ಅಂದಿಗು ಪೂತನೆ ಇಂದಿಗು ಪೂತನೆ
ಎಂದೆಂದಿಗೂ ನೀನು ಮಂಗಳನೆ
ಮಂದಮತಿಗೆ ನಿನ್ನ ತಿಳಿಯಲು ಸಾಧ್ಯವೆ?
ಸುಂದಾರ ಸುಗುಣ ದಯಾಕರನೆ
ಒಂದೆಂಬೊ ಅದ್ವೈತ ಮಹಿಮ ನೀನಾದರು
ದ್ವಂದ್ವವ ನಿರ್ಮಿಸಿ ತೋರಿರುವೆ
ಮಂದರೋದ್ಧಾರನೆ ಚೋದ್ಯಮಿದೆಲ್ಲವು
ಬೃಂದಾವನಪತಿ ಗೋವಿಂದನೆ
ಓಹೋಹೊ ಏನಿವು? ಅದ್ಭುತ ಕೃತಿಗಳು
ಲೆಕ್ಕಕೆ ಮೀರಿದ ಭಾವಗಳು
ಆಹಾಹ ನಿನ್ನನು ಬಣ್ಣಿಸಲಳವೇನು?
ಬಹು ಘನವೋ ನಿನ್ನ ಮಹಿಮೆಗಳು
ಕೋಗಿಲೆ ದನಿಯೇನು? ಸಾಗರದಲೆಯೇನು?
ಆಗಸದಾ ಮಹಾಕಾಂತಿಯೇನು?
ರಾಗದ ಸೊಂಪೇನು? ಪಯಿರಿನ ಸೊಗಸೇನು?
ಯೋಗೀಶ ಚಿನ್ಮಯರೂಪ ನೀನು
ವಿಶ್ವದ ಸೊಬಗೇನು? ಜೀವನದಿಡುಗೇನು?
ಸತ್ಯ ಸೌಂದರ್ಯದ ಕಣಿಯೋ ನೀನು
ನಶ್ವರಮಿಲ್ಲದ ಸೃಷ್ಟಿಯ ಕಂಡೆನು
ತಲೆದೂಗಿ ಶಿರಬಾಗಿ ಮಣಿದೆ ನಾನು
ಆನಂದವೆಂಬುದೆ ನೀನೆಂದು ಪರಮ ಸು
ಜ್ಞಾನಿಗಳೆಲ್ಲರು ನುಡಿದಿಹರು
ನಾನೇನು ಬೆಲ್ಲೆನು? ಜನಕಜೆ ನಿನ್ನನು
ತಾನೆ ತಾನಾಗಿಹ ಸ್ವಾಮಿಯನು
*****