ಎರಡು…. ದೃಷ್ಟಿ!

ಎರಡು…. ದೃಷ್ಟಿ!


ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ ಕಮರು, ಇನ್ನೂ ಒಂದು; ದೀಪಾವಳಿ ಯಲ್ಲಿ ಕೋಲಾಟವಾಡ ಹೋಗುವ ನನ್ನ ತಂಗಿಯು ಹಾಡು ಗಟ್ಟಿ ಮಾಡುವದು. ನನಗೆ ದೀಪಾವಳಿಯ ವಿಷಯಕ್ಕೆ ಲಕ್ಷ್ಯವಿರದಿದ್ದರೂ…. ಹುಡುಗರಿಗೆ….ದೀಪಾವಳಿ ಬರುವುದು ಹುರುಪಲ್ಲವೇ ? ನನ್ನ ಅಣ್ಣನ ಮಗ ಶ್ಯಾಮ ನನಗೆ ಆಕಾಶಪುಟ್ಟಿಗಾಗಿ ಹಲವು ಸಾರೆ ಹೇಳಿ….. ಅಳುವದು, ಇವೆಲ್ಲವುಗಳೂ ಪ್ರತಿ ವರುಷ ನನಗೆ ದೀಪಾವಳಿಯ ಬರುವಿಕೆಯನ್ನು ಸೂಚಿಸುವ ಚಿನ್ಹೆಗಳು.

ಇವೆಲ್ಲ ಚಿನ್ಹೆಗಳನ್ನು ಬಿಟ್ಟರೆ ಈಗ Return Tickets for Diwali… ಎಂಬ ರೇಲ್ವೆ ಜಾಹೀರಾತುಗಳು ದೀಪಾವಳಿಯ ಆಗಮನವನ್ನು ಎಲ್ಲಕ್ಕಿಂತಲೂ ಹೆಚ್ಚು ಸ್ಪಷ್ಟವಾಗಿ ಸೂಚಿಸುತ್ತವೆ!

ನಾನೂ ಓದಿ …ಓದಿ …ಬೇಸತ್ತಿದ್ದೆ. Return ticket ತೆಗೆದು ಕೊಂಡು ಒಂದು ಪ್ರವಾಸ ಹೊಡೆದುಕೊಂಡು ಬರಬೇಕೆಂಬ ಆಸೆ ಪ್ರಬಲವಾಗಿತ್ತು. ಇಷ್ಟಲ್ಲದೆ ಇಚ್ಛೆಯಂತೆ ಅಭ್ಯಾಸವೂ ಮುಗಿದಿದ್ದಿತು. ಒಂದು ದಿನ ರೈಲ್ವೆ ಸ್ಟೇಷನ್‌ನಲ್ಲಿ Return ticket ನ ವಿಷಯ ವಿಚಾರಿಸಿಕೊಂಡು ಮನೆಗೆ ಒಂದೆ. ಅಂದು ರಾತ್ರಿ ತಂದೆಯವರ ಮುಂದೆ ಪ್ರವಾಸದ ಮಾತೆತ್ತಬೇಕೆಂದು ತಾಯಿಗೆ ಹೇಳಿಕೊಂಡೆ… ಬೇಕಾದರೆ ಬೇಡಿಕೊಂಡೆಯನ್ನಲೂ ಅಡ್ಡಿಯಿಲ್ಲ. ತಂದೆಗಿಂತ-ತಾಯಿಯ ಕರಳು ಹೆಚ್ಚಿನದಂತೆ. ಅದು ನಿಜ, ನಾನೇ ಕೇಳಿದ್ದರೆ….ಕೆಲಸವಾಗುತ್ತಿರಲಿಲ್ಲ ಸತ್ಯವಾಗಿ !

ಊಟದ ವೇಳೆಗೆ ಸರಿಯಾಗಿ ಅಡುಗೆ ಮನೆಗೆ ಬಂದು ನನ್ನ ಮಣೆಯ ಮೇಲೆ ಕುಳಿತುಕೊಂಡೆ. ಎಂದಿನಂತೆ ತಂದೆಯವರು ಮಡಿಯನ್ನುಟ್ಟು, ಮೊದಲಿನ ಮಣೆಯಮೇಲೆ ಕುಳಿತಿದ್ದರು. ಸಂಧ್ಯಾವಂದನೆಯ ಶಾಸ್ತ್ರವೂನಡೆದಿದ್ದಿತು! ‘ಕೇಶವಾಯನಮಃ…. ಅಲ್ಲಾ ! ನೀ ಊಟಾ ಮಾಡುದಿಲ್ಲೇನು…. ಹರೇನಮಃ’ ಎಂದು ಮಧ್ಯ ಮಧ್ಯ ಬೇರೆ ಮಾತುಗಳನ್ನು ಜೋಡಿಸುತ್ತಾ ತಂದೆಯವರು ಸಂಧ್ಯಾವಂದನೆಯನ್ನು ನಡೆಸಿದ್ದರು! ಇರಲಿ-ಎಷ್ಟೆಂದರೂ ಸಂಧ್ಯಾವಂದನೆಗೆ ಇನ್ನೂ ಸ್ಥಾನವಿದೆಯಲ್ಲ ನಮ್ಮ ಮನೆಯಲ್ಲಿ!

ಏನೋ ತಂದೆಯವರ ಅಂಜಿಕೆಗೋ….ಅಥವಾ…. ಮನೆತನದ ಮೂಲ ಭೂತ ಹಕ್ಕು ಕಳೆಯಬಾರದೆಂದೋ….ನಾನು, ಅಣ್ಣನೂ…. ಎಂಜಲ ಮಣೆಯ ಮೇಲೆ ಕುಳಿತು ಮೂರು ಸಾರೆ ಆಚಮನದ ಶಾಸ್ತ್ರ ಮುಗಿಸಿ ‘ಹಂತಿ-ತಿರುವಿ’ ಊಟ ಪ್ರಾರಂಭ ಮಾಡುತ್ತಿದ್ದೆವು.

ಅತ್ತಿಗೆ ಬಡಿಸುತ್ತಿದ್ದಳು. ಅಂದು ಗುರುವಾರ, ತಾಯಿಗೆ ಉಪವಾಸ, ನಮ್ಮ ತಾಯಿ ಅಣ್ಣನ ಮಗುವನ್ನು ತೊಡೆಯ ಮೇಲೆ ಹಾಕಿಕೊಂಡು ಏನನ್ನೋ ಮಾತಾಡುತ್ತ ನಮ್ಮ ಹತ್ತಿರದಲ್ಲಿಯೆ ಕುಳಿತಿದ್ದರು.

ಸ್ವಲ್ಪ ಹೊತ್ತಾಯಿತು. ತಾಯಿ ನನ್ನ ಪ್ರವಾಸದ ವಿಷಯದ ಮಾತನ್ನೆತ್ತಲೇ ಇಲ್ಲ. ನನಗೆ ಊಟ ಸಾಗದಾಯಿತು. ಮರುದಿನವೇ ಪ್ರವಾಸಕ್ಕೆ ಹೊರಡಬೇಕೆಂದು ಎಲ್ಲವನ್ನೂ ಸಿದ್ದವಾಡಿಟ್ಟಿದ್ದೆ. “ಯಾವ ಕೆಲಸ ಮಾಡಿದರೂ ಮಾಡಬಹುದು. ಆದರೆ ದುಡ್ಡಿನ ಕೆಲಸ ಮಾತ್ರ ಬಲು ಕಠಿಣ?” ಎಂದು ತಂದೆಯವರು ಹಲವು ಸಲ ನುಡಿದದ್ದು ನನಗೆ ನೆನಪಾಯಿತು. ಪ್ರವಾಸಕ್ಕೆ ಹೋಗಲು ನನಗೆ ಹಣ ಕೊಡುವರೊ ಇಲ್ಲವೋ ಎಂದು ನಾನು ಒಳ‌ಒಳಗೆ ಕಳವಳಿಸುತ್ತಲೇ ಊಟ ನಡೆಸಿದ್ದೆ. ಒಮ್ಮೆಲೇ ತಾಯಿಯವರು ಶಾಮನನ್ನುದ್ದೇಶಿಸಿ ‘ರಾಮನ ಸಂಗಡ ಮುಂಬಯಿಗೆ ಹೋಗಿಯಂತ- ಊಟಾ ಲಗೂ ಲಗೂ ಮಾಡು’ ಎಂದು ನುಡಿದರು. ಇಷ್ಟು ತಾಯಿಯವರ ಬಾಯೊಳಗಿನಿಂದ ಹೊರಬೀಳುವದೊಂದ ತಡ, ಅಣ್ಣ ‘ಏನೋ- ರಾಮು ಮುಂಬಯಿಗೆ-ಹೋಗೋ ತಯಾರಿ ಮಾಡಿಬಿಟ್ಟೆಯಲ್ಲ? ನನ್ನ ‘ಹೊಲ್ಡಾಲ್ಫ಼್’ ಯಾಕ್ ತೊಗೊಂಡಿ, ಬೇಕಾದರ ಆಕೀದು ತೊಗೊ-ತುಸು ದೊಡ್ಡದದ!’ ಎಂದು ನುಡಿದನು.

ತಂದೆಯವರಿಗೆ ಇದೆಲ್ಲವೂ ಆಶ್ಚರ್ಯವೆನಿಸಿರಬೇಕು. ತಾಯಿಯೂ ಅಣ್ಣನೂ ನಾನು ಪ್ರವಾಸಕ್ಕೆ ಹೋಗಲು ಸಮ್ಮತಿ ಕೊಟ್ಟಿದ್ದಾರೆ ಎಂದು ಭಾವಿಸಿದರೋ ಏನೊ? ಎಷ್ಟು ಖರ್ಚು ಹಿಡಿತದೊ ರಾಮು’ ಎಂದು ಆತ ಸಮಾಧಾನದಿಂದ ಕೇಳಿದರು.

ನೋಡಿ, ಯಾವ ವಿಷಯವನ್ನೂ ವಿಚಾರಮಾಡದಲೆ ಹೇಳುವದು ಕಠಿಣ. ಅದರಲ್ಲಿಯೂ ಇದು ರೊಕ್ಕದ ವಿಷಯ! ಅಂದಬಳಿಕ ನಾನು ಯೋಚನೆಮಾಡಲು ಅವಧಿ ಸಿಗಲೆಂದು ಒಂದು ಲೋಟ ನೀರನ್ನೆತ್ತಿದೆ ! ತಂದೆಯವರು ನನ್ನ ಕಡೆಗೊಮ್ಮೆ ನೋಡಿ ಮತ್ತೆ ಪುನಃ ನುಡಿದರು.

‘ನೀ ಒಬ್ಬನ ಹೋಗುತಿಯೊ ಯಾರಾದರೂ ಜೋಡಿಯಾಗಿದ್ದಾರೊ-ರಾಮು?’ ಎಂದರು.

ಈ ವಾಕ್ಯದ ಅರ್ಥವನ್ನು ತಾಯಿಯವರು ಬೇರೆ ತಿರುಗಿಸಿ ನಗು ಮುಖದಿಂದ ‘ಈಗೆಲ್ಲಿ ಜೋಡಿ ? ಮುಂದಿನ ವರುಷ-ಬರತಾಳಲ್ಲ! ಆಗ ಜೋಡಿಯಾಗಿ ಹೋಗುವದು ! ಯಾಕೊ ರಾಮು ?’ ಎಂದು ನಕ್ಕರು.

‘ಹ ಹ ಹ ಹಾ ಕಿವುಡಿಗೊಂದು-ಆ ಅನ್ನೊ ಚಟ ಇದ್ದಹಾಂಗ ಈಕೆಗೆ…. ಲಗ್ನದೊಂದು ಹುಚ್ಚು !’ ಎಂದು ತಂದೆಯವರು ಅಣ್ಣನವರ ಕಡೆಗೆ ಮುಖ ತಿರುವಿ ಮಾತನಾಡಿದರು. ನನ್ನ ಅಣ್ಣನ ಲಗ್ನವಾಗಿ ಎಂಟು ವರುಷಗಳಾಗಿ ಹೋಗಿದ್ದವು. ಅವರೂ ಸಂಸಾರಕ್ಕೆ ಬೇಸತ್ತಿರಬೇಕು, ಈಗಾಗಲೇ ಮೂವರು ಮಕ್ಕಳಿವರಿಗೆ, ಅವರೂ ನಿರಾಳವಾಗಿ ನುಡಿದರು. ‘ನನಗೊಂದು ಗಂಟಾಕಿ ಇಟ್ಟಾಳ, ಇನ್ನು…. ರಾಮಗೊಂದು…. ಕೊರಳಿಗೆ…. ಕಟ್ಟಿದಳೆಂದರ…. ಆಕಿ…. ತೊಡೀಮ್ಯಾಲೆ ಹನ್ನೆರಡು ತಾಸೂ ಕೂಸು ಕೂಸೂ!!’ ಅಣ್ಣನ ತತ್ವಜ್ಞಾನಕ್ಕೆ ಅತ್ತಿಗೆ ಮುಗುಳು ನಗೆ ನಗುತ್ತಾ ನಿಂತು ಬಿಟ್ಟರು. ನಾನು ಲಗ್ನದಮಾತನ್ನು ಮರೆಸಿ ೭೫ ರೂಪಾಯಿಗಳು ಸಾಕೆಂದು ಅತಿ ಸಾವಕಾಶ ನುಡಿದೆನು. ಊಟ ಮುಗಿಯಿತು. ಅಂದಿನ ರಾತ್ರಿಯಲ್ಲವೂ ಪ್ರವಾಸದ ತಯಾರಿ ಸಾಗಿತೆನ್ನಿ ! ಮರುದಿನ ನಾಲ್ಕು ಗಂಟೆಯವರೆಗೆ…. ಊರಲ್ಲಿ ನನ್ನ ಗೆಳೆಯರಿಗೆ ಭೆಟ್ಟಿಯಾಗಿ ಅವರಿಗೆಲ್ಲಾ ಪ್ರವಾಸದ ಸುದ್ದಿ ಹೇಳಿಕೊಂಡು ಬಂದೆ.

ಗಾಡಿಯ ವೇಳೆಯಾದ್ದರಿಂದ ನಮ್ಮ ಆಳು “ಲಿಂಗ” ಟಾಂಗೆಯವನನ್ನು ಕರೆತಂದ. ರಾತ್ರಿಗಾಗಿ ದಶಮೀ ಡಬ್ಬಿಯು ಸಿದ್ಧವೇ ಇತ್ತು! ನಾನು ಹೊರಡುವ ಮುಂದೆ ಶ್ಯಾಮಾ-ನಮ್ಮ ಅಣ್ಣನ ಮಗ-ಗುರುಗುಟ್ಟುತ್ತ ನಮ್ಮ ತಾಯಿಯ ಸೀರೆಯ ಸೆರಗನ್ನು ಜಗ್ಗ ಹತ್ತಿದನು. ತಾಯಿ ಗಟ್ಟಿಯಾಗಿ “ಶ್ಯಾಮಗೆ…. ಮೋಟರ….ತೊಗೊಂಡು ಬಾರೋ….ರಾಮೂ” ಎಂದರು. ನಾನು ಅಗತ್ಯವಾಗಿ “ಅತ್ತರ ತರೂದಿಲ್ಲ ಮತ್ತ… ಆ…. ಅತ್ತರ ಪತ್ರಾ ಬರದು ಬಿಡು” ಎಂದು ನಗುತ್ತ ಟಾಂಗೆಯಲ್ಲಿ ಕುಳಿತುಕೊಂಡೆ.

ಸ್ಟೇಶನ್ನು ಮುಟ್ಟಿದ್ದಾಯಿತು. ಒಂದು ಪ್ರಶಸ್ತವಾದ ಕಂಪಾರ್ಟಮೆಂಟ್ ಹುಡುಕಿ ಕುಳಿತುಕೊಂಡೆ. ಗಾಡಿಯು ಬಿಟ್ಟಿತು. ನಾನು ಮೊದಲು ಏನು ಮಾಡಬೇಕೆಂಬದು ಹೊಳೆಯದೆ ಕಿಟಕಿಯಲ್ಲಿ ತಲೆಹಾಕಿ ನನ್ನೂರಿನ ರಮಣೀಯತೆಯನ್ನು ನೋಡಹತ್ತಿದೆ, ಗಾಡಿಯು “ಗಡ-ಗಡ್ – ದಢ-ದಡ್” ಎನ್ನುತ್ತ ನಮ್ಮೂರ ಸೀಮೆ ದಾಟಿ ಹಾದಿ ಹಿಡಿಯಿತು. ಎಷ್ಟು ಹೊತ್ತು ಹಾಗೆಯೇ ನಿಂತುಕೊಳ್ಳುವದು ? ಸಾಕಾಗಿ ಕುಳಿತುಕೊಂಡೆ. ಒಂದು ಕಾದಂಬರಿಯನ್ನು ಓದಲು ಹತ್ತಿದೆ. ಕಾದಂಬರಿಯೇನೋ ರಸಭರಿತವಿದ್ದರೂ ನಿರಸವಾಗಿಯೇ ತೋರಿತು ನನಗೆ. ಅದೆಕೋ….ನಾನರಿಯೆ…. ನನ್ನ ಸಂಗಡ ಈಗ ಒಬ್ಬ ಗೆಳೆಯನಿದ್ದಿದ್ದರೆ ಬೇಸರಿಕೆಯೆನಿಸಲು ಸಾಧ್ಯವೇ ಇರಲಿಲ್ಲ. ಕಂಪಾರ್ಟಮೆಂಟಿನಲ್ಲಿ ತುಂಬಿದ್ದವರು ಮರಾಟಿಯವರು. ಅವರ ಜೊತೆಗೆ ನಮ್ಮ ಕನ್ನಡದ ಭಾಷೆ ನಡೆದೀತೆ ? ಅದರಲ್ಲಿಯೂ ಅವರು ಧಾರವಾಡದಲ್ಲಿ ವಾಸಮಾಡಿದವರೇ…. ಅಂದ ಬಳಿಕ ?

ಗಾಡಿಯು ಸಾಗಿಯೇ ಸಾಗಿತು…. ನನ್ನ ಗೋಣ ಅಲುಗಾಡಿಯೇ ಅಲು ಗಾಡಿತು! ತೂಕಡಿಸಿ ಎದೆಯ ಮೇಲೆ ನನ್ನ ಪುಸ್ತಕವನ್ನಿಟ್ಟು ಮಲಗಿ ಕೊಂಡೆ. ಎಷ್ಟು ಸ್ಟೇಷನ್ನುಗಳು ಹೋದವೋ ನಾನರಿಯೆ. ರಾತ್ರಿ ಎಂಟು ಗಂಟೆಯಾಗಿರಬಹುದು. “ಮಿರಜ” ಸ್ಟೇಶನ್ ದಲ್ಲಿಯ ಗದ್ದಲಕ್ಕೆ ಎಚ್ಚತ್ತೆ. ನಾನು ನನ್ನ ಫಲಹಾರದ ಡಬ್ಬಿಯಲ್ಲಿದ್ದದ್ದನ್ನು ಪೂರೈಸಿಕೊಂಡು ಪ್ಲಾಟ್ ಫಾರ್ಮದ ಮೇಲೆ ಅಲೆದಾಡಿದೆ. ಹಸಿರು ಕೆಂಪು ದೀವಿಗೆಯ ಗಾರ್ಡರೂ ಅಡ್ಡಾಡಿಯೇ ಅಡ್ಡಾಡಿದರು. ಹುಡುಗರಂತಹ ಪೀಪಿ ಊದಲೇಯಿಲ್ಲ! ಅದರಲ್ಲಿ ಅದು ‘ಜಂಕ್ಷನ್’ ಸ್ಥಳ! ಬಿಡುವ ವೇಳೆ ೮-೪೦ ಕ್ಕೆಂದು ‘ಗೈಡ್’ ನಲ್ಲಿ ಇದ್ದದ್ದು; ಗಾಡಿ ಬಿಟ್ಟಿದ್ದು ೧೦ ಗಂಟೆಗೆ ಸರಿಯಾಗಿ; ಅಂತು ವೇಳೆಯ ಮಹತ್ವವನ್ನು ಕಲಿತುಕೊಂಡರೆ ರೈಲ್ವೆ ಕಂಪನಿ ಯಿಂದಲೇ ಕಲಿತುಕೊಳ್ಳಬೇಕು !!

ರಾತ್ರಿಯೆಲ್ಲವೂ ಗಾಡಿಯು ಅಲ್ಲಲ್ಲಿ ನಿಲ್ಲುತ್ತ ತೂಕಡಿಸುತ್ತ ಪ್ರಯಾಸದಿಂದ ಜಗ್ಗುತ್ತಿತ್ತು. ನಾನೂ ನನ್ನ ಹಾಸಿಗೆಯ ಮೇಲೆ ಒರಗಿಕೊಂಡೆ. ನನ್ನ ಎಡದ ಕಡೆಯ “ಸೀಟಿನ” ಮೇಲೆ ಒಬ್ಬಳು ಒಂದು ಕೂಸಿನೊಂದಿಗೆ ಮಲಗಿದ್ದಳು. ಬಹುತರ ಗಾಡಿಗಳಲ್ಲಿ ಹುಡುಗರು ಆಳುವ ರೂಢಿ…. ಮೇಲೆ…. ಮೇಲೆ ಅಲಾರಂ ಹೊಡೆದಂತೆ ನಮ್ಮನ್ನು ಎಚ್ಚರಗೊಳಿಸುತ್ತಿತ್ತು ಆ ಕೂಸು! ಸಂಸಾರ ಎಲ್ಲಿ ಹೋದರೂ ಬಿಟ್ಟಿದ್ದಲ್ಲವಲ್ಲ! ವೀರ ವಿಶ್ವಾಮಿತ್ರನಂಥ ಘೋರ ತಪಸ್ಸಿಗೆ ಶಕುಂತಲೆಯ…. ರೋದನ ಸ್ವರ ತಪ್ಪಲಿಲ್ಲ!…. ಅಂದ ಬಳಿಕ…. ನಮ್ಮ….ನಿಮ್ಮ….?

ಮೂಡಣದಿಕ್ಕು ನಸುಗೆಂಪಿನಿಂದ ರಂಜಿತವಾಗಿತ್ತು. ತಂಗಾಳಿ…. ಸಿಳ್ಳೆಂದು ಬೀಸುತ್ತಿತ್ತು. ಗಾಡಿಯು-ಮಧ್ಯ ಮಧ್ಯ ಕಿರುಚುತ್ತ ತನ್ನ ಕಪ್ಪಾದ ಹೊಗೆಯನ್ನು ಕಾರುತ್ತ ನಡೆದಿತ್ತು. ಯಾವದೋ ಒಂದು ಚಿಕ್ಕ ಸ್ಟೇಶನ್ನು ಅಡವಿಯ ಮಧ್ಯದಲ್ಲಿ ಸೇರಿಕೊಂಡಿತ್ತು. ರೈಲು ಅಲ್ಲಿ ನಿಂತಿತು. ನಾನು ಚಹ ಕುಡಿದೆ.

ಹೀಗೆ ಅತಿ ಬೇಸರಿಕೆಯಿಂದ ಗಾಡಿಯಲ್ಲಿ ಪ್ರವಾಸವನ್ನು ಮುಗಿಸಿ ಸಂಜೆ ೪ ಗಂಟೆಗೆ ಮುಂಬಯಿ ಪಟ್ಟಣ ಸೇರಿಕೊಂಡೆ. ಮುಂಬಯಿ ವರ್ಣನೆಯನ್ನು ಮಾಡುವದು ನನಗೆ ಇಲ್ಲಿ ಬೇಕಿಲ್ಲ-ನೀವು ಹಲವರು ನೋಡಿರಲಿಕ್ಕೆ ಸಾಕು. ನಾನು ತಪ್ಪಿ ಏನನ್ನಾದರೂ ಹೇಳುವದು. ಅದು ಬೇಡವೇ ಬೇಡ. ಮೊದಲೇ ತಂತಿಯಿಂದ ನನ್ನ ಗೆಳೆಯನಿಗೆ ತಿಳಿಸಿದ್ದೆನಾದ್ದರಿಂದ-ಗೋಪು ಸ್ಟೇಶನದಲ್ಲಿ “Wel-Come” ಮಾಡಲು ನಿಂತಿದ್ದ. ಈರ್ವರು ಟ್ರಾಮ್ ನಲ್ಲಿ ಕುಳಿತು-ಕಾಲೇಜ ಹಾಸ್ಟೆಲಿಗೆ ಹೋದೆವು. ವಾಡಿಕೆಯಂತೆ ನನ್ನ ಗೆಳೆಯ ತನ್ನ ಗೆಳೆಯರ ಗುರುತು ಮಾಡಿಕೊಟ್ಟ. ನಾನು ಏಳೆಂಟು ದಿವಸ ಸುಖವಾಗಿ ಮುಂಬಯಿಯಲ್ಲಿ ಕಳೆದು ಪುನಃ ನನ್ನೂರಿಗೆ ಹೊರಡಬೇಕೆಂದು ನನ್ನ ಗೆಳೆಯನನ್ನು ವಿಚಾರಿಸಲು ಅವನು “ನಾನೂ ಪುಣೆಯವರೆಗೆ ಬರುತ್ತೇನೆ. ಪುಣೆಯಲ್ಲಿ ಎರಡು ದಿವಸ ನಿಂತು ಊರಿಗೆ ಹೋಗಬಹುದು” ಎಂದನು. ಅಂದು ಸಂಜೆಗೆ ನಾವು ಪುಣೆಗೆ ಹೊರಟೆವು. ನನ್ನ ಗೆಳೆಯನು ತನ್ನದೇನೋ ಕೆಲಸವಿರುವದೆಂದು ಬೇರೊಬ್ಬರ ಮನೆಗೆ ಹೋದನು. ನಾನು ಮಾತ್ರ ಸ್ಟೇಶನ್ಕೆ ಅತಿ-ಸಮೀಪದಲ್ಲಿರುವ ‘ಮಾಧವಾಶ್ರಮ’ ಎಂಬ ಹೊಟೇಲಿನಲ್ಲಿ ಇಳಿದುಕೊಂಡೆ.

ಊಟ ಮುಗಿಸಿಕೊಂಡು ಸಂಜೆಯ ಸಮಯಕ್ಕೆ ಊರೊಳಗೆ ತಿರುಗಾಡುವದಕ್ಕೆ ಹೊರಟೆ. ಪುಣೆಯಲ್ಲಿ ಅತ್ತ ಇತ್ತ ನೋಡಿದಲ್ಲಿ ಹಾಯ್ ಸ್ಕೂಲಗಳು ಮತ್ತು ಕಾಲೇಜುಗಳು ! ನಾನು ಹಾಗೆ ಅಲೆದಾಡಿ ‘ಫರ್ಗ್ಯೂಸನ್ ರೋಡು’ ಹಿಡಿದು ಬರುತ್ತಿದ್ದೆ. ಅಲ್ಲಿ ಸಾಲು ಮನೆಗಳ ಮಧ್ಯದ ಕಟ್ಟೆಯ ಮೇಲೆ ಓರ್ವ ಹೆಣ್ಣು ಮಗಳನ್ನು ಕಂಡೆ. ಅದು ಎಂದೋ ನೋಡಿದ ಮುಖ! ಅದರಲ್ಲಿಯೂ ಈಗ ಅವಳು ಯೌವನದಿಂದ ತುಂಬಿದ ದೇಹದಿಂದ, ಗುರುತಿಸಲು ಕೂಡ ಬರುವಂತಿದ್ದಿಲ್ಲ. ನೋಡಿ ಮಾತನಾಡಿಸುವದೆಂತು ? ನಾನು ಹಾಗೆಯೇ ಮುಂದಕ್ಕೆ ಸಾಗಿದೆ. ಅಷ್ಟರಲ್ಲಿಯೇ ಒಂದು ಚಿಕ್ಕ ಹುಡುಗನು ಬಂದು ನನ್ನನ್ನು ತಳ್ಳಿ ‘ಅಲ್ಲಿ ಬರ್ರಿ…. ನಿಮ್ಮನ್ನು ಕರೆಯುತ್ತಾರೆ’ ಎಂದನು. ನನಗೆ ಆಶ್ಚರ್ಯವಾಯಿತು. ಪುಣೆಯಲ್ಲಿ ಕನ್ನಡ ಮಾತಾಡಿಸಿ ಕರೆಯುತ್ತಿದೆ ಹುಡುಗ ! ಇವರು ಕನ್ನಡ ನಾಡಿನವರಿರಬಹುದೆಂದು ಭಾವಿಸಿ ಹುಡುಗನ ಬೆನ್ನು ಹತ್ತಿ ಹೊರಟೆ. ನಾನು ಮನೆಯ ಮುಂದೆ ಬರುತ್ತಲೆ ಆ ಹೆಣ್ಣು ಮಗಳು ‘ಯಾಕ ರಾಮಣ್ಣ, ನನ್ನ ಗುರುತು ಹತ್ತಲಿಲ್ಲವೇ-ನೋಡಿ ಹಾಗೆಯೇ ಹೋದಿ ?’ ಎಂದಳು. ನನಗೆ ಹಿಂದಿನ ನೆನಪು ಆಯಿತು. ಹಿಂದೆ ನಮ್ಮ ಮನೆಯ ಹತ್ತಿರವೇ ಆ ಹೆಣ್ಣು ಮಗಳ ತಂದೆಯವರು ಇದ್ದರು. ಇವರ ಮನೆಯವರಿಗೂ ನಮಗೂ ಪರಿಚಯ. ಈ ಹೆಣ್ಣ ಮಗಳು-ಸಣ್ಣವಳು-ಆಗ, ಹಿಂದಿನ ವಿಚಾರ ನೆನೆದರೆ ನನಗೆ ನಗು ಬರುತ್ತಿದೆ-ಈ ಕಮಲುವನ್ನು ನಾನು ಎಷ್ಟೋ ಸಲ ಹೊಡೆದು ಅವರ ತಾಯಿಯಿಂದ ಪೆಟ್ಟು ತಿಂದಿದ್ದೇನೆ. ಇದಕ್ಕೂ ಹೆಚ್ಚಿನ ಗುರುತು ಬೇಕಿದ್ದೇನು ? ಮತ್ತೆ ಪುನಃ ಕಮಲುವೇ “ಬಾ ರಾಮಣ್ಣ ಒಳಗೆ” ಎಂದಳು. ನನಗೆ ಏನೂ ತೋಚದಾಯಿತು. “ನಾನು ಮಾಧವಾಶ್ರಮದಲ್ಲಿದ್ದೇನೆ ಮತ್ತೆ ಬರುತ್ತೇನೆ” ಎಂದು ಹೇಳಿ ಹೊರಟುಬಿಟ್ಟೆ.

ನಾನು ಮಾರನೆಯ ದಿನ ಮಧ್ಯಾಹ್ನ ಮಾಧವಾಶ್ರಮದಲ್ಲಿ ಊಟ ತೀರಿಸಿಕೊಂಡು ಮೇಲಂತಸ್ತಿನಲ್ಲಿ ಒಂದು ಕೊಟಡಿಯಲ್ಲಿ ವೃತ್ತ ಪತ್ರವನ್ನು ಓದುತ್ತಾ ಒರಗಿಕೊಂಡಿದ್ದೆ. ನನ್ನ ಎಡಕೈಯಲ್ಲಿಯ “Viceroy ” ಸಿಗಾರೇಟ ಸಾವುಕಾಶವಾಗಿ ಆಕಾಶಕ್ಕೆ ಹೊಗೆ ತೂರುತ್ತಿತ್ತು.

ಊಟದ ಜಡತ್ವದಿಂದಲೋ ಅಥವಾ ತುಸು ಹೆಚ್ಚು ತಿರುಗಾಡಿದ್ದರಿಂದಲೂ ಆಯಾಸವಾದಂತಾಗಿ ಕಣ್ಣುಗಳು ತಾನೆ ಮುಚ್ಚುತ್ತಲಿದ್ದವು. ಮುಚ್ಚಿದ ಕಣ್ಣನ್ನು ತೆರೆದು ಸುತ್ತಲೂ ನೋಡಿ ಪುನಃ ಮಲಗಿಕೊಳ್ಳುತ್ತಿದ್ದೆ. ಹೀಗೆ ನಡೆದಿರಲು -ಒಬ್ಬ ಆಳು ನನ್ನ ರೂಮಿನ ಬಾಗಿಲು ಬಡಿದು- “ರಾಮ ರಾವ-ಧಾರವಾಡ ಅನ್ನುವವರು ತಾವೇ ಏನು ?” ಎಂದು ಪ್ರಶ್ನಿಸಿದ. ಯಾಕೆ – ನಾನೆ-ಯಾರಾದರು ಬಂದಿರುವರೋ ? ಎಂದೆ. ಅಷ್ಟರಲ್ಲಿಯೇ ನನ್ನ ಓರಿಗೆಯವರೇ ಆದ ತುಸು ಎತ್ತರವಾದ ವ್ಯಕ್ತಿ “ರಾಮರಾವ-ನಮ್ಮ ಮನಿಗೆ ಬರಬೇಕು. ನನ್ನ ಹೆಂಡತಿ ತಮ್ಮ ಬಗ್ಗೆ ನನಗೆ ತಿಳಿಸಿದಳು. ಈ ಹೊತ್ತು ರಾತ್ರಿ ನಮ್ಮಲ್ಲಿಯೇ ಊಟಕ್ಕೆ ಬರಬೇಕಾಗಿ ವಿನಂತಿ” ಎಂದು ಹೇಳಿ ಅತ್ತ ಇತ್ತ ನೋಡುತ್ತಿರಲು ನಾನು ಅವರಿಗೆ ‘ಬನ್ನಿ, ಇಲ್ಲಿ ಕುಳಿತುಕೊಳ್ಳಿ’ ಎಂದು ಹೇಳಿ ಮಾಧವಾಶ್ರಮದ ಹುಡುಗನಿಗೆ ಚಹಾ ತರಲು ಹೇಳಿ ಅವರನ್ನು ಪಕ್ಕದಲ್ಲೇ ಕೂಡಿಸಿ ಕೊಂಡೆ.

“ಕಮಲಕ್ಕನನ್ನು ನಾನು ನೋಡಿ ೭-೮ ವರುಷಗಳಾಗಿತ್ತು. ಅವರು ನನ್ನ ಗುರುತು ಹಿಡಿದದ್ದು ದೊಡ್ಡದು” ಎಂದೆ.
ಅದರಲ್ಲೇನಿದೆ ರಾಮರಾವ ನಮ್ಮವರು ಬಂದರೆ…. ಗುರುತು ಹತ್ತದೆ? ಎಂದರು ಅವರು.

ನಾನು “ತಾವು ಇಲ್ಲಿ ಏನು ಮಾಡುತ್ತ ಇದ್ದೀರಿ” ಎಂದು ಪ್ರಶ್ನಿಸಿದೆ. “ನಾನೋ ? ಡಾಕ್ಟರ್, ಪ್ರಾಕ್ಟೀಸ ತಕ್ಕಮಟ್ಟಿಗಿದೆ” ಎಂದರು.

ಇಷ್ಟರಲ್ಲಿಯೇ ಚಹಾ ಬಂದಿತು. ಈರ್ವರೂ ಅದನ್ನು ಸೇವಿಸಿ ಸಿಗರೇಟು ಹೊತ್ತಿಸಿದೆವು. ತುಸು ಆ ಮಾತು ಈ ಮಾತು ಆದಮೇಲೆ ಮತ್ತೆ ಡಾಕ್ಟರರು “ಆಯಿತು ರಾತ್ರಿ ೮|| ಗಂಟೆಗೆ ಟಾಂಗಾದಲ್ಲಿ ಬಂದುಬಿಡ್ರಿ” ಎಂದು ಹೊರಟರು.

ಏಳುವರೆ ಗಂಟೆಯಾಯಿತೆಂದು ಸೂಚಿಸಲು ಗಡಿಯಾರದಲ್ಲಿ ಠಣ್ ಎಂದು ಒಂದು ಬಾರಿ ಸದ್ದಾಯಿತು. ನಾನು ಹೋಟೆಲ್ಲಿನ ಬಿಸಿಲುಮಚ್ಚಿನ ಮೇಲೆ ನಿಂತು ರಸ್ತೆಯನ್ನು ನೋಡುತ್ತಿದ್ದೆ. ಸಾಯಿಕಲ್ಲುಗಳ ಮೇಲೆ ಹತ್ತಿ ಓಡುತ್ತಿರುವ ಕಾಲೇಜ್ ಸ್ಟೂಡೆಂಟರೆ ಮೋಜು! ಬೀದಿಯ ಬೆಳಕಿನಲ್ಲಿ ಓಡಾಡುತ್ತಿರುವ ಬೆಡಗಿನ ಯುವತಿಯರ ದೃಶ್ಯ! ಹೀಗೆ ನಾನು ನೋಡುತ್ತ ನಿಂತಿರಲು ಬಾಗಿಲ ಬಳಿಯಲ್ಲಿ “ರಾವಸಾಬ” ಎಂಬ ಟಾಂಗಾದವನ ಧ್ವನಿ ಕೇಳಿಸಿತು. ನಾನು ಡ್ರೆಸ್ ಮಾಡಿಕೊಂಡು ಹೊರಟೆ.

ತುಸು ವೇಳೆಯಲ್ಲಿಯೇ ಹಲವಾರು ಬೀದಿಗಳನ್ನು ದಾಟಿ, ಟಾಂಗೆಯು ಆ ಮನೆಯ ಮುಂದೆ ನಿಂತುಕೊಂಡಿತು. ಒಳಗಿನಿಂದಲೇ “ಕಮ್ ಇನ್” ಎಂದು ಡಾಕ್ಟರರು ಹೊರಗೆ ಬಂದು ಕೈ ಹಿಡಿದು ಕರೆದುಕೊಂಡರು. ಒಳಗೆ ಕೋಣೆಯಲ್ಲಿ ಹೋಗಿ ಈರ್ವರು ಕುಳಿತುಕೊಂಡೆವು. ಡಾಕ್ಟರರು ಮಾತಾಡಲು ಮೊದಲು ಮಾಡಿದರು. ಅಷ್ಟರಲ್ಲಿಯೇ ನನ್ನನ್ನು ಹಿಂದಿನ ದಿನ ಹಾದಿಯಲ್ಲಿ ಹೋಗುತ್ತಿದ್ದಾಗ ಕರೆದ ಪುಟ್ಟ ಮಗು ಬಂದು “ಮಾಮ ಊಟಕ್ಕೆ ಬಾ”…. ಎಂದಿತು. ಡಾಕ್ಟರರು ಪಕ್ಕನೆ ನಕ್ಕು ‘ನಿನ್ನ ಮಾಮಾ ಯಾರೋ?’ ಎಂದರು. ಅದಕ್ಕೆ ಮಗು ಮುಂದಕ್ಕೆ ಬಂದು ನನ್ನ ಕೈ ಹಿಡಿದು ಕೊಂಡಿತು.

ಅಂದು ಊಟವು ನೆಮ್ಮದಿಯಾಗಿ ಸಾಗಿತು. ಕಮಲು-ಅತಿ ಉತ್ಸುಕತೆಯಿಂದ ಬಡಿಸುತ್ತಿದ್ದಳು. ಊಟ ನಿಧಾನವಾಗಿ ಸಾಗಿತು. ನಾನು ಮನಬಿಚ್ಚಿ ಮಾತನಾಡುತ್ತಿದ್ದೆ ಡಾಕ್ಟರರೊಂದಿಗೆ, ಊಟ ಮುಗಿಯಿತು. ವೀಳೆಯನ್ನು ಮೆದ್ದು ನಾನು “ಆಯಿತು. ಡಾಕ್ಟರ ಅಪ್ಪಣೆ ಕೊಡ್ರಿ” ಎಂದೆ.

ಡಾಕ್ಟರರು ಒಳಗೆ ಹೋಗಿ ತಮ್ಮ ಪತ್ನಿಯನ್ನು ಕರೆತಂದರು. ಕಮಲು ತುಸು ಮುಗುಳು ನಗೆಯಿಂದ “ಇನ್ನ ಪುಣೆಗೆ ಬಂದಾಗ ನಮ್ಮ ಮನೆಗೇ ಬರಬೇಕು” ಎಂದಳು.

ನಾನು “ಆಗಲಿ” ಎಂದು ನಗುತ್ತ- “ಅದಕ್ಕೇನು ಕಮಲಕ್ಕ ನಿನ್ನ ಲಗ್ನದಲ್ಲಿ ನಾನಿರಲಿಲ್ಲ…. ನಿಮ್ಮ ಪತಿಯ ಹೆಸರೇನು?” ಎಂದೆ. ಅದಕ್ಕೆ ಆಕೆ ನಗುತ್ತ, ತನ್ನ ಮುದ್ದು ಮಗುವಿಗೆ ‘ಹೇಳು ಕಿಟ್ಟು ಅವರ ಹೆಸರು’ ಎಂದಳು. ಹೀಗೆಂದು ಅತಿ ಪ್ರೀತಿಯ ಭಾವದಿಂದ ತನ್ನ ಪತಿಯನ್ನೊಮ್ಮೆ ನೋಡಿ ಪುನಃ ತಿರುಗಿ ನನ್ನನ್ನು ಭಾತೃಭಾವದಿಂದ ನೋಡಿದಳು. ಒಂದೇ ನಿಮಿಷದ ದೃಷ್ಟಿಯಲ್ಲಿಯ ಬದಲಾವಣೆಯನ್ನು ಕಂಡು ನಾನು ಬೆರಗಾದೆ!

ಇದೆಲ್ಲವೂ ದೇವರ ಸೃಷ್ಟಿಯ ವೈಶಿಷ್ಟ್ಯವಲ್ಲದೆ ಮತ್ತಿನ್ನೇನು ? ಹೀಗೆ ವಿಚಾರಮಾಡುತ್ತಿರಲು ಅಷ್ಟರಲ್ಲಿಯೇ ಹೊರಗೆ ಟಾಂಗಾದವನು “ರಾವ ಸಾಬ” ಎಂದು ಕೂಗಿದ!


Previous post ಪಲಾಯನ
Next post ಸುಂದರ ಉಷಾ ಸ್ವಪ್ನ

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…