ಯಾರೂ ಹೇಳಬಲ್ಲರು ಕತೆಗಳನ್ನು. ಆದರೆ ಫಕೀರಪ್ಪನ ಶೈಲಿಯೇ
ಬೇರೆ. ಹೇಗೆ ಕೇಳುಗರ ಅಸಕ್ತಿಯನ್ನು ಕೆರಳಿಸಬೇಕು.
ಎಲ್ಲಿ ತಡೆಹಿಡಿಯಬೇಕು, ಯಾವಾಗ ವೀಳಯದೆಲೆಗೆ ಎಷ್ಟು
ಮೆಲ್ಲಗೆ ಸುಣ್ಣ ಸವರಬೇಕು -ಇದೆಲ್ಲ ಅವನೊಬ್ಬನಿಗೇ ಗೊತ್ತು.
ರಾತ್ರಿ ಸರಿಯುತ್ತಿದ್ದಂತೆ ಕತೆಯನ್ನು ಸಸ್ಪೆನ್ಸಿನಲ್ಲಿ-ಮತ್ತು
ನಮ್ಮನ್ನು ಭಯದಲ್ಲಿ-ನಿಲ್ಲಿಸಿ. ಫಕೀರಪ್ಪ ತಂಬಾಕಿನ ರಸ ಉಗುಳಲು
ಅಂಗಳದಾಚೆಗೆ ಹೋಗುವವ. ಅವನು ಮರಳಲು ಕಾದಂತೆ
ನಾವು ಇನ್ನಾರಿಗೂ ಕಾದ ನೆನಪಿಲ್ಲ.
ಫಕೀರಪ್ಪ ಈಗಿಲ್ಲ. ಒಂದು ಮುಂಜಾನೆ ಪಾಪ
ಕಾರಡ್ಕದ ಕಾಡಿನಲ್ಲಿ ಸತ್ತು ಬಿದ್ದಿದ್ದ. ಕೊಲೆಯೊ? ಆತ್ಮಹತ್ಯೆಯೊ?
(ಕಾರಣ ಇವನಿಗೂ ಅಸ್ತಿತ್ವದ ಸಮಸ್ಯೆಗಳಿದ್ದುವು.) ಹಸಿದ
ಯಕ್ಷಿಯೊಬ್ಬಳು ಗಬಾಯಿಸಿದಳೊ ಇವನನ್ನು? ಹಲವು ಜನ
ಹಲವು ವಿಧ ಹೇಳಿದರು. ಆದರೆ ನಿಜಕ್ಕೂ ತಾನು
ಹೇಗೆ ಸತ್ತೆ, ಎಷ್ಟು ಸ್ವಾರಸ್ಯಕರವಾಗಿ ಸತ್ತೆ ಎ೦ದು ಹೇಳುವುದಕ್ಕೆ
ಫಕೀರಪ್ಪ ತಾನೆ ಎಲ್ಲಿ?
*****