ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು. ಸದಾ ಚುರುಕಿಂದ ಓಡಾಡಿಕೊಂಡು, ಎಂತಹ ತೆಂಗಿನ ಮರವನ್ನಾದರೂ ಸರಸರನೆ ಏರಿ ಕಾಯಿ ಕೀಳಬಲ್ಲ ಕೌಶಲವಂತ ದೋಂಟಿ ತ್ಯಾಂಪಣ್ಣನು ಮೂಡು ಕೆಡಿಸಿಕೊಂಡನೆಂದರೆ ಅಂದು ಯಾವುದೇ ಕೆಲಸ ಮಾಡಲಾರ. ಸಂಜೆ ಸಮಯಕ್ಕೆ ಸರಿಯಾಗಿ ಕೂಲಿಗೆ ಕೈಯೊಡ್ಡದೆ ಬಿಡಲಾರ. ಕೃಷ್ಣ ಮದ್ಲೆಗಾರರು ಚಿಂತಾಕ್ರಾಂತರಾಗಿ ಯೋಚಿಸತೊಡಗಿದರು.

ಕಪಿಲಳ್ಳಿಯ ಕೃಷ್ಣ ಮದ್ಲೆಗಾರರು ಹನ್ನೆರಡೆಕರೆ ಜಮೀನಿನ ಒಡೆಯರು. ಎಷ್ಟೋ ವರ್ಷಗಳ ಹಿಂದೆ ಒಂದೆರಡು ಯಕ್ಷಗಾನ ಬಯಲಾಟದ ಮೇಳಗಳಲ್ಲಿ ಚೆಂಡೆ ಮದ್ದಲೆ ಕಲಾವಿದರಾಗಿ ತಿರುಗಾಡಿ ಲೋಕ ಅರಿತವರು. ಕಪಿಲಳ್ಳಿಗೆ ಚೆಂಡೆ ಮದ್ದಲೆಗಳನ್ನು ಪರಿಚಯಿಸಿ ಒಂದಷ್ಟು ಜನರಿಗೆ ಕಲಿಸಿಕೊಟ್ಟು ‘ಗುರುಗಳೇ’ ಎಂದು ಕರೆಯಿಸಿಕೊಳ್ಳುವವರು. ಚೆಂಡೆ ಕಲಿತರೆ ಕೂಲಿ ಕೆಲಸ ಬಿಟ್ಟು ಕಲಾವಿದನಾಗಬಹುದೆಂದು ದೋಂಟಿ ತ್ಯಾಂಪಣ್ಣನು ಗುರುಗಳಲ್ಲಿಗೆ ಬರತೊಡಗಿದನು. ಏನು ಮಾಡಿದರೂ ಅವನ ಕೈ ಪಳಗಲಿಲ್ಲ. ಚೆಂಡೆಮದ್ದಲೆ ಕಲಿಯದಿದ್ದರೂ ಗುರುಗಳ ಸಾನಿಧ್ಯ ಇರಲೆಂದು ಕೃಷ್ಣ ಮದ್ಲೆಗಾರರಲ್ಲಿ ಕೂಲಿ ಕೆಲಸ ಮಾಡತೊಡಗಿದನು. ಅದಕ್ಕೆ ಕಾರಣ ಕೇಳಿದರೆ “ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ” ಎಂದೋ “ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ” ಎಂದೋ ಹಾಡಿ ಬಿಡುತ್ತಿದ್ದನು. ಅವನಿಗೆ ಮೂಡು ಕೆಡುವುದು ಕಡಿಮೆ. ಕೆಟ್ಟು ಬಿಟ್ಟರೆ ಅಂದು ಅವನಿಂದ ಒಂದು ನಯಾಪೈಸೆ ಕೆಲಸ ಮಾಡಿಸಲು ಸಾಕ್ಷಾತ್ತು ಕಪಿಲೇಶ್ವರನಿಂದಲೂ ಸಾಧ್ಯವಾಗದು.

ತಲೆ ತಗ್ಗಿಸಿ ಜಗಲಿಯಲ್ಲಿ ಕೂತ ದೋಂಟಿ ತ್ಯಾಂಪಣ್ಣನೆದುರು ನಿಂತು ಕೃಷ್ಣ ಮದ್ಲೆಗಾರರು ಓಲೈಕೆಯ ಮಾತುಗಳನ್ನು ಆಡಿದರು.

“ನೋಡು ತ್ಯಾಂಪಣ್ಣಾ, ನಾವೆಲ್ಲಾ ಉಪ್ಪು, ಖಾರ, ಹುಳಿ ತಿನ್ನುವ ನರಮನುಷ್ಯರು. ಕಷ್ಟಗಳು ಮನುಷ್ಯರಿಗಲ್ಲದೆ ಕಲ್ಲು ಬಂಡೆಗಳಿಗೆ ಬರುತ್ತವೆಯೆ? ಮನಸ್ಸಿಗೇನೋ ಅಹಿತವಾಯಿತೆಂದರೆ ಅದನ್ನು ಒಳಗಡೆ ಇಟ್ಟುಕೊಳ್ಳುವುದಲ್ಲ. ನಾಲ್ಕು ಜನರಲ್ಲಿ ಹೇಳಿಕೊಂಡರೆ ಸರಿಯಾಗುತ್ತದೆ. ನಿನಗೆ ಬಂದಿರುವ ಕಷ್ಟವೇನು? ಸಮಸ್ಯೆಗಳು ಇರುತ್ತವೆಂದ ಮೇಲೆ ಪರಿಹಾರಗಳೂ ಇದ್ದೇ ಇರುತ್ತವೆ.”

ದೋಂಟಿ ತ್ಯಾಂಪಣ್ಣನು ಕೃಷ್ಣ ಮದ್ಲೆಗಾರರನ್ನು ತಲೆ ಎತ್ತಿ ನೋಡಿದನು. “ಗುರುಗಳೇ, ಕೆಲವು ಸಮಸ್ಯೆಗಳಿಗೆ ಸುಲಭದ ಪರಿಹಾರ ಸಿಗುವುದಿಲ್ಲ. ನಾನು ಇಷ್ಟು ಉದ್ದ ಇದ್ದೇನೆಂದು ನನ್ನ ಹೆಸರಿನ ಹಿಂದೆ ದೋಂಟಿ ಸೇರಿಕೊಂಡಿದೆ. ದೊಡ್ಡವರು ಕರೆಯಲಿ, ಬೇಸರವಿಲ್ಲ. ಸರಿಯಾಗಿ ಸೆಗಣಿ ಹಾಕಲಿಕ್ಕೂ ಸಾಮರ್ಥ್ಯವಿಲ್ಲದ ಮಕ್ಕಳೂ ನನ್ನ ತಲೆ ಕಂಡೊಡನೆ ದೋಂಟಿ, ದೋಂಟಿ ಎಂದು ಮಸ್ಕಿರಿ ಮಾಡುತ್ತಾರೆ. ನಾನು ಉದ್ದಕ್ಕಿರುವುದು ನನ್ನ ತಪ್ಪೆ? ಈ ಹೆಸರನ್ನು ಚೇಂಜು ಮಾಡದೆ ನನ್ನ ಮನಸ್ಸಿಗೆ ಸುಖವೇ ಇಲ್ಲವೆಂದಾಗಿದೆ. ನೀವು ಗುರುಗಳು. ನೀವೇ ದಾರಿ ತೋರಿಸಬೇಕು.”

ಕೃಷ್ಣ ಮದ್ಲೆಗಾರರಿಗೆ ತಕ್ಷಣ ಪರಿಹಾರ ಹೊಳೆಯಲಿಲ್ಲ. ಕಪಿಲಳ್ಳಿಯಲ್ಲಿ ಏನಿಲ್ಲವೆಂದರೂ ಐದಾರು ಡಜನ್ನು ತ್ಯಾಂಪಣ್ಣಗಳೂ ಅಷ್ಟೇ ಸಂಖ್ಯೆಯ ರಾಂಪಣ್ಣಗಳೂ ಇದ್ದಾರೆ. ಅಜ್ಜ ತ್ಯಾಂಪಣ್ಣ, ಅಪ್ಪ ರಾಂಪಣ್ಣ, ಮಗ ತ್ಯಾಂಪಣ್ಣ, ಮೊಮ್ಮಗ ರಾಂಪಣ್ಣ, ಮರಿಮಗ ತ್ಯಾಂಪಣ
ಹೀಗೆ ಪರಂಪರೆ ಮುಂದುವರಿಯುತ್ತದೆ. ಎರಡೇ ಹೆಸರುಗಳು ಅನೇಕ ತಲೆ ಮಾರುಗಳಿಂದ ಮುಂದುವರಿದುಕೊಂಡು ಬಂದಿವೆ. ಕನ್‌ಫ್ಯೂಶನ್ನು ಆಗದಿರಲೆಂದು ಹೆಸರುಗಳ ಹಿಂದೆ ಒಂದು ವಿಶೇಷಣ ಅಂಟಿಸಿರುವುದು ಈಗ ಮನೆತನದ ಹೆಸರಾಗಿ ಬಿಟ್ಟಿದೆ. ಗಳದಂತೆ ಉದ್ದಕ್ಕಿರುವ ಇವನು ದೋಂಟಿ ತ್ಯಾಂಪಣ್ಣನಾಗಿದ್ದಾನೆ. ಇವನ ಅಪ್ಪ ದೋಂಟಿ ರಾಂಪಣ್ಣ ಮತ್ತು ಅಜ್ಜ ದೋಂಟಿ ತ್ಯಾಂಪಣ್ಣ. ಅವರ್ಯಾರನ್ನೂ ಕಾಡದ ಸಮಸ್ಯೆ ಇವನದ್ದೇನು?

“ಗುರುಗಳೇ, ನನಗೆ ಈಗ ಎಷ್ಟಾಯಿತೆಂದು ಭಾವಿಸಿದ್ದೀರಿ? ನಲುವತ್ತೈದು. ಈವರೆಗೆ ಕರೆದಲ್ಲಿಗೆ ಹೋಗಿ ತೆಂಗಿನ ಕಾಯಿ ಕೊಯ್ದು ಕೊಟ್ಟದ್ದನ್ನು ಬಿಟ್ಟರೆ ನಾಲ್ಕು ಜನ, ನಾಲ್ಕು ದಿನ ನೆನಪಿಟ್ಟುಕೊಳ್ಳುವ ಯಾವ ಕೆಲಸವನ್ನು ಮಾಡಿದ್ದೇನೆ? ನನ್ನ ಪೂರ್ವ ಜನ್ಮದ ಕರ್ಮಫಲ ಇರಬೇಕು. ಇಲ್ಲಿ ದೋಂಟಿ ತ್ಯಾಂಪಣ್ಣನಾಗಿ ಜನ್ಮ ಎತ್ತಿದ್ದೇನೆ. ನನ್ನ ಅಜ್ಜನೂ ದೋಂಟಿ ತ್ಯಾಂಪಣ್ಣನಾಗಿದ್ದ. ನಾನು ಜನರು ನೆನಪಿಡುವಂತಹ ಕೆಲಸವನ್ನು ಏನನ್ನಾದರೂ ಮಾಡದಿದ್ದರೆ ನನ್ನ ಮೊಮ್ಮಗನೂ ದೋಂಟಿ ತ್ಯಾಂಪಣ್ಣನಾಗಿ ಬಿಡುತ್ತಾನೆ. ಅದಕ್ಕೇ ನಿಮ್ಮಲ್ಲಿ ಬೇಡಿಕೊಳ್ಳುವುದು. ನನ್ನ ಹೆಸರು ಚೇಂಜು ಮಾಡಲು ನಿಮ್ಮ ಎಲ್ಪು ಬೇಕು. ಅದಕ್ಕೆ ಸ್ವಲ್ಪ ಖರ್ಚಾದರೂ ಚಿಂತಿಲ್ಲ. ನಿಮ್ಮ ತೋಟದ ತೆಂಗಿನಕಾಯಿ ಕಿತ್ತು ಕೊಟ್ಟು ನಿಧಾನವಾಗಿ ನಾನು ಸಾಲವನ್ನು ಬೂಟಿಯೇನು.”

“ಆದರೆ ತ್ಯಾಂಪಣ್ಣಾ, ಹೆಸರು ಬದಲಾಯಿಸಿದರೆ ಕಪಿಲಳ್ಳಿಯ ಮುಂದಿನ ಪೀಳಿಗೆ ನಿನ್ನ ನೆನಪಿಟ್ಟುಕೊಳ್ಳುತ್ತದೆಂದು ನಿನಗೆ ಹೇಳಿದವರು ಯಾರು? ನಿನ್ನ ಹಾಗೆ ಎಷ್ಟು ತ್ಯಾಂಪಣ್ಣರಿಲ್ಲ ನಮ್ಮ ಊರಿನಲ್ಲಿ? ಅವರೆಲ್ಲಾ ಹೆಸರು ಚೇಂಜು ಮಾಡಲು ಹೊರಟಿದ್ದಾರಾ? ನಿನಗೆ ಮಾತ್ರ ಈ ಹುಚ್ಚು ಯಾಕೆ ಹಿಡಿಯಿತು?”

“ಗುರುಗಳೇ, ಕಪಿಲಳ್ಳಿಯ ಅಷ್ಟೂ ತ್ಯಾಂಪಣ್ಣಗಳ ಪೈಕಿ ಯಾವ ಗೌರವವೂ ಇಲ್ಲದ ಪಡಪೋಶಿ ಕೆಲಸ ನನ್ನದು. ಅದಾದರೂ ಹೊಟ್ಟೆ ಪಾಡಿಗಾಗಿ ಎಂದಿಟ್ಟುಕೊಳ್ಳೋಣ. ಕೆಲಸದ ಬಗ್ಗೆ ನನ್ನ ತಕರಾರಿಲ್ಲ. ಆದರೆ ಎಲ್ಲರೂ ದೋಂಟಿ, ದೋಂಟಿ ಎಂದು ಕರೆಯುವಾಗ ಹಿಂಸೆಯಾಗುತ್ತದೆ. ನೀವು ದುಸುರಾ ಮಾತಾಡದೆ ನನ್ನ ಹೆಸರು ಚೇಂಜು ಮಾಡಲೇಬೇಕು.”

ಕೃಷ್ಣ ಮದ್ಲೆಗಾರರಿಗೆ ಮೊದಲು ನೆನಪಾದದ್ದು ಓಡತ್ತ ತ್ಯಾಂಪಣ್ಣ. ಅವನು ತಪಸ್ವಿನಿಯ ಬಲದಂಡೆಯಲ್ಲಿರುವ ಕಪಿಲೇಶ್ವರನ ದಿವ್ಯ ದರ್ಶನಕ್ಕೆ ಹೋಗುವ ಆಸ್ತಿಕ ಭಕ್ತಾಭಿಮಾನಿಗಳನ್ನು ಸುಕ್ಷೇಮವಾಗಿ ಆಚೆಗೊಯ್ದು ಈಚೆಗೆ ಕರೆತರುತ್ತಿದ್ದ. ಕಪಿಲೇಶ್ವರನ ದರ್ಶನ ಭಾಗ್ಯದಿಂದ ಆಸ್ತಿಕ ಭಕ್ತಾಭಿಮಾನಿಗಳು ಸಂಚಯಿಸುತ್ತಿದ್ದ ಪುಣ್ಯ ವಿಶೇಷದಲ್ಲಿ ಐವತ್ತು ಪರಸೆಂಟು ಓಡತ್ತ ತ್ಯಾಂಪಣ್ಣನ ಅಕವುಂಟಿಗೆ ಜಮೆಯಾಗುತ್ತದೆಂದು ಕಪಿಲಳ್ಳಿಗೆ ಕಪಿಲಳ್ಳಿಯೇ ಮಾತಾಡಿಕೊಳ್ಳುತ್ತಿತ್ತು. ಕಪಿಲೇಶ್ವರನ ಜಾತ್ರಾ ಮಹೋತ್ಸವದಲ್ಲಿ ಸಿಡಿಮದ್ದು ಸ್ಫೋಟಿಸುವ ಗರುನಾಲು ತ್ಯಾಂಪಣ್ಣನದ್ದೂ ಪುಣ್ಯ ಸಂಚಯನದ ಕಾಯಕವೇ. ಅವನು ತುಟಿಗಳೆಡೆಯಲ್ಲಿ ದಿಲ್‌ಪುಕಾರು ಬೀಡಿ ಇಟ್ಟು ಲೈಟರ್‌ನಿಂದ ಲಟಕ್ಕೆಂದು ಬೆಂಕಿ ಹೊತ್ತಿಸಿ ಬೀಡಿಗೆ ಹಿಡಿದು, ಬೀಡಿಯನ್ನು ಎರಡು ಬಾರಿ ಸೇದಿ ಬಾಯಿ ಮೂಗುಗಳಿಂದ ಹೊಗೆಯುಗುಳುತ್ತಾ, ಬೀಡಿಯ ಮೂತಿಗೆ ಗರ್ನಾಲಿನ ಬತ್ತಿಯನ್ನು ಹಿಡಿದು ಅದು ಸುರ್‌ಸುರ್‌ ಎಂದಾಗ ಆಕಾಶ ದೆತ್ತರಕ್ಕೆ ಅದನ್ನು ಹಾರಿಸಿ ಢಾಂ ಸದ್ದಿನಿಂದ ಎಲ್ಲರನ್ನೂ ಬೆಚ್ಚಿ ಬೀಳಿಸುವವನು. ದೇವರ ಸೇವೆಯಾದುದರಿಂದ ಅವನದು ಸಾರ್ಥಕ ಬದುಕು ಎನ್ನುವುದರಲ್ಲಿ ಕೃಷ್ಣ ಮದ್ಲೆಗಾರರಿಗೂ ಅನುಮಾನವಿರಲಿಲ್ಲ. ಅಲ್ಲದೆ ಊರ ಕೇಂದ್ರವೇ ಕಪಿಲೇಶ್ವರನ ದೇವಾಲಯವಾದುದರಿಂದ ಓಡತ್ತ ತ್ಯಾಂಪಣ್ಣ ಮತ್ತು ಗರ್ನಾಲು ತ್ಯಾಂಪಣ್ಣರ ಬಗ್ಗೆ ಕಪಿಲಳ್ಳಿಯ ಜನ ಆಗಾಗ ಮಾತಾಡಿಕೊಳ್ಳುತ್ತಾರೆ. ಅವರ ಕೆಲಸ ಜನರ ಕಣ್ಣಿಗೂ ಬೀಳುತ್ತದೆ. ದೋಂಟಿ ತ್ಯಾಂಪಣ್ಣನ ಬಗ್ಗೆ ಹಾಗೆ ಯಾರೂ ಮಾತಾಡಿಕೊಳ್ಳುವುದಿಲ್ಲ.

ಕಪಿಲಳ್ಳಿಯ ಪ್ರಸಿದ್ಧ ನಾಟಿ ವೈದ್ಯ ಪೀಂಟೆಲು ತ್ಯಾಂಪಣ್ಣನ ಮುಖ ಕೃಷ್ಣ ಮದ್ಲೆಗಾರರೆದುರು ತೇಲಿ ಬಂತು. ಅವನ ಮುಖದ ವಾಮ ಭಾಗವು ಸೊಟ್ಟಗಿದ್ದುದರಿಂದ ಬಂದ ಹೆಸರದು. ಮುಖ ಹೇಗೂ ಇರಲಿ, ಅವನ ಕೈ ಗುಣ ದೊಡ್ಡಾಸ್ಪತ್ರೆಯ ದೊಡ್ಡ ದೊಡ್ಡ ಡಾಕ್ಟರರುಗಳಿಗೂ ಇಲ್ಲವೆಂದು ಊರಿಗೆ ಊರೇ ಅವಿರೋಧವಾಗಿ ಕೊಂಡಾಡುತ್ತಿತ್ತು. ಹಾವಿನ ವಿಷದಿಂದ, ಹುಚ್ಚು ನಾಯಿಯ ಕಡಿತದಿಂದ ಅವನು ಎಷ್ಟೋ ಜನರನ್ನು ಬದುಕಿಸಿ ಕಪಿಲಳ್ಳಿಗೆ ತುಂಬಲಾಗದ ನಷ್ಟ ಸಂಭವಿಸದಂತೆ ನೋಡಿಕೊಂಡಿದ್ದಾನೆ. ಚೆಲ್ಲು ಹುಡುಗಿಯರು ಮದುವೆಗೆ ಮೊದಲೇ ಕನ್ಯಾ ಮಾತೆಯರಾಗದಂತೆ ನೋಡಿಕೊಂಡು ಊರ ಮರ್ಯಾದೆ ಕಾಪಾಡಿದ್ದಾನೆ. ಅಂದ ಮೇಲೆ ಅವನೂ ಪುಣ್ಯವಂತನೇ.

ಅವನಿಗಿಂತಲೂ ಒಂದು ಗುಲಗುಂಜಿ ತೂಕ ಹೆಚ್ಚಿನದ್ದು ಮಂತ್ರವಾದಿ ಸಿರಿಬಾಯಿ ತ್ಯಾಂಪಣ್ಣನ ಕಾಯಕ. ಕಪಿಲಳ್ಳಿಯ ಕೆಲವು ಹಿರಿಯರು ಸತ್ತಮೇಲೂ ಊರು ಬಿಟ್ಟಿಲ್ಲ. ಜಾತ್ರೆಯಂದು, ಮದುವೆಯಂದು, ಬೊಜ್ಜದಂದು, ದೀಪಾವಳಿಯಂದು, ಹೊಸ ಅಕ್ಕಿ ಊಟದಂದು ಊರ ಹೆಂಗಸರ ಮೈ ಮೇಲೆ ಬಂದು ಗದ್ದಲವೆಬ್ಬಿಸುತ್ತಾರೆ. ಸಿರಿಬಾಯಿ ತ್ಯಾಂಪಣ್ಣ ತನ್ನ ಸೀಳ್ದುಟಿಗಳಿಂದ ಮಣ ಮಣ ಮಂತ್ರ ಹೇಳಿ, ನೆಕ್ಕಿ ಸೊಪ್ಪಿನ ಕೋಲಿನಿಂದ ಅವರಿಗೆ ಬಡಿದು, ಕುಂಕುಮ ಮಿಶ್ರಿತ ಗುರ್ದಿನೀರನ್ನು ಪ್ರಕ್ಷಾಳನ ಮಾಡಿ ಹೆಂಗಸರನ್ನು ಸತ್ತ ಹಿರಿಯರಿಂದ ಪಾರು ಮಾಡುತ್ತಾನೆ. ಕೆಲವೊಮ್ಮೆ ಅವನು ಹೆಂಗಸರಿಂದ ಪೆಟ್ಟು ತಿಂದರೂ ಅಂಜದೆ, ಅಳುಕದೆ ತನ್ನ ಕಾಯಕ ಮುಂದುವರಿಸಿಕೊಂಡು ಬಂದಿದ್ದಾನೆ. ಎಂತಹಾ ಪ್ರೇತವನ್ನಾದರೂ ಮಣಿಸಬಲ್ಲವನೆಂದು ಅವನನ್ನು ಕಪಿಲಳ್ಳಿ ಕೊಂಡಾಡುತ್ತದೆ. ಕಪಿಲೇಶ್ವರನ ಅರ್ಚಕ ಪುರೋಹಿತ ವೇದಮೂರ್ತಿ ಗಣಪತಿ ಸುಬ್ರಾಯ ಜೋಯಿಸರಿಗಿಂತಲೂ ಹೆಚ್ಚು ಗೌರವಿಸುತ್ತದೆ.

ಚೊಟ್ಟೆ ಮತ್ತು ತೋಟೆ ತ್ಯಾಂಪಣ್ಣರು ಭಾವನೆಂಟರು. ಚೊಟ್ಟೆ ಅಲಿಯಾಸ್‌ ಕುಂಟ ತ್ಯಾಂಪಣ್ಣನು ಕಪಿಲಳ್ಳಿಯ ಪೋಸ್ಟು ಮ್ಯಾನು. ಅವನ ಎಡಗಾಲು ಬಲಗಾಲಿಗಿಂತ ಸ್ವಲ್ಪ ಗಿಡ್ಡ. ಅವನು ಕುಂಟುತ್ತಾ ನಡೆದರೂ ಅವನ ಸ್ಪೀಡು ಯಾರಿಗೂ ಬರಲಾರದು. ಪಕ್ಕದ ಊರಿನಿಂದ ನವಭಾರತ ಪೇಪರು ಮತ್ತು ಅಂಚೆ ಕಾಗದಗಳನ್ನು ಸರಿಯಾದ ಸಮಯಕ್ಕೆ ತಂದು ಊರಲ್ಲಿ ಹಂಚುವುದು ಅವನ ಕೆಲಸ. ಅವನೇ ಸ್ವಯಂ ಒಂದು ವಾರ್ತಾ ಪತ್ರಿಕೆಯಿದ್ದಂತೆ. ತೋಟೆ ತ್ಯಾಂಪಣ್ಣ ತಪಸ್ವಿನಿಯಲ್ಲಿ ಡೈನಾಮೈಟು ಸಿಡಿಸಿ ಕಡಲ ಮೀನು ಸಿಗದ ಕಪಿಲಳ್ಳಿ ಜನರಿಗೆ ಹೊಳೆ ಮೀನು ಸಪುಲಾಯಿ ಮಾಡುತ್ತಾನೆ. ಮೀನು ತಿನ್ನ ಬಾರದವರಿಗೆ ಸೀಕರೆಟ್ಟಾಗಿ ಯಾರಿಗೂ ಕಾಣದಂತೆ ಕೊಂಡು ಹೋಗಿ ಕೊಡುವವನು. ಒಮ್ಮೆ ಡೈನಮೈಟು ಕೈಯಲ್ಲೇ ಸಿಡಿದು ಬಲಗೈಛಿದ್ರವಾಗಿ ಹೋದ ಮೇಲೆ ತೋಟೆ ತ್ಯಾಂಪಣ್ಣನು ಮೋಟುಕೈ ತ್ಯಾಂಪಣ್ಣನಾಗಿ ಬಿಟ್ಟನು. ಈಗ ತೋಟೆ ಅಲಿಯಾಸ್‌ ಮೋಟು ಕೈ ತ್ಯಾಂಪಣ್ಣನು ಬೀಡಿ ಸೇದುತ್ತಾ, ಬೀಡಿ ಮೂತಿಗೆ ಡೈನಮೈಟಿನ ಬತ್ತಿ ಹಿಡಿದು ಬೆಂಕಿ ತಾಗಿದಾಗ ಎಡಗೈಯಿಂದ ಅದನ್ನು ತಪಸ್ವಿನಿಗೆಸೆದು ಮೀನು ಹಿಡಿಯುವ ಸಾಹಸಮಯ ಕಾಯಕ ಮುಂದುವರಿಸಿ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದಾನೆ. ಯಾವ ದೃಷ್ಟಿಯಿಂದ ನೋಡಿದರೂ ಪೀಂಟೆಲು ತ್ಯಾಂಪಣ್ಣ, ಸಿರಿಬಾಯಿ ತ್ಯಾಂಪಣ್ಣ, ಚೊಟ್ಟೆ ತ್ಯಾಂಪಣ್ಣ ಮತ್ತು ತೋಟೆ ತ್ಯಾಂಪಣ್ಣರ ಸಾಲಲ್ಲಿ ದೋಂಟಿ ತ್ಯಾಂಪಣ್ಣ ನಿಲ್ಲಲು ಸಾಧ್ಯವೇ ಇಲ್ಲ.

ಕೋರಿಕಂಡು (ಕೋಳಿ ಕಳ್ಳ) ತ್ಯಾಂಪಣ್ಣನನ್ನು ನೆನಪಿಸಿಕೊಂಡಾಗ ಕೃಷ್ಣ ಮದ್ಲೆಗಾರರಿಗೆ ನಗು ತಡೆ ಹಿಡಿಯುವುದು ಕಷ್ಟವಾಯಿತು. ಅವನ ಮನೆಯಲ್ಲಿ ಏನಿಲ್ಲವೆಂದರೂ ಮೂರು ಡಜನ್ನು ಬಣ್ಣ ಬಣ್ಣದ ಕಾಳಗದ ಹುಂಜಗಳಿವೆ. ಅವನ ಶರಟಿನ ಎಡಜೇಬಲ್ಲಿ ಮತ್ತು ಅಂಡರವೇರಿನ ಎರಡೂ ಜೇಬುಗಳಲ್ಲಿ ಬೇರೆ ಬೇರೆ ಊರುಗಳಲ್ಲಿ ನಡೆಯುವ ಕುಕ್ಕುಟ ಕದನದ ಕರೆಯೋಲೆಗಳು ತುಂಬಿ ತುಳುಕುತ್ತಿದ್ದವು. ಅವನು ಶರಟಿನ ಬಲಜೇಬಿನಲ್ಲಿ ಕುಕ್ಕುಟ ಪಂಚಾಂಗವನ್ನು ಯಾವಾಗಲೂ ಇಟ್ಟುಕೊಳ್ಳುತ್ತಿದ್ದನು. ಯಾವ ದಿಕ್ಕಿಗೆ ತಿರುಗಿ ಬಾಳು ಕಟ್ಟಿದರೆ ಗೆಲುವು ಗ್ಯಾರಂಟಿ ಎಂಬುದನ್ನು ಅವನು ಕರಾರುವಾಕ್ಕಾಗಿ ಹೇಳುತ್ತಿದ್ದನು. ಕಪಿಲಳ್ಳಿ ಯಲ್ಲಿ ವಾರಕ್ಕೊಮ್ಮೆ ನಡೆಯುವ ಕೋಳಿ ಕಟ್ಟದಲ್ಲಿ ಯಾವ ವ್ಯಾಜ್ಯ ಹುಟ್ಟಿಕೊಂಡರೂ ಅಂತಿಮ ತೀರ್ಪು ಅವನೇ ನೀಡಬೇಕು. ಕೆಲವು ವರ್ಷಗಳ ಹಿಂದೆ ಕಂಡ ಕೋಳಿಗಳನ್ನು ಅನಾಮತ್ತಾಗಿ ಎತ್ತಿಕೊಂಡು ಬಂದು ಬಿಡುತ್ತಿದ್ದನು. ಒಮ್ಮೆ ಸಿಕ್ಕಿ ಬಿದ್ದು ಸಹಸ್ರ ನಾಮಾರ್ಚನೆ ಯೊಂದಿಗೆ ಪೊರಕೆ ಸೇವೆ ಮಾಡಿಸಿಕೊಂಡನು. ಅಲ್ಲಿಯವರೆಗೆ ಪಾಡಾರಿ ತ್ಯಾಂಪಣ್ಣನಾಗಿದ್ದ ವನು ಅಂದಿನಿಂದ ಕೋರಿಕೊಂಡು ತ್ಯಾಂಪಣ್ಣನಾದನು. ಈಗವನಲ್ಲಿ ಎಷ್ಟೊಂದು ಹಣವಿದೆ ಯೆಂದರೆ ಪಂಚಾಯತ್‌ ಅಧ್ಯಕರಿಗಿಂತ ಹೆಚ್ಚು ಮರ್ಯಾದೆ ಅವನಿಗೆ ಸಿಗುತ್ತದೆ. ಅವನೆದುರು ದೋಂಟಿ ತ್ಯಾಂಪಣ್ಯನನ್ನು ನಿವಾಳಿಸಿ ಎಸೆಯಬೇಕಷ್ಟೇ.

ಇನ್ನುಳಿದವರೆಂದರೆ ಕುಜಲಿ (ಗಡಿಗೆ) ತ್ಯಾಂಪಣ್ಣ ಮತ್ತು ವಿಜ್ಞಾನಿ ತ್ಯಾಂಪಣ್ಣ. ಕುಜಲಿ ತ್ಯಾಂಪಣ್ಣನು ಊರ ತೆಂಗಿನ ಮರಗಳಿಗೆಲ್ಲಾ ಮಡಿಕೆ ಕಟ್ಟಿ ಕಳ್ಳು ಸಂಗ್ರಹಿಸುವವನು. ಮೂವತ್ತಮೂರು ಕೋಟಿ ದೇವತೆಗಳು ಕುಡಿಯುತ್ತಿದ್ದ ಸೋಮರಸ ಅದೇ ಎಂದು ಅವನು ದೇವರಾಣೆ ಹಾಕಿ ಹೇಳುತ್ತಿದ್ದನು. ಅವನ ಕಳ್ಳು ವಿತರಣಾ ಕೇಂದ್ರವನ್ನು ಊರ ಜನ ಕುಜಲಿ ತ್ಯಾಂಪಣ್ಣನ ಸೋಮ ರಸದಾಲಯ ಎಂದು ಕರೆಯುತ್ತಾರೆ. ಅವನಷ್ಟೇ ಜನಪ್ರಿಯ ನಾಗಿರುವವನೆಂದರೆ ವಿಜ್ಞಾನಿ ತ್ಯಾಂಪಣ್ಣ. ಅವನು ಕಳ್ಳ ಭಟ್ಟಿ ಪ್ರವೀಣನಾದುದರಿಂದ ಕಪಿಲಳ್ಳಿಯ ಏಕೋಪಾಧ್ಯಾಯ ಶಾಲೆಯ ಮುಖ್ಯೋ ಪಾಧ್ಯಾಯರು ಅವನಿಗಿಟ್ಟ ಹೆಸರದು. ಅವನು ಆ ಬಿರುದನ್ನು ಸಾರ್ವಜನಿಕ ಅಭಿನಂದನೆಯಾಗಿ ಸ್ವೀಕರಿಸಿ ತನ್ನ ಜವಾಬ್ದಾರಿಯನ್ನು ಹೆಚ್ಚಿಸಿಕೊಂಡಿದ್ದನು. ಕುಜಲಿ ತ್ಯಾಂಪಣ್ಣ ಸೋಮರಸವನ್ನು, ವಿಜ್ಞಾನಿ ತ್ಯಾಂಪಣ್ಣ ಕಳ್ಳ ಭಟ್ಟಿಯನ್ನು ಶೂದ್ರಾತಿ ಶೂದ್ರರಿಂದ ಹಿಡಿದು ವಿಪ್ರಾತಿ ವಿಪ್ರರವರೆಗೆ ಓಪನ್ನಾಗಿ, ಅಗತ್ಯ ಬಿದ್ದರೆ ಸೀಕ್ರೆಟ್ಟಾಗಿ ಸಪುಲಾಯಿ ಮಾಡಿ ಕಪಿಲಳ್ಳಿಯಲ್ಲಿ ಅನೌಪಚಾರಿಕ ಸಮತಾವಾದವನ್ನು ಜಾರಿಗೊಳಿಸಿದ್ದರು. ಅವರೊಡನೆ ದೋಂಟಿ ತ್ಯಾಂಪಣ್ಣನನ್ನು ಹೋಲಿಸುವಂತೆಯೇ ಇಲ್ಲ. ಆದರೆ ಇವನ ಹೆಸರನ್ನು ಬದಲಾಯಿಸುವುದಾದರೂ ಹೇಗೆ?

ನಾಯಿ ಬೊಗಳಿದಾಗ ಕೃಷ್ಣ ಮದ್ಲೆಗಾರರ ಯೋಚನಾ ಲಹರಿ ತುಂಡಾಯಿತು. ಬಿಸತ್ತಿ ತ್ಯಾಂಪಣ್ಣನು ಬಲಗೈಯಲ್ಲಿ ಒಂದು ಕೋಲು, ಎಡಗೈಯಲ್ಲೊಂದು ಹಡಪ ಹಿಡಿದುಕೊಂಡು ಬರುತ್ತಿದ್ದನು. ಇವನಿನ್ನು ಬಂದು ಏನು ತಲೆನೋವು ತಂದು ಹಾಕುತ್ತಾನೋ ದೇವರೇ ಎಂದು ಅವರು ಅಂದುಕೊಂಡರು. ಕಪಿಲಳ್ಳಿಯ ಪಾಲಿಗೆ ಅವನೊಬ್ಬ ದೊಡ್ಡ ಭಯೋತ್ಪಾದಕ. ಒಂದೆರಡಾಗಿ ಮೂರನೆಯ ಮಾತಿಗೆ ಚಾಕು ಹೊರತೆಗೆದು “ಬಿಸತ್ತಿ ಹಾಕಿ ಬಿಡುತ್ತೇನೆ” ಎನ್ನುವುದು ಅವನ ರೂಢಿ. ಮನೆ ಮನೆಗೆ ಹೋಗಿ ಕ್ಷೌರವೋ, ಗಡ್ಡವೋ ಮಾಡಿ, ಮಾಡಿಸಿಕೊಂಡವರು ಕೊಟ್ಟ ಭತ್ತ ತೆಂಗಿನಕಾಯಿಗಳಲ್ಲಿ ಅವನ ಜೀವನ ಸಾಗಬೇಕು. ಪ್ರತಿದಿನ ಕಪಿಲಳ್ಳಿಯ ಒಂದು ಮೂಲೆಯ ಸಮಾಚಾರ ಇನ್ನೊಂದು ಮೂಲೆಗೆ ಮುಟ್ಟುವುದು ಅವನಿಂದಲೇ. ಮಧ್ಯಾಹ್ನ ಊಟವಾದ ಮೇಲೆ ವಿಜ್ಞಾನಿ ತ್ಯಾಂಪಣ್ಣನ ಭಟ್ಟಿಯಿಂದ ನಿಶಾ ಏರಿಸಿಕೊಂಡು ಕಣ್ಣು ಕೆಂಪಗೆ ಮಾಡಿಕೊಂಡು ರಸ್ತೆಯ ಉದ್ದಗಲ ಅಳೆಯತೊಡಗಿದನೆಂದರೆ ಅವನೆದುರು ನಿಲ್ಲುವವರೇ ಇರಲಿಲ್ಲ. ಊರಿನ ಜಗಳ ಪೆಟ್ಟು ಕುಟ್ಟುಗಳಲ್ಲಿ ಅವನೇ ಸುಪ್ರೀಮು ಕೋರ್ಟು. ದೋಂಟಿ ತ್ಯಾಂಪಣ್ಣನನ್ನು ಅವನೊಡನೆಯೂ ಹೋಲಿಸುವಂತಿಲ್ಲ.

ಬಿಸತ್ತಿ ತ್ಯಾಂಪಣ್ಣನು ವಾರಕ್ಕೆರಡು ಸಂಜೆ ಕೃಷ್ಣ ಮದ್ಲೆಗಾರರಲ್ಲಿಗೆ ಭಾಗವತಿಕೆ ಕಲಿಯ ಬಂದನೆಂದರೆ ಎಲ್ಲರಿಗೂ ಕರ್ಣ ಹಿಂಸೆ. ಬಿಸತ್ತಿ ತ್ಯಾಂಪಣ್ಣ ಕೃಷ್ಣ ಮದ್ಲೆಗಾರರಲ್ಲಿ ಮಾತಾಡುವಾಗ ಬಾಯಿಗೆ ಹೆಗಲ ಶಾಲನ್ನು ಅಡ್ಡ ಹಿಡಿದು “ಗುರುಗಳು ಮಾಪು ಮಾಡಬೇಕು. ರಾಗ ಸರಾಗವಾಗಲು ಸ್ವಲ್ಪ ತೀರ್ಥ ತೆಗೆದುಕೊಂಡಿದ್ದೇನೆ. ಈ ಕಪಿಲಳ್ಳಿಯಲ್ಲಿ ನನ್ನೆದುರು ತಲೆತಗ್ಗಿಸದವರು ಯಾರಿದ್ದಾರೆ? ನೀವು ದೊಡ್ಡವರು. ನಿಮ್ಮೆದುರು ನಾನು ತಲೆತಗ್ಗಿಸುತ್ತೇನೆ” ಎಂದು ಪ್ರತಿ ಬಾರಿಯೂ ಹೇಳುತ್ತಿದ್ದನು. ಪಾಠ ಮುಗಿದ ಮೇಲೆ ಕೃಷ್ಣ ಮದ್ಲೆಗಾರರ ಪಾದಕ್ಕೆ ದೀರ್ಘ ದಂಡ ಪ್ರಣಾಮ ಮಾಡುತ್ತಿದ್ದನು.” “ನೀನು ಹಾಡಿದ್ದು ತುಂಬಾ ಚೆನ್ನಾಗಿತ್ತು” ಎಂದು ಹೇಳಿದರೆ ಮಾತ್ರ ಅವರ ಪಾದವನ್ನು ಬಿಟ್ಟು ಮೇಲೇಳುತ್ತಿದ್ದನು.

ಅವನು ಕೃಷ್ಣ ಮದ್ಲೆಗಾರರ ಚಿಂತಾಕ್ರಾಂತ ಮುಖವನ್ನು ಮತ್ತು ತಲೆತಗ್ಗಿಸಿ ಕೂತ ದೋಂಟಿ ತ್ಯಾಂಪಣ್ಣನನ್ನು ನೋಡಿ “ಗುರುಗಳ ವದನಾರವಿಂದದಲ್ಲಿ ಅದೇನೋ ಚಿಂತೆಯ ಕಾರ್ಮೋಡ ಕವಿದಿರುವಂತಿದೆ. ಹೇಳಿ ಗುರುಗಳೇ, ಈ ದುಷ್ಟನಾದ ದೋಂಟಿ ತ್ಯಾಂಪಣ್ಣನು ಅದೇನು ದುಷ್ಕೃತ್ಯವನ್ನು ನಡೆಸಿದನೆಂದು? ಗುರುಗಳ ಅಪ್ಪಣೆಯಾದರೆ ಸಾಕು, ಲಕ್ಷ್ಮಣನು ತನ್ನ ಖಡ್ಗದಿಂದ ಶೂರ್ಪನಖಿಯ ಮೊಲೆ ಮೂಗು ಕೊಯ್ದ ಹಾಗೆ ವಿಷ್ಣುವಿನ ವಾಹನ ಗರುಡನ ಕೊಕ್ಕಿನಂತಿರುವ ಇವನ ಮೂಗನ್ನು ಬಿಸತ್ತಿಯಿಂದ ಕ್ಷಣಾರ್ಧದಲ್ಲಿ ಕೆತ್ತಿ ಗುರುಗಳ ಪಾದ ಮೂಲಕ್ಕೆ ಸಮರ್ಪಿಸಿ ಬಿಡುತ್ತೇನೆ” ಎಂದನು.

ಗಾಬರಿ ಬಿದ್ದ ಕೃಷ್ಣ ಮದ್ಲೆಗಾರರು “ಅದೆಲ್ಲಾ ಬೇಡ. ಈ ಊರಿನ ಸಮಸ್ತ ತ್ಯಾಂಪಣ್ಣ ಗಳಿಗೆ ಬಹಳ ಒಳ್ಳೆಯ ಹೆಸರಿದೆ. ತನ್ನ ಹೆಸರು ಏನೇನೂ ಚೆನ್ನಾಗಿಲ್ಲ. ಎಳೆಯ ಮಕ್ಕಳೂ ಕೂಡಾ ತನ್ನನ್ನು ದೋಂಟಿ ದೋಂಟಿ ಎಂದು ಮಸ್ಕಿರಿ ಮಾಡುತ್ತಿವೆ. ಈ ಹೆಸರನ್ನು ಚೇಂಜು ಮಾಡಬೇಕೆಂದು ಇವನು ವರಾತ ಹಚ್ಚಿದ್ದಾನೆ. ಇದು ಇವನಿಗೆ ವಂಶ ಪಾರಂಪರ್ಯವಾಗಿ ಬಂದಿರುವ ಅಮೂಲ್ಯವಾದ ಹೆಸರು. ನಾನು ಅದನ್ನು ಚೇಂಜು ಮಾಡುವಂತಿಲ್ಲ. ಮಾಡಿದರೂ ಊರ ಜನ ಒಪ್ಪಲು ಸಾಧ್ಯವೇ ಇಲ್ಲ” ಎಂದು ತಮ್ಮ ಚಿಂತೆಯ ಕಾರಣವನ್ನು ತಿಳಿಸಿದರು.

ಬಿಸತ್ತಿ ತ್ಯಾಂಪಣ್ಣನು ಯೋಚನಾಮಗ್ನನಾದನು. “ಇವನ ನೋವಿಗೆ ಅರ್ಥವಿದೆ ಗುರುಗಳೇ. ನನ್ನ ಮೊಮ್ಮಗನು ಬಿಸತ್ತಿ ತ್ಯಾಂಪಣ್ಣ ಆಗಲೇ ಬೇಕೆಂದಿಲ್ಲ. ನನ್ನ ಅಜ್ಜನು ಬಿಸತ್ತಿ ತ್ಯಾಂಪಣ್ಣ ಆಗಿರಲಿಲ್ಲ. ಆದರೆ ಇವನ ಅಜ್ಜನೂ ದೋಂಟಿ ತ್ಯಾಂಪಣ್ಣನಾಗಿದ್ದ ಇವನ ಮೊಮ್ಮಗನೂ ದೋಂಟಿ ತ್ಯಾಂಪಣ್ಣನಾಗಿ ಬಿಡುತ್ತಾನೆ. ದೋಂಟಿ ಅನ್ನುವುದು ಬ್ರಹ್ಮಕಪಾಲದ ಹಾಗೆ ಇವನ ಮನೆತನಕ್ಕೇ ಅಂಟಿಕೊಂಡಿದೆ. ಪೆಟ್ಟು ಕುಟ್ಟು ಎಂದಾದರೆ ನಾನು ಇತ್ಯರ್ಥ ಮಾಡಿಯೇನು. ಇದಕ್ಕೆಲ್ಲಾ ನನ್ನ ತಲೆ ಓಡುವುದಿಲ್ಲ. ಗುರುಗಳೇ ಏನನ್ನಾದರೂ ಮಾಡಬೇಕು.”

ತುಂಬಾ ಹೊತ್ತು ಆಳವಾಗಿ ಯೋಚಿಸಿ ಕೃಷ್ಣ ಮದ್ಲೆಗಾರರೆಂದರು. “ಒಂದೇ ಒಂದು ದಾರಿ ನನಗೆ ಕಾಣುತ್ತಿದೆ. ನಮ್ಮ ದೋಂಟಿ ತ್ಯಾಂಪಣ್ಣ ಒಮ್ಮೆ ಶಬರಿಮಲೆಗೆ ಹೋಗಿ ಬಂದರೇನು? ನನಗೆ ಗೊತ್ತಿರುವ ಹಾಗೆ ಶಬರಿಮಲೆಗೆ ಕಪಿಲಳ್ಳಿಯಿಂದ ಈವರೆಗೆ ಯಾರೂ ಹೋಗಿಲ್ಲ. ಶಬರಿಮಲೆಗೆ ಹೋದ ಕಪಿಲಳ್ಳಿಯ ಮೊದಲ ವ್ಯಕ್ತಿ ಎಂದು ದೋಂಟಿ ತ್ಯಾಂಪಣ್ಣನು ತ್ಯಾಂಪಣ್ಣ ಸ್ವಾಮಿಯಾಗುತ್ತಾನೆ. ಇವನ ಅದೃಷ್ಟ ಚೆನ್ನಾಗಿದ್ದರೆ ಮಾಲೆ ತೆಗೆದ ಮೇಲೂ ತ್ಯಾಂಪಣ್ಣ ಸ್ವಾಮಿಯಾಗಿ ಉಳಿದುಕೊಳ್ಳುತ್ತಾನೆ.”

“ಗುರುಗಳ ತಲೆಯೇ ತಲೆ. ಇವನು ಹಾಕುವ ಮಾಲೆಯು ಶ್ರೀರಾಮಚಂದ್ರನು ಸುಗ್ರೀವನ ಕೊರಳಿಗೆ ತೊಡಿಸಿದ ವಿಜಯ ಮಾಲೆಯಾಗುತ್ತದೆ.”

ದೋಂಟಿ ತ್ಯಾಂಪಣ್ಣನ ಮುಖವು ಒಮ್ಮೆ ಬೆಳಗಿ ಸ್ವಲ್ಪ ಹೊತ್ತಿನಲ್ಲಿ ಕಪ್ಪಿಟ್ಟಿತು. “ಗುರುಗಳೇ, ನೀವು ಬಹಳ ಸುಲಭವಾಗಿ ಹೇಳಿಬಿಟ್ಟಿರಿ. ಒಂದು ತಿಂಗಳು ನಾನು ವ್ರತ ಮಾಡಬೇಕು. ಬೆಳಿಗ್ಗೆ ನಾಲ್ಕಕ್ಕೆ ಎದ್ದು ಕೊರೆಯುವ ಚಳಿಯಲ್ಲಿ ಮುಳುಗಿ ಬರಬೇಕು. ಭಟ್ಟಿ ಸರಾಯಿಯನ್ನು, ಸೋಮರಸವನ್ನು ಬಿಟ್ಟು ಬಿಡಬೇಕು. ಹೆಣ್ಣಿನೊಡನೆ ಮಲಗುವಂತಿಲ್ಲ. ಮನೆಯಿಂದ ಹೊರಗಿದ್ದು ನಾನೇ ಬೇಯಿಸಿ ತಿನ್ನಬೇಕು. ಅದೊಂದು ತಿಂಗಳು ತೆಂಗಿನ ಮರ ಹತ್ತುವಂತಿಲ್ಲ. ಒಂದು ತಿಂಗಳು ಪೂರ್ತಿ ಯಾವುದೇ ಕಮಾಯಿ ಇಲ್ಲದೆ ಕಳೆದು ಪೂಜೆ ನಡೆಸಿ ಇರುಮುಡಿ ಕಟ್ಟಿ ಶಬರಿಮಲೆಗೆ ಹೋಗಬೇಕು. ಏನಿಲ್ಲವೆಂದರೂ ಐದು ಸಾವಿರಕ್ಕಿಂತ ಹೆಚ್ಚು ಖರ್ಚಿದೆ. ನನ್ನಲ್ಲಿ ಅಷ್ಟೊಂದು ಹಣ ಎಲ್ಲಿಂದ ಬರಬೇಕು? ನೀವೇನಾದರೂ ಕೊಟ್ಟರೆ ಹೋಗಿ ಬರಬಹುದು?

ಕೃಷ್ಣ ಮದ್ಲೆಗಾರರು ಕಂಗಾಲಾದರು. ಬಿಸತ್ತಿ ತ್ಯಾಂಪಣ್ಣನು “ನಮ್ಮ ಗುರುಗಳು ಇದುವರೆಗೆ ದೇಹಿ ಎಂದವರಿಗೆ ನಾಸ್ತಿ ಎಂದವರಲ್ಲ. ನಿನ್ನಂತಹ ಪಡಪೋಶಿಗೆ ಜುಜುಬಿ ಐದು ಸಾವಿರ ಇಲ್ಲವೆನ್ನುತ್ತಾರೆಯೆ? ಏನು ಗುರುಗಳೇ” ಎಂದು ಕೇಳಿಯೇ ಬಿಟ್ಟನು.

ಕೃಷ್ಣ ಮದ್ಲೆಗಾರರು ತಲೆ ಕೆರೆದುಕೊಂಡರು. “ಹಣ ಹೇಗಾದರೂ ಹೊಂದಿಸಿಕೊಡ ಬಹುದು. ಆದರೆ ಸಾಲ ತೆಗೊಂಡ ಮೇಲೆ ಅದನ್ನು ಹಿಂದಿರುಗಿಸಲು ನಿನಗೆ ಎಷ್ಟು ಕಷ್ಟವಾದೀತು ಯೋಚಿಸು. ಇದೆಲ್ಲಾ ಬೇಕಾ ತ್ಯಾಂಪಣ್ಣ?”

ದೋಂಟಿ ತ್ಯಾಂಪಣ್ಣನು ಬೇಕೆಂದು ತಲೆಯಾಡಿಸಿದನು.

* * *

ಕೃಷ್ಣ ಮದ್ಲೆಗಾರರು ಮದ್ದಲೆಯ ಹಗ್ಗವನ್ನು ಸರಿಪಡಿಸಿಕೊಂಡಿರುವಾಗ ಊರ ಪಟೇಲರ ಜತೆಗಾರ ಕುರುಂಟು ತ್ಯಾಂಪಣ್ಣನು ನಿರೂಪವೊಂದನ್ನು ತೆಗೆದುಕೊಂಡು ಬಂದನು. ಮೊದಲ ಬಾರಿಗೆ ಮದುವಣಗಿತ್ತಿ ತನ್ನ ಪತಿಗೃಹಕ್ಕೆ ಹೋಗುವಾಗ ಜತೆಗಾತಿ ಯಾಗಿರುವವಳೇ ಕುರುಂಟು. ಪಟೇಲರ ಎಡಗೈಯಂತಿರುವ ಕುರುಂಟು ತ್ಯಾಂಪಣ್ಣನು ಪಟೇಲರ ನಿರೂಪವನ್ನು ಮನೆ ಮನೆಗೆ ಮುಟ್ಟಿಸುವವನು. ಆಡು ಮುಟ್ಟದ ಸೊಪ್ಪಿಲ್ಲ; ಪಟೇಲರು ಕೈಯಾಡಿಸದ ಕೇತ್ರವಿಲ್ಲ ಎನ್ನುವುದು ಕಪಿಲಳ್ಳಿಯಲ್ಲಿ ಪ್ರತಿದಿನ ಚಲಾವಣೆಯಲ್ಲಿರುವ ನಾಣ್ಣುಡಿ. ಕಪಿಲಳ್ಳಿಯ ಜನರು ಸಿಟ್ಟು ಬಂದಾಗ ನಿನ್ನವ್ವನ್, ನಿನ್ನಕ್ಕನ್‌, ನಿನ್‌ ಹೆಂಡ್ರನ್‌ ಎನ್ನುವ ಬದಲು ನಿನ್ನ ಅಜ್ಜಿಗೆ ಪಟ್ಲೇರು ಎಂದು ಬಿಡುತ್ತಾರೆ. ಸುತ್ತಮುತ್ತಲ ಹತ್ತು ಹದಿನೈದು ಹಳ್ಳಿಗಳಲ್ಲಿ ನಿನ್ನ ಅಜ್ಜಿಗೆ ಕಪಿಲಳ್ಳಿ ಪಟೇಲ್ರು ಎನ್ನುವ ಮಾತು ಚಾಲ್ತಿ ಯಲ್ಲಿದೆ. ಪಟೇಲರ ಶೋಕಿಯಲ್ಲಿ ಎರಡನೇ ಸುತ್ತಿನ ಪಾಲು ಪಡೆಯುವ ಕುರುಂಟು ತ್ಯಾಂಪಣ್ಣನ ಬಗ್ಗೆ ಊರಲ್ಲಿ ಅಸೂಯೆ ಮಿಶ್ರಿತ ಮೆಚ್ಚುಗೆಯೂ ಇದೆ.

ಕುರುಂಟು ತ್ಯಾಂಪಣ್ಣನು ಕೃಷ್ಣ ಮದ್ಲೆಗಾರರ ಹೆಂಡತಿ ನೀಡಿದ ಚಾ ಕುಡಿದು “ಸಂಜೆ ನಾಲ್ಕಕ್ಕೆ ಕಟ್ಟೆ ಪಂಚಾತಿಗೆ ಇದೆ. ವಿಜ್ಞಾನಿ ತ್ಯಾಂಪಣ್ಣ ವಾದಿ. ದೋಂಟಿ ತ್ಯಾಂಪಣ್ಣ ಪ್ರತಿವಾದಿ. ನೀವು ಪ್ರತಿವಾದಿಯ ಪರ ಸಾಕ್ಷಿ. ಕರೆಕ್ಟು ಟೇಮಿಗೆ ಬಂದು ಬಿಡಿ” ಎಂದು ನಮಸ್ಕರಿಸಿ ಎದ್ದನು.

ಹೆಸರು ಚೇಂಜು ಮಾಡಲೇಬೇಕೆಂದು ವರಾತ ಹಚ್ಚಿದ್ದ ದೋಂಟಿ ತ್ಯಾಂಪಣ್ಣನು ಕೃಷ್ಣ ಮದ್ಲೆಗಾರರು ಶಬರಿಮಲೆಗೆ ಹೋಗಿ ಬಾರೆಂದು ಹೇಳಿದ ಮರುದಿನವೇ ಪಕ್ಕದೂರಿನ ಗುರುಸ್ವಾಮಿಯೊಬ್ಬನನ್ನು ಕಪಿಲೇಶ್ವರನ ಸನ್ನಿಧಿಗೆ ಕರೆಯಿಸಿ, ತಪಸ್ವಿನಿಯಲ್ಲಿ ಮೂರು
ಮುಳುಗು ಹಾಕಿ, ಕಪ್ಪು ಲುಂಗಿ ತೊಟ್ಟು, ಹಣೆಗೆ ಭಸ್ಮ ಬಳಿದು, ಗುರುಸ್ವಾಮಿಯ ಪಾದಗಳಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಅವನಿಂದ ಮಾಲೆ ಹಾಕಿಸಿಕೊಂಡಿದ್ದನು. ದೋಂಟಿ ತ್ಯಾಂಪಣ್ಣನು ಕುಡಿತದ ಚಟ ಬಿಡಲು ಶಬರಿಮಲೆಗೆ ಹೋಗುತ್ತಿದ್ದಾನಂತೆ ಎಂದು ಊರಿಡೀ ಪ್ರಚಾರವಾಗಿ, ಶೂದ್ರಾತಿ ಶೂದ್ರರಿಂದ ಹಿಡಿದು ವಿಪ್ರಾತಿ ವಿಪ್ರರವರೆಗೆ ಎಲ್ಲರೂ ಅವನನ್ನು ತ್ಯಾಂಪಣ್ಣ ಸ್ವಾಮಿ ಎಂದು ಕರೆಯತೊಡಗಿದರು. ಹೆಸರಿನ ಹಿಂದಿನ ದೋಂಟಿ ಕಳಚಿಹೋಗಿ ಮುಂದೆ ಸ್ವಾಮಿ ಸೇರ್ಪಡೆಯಾದದ್ದು ಕೃಷ್ಣ ಮದ್ಲೆಗಾರ್‌ ಗುರುಗಳ ಆಶೀರ್ವಾದದಿಂದ ಎಂದು ದೋಂಟಿ ತ್ಯಾಂಪಣ್ಣನು ಊರಿಡೀ ಹೇಳಿಕೊಂಡು ತಿರುಗತೊಡಗಿದನು. ಶಬರಿಮಲೆಗೆ ಇರುಮುಡಿ ಕಟ್ಟು ಕಟ್ಟುವಂದು ಕಪಿಲೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಹತ್ತು ಮಂದಿಗೆ ಊಟ ಹಾಕಿಸಿದನು. ಯಾತ್ರೆ ಮುಗಿಸಿ ಬಂದ ಮೇಲೆ ರಂಗ ಪೂಜೆ ನಡೆಸಿ ಎಲ್ಲರಿಗೂ ಪಂಚ ಕಜ್ಜಾಯ ವಿತರಿಸಿದನು. ಯಾರನ್ನು ಕಂಡರೂ ಸ್ವಾಮಿ, ಸ್ವಾಮಿ ಎಂದು ಆರೂವರೆ ಅಡಿ ದೇಹವನ್ನು ಮೂರೂವರೆ ಅಡಿಗೆ ಕುಗ್ಗಿಸುತ್ತಿದ್ದನು. ದೋಂಟಿ ತ್ಯಾಂಪಣ್ಣನೇ ಕುಡಿತ ಬಿಟ್ಟಿದ್ದಾನೆಂದರೆ ಕಪಿಲಳ್ಳಿಯು ಸಂಪೂರ್ಣ ಪಾನಮುಕ್ತ ಗ್ರಾಮವಾಗುತ್ತದೆಂದು ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರು ಕಂಡಕಂಡವರಲ್ಲಿ ಹೇಳತೊಡಗಿದರು. ಹೀಗೆ ಬದಲಾಗಿರುವ ದೋಂಟಿ ತ್ಯಾಂಪಣ್ಣನ ವಿರುದ್ಧ ವಿಜ್ಞಾನಿ ತ್ಯಾಂಪಣ್ಣನು ಏನು ದೂರು ಸಲ್ಲಿಸಿರಬಹುದು, ಮತ್ತು ಅದಕ್ಕೆ ತನ್ನ ಸಾಕ್ಷ್ಯದ ಅಗತ್ಯವೇನಿರಬಹುದು ಎಂಬುದು ಎಷ್ಟು ಯೋಚಿಸಿದರೂ ಕೃಷ್ಣ ಮದ್ಲೆಗಾರರಿಗೆ ಹೊಳೆಯಲಿಲ್ಲ.

ಸಂಜೆ ಸರಿಯಾಗಿ ನಾಲ್ಕು ಗಂಟೆಗೆ ಪಂಚಾತಿಕೆ ಆರಂಭವಾಯಿತು. ಬರಬೇಕಾದವರೆಲ್ಲ ಬಂದಿರುವುದನ್ನು ಖಚಿತ ಪಡಿಸಿಕೊಂಡು ಪಟೇಲರು ಎದ್ದು ನಿಂತರು. “ನಮ್ಮ ದೋಂಟಿ ತ್ಯಾಂಪಣ್ಣನ ಮೇಲೆ ವಿಜ್ಞಾನಿ ತ್ಯಾಂಪಣ್ಣನು ಫಿರ್ಯಾದು ಸಲ್ಲಿಸಿದ್ದಾನೆ. ಅವನ ದೂರು ಏನೆಂಬುದನ್ನು ವಿಜ್ಞಾನಿ ತ್ಯಾಂಪಣ್ಣನು ಸಭೆಗೆ ತಿಳಿಸಬೇಕು.”

ಕಟ್ಟೆಯ ಮುಂದುಗಡೆ ಕೂತಿದ್ದ ವಿಜ್ಞಾನಿ ತ್ಯಾಂಪಣ್ಣನು ಎದ್ದು ನಿಂತನು. “ಭಟ್ಟಿ ಇಳಿಸುವುದು ನಮ್ಮ ಮನೆತನದ ತಲೆತಲಾಂತರದ ವಂಶಪಾರಂಪರಿಕ ಸಾಂಪ್ರದಾಯಿಕ ವೃತ್ತಿ. ಹಿರಿಯರು ತೋರಿಸಿದ ದಾರಿಯಲ್ಲಿ ನಡೆಯಬೇಕೆಂದು ನಾನು ಅದನ್ನು ಊರ ಸರ್ವರ ಅಭಿಪ್ರಾಯದಂತೆ ನನ್ನ ಕೈಲಾದಷ್ಟು ನಿಮಗೆಲ್ಲಾ ಸೇವೆ ಸಲ್ಲಿಸಿಕೊಂಡು ಪ್ರಾಮಾಣಿಕತೆಯಿಂದ, ನಾನು ನಂಬಿದ ದೈವ ದೇವರುಗಳ ದಯೆಯಿಂದ ಮುಂದುವರಿಸಿಕೊಂಡು ಬಂದವನು. ಅದನ್ನು ಬಿಟ್ಟರೆ ನನ್ನ ಜೀವನಕ್ಕೆ ಬೇರಾವುದೇ ಕಮಾಯಿ ಇರುವುದಿಲ್ಲ. ಈ ದೋಂಟಿ ತ್ಯಾಂಪಣ್ಣನು ಶಬರಿಮಲೆಗೆ ಹೋಗುವ ಮೊದಲು ಕುಡಿದ ಬಾಕಿ ಎರಡು ನೂರಾ ಎಪ್ಪತ್ತೆಂಟನ್ನು ಈವರೆಗೆ ತೀರಿಸಿಲ್ಲ. ಕುಡಿತ ಬಿಡಲಿಕ್ಕಾಗಿಯೇ ಮಾಲೆ ಹಾಕಿದವನೆಂದು ನಾನು ಇವನ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಿದ್ದೆನು. ಆದರೆ ಇವನು ಶಬರಿ ಮಲೆಯಿಂದ ಬಂದ ಮೇಲೆ ಮೊದಲಿಗಿಂತ ಹೆಚ್ಚು ಕುಡಿಯತೊಡಗಿದ್ದಾನೆ. ಸಾಲ ಕೊಡಲು ಸಾಧ್ಯವಿಲ್ಲವೆಂದು ನಾನು ಗದರಿದ್ದಕ್ಕೆ ತಾನೇ ಭಟ್ಟಿ ಇಳಿಸಿ ಮಾರಾಟ ಮಾಡಲು ತೊಡಗಿ ನನ್ನ ಹೊಟ್ಟೆಗೆ ಕಲ್ಲು ಹಾಕುತ್ತಿದ್ದಾನೆ. ಊರ ಹಿರಿಯರು, ಧರ್ಮ ಎಂದರೆ ಏನೆಂದು ಬಲ್ಲವರು ನೀವೆಲ್ಲಾ ಇಲ್ಲಿ ಸೇರಿದ್ದೀರಿ. ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ಸಭೆ ಸರ್ವರಿಗೆ ಕೈ ಮುಗಿದು ಕೇಳಿಕೊಳ್ಳುತ್ತಿದ್ದೇನೆ.”

ವಿಜ್ಞಾನಿ ತ್ಯಾಂಪಣ್ಣನು ತನ್ನ ಸ್ವಸ್ಥಾನದಲ್ಲಿ ಕುಳಿತುಕೊಂಡನು. ಪಟೇಲರು ಎತ್ತರದ ಸ್ವರದಲ್ಲಿ “ಇದಕ್ಕೆ ದೋಂಟಿ ತ್ಯಾಂಪಣ್ಣನು ಉತ್ತರ ಕೊಡಬೇಕು” ಎಂದು ಆದೇಶಿಸಿದರು.

ದೋಂಟಿ ತ್ಯಾಂಪಣ್ಣನು ಎದ್ದು ನಿಂತು ಆರೂವರೆ ಅಡಿ ದೇಹವನ್ನು ಮೂರೂವರೆ ಅಡಿ ಮಾಡಿಕೊಂಡು ಕೈ ಮುಗಿದನು. “ವಿಜ್ಞಾನಿ ತ್ಯಾಂಪಣ್ಣನು ಮಾಡಿರುವ ಆಪಾದನೆಗಳನ್ನು ನಾನು ಅಲ್ಲಗಳೆಯುವುದಿಲ್ಲ. ಕೂಲಿನಾಲಿ ಮಾಡಿಕೊಂಡು ಸಿಕ್ಕ ನಾಲ್ಕು ಪುಡಿಗಾಸಿನಲ್ಲಿ ಹೇಗೋ ಜೀವನ ಸಾಗಿಸುತ್ತಿದ್ದವ ನಾನು. ನಾನು ಕುಡಿತ ಬಿಡಬೇಕು, ಇತರರ ಕುಡಿತ ಬಿಡಿಸಬೇಕು ಮತ್ತು ನನ್ನ ಹೆಸರಿನ ಹಿಂದಿರುವ ದೋಂಟಿಯಿಂದ ಕಳಚಿಕೊಳ್ಳಬೇಕೆಂದು ಗುರುಗಳಾದ ಕೃಷ್ಣ ಮದ್ಲೆಗಾರರ ಸಲಹೆಯಂತೆ, ಅವರಿಂದ ಐದು ಸಾವಿರ ಸಾಲಪಡಕೊಂಡು ಶಬರಿ ಮಲೆಗೆ ಹೋಗಿ ಬಂದೆನು. ಕಪಿಲಳ್ಳಿಯಿಂದ ಶಬರಿಮಲೆಗೆ ಹೋಗಿ ಬಂದ ಮೊದಲ ವ್ಯಕ್ತಿ ನಾನು. ಆದರೆ ಅದಕ್ಕಾಗಿ ಮಾಡಿದ ಸಾಲವನ್ನು ತೀರಿಸುವುದು ಹೇಗೆ? ಅದಕ್ಕೆಂದೇ ಭಟ್ಟಿ ಇಳಿಸತೊಡಗಿದೆ. ಆ ಕಪಿಲೇಶ್ವರ ನಾಣೆಗೂ ವಿಜ್ಞಾನಿ ತ್ಯಾಂಪಣ್ಣನ ಹೊಟ್ಟೆಗೆ ಹೊಡೆಯುವ ಕೆಟ್ಟ ಯೋಚನೆ ನನಗಿಲ್ಲ ದೇವರೇ. ಇದನ್ನು ಮುಂದುವರಿಸಬೇಕೆನ್ನುವ ಹಟವೂ ಇಲ್ಲ. ಊರ ಮರ್ಯಾದಸ್ಥರು, ಹಿರಿಯರು ನನ್ನ ಐದು ಸಾವಿರ ಸಾಲ ತೀರಿಸಲು ದಾರಿ ತೋರಿಸಿದರೆ ಭಟ್ಟಿ ಇಳಿಸುವುದನ್ನು ಇಂದೇ ಬಿಟ್ಟು ಬಿಡುತ್ತೇನೆ.”

ಸಭೆ ಸ್ತಬ್ದವಾಯಿತು. ಸ್ವಲ್ಪ ಹೊತ್ತಿನ ಮೇಲೆ ಪಟೇಲರು ಕೃಷ್ಣ ಮದ್ಲೆಗಾರರತ್ತ ನೋಡಿದಾಗ ಅವರು ಎದ್ದು ನಿಂತರು. “ಊರ ಜನ ದೋಂಟಿ ಎಂದು ಕರೆಯುವುದು ನಮ್ಮ ತ್ಯಾಂಪಣ್ಣನಿಗೆ ನೋವುಂಟು ಮಾಡುತ್ತಿದ್ದುದರಿಂದ ಅವನು ಹೆಸರು ಬದಲಾಯಿಸಲು ನನ್ನ ಸಹಾಯ ಕೋರಿದ್ದು ಹೌದು. ನಾಲ್ಕು ದಿನ ಜನರಿಂದ ಗೌರವ ಸಿಗುವುದಾದರೆ ಸಿಗಲಿ ಎಂದು ಅವನಿಗೆ ಶಬರಿಮಲೆಗೆ ಹೋಗಲು ನಾನು ಸೂಚಿಸಿದ್ದೂ ಹೌದು. ಅವನು ನನ್ನಿಂದ ಐದು ಸಾವಿರ ಸಾಲ ತಗೊಂಡದ್ದೂ ಹೌದು. ಈ ವರ್ಷ ಅಡಿಕೆಗೆ ಹಳದಿ ರೋಗ, ತೆಂಗಿಗೆ ನುಸಿ ಪೀಡೆ ಬಂದು ಊರೇ ಸಂಕಷ್ಟದಲ್ಲಿದೆ. ತ್ಯಾಂಪಣ್ಣನಿಗೆ ನೀಡಿದ ಐದು ಸಾವಿರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವ ಸ್ಥಿತಿಯಲ್ಲಿ ನಾನಿಲ್ಲ. ಊರ ಹಿರಿಯರು ನಾಲ್ಕು ಸಾವಿರ ಸಂಗ್ರಹಿಸಿ ನನಗೆ ಕೊಟ್ಟರೆ, ಒಂದು ಸಾವಿರವನ್ನು ಬಿಟ್ಟು ಬಿಡುತ್ತೇನೆ.”

ಯಾರೂ ಸೊಲ್ಲೆತ್ತಲಿಲ್ಲ. ಸ್ವಲ್ಪ ಹೊತ್ತಿನ ಮೌನದ ಬಳಿಕ ಕೃಷ್ಣ ಮದ್ಲೆಗಾರರು ಮುಂದುವರಿಸಿದರು. “ಹಾಗಾದರೆ ಸಾಲ ತೀರುವವರೆಗೆ ತ್ಯಾಂಪಣ್ಣನು ಭಟ್ಟಿ ಇಳಿಸಲಿ. ಸಾಲ ತೀರಿದ ಮೇಲೆ ಭಟ್ಟಿ ಇಳಿಸುವುದನ್ನು ಬಿಟ್ಟು ಬಿಡಲಿ.”

ಸಭೆ ಚಪ್ಪಾಳೆ ತಟ್ಟಿ ಕೃಷ್ಣ ಮದ್ಲೆಗಾರರ ಮಾತಿಗೆ ಸರ್ವಾನುಮತದ ಮಂಜೂರಾತಿ ನೀಡಿತು. ಈಗ ದೋಂಟಿ ತ್ಯಾಂಪಣ್ಣನು ಭಟ್ಟಿ ಇಳಿಸುವ ಕಾಯಕ ಮುಂದುವರಿಸಿದ್ದಾನೆ. ಭಟ್ಟಿ ಕುಡಿದು ನಾಳೆ ಹಣ ಕೊಡುತ್ತೇನೆಂದು ಕೈ ಮುಗಿವ ಮಂದಿ ಅವನನ್ನು ಎದುರಿನಿಂದ ಸಾವುಕಾರ್ರೇ ಎಂದು ಕರೆಯುವಾಗ ತಾನು ಶಬರಿಮಲೆಗೆ ಹೋಗಿ ಬಂದದ್ದು ಸಾರ್ಥಕವಾಯಿತೆಂದು ಅವನು ಪುಳಕಗೊಳ್ಳುತ್ತಾನೆ. ಅತ್ತ ವಿಜ್ಞಾನಿ ತ್ಯಾಂಪಣ್ಣನ ವ್ಯಾಪಾರವೇನೂ ಕಡಿಮೆಯಾಗಿಲ್ಲ. ಹೊಸ ಸಂಪ್ರದಾಯಕ್ಕೆ ಕಾರಣನಾದನೆಂದು ಕಪಿಲಳ್ಳಿಯ ಜನ ಶಬರಿ ಮಲೆಗೆ ಹೋಗಿ ಬಂದ ತ್ಯಾಂಪಣ್ಣನಿಗೆ ಇಮ್ಮಡಿ ವಿಜ್ಞಾನಿ ದೋಂಟಿ ತ್ಯಾಂಪಣ್ಣನೆಂದು ಮರು ನಾಮಕರಣ ಮಾಡಿದ್ದಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೃಂದಾವನಪತಿ
Next post ಮಿಂಚುಳ್ಳಿ ಬೆಳಕಿಂಡಿ – ೬೧

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…