ಧರ್ಮ ಮತ್ತು ರಾಜಕಾರಣಗಳು ನಮ್ಮ ಸಮಾಜದ ಬಹುಮುಖ್ಯ ಅಂಗಗಳು. ನಾವು ಬೇಡವೆಂದರೂ ಬಿಡದ ಪ್ರಭಾವಿ ಶಕ್ತಿಗಳು. ಹಾಗೆ ನೋಡಿದರೆ ಸಾಹಿತ್ಯ, ಸಂಸ್ಕೃತಿಗಳ ಸಂದರ್ಭದಲ್ಲೂ ಧರ್ಮ ಮತ್ತು ರಾಜಕಾರಣಗಳ ಸಂಬಂಧ ಗಾಢವಾದುದು. ಕನ್ನಡ ಸಾಹಿತ್ಯದ ಮೇಲೆ ಧರ್ಮ ಮತ್ತು ರಾಜಕಾರಣಗಳು ಬೀರಿದ ಪ್ರಭಾವ, ಸಾಧಿಸಿದ ನಿಯಂತ್ರಣಗಳು ಸೃಜನಶೀಲ ಸ್ವಾತಂತ್ರ್ಯದ ಮೇಲೆ ಉಂಟುಮಾಡಿದ ಪರಿಣಾಮ ಗುರುತರವಾದುದು. ಹೀಗಾಗಿ ನಮ್ಮ ಅನೇಕ ಕವಿಗಳು ಧರ್ಮದೊಳಗಿದ್ದೂ ಧರ್ಮವನ್ನು ಮೀರುತ್ತ, ರಾಜನ ಆಸ್ಥಾನದಲ್ಲಿದ್ದೂ ರಾಜಪ್ರಭುತ್ವದ ಹಿಡಿತವನ್ನು ಉಲ್ಲಂಘಿಸುತ್ತ ಸೃಜನಶೀಲ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಇಂತಹ ಪ್ರಾಮಾಣಿಕ ಪ್ರಯತ್ನವು ಪಂಪ ಮಹಾಕವಿಯಿಂದಲೇ ಪ್ರಾರಂಭವಾಗಿದೆ. ವಿವಿಧ ಕಾಲ ಘಟ್ಟಗಳಲ್ಲಿ ಮುಂದುವರೆದಿದೆ.
ಈಗ ಪ್ರಜಾಪ್ರಭುತ್ವದ ಕಾಲ; ನಮ್ಮ ದೇಶದ ಸಂವಿಧಾನವು ಜಾತ್ಯತೀತ ತತ್ವವನ್ನು ಒಪ್ಪಿಕೊಂಡಿರುವ ಕಾಲ. ಆದರೂ ಜಾತ್ಯಾತೀತತೆಯ ಸ್ವರೂಪವನ್ನು ಕುರಿತು ವಾಗ್ವಾದಗಳು ನಡೆಯುತ್ತಲೇ ಇವೆ. ಅಲ್ಪಸಂಖ್ಯಾತರ ಹಿತವನ್ನು ಮುಂದು ಮಾಡಿ ಮಾತಾಡುವವರನ್ನು ಸೋಗಿನ ಜಾತ್ಯತೀತವಾದಿಗಳೆಂದು ಹೀಗಳೆಯುವ ಬಹುಸಂಖ್ಯಾತ ಹಿಂದೂಧರ್ಮದ ವಕ್ತಾರರು ಇರುವಂತೆಯೇ ಎಲ್ಲ ಧರ್ಮಗಳ ಮೂಲಭೂತವಾದವನ್ನು ವಿರೋಧಿಸುವ ನೈಜ ಜಾತ್ಯತೀತವಾದಿಗಳೂ ನಮ್ಮಲ್ಲಿದ್ದಾರೆ. ಅಲ್ಪಸಂಖ್ಯಾತ ಧರ್ಮಿಯರ ಪರವಾಗಿ ಮಾತನಾಡುವುದು ಬಹುಸಂಖ್ಯಾತ ಹಿಂದೂಗಳನ್ನು ವಿರೋಧಿಸಿದಂತಲ್ಲ. ಬಹುಸಂಖ್ಯಾತರೆಂಬ ಕಾರಣದಿಂದ ಅಲ್ಪಸಂಖ್ಯಾತ ಸಾಮಾಜಿಕ-ಸಾಂಸ್ಕೃತಿಕ ಹಕ್ಕುಗಳಿಗೆ ಧಕ್ಕೆ ತರುವ ಬಹುಸಂಖ್ಯಾತ ಧರ್ಮದ ಮೂಲಭೂತವಾದಿಗಳನ್ನು ಮಾತ್ರ ವಿರೋಧಿಸಿದಂತೆ; ಅಷ್ಟೆ. ಹೀಗಾಗಿ ನಿಜವಾದ ಜಾತ್ಯತೀತ ವಾದಿಯು ಏಕಧರ್ಮ, ಏಕಸಂಸ್ಕೃತಿಯ ಹೇರಿಕೆಯನ್ನು ಒಪ್ಪುವುದಿಲ್ಲ. ಸಂವಿಧಾನ ರಚನಾ ಸಭೆಯಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಧಿಗಳ ಬಗ್ಗೆ ಚರ್ಚಿಸುವಾಗ, ಹಿಂದೂ ಧರ್ಮದಾಚೆಗೆ ನಿಂತ ಡಾ. ಅಂಬೇಡ್ಕರ್ ಮತ್ತು ಹಿಂದೂ ಧರ್ಮನಿಷ್ಠರಾದ ಡಾ. ರಾಧಾಕೃಷ್ಣನ್ ಇಬ್ಬರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.
ಡಾ. ಅಂಬೇಡ್ಕರ್ ಅವರು ‘ಜಾತ್ಯತೀತ ರಾಷ್ಟ್ರ ಅಂದರೆ ಈ ಪಾರ್ಲಿಮೆಂಟು ಯಾವುದೇ ಒಂದು ನಿರ್ದಿಷ್ಟ ಧರ್ಮವನ್ನು ಉಳಿದ ಜನರ ಮೇಲೆ ಹೇರದಿರುವುದು ಎಂದರ್ಥ’ ಎಂದು ವಿಶ್ಲೇಷಿಸಿದ್ದಾರೆ. ಡಾ. ರಾಧಾಕೃಷ್ಣನ್ ಅವರು ‘ನಮ್ಮ ದೇಶವು ಯಾವುದೇ ಒಂದು ನಿರ್ದಿಷ್ಟ ಧರ್ಮದೊಂದಿಗೆ ಗುರುತಿಸಿಕೊಳ್ಳುವುದಿಲ್ಲ ಅಥವಾ ಅದರ ನಿಯಂತ್ರಣಕ್ಕೆ ಒಳಪಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಸಂವಿಧಾನವು ೨೫, ೨೬, ೨೭ ಮತ್ತು ೨೮ನೇ ವಿಧಿಗಳನ್ನು ಪೂರ್ಣವಾಗಿ ಧಾರ್ಮಿಕ ಹಕ್ಕುಗಳಿಗೆ ಮೀಸಲಾಗಿಟ್ಟಿದೆ. ೨೫ನೇ ವಿಧಿಯು ಯಾವುದೇ ಧರ್ಮಕ್ಕೆ ಪ್ರಚಾರ ಸ್ವಾತಂತ್ರ್ಯವನ್ನು ನೀಡಿದೆ. ೨೬-೨೭ನೇ ವಿಧಿಗಳಲ್ಲಿ ಧಾರ್ಮಿಕ ಸಂಸ್ಥೆ ಮತ್ತು ಫಂಡುಗಳಿಗೆ ಸಂಬಂಧಿಸಿದ ವಿಷಯಗಳಿವೆ. ೨೮ನೇ ವಿಧಿಯ ಪ್ರಕಾರ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮಬೋಧನೆ ನಿಷಿದ್ದ. ಆದರೆ ಅನುದಾನಿತ ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಈ ನಿಷೇಧ ಅನ್ವಯಿಸುವುದಿಲ್ಲ. ಸರ್ಕಾರಿ ಮತ್ತು ಖಾಸಗಿಯವರನ್ನು ಪ್ರತ್ಯೇಕವಾಗಿ ಪರಿಗಣಿಸಿದ ವೈಚಿತ್ರ್ಯ ಇಲ್ಲಿದೆ. ಈ ‘ವೈಚಿತ್ರ್ಯ’ ಈಗಂತೂ ಪರಿಣಾಮಕಾರಿಯಾಗಿ ಮುಂದುವರೆದ ವೈರುಧ್ಯಗಳಿಗೆ ಕಾರಣವಾಗಿದೆ. ೨೮ನೇ ವಿಧಿಯನ್ನು ಅಂಗೀಕರಿಸುವುದಕ್ಕೆ ಮುಂಚೆ ನಡೆದ ಚರ್ಚೆಯ ಸಂದರ್ಭದಲ್ಲಿ ಕೆಲವರು ಎಲ್ಲ ಶಿಕ್ಷಣಸಂಸ್ಥೆಗಳಲ್ಲೂ ಧರ್ಮಬೋಧನೆ ಇರಬೇಕೆಂದೂ, ಇನ್ನು ಕೆಲವರು ಯಾವ ಶಿಕ್ಷಣ ಸಂಸ್ಥೆಗಳಲ್ಲೂ ಧರ್ಮ ಬೋಧನೆಯ ಅಂಶಗಳು ಇರಬಾರದೆಂದು ವಾದಿಸಿದರು. ಕಡೆಗೆ ಖಾಸಗಿಯವರಿಗೆ ಧಾರ್ಮಿಕ ಬೋಧನೆಯ ಅವಕಾಶವನ್ನು ಮುಕ್ತವಾಗಿಡಲಾಯಿತು. ೩೦ನೇ ವಿಧಿಯು ಧಾರ್ಮಿಕ ಮತ್ತು ಭಾಷಿಕ ಅಲ್ಪಸಂಖ್ಯಾತರು ತಮ್ಮದೇ ಸಂಪೂರ್ಣ ಆಡಳಿತದ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಅವಕಾಶ ಕೊಡುತ್ತದೆ. ಈ ವಿಧಿಯ ಅಂಗೀಕಾರಕ್ಕೆ ಮುಂಚೆ ಸಾಕಷ್ಟು ಚರ್ಚೆಗಳಾಗಿವೆ. ಶ್ರೀ ಲಾರಿ ಮುಂತಾದ ಕೆಲವರು ಈಗ ಕೊಟ್ಟಿರುವ ಅವಕಾಶವನ್ನು ಮತ್ತಷ್ಟು ವಿಸ್ತರಿಸಬೇಕೆಂದು ವಾದಿಸಿದರೆ ಶ್ರೀ ದಾಮೋದರ ಸ್ವರೂಪ ಸೇಥ್ ಅವರು ಈ ಅವಕಾಶ ಸೆಕೆಂಡರಿ ಶಿಕ್ಷಣದವರೆಗೆ ಮಾತ್ರ ಅವಕಾಶವಿರಬೇಕೆಂದು ವಾದಿಸಿದರು. ಧರ್ಮಾಧಾರಿತ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಸಲ್ಲದು ಎಂದರು. “ಧರ್ಮ ಮತ್ತು ಕೋಮಿನ ಮೇಲೆ ರಚಿತವಾದ ಶಿಕ್ಷಣ ಸಂಸ್ಥೆಗಳು ಜಾತ್ಯತೀತತೆ ಹಾಗೂ ರಾಷ್ಟ್ರೀಯ ಏಕತೆಗೆ ಅಡ್ಡಿಯಾಗುತ್ತವೆ. ಸಂಕುಚಿತವಾದ ದೇಶ ವಿರೋಧಿ ದೃಷ್ಟಿ ಮತ್ತು ಕೋಮುವಾದವನ್ನು ಬೆಳೆಸುತ್ತವೆ. ಅಹಿತಕರ ಪರಿಣಾಮವುಂಟು ಮಾಡುತ್ತವೆ” ಎಂದು ಪ್ರತಿ ಪಾದಿಸಿದರು.
(ಈ ಎಲ್ಲ ವಿವರಗಳು M.V. Pylee ಅವರು ಬರೆದಿರುವ `Constitutional Government in India’ – ಎಂಬ ಗ್ರಂಥದಲ್ಲಿವೆ).
ಹೀಗೆ ಸುದೀರ್ಘ ಚರ್ಚೆಯ ನಂತರ ನಮ್ಮ ದೇಶವು ಸಂವಿಧಾನಾತ್ಮಕವಾಗಿ ಸಹಿಷ್ಣು ಧಾರ್ಮಿಕ ನೀತಿಯನ್ನು ಒಪ್ಪಿಕೊಂಡಿದೆ. ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೂ ಯಾವುದೇ ಧರ್ಮಕ್ಕೆ ಬದ್ಧವಾಗದೆ ಆಡಳಿತ ನಡೆಸುವುದು ಸಂವಿಧಾನಾತ್ಮಕ ಕರ್ತವ್ಯವೂ ಹೌದು; ನೈತಿಕ ಜವಾಬ್ದಾರಿಯೂ ಹೌದು. ಮಂತ್ರಿಮಾನ್ಯರು ವೈಯಕ್ತಿಕ ಧಾರ್ಮಿಕ ನಂಬಿಕೆಗಳನ್ನು ಇಟ್ಟುಕೊಳ್ಳಲು ಸ್ವತಂತ್ರರು. ಆ ಹಕ್ಕು ಅವರಿಗಿದೆ. ಆದರೆ ತಮ್ಮ ಧಾರ್ಮಿಕ ನಂಬಿಕೆಗಳನ್ನು ಸರ್ಕಾರೀಕರಣಗೊಳಿಸುವ ಹಕ್ಕು ಅವರಿಗಿಲ್ಲ. ಸರ್ಕಾರವು ಸಂವಿಧಾನಾತ್ಮಕ ಬದ್ಧತೆಯಿಂದ ನಡೆಯುವ ಸಾರ್ವಜನಿಕ ಪ್ರಜಾಸತ್ತಾತ್ಮಕ ಸಂಸ್ಥೆ; ಮಂತ್ರಿ, ಮುಖ್ಯಮಂತ್ರಿಗಳ ವೈಯಕ್ತಿಕ ಧಾರ್ಮಿಕ ನಂಬಿಕೆಗೆ ಬದ್ಧವಾಗಿ ನಡೆಯುವ ಖಾಸಗಿ ಸಂಸ್ಥೆಯಲ್ಲ. ತಂತಮ್ಮ ಧಾರ್ಮಿಕ ನಂಬಿಕೆ; ನೀತಿ-ನಿಯಮಗಳಿಗೆ ಬದ್ಧವಾಗಿ ಬದುಕಲು ಮಠಮಾನ್ಯಗಳಿವೆ. ಸರ್ಕಾರದ ಸಚಿವ ಮಂಡಲಕ್ಕೆ ಮತ್ತು ಮಠಮಾನ್ಯಗಳಿಗೆ ಈ ವ್ಯತ್ಯಾಸದ ವಿವೇಕ ಗೊತ್ತಿರಬೇಕು. ಇಲ್ಲದಿದ್ದರೆ ತಂತಮ್ಮ ಪರಿಮಿತಿಗಳನ್ನು ಮೀರಿ ವರ್ತಿಸುವ ವೈಪರೀತ್ಯಗಳು ವಿಜೃಂಭಿಸುತ್ತವೆ. ಆಗ ಸರ್ಕಾರದಲ್ಲಿ ಮಠಗಳೂ, ಮಠಗಳಲ್ಲಿ ಸರ್ಕಾರವೂ ಕೆಲಸ ಮಾಡತೊಡಗುತ್ತವೆ. ಸಂವಿಧಾನ ವಿರೋಧಿಯಾಗುತ್ತವೆ.
ಹಾಗೆ ನೋಡಿದರೆ ಪ್ರಮುಖ ಮಠಮಾನ್ಯಗಳ ಪ್ರಭಾವವು ಸರ್ಕಾರದ ಮೇಲೆ ಹಿಂದಿನಿಂದಲೂ ಇದ್ದೇ ಇದೆ. ಅಂತೆಯೇ ಮುಖ್ಯಮಂತ್ರಿ ಮತ್ತು ಮಂತ್ರಿ ಮಹೋದಯರು ಪ್ರಮುಖ ಮಠಾಧೀಶರ ಬಳಿಗೆ ತೆರಳಿ ಆಶೀರ್ವಾದ ಪಡೆಯುವ ಪದ್ಧತಿಯು ಇದೆ. ಇದಕ್ಕೆ ಕೆಲವರು ಅಪವಾದವಾಗಿರಬಹುದು. ಅಂಥವರ ಸಂಖ್ಯೆ ತೀರಾ ಕಡಿಮೆ. ಮಠಾಧೀಶರು ಮತ್ತು ಮಂತ್ರಿ ಮಹೋದಯರ ಸಂಬಂಧವು ಆಶೀರ್ವಾದದ ಹಂತಕ್ಕೆ ನಿಂತಿದ್ದರೆ, ಸಣ್ಣಪುಟ್ಟ ಪ್ರಭಾವಗಳ ಪರಿಮಿತಿಯಲ್ಲಿದ್ದರೆ ಅಷ್ಟೇನೂ ಅಪಾಯಕಾರಿಯಾಗುತ್ತಿರಲಿಲ್ಲ. ಮಠಗಳು ಸರ್ಕಾರವನ್ನೇ ನಿಯಂತ್ರಿಸುವಷ್ಟು ಪ್ರಬಲವಾದರೆ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಈಗ ಯಾವ ಮಠಗಳೂ ಜಾತಿ ಕೇಂದ್ರವನ್ನು ಮೀರಿಲ್ಲವೆಂಬುದನ್ನು ಗಮನಿಸಿದಾಗ ಪ್ರಜಾಪ್ರಭುತ್ವದ ಆತ್ಮಕ್ಕೆ ಆಗುವ ಆಘಾತ ಅರ್ಥವಾಗುತ್ತದೆ. ಮಠಾಧೀಶರು ಧಾರ್ಮಿಕ ಕ್ಷೇತ್ರವನ್ನು ಮೀರಿ ಅಥವಾ ಮರೆತು, ರಾಜಕೀಯ ಪ್ರಭುತ್ವದ ಮೇಲೆ ಪ್ರಭಾವ ಬೀರುವ ಶಕ್ತಿ ಪಡೆದಿರುವುದರಿಂದ ಈಗ ಜಾತಿಗೊಬ್ಬ ಜಗದ್ಗುರುವಿನ ಜನ್ಮವಾಗಿದೆ. ಮಠಮಾನ್ಯಗಳ ಸಂಖ್ಯೆ ಹೆಚ್ಚಾಗಿದೆ. ಆದರೂ ಲಿಂಗಾಯತ, ಬ್ರಾಹ್ಮಣ ಮತ್ತು ಒಕ್ಕಲಿಗ ಮಠಾಧೀಶರಷ್ಟು ಇತರೆ ಜಾತಿಗಳ ಮಠಾಧೀಶರು ಸರ್ಕಾರಗಳನ್ನು ನಿಯಂತ್ರಿಸುವ, ಪ್ರಭಾವಿಸುವ ಪ್ರಮುಖ ಶಕ್ತಿಗಳಾಗಿಲ್ಲ. ಸಾಮಾಜಿಕ ಶ್ರೇಣೀಕರಣದಲ್ಲೇ ಇದಕ್ಕೆ ಉತ್ತರವಿದೆ. ಪ್ರಮುಖ ಶ್ರೇಣಿಯವರು ಪ್ರಬಲರಾಗಿದ್ದಾರೆ; ಉಳಿದವರು ಸರದಿ ಸಾಲಲ್ಲಿದ್ದಾರೆ.
ಒಮ್ಮೆ ಹೀಗಾಯಿತು : ಅದು ಶ್ರೀ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲ. ಶ್ರೀ ಎಚ್. ವಿಶ್ವನಾಥ್ ಅವರು ಶಿಕ್ಷಣ ಸಚಿವರು. ಅನುದಾನ ಪಡೆಯುವ ಮಠಮಾನ್ಯಗಳ ಶಾಲೆಗಳು ಶಿಕ್ಷಣ ಸಂಸ್ಥೆಗಳು ಲೆಕ್ಕ ಒಪ್ಪಿಸಬೇಕೆಂದರು. ಇದಕ್ಕೆ ಕೆಲವು ಮಠಾಧೀಶರ ಪ್ರಬಲ ವಿರೋಧ ವ್ಯಕ್ತವಾಯಿತು. ಶಿಕ್ಷಣ ಸಚಿವರು ‘ಅನುದಾನ ಪಡೆದ ಮೇಲೆ ಮಠಾಧೀಶರ ಶಾಲೆಗಳೂ ಒಂದೇ; ಸಾಮಾನ್ಯರ ಶಾಲೆಗಳೂ ಒಂದೇ. ಸರ್ಕಾರಕ್ಕೆ ಎರಡೂ ಸಮಾನ ಎಂಬ ನಿಲುವು ತಾಳಿದರು. ಈ ನಿಲುವಿಗೆ ಮುಖ್ಯಮಂತ್ರಿಗಳ ಬೆಂಬಲವೂ ಇತ್ತು. ಒಂದು ಘಟ್ಟದಲ್ಲಿ ಒಬ್ಬ ಪ್ರಮುಖ ಮಠಾಧೀಶರು ತಮ್ಮ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದ ಕಡತದೊಂದಿಗೆ ಮಠಕ್ಕೆ ಬರಬೇಕೆಂದು ವಿಶ್ವನಾಥ್ ಅವರಿಗೆ ತಾಕೀತು ಮಾಡಿದರು. ವಿಶ್ವನಾಥ್ ಅವರೇನೂ ಮಠಮಾನ್ಯಗಳ ವಿರೋಧಿಯಲ್ಲ; ತಮ್ಮ ಜಾತಿಯ (ಕುರುಬರ) ಮಠದ ಸ್ಥಾಪನೆಗಾಗಿ ಸಾಕಷ್ಟು ಶ್ರಮಿಸಿದವರು. ಆದರೆ ಈ ಸಂದರ್ಭದಲ್ಲಿ ಅವರು ನಿಜವಾದ ಸರ್ಕಾರವಾಗಿ ವರ್ತಿಸಿದರು. ‘ನಾನು ಶಿಕ್ಷಣ ಸಚಿವನಾಗಿ ಕಡತ ತೆಗೆದುಕೊಂಡು ನಿಮ್ಮ ಮಠಕ್ಕೆ ಬರಲು ಸಾಧ್ಯವೇ ಇಲ್ಲ. ಹಾಗೆ ಕಡತ ಸಮೇತ ಬರುವುದಿಲ್ಲ. ಭಕ್ತನಾಗಿ ಬೇಕಾದರೆ ಬರುತ್ತೇನೆ. ಕಡತದ ವಿಷಯಕ್ಕೆ ನಿಮ್ಮವರೇ ವಿಧಾನಸೌಧಕ್ಕೆ ಬರಬೇಕು’ – ಎಂದು ಉತ್ತರಿಸಿದರು. ಪ್ರಜಾಪ್ರಭುತ್ವದ ಮಾನ ಉಳಿಸಿದರು.
ಆದರೆ ವಿಶ್ವನಾಥ್ ಅವರ ನಿಲುವಿನಿಂದ ಅನೇಕ ಪ್ರಬಲ ಮಠಾಧೀಶರು ಸಿಟ್ಟಾದರು. ಕೆಲವು ರಾಜಕಾರಣಿಗಳು ಇದರ ದುರ್ಲಾಭ ಪಡೆಯಲು ಮುಂದಾದರು. ಬೆಂಗಳೂರಲ್ಲೊಂದು ಸಮಾರಂಭ; ವೇದಿಕೆಯಲ್ಲಿ ಮಠಾಧೀಶರೇ ತುಂಬಿದ್ದಾರೆ. ಮಾಜಿ ಮುಖ್ಯಮಂತ್ರಿಯೊಬ್ಬರು ‘ಈ ಸರ್ಕಾರಕ್ಕೆ ಮಠಾಧೀಶರ ಬಗ್ಗೆ ಗೌರವವಿಲ್ಲ’ ಎಂದು ಟೀಕಿಸಿದರು. ಅದೇ ವೇದಿಕೆಯಲ್ಲಿದ್ದ ಎಸ್.ಎಂ. ಕೃಷ್ಣ ಅವರು ಉತ್ತರಿಸಲೇಬೇಕಾಯಿತು. ‘ನಮ್ಮ ಸರ್ಕಾರಕ್ಕೆ ಮಠಾಧೀಶರ ಬಗ್ಗೆ ಗೌರವವಿದೆ. ನಮ್ಮಿಂದ ನೋವಾಗಿದ್ದರೆ ಕ್ಷಮಿಸಬೇಕು’ ಎಂದರು. ಆದರೆ, ವಿಶ್ವನಾಥ್ ಅವರ ನಿಲುವಿಗೆ ಅಡ್ಡಿಮಾಡಲಿಲ್ಲ. ‘ನಿಮ್ಮ ಕೆಲಸ ನೀವು ಮಾಡಿ’ ಎಂದರು.
ಹೀಗೆ ಆಗಾಗ್ಗೆ ಗುಟುರು ಹಾಕುತ್ತಿದ್ದ ಮಠಾಧೀಶರು ತಮ್ಮ ಪ್ರಾಬಲ್ಯವನ್ನು ಪೂರ್ಣ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳಲು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪನವರು ಕಾರಣವಾಗುತ್ತಿದ್ದಾರೆ. ತಮ್ಮ ಬಜೆಟ್‌ನಲ್ಲಿ ಮಠಮಾನ್ಯಗಳಿಗೆ ಧಾರಾಳವಾಗಿ ಹಣ ನೀಡಿದ್ದಾರೆ. ಮಠಗಳ ಸಮಾರಂಭಗಳಲ್ಲಿ ಭಾಗವಹಿಸಿದಾಗ ದಿಢೀರ್ ಧನ ಸಹಾಯವನ್ನು ಘೋಷಣೆ ಮಾಡುತ್ತಿದ್ದಾರೆ. ಆಶೀರ್ವಾದದ ಹೆಸರಿನಲ್ಲಿ ಸರ್ಕಾರವೇ ಶರಣಾದಂತೆ ಕಾಣುತ್ತಿದೆ. ಈ ಮಧ್ಯೆ ಒಂದು ಜಾತಿಯ ಮಠಾಧೀಶರಿಗೆ ಮನ್ನಣೆ ಜಾಸ್ತಿಯಾದರೆ ಇನ್ನೊಂದು ಜಾತಿಯ ಮಠಾಧೀಶರಿಗೆ ಸಿಟ್ಟು ಬರುತ್ತದೆ. ‘ಸರ್ಕಾರ ಯಾರಿಗೆ ಸೇರಿದ್ದು ? ಒಕ್ಕಲಿಗ ಅಧಿಕಾರಿಗಳನ್ನು ಕೇಳುವವರೇ ಇಲ್ಲ’ ಎಂದು ಆದಿಚುಂಚನಗಿರಿ ಸ್ವಾಮೀಜಿ ಒಂದು ಗುಟುರು ಹಾಕಿದ ಕೂಡಲೇ
ಮುಖ್ಯಮಂತ್ರಿ ಯಡ್ಯೂರಪ್ಪನವರು ಅವರ ಬಳಿ ಧಾವಿಸಿ ವಿವರಣೆ ಕೊಡುತ್ತಾರೆ. ಸಣ್ಣಪುಟ್ಟ ಜಾತಿಗಳ ‘ಜಗದ್ಗುರು’ಗಳಿಗೆ ಕಾವಿ ತೊಟ್ಟಿದ್ದೇ ಭಾಗ್ಯ! ಏನಾದರೂ ಆಶ್ವಾಸನೆ, ಹಣಸಹಾಯಗಳು ಸಿಗಬೇಕಾದರೆ ಅವರವರ ಜಾತಿಯ ಸಮ್ಮೇಳನ ನಡೆಯಬೇಕು; ಅಲ್ಲಿಗೆ ಮುಖ್ಯಮಂತ್ರಿಗಳು ಆಗಮಿಸಬೇಕು. ಸಾಮಾಜಿಕ ಶ್ರೇಣೀಕರಣಕ್ಕನುಗುಣವಾಗಿ ಅಲ್ಪಸ್ವಲ್ಪ ಪಡೆಯಬೇಕು.
ಶ್ರೀ ಎಸ್. ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ನಾನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದ್ದೆ. ಬಂಗಾರಪ್ಪನವರು ಪುಟ್ಟಪರ್ತಿ ಸಾಯಿಬಾಬ ಅವರಿಗೆ ಒಂದು ಕೋಟಿ ರೂಪಾಯಿ ಕೊಡುವುದಾಗಿ ಘೋಷಿಸಿದರು. ನಾನು ಸರ್ಕಾರದ ಹಣವನ್ನು ಹೀಗೆ ವ್ಯಯ ಮಾಡಬಾರದೆಂದು ಟೀಕಿಸಿ ಪತ್ರಿಕೆಗಳಿಗೆ ಬರೆದೆ. ಬಂಗಾರಪ್ಪನವರು ನನ್ನನ್ನು ಕರೆಸಿಕೊಂಡು ಸಾಯಿಬಾಬ ಆಸ್ಪತ್ರೆಯಲ್ಲಿ ಬಡವರ ಚಿಕಿತ್ಸೆಗಾಗಿ ಹಣ ಕೊಟ್ಟಿರುವುದಾಗಿಯೂ ತಾವು ಸಾಯಿ ಬಾಬ ಅವರ ಬಗ್ಗೆ ಗೌರವ ತಾಳಿದ್ದರೂ ಅವರ ಭಕ್ತರಲ್ಲವೆಂದೂ ತಿಳಿಸಿದರು. ಅದೇನೇ ಇರಲಿ, ಮಠಮಾನ್ಯಗಳನ್ನೂ ಒಳಗೊಂಡಂತೆ ನಿರ್ದಿಷ್ಟ ಯೋಜನೆಗಳಿಗಾಗಿ ಸರ್ಕಾರದ ಸಹಾಯ ಅಪೇಕ್ಷಿಸುವ ಹಕ್ಕು ಎಲ್ಲರಿಗೂ ಇದೆ. ಹಾಗೆ ಅಪೇಕ್ಷಿಸಿದವರ ಯೋಜನೆಯ ರೂಪರೇಷೆಗಳನ್ನು ಪರಿಶೀಲಿಸಿ ಸರ್ಕಾರವು ಹಣ ಮಂಜೂರು ಮಾಡುವುದು ನ್ಯಾಯಯುತ ಮಾರ್ಗ. ಅದನ್ನು ಬಿಟ್ಟು ಯಡ್ಯೂರಪ್ಪನವರು ಜನರ ಹಣವನ್ನು ಬೇಕಾಬಿಟ್ಟಿ ಹಂಚುವುದು ಅವರೇ ಪಠಿಸುವ ‘ಅಭಿವೃದ್ಧಿ’ ಮಂತ್ರಕ್ಕೆ ತೀರಾ ವಿರುದ್ಧವಾದುದು. ಸರ್ಕಾರವನ್ನು ಜನರ ಬಳಿಗೆ ಕೊಂಡೊಯ್ಯುವ ಬದಲು ಮಠಗಳಿಗೆ ಕೊಂಡೊಯ್ದು ಕೈಕಟ್ಟಿ ನಿಲ್ಲುವುದು ಜನರಿಗೆ ಮಾಡುವ ಅವಮಾನ.
ಶ್ರೀ ಯಡ್ಯೂರಪ್ಪನವರು ಅಧಿಕಾರ ಸ್ವೀಕರಿಸಿದ ದಿನ ಮುಖ್ಯಮಂತ್ರಿಗಳ ಕುರ್ಚಿಗೆ ಐದು ಗಂಟೆಗಳ ಕಾಲ ಪೂಜೆ ಸಲ್ಲಿಸಲಾಯಿತೆಂದು ವರದಿಯಾಗಿತ್ತು. ಅದು ನಿಜವೂ ಆಗಿತ್ತು. ಹೋಮಾದಿ ಕ್ರಿಯೆಗಳಿಂದ ಐದು ಗಂಟೆಗಳ ಕಾಲ ಕುರ್ಚಿಯನ್ನು ಕಟ್ಟಿಹಾಕಲಾಗಿತ್ತು. ವಿಧಾನ ಸೌಧದ ಅಧಿಕೃತ ಕಚೇರಿಯಲ್ಲಿ ಹೀಗೆ ಹೋಮ ಹವನ ಮಾಡಿಸುವುದು ಸಂವಿಧಾನಾತ್ಮಕ ತತ್ವಗಳಿಗೆ ವಿರುದ್ಧವಾದುದು. ಹೋಮ-ಹವನಗಳಲ್ಲಿ ಎಲ್ಲರಿಗಿಂತ ಮುಂಚೂಣಿಯಲ್ಲಿರುವ ಶ್ರೀ ದೇವೇಗೌಡರು ಸಹ ಹೀಗೆಲ್ಲ ಮಾಡಿರಲಿಲ್ಲ. ಸಣ್ಣಪುಟ್ಟ ಪೂಜೆಗಳ ಮೂಲಕ ಕಚೇರಿಯ ಪ್ರವೇಶ ಮಾಡಿದ ಕೆಲ ಮುಖ್ಯಮಂತ್ರಿಗಳೂ ಮಂತ್ರಿಗಳೂ ನಮ್ಮಲ್ಲಿ ಆಗಿ ಹೋಗಿದ್ದಾರೆ. ಆದರೆ ಪೂರ್ವಪ್ರಮಾಣಗಳನ್ನೆಲ್ಲ ಮೀರಿಸಿದ ಸಾಧನೆ ಶ್ರೀ ಯಡ್ಯೂರಪ್ಪನವರದ್ದು. ಅಧಿಕಾರಸ್ಥರು ಅವರವರ ಮನೆಗಳಲ್ಲಿ ಪೂಜಾಕ್ರಿಯೆಗಳನ್ನು ಮಾಡಿಕೊಂಡರೆ ನಾವ್ಯಾರೂ ಅದನ್ನು ಸಂವಿಧಾನ ವಿರೋಧಿಯೆಂದು ಕರೆಯಲಾಗದು. ಆದರೆ ವಿಧಾನ ಸೌಧದಲ್ಲಿ ಮಠಮಾನ್ಯಗಳಲ್ಲಿ ನಡೆದಂತೆ ಹೋಮ-ಹವನಾದಿ ಪೂಜಾಕ್ರಿಯೆಗಳನ್ನು ನಡೆಸುವುದು ಸಮರ್ಥನೀಯವಲ್ಲ. ಯಾವ ಧರ್ಮದವರೂ ಇಲ್ಲಿ ತಮ್ಮ ಧರ್ಮಾಚರಣೆ ಮಾಡಬಾರದು. ವಿಧಾನಸೌಧಕ್ಕೆ ಸಂವಿಧಾನವೇ ಸರ್ವಸ್ವವಾಗಬೇಕು. ಆದರೇನು ಮಾಡುವುದು? ಈಗ ಭೌತಿಕವಾಗಿ ಮತ್ತು ಮಾನಸಿಕವಾಗಿ, ವಿಧಾನಸೌಧಕ್ಕೆ ಮಠ ಮತ್ತು ಮಠಕ್ಕೆ ವಿಧಾನಸೌಧ ಪ್ರವೇಶ ಮಾಡಿದೆ; ಸಂವಿಧಾನವನ್ನು ಅಣಕಿಸುತ್ತಿದೆ.
*****
(ಈ ಭಾನುವಾರ – ವಾರಪತ್ರಿಕೆ)