಿಯ ಮೇಲೆ ಕುಳಿತು, ಬಲಗೈಯನ್ನು ಮೇಜಿನ ಮೇಲೆ ಚಾಚಿ, ತನ್ನ ಗೋಣನ್ನು ಆದರ ಮೇಲೆ ಒರಗಿಸಿ ಬಾಗಿಲ ಕಡೆ ಬೆನ್ನು ಮಾಡಿ ಮಲಗಿ ಕೊಂಡಿದ್ದನು. ಬಿರಬಿರನೆ ಒಳಗೆ ಹೋಗಿ ಆತನ ಬೆನ್ನು ಹಿಂದೆ ನಿಂತೆ. ಹೀಗೆ ಹಬ್ಬು ಹಾಕಿ ನೋಡಿದೆ. ಮುಖ ಬಾಡಿದೆ. ಒಂದೇ ಸಮನೆ ಕಣ್ಣೀರು ಹರಿಯುತ್ತಲಿದೆ. ನಡನಡುವೆ ಸಣ್ಣ ಉಸಿರುಗಳನ್ನು ಹಾಕುತ್ತಲಿದ್ದನು.

ಆಗ ನನಗೆ ಥಟ್ಟನೆ ಹೊಳೆದು ಬಿಟ್ಟಿತು. ಅಯ್ಯೋ ಪಾಪ! ಸತ್ತು ಹೋದ ಹೆಂಡತಿ ಗಂಗಮ್ಮನ ನೆನಪು ಆಗಿರಬೇಕು. ಅಳುತ್ತಲಿದ್ದಾನೆ.” ಎಂದೆ. ಅದು ನಿಜವೂ ಇತ್ತು. ಯಾಕೆಂದರೆ ಆತನ ಮೆತ್ತೊಂದು ಕೈಯೆಡೆಗೆ ನನ್ನ ದೃಷ್ಟಿ ಹೋದಾಗ ಅವಳ ತಸಬೀರನ್ನೂ ಕಂಡೆ. ಆದರೇನು? ಸತ್ತ ಮೇಲೆ ಎಷ್ಟು ಅತ್ತರೇನು? ಇದ್ದಾಗ ಅವಳನ್ನು ಸಂತೈಸಲಿಲ್ಲ. ಮಾತಾಡಿಸಲೂ ಇಲ್ಲ. ತಾಯಿಯ ಮಾತನ್ನು ಕೇಳಿ ಗೋಳಾಡಿಸಿ ಬಿಟ್ಟನು. ಈಗ ನೆನೆನೆನಸಿಕೊಂಡು ಅತ್ತರೆ ಏನು ಫಲ?

ಆತನ ಹಿಂಬದಿಗೆ ನಾನು ಎಷ್ಟೋ ಹೊತ್ತು ನಿಂತೇ ನಿಂತೆ. ಅಳುತ್ತ ಒರಗಿದ ಸಿದ್ಧರಾಮನು ನನ್ನ ಕಡೆ ನೋಡಲೇ ಇಲ್ಲ. ಕಡೆಗೆ ಆತನನ್ನು ತಟ್ಟಿ “ಸಿದ್ಧರಾಮಾ! ಏಕೆ? ಹೀಗೇಕೆ?” ಎಂದೆ. ಆಗ ಆತನು ಕಣ್ಣೊರಿಸಿಕೊಳ್ಳುತ್ತ ‘ಬಾ! ಕೂಡು ಬಾ!!” ಎಂದು ಒಂದು ಆಸನವನ್ನು ಜಗ್ಗಿದನು. ಇರಲಿ ಬಿಡು ನೀನು ಹೀಗೇಕೆ ಅಳುತ್ತಿರುವೆ?” ಎಂದು ನಾನು ಮತ್ತೆ ಅಂದೆ. “ಇಲ್ಲ. ಏನೂ ಇಲ್ಲ.” ಎಂದು ಎಷ್ಟು ಅಂದರೂ ನಾನು ಜುಲುಮೆ ಮಾಡಿದ್ದರಿಂದ ಮುನ್ನಾ ದಿನ ಕನಸಿನಲ್ಲಿ ಕಂಡ ಗಂಗವ್ವನ ಸಂಗತಿಯನ್ನೂ, ಅವಳು ಆಗ ಹೇಳಿದ ಮಾತುಗಳನ್ನೂ, ಅಲ್ಲಿ ತೋರಿದ ಅವಳ ಪ್ರೇಮವನ್ನೂ ಸಂಪೂರ್‍ಣವಾಗಿ ಹೇಳಿ “ನಾನೆಂಥ ದೊಡ್ಡ ತಪ್ಪು ಮಾಡಿದೆ! ಎಂಥ ಮೂರ್ಖ ನಾನು!! ತಾಯಿಯ ತಿಳಿಗೇಡಿತನದ ಮಾತುಕೇಳಿ ನಿರಪರಾಧಿಯಾದ ಆ ಸರಳ ಸ್ವಭಾವದ ಮುಗ್ದೆಯನ್ನು ಎಷ್ಟು ಗೋಳಾಡಿಸಿದೆನು!!! ಎಷ್ಟು ಹಿಂಸಿಸಿದೆನು!!!! ಪ್ರೇಮಯಾಚನೆ ಮಾಡುತ್ತಿದ್ದ ಆಭಿಕ್ಷುಣಿಗೆ ಬಹಿರಂಗವಾಗಿ ಪ್ರೇಮದ ಒಂದು ತುತ್ತನ್ನೂ ಇಕ್ಕಲಿಲ್ಲವಲ್ಲಾ! ತಾಯಿಯ ಮಾತು ಕೇಳದೆ ಎಲ್ಲಿಯಾದರೂ ಡಾಕ್ಟರರಿಂದ ಔಷಧ ಕೊಡಿಸಿದ್ದರೆ ಆ ನನ್ನ ನೆಚ್ಚಿನ ಸತಿ ಉಳಿಯುತಿದ್ದಳೋ ಏನೋ! ಹಾಗೆ ಮಾಡಿದ್ದೆನಾಗಿದ್ದರೆ ನನ್ನ ಬಾಳುವೆಯು ಎಷ್ಟು ಸುಖಮಯವಾಗುತ್ತಿತ್ತಲ್ಲ! ಕೆಟ್ಟೆ ಕೆಟ್ಟೆ ಸರ್‍ವಥಾ ಕೆಟ್ಟೆ. ಇದರಿಂದುಂಟಾದ ನನ್ನ ಹೃದಯವೇದನೆಯು ಈ ಜನ್ಮದಲ್ಲಿಯೇ ಇಲ್ಲ. ಇನ್ನು ಏನು ಜನ್ಮ ಸಹಿಸಿಕೊಂಡರೂ ನಿವಾರಣೆಯಾಗದು.” ಎಂದು ಹೇಳುತ್ತ ಕಣ್ಣೀರು ಸುರಿಸುವಷ್ಟರಲ್ಲಿಯೇ “ಅಯ್ಯೋ ದೇವರೇ! ಎಂಥ ಸೊಸೆ ಹೋಗಿ ಎಂಥವಳು ಬಂದಳು! ಎಂಥಾ ಪಾಪಿ ನಾನು!! ಅರಗಿಣಿ! ನನ್ನ ಮುದ್ದಿನ ಗೌರಿಯನ್ನು ಕಳೆದುಕೊಂಡೆ!! ಅವಳಿಗೆಷ್ಟು ಗೋಳಿಡಿಸಿದೆ!!! ಅಂಥಾ ಸೊಸೆಯು ಏಳೇಳು ಜನ್ಮ ಪುಣ್ಯ ಮಾಡಿದರೂ ಸಿಗಲಾರಳಯ್ಯೋ! ನಾನೆಂಥಾ ಪಾಪಮಾಡಿದೆ!! ಇವಳೆಂಥಾಕೆ ಬಂದಳು!!!” ಎಂದು ಹಾಡಿ ಹಾಡಿ ಅಳುತ್ತಿರುವಷ್ಟರಲ್ಲಿಯೇ ಏರುಧ್ವನಿಯಲ್ಲಿ ರಭಸದಿಂದ “ಹೌದೆ! ಹೌದು!! ನಿನ್ನ ಕೈಯಾಗ ಊಳಗಾಗಿ, ಬೈಸಗೊಂತಾ ಕೆಲಸಾಮಾಡಲಿಕ್ಕೆ ನಾನೇನು ಗಂಗಮ್ಮ ಅಂತಾ ತಿಳಿದಿದಿಯಾ?” ಎಂದು ತಾಟವನ್ನು ಬಲವಾಗಿ ನೆಲಕ್ಕೆ ಇಕ್ಕರಿಸಿದಳು. ಆಗ ಕೆಳಗೆ ಮೋರೆ ಮಾಡಿ ಹೆಬ್ಬೆರಳಿನಿಂದ ನೆಲವನ್ನು ಬರೆಯುತ್ತಿದ್ದ ಸಿದ್ಧರಾಮನು ತಾಯಿಗಾದ ಈ ಮಂಗಳಾರತಿಯನ್ನು ಕಂಡು ಒಳಗೊಳಗೇ ನಕ್ಕನು!
*****

Tagged:

Leave a Reply

Your email address will not be published. Required fields are marked *

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...