ತಿರುಗುಬಾಣ

ತಿರುಗುಬಾಣ

ಚಿತ್ರ: ಮೊಹಮ್ಮದ್ ನಝರತ್
ಚಿತ್ರ: ಮೊಹಮ್ಮದ್ ನಝರತ್

ತಾಲ್ಲೂಕಿನ ಕೇಂದ್ರ ಸ್ಥಾನದಿಂದ ಕೆಲವೇ ಕಿಲೊ ಮೀಟರ್ ದೂರದಲ್ಲಿದ್ದ ಆ ಸಣ್ಣ ರೈಲ್ವೇ ಸ್ಟೇಶನ್‌ಗೆ ಯಾವುದೇ ಮಹತ್ವವಿರಲಿಲ್ಲ. ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಅವರ ಅನುಕೂಲತೆಗಾಗಿ ಅಲ್ಲೊಂದು ರೈಲ್ವೇ ಸ್ಟೇಶನ್ ನಿರ್ಮಾಣ ಹೊಂದಿದ್ದರೂ ಮುಂದೆ ಸ್ವಾತಂತ್ರ್ಯ ಬಂದು ಅರವತ್ತು ವರ್ಷ ಸಂದರೂ ಈ ರೈಲ್ವೇ ನಿಲ್ದಾಣ ಯಾವುದೇ ಪ್ರಗತಿ ಕಂಡಿಲ್ಲ. ದಿನಕ್ಕೊಮ್ಮೆ ಪ್ರಯಾಣಿಕರ ರೈಲು ಒಂದು ಈ ನಿಲ್ದಾಣದಿಂದ ಹಾದು ಹೋಗುತ್ತಿದೆಯಾರೂ, ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿತ್ತು. ರೈಲು ಬಂದ ಸಮಯದಲ್ಲಿ ಸ್ವಲ್ಪ ಜನ ಸಂದಣಿ ಕಾಣುತ್ತಿತ್ತು. ರೈಲು ಹೋದ ಮೇಲೆ ಇಡೀ ನಿಲ್ದಾಣ ಬಿಕೋ ಎನ್ನುತ್ತಿತ್ತು. ಒಬ್ಬ ಸ್ಟೇಶನ್ ಮಾಸ್ಟರ್ ಮತ್ತಿಬ್ಬರು ಕಿರಿಯ ನೌಕರರು ಹಾಗೂ ಒಂದಿಬ್ಬರು ವಾಚ್‌ಮೆನ್ ಬಿಟ್ಟರೆ ಹೇಳಿಕೊಳ್ಳುವ ಸಿಬಂದಿಗಳೂ ಇಲ್ಲ. ಇಷ್ಟು ಮಂದಿ ನೌಕರರಲ್ಲಿ ನಿವೃತ್ತಿಯ ಅಂಚಿಗೆ ಬಂದ ಹಿರಿಯ ಅನುಭವಿ ಕೆಲಸಗಾರ ಅಂದರೆ ರಾತ್ರಿಪಾಳೆ ಮಾಡುವ ಬಾಲನ್ ನಾಯರ್ ಒಬ್ಬ ಮಾತ್ರ.

ಬಾಲನ್ ನಾಯರ್ ಮೂಲತಃ ಕೇರಳದವರು. ಸುಮಾರು ಮೂವತ್ತು ವರುಷದ ಹಿಂದೆ ನಾಲ್ಕು ಗ್ಲಾಸು, ಮಗ್ ಹಾಗೂ ಸ್ಟವ್ ಹಿಡಿದುಕೊಂಡು ರೈಲಿನಲ್ಲಿ ಬಂದವನು ಮತ್ತೆ ಈ ಊರನ್ನು ಬಿಟ್ಟು ಹೋಗಲಿಲ್ಲ. ಸ್ಟೇಶನ್ನ ಮೂಲೆಯಲ್ಲಿ ಸ್ಟವ್ ಹೊತ್ತಿಸಿ, ಬಿಸಿ ಬಿಸಿ ಚಹಾ ತಯಾರಿಸಿ, ರೈಲು ಬರುವ ಸಮಯದಲ್ಲಿ ಪ್ರಯಾಣಿಕರಿಗೆ ಚಹಾ ಕುಡಿಸಿ, ಅಧಿಕಾರಿಗಳಿಂದಲೂ ಸೈ ಎನಿಸಿಕೊಂಡ ಈ ಹುಡುಗ ಮುಂದೆ ದಿನಗೂಲಿ ಆಧಾರದಲ್ಲಿ ರಾತ್ರಿ ಪಾಳೆಯಗಾರನಾಗಿ ಸೇರಿಕೊಂಡ. ವರ್ಷಗಳು ಉರುಳಿದಂತೆ ದಿನಗೂಲಿ ಹುದ್ದೆಯಿಂದ ಖಾಯಂ ಹುದ್ದೆಗೆ ನೇಮಕಾತಿ ಹೊಂದಿದ ಈ ಬಾಲನ್ ನಾಯರ್ ಸಿಬ್ಬಂದಿಗಳಿಗೆ “ಬಾಲು” ಆದ. ಈಗ ನಿವೃತ್ತಿಯ ಅಂಚಿನಲ್ಲಿರುವ ಈ ಬಾಲನ್ ನಾಯರ್ ಕಿರಿಯರಿಗೆಲ್ಲಾ ಬಾಲಣ್ಣ ಆಗಿ ನಿಯತ್ತಿನ ಸೇವೆಗೆ ಹೆಸರುವಾಸಿಯಾದ.

ಬಾಲಣ್ಣ ರಾತ್ರಿ ಪಾಳೆಯವನ್ನು ಶಿಪ್ಟ್‌ನಲ್ಲಿ ಮಾಡುತ್ತಿದ್ದ. ಸಂಜೆ ರೈಲು ಬರುವ ಸಮಯ ಅಂದರೆ ಸುಮಾರು ೬ ಗಂಟೆಗೆ ಹಾಜರಾದರೆ, ರಾತ್ರಿ ೧ ಗಂಟೆಗೆ ಮನೆಗೆ ಮರಳುತ್ತಿದ್ದ. ಒಂದು ವಾರ ೬ ಗಂಟೆಯಿಂದ ೧ ಗಂಟೆಯವರೆಗೆ ಡ್ಯೂಟಿಯಾದರೆ ಮುಂದಿನ ವಾರ ೧ ಗಂಟೆ ರಾತ್ರಿಯಿಂದ ಬೆಳಿಗ್ಗೆ ೮ ಗಂಟೆಯವರೆಗೆ ಡ್ಯೂಟಿ ನಿರ್ವಹಿಸುತ್ತಿದ್ದ. ಅವನ ಮನೆಯಲ್ಲಿ ಅವನ ಮುದ್ದಿನ ಎರಡು ಅವಳಿ ಹೆಣ್ಣು ಮಕ್ಕಳು ಮಾತ್ರ ಇರುತ್ತಿದ್ದರು. ಹೆಂಡತಿಯನ್ನು ಈ ಮಕ್ಕಳು ಬಾಲ್ಯದಲ್ಲಿರುವಾಗಲೇ ಕಳೆದುಕೊಂಡ ಬಾಲಣ್ಣ ಆ ಮಕ್ಕಳಿಗೆ ತಂದೆ ತಾಯಿ ತಾನೇ ಆಗಿದ್ದ. ಅವರ ದಾರಿ ಸುಗಮವಾಗಲಿ ಎಂದು ಅವನು ಮರು ಮದುವೆ ಮಾಡಿಕೊಂಡಿಲ್ಲ. ಸಹ ನೌಕರರ ಎಂತಹ ಒತ್ತಡಕ್ಕೂ ಮಣಿಯದೆ, ಮಕ್ಕಳನ್ನು ತಾನೇ ಉಣಿಸಿ ಬೆಳೆಸಿ, ದೊಡ್ಡವರನ್ನಾಗಿ ಮಾಡಿದ್ದ. ಸ್ಟೇಶನಿನ ಅನತಿ ದೂರದಲ್ಲಿದ್ದ ರೈಲ್ವೇ ಇಲಾಖೆಯ ಒಂದು ಸಣ್ಣ ಶೆಡ್ ಅವನ ವಾಸಸ್ಥಾನವಾಗಿತ್ತು. ಮನೆಯ ಸಂಪೂರ್ಣ ಜವಬ್ದಾರಿಯನ್ನು ಮಕ್ಕಳು ನೋಡಿಕೊಳ್ಳುತ್ತಿದ್ದರು. ಬಾಲಣ್ಣನಿಗೆ ಯಾವುದೇ ಸಮಸ್ಯೆ ಈ ಇಳಿವಯಸ್ಸಿನಲ್ಲಿ ಉಂಟಾಗಲಿಲ್ಲ. ಈ ಮಕ್ಕಳು ಮದುವೆಯಾಗಿ ಹೋದ ಮೇಲೆ ನನ್ನ ಗತಿಯೇನು? ಎಂದು ಒಮ್ಮೊಮ್ಮೆ ಚಿಂತಿಸುತ್ತಿದ್ದ.

ಅದೊಂದು ಅಮವಾಸ್ಯೆಯ ರಾತ್ರಿ. ಬಾಲಣ್ಣ ತನ್ನ ಡ್ಯೂಟಿ ಮುಗಿಸಿ ಮನೆಯ ಕಡೆ ಹೊರಟ. ಮನೆಗೂ – ಸ್ಟೇಶನಿಗೂ ೨ ಪರ್ಲಾಂಗು ದೂರ. ರಾತ್ರಿ ಜಾವ ಸುಮಾರು ೧ ಗಂಟೆ ದಾಟಿರಬಹುದು. ಬಾಲಣ್ಣ ಮನೆಗೆ ತಲುಪಿ ಮಲಗುವ ವ್ಯವಸ್ಥೆ ಮಾಡುತ್ತಿದ್ದ. ಮಕ್ಕಳು ಕೂಡಾ ತಮ್ಮ ಕೋಣೆಗೆ ಮಲಗಲು ತೆರಳುತ್ತದ್ದರು. ಆಗ ಯಾರೋ ಜೋರಾಗಿ ಬಾಗಿಲನ್ನು ತಟ್ಟಿದ ಶಬ್ದ ಕೇಳಿಸಿತು. ಪ್ರಾಯಕ್ಕೆ ಬಂದ ಎರಡು ಹೆಣ್ಮಕ್ಕಳಿರುವಾಗ ಭಯವಾಗುವುದು ಸಹಜ ತಾನೇ? ಅದರೂ ಬಾಲಣ್ಣ ಧೈರ್ಯ ತಂದುಕೊಂಡ. ತನ್ನ ಸಣ್ಣ ಮಗಳು ಪಿಂಕಿಗೆ ಬಾಗಿಲು ತೆಗೆಯಲು ಹೇಳಿದ. ದೊಡ್ಡ ಮಗಳಿಗಿಂತ ಸಣ್ಣವಳು ಸ್ವಲ್ಪ ಚೂಟಿ ಹಾಗೂ ಧೈರ್ಯವಂತೆ. ರೂಪದಲ್ಲಿ ಇಬ್ಬರೂ ಒಂದೇ ರೀತಿ ಇದ್ದರೂ ಬುದ್ಧಿವಂತಿಕೆ, ಜಾಣ್ಮೆಯಲ್ಲಿ ಸಣ್ಣವಳು ಮುಂದು. ಪಿಂಕಿ ಬಾಗಿಲು ತೆರೆಯಲು ಮುಂದಾದಳು. ಅದು ಚಳಿಗಾಲದ ಸಮಯ. ಚಳಿಗಾಳಿ ಬಲವಾಗಿ ಬೀಸುತ್ತಿತ್ತು. ಒಂದು ಚೂರು ಗಾಳಿ ಒಳ ಹೊಕ್ಕರೂ ಮೈ ಕೊರೆಯುತ್ತಿತ್ತು. ಇದಕ್ಕೆ ಸಾಲದೆಂಬಂತೆ ಅಗಾಗ್ಗೆ ಬೀಳುತ್ತಿರುವ ಹಿಮರಾಶಿ. ಸುಳಿಗಾಳಿಯ ಕಾಟಬೇರೆ. ಪಿಂಕಿ ನಡುಗುವ ಕೈಯಿಂದ ಬಾಗಿಲು ತೆರೆದು, ಟಾರ್ಚ್ ಬೆಳಕನ್ನು ಹೊರಗೆ ಚೆಲ್ಲಿದಳು. ಯಾವುದೋ ಒಬ್ಬ ತರುಣ, ಗೋಡೆಯನ್ನು ಆಸರೆಯಾಗಿ ಹಿಡಿದು ನಿಂತಿದ್ದ. ಚಳಿಗಾಲದ ಉಡುಪು ಹಾಕಿರಲಿಲ್ಲ. ಮಾತು ಬಾಯಿಂದ ಹೊರಗೆ ಬರುತ್ತಿರಲಿಲ್ಲ. ಅವನು ನಡುಗುತ್ತಿದ್ದ. ಅವನ ಬಲಗಾಲಿನ ಮೊಣಕಾಲಿನ ಮೇಲೆ ನೆತ್ತರಿನ ಕಲೆ ಇದ್ದವು. ನೋಡು ನೋಡುತ್ತಿದ್ದಂತೆ ಅವನು ಎರಡು ಹೆಜ್ಜೆ ಮುಂದೆ ಇಟ್ಟು ಬಾಗಿಲಿಗೆ ಅಡ್ದವಾಗಿ ಬಿದ್ದು ಬಿಟ್ಟ. ಇವೆಲ್ಲಾ ಒಂದು ಕ್ಷಣದಲ್ಲಿ ನಡೆದು ಹೋಯಿತು. ಪಿಂಕಿಯ ಅಕ್ಕ ಡಾಲಿ, ತಂದೆ ಬಾಲಣ್ಣ ಆಶ್ಚರ್ಯ ಚಕಿತರಾಗಿ ಒಬ್ಬರ ಮುಖ ಒಬ್ಬರು ನೋಡಿಕೊಂಡರು.

ಮನೆ ಬಾಗಿಲಿಗೆ ಬಂದವನನ್ನು ಹೊರದಬ್ಬುವ ಕ್ರೂರಿ ಬಾಲಣ್ಣ ಆಗಿರಲಿಲ್ಲ. ಕಷ್ಟ ಸುಖಗಳಲ್ಲಿ ಬಹುಪಾಲು ಕಷ್ಟವನ್ನೇ ಅನುಭವಿಸಿದವನು. ಸಿರಿತನ ಬರುತ್ತದೆ ಹೋಗುತ್ತದೆ. ಆದರೆ ಬಡತನ ಶಾಶ್ವತ ಎಂದು ಬಲವಾಗಿ ನಂಬಿದವನು. ಅವನು ತಡಮಾಡಲಿಲ್ಲ. ಎಲ್ಲರೂ ಸೇರಿ ಅವನನ್ನು ಎತ್ತಿ ಮನೆಯೊಳಗೆ ತಂದು ಹಾಸಿಗೆಯಲ್ಲಿ ಮಲಗಿಸಿದರು. ಮುಖಕ್ಕೆ ನೀರು ಸಿಂಪಡಿಸಿದರು. ಮೈಮೇಲೆ ಕಂಬಳಿ ಹೊದಿಸಿದರು. ಅವನಿಗೆ ಎಚ್ಚರ ಬಂತಾದರೂ ಅವನು ಎದ್ದು ನಿಲ್ಲುವ ಪರಿಸ್ಥಿತಿಯಲ್ಲಿರಲಿಲ್ಲ. ಅವನ ಮೊಣಕಾಲಿನಿಂದ ನೆತ್ತರು ಹರಿದು ಹೋಗುತ್ತಲೇ ಇತ್ತು. ಅವನ ಪ್ಯಾಂಟನ್ನು ಕಳಚಿ ಅವನ ಗಾಯಕ್ಕೆ ಮುಲಾಂ ಹಚ್ಚಿ ಬ್ಯಾಂಡೇಜ್ ಕಟ್ಟಿದರು. ಅದು ಫಲಕಾರಿಯಾಗಲಿಲ್ಲ. ಗಾಯ ದೊಡ್ಡದಾದ್ದುರಿಂದ ಡಾಕ್ಟರರ ಅವಶ್ಯಕತೆಯಿತ್ತು. ಬಾಲಣ್ಣ ತಡಮಾಡಲಿಲ್ಲ. ಟಾರ್ಚ್ ಲೈಟು ಹಿಡಿದುಕೊಂಡು ಮಕ್ಕಳಿಗೆ ಜಾಗ್ರತೆ ಹೇಳಿ, ನಗರಕ್ಕೆ ಹೋಗಿ ಡಾಕ್ಟರರನ್ನು ಕರೆದುಕೊಂಡು ಬಂದರು. ಗಾಯವನ್ನು ಪರಿಶೀಲಿಸಿದ ಡಾಕ್ಟರು, ಎಲುಬು ತುಂಡಾಗಲಿಲ್ಲ. ಆದರೆ ಒಂದು ವಾರದ ‘ಬೆಡ್‌ರೆಸ್ಟ್’ ಖಂಡಿತ ಬೇಕಾಗಿದೆ ಎಂದರು. ಕಾಲಿಗೆ ಬ್ಯಾಂಡೇಜ್ ಕಟ್ಟಿ ಮದ್ದು ಇಂಜೆಕ್ಷನ್ ಕೊಟ್ಟರು. ಬೆಳಗಾಯಿತು. ತರುಣ ಸ್ವಲ್ಪ ಸುಧಾರಿಸಿದಂತೆ ಕಂಡು ಬಂದ. ಆದರೆ ಎದ್ದು ನಡೆದಾಡಲು ಮಾತ್ರ ಸಾಧ್ಯವಿರಲಿಲ್ಲ. ತರುಣ ತನ್ನ ಕಥೆ ಹೇಳಿದ. ನಾನೊಬ್ಬ ಹವ್ಯಾಸೀ ಪೋಟೋಗ್ರಾಫರ್. ತಾನು ರೈಲಿನಲ್ಲಿ ಪ್ರಯಾಣಿಸುವಾಗ ಕೆಲವು ದರೋಡೆಗಾರರು ನನ್ನ ಹಣ, ಕ್ಯಾಮರಾ, ದರೋಡೆ ಮಾಡಿ, ರೈಲಿನಿಂದ ಹೊರಗೆ ತಳ್ಳಿ ಬಿಟ್ಟರು. ನೀವು ಸಕಾಲದಲ್ಲಿ ಶುಶ್ರೂಷೆ ಮಾಡದಿರುತ್ತಿದ್ದರೆ, ಬಹುಶಃ ನಾನು ಉಳಿಯುತ್ತಿರಲಿಲ್ಲವೋ ಏನೋ? ಅವನು ಕೃತಜ್ಞತೆ ಅರ್ಪಿಸಿದ. ಕಡಿಮೆ ಪಕ್ಷ ೧ ವಾರ ವಿಶ್ರಾಂತಿ ಪಡೆಯುವುದು ಅನಿವಾರ್ಯವಾಗಿತ್ತು.

ಬಾಲಣ್ಣ ಎಂದಿನಂತೆ ಡ್ಯೂಟಿಗೆ ಹೋಗುತ್ತಿದ್ದರು. ಮನೆಗೆ ಬೇಕಾದ ಅಡುಗೆಯ ಸಾಮಾಗ್ರಿ ಹಾಗೂ ಡಾಕ್ಟರ್‌ರಿಂದ ಮದ್ದು ಮೊದಲಾದವುಗಳನ್ನು ದೊಡ್ದ ಮಗಳು ಡಾಲಿ ತರುತ್ತಿದ್ದಳು. ಆದುದರಿಂದ ಮನೆಯಲ್ಲಿ ಆಗಂತುಕನ ಸೇವೆಯನ್ನು ಪಿಂಕಿ ಮಾಡಬೇಕಾಯಿತು. ತರುಣನನ್ನು ಕೈ ಹಿಡಿದು ಬಾತ್‌ರೂಂ, ಟಾಯ್ಲೆಟ್‌ಗೆ ಕರೆದುಕೊಂಡು ಹೋಗುವುದು, ಅವನಿಗೆ ಕ್ಲಪ್ತ ಸಮಯಕ್ಕೆ ಮದ್ದು, ಊಟ ಕೊಡುವುದು ಇತ್ಯಾದಿ ಕೆಲಸವನ್ನು ಒಂದು ದಾದಿಯ ತರಹ ಪಿಂಕಿಯೇ ಮಾಡುತ್ತಿದ್ದಳು. ಇದರಲ್ಲಿ ಅವಳಿಗೆ ಯಾವುದೇ ಮುಜುಗರ ಉಂಟಾಗಲಿಲ್ಲ. ಅವಳ ಈ ನಿಸ್ವಾರ್ಥ ಸೇವೆ, ಪ್ರೀತಿಯನ್ನು ಕಂಡು ತರುಣ ದಂಗಾಗಿ ಹೋದ. ಡಾಲಿ ಮಾರ್ಕೆಟ್‌ಗೆ ದಿನಾಲು ಹೋಗುತ್ತಿರುವುದರಿಂದ, ಹೆಚ್ಚಿನ ಸಮಯವನ್ನು ಇಬ್ಬರೇ ಮನೆಯಲ್ಲಿ ಕಳೆಯುತ್ತಿದ್ದರು. ತರುಣನಿಗೆ ಬೇಜಾರು ಆಗದಂತೆ ಪಿಂಕಿ ಅವನೊಂದಿಗೆ ಇಸ್ಪೀಟು ಆಟ, ಚೆಸ್, ಕೇರಂ ಆಡುತ್ತಿದ್ದಳು. ಈ ಸಲುಗೆ ಮುಂದೆ ಪ್ರೀತಿಯ ದಾರಿ ಹಿಡಿಯಿತು. ಆಕಸ್ಮಿಕವಾಗಿ ಬೆಳೆದ ಈ ಒಡನಾಟ ಪ್ರೀತಿಯ ಸೆಲೆಯಾಗಿ ಭದ್ರಗೊಂಡಿತು.

ಡಾಲಿಗೆ ಇವರಿಬ್ಬರ ಸಲುಗೆಯ ಬಗ್ಗೆ ಅನುಮಾನ ಬರತೊಡಗಿತು. ಅವರಿಬ್ಬರನ್ನು ಸಂಶಯ ದೃಷ್ಟಿಯಿಂದಲೇ ನೋಡತೊಡಗಿದಳು. ಪಿಂಕಿಯ ಪ್ರತೀ ಒಂದು ಹೆಜ್ಜೆಯೂ ಡಾಲಿಯಲ್ಲಿ ಸಂಶಯದ ಕಿಡಿ ಹಾರಿತು. ಕ್ರಮೇಣ ಡಾಲಿಗೆ ಇವರಿಬ್ಬರೂ ತುಂಬಾ ಅನ್ಯೋನ್ಯವಾಗಿದ್ದಾರೆ ಎಂಬುದರಲ್ಲಿ ಸಂಶಯವೇ ಉಳಿಯಲಿಲ್ಲ. ಈ ಬಗ್ಗೆ ತಂದೆಯೊಡನೆ ಹಲವು ಬಾರಿ ಎಚ್ಚರಿಸಿದ್ದಳು. ಇದಾವುದೂ ಪ್ರಯೋಜನಕ್ಕೆ ಬಾರದಾಗ ಅವಳಿಗೆ ತನ್ನ ತಂಗಿಯ ಮೇಲೆಯೇ ಒಂದು ರೀತಿಯ ದ್ವೇಷ ಭಾವನೆ ಮೂಡತೊಡಗಿತು. ಅವಳು ನೇರವಾಗಿ ತನ್ನ ತಂಗಿಯನ್ನು ತರಾಟೆಗೆ ತೆಗೆದುಕೊಂಡಳು. ಅದರಿಂದ ಏನೂ ಪ್ರಯೋಜನ ಕಂಡು ಬರಲಿಲ್ಲ. ಅವಳು ತರಕಾರಿ ತರಲು ಪೇಟೆಗೆ ಹೋದಾಗಲೆಲ್ಲಾ ಅವಳ ಮನಸ್ಸು ಮನೆಯ ಕಡೆಗೇ ಇರುತ್ತಿತ್ತು. ತಾನು ಪಿಂಕಿಗಿಂತ ಸೌಂದರ್ಯದಲ್ಲಿ ಏನು ಕಮ್ಮಿ ಎಂದು ಅವಳು ತನ್ನಷ್ಟಕ್ಕೆ ಪ್ರಶ್ನೆ ಹಾಕಿಕೊಳ್ಳುತ್ತಿದ್ದಳು. ತರುಣನೊಂದಿಗೆ ಪಿಂಕಿಯ ಸರಸಾಟ ಡಾಲಿಗೆ ನುಂಗಲಾರದ ತುತ್ತಾಯಿತು.

ಒಂದು ವಾರದ ಶೂಶ್ರೂಶೆಯಿಂದ ತರುಣನ ಕಾಲು ಸರಿಯಾಯಿತು. ನಡೆದಾಡುವ ಸ್ಥಿತಿಗೆ ಬಂದ ಮೇಲೆ ತರುಣ ತನ್ನೂರಿಗೆ ಹೊರಟು ನಿಂತ. ಡಾಲಿಗೆ ಒಳಗಿಂದ ಒಳಗೆ ಸಂತೋಷ ಇದ್ದರೂ ಅದನ್ನು ತೋರ್ಪಡಿಸಲಿಲ್ಲ. ಆದರೆ ಪಿಂಕಿ ತುಂಬಾ ಮಂಕಾದಳು. ತರುಣ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದ. ತನ್ನ ವಿಳಾಸ ಕೊಟ್ಟು ಅವರೆಲ್ಲರನ್ನೂ ತನ್ನ ಮನೆಗೆ ಆಮಂತ್ರಿಸಿದ. ಪಿಂಕಿಯನ್ನು ವಿಶೇಷವಾಗಿ ಆಮಂತ್ರಿಸಲು ಮರೆಯಲಿಲ್ಲ. ಇದನೆಲ್ಲವನ್ನು ಡಾಲಿ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಳು. ಅವಳಿಗೆ ಮನೆಯಿಂದ ಪಿಶಾಚಿ ತೂಲಗಿದಷ್ಟು ಸಂತೋಷವಾಯಿತು.

ವಾರಗಳು ಉರುಳಿದವು. ಪಿಂಕಿ ಮತ್ತು ತರುಣನ ಪತ್ರ ವ್ಯವಹಾರ, ದೂರವಾಣಿ ಮಾತುಕತೆ ಗುಪ್ತವಾಗಿ ನಡೆಯುತ್ತಿದ್ದುವು. ಇದನ್ನು ಸೂಚ್ಯವಾಗಿ ತಿಳಿದುಕೊಂಡ ಡಾಲಿ, ತನ್ನ ತಂದೆಗೆ ಈ ಬಗ್ಗೆ ಎಚ್ಚರಿಸಿದಳು. ಆದರೆ ಕೆಲಸದ ಒತ್ತಡದಿಂದ ಬಾಲಣ್ಣ ಈ ವಿಷಯವನ್ನು ಅಷ್ಟಾಗಿ ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಆದರೆ ಡಾಲಿಗೆ ಮಾತ್ರ ತಂಗಿಯ ಪ್ರೇಮ ವ್ಯವಹಾರದ ಬಗ್ಗೆ ಹಾಗೂ ಆ ತರುಣನ ನಡತೆಯ ಬಗ್ಗೆ ದ್ವೇಷ ಮಡುಗಟ್ಟಿತ್ತು. ಸುಖ ಸಂಸಾರದಲ್ಲಿ ತರುಣನ ಆಗಮನ ಹುಳಿ ಹಿಂಡಿದಂತಾಗಿತ್ತು. ಒಂದು ದಿನ ಅಚಾನಕ್ ಆ ತರುಣ ಪ್ರತ್ಯಕ್ಷನಾದ. ಡಾಲಿಗೆ ಅವನನ್ನು ಕಂಡೊಡನೆ ಇರಿಸು ಮುರುಸಾಯಿತು. ಅದರೆ ತೋರ್ಪಡಿಸದೆ ಸ್ವಾಗತಿಸಿದಳು. ಅಂದು ಬಾಲಣ್ಣ ಕೂಡಾ ಡ್ಯೂಟಿ ಮುಗಿಸಿ ಮನೆಯಲ್ಲಿದ್ದ. ಒಳ್ಳೆಯ ಸಮಯ ನೋಡಿ ತರುಣ ಬಾಲಣ್ಣನೊಡನೆ ತಾನು ಪಿಂಕಿಯನ್ನು ಪ್ರೀತಿಸುವುದಾಗಿಯೂ ತಾವು ಅನುಮತಿಕೊಟ್ಟರೆ ಅವಳನ್ನು ಮದುವೆಯಾಗುವುದಾಗಿ ತಿಳಿಸಿದ. ಬಾಲಣ್ಣನಿಗೆ ತರುಣನ ವರ್ತನೆ ಇಪ್ಟವಾಗಲಿಲ್ಲ. ತನ್ನ ಉದಾರತೆಯ ದುರುಪಯೋಗ ಪಡಿಸಿಕೊಂಡ ಎಂದು ಅನಿಸಿತು ಅವನಿಗೆ. ತರುಣನಿಗೆ ಸೂಕ್ತವಾಗಿ ಎಚ್ಚರಿಸಿ, ಇನ್ನು ಈ ಮನೆಗೆ ಕಾಲಿಡಬಾರದೆಂದು ತಿಳಿಸಿ ಆತನನ್ನು ಮನೆಯಿಂದ ಹೊರಗೆ ಕಳುಹಿಸಿದ. ಡಾಲಿಗೆ ಒಳಗಿನಿಂದ ಒಳಗೆ ಸಂತೋಷವಾಯಿತು. ಆದರೆ ಪಿಂಕಿ ಮಾತ್ರ ಬೇಸರದಿಂದ ದಿನ ದೂಡತೊಡಗಿದಳು. ಆದರೆ ಈ ಪ್ರಕರಣ ಆ ತರುಣ ಮತ್ತು ಪಿಂಕಿಯನ್ನು ಇನ್ನಷ್ಟು ಹತ್ತಿರ ಮಾಡಿತು. ಅವರಿಬ್ಬರ ದೂರವಾಣಿ ಮಾತುಕತೆ, ಪತ್ರ ವ್ಯವಹಾರ ಅವ್ಯಾಹತವಾಗಿ ಸಾಗತೊಡಗಿತು. ಕ್ರಮೇಣ ಒಬ್ಬರಿಗೊಬ್ಬರು ಗುಪ್ತ ಸ್ಥಳದಲ್ಲಿ ಬೇಟಿಯಾಗತೊಡಗಿದರು. ಅಕ್ಕ ಡಾಲಿಗೆ ತಂಗಿಯ ಈ ವರ್ತನೆ ನುಂಗಲಾರದ ತುತ್ತಾಯಿತು. ಅವಳ ಅಸೂಯೆ ಹೆಡೆ ಎತ್ತಿತ್ತು. ಮತ್ಸರ, ಅಸೂಯೆಯಿಂದ ಅವಳು ಧಗ ಧಗ ಉರಿಯತೊಡಗಿದಳು. ಕೊನೆಗೊಂದು ನಿರ್ಧಾರಕ್ಕೆ ಬಂದಳು.

ಪಟ್ಟಣಕ್ಕೆ ತರಕಾರಿ ಹಾಗೂ ಇನ್ನಿತರ ಸಾಮಾಗ್ರಿ ತರಲು ಯಾವಾಗಲೂ ಅವಳೇ ಹೋಗುತ್ತಿದ್ದಳು. ಎಂದಿನಂತೆ ಪಟ್ಟಣಕ್ಕೆ ಹೋದವಳು ಕ್ಯಾನಿನಲ್ಲಿ ಸ್ವಲ್ಪ ಪೆಟ್ರೋಲ್ ತಂದು ಮನೆಯ ಹೊರಗೆ ಅಡಗಿಸಿಟ್ಟಳು. ಅವಳು ತಂದೆಯ ರಾತ್ರಿ ಪಾಳಯದ ಸರದಿ ಕಾಯುತ್ತಿದ್ದಳು. ಅದೊಂದು ದಿನ. ಆ ದಿನ ಬಾಲಣ್ಣನಿಗೆ ರಾತ್ರಿ ಡ್ಯೂಟಿ. ಊಟ ಮುಗಿಸಿ, ರಾತ್ರಿ ೧೨ ಗಂಟೆ ಸುಮಾರಿಗೆ ಡ್ಯೂಟಿಗೆ ಹೊರಟು ಹೋದನು. ಎಂದಿನಂತೆ ಅಕ್ಕ ತಂಗಿಯರು ಮಾತಾಡುತ್ತಾ ನಗಾಡುತ್ತಾ ತಮ್ಮ ತಮ್ಮ ಮಲಗುವ ಕೋಣೆಗೆ ಹೋದರು. ಸುಮಾರು ರಾತ್ರಿಯವರೆಗೆ ಡಾಲಿಗೆ ನಿದ್ರೆ ಬರಲಿಲ್ಲ. ಅವಳು ಎಚ್ಚರವಾಗಿಯೇ ಇದ್ದಳು. ಕೆಲವು ಗಂಟೆಯವರೆಗೆ ಅವಳು ರೂಮಿನಲ್ಲಿ, ಕತ್ತಲೆಯ ಕೋಣೆಯೊಳಗೆ ಆಲೋಚಿಸುತ್ತಾ ಮಲಗಿಕೊಂಡಿದ್ದಳು. ಅವಳೊಂದು ದೃಢ ನಿರ್ಧಾರಕ್ಕೆ ಬಂದಿದ್ದಳು. ಪಿಂಕಿ ಮತ್ತು ಆ ತರುಣನ ಪ್ರೇಮಕ್ಕೆ ಒಂದು ಅಂತ್ಯ ಕಾಣಿಸಲು ಸಿದ್ದಳಾದಳು. ಡಾಲಿ ನಿಧಾನವಾಗಿ ಎದ್ದು ಕುಳಿತಳು. ಅವಳ ಮನಸ್ಸು, ಹೃದಯ ಕಠೊರವಾಗಿತ್ತು. ಕೋಣೆಯಿಂದ ಕತ್ತಲಲ್ಲೇ ಹೊರಗೆ ಬಂದಳು. ಯಾವುದೇ ಶಬ್ಧವಾಗದಂತೆ ಹೊರ ಬಾಗಿಲು ತೆರೆದು ಅಂಗಳಕ್ಕೆ ಬಂದಳು ಮತ್ತು ಹಿಂಬಾಗಿಲನ್ನು ಭದ್ರಪಡಿಸಿದಳು. ತಾನು ತಂದ ಪಟ್ರೋಲನ್ನು ಮನೆಯ ಸುತ್ತಲೂ ಸುರಿದಳು. ಸಂಪೂರ್ಣ ಪೆಟ್ರೋಲ್ ಸುರಿದ ಮೇಲೆ ಅವಳು ಕಡ್ಡಿ ಗೀರಿ ಮನೆಗೆ ಬೆಂಕಿ ಕೊಟ್ಟಳು ಮತ್ತು ಅಲ್ಲಿಂದ ರೈಲ್ವೇ ಸ್ಟೇಶನಿನ ವಿರುದ್ದ ದಿಕ್ಕಿನತ್ತ ಓಡಿದಳು.

ಸುಮಾರು ದೂರ ಓಡಿದ ಡಾಲಿ, ಏಕಾ‌ಏಕಿ ನಿಂತುಕೊಂಡಳು. ಅವಳ ಎದೆ ಢವಗುಟ್ಟುತ್ತಿತ್ತು. ಎಲ್ಲಾ ಕಡೆ ಕತ್ತಲೆ. ಮನೆಯ ಕಡೆ ನೋಡಿದಳು. ಬೆಂಕಿ ನಾಲ್ಕೂ ಕಡೆಯಿಂದ ಗುಡಿಸಲನ್ನು ಆವರಿಸಿತ್ತು. ಅವಳಿಗೆ ತನ್ನ ತಂಗಿಯ ನೆನಪಾಯಿತು. ಹೌದು. ಪಿಂಕಿ ಎದ್ದು ಬೊಬ್ಬೆ ಹೊಡೆಯುತ್ತಿರಬಹುದು. ಸಹಾಯಕ್ಕಾಗಿ ಕೂಗುತ್ತಿರಬಹುದು. ನನ್ನ ಹೆಸರೆತ್ತಿ ಕರೆಯುತ್ತಿರಬಹುದು. ಡಾಲಿಯ ಮನಸ್ಸು ಕಸಿವಿಸಿಗೊಂಡಿತು. ತಾನು ತನ್ನ ತಂಗಿಯನ್ನು ಇಷ್ಟು ದ್ವೇಷಿಸಲು ಅವಳು ಮಾಡಿದ ಅಂತಹ ತಪ್ಪೇನು? ಒಬ್ಬ ಸುಂದರ ಗುಣವಂತ ತರುಣನನ್ನು ಪ್ರೀತಿಸಿದ್ದು ತಪ್ಪೇ? ಅವಳ ಸ್ಥಾನದಲ್ಲಿ ನಾನಿರುತ್ತಿದ್ದರೆ ನಾನು ಕೂಡಾ ಅದನ್ನೇ ಮಾಡುತ್ತಿರಲಿಲ್ಲವೇ? ಆ ತರುಣ ನನಗೆ ಸಿಗದ ಒಂದೇ ಒಂದು ಕಾರಣಕ್ಕಾಗಿ ಮತ್ಸರಗೊಂಡು ಅವಳನ್ನು ಮುಗಿಸಲು ಹಾಕಿದ ಸಂಚು ಸರಿಯೇ? ಹುಟ್ಟಿದಂದಿನಿಂದ ತನ್ನೊಡನೆ ಬೆರೆತು, ಆಟವಾಡಿಕೊಂಡು, ಜಗಳವಾಡಿಕೊಂಡು ಬೆಳೆದು ಒಟ್ಟಿಗೆ ವಿದ್ಯಾಭ್ಯಾಸ ಮುಗಿಸಿ, ಮನೆಯ ಸಕಲ ಜವಬ್ದಾರಿಗಳನ್ನು ಇಬ್ಬರೂ ಒಟ್ಟೊಟ್ಟಿಗೆ ನೋಡಿಕೊಂಡು ಯಾವುದೇ ರೀತಿಯ ಕೀಳರಿಮೆಯಿಲ್ಲದೆ ಜೀವನ ಸಾಗಿಸಿದ ನನ್ನ ಒಡಹುಟ್ಟದ ತಂಗಿಗೆ ಇಷ್ಟೊಂದು ದೊಡ್ಡ ಅನ್ಯಾಯವೆಸಗುವುದು ಎಷ್ಟು ಸರಿ? ಈ ಪಾಪ ನನಗೆ ತಾಗದೇ? ಅವಳು ಪಶ್ಚಾತ್ತಾಪದಿಂದ ಕುದಿಯತೊಡಗಿದಳು. ಹೌದು ಇದು ಘೋರ ಅನ್ಯಾಯ. ನಾನು ನನ್ನ ತಂಗಿಯನ್ನು ಬದುಕಿಸಲೇಬೇಕು. ಅವಳು ಸಾಯಬಾರದು. ಖಂಡಿತಾ ಸಾಯಬಾರದು. ಡಾಲಿ ಒಂದೇ ಸಮನೆ ಆ ಕತ್ತಲಲ್ಲಿ ಮನೆಯ ಕಡೆ ಓಡಿದಳು. ಮನೆಯ ಅಂಗಳ ಸೇರಿದಾಗ ಬೆಂಕಿ ತನ್ನ ಕೆನ್ನಾಲಿಗೆಯನ್ನು ಇಡೀ ಮನೆಯ ಒಳಗೆ ಹೊರಗೆ ಚಾಚಿಕೊಂಡಿತ್ತು. ಡಾಲಿ ಇದಾವುದನ್ನು ಲೆಕ್ಕಿಸಲಿಲ್ಲ. ಅವಳಿಗೆ ಅವಳ ಪ್ರೀತಿಯ ತಂಗಿಯ ಮುಖ್ಯ, ಅವಳ ಆರ್ತನಾದ ಮಾತ್ರ ಕೇಳುತ್ತಿತ್ತು. ಬೆಂಕಿಯ ನಡುವೆಯೇ ಬಾಗಿಲನ್ನು ದಾಟಿ ಮನೆಯ ಒಳಗೆ ಹೊಕ್ಕಳು. ಅವಳ ದೃಷ್ಟಿ ಪಿಂಕಿ ಮಲಗುವ ಕೋಣೆಯತ್ತ ನೆಟ್ಟಿತ್ತು. ಅವಳು ಪಿಂಕಿಯ ಕೋಣೆಯತ್ತ ಕೂಗುತ್ತಾ ಧಾವಿಸಿದಳು. ಅಗ ನಡೆಯಬಾರದ ಅನಾಹುತ ನಡೆದೇ ಹೋಯಿತು. ಮೇಲಿಂದ ಮರದ ಪಕ್ಕಾಸು ಉರಿಯುತ್ತಾ ತುಂಡಾಗಿ ಡಾಲಿಯ ತಲೆಯ ಮೇಲೆ ಬಿತ್ತು. ಎಚ್ಚರವಾದಾಗ ಡಾಲಿ ಆಸ್ಪತ್ರೆಯ ಇಂಟೆನ್ಸಿವ್‌ಕೇರ್ ವಿಭಾಗದಲ್ಲಿದ್ದಳು.

ಡಾಲಿ ಕೋಣೆಯ ಸುತ್ತಲೂ ಕಣ್ಣಾಡಿಸಿದಳು. ಎಡಬದಿಯಲ್ಲಿ ಯಾವುದೋ ಕಂಪ್ಯೂಟರಿನಂತಹ ಸಾಧನ ಇಟ್ಟಿದ್ದರು. ಅದರಲ್ಲಿ ಏನೋ ರೇಖೆಗಳು ಮೇಲೆ ಕೆಳಗೆ ಓಡುತ್ತಿದ್ದವು. ಬಲಕೈಗೆ ಗ್ಲೂಕೋಸು ಚುಚಿದ್ದರು. ಬದಿಯಲ್ಲಿ ಆಕ್ಸಿಜನ್ ನ ಸಿಲಿಂಡರ್ ರೆಡಿಯಾಗಿತ್ತು. ಕೈ ಕಾಲು ಯಾವುದೂ ತಿರುಗಿಸುವ ಸ್ಥಿತಿಯಲ್ಲಿರಲಿಲ್ಲ. ಮೈ ಮೇಲೆಲ್ಲಾ ಬೆಂದ ಗಾಯಗಳಿರಬೇಕು. ಇಡೀ ಮೈಗೆ ಮುಲಾಂ ಸವರಿದಂತೆ ಕಾಣುತಿತ್ತು. ಕನ್ನೆ ಹಣೆಯಲ್ಲೆಲ್ಲಾ ಉರಿ. ಮಾತಾಡಲು ಪ್ರಯತ್ನಿಸಿದರೂ ನಡುಕದಿಂದ ಮಾತು ಸರಿಯಾಗಿ ಉಚ್ಚಾರವಾಗುತ್ತಿರಲಿಲ್ಲ. ತನ್ನ ಕಾಲ ಬುಡದಲ್ಲಿ ನಿಂತ ವ್ಯಕ್ತಿ ತನ್ನ ತಲೆಯ ಹತ್ತಿರ ಬಂದಾಗ ಅವಳಿಗೆ ಅದು ತನ್ನ ತಂದೆಯೆಂದು ತಿಳಿಯಿತು. ಅವಳ ಕಣ್ಣೀರಿನ ಕಟ್ಟೆ ಒಡೆಯಿತು. ಅವಳು ತಂದೆಯೊಡನೆ ಏನೋ ಹೇಳಲು ತವಕಿಸುತ್ತಿದ್ದಳು.

ಬಾಲಣ್ಣ ಬಾಗಿ ಅವಳು ಹೇಳುವುದನ್ನು ಆಲಿಸಿದ. ಡಾಲಿ ತೊದಲುತ್ತಿದ್ದಳು. “ಅಪ್ಪಾ, ನನ್ನನ್ನು ಕ್ಷಮಿಸು, ಪಿಂಕಿಯನ್ನು ನಾನೇ ಕೊಂದೆ. ಮನೆಗೆ ಬೆಂಕಿ ನಾನೇ ಹಚ್ಚಿದೆ. ನನ್ನ ತಪ್ಪಿಗೆ ಸಾವು ಒಂದೇ ಪರಿಹಾರ”.

ಬಾಲಣ್ಣ ಅಧೀರನಾದ. ಈ ಸತ್ಯವನ್ನು ಅವನಿಗೆ ಅರಗಿಸಿಕೊಳ್ಳಲಾಗಲಿಲ್ಲ. ಅವನು ಗಳಗಳನೆ ಸಣ್ಣ ಮಕ್ಕಳಂತೆ ಅಳತೊಡಗಿದ. ಕೋಣೆ ತುಂಬಾ ಅಳು. ಈ ಎರಡು ಮಕ್ಕಳಿಗಳಾಗಿ ಅವನು ಮರು ಮದುವೆಯಾಗದೆ ತನ್ನ ಬಾಳನ್ನೇ ಬರಡುಗೊಳಿಸಿದನು. ಅವರ ಜೀವನ ಒಳ್ಳೆಯದಾಗಲಿ ಎಂಬ ಒಂದೇ ಉದ್ದೇಶದಿಂದ ತನ್ನ ಇಡೀ ಜೀವನವನ್ನು ಹಾಳು ಮಾಡಿಕೊಂಡ. ಒಳ್ಳೆಯ ತಂದೆಯಾಗಿ, ತಾಯಿಗಾಗಿ ಆ ಮಕ್ಕಳನ್ನು ಸಾಕಿ ದೊಡ್ಡವನಾಗಿ ಮಾಡಿದ. ಈಗ ಜೀವನದ ಸಂಧ್ಯಾಕಾಲದಲ್ಲಿ ಎಂತಹ ಆಘಾತ! ಅವನು ಡಾಲಿಯನ್ನು ನೋಡಿದ. ಅವಳ ಮುಖದಲ್ಲಿ ಪ್ರಾಯಶ್ಚಿತ್ತದ ಮನೋಭಾವವಿತ್ತು ದೈನ್ಯತೆಯಿತ್ತು. ತನ್ನನ್ನು ಕ್ಷಮಿಸು ಎಂದು ಬೇಡಿಕೆಯಿತ್ತು. ಶೇಕಡಾ ೯೦ ಸುಟ್ಟಗಾಯದಿಂದಿದ್ದ ಡಾಲಿಯ ಬಗ್ಗೆ ಡಾಕ್ಟರು ಕಲವೇ ಗಂಟೆಗಳ ಭರವಸೆ ನೀಡಿದ್ದರು. ಅವನ ಮನಸ್ಸು ಕರಿಗಿತು. ಎಷ್ಟಾದರೂ ಡಾಲಿ ನನ್ನ ಮಗಳು. ನಾನೀಗ ಕ್ಷಮಿಸದಿದ್ದರೆ ಅವಳಿಗೆ ಸದ್ಗತಿ ದೊರಕದು. ಅವಳ ಆತ್ಮಕ್ಕೆ ಶಾಂತಿಯಿರದು. ಅವನು ಬಾಗಿ ಡಾಲಿಯ ತಲೆಗೂದಲ ಮೇಲೆ ನಿಧಾನವಾಗಿ ಬೆರಳಾಡಿಸಿದನು. “ಮಗೂ, ನಾನು ನಿನ್ನನ್ನು ಕ್ಷಮಿಸಿದ್ದೇನೆ. ಆದರೆ ನೀನೆಣಿಸಿದಂತೆ ಪಿಂಕಿ ಸತ್ತಿಲ್ಲ. ಮನೆಗೆ ಬೆಂಕಿ ಬೀಳುವ ಕೆಲವೇ ನಿಮಿಷಗಳ ಮೊದಲು ಪಿಂಕಿ ಸ್ವೇಶನ್‌ಗೆ ಫೋನು ಮಾಡಿದ್ದಳು. ನಾನು ಮನೆಯಿಂದ ಹೊರಟು ನನ್ನ ಪ್ರಿಯತಮನೊಂದಿಗಿದ್ದೇನೆ. ನಾವು ಒಬ್ಬರಿಗೊಬ್ಬರು ಪ್ರೀತಿಸುತ್ತೇವೆ. ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡ. ನಮ್ಮನ್ನು ಹರಸು ಎಂದಿದ್ದಳು”. ಆ ನಂತರ ಈ ಘಟನೆ ನಡೆಯಿತು. ಬಾಲಣ್ಣ ಡಾಲಿಯ ಮುಖ ನೋಡಿದ. ಅವಳ ಮುಖದಲ್ಲಿ ನಗುವಿನ ಛಾಯೆ ಇತ್ತು. ಆದರೆ ಹಿಂದೆ ಮರಣದ ಛಾಯೆ ಕೂಡಾ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಹ್ವಾನ
Next post ಮಿಂಚುಳ್ಳಿ ಬೆಳಕಿಂಡಿ – ೨೫

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…