ಮಿಂಚು

ಮಿಂಚು

“ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು…! ನಾಲ್ಕು ಜನ ನೋಡಿದರೆ ಏನು ಅಂದಾರು?”

ಅನ್ನಲಿ ಏನೇ ಅನ್ನಲಿ ನಾನು ಯಾವ ಜನಕ್ಕೂ ಹೆದರುವದಿಲ್ಲ ನನ್ನ ತಲೆ ಈ ದಿನ ಒಡೆದು ಹೋಗಲಿ! ಯಾರಿಗೆ ಬೇಕಾಗಿದೆ??”

“ನನಗೆ ಬೇಕಾದದ್ದು ಸಾವಿತ್ರಿ! ಹಬ್ಬದ ದಿನ ಹೀಗೆ ಅಶುಭ ನುಡಿಯಬೇಡ. ನನಗೆ ಎಷ್ಟು ವೇದನೆಯಾಗುತ್ತಿದೆ ನೀನು ಬಲ್ಲೆಯಾ?…. ಹೀಗೆ ನೀನು ಮಾತಾನಾಡಬೇಡ.”

ಸತ್ಯೇಂದ್ರ ಅವಳ ತಲೆಯನ್ನು ತನ್ನ ಹೃದಯದಲ್ಲಿಟ್ಟುಕೊಂಡ. ಅವಳ ತಲೆಯಮೇಲೆ ಕೈಯಾಡಿಸಿದ. ಆದರೂ ಸಾವಿತ್ರಿಯ ಕೋಪ ನೆತ್ತಿಗೇರಿತ್ತು. ಅವಳ ಮನಸ್ಸು ಅವಳ ಹಿಡಿತದಲ್ಲಿಯೇ ಇರಲಿಲ್ಲ. “ನೀವು ಏನೇ ಹೇಳಿರಿ. ನನಗೆ ಸಮಾಧಾನವಿಲ್ಲ….. ನಾನೇನು ಅಂಥ ಅಪರಾಧ ಮಾಡಿದ್ದೇನೆ?…. ಅಯ್ಯೋ ನನ್ನದೇ ತಪ್ಪು! ನನಗೇ ಶಿಕ್ಷೆ!!…. ನನಗೆ ಹೊಡೆಯಲು ನಿಮ್ಮ ಕೈಗಳಾದರೂ ಹೇಗೆ ಮೇಲೆ ಬಂದವು?”

ಸಾವಿತ್ರಿ ಜೋರಾಗಿ ಬಿಕ್ಕಿಸಿ ಬಿಕ್ಕಿಸಿ ಅಳಹತ್ತಿದಳು.

“ಸಾವಿತ್ರಿ ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತೇನೆ…. ಇನ್ನು ಮುಂದೆ ಹೀಗೆ…”

“ಸಾಕು! ಸಾಕು! ಎಷ್ಟು ಸಲ ಅಂದಿರುವಿರಿ? ನನಗೆ ಈ ಸಂಸಾರವೇ ಬೇಡ. ನೀವೇನೋ! ನಿಮ್ಮ ಬಳಗದವರೇನೋ!!…”

“ಸಾವಿತ್ರಿ!.. ನಿನ್ನ ವಿರುದ್ಧವಾಗಿ ನಾನು ಹೀಗೆ ಮಾಡಲಿಲ್ಲ. ಏನೋ ತಾಯಿಯ ಕರುಳು! ನಮ್ಮ ಮದುವೆಯ ಸಂಬಂಧ ಅವಳಿಗೆ ಅಸಮಾಧಾನವಿತ್ತು. ಅವಳ ಸಮಾಧಾನವಾಗಬೇಕೆಂದು…”

“ಹೂಂ! ಇರಲಿ. ನಿಮ್ಮ ತಾಯಿಗಾಗಿ ನೀವು ಬೇಕಾದದ್ದನ್ನು ಮಾಡುವಿರಿ. ನನಗಾಗಿ..?”

ಸತ್ಯೇಂದ್ರನಿಗೆ ಹಳೆಯ ದಿನಗಳು ಕಣ್ಣ ಮುಂದೆ ಹಾದವು. “ಸಾವಿತ್ರಿ! ನಿನ್ನ ಸಲುವಾಗಿ ನಾನು ಏನು ಮಾಡಿಲ್ಲ?? ಬಣ್ಣ ಬಣ್ಣದ ಪಾತರಗಿತ್ತಿಯನ್ನು ಮಾಸದಂತೆ ಮುಟ್ಟುವ ಹಾಗೆ ನಿನ್ನನ್ನು ನನ್ನ ಅಂಗೈಯಲ್ಲಿ ಸಲುಹಿದ್ದೇನೆ. ಎಷ್ಟು ಸಲ ನಿನ್ನ ಸಲುವಾಗಿ ಹಾತೊರೆದಿಲ್ಲ? ನೀನು ಬೇನೆಬಂದು ಮಲಗಿದ್ದಾಗ, ಎಷ್ಟು ಸಲ ನಿನ್ನ ಸಲುವಾಗಿ ಓಡಾಡಿಲ್ಲ?… ನಾವಿಬ್ಬರೂ ಪ್ರೀತಿಯಿಂದ ತಿರುಗಾಡಿದ ದಿನಗಳನ್ನೆಲ್ಲ ಈಗಾಗಾಗಲೇ ಮರೆತು ಬಿಟ್ಟೆಯೇನು?

“ಹೂಂ! ಆ ಪಾತರಗಿತ್ತಿಯ ಪಕ್ಕ ಈಗ ಮುರಿದು ಬಿಟ್ಟಿದೆ! ಮನೆಯಲ್ಲಿ ಅವಳದೇನು ನಡೆಯುವುದು? ಅವಳದೇನು ಅಧಿಕಾರವಿದೆ ಈ ಮನೆಯಲ್ಲಿ…? ಏನು ತಮ್ಮಂದಿರು ಕಾಲೇಜ ಅಭ್ಯಾಸಕ್ಕೆಂದು ಬಂದು ಚೈನಿ ಹೊಡೀಬೇಕು! ನಾನು ಮಾತ್ರ ಅಡುಗೆಯವಳ ಹಾಗೆ ಒಲೆಯ ಮುಂದೆ ಕೂಡಬೇಕು. ನಿಮ್ಮ ತಮ್ಮಂದಿರಿಗೆ ಹೊಸ ಹೊಸ ಬಟ್ಟೆಗಳು! ನನಗೋ ಒಂದು ಹರಕು ಪತ್ತಲು!… ಈ ದಿನ ಅವರದು ಹಬ್ಬವಿತ್ತೇ ಬಟ್ಟೆಗಳನ್ನು ತಂದುಕೊಡಲು? ಪ್ರತಿಯೊಂದು ಮಾತಿಗೂ ಹಣವಿಲ್ಲವೆಂದು ಹೇಳುವವರು, ಸಂಸಾರವನ್ನು ಸಾಗಿಸುವುದೇ ತ್ರಾಸವೆಂದು ಹೇಳುವವರು ಈಗ ಹೇಗೆ ಎಲ್ಲಿಂದ ತಂದಿರಿ ಹಣವನ್ನು?… ನಿಮಗೆ ನಾನೆಲ್ಲಿ ಬೇಕಾಗಿದ್ದೇನೆ?”

ಸಾವಿತ್ರಿ ಮತ್ತೆ ಮತ್ತೆ ಬಿಕ್ಕಿಸಿ ಅತ್ತಳು. ಸತ್ಯೇಂದ್ರ ಅವಳನ್ನು ಸಮಾಧಾನ ಮಾಡುತ್ತ ಹೇಳಿದ; “ಆ ಹಣ ನನ್ನದಲ್ಲ! ಅವ್ವನೇ ಕಳಿಸಿಕೊಟ್ಟದ್ದು.”

“ಸುಮ್ಮನೇ ಏಕೆ ಸುಳ್ಳು ಬೊಗಳುವಿರಿ? ಈ ದಿನ ವಟಸಾವಿತ್ರಿ ಹಬ್ಬವಿದೆ! ಹಬ್ಬದ ದಿನವಾದರೂ ಸುಳ್ಳು ಮಾತನಾಡಬೇಡಿರಿ. ನನಗೆ ಈ ನಾಟಕವೇನು ತಿಳಿಯುವದಿಲ್ಲವೇ?”

“ಸಾವಿತ್ರಿ, ಏನಾದರೂ ನುಡಿಯಬೇಡ. ಅನ್ಯಥಾ ಭಾವಿಸಿ ಮನಸ್ಸಿಗೆ ತ್ರಾಸ ಮಾಡಿಕೊಳ್ಳಬೇಡ. ನನ್ನ ಮನಸ್ಸು ನಿನಗೆ ತಿಳಿಯದೇ? ನಮ್ಮ ಪ್ರೇಮವಿವಾಹವನ್ನು ಈ ಮೂರೇ ವರುಷಗಳಲ್ಲಿ ಮರೆತು ಬಿಟ್ಟೆಯಾ?”

“ಆಗ ನಿಮಗೊಂದು ಹೆಣ್ಣು ಬೇಕಾಗಿತ್ತು!”

“ಸಾವಿತ್ರಿ, ಸಾವಿತ್ರಿ, ಏನಂದಿ? ಅಯ್ಯೋ, ನಾನು ಇಷ್ಟರ ಮಟ್ಟಿಗೇನೆ ಇರುವೆನೇ? ಎಂಥವಳು ನೀನು?”

“ಏಕೆ? ಮತ್ತೆ ಹೊಡೆಯಬೇಕೆನ್ನುವಿರೇನು?… ನಾನು ಏನು ಅಂದರೂ ನಿಮಗೆ ಸಹನೆಯಿಲ್ಲ. ಹೊಡೆಯಿರಿ! ನೀವು ಗಂಡಸರು ಎಂದು ನಿಮಗೆ ಇಷ್ಟು ದರ್ಪವೆ???”

“ಆಯಿತೇ ಸಾವಿತ್ರಿ. ನನ್ನ ಬಗ್ಗೆ ನಿನ್ನ ಭಾವನೆ ಇಷ್ಟೆ ಅಹುದಷ್ಟೆ?”

ಸಾವಿತ್ರಿಯ ಮಾತುಗಳನ್ನು ಕೇಳಿ ಸತ್ಯೇಂದ್ರನಿಗೆ ಅತ್ಯಂತ ಕಳವಳವಾಯಿತು. ಮದುವೆಯಾಗುವ ಮುನ್ನ ಸಾವಿತ್ರಿಯನ್ನು ಪ್ರೀತಿಸಿದುದು, ತಂದೆತಾಯಿಗಳ ವಿರುದ್ಧ ಅವಳನ್ನು ಲಗ್ನ ಮಾಡಿಕೊಂಡುದುದು ಎಲ್ಲವೂ ನೆನಪಾದುವು, ಸಾವಿತ್ರಿಯ ಮಾತುಗಳನ್ನು ಕೇಳಿ, ಅವನ ಕನಸಿನ ಗೋಪುರ ಒಮ್ಮೆಲೆ ಕಳಚಿ ಬಿದ್ದಂತಾಯಿತು. ಸಾಯಲಿರುವ ಹಾವನ್ನು ಬಡಿಗೆಯಿಂದ ಮತ್ತೆ ಕೆಣಕುವಂತೆ ಸಾವಿತ್ರಿ ಹೇಳಿದಳು. “ಅಹುದು!! ಗಂಡಸರು ನೀವು ಹಣಗಳಸುವಿರೆಂದು ಅಹಂಕಾರವಿದೆ, ಆದುದರಿಂದಲೇ ಮನೆಯಲ್ಲಿ ನಿಮ್ಮ ಆಟವನ್ನು ನಡೆಸುವಿರಿ… ಹೂಂ! ನಿಮ್ಮಂತೆ ನನಗೂ ಆ ಸಾಮರ್ಥ್ಯವಿದೆ!!..”

“ಸಾವಿತ್ರಿ! ಸಾವಿತ್ರೀ” ಸತ್ಯೇಂದ್ರ ಅವಳ ಬಾಯಿಯನ್ನು ಗಟ್ಟಿಯಾಗಿ ಹಿಡಿದನು. ಅವಳು ಅವನಿಂದ ಕೊಸರಿಕೊಂಡಳು.

ದಡದಡನೆ ಮೆಟ್ಟಲುಗಳನ್ನಿಳಿದ ಸಪ್ಪಳವಾಯಿತು. ಆ ಧ್ವನಿ, ಸತ್ಯೇಂದ್ರನ ಹೃದಯದಲ್ಲಿ ಪ್ರತಿಧ್ವನಿ ಮಾಡಿತು!

ರಾತ್ರಿ ಬಾಲ್ಕನಿಯಲ್ಲಿ ನಿಂತು, ಏಕಾಕಿಯಾಗಿ ದಾದರದ ಸಮುದ್ರ ದಂಡೆಯ ಕಡೆಗೆ ಸತ್ಯೇಂದ್ರ ನೋಡಿದ. ವಿಶಾಲವಾದ ಸಮುದ್ರ! ವಿಶಾಲವಾದ ನಭೋಮಂಡಲ! ವಿಶಾಲವಾದ ನೆಲ! ಇಂಥ ಸುವಿಶಾಲವಾದ ಕ್ಷೇತ್ರದಲ್ಲಿ ಸತ್ಯೇಂದ್ರನನ್ನು ಪ್ರೀತಿಸುವ ಒಂದು ವ್ಯಕ್ತಿಯೂ ಇಲ್ಲವೆ?

ದಟ್ಟವಾದ ಕರಿ ಮೋಡಗಳು ಎಲ್ಲಿಂದಲೋ ಒಮ್ಮೆಲೇ ಕೂಡಿ ಕೊಂಡವು. ಚಳಕ್ಕನೆ ಝಗಝಗಿಸಿ ಮಿಂಚೊಂದು ಸುಳಿಯಿತು!

ಸತ್ಯೇಂದ್ರನ ದೇಹವೆಲ್ಲ ನಡುಗಿತು! ಮನಸ್ಸು ಇಡಿಯಾಗಿ ಅದುರಿತು.

– ೨ –

ಸತ್ಯೇಂದ್ರನ ಆಗಮನವು ಶಿವಲಿಂಗಯ್ಯನವರಿಗೆ ಅತ್ಯಂತ ಅಚ್ಚರಿಯನ್ನುಂಟುಮಾಡಿತು. ಸತ್ಯೇಂದ್ರನೇನೋ ಅವರ ಕೇವಲ ಮಿತ್ರ. ಮೊದಲಿನಿಂದಲೂ ಅವರಿಬ್ಬರೂ ಕೂಡಿ ಆಡಿದವರು. ಕಾಲೇಜದಲ್ಲಿಯೂ ಕೂಡಿ ಕಲಿತವರು. ನೌಕರಿಗಾಗಿ ಸತ್ಯೇಂದ್ರ ಮುಂಬಯಿಯನ್ನು ಸೇರಿದ್ದನು. ಶಿವಲಿಂಗಯ್ಯನವರು ವಕೀಲರಾಗಿ ಮೀರಜದಲ್ಲಿ ವಾಸವಾಗಿದ್ದರು. ಸತ್ಯೇಂದ್ರನ ಸ್ವಭಾವ ಶಿವಲಿಂಗಯ್ಯನವರಿಗೆ ಸಂಪೂರ್ಣವಾಗಿ ಗೊತ್ತು! ಪತ್ರ ಬರೆಯದೆಯೆ ತಿಳಿಸದೆಯೆ ಎಂದೂ ಅವನು ಬರುವವನಲ್ಲ. ಆದರೆ ಆದಿನ ಒಮ್ಮಿಂದೊಮ್ಮೆಲೆ ಮಟಮಟ ಮದ್ಯಾಹ್ನದ ರೈಲಿಗೆ, ಸತ್ಯೇಂದ್ರ ಬಂದದ್ದು ನೋಡಿ, ಶಿವಲಿಂಗಯ್ಯನವರಿಗೆ ಬಹಳ ಆಶ್ಚರ್ಯವಾಯಿತು.

ಸತ್ಯೇಂದ್ರ ಬಂದವನೇ “ಮೈಯಲ್ಲಿ ಚನ್ನಾಗಿಲ್ಲ. ಮಲಗಿಕೊಳ್ಳುತ್ತೇನೆ” ಎಂದ. ಆದರಾತಿಥ್ಯ ಉಪಚಾರವೆಲ್ಲ ಮುಗಿದ ಮೇಲೆ ಶಿವಲಿಂಗಯ್ಯನವರು “ಪ್ರವಾಸದ ದಣಿವು ಆಗಿರಬೇಕು. ಮಲಗಿಕೋ” ಎಂದು ಹೇಳಿ ಸತ್ಯೇಂದ್ರನಿಗೆ ಒಂದು ಕೋಣೆಯಲ್ಲಿ ವ್ಯವಸ್ಥೆ ಮಾಡಿಕೊಟ್ಟು ಹೋದರು.

ಮರುದಿನ ಬೆಳಗಿನಲ್ಲಿ ಎಷ್ಟು ವೇಳೆಯಾದರೂ ಸತ್ಯೇಂದ್ರ ಏಳಲಿಲ್ಲ. ಶಿವಲಿಂಗಯ್ಯನವರು ಅವನನ್ನು ಎಬ್ಬಿಸಹೋದಾಗ, ಸತ್ಯೇಂದ್ರನಿಗೆ ಮೈಯಲ್ಲಿ ಚೆನ್ನಾಗಿಲ್ಲವೆಂದು ತಿಳಿದು ಬಂದಿತು. ಸತ್ಯೇಂದ್ರನಿಗೆ ಮೈಯಲ್ಲಿ ಉರಿ. ಡಾಕ್ಟರರನ್ನು ಕರೆದುಕೊಂಡು ಬಂದು ತೋರಿಸಿದರು. ಔಷಧ ಸಾಗಿತು.

ಒಂದು ದಿನವಾಯಿತು, ಎರಡು ದಿನವಾಯಿತು, ಮೂರು ದಿನವಾಯಿತು! ಸತ್ಯೇಂದ್ರ ತನ್ನ ಸುದ್ದಿ ಏನೂ ಹೇಳಲಿಲ್ಲ. ಶಿವಲಿಂಗಯ್ಯನವರೇ ಕೇಳಿದರು. “ಸತ್ಯೇಂದ್ರ ರಜೆ ಎಷ್ಟು ದಿನವಿದೆ ನಿನಗೆ? ಏನಾದರೂ ಸೆಕ್ರೆಟರಿಯೇಟಿಗೆ ಮುಂಬೈಗೆ ಕಾಗದ ಬರೆಯಲೇನು?”

“ಬೇಡ. ನಾನು ನೌಕರಿ ಬಿಟ್ಟು ಬಿಟ್ಟಿದ್ದೇನೆ…”

ಶಿವಲಿಂಗಯ್ಯನವರು ಚಕ್ಕನೆ ಚಕಿತರಾದರು! “ಇದೇನು ಹೇಳುವಿ ಸತ್ಯೇಂದ್ರ?” ಎಂದು ಕೇಳಿದರು.

“ಕಾರಕೂನಕಿ-ಸೊಟ್ಟ ನೌಕರಿ ತೆಗೆದುಕೊಂಡು ಏನು ಮಾಡ ಬೇಕು… ಬಿಟ್ಟುಬಿಟ್ಟೆ!”

ಅವನ ಬೇನೆಯಲ್ಲಿ ಹೆಚ್ಚಿಗೆ ಮಾತನಾಡಬಾರದೆಂದು ಶಿವಲಿಂಗಯ್ಯನವರು ವಿಚಾರಿಸಿ, ಅದರ ಬಗ್ಗೆ ಪ್ರಸ್ತಾಪ ಎತ್ತಲಿಲ್ಲ. ಅವರು ಕೇಳಿದರು “ನಿನ್ನ ಹೆಂಡತಿಗೆ ಏನಾದರೂ ಪತ್ರ ಬರೆದು ತಿಳಿಸಲೇನು?”

“ಹಾಂ!” ಎಂದು ಸತ್ಯೇಂದ್ರ ಚೀರಿಕೊಂಡನು, “ಈ ವಿಶಾಲವಾದ ಜಗತ್ತಿನಲ್ಲಿ ನನಗೆ ಯಾರು ಇದ್ದಾರೆ!” ಸತ್ಯೇಂದ್ರ ಪುನಃ ಪುನಃ ಅದೇ ವಾಕ್ಯ ಅಂದನು. “ಅದನ್ನು ನೋಡಲೆಂದೇ ನಿನ್ನಲ್ಲಿಗೆ ಬಂದೆ! ಏನೋ ನಿನ್ನ ನೆನಪಾಯಿತು ಬಂದೆ!… ನೀನಾದರೂ ನನಗೆ ಇರುವೆಯಲ್ಲವೆ?”

ಸತ್ಯೇಂದ್ರನಿಗೆ ಏನೋ ಮನಸ್ಸಿನಲ್ಲಿಯೂ ಚೆನ್ನಾಗಿಲ್ಲವೆಂದು ಶಿವಲಿಂಗಯ್ಯನವರಿಗೆ ಅನಿಸಿತು. ಅವನ ಸಲುವಾಗಿ ಕನಿಕರಪಟ್ಟು, ಅವನ ಹೆಂಡತಿಯ ವಿಳಾಸವನ್ನು ದೊರಕಿಸಿ ಅಲ್ಲಿಗೆ ಪತ್ರ ಬರೆದರು. ಯಾರಿಂದಲೂ ಏನೂ ಉತ್ತರ ಬರಲಿಲ್ಲ. ಸತ್ಯೇಂದ್ರ ಬಂದು ಒಂದು ತಿಂಗಳಾದರೂ ಅವರ ಬಳಗದವರಿಂದ ಏನೂ ಮಾರುತ್ತರ ಬರಲಿಲ್ಲ.

ಶಿವಲಿಂಗಯ್ಯನವರ ಹೆಂಡತಿ ಪಾರ್ವತೀದೇವಿ ಅತಿಥಿ ಸತ್ಕಾರ ಮಾಡಿ ಬೇಸತ್ತಳು. “ಬಳಗದವರೇ ಚಿಂತಿಸುವದಿಲ್ಲವೆಂದ ಮೇಲೆ ನಾವಾದರೂ ಏನು ಮಾಡುವುದು…? ನಮಗಾದರೂ ಲಕ್ಷ್ಮಿ ಫುಕ್ಕಟೆಯಾಗಿ ಸಿಕ್ಕಿಲ್ಲ… ನಾವು ಹೆಂಗಸರು ಎಷ್ಟೆಂದು ದುಡಿಯಬೇಕು?” ಹೆಂಡತಿಯ ಈ ಅನೇಕ ಪ್ರಶ್ನೆಗಳಿಗೆ ವಕೀಲರಿಗೆ ಉತ್ತರ ಕೊಡುವುದು ದುಃಸಾಧ್ಯವಾಯಿತು. ಸತ್ಯೇಂದ್ರನನ್ನು ಹೊರಗಟ್ಟಬೇಕೆ? ಮನೆಯಲ್ಲಿಟ್ಟುಕೊಳ್ಳಬೇಕೆ? ಇದೊಂದು ದೊಡ್ಡ ಪ್ರಶ್ನೆಯೆ ಆಯಿತು.

ಶಿವಲಿಂಗಯ್ಯನವರು ಇದೇ ವಿಚಾರದಲ್ಲಿರುವಾಗ ಡಾಕ್ಟರರು ಹೇಳಿದರು: “ಇವರದು ಸಾಮಾನ್ಯ ಜ್ವರವಲ್ಲ. ಕ್ಷಯದ ಲಕ್ಷಣ ಇವೆ” ಎಂದರು.

ಪತಿಯ ಮುಖಾಂತರ ಪಾರ್ವತೀದೇವಿ ಈ ಮಾತನ್ನು ಕೇಳಿದ ಕೂಡಲೇ ಹೌಹಾರಿದಳು! ಸತ್ಯೇಂದ್ರನನ್ನು ಹೇಗಾದರೂ ಮಾಡಿ ಹೊರಗಿಡಲು ಆಜ್ಞೆ ಮಾಡಿದಳು.

ಗೆಳೆಯನ ಆತಿಥ್ಯಕ್ಕೆ ಮುಕ್ತಾಯವಾಯಿತು! ವಕೀಲರು ಕ್ಷಯರೋಗದ ಡಾಕ್ಟರರಿಗೆ ಭೆಟ್ಟಿಯಾದರು. ದವಾಖಾನೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿದರು. ಸತ್ಯೇಂದ್ರ ಹೇಳಿದ: ನನಗೇನೂ ಆಗಿಲ್ಲ…” ಎಂದು. “ಈ ವಿಶಾಲವಾದ ಜಗತ್ತಿನಲ್ಲಿ ನನ್ನನ್ನು ಹಚ್ಚಿಕೊಳ್ಳುವವರು ಒಬ್ಬರೂ ಇಲ್ಲವೆ?” ಎಂದು ಕೇಳಿದ.
* * * *

“ನರಳಬೇಡ ಮಗೂ!”

ತಾನು ಇಷ್ಟು ದೊಡ್ಡವನಾದರೂ ‘ಮಗೂ’ ಎಂದು ಕರೆಯುವವರು ಯಾರು? ಕರು ಗೋವಿನ ಕರೆಗೆ ಕಿವಿಗೊಟ್ಟು ಕೇಳುವಂತೆ, ಸತ್ಯೇಂದ್ರನ ಕರ್ಣಪಟಲಗಳಾಗಿದ್ದವು. ಜ್ವರದ ತಾಪವಿದ್ದರೂ, ಮನಸ್ಸು ಅವಳಿಗೆ ಬಾಗಿತು.

“ಅವ್ವ, ನನ್ನದು ತಪ್ಪಾಯಿತು…”

“ಇರಲಿ ಮಗು. ನಿನ್ನ ತಪ್ಪು ಒಪ್ಪು ಆಮೇಲೆ ಹೇಳುವಿಯಂತೆ! ನಿನ್ನ ಜಡ್ಡು ಗುಣವಾಗಲಿ. ವಕೀಲರು ಬರೆದ ಪತ್ರ ನನ್ನ ಕೈಗೆ ಬೇಗ ಸಿಕ್ಕಲಿಲ್ಲ. ಅದನ್ನು ಓದಿಸಿದ ಕೂಡಲೆ, ನನ್ನ ಜೀವ ನಿಲ್ಲುವ ಹಾಗೆ ಆಗಲಿಲ್ಲ. ಇವರು ಬರಲಿ ಬಿಡಲಿ. ನಾನು ಹೊರಟೇ ಬಂದೆ!…

ರಂಗೂತಾಯಿಯವರು ಇನ್ನೂ ಏನೇನೋ ಹೇಳುತ್ತಿದ್ದರು. ತಾಯಿಯ ಧ್ವನಿ ತಾಯಿಯ ಅಭಯ ಹಸ್ತ ಸತ್ಯೇಂದ್ರನಿಗೆ ಅಪರಿಮಿತ ಆನಂದ ಕೊಡುತ್ತಿದ್ದವು. ಈ ಆನಂದದ ಚಿತ್ರದ ಜೊತೆಗೇ ತಾನು ಅವರ ಸಂಗಡ ಜಗಳ ಆಡಿದ ಚಿತ್ರವೂ ಕಣ್ಣಮುಂದೆ ನಿಲ್ಲುತ್ತಿತ್ತು.

ಅಹುದು! ಅದು ಆ ವರುಷದ ಹಿಂದಿನ ಮಾತು. ಹಿರಿಯ ಮಗನಾದ ಸತ್ಯೇಂದ್ರ ಬಿ. ಎ. ದಲ್ಲಿ ತೇರ್ಗಡೆಯಾಗುವದಕ್ಕಿಂತ ಮೊದಲೇ, ಅವನ ತಂದೆತಾಯಿಗಳು ಅವನಿಗಾಗಿ ಒಂದು ಕನ್ಯೆಯನ್ನು ನೋಡಿದ್ದರು. ಸತ್ಯೇಂದ್ರ ತಮ್ಮ ಊರಾದ ಲಕ್ಷ್ಮೇಶ್ವರದಲ್ಲಿಯೇ ಉಳಿಯಬೇಕು. ಅಲ್ಲಿಯೇ ವಕೀಲಿಯನ್ನಾಗಲಿ ಅಥವಾ ಮಾಸ್ತರಿಕಿಯನ್ನಾಗಲಿ ಮಾಡಬೇಕು. ತಮ್ಮ ಕಣ್ಣೋಟದಲ್ಲಿಯೇ ತಮ್ಮ ಹಿರಿಯಮಗನಿದ್ದುಕೊಂಡು, ತಮ್ಮ ಆಸ್ತಿ ಪಾಸ್ತಿಯ ಮೇಲ್ವಿಚಾರಣೆ ಮಾಡಬೇಕೆಂದು ಸತ್ಯೇಂದ್ರನ ತಂದೆಯವರು ವಿಚಾರಿಸಿದ್ದರು. ಸತ್ಯೇಂದ್ರ ತಮ್ಮ ಮಾತುಗಳನ್ನು ಎಂದೂ ಮೀರುವದಿಲ್ಲವೆಂದು ಅವರು ತಿಳಿದುಕೊಂಡಿದ್ದರು. ಅಂತೆಯೆ ಕನ್ಯೆಯ ತಂದೆಯವರಾದ ರಾಮರಾಯರಿಗೆ, ಬೀಗತನದ ಬಗ್ಗೆ ಸಂಪೂರ್ಣ ವಚನನ್ನು ಕೊಟ್ಟಿದ್ದರು. ಸತ್ಯೇಂದ್ರ ಆ ವಚನ ಭಂಗ ಮಾಡಿಸಿದ. ಖಡ್ಗವನ್ನು ಹಿರಿದು ಮೈತುಂಬ ಗಾಯಮಾಡಿದಂತೆ ಅವನ ತಂದೆಯವರಿಗಾಯಿತು. ಅವರ ಕೋಪದ ವಹ್ನಿಗೆ, ಸತ್ಯೇಂದ್ರ ಅಲ್ಲಿ ನಿಲ್ಲದೆ ಮುಂಬೈಗೆ ಓಡಿಹೋಗಿಬಿಟ್ಟನು. ಸೆಕ್ರೆಟರಿಯೇಟದಲ್ಲಿ ಕಾರಕೂನ ಸ್ಥಳವನ್ನು ದೊರಕಿಸಿ, ತನ್ನ ಕಾಲಮೇಲೆ ತಾನು ನಿಂತನು. ಸತ್ಯೇಂದ್ರ ಮುಂಬೈಗೆ ಹೋದಂದಿನಿಂದ, ಅವನ ತಂದೆಯವರು ಅವನ ಆಶೆಯನ್ನೇ ಬಿಟ್ಟು ಬಿಟ್ಟರು. ಅವನಿಗೆ ಯಾವ ರೀತಿಯ ನೆರವನ್ನು ಕೊಡಲಿಲ್ಲ. ಇಷ್ಟೇ ಅಲ್ಲದೆ, ತಮ್ಮ ಹೆಂಡತಿ ರಂಗೂತಾಯಿಗೂ ಪ್ರತಿಬಂಧಿಸಿದರು.

ಎಲ್ಲಿಂದಲೂ ತ್ಯಕ್ತನಾದ ಸತ್ಯೇಂದ್ರನು ಮುಂಬಯಿಯಲ್ಲಿ ಓಡಾಡುತ್ತಿರುವಾಗ, ಸಾವಿತ್ರಿಯ ಸ್ನೇಹಹಸ್ತ ದೊರಕಿತು. ಅವಳು ಪಾತರಗಿತ್ತಿಯಂತೆ ಹೂವಿನಿಂದ ಹೂವಿಗೆ ಹಾರುತ್ತಿದ್ದಳು, ಅವಳ ಓಡಾಟ ಅಷ್ಟು ಮಾಟವಾಗಿತ್ತು! ಪರಿಚಯವಾಗಲು, ಪ್ರೀತಿಸಲು ಯೌವನದಲ್ಲಿ ಏನು ಬೇಕು? ರೈಲಿನಲ್ಲಿ ಸ್ಥಳ ಕೊಡುವುದು, ಒಂದು ಕಪ್ ಚಹ ಕೊಡುವುದು, ತರುವಾಯ ಮಾತುಕತೆ-ಕೊನೆಗೆ ಲಗ್ನ!! ಸತ್ಯೇಂದ್ರ ಮತ್ತು ಸಾವಿತ್ರಿಯರ ಮದುವೆ ಹೀಗೆಯೇ ಆಯಿತು. ತಮ್ಮದೊಂದು ಆದರ್ಶ ಪ್ರೇಮ ವಿವಾಹವೆಂಬ ಹುಮ್ಮಸ್ಸಿನಲ್ಲಿ ಅವರಿಬ್ಬರೂ ಮುಂಬಯಿಯಲ್ಲಿಯೇ ಲಗ್ನವಾದರು. ಮಾವ ಬಂಧು ಬಳಗದವರೂ ಅವರ ಸಮಾರಂಭಕ್ಕೆ ಬರಲಿಲ್ಲ.

ಆದರೆ ಮದುವೆಯಾದ ಮೂರು ವರುಷಗಳಲ್ಲಿಯೆ ಸತ್ಯೇಂದ್ರನ ಹರುಷವು ಅಡಗಿತು! ಹೀಗೇಕೆ? ಹೀಗೇಕೆ?? ನೂರು ಸಲ ವಿಚಾರಿಸಿದನು. ಚಳಕ್ಕನೆ ಮಿಂಚು ಸುಳಿದಂತಾಗಿ ಅವನ ಮೈ ನಡುಗಹತ್ತಿತು.

“ಮಗೂ, ಹೀಗೆ ನಡುಗಬೇಡ! ದೇವರು ನಿನಗೆ ಹಿತ ಮಾಡುವನು” ರಂಗೂತಾಯಿಯವರ ಮಾತು ಕೇಳಿ ಮನಸ್ಸಿಗೆ ಏನೋ ಶಾಂತವೆನಿಸುತ್ತಿತ್ತು “ಅವ್ವ, ನಾನು ಎಷ್ಟು ದಿನ ಹೀಗೆ ಮಲಗಬೇಕು? ನನ್ನ ಜಡ್ಡು ಎಂದು ಗುಣವಾಗುವುದು?”

“ಸತ್ಯೇಂದ್ರ ಅವಳು ಏಕೆ ಬಂದಿಲ್ಲ? ಸಾವಿತ್ರಿ ಬಂದರೆ ನಿನಗೆ ಬೇಗ ಗುಣವಾಗುವುದು!”

“ಹಾಂ! ಏನಂದೀ?” ಸತ್ಯೇಂದ್ರ ಸ್ವಲ್ಪ ಕಿರಿಚಿಕೊಂಡನು. “ಅವ್ವ ನೀನು ಬಂದಿರುವಿಯಲ್ಲ, ಸಾಕು ನನಗೆ ಅಷ್ಟು!”

“ಮಗೂ, ನಾನೇನು ಕೊನೆಯವರೆಗೆ ಇರುವವಳೆ?”

“ಅಂದರೆ ನೀನು ನನ್ನನ್ನು ಬಿಡುವೆಯಾ?”

“ಇಲ್ಲ ಸತ್ಯೇಂದ್ರ ಕೊನೆಯವರೆಗೆ ಇರುವವಳು ಸಾವಿತ್ರಿ! ಅವಳು ಏಕೆ ಬಂದಿಲ್ಲ….?”

“ಹಾ!… ಅವ್ವ, ಆ ಮಾತನ್ನು ತೆಗೆಯಬೇಡ” ಸತ್ಯೇಂದ್ರ ಮತ್ತೆ ಕಿರಿಚಿಕೊಂಡನು.

ದಿನಗಳು ಹೋದಂತೆ, ದೊಡ್ಡ ದವಾಖಾನೆಯಲ್ಲಿ ಜೀವನವನ್ನು ಸಾಗಿಸುವುದು ಸತ್ಯೇಂದ್ರ ಮತ್ತು ರಂಗೂತಾಯಿಯವರಿಗೆ ಅಸಾಧ್ಯವಾಯಿತು. ಸತ್ಯೇಂದ್ರನು ತನ್ನ ಮಿತ್ರರೆಲ್ಲರನ್ನು ಪರೀಕ್ಷಿಸಿ ನೋಡಿದಂತಾಗಿತ್ತು. ಎಲ್ಲರೂ ಅವನಿಗೆ ಹಣದ ಸಹಾಯ ಸಲ್ಲಿಸಿ ಬೇಸತ್ತು ಹೋಗಿದ್ದರು. ಮುಂಬೈಯಲ್ಲಿ ಅವನ ಮನೆಯಲ್ಲಿದ್ದ ಅವನ ತಮ್ಮಂದಿರೂ ಸತ್ಯೇಂದ್ರನಿಗೆ ಸಹಾಯ ಮಾಡಲಿಲ್ಲ. ತಮ್ಮ ಅಣ್ಣನ ಹೆಂಡತಿಯ ದ್ವೇಷದಿಂದ, ಅವರು ಸತ್ಯೇಂದ್ರನ ಕಡೆಗೆ ಬರಲಿಲ್ಲ. ನೌಕರಿಯಿಲ್ಲ! ಹಣವಿಲ್ಲ! ಬಂಧುಬಳಗದವರ ನೆರವಿಲ್ಲ! ಮೇಲೆ ಮುಗಿಯದ ಬೇನೆಯೊಂದು!! ಸತ್ಯೇಂದ್ರನು ಸತ್ಯದ ಅಗ್ನಿಯಲ್ಲಿ ಬಿದ್ದು ಬೆಂದುಹೋದ.

ಕ್ಷಯದ ಚಿನ್ಹೆಗಳು ಹೆಚ್ಚು ಕಾಣಹತ್ತಿದಕೂಡಲೇ ಸತ್ಯೇಂದ್ರನನ್ನು ದವಾಖಾನೆಯಿಂದ ದೂರವಾಗಿರಿಸಿ, ಊರ ಹೊರಗಿನ ಒಂದು ಕೋಣೆಯಲ್ಲಿ ವಾಸವಾಗಿರುವಂತೆ ವ್ಯವಸ್ಥೆ ಮಾಡಿದರು. ಡಾಕ್ಟರರು ಹೇಳಿದ ಚುಚ್ಚುಮದ್ದಿನ ಔಷದಗಳನ್ನು ತರಲು ಹಣವಿರದೆ ಬಹಳ ತೊಂದರೆಯಾಗಹತ್ತಿತ್ತು.

ಸತ್ಯೇಂದ್ರ ಹೇಗೋ ದಿನಗಳನ್ನು ಕಳೆದ. ಒಂದೊಂದು ಸಲ ಆತ್ಮಹತ್ಯೆಯನ್ನು ಮಾಡಿಕೊಳ್ಳಬೇಕೆಂದು ಅವನಿಗೆ ಅನಿಸುತ್ತಿತ್ತು!

ಅಕಸ್ಮಾತ್ತಾಗಿ ಅವನಿಗೆ ನೂರು ರೂಪಾಯಿ ಮನಿಯಾರ್ಡರ ಬಂದಿತು. ಅಶಕ್ತನಾದ ಸತ್ಯೇಂದ್ರನು ಹಾಸಿಗೆಯಲ್ಲಿಯೇ ಮಲಗಿ, ಅದಕ್ಕೆ ಸಹಿಮಾಡಿದನು. ಅಂಚೆ ಪೇದಿಯವನಿಂದ ರೂಪಾಯಿಗಳನ್ನೇನೋ ಇಸಿದುಕೊಂಡ! ತರುವಾಯ ಅವನ ಮುಖ ಬಹಳ ಬೆವರತೊಡಗಿತು. ಎರಡು ಫರ್ಲಾಂಗು ದೂರಿನಿಂದ ನೀರು ಹೊತ್ತು ತಂದ ರಂಗೂತಾಯಿ ಕೇಳಿದರು. “ಸತ್ಯೇಂದ್ರ, ಎಲ್ಲಿಯ ರೂಪಾಯಿ ಅವು?”

“ಇವು!!…” ಸತ್ಯೇಂದ್ರ ಅನುಮಾನದಿಂದ ಹೇಳಿದನು. ಅವನಿಗೆ ಮುಂದೆ ಏನು ಮಾತನಾಡಬೇಕೋ ತಿಳಿಯದು. ತಾಯಿಯ ಆಗ್ರಹಕ್ಕಾಗಿ ಸತ್ಯಸಂಗತಿಯನ್ನು ಹೇಳಬೇಕಾಯಿತು. ತನ್ನ ತಾಯಿಯನ್ನು ಸಮೀಪದಲ್ಲಿ ಕೂಡಿಸಿಕೊಂಡು, “ಅವ್ವ, ನೀನು ನನ್ನನ್ನು ತಪ್ಪು ತಿಳಿದುಕೊಳ್ಳಬಾರದು. ನೀನು ನನ್ನನ್ನು ಬಿಟ್ಟು ಹೋಗಬಾರದು ಅಂದರೆ ಹೇಳುತ್ತೇನೆ” ಎಂದ.

ಎರಡು ವರ್ಷದ ಹಿಂದೆ ನಡೆದ ಸಂಗತಿಯನ್ನು ವಿವರಿಸಿ ಹೇಳಿದ ಸಾವಿತ್ರಿ ತನ್ನನ್ನು ಬಿಟ್ಟು ಬೇರೆಯಾಗಿ ನೌಕರಿ ಮಾಡಿಕೊಂಡು ಬಾಳಿರುವ ಸಂಗತಿ ಹೇಳಿದ. ಆ ಹಳೆಯ ಸಂಗತಿ ಹೇಳ ಹೇಳುತ್ತಿದ್ದಂತೆಯೆ ಕಣ್ಣುಗಳಲ್ಲಿ ಒಂದೆರಡು ಹನಿ ಉದುರಿದವು!.. ಇಷ್ಟೆಲ್ಲ ಆಗಲು ಏನು ಕಾರಣ? ಪ್ರೇಮವೆಂದರೆ ಬರಿ ಮೋಹವೆಂದು ತಿಳಿದ ಸಾವಿತ್ರಿಯೆ?…. ಅಲ್ಲ, ಕಲಿಯಲಿಕ್ಕೆಂದು ಮುಂಬೈಗೆ ಬಂದ ಆ ಇಬ್ಬರು ತಮ್ಮಂದಿರೆ?.. ಅಲ್ಲ, ತನ್ನ ತಾಯೆ?

ಹಾಸುಗೆಯಲ್ಲಿಯೆ ಮಗ್ಗುಲಾಗಿ ನೋಡಿದನು. ಇದೆಲ್ಲಾ ಕೇಳಿ ರಂಗೂ ತಾಯಿ ಒಡಿಹೋಗುವಳೇನೊ ಎಂದು! ರಂಗೂತಾಯಿ ಸಿಟ್ಟೆಗೆದ್ದು ಓಡಿ ಹೋಗಲಿಲ್ಲ. ಸತ್ಯೇಂದ್ರನ ಸಮೀಪದಲ್ಲಿಯೇ ಬಂದು, ಅವನ ಹಣೆಯ ಮೇಲೆ ಕೈಯಿಟ್ಟು “ಮಗೂ ಇಷ್ಟಾದರೂ ಅವಳ ಮನಸ್ಸು ಬದಲಾಗಿದೆ!… ನಿನ್ನ ಕಾಳಜಿ ತೆಗೆದುಕೊಳ್ಳದಿದ್ದರೆ ಅವಳ ಧರ್ಮ ಎಲ್ಲಿ ಉಳಿಯಿತು” ಎಂದಳು.

“ಅವಳ ಧರ್ಮ ಎಲ್ಲಿ ಉಳಿಯಿತು” ತಾಯಿಯು ನುಡಿದ ಆ ಮಾತುಗಳು ಸತ್ಯೇಂದ್ರನಲ್ಲಿ ಪ್ರತಿಧ್ವನಿಗೊಡುತ್ತಿದ್ದವು. ಸೋತು ಹಣ್ಣಾದ ಮನದಿಂದ ಅವನು ಹಾಸಿಗೆಯಲ್ಲಿ ಬಿದ್ದುಕೊಂಡಿದ್ದ.

ಆಗ ರಾತ್ರಿ ಹತ್ತು ಗಂಟೆ! ಕಿಡಿಕೆಯೊಳಗಿಂದ ಟಣ್ಣನೆ ಇಬ್ಬರು ಜಿಗಿದರು! ಮೈಬಣ್ಣವೆಲ್ಲ ಕಪ್ಪು!!… ಅವರನ್ನು ನೋಡಿ ಸತ್ಯೇಂದ್ರ ಚಿಟ್ಟನೇ ಚೀರಿದ. ರಂಗುತಾಯಿಯವರಿಗೂ ಎಚ್ಚರವಾಯಿತು. ಗಾಬರಿಯಲ್ಲಿ ಸತ್ಯೇಂದ್ರನನ್ನು ಅಪ್ಪಿಕೊಂಡರು. ಬಂದವರಿಬ್ಬರೂ ಹಾಸಿಗೆಯ ಬಳಿಯಲ್ಲಿರುವ ಪೆಟ್ಟಿಗೆಗೆ ಕೈಹಾಕಿದರು. ಅವರ ಹೊಂಚು ಸತ್ಯೇಂದ್ರವಿಗೆ ಕೂಡಲೇ ಹೊಳೆಯಿತು. ಏನೂ ಸಹಾಯವಿಲ್ಲದಾಗ, ಆ ನೂರು ರೂಪಾಯಿ ಅವನಿಗೆ ದೊರೆತಿದ್ದವು. ಕಸಿವಿಸಿಬಟ್ಟು ಅವರನ್ನು ಹಿಡಿಯಲು ಹೋದನು. ಸತ್ಯೇಂದ್ರನ ಬೇನೆಯದು ಅವರಿಗೇನು? ರುಮ್ಮನೇ ಒಂದೆರಡು ಏಟು ಕೊಟ್ಟರು. ಮೇಲೆ ಥಳಿಸಿದರು. ತಾಯಿ ಚೀರಿಕೊಂಡಳು! ಆಕ್ರೋಶ ಮಾಡಿದಳು! ಸಮೀಪದಲ್ಲಿ ಯಾರ ಮನೆಗಳೂ ಇರಲಿಲ್ಲ. ಯಾರ ನೆರವೂ ಅವಳಿಗೆ ಇರಲಿಲ್ಲ.

ಒಂದು ಕ್ಷಣದಲ್ಲಿ ಆ ಕಳ್ಳರು ಕತ್ತಲೆಯಲ್ಲಿ ಮಾಯವಾಗಿ ಬಿಟ್ಟಿದ್ದರು ಆ ನೂರು ರೂಪಾಯಿ ದೊರೆತ ಸುದ್ದಿಯನ್ನ ಅವರು ಹೇಗೆ ಗೊತ್ತು ಹಚ್ಚಿದ್ದರೋ! ಎಲ್ಲವೂ ವಿಚಿತ್ರ ಲೀಲೆ!

ರಂಗೂತಾಯಿಯವರು ಹೆಣವಾಗಿ ಬಿದ್ದ ಸತ್ಯೇಂದ್ರನನ್ನು ತೊಡೆಯ ಮೇಲೆ ತೆಗೆದುಕೊಂಡರು. ತಲೆಗೆ ಹೊಡೆತಬಿದ್ದು ರಕ್ತ ಸೋರುತ್ತಿತ್ತು. ಸತ್ಯೇಂದ್ರನಿಗೆ ಮೈಮೇಲೆ ಎಚ್ಚರವಿರಲಿಲ್ಲ. ಆ ದೇಹವನ್ನು ತಾನೇ ಹೊತ್ತು ಕೊಂಡು ಮನೆಬಿಟ್ಟು ಹೊರಗೆ ಬಂದರು. ಆಕಾಶದಲ್ಲಿ ಮಳೆಗಾಲದ ಮೋಡಗಳು ಮುಸುಕಿಕೊಂಡಿದ್ದವು. ಎಲ್ಲ ಕಡೆಗೂ ಭೀಕರತೆ! ನಿರ್ಜನವಾದ ಓಣಿ! ಯಾವುದರ ಎಚ್ಚರಿಕೆಯೂ ರಂಗೂತಾಯಿಯವರಿಗೆ ಇರಲಿಲ್ಲ.

ಆ ಕತ್ತಲಲ್ಲಿ ನಡೆದುಬಂದು, ಡಾಕ್ಟರರನ್ನು ಕೂಗಿದಳು. ಡಾಕ್ಟರರು ಬಾಗಿಲು ತೆರೆದು ನೋಡಿದರು! ತೇಗುತ್ತಿರುವ ರಂಗೂತಾಯಿಯವರು! ನಿಶ್ಚೇಷ್ಟಿತನಾದ ಸತ್ಯೇಂದ್ರ!!

ಆಕಾಶದಲ್ಲಿ ಮಿಂಚು ಝಗ್ಗನೆ ಸುಳಿಯಿತು. ಸೆತ್ಯೇಂದ್ರ ಒಮ್ಮೆಲೆ ಚಕಿತಚಿತ್ತನಾಗಿ ಕೇಳಿದ “ವಿಶಾಲವಾದ ಜಗತ್ತಿನಲ್ಲಿ ನನ್ನವರು ಯಾರು?”

“ನಾನು!!” ಆ ಬೆಳಗಿನಲ್ಲಿ ಬಳ್ಳಿಯಂತೆ ಸುಳಿಯುತ್ತ ಬಂದು ಸಾವಿತ್ರಿ ಹೇಳಿದಳು.

“ನೀನು??”

“ಹೂಂ! ನನ್ನ ನೂರು ತಪ್ಪುಗಳನ್ನು ಕ್ಷಮಿಸಿ ಬಿಡಿ ಸತ್ಯೇಂದ್ರ. ನಿಮ್ಮ ತಾಯಿಯವರಿಗೂ ನನ್ನ ಮಾತನ್ನು ಮುಟ್ಟಿಸಿ. ದವಾಖಾನೆಯಲ್ಲಿ ನನ್ನ ಕೆಲಸವನ್ನು ಅವರು ಮಾಡುತ್ತಿದ್ದಾರೆ!! ಇದನ್ನು ತಿಳಿದು ನನ್ನ ಮನ ನೋಯುತ್ತಿದೆ. ನಿಮ್ಮನ್ನು ನಾನು ಏಕಾಕಿಯಾಗಿ ಬಿಡಲಾರೆ! ಛೆ! ಎಂಥ ತಪ್ಪು ನಾನು ಮಾಡಿದೆನಲ್ಲ??… ಹೊರಗಿನ ಕಣ್ಣಿಗೆ ಮೋಹ ಮಾಡುವುದಷ್ಟೆ ಪ್ರೇಮವೆಂದು ನಾನು ತಿಳಿದಿದ್ದೆ. ಅಲ್ಲ, ಇದು ಶುದ್ಧ ತಪ್ಪಾಗಿದೆ!”

“ಸಾವಿತ್ರೀ, ನಿಜವಾಗಿಯೂ ನಿನಗೆ ಹೀಗೆ ಅನಿಸುವುದೇ?”

“ಅನಿಸುತ್ತದೆ. ನಾನು ಒಬ್ಬಳೇ ಬಾಳಲಾರೆ!……. ಸತ್ಯದ ಆಗ್ನಿ ಕುಂಡದಲ್ಲಿ ಹಾರಿದರೂ ನಾವು ಪವಿತ್ರರಾಗಿ ತಲೆ ಮೇಲೆತ್ತಬೇಕು! ನಿಜವಾಗಿ ಪ್ರೇಮ ಕಷ್ಟಬಡುವುದರಲ್ಲಿದೆ!”

“ಸಾವಿತ್ರಿ, ನನ್ನ ಸಲುವಾಗಿ ನೀನು ಇಷ್ಟು ಚಿಂತೆಮಾಡುವೆಯಾ?”

“ಅಹುದು ಸತ್ಯೇಂದ್ರ!”

“ಸಾವಿತ್ರಿ, ಸಾವಿತ್ರೀ! ನಿನ್ನ ಮನಸ್ಸು ಇಷ್ಟು ಬದಲಾಗಿದೆಯೆ? ಅದು ಹೇಗೆ? ಅದು ಹೇಗೆ ಸಾವಿತ್ರಿ??”

“ಸತ್ಯೇಂದ್ರ! ವಡಸಾವಿತ್ರಿಯ ಹಬ್ಬ ಸಮೀಪವಿದೆ. ನಾನು ಯಾರನ್ನು ಪೂಜಿಸಲಿ?… ಇಕೋ, ಈ ಸಾವಿತ್ರಿಯು ನಿಮ್ಮ ಕಡೆಗೇ ಬರುತ್ತಿದ್ದಾಳೆ. ನನ್ನ ಧನದ ಅರ್ಪಣೆ ಈಗಾಗಲೇ ನಿಮಗೆ ಮುಟ್ಟಿದೆಯಲ್ಲವೆ?”

“ಸಾವಿತ್ರೀ!” ಎಂದು ಸತ್ಯೇಂದ್ರ ಚೀರಿದನು.

ಸಾವಿತ್ರಿ ಸತ್ಯೇಂದ್ರನ ಸೇವೆಗಾಗಿ ಅವನೆದುರು ನಿಜವಾಗಿಯು ಬಂದು ನಿಂತಿದ್ದಳು! ವಡಸಾವಿತ್ರಿಯ ಹಬ್ಬವು ಎರಡು ವರ್ಷಗಳಲ್ಲಿ ಅವಳ ಹೃದಯವನ್ನು ಕಲುಕಿತ್ತು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಕ – ನರಕ
Next post ಅಪ್ಪುಗೆ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…