ದುರಾಶಾ ದುರ್ವಿಪಾಕ

ದುರಾಶಾ ದುರ್ವಿಪಾಕ

“ಒಳ್ಳೇದು, ಅವನನ್ನು ಒಳಗೆ ಬರಹೇಳು” ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು.

ಬಾಗಿಲಲ್ಲಿ ನಿಂತಿದ್ದ ವೃದ್ಧ ಗುಮಾಸ್ತನು, ನಿಂತಲ್ಲಿಯೇ ಅನುಮಾನಿಸಿದಂತೆ ಮಾಡಿ, ಹಿಂದು ಮುಂದೆ ನೋಡಹತ್ತಿದನು.

“ನಿಜವಾಗಿ ಕೇಳಿದರೆ, ನೀವು ಈಗ ಅವನ ಭೇಟ್ಟಿಯನ್ನೇ ತಕ್ಕೋಳ್ಳಬಾರದು ಎಂದು ತೋರುತ್ತದೆ” ಎಂದು ಆ ಗುಮಾಸ್ತನು ಅಂದನು.

“ಭೆಟ್ಟಿ ಆಗಬಾರದೆ? ಅದೇಕೆ?” ಎಂದು ಪ್ರೇಮಚಂದನು ಯಾವದೋ ಹುಂಡಿಯನ್ನು ಬರೆದು ಸಹಿ ಮಾಡಮಾಡುತ್ತ ಕೇಳಿದನು: “ನನಗಂತು ಅವನನ್ನು ಕಾಣದಿರುವದಕ್ಕೆ ಕಾರಣವೆಷ್ಟೂ ತೋರುವದಿಲ್ಲ.”

“ಇರಲಿ, ಆದರೂ…. ಅವನು ತುಸುಮಟ್ಟಿಗೆ ರೇಗಿಗೆದ್ದಂತೆ ತೋರುತ್ತದೆ. ಯಾವಾಗಲಾದರೂ ಒಂದಿಲ್ಲೊಂದು ತಕರಾರಿನ ಸುದ್ದಿಯನ್ನಂತೂ ಅವನು ಆಡಲಿಲ್ಲವೆಂದು ನಾವೆಂದು ಕಂಡಿದ್ದೇವೆ? ಅವನ ದುಃಖಗಳೆಲ್ಲವೂ ಕೇವಲ ಕಲ್ಪನಾಜನ್ಯವೆಂಬುವದಂತೂ ನಿಮಗೆ ಗೊತ್ತೇ ಅದೆ.”

ಪ್ರೇಮಚಂದನು ಮುಂಬಯಿಯಲ್ಲಿಯದೊಂದು ಪ್ರಖ್ಯಾತವಾದ ಗಿರಣಿಯಲ್ಲಿ ಪಾಲುಗಾರನು. ಈ ಸಂಘವು ‘ಪ್ರೇಮಚಂದ ರಾಯ ಚಂದ ಮತ್ತು ಸನ್ಸ್’ ಎಂಬ ಹೆಸರಿನಿಂದ ಪ್ರಸಿದ್ಧವಿತ್ತು. ಈ ಕಂಪನಿಯವರ ವಶದಲ್ಲಿ ನಾಲ್ಕೆಂಟು ಗಿರಣಿಗಳು ಇದ್ದವು. ತನ್ನ ಗುಮಾಸ್ತನ ಮಾತು ಕೇಳಿ ಪ್ರೇಮಚಂದನು ಮುಗುಳುನಗೆ ನಕ್ಕನು. ಈ ನಗೆಯು ಅವನ ಆಯುಷ್ಯದೊಳಗಿನ ಐವತ್ತು ವರ್ಷಗಳ ಕಳೆಯನ್ನು ಹಿಮ್ಮೆಟ್ಟಿಸಿತು. ಜನ್ಮವೆಲ್ಲವೂ ವ್ಯಾಪಾರದ ವಿಶೇಷವಾದ ಚಾತುರ್ಯದಲ್ಲಿ ಕಳೆದವನ ನಗೆಯೇ ಅದು. ಅದರಲ್ಲಿ ಮನೋಭಾವವು ಮೇಲು ಮೇಲೆಯೇ ಕಾಣುತ್ತಿತ್ತೆಂದರೆ ಚಾತುರ್ಯದ ಲವಲೇಶವಾದರೂ ಅಲ್ಲಿ ಹೇಗೆ ಕಂಡುಕೊಳ್ಳಬೇಕು?

“ಮತ್ತೂ ನಾವು ಎಂದಿನಿಂದ ನಮ್ಮಲ್ಲಿಯ ನೌಕರರ ತಕರಾರುಗಳನ್ನು ಕೇಳಿಲ್ಲ?” ಎಂದು ಪ್ರೇಮಚಂದನು ಸಾವಕಾಶವಾಗಿ ನುಡಿದನು.

“ಆಗಾಗ ಹೇಳುವವರ ಮಾತುಗಳನ್ನೆಲ್ಲ ಧನಿಯರು ಕೇಳೇ ಕೇಳುತ್ತಿರುವದುಂಟು” ಎಂದು ಆ ಮುದುಕನು ಅಂದನು. “ಆದರೆ ಯಶೋಧರನ ಆ ಗಂಟುಮೋರೆಯನ್ನೇ ನಾನು ನೋಡಲಾರೆ. ಈಗ ಒಳಗೆ ಬಂದು ಮನಸ್ಸಿಗೆ ಬಂದಂತೆ ಅವನು ಮಾತನಾಡಲಿಕ್ಕಿಲ್ಲೆಂದು ನಾನೇನು ಹೇಳಲಾರೆ”

ಪ್ರೇಮಚಂದನು ನಕ್ಕನು. “ಇರಲಿ, ಅವನನ್ನು ಒಳಗಂತು ಬರಗೊಡು, ಹೂಂ, ಏನೂ ಅಡ್ಡಿ ಇಲ್ಲ, ಅವನು ಒಳಗೆ ಬರಲಿ” ಎಂದು ಗುಮಾಸ್ತನಿಗೆ ಹೊರಗೆ ಹೋಗಲಪ್ಪಣೆ ಮಾಡಿದಂತೆ ಪ್ರೇಮಚಂದನು ಕೈ ಸನ್ನೆ ಮಾಡಿದನು.

“ಯಾಕಾಗವಲ್ಲದು” ಎಂದು ಅಂದಂತೆ ತಲೆ ಅಲ್ಲಾಡಿಸಿ ಗುಮಾಸ್ತನು, ಸರಾಫನು ಕೂಡುವ ಸ್ಥಳದ ಮಗ್ಗಲಿಗಿದ್ದ ಬಾಗಿಲದಿಂದ ಹೊರಬಿದ್ದನು.

ಇನ್ನೊಂದು ಕ್ಷಣದಲ್ಲಿ ಯಶೋಧರನು ಪ್ರೇಮಚಂದನ ಕೋಣೆಯ ಬಾಗಿಲು ತೆರೆದು ಒಳಗೆ ಬಂದನು. ಯಶೋಧರನು ಸಾಧಾರಣ ಎತ್ತರವಾದ ಆಳು; ಎದೆಕಟ್ಟು ಎಷ್ಟು ಆಗಲಾದದ್ದಲ್ಲದಿದ್ದರೂ ಮೈ- ಕೈಗಳು ಹುರಿಕಟ್ಟಾಗಿದ್ದವು. ಮುವತ್ತು ಮೂವತ್ತೆರಡು ವರ್ಷದ ವಯಸ್ಸು, ಮುಖಚರ್ಯದ ಮೇಲಿಂದಲೂ, ಔದಾಸೀನ್ಯಪೂರ್ಣವಾದ ಅವನ ಒಳನಟ್ಟ ಕಣ್ಣುಗಳ ಮೇಲಿಂದಲೂ, ತಲೆ ತುಂಬ ಇದ್ದ ಆ ಅರ್ಧಮರ್ಧ ಜಡೆಗಟ್ಟಿದ ಕೂದಲುಗಳಿಂದಲೂ, ಮಲಿನವಾದ ಹಲ್ಲುಗಳು, ಆ ತೆರಿದ ಬಾಯಿಯೂ, ಇರಬೇಕಾದ್ದಕಿಂತಲೂ ಸ್ವಲ್ಪ ಕೆಳಗೆ ಹಾಯ್ದ ಗದ್ದವೂ ಇವೆಲ್ಲವುಗಳನ್ನು ನೋಡುವವರಿಗೆ ಅವನೇನೋ ‘ಬುದ್ದಿವಂತ’ನಿರಬೇಕೆಂದು ತರ್ಕವಾಗುವಂತಿತ್ತು. ಆ ಬಾಗಿಲವನ್ನ ಮುಚ್ಚಿದವನೇ ಯಶೋಧರನು ಅದಕ್ಕೆ ಬೆನ್ನು ಕೊಟ್ಟು ನಿಂತುಕೊಂಡನು. ಎಂದೂ ಓಡಲಾರದವನು ಹೊಗೆಬಂಡಿಯು ತನ್ನನ್ನು ಬಿಟ್ಟು ಮುಂದಕ್ಕೆ ಸಾಗೀತೆಂದು ಒಳ್ಳೆ ಅವಸರದಿಂದ ಕೈಕಾಲು ಸಡಿಲು ಬಿಟ್ಟು ಓಡೋಡಿ ಹ್ಯಾಗೋ ಆ ಬಂಡಿಯನ್ನು ಮುಟ್ಟಿದವನಂತೆ ಇವನು ದೀರ್ಘ ಶ್ವಾಸ ಬಿಡುತ್ತಿದ್ದನು. ಹೊರಗೆ ಬಿಟ್ಟ ಉಸಿರು ಒಳಜಗ್ಗುವಾಗ ಅವನ ಕೈ ಬೆರಳುಗಳು ನಡುಗಿ ಒಳಸೇದಿಕೊಳ್ಳುತ್ತಿದ್ದವು.

“ಜಯಗೋಪಾಳ, ಯಶೋಧರಾ, ಕೂತುಕೋ” ಎಂದು ಪ್ರೇಮಚಂದನು ಯಶೋಧರನನ್ನು ನೋಡಿ, ಒಂದೆರಡು ನೋಟಗಳಲ್ಲಿಯೇ ಅವನ ಮನದಿಂಗಿತವನ್ನು ತಿಳಿದು ಕೊಂಡವನಂತೆ, ತನ್ನ ಆಸನದಲ್ಲಿ ಒಳ್ಳೇ ಸುಖಪೂರ್ಣನಾಗಿ ಕುಳಿತುಕೊಂಡನು.

“ಏನೂ ಅಡ್ಡಿಯಿಲ್ಲ, ಶೇಟಜೀ, ಆದರೆ ನಾನು ನಿಂತುಕೊಂಡೇ ಮಾತಾಡಬೇಕೆನ್ನುತ್ತೇನೆ.”

“ನಿನ್ನ ಮನಸಿದ್ದಂತೆ ಮಾಡು……. ಒಳ್ಳೇದು, ನನ್ನ ಬೆಟ್ಟಿಯು ನಿನಗೇಕೆ ಬೇಕಾಯಿತೀಗ? ಅಂಥ ಕೆಲಸವಾದರೂ ಯಾವದು? ಉಳಿದ ಜನರಂತೂ ನಿನ್ನ ಗೋಜಿಗೆ ಹೋದಂತಿಲ್ಲೆಂದು ತೋರುತ್ತದೆ.”

“ಅದೇನೂ ಇಲ್ಲ.”

ಪ್ರೇಮಚಂದನು ತಿರುಗಿ ಮಾತಾಡುವದಕ್ಕೆ ತುಸು ತಡವಾಯಿತು.

“ಆಗಲಿ, ಹೊರಬೀಳಲಿ; ನೀನು ಎಷ್ಟೂ, ಅಂಜಬೇಡ. ನೀನು ಏನೋ ಹೇಳಬೇಕೆಂದೆನ್ನುತ್ತೀ, ಅಹುದೋ ಅಲ್ಲವೋ?”

ಯಶೋಧರನು ಮೈಕೈಗಳನ್ನು ನಿದ್ದೆಯೊಳಗಿಂದ ಎದ್ದವನಂತೆ ನಿಂತಲ್ಲಿಯೇ ಚಾಚಿ ಸಾವರಿಸಿಕೊಂಡನು.

“ಅಹುದು, ನನ್ನದೊಂದು ಮಾತು ತಮಗೆ ತಿಳಿಸತಕ್ಕದಿತ್ತು. ಆಯಿತು- ನೀವು ಯಾವಾಗಲೂ ಅನ್ನುವಂತೆ ಅದನ್ನು ‘ತಕರಾರು’ ಎಂದೇ ಕರೆಯಿರಿ. ಬಹಳೇನು? ನನ್ನನ್ನು ನೀವು ನೆಟ್ಟಗೆ ಇಟ್ಟುಕೊಳ್ಳುವದಿಲ್ಲ ಸರಿ” ಎಂದು ಯಶೋಧರನು ಜಡವಾದ ಸ್ವರದಿಂದ ನುಡಿದನು.

“ನಿಜವಾಗಿಯೇ? ಯಾವ ಬಗೆಯಿಂದ?”
“ನಾನು ಶೋಧಿಸಿದ ಆ ಹೊಸ ಯಂತ್ರದ ಸಂಬಂಧದಿಂದ.”
“ಸಾಗಲಿ, ಯಶೋಧರಾ, ನಿನ್ನ ಮಾತು ಮುಗಿಸು. ಅನ್ನುವದನ್ನೆಲ್ಲ ಒಮ್ಮೆ ಹೇಳಿಯೇಬಿಡು.”
“ನೀವು ನನ್ನ ‘ಶೋಧದಿಂದ’ ಇಪ್ಪತ್ತು ಸಾವಿರ ರೂಪಾಯಿಗಳನ್ನು ಗಳಿಸಿಕೊಂಡದ್ದು ಈ ಮೊದಲೇ-”

ಪ್ರೇಮಚಂದನ ಮೋರೆಯು ಒಮ್ಮೆಲೆ ಕೆಂಪಾಯಿತು. “ಅದಕ್ಕೆಲ್ಲ ನಾನೇ ಒಡೆಯನಲ್ಲವೆ? ಅದೆಲ್ಲವೂ ನನ್ನ ಕೆಲಸ.”

“ಆದರೆ ಆ ಯಂತ್ರವನ್ನು ಶೋಧಿಸಿದವನು ನಾನು, ಪ್ರೇಮಚಂದರೆ.”

“ನನಗೆ ಬಂದ ಲಾಭದ ಲೆಕ್ಕವು ನಿನಗೆಲ್ಲಿಂದ ಸಿಕ್ಕಿತು? ಈ ಪ್ರಶ್ನೆವನ್ನು ನಾನು ಕೇಳಬಹುದಲ್ಲವೆ?”

“ಆ ಲೆಕ್ಕವನ್ನು ನಾನು ನನ್ನಷ್ಟಕ್ಕೇ ಮಾಡಿಕೊಂಡೆನು. ಅದಕ್ಕೆ ಹತ್ತುವ ಸಾಹಿತ್ಯಸಂಗ್ರಹದ ಬೆಲೆ, ಅದನ್ನು ಮಾಡುವದಕ್ಕೆ ಬೇಕಾಗುವ ಶ್ರಮದ ಬೆಲೆ, ಈಗ ಅದನ್ನು ಮಾರುವ ಕ್ರಯ ಇವೆಲ್ಲವುಗಳನ್ನು ಅರಿತವನಾದ್ದರಿಂದ, ನಿಮ್ಮ ಲಾಭದ ಲೆಕ್ಕವು ತಿಳಿಯದೆ? ಇದೆಲ್ಲದರ ಮೇಲಿಂದ ನೀವು ನನ್ನನ್ನು ಒಳಿತಾಗಿ ಇಟ್ಟು ಕೊಂಡಿಲ್ಲೆಂಬದು ಮೇಲೆಯೇ ತೋರುತ್ತಿದೆ. ನನಗೆ ‘ನ್ಯಾಯದಾನ’ ಮಾಡುವಿರೆಂಬದೇ ನನ್ನ ಬಯಕೆ. ನಾನು ನ್ಯಾಯವನ್ನಸೇಕ್ಷಿಸುವೆನು, ಪ್ರೇಮಚಂದ್ರ.”

“ನ್ಯಾಯವೇತರದು? ಹಣವೇ ಬೇಕೆನ್ನಬಾರದೆ?” ಎಂದು ವಯಾತೀತನಾದ ಪ್ರೇಮಚಂದನು ಉತ್ತೇಜಿತನಾದ ಸ್ವರದಿಂದ ಸ್ವಲ್ಪು ಸಿಟ್ಟು ತಾಳಿದವನಂತೆ ಕೇಳಿದನು. “ಇರಲಿ, ಯಶೋಧರಾ, ನೀನು ನನ್ನನ್ನು ಈ ಮೂರು ವರುಷಗಳಿಂದ ಮಾತ್ರ ಬಲ್ಲಿಯಷ್ಟೆ? ಆದರೆ ಕಳೆದ ಹದಿನೈದು ವರುಷಗಳಿಂದಲೂ ನಾನು ನನ್ನ ಕಾರಖಾನೆಗಳಲ್ಲಿದ್ದ ನೌಕರರನ್ನು ನ್ಯಾಯದಿಂದಲೇ ನಡೆಯಿಸಿಕೊಳ್ಳುತ್ತೇನೆ. ಅವರು ತಮ್ಮ ತಕರಾರುಗಳನ್ನು ಬೇಕಾದಾಗ ನನ್ನ ಮುಂದೆ ಹೇಳಬೇಕೆಂದು ನಾನು ಅವರೆಲ್ಲರಿಗೂ ಆಗಾಗ ತಿಳಿಸುತ್ತೇನೆ, ಸಕಾರಣವಾದಂಥವುಗಳನ್ನೆಲ್ಲ ನ್ಯಾಯದೃಷ್ಟಿಯಿಂದಲೇ ನೋಡುತ್ತಿರುವೆನೆಂಬದು ಎಲ್ಲರಿಗೂ ಗೊತ್ತಿದ್ದ ಮಾತು. ಇನ್ನು ಈ ‘ನ್ಯಾಯದಾನ’ದ ಕಾರ್ಯವು ನನ್ನಿಂದ ಹೇಗೆ ಪಾರುಗಂಡಿರುವದೆಂಬದನ್ನು ನಾನೇನು ಹೇಳಲಿ? ಆದರೂ ಯಜಮಾನ-ಸೇವಕರಲ್ಲಿಯ ಸಂಬಂಧಗಳು ಈ ಹದಿನೈದು ವರುಷಗಳಲ್ಲಿ ಕ್ಷೇಮದಿಂದಿರುತ್ತವೆ. ನಮ್ಮ ಸಂಘದ ಮುಖ್ಯ ಪಾಲುಗಾರನೆಂದು ಕಾರ್ಯವಾಹಕತನವು ನನ್ನ ಮೇಲೆಯೇ ಇರುವದು. ಎಲ್ಲಕ್ಕೂ ನಾನೇ ಬಾಧ್ಯಸ್ಥನಂತಿದ್ದುದರಿಂದ ಸರಿತೋರಿದಾಗ, ಸೇವಕರು ಬೇಡುವ ಅನುಕೂಲಗಳನ್ನು ನಾನು ಆಗಾಗ ಮಾಡಿ ಕೊಡುತ್ತಲೇ ಬಂದಿರುವೆನು. ಯಾವದೊಂದು ‘ಲಿಮಿಟೆಡ್’ ಕಂಪನಿಯ ಪಾಲುಗಾರನಾಗಿದ್ದೆನಾದರೆ ಆ ಮಾತು ಬೇರೆಯಾಗುತ್ತಿತ್ತು. ನನ್ನ ಜನರು- ಅವರಲ್ಲಿ ಎಷ್ಟೋ ಜನರಾದರೂ- ಈ ಸಂಗತಿಯನ್ನು ನಿನಗೆ ಅಂಜಿಕಿಲ್ಲದೆ ಹೇಳಿಯಾರು.” ಪ್ರೇಮಚಂದನು ಸ್ವಲ್ಪು ತಡೆದು ಯಶೋಧರನನ್ನು ದಿಟ್ಟಿಸಿ ನೋಡಿದನು.

“ಯಶೋಧರನು ಹೇಕರಿಸಿ ಗಂಟಲು ಸಡಿಲು ಮಾಡಿಕೊಂಡನು. “ಇದೆಲ್ಲವೂ ನಿಜವಿರುವದು ಶೇಟಜೀ,” ಎಂದು ಉದಾಸೀನತೆಯಿಂದ ಅಂದನು. “ಆದರೆ, ನನ್ನ ಸುಧಾರಿಸಿದ ಯಂತ್ರವು….”

“ಬಹಳ ಛಲೋದು! ಈ ಕ್ಷಣಕ್ಕೆ ನಿನ್ನ ಯಂತ್ರವನ್ನು ಚಿಕಿತ್ಸಿಸುವ…. ಆದರೂ ಅದು ನನ್ನ ಯಂತ್ರವೆಂದೇ ಕ್ಷಣಹೊತ್ತು ತಿಳಿದುಕೊಳ್ಳತಕ್ಕದ್ದೆಂಬದನ್ನು ಮಾತ್ರ ಮರೆಯಬೇಡ.”

ಶೋಧಕನು ಇದನ್ನು ಕೇಳಿ ಬಾಯಿತೆರೆದನು; ಆದರೆ ಏನೂ ಮಾತಾಡಲಾರದೆ, ತಡೆದುಕೊಂಡು ಸುಮ್ಮನೇ ನಿಂತದ್ದನ್ನು ಕಂಡು ಯಜಮಾನನು ಮುಂದೆ ಸಾಗಿದನು.

“ಆ ಯಂತ್ರದ ಚಿಕ್ಕ ಇತಿಹಾಸವೇ ಇಲ್ಲಿ ಇರುವದು, ನೋಡು” ಎಂದ ಅಂಶವನೇ ಎದುರಿನಲ್ಲಿದ್ದ ಕಪಾಟಿನೊಳಗಿಂದ ಒಂದು ಸಣ್ಣ ನೋಟ ಬುಕ್ಕನ್ನು ತೆಗೆದನು. “ಒಳ್ಳೇದು, ಕೇಳಬೇಕೆಂದು ಕೇಳುತ್ತೇನೆ. ತಾವು ಮೂರು ವರುಷದ ಕೆಳಗೆ ಇಲ್ಲಿಗೆ ಬಂದಾಗ ತಮಗೆ ಸಂಬಳವೆಷ್ಟು ಸಿಗುತ್ತಿತ್ತು? ವರಕ್ಕೆ ಹದಿನೈದು ರೂಪಾಯಿಗಳೇ ಅಲ್ಲವೆ?” ಯಶೋಧರನು ಗೊಣುಹಾಕಿದನು. “ಸರಿಯಾಗಿರುವದಷ್ಟೆ. ನಮ್ಮಲ್ಲಿ ಒಂದು ವರುಷ ಮಟ್ಟಿಗಿದ್ದ ನಂತರ, ನೀನು ಒಂದು ದಿನ ನನ್ನ ಹತ್ತರ….” ಪ್ರೇಮಚಂದನು ಮೊದಲನೆಯ ಪುಟವನ್ನು ನೋಡಿ, “ಹದಿನಾರನೆಯ ಫೆಬ್ರುವರಿಯ ದಿವಸ… ಆಹುದು… ‘ಸುಧಾರಿಸಿದ ಯಂತ್ರ’ದ ಕಲ್ಪನೆಯನ್ನು ಹೇಳಬೇಕೆಂದು ಬಂದಿಯಷ್ಟೆ. ಅದಕ್ಕೆ ಒಪ್ಪಿಕೊಂಡು, ನಿನ್ನನ್ನು ದಿನದ ಕೆಲಸದಿಂದ ಬಿಡಿಸಿ, ನಿನ್ನ ಶೋಧಕ್ಕೆ ಮೂರ್ತಸ್ವರೂಪವನ್ನು ಕೊಡಲಪ್ಪಣೆ ಕೊಟ್ಟಿದ್ದಾಯಿತು. ಹತ್ತನೆಯ ಮೇದ ದಿನ ನೀನೊಂದು ಮಾದರಿಯನ್ನು ಮಾಡಿಕೊಟ್ಟಿ. ಮುಂದೆ ಒಂದು ತಿಂಗಳಾದ ಮೇಲೆ, ನಿನ್ನ ‘ಶೋಧ’ವನ್ನು ಮಾರತಕ್ಕೊಂಡು ಅದಕ್ಕೆ ಪ್ರತಿಫಲವಾಗಿ ‘ಸ್ವಾಮಿತ್ವ’ದ ಹಣವನ್ನು ಕೊಡಲು ನಾನು ಒಪ್ಪಿಕೊಂಡೆನು. ಅದಕ್ಕೆ ನೀನು ಸ್ವಾಮಿತ್ವವನ್ನು ಒಲ್ಲೆನೆಂದು ಹೇಳಿ, ಒಮ್ಮೆಯೇ ಎಷ್ಟಾದರೊಂದು ‘ರಕಮು’ ಕೊಡಿರೆಂದು ಕೇಳಿದಿ. ಅದನ್ನು ನಾನು ಮುಂದೆ ಮಾಡಲಿಲ್ಲ. ನೀನು ವಿಚಾರಮಾಡುತ್ತೇನೆಂದು ಹೇಳಿ, ಎರಡು ತಿಂಗಳುಗಳಲ್ಲಿ, ಸುತ್ತುಮುತ್ತಲಿನ, ಎಲ್ಲವ್ಯಾಪಾರಸ್ತರಿಗೂ ಕೇಳಿ ನೋಡಿದಿ….”

ಇದಕ್ಕೆ ಯಶೋಧರನು ಉತ್ತರವಾಗಿ ಕಟುಸ್ವರದಿಂದ ಉದ್ಗಾರ ತೆಗೆದನು; ಅವನೇಕೋ ಗಾಬರಿಗೊಂಡನು.

ಪ್ರೇಮಚಂದನು ಸಮಾಧಾನದೊಂದಿಗೆ ಮತ್ತೆ ಮಾತಾಡತೊಡಗಿದನು. “ಮತ್ತೊಮ್ಮೆ ನೀನು ನನ್ನಲ್ಲಿಗೆ ಬಂದು, ‘ನನ್ನ ಶೋಧಕ್ಕೆ ಏನೆಂದಿ’ರೆಂದು ಕೇಳಿದಿ. ನಾನು ಮತ್ತೆ ಸ್ವಾಮಿತ್ವವನ್ನು ತೆಗೆದುಕೋ, ಎಂದು ಹೇಳಿದೆ ಅದನ್ನು ನೀನು ಮತ್ತೆ ಒಲ್ಲೆನೆಂದಿ. ಇದೆಲ್ಲ ಒಂಬತ್ತನೆಯ ಅಗಷ್ಟದ ದಿವಸವಾಯಿತು.”

“ಇಷ್ಟು ಸಾಕಾಯಿತು…. ಪ್ರೇಮಚಂದಜೀ. ಇದೆಲ್ಲವನ್ನೂ ಈಗ ನೆನಿಸಿ ಮಾಡುವದೆಂಥದು? ಮುಖ್ಯ ಮಾತೇನೆಂದರೆ ನಿಮಗೆ ಮಾತ್ರ ಅದರಿಂದ ಇಪ್ಪತ್ತು ಸಾವಿರ ಹಣ ಬಂದದ್ದಾಯಿತು. ಆದರೆ ನಾನು…”

ಯಜಮಾನನು ಆ ‘ನೋಟಬುಕ್ಕು’ ಮತ್ತೆ ತಿರಿವಿಹಾಕಹತ್ತಿದನು. “ಇಷ್ಟಾದನಂತರ ನೀನು ಒಂದು ಮಾತಿನಿಂದ ಹಾದಿಗೆ ಬಂದಿ. ನಿನ್ನ ಶೋಧದ ಸ್ವಾಮಿತ್ವವು ನಮ್ಮದಾಗಿ, ನಿನಗೆ ಮುಂದೆ ಐದು ವರುಷಗಳ ತನಕ ನಾವು ವಾರಕ್ಕೆ ೫ಂ ರೂಪಾಯಿ ಕೊಡಬೇಕೆಂದು ಗೊತ್ತಾಯಿತು… ಐದು ವರ್ಷದ ಒಪ್ಪಿಗೆ.”

“ಐದು ವರ್ಷದ ಒಪ್ಪಿಗೆಯ ಸಂಪೂರ್ಣ ಲಾಭವು ನಿಮ್ಮ ಕೈ ಸೇರಿತು. ಲಾಭವೆಲ್ಲವೂ ನಿಮ್ಮದಾದ ಮೇಲೆ….”

“ತುಸು ತಡೆ, ಲಾಭದಗೂಡ ಲುಕ್ಸಾನಕ್ಕಾದರೂ ನಾನೇ ಹೊಣೆಯಾದೆನಲ್ಲವೆ? ನಿನ್ನನ್ನು ಮೊದಲು ಯಾವ ಕೆಲಸದ ಮೇಲಿಟ್ಟು ಕೊಂಡೆವೋ, ಆ ಕೆಲಸದಿಂದ ನಿನಗೆ ವಾರಕ್ಕೆ ಎರಡು ರೂಪಾಯಿ ಯಾದರೂ ಸಿಗುವಂತಿತ್ತೋ ಇಲ್ಲವೋ ಎಂಬದನು ನಿನ್ನ ಮನಸ್ಸೇ ನಿನಗೆ ಹೇಳಬೇಕು. ನಿಲ್ಲು, ನಾನು ಅನ್ನತಕ್ಕದ್ದನ್ನೆಲ್ಲ ಒಮ್ಮೆ ಅಂದುಕೊಳ್ಳುವೆನು. ನಡುನಡುವೆ ನಿನ್ನ ಕೆಲಸದಲ್ಲಿ, ನೀನು ಮಾಡಿದ ತಪ್ಪು ತಡೆಗಳಿಂದ ನನಗೆಷ್ಟು ಲುಕ್ಸಾನು ಆಯಿತೆಂಬದನ್ನು ನೀನು ಅರಿತಿಲ್ಲವೆಂಬಂತೆಯೂ ಇಲ್ಲ. ಆದರೆ ನಾನು ನಿನ್ನನ್ನು ಇದಕ್ಕಾಗಿ ದೂಷಿಸುವದಿಲ್ಲ. ನಿನ್ನ ತಲೆಯಲ್ಲಿ ಈಗ ಸದ್ಯಕ್ಕೆ ಇನ್ನೂ ಕೆಲವು ಶೋಧಗಳು ಇದ್ದಿರುವದರಲ್ಲಿಯೂ ಸಂಶಯವಿಲ್ಲ. ಅದಿರಲಿ, ನಾವೆಲ್ಲರೂ ಸ್ವಪ್ನ ಸೃಷ್ಟಿಯಲ್ಲಿ ಈಸಾಡುತ್ತಿರುವದೇನೋ ನಿಜ. ನನಗೂ ಎಷ್ಟೋ ಬಗೆಯ ಸ್ವಪ್ನ ಸಾಮ್ರಾಜ್ಯದಲ್ಲಿ ಆಧಿಪತ್ಯವು ಸಿಕ್ಕಿದೆ; ನಾನೂ ಎಷ್ಟೋ ಸ್ವಪ್ನಗಳ ಒಡೆಯನಾಗಿದ್ದೇನೆ.” ವಿಚಾರ ಮಾಡಮಾಡುತ್ತಲೇ ಪ್ರೇಮಚಂದನು ನಕ್ಕನು. ಅದರಲ್ಲಿ ಉದಾಸೀನತೆಯು ಇದ್ದಿತೆ ?

ಯಶೋಧರನು ನಿಂತಲ್ಲಿಯೇ ಕಾಲು ಎತ್ತಿಡಹತ್ತಿದನು. “ನನ್ನ ಕೆಲಸದಲ್ಲಿ ನಾನು ನೈಪುಣ್ಯವನ್ನು ತೋರಿಸಲಿಲ್ಲೆಂಬ ಆರೋಪಕ್ಕೆ ಮಾತ್ರ ನನ್ನ ಸಮ್ಮತಿಯಿಲ್ಲವೆಂದು ನಾನು ಹೇಳಬೇಕೆನ್ನುತ್ತೇನೆ”ಂದು ಉರಿಮೋರೆಯಿಂದ ಯಶೋಧರನು ನುಡಿದನು. “ಏನೇ ಇರಲಿ, ನನ್ನ ಯಂತ್ರದಿಂದ ನೀನು ಇಪ್ಪತ್ತು ಸಾವಿರವನ್ನಂತೂ ಬಕ್ಕಣದಲ್ಲಿ ಹಾಕಿಕೊಂಡಿಯಷ್ಟೆ? ನನಗೆ ಅದರ ಇಪ್ಪತ್ತನೆಯ ಪಾಲು ಕೂಡ ಸಿಗಬಾರದೆಂದರೆ?”

ಪ್ರೇಮಚಂದನು ತನ್ನ ಎದುರಿನಲ್ಲಿದ್ದ ನೋಟಬುಕ್ಕು ನೋಡಿ ನಿಟ್ಟುಸಿರಿಟ್ಟನು. “ನಾನು ನಿನ್ನ ಕೂಡ ಮಾಡಿದ ವ್ಯವಹಾರದಲ್ಲಿಯ ನನ್ನ ಗುಣಾವಗುಣಗಳನ್ನು ಈಗ ತೋಡಿಕೊಳ್ಳುತ್ತ ಕೂಡುವದಿಲ್ಲ ಕಂಡಿಯಾ. ಆದರೆ, ನನ್ನ ವ್ಯವಹಾರವನ್ನೆಲ್ಲ ಇದಕ್ಕೂ ವಿಸ್ತಾರವಾಗಿ ಹೇಳಬೇಕೆನ್ನುತ್ತೇನೆ. ಇಲ್ಲಿ ಕೇಳು : ನಿನ್ನ ಯಂತ್ರದ ಮೇಲೆ ನನಗೆ ದೊರೆತ ಲಾಭಕ್ಕೂ ನೀನು ಕಟ್ಟಿದ ಅನುಮಾನಕ್ಕೂ ಮಹದಂತರವಿಲ್ಲ. ನಿಜವಾಗಿ ಹೇಳಬೇಕಾದರೆ, ನಿನ್ನ ಎಣಿಕೆಯಕಿಂತಲೂ, ಒಂದೆರಡು ಸಾವಿರ ರೂಪಾಯಿಗಳಿಂದ ಹೆಚ್ಚು ಆಗಿರುವದು. ಈ ಯಂತ್ರವನ್ನು ಮಾರ್ಕೆಟಿನಲ್ಲಿ ಮಾರಲಿಕ್ಕಿಸುವದಕ್ಕೂ ಮುಂಚಿತವಾಗಿ ಅದಕ್ಕೆ ತಗಲಿದ ವೆಚ್ಚದ ಲೆಕ್ಕವನ್ನು ನೀನು ಮಾಡಿದಂತೆ ಕಾಣುವದಿಲ್ಲ. ಇಕೋ, ಇವೇ ಆ ಲೆಕ್ಕದ ಅಂಕೆಗಳು, ಅದರ ಪೇಟೆಂಟು ತೆಗೆದುಕೊಳ್ಳಲಿಕ್ಕೆ-ಅಂದರೆ ರೆಜಿಸ್ಟ್ರೇಶನಕ್ಕೆ ೧೭ಂಂ ರೂಪಾಯಿಗಳು- ಆಣೆ ಪೈಗಳನ್ನು ನಾನು ಹೇಳುವದಿಲ್ಲ. ಹೊಸ ಯಂತ್ರಸಾಮಗ್ರಿಯು ೬೦೦೦; ಉಳಿದ ವೆಚ್ಚ ೩೯ಂಂ, ಒಟ್ಟಿಗೆ ೧೨೬ಂಂ. ಇಷ್ಟೆಲ್ಲವೂ ಒಂದು ಯಂತ್ರವು ಮಾರುವದಕ್ಕಿಂತಲೂ ಮೊದಲು ವೆಚ್ಚ ಮಾಡಬೇಕಾಯಿತು, ಇದರ ಮೇಲೆ ಲಾಭ-ಲುಕ್ಸಾನಿನ ಮಾತು ನನ್ನ ಮೇಲೆಯೇ ಉಳಿಯಿತಲ್ಲವೆ?”

ಯಶೋಧರನು ಹೌಹಾರಿದನು. “ಒಳ್ಳೆದು, ಅದೆಲ್ಲವೂ ಈಗ ತೀರಿ ಹೋಗಿ, ಈಗ ನೀನು ಏನು ಮಾಡಬೇಕಾಗಿದೆ ? ಲಾಭವನ್ನೆಣಿಸುತ್ತ ಕೂಡುವದೊಂದೇ ಕೆಲಸವಲ್ಲವೆ? ಹಾಗೂ ವರುಷೊಂದಕ್ಕೆ ನಿನ್ನ ಲಾಭವು ಇಪ್ಪತ್ತು ಸಾವಿರವನ್ನು ಮೀರಬಾರದೆಂದು ಎಲ್ಲಿ ಹೇಳಿಯದೆ?” ಎಂದು ಅವನು ಒಳ್ಳೇ ಸೊಕ್ಕಿನಿಂದ ಗದರಿಸಿ ನುಡಿದನು.

“ಲಾಭವು ಇನ್ನೂ ಹೆಚ್ಚಾಗಲಿ, ಆಗದಿರಲಿ, ಅದೆಲ್ಲವೂ ಯಶೋಧರಾ, ನನ್ನನ್ನೇ ಕೂಡಿದೆ. ಇದರಲ್ಲಿ ನಿನ್ನೆ ಸಂಬಂಧವೇನು? ಅದರೆ ನನ್ನ ಲುಕ್ಸಾನಿನ ಕಾಲವು ಮುಗಿದು ಹೋಗಿದೆಯೆಂದು ಮಾತ್ರ ನೀನು ಊಹಿಸಬೇಡ. ಜಗತ್ತಿನಲ್ಲಿ ನಿನಗಿಂತಲೂ ಮೇಲಾದ ಶೋಧಕ ವೀರರು ಇದ್ದಿರಬಹುದು. ನೀನೊಬ್ಬನೇ ಒಬ್ಬನಲ್ಲ. ನಿನ್ನ ಯಂತ್ರವನ್ನು ಉಪಯುಕ್ತತೆಯಲ್ಲಿಯೂ, ಮತ್ತುಳಿದ ಅಂತರ್ಬಾಹ್ಯಾಂಗಗಳಲ್ಲಿಯೂ, ಮೆಟ್ಟಿ ಮೀರುವಂಥ ಹೊಸ ಯಂತ್ರವನ್ನು ಇನ್ನು ಮುಂದೆ ಯಾವನ್ನೊಬ್ಬನು ಶೋಧಿಸಿ ತೆಗೆಯಬಾರದೆಂಬದಂತೂ ನಿಜವಲ್ಲ. ಹೇಗೇ ಇರಲಿ, ಇನ್ನು ನಾಲ್ಕು ವರುಷಗಳ ತನಕ ನಿನಗಂತೂ ವಾರಕ್ಕೆ ಗೊತ್ತು ಮಾಡಿದ ಹಣವು ಮುಟ್ಟೇ ಮುಟ್ಟುವದು.” ಪ್ರೇಮಚಂದನು ತನ್ನ ತಿಜೋರಿಯನ್ನು ಲಕ್ಷ್ಯಗೊಟ್ಟು ನೋಡಿ “ಯಶೋಧರಾ, ನಾನು ಹೇಳತಕ್ಕದ್ದೆಲ್ಲ ಮುಗಿದಾಯಿತು, ನಿನ್ನ ಮನಸು ಕೀಳುತನಕ್ಕಿಳಿದಿರುವದನ್ನು ಕಂಡು ಮಾತ್ರ ಬಹಳ ವಿಷಾದವಾಗುತ್ತದೆ. ನಾವು ಈ ವ್ಯವಹಾರವನ್ನು ಮಾಡಿದಾಗ ನೀನು ಒಳ್ಳೆ ಸಂತೋಷದಲ್ಲಿದ್ದಂತೆ ಕಾಣುತ್ತಿದ್ದಿಯಲ್ಲ….”

“ಛೇ, ಛೇ, ಅದೇ ಮೂರ್ಖತನಕ್ಕಾಗಿಯೇ, ಈಗ ನಾನು ಕಷ್ಟ ಬಡುತ್ತಿರುವೆನಲ್ಲ! ಆದರೆ ಧನವಂತರು ಹುಟ್ಟು ಬಡವರಾದ ಗುಣವಂತರ ಲಾಭವನ್ನು ಹೀಗೆಯೇ ಅನ್ಯಾಯದಿಂದ ಎಷ್ಟು ದಿನ ತೆಗೆದುಕೊಳ್ಳ….”

“ಇನ್ನು ಸಾಕಾಯಿತು. ನೀನು ಮೂರ್ಖನಿದ್ದದ್ದೇ ಸತ್ಯ”ವೆಂದು ಮೆಲ್ಲನೆ ಅಂದವನೇ ಪ್ರೇಮಚಂದನು ಎದ್ದು ನಿಂತನು. “ನಿನ್ನ ದುಃಖಕ್ಕೆಲ್ಲ ನೀನೇ ಕಾರಣನೆಂಬದನ್ನು ಇನ್ನಾದರೂ ತಿಳಿದುಕೊ, ಇನ್ನು ಮೇಲೆ, ಆ ದುಃಖವನ್ನು ಪೋಷಿಸಬೇಡ. ನಿನ್ನ ಜೀವಿತವೆಲ್ಲ ವಿಷಮಯವಾಗುವದರೊಳಗಾಗಿಯೇ ಎಚ್ಚರಾಗು, ನೀನಿನ್ನು ಬೇಕಾದರೆ ನಿನ್ನ ಕೆಲಸಕ್ಕೆ ಹೋಗು…. ಇಲ್ಲದಿದ್ದರೆ ನಿನ್ನ ಶೋಧಕ ಬುದ್ದಿಯನ್ನೇ ಹಿಂಬಾಲಿಸು, ನಿನ್ನ ಶೋಧಗಳಿಂದ ನೀನು ಧನವಂತನಾದರೆ ನನಗೆ ವಿಷಾದವಿಲ್ಲ. ಆದರೆ ಎರಡನೆಯವರಲ್ಲಿ ಯತ್ಕಿಂಚಿತ್ತಾದರೂ ವಿಶ್ವಾಸವನ್ನಿಡಲಿಕ್ಕೆ ಪ್ರಯತ್ನಿಸು. ಕ್ಷಣ ಹೊತ್ತು ನಿನ್ನ ಯಂತ್ರಶೋಧಕ್ಕೆ ಅರವಾಳು ಹತ್ತಿತ್ತೆಂದು ತಿಳಿ….”

“ನಿನ್ನಷ್ಟು ಆದಾಯವಿದ್ದವನಿಗೆ ಈ ನಷ್ಟದಿಂದೇನಾದೀತು? ಆದರೆ ದೇವರಾಣೆ! ಇನ್ನು ಮುಂದೆ ನನ್ನ ಶೋಧಗಳ ಲಾಭವು ನಿನಗೆಂದಿಗೂ ದೊರೆಯಲಾರದು” ಎಂದು ಅಂದವನೇ ಯಶೋಧರನು ಹಿಂದಿರುಗಿ ಮನೆಯ ಹಾದೀ ಹಿಡಿದನು.

ಪ್ರೇಮಚಂದನು ಆ ನೋಟಬುಕ್ಕನ್ನು ವ್ಯವಸ್ಥೆಯಿಂದ ಇಟ್ಟು ಮುಖ್ಯ ಗುಮಾಸ್ತನಾದ ಗುಲಾಬಚಂದನನ್ನು ಕರೆಯುವದಕ್ಕಾಗಿ ಗಂಟೆಯನ್ನು ಬಾರಿಸಿದನು. ಗುಲಾಬಚಂದನು ಒಳಗೆ ಬರಬರುತ್ತಲೇ “ನಾನು ಹೇಳಿದಂತೆಯೇ ಅವನು ಮಾತಾಡಿದ್ದಾನಾದೀತು. ಅವನ ತಲೆಯೇ ಹಾಳಾಗಿದೆ. ಆದರೂ ನಿಮ್ಮ ತಾಳ್ಮೆಯು ಮಿಗಿಲಾದದ್ದು. ಕಾರಖಾನೆಯಲ್ಲಿಯ ಉಳಿದ ಜನರ ಮಾತು ಬೇರೆ. ವ್ಯಾಪಾರದ ಮೂಲತತ್ವಗಳನ್ನು ಲವ ಮಾತ್ರವೂ ಅರಿಯದ ಈ ಆರೆ ಹುಚ್ಚನ ಮಾತು ಬೇರೆ. ಇನ್ನು ಇವನಲ್ಲಿ ಕನಿಕರ ಬಡುವದಾದರೂ ಎಲ್ಲಿಯವರೆಗೆ? ಒಂದು ಕೊಟ್ಟರೆ, ಮತ್ತೊಂದೂ ದೊರೆಯಬೇಕೆಂದು ಅವನು ನಾಳೆಯೇ ಕೇಳದಿರುವನೆ ? ಹತ್ತು ರೂಪಾಯಿಗಳ ಸಂಬಳವು ಸಿಕ್ಕ ಕೂಡಲೆ ಅದಕ್ಕೆ ಇಪ್ಪತ್ತಾಗತಕ್ಕದ್ದೆಂದು ಅವನು ಮರುಗದೇ ಎಂದಿಗೂ ಇರನು. ಈ ಬಿಸಿಲ್ಗುದುರೆಯ ಬೆನ್ನು ಬಿದ್ದವನನ್ನು ನಾವೆಷ್ವಂತ ಬೆನ್ನಟ್ಟುವದು?” ಎಂದಂದನು.

“ನೀನನ್ನುವದೆಲ್ಲವೂ ನಿಜವು. ಯಶೋಧರನು ಮೊದಲು ಅತ್ಯಾಶೆಯುಳ್ಳವನಂತೆ ಕಾಣಿಸಿದನೇ?”

“ಇದಕ್ಕೆ ಆಶೆಬುರುಕತನವೆನ್ನುವದಕ್ಕಿಂತಲೂ, ಒಣಹೆಮ್ಮೆಯೆಂದೇ ಅನ್ನಬೇಕು. ತಲೆಗೂಳಿತನ-ಯಾಕೆ, ಇದೇ ಮೂರು ವರುಷಗಳಾಚೆಗೆ ಇವನೇ ಅಲ್ಲವೆ, ಏನಾದರೂ ಕೆಲಸ ಕೊಡಿರೆಂದು ಅಂಗಲಾಚಿ ಹೇಳಿಕೊಳ್ಳುತ್ತ ನಮ್ಮ ಬಾಕಿಲಲ್ಲಿ ಬಿದ್ದವನು-? ಆದರೆ ಈಗ ಇವನೇ ಇಡೀ ಪೃಥ್ವಿಗೆ ಪ್ರಸಿದ್ದನಾದ ಪ್ರಥಮ ಪರಿಶೋಧಕನಂತೆ! ಹಣೇಬರಹ!”

“ಅಂದರೇನು, ಅವನಲ್ಲಿ ತಥ್ಯವೇನೂ ಇಲ್ಲೆನ್ನುವಿಯಾ? ಗುಣವಂತನಿದ್ದದ್ದು ನಿಜವು, ಆದರೆ ….”

“ಅವನಳ್ಳಿಯ ಗುಣಗಳಿಗೇನೂ ಕೊರತೆಯಿಲ್ಲ, ಶೇಟಜೀ. ಆದರೆ ಮನುಷ್ಯನು ಈ ಪರಿಯಾಗಿ ನಿಚ್ಚಣಿಕೆಯನ್ನೇರ ಹತ್ತಿದರೆ, ಅವನು ತನ್ನ ಜೀವಕೂ ಮುಳುವು, ಎರಡನೇಯವರಿಗಂತೂ ಶುದ್ಧ ಕಾಲರೂಪಿ. ನೀವು ಬೇಕಾದ್ದು ಹೇಳಿರಿ. ಇನ್ನೊಂದು, ಕೆಲ ದಿನಗಳಲ್ಲಿಯೇ ಅವನು ಬಾತಿಗೆ ಬಾರದಾಗುವನು. ಈಗೇ ಅವನ ಸೊಕ್ಕಾಳಿತನವು ಸಾಕುಬೇಕಾಗಿದೆ.” ಗುಲಾಬಚಂದನು ತುಸು ವಿಚಾರ ಮಾಡಿ ಅಂದದ್ದು : “ಅದಿರಲಿ, ನೀನಿನ್ನೂ ಅವನಿಗೆ ಅವನ ಸ್ವಾಮಿತ್ವದ ಹಣವನ್ನು ಸಲ್ಲಿಸಬೇಕೆಂತಲೇ ಮಾಡಿರುವಿರಲ್ಲ! ಅವನ ಹೆಸರಿಗೆ ನಾಲ್ಕು ಸಾವಿರ ರೂಪಾಯಿಗಳು ಬರೆದಿಟ್ಟಿರುವವು. ಇದೆಲ್ಲವೂ ಅಂತರಂಗದ ಲೆಕ್ಕವಾದರೇನಾಯಿತು? ಅವನಿಗೆ ಸಲ್ಲತಕ್ಕದ್ದಂತೂ ಸರಿ.”

“ಸಲ್ಲತಕ್ಕದ್ದಿದ್ದರೆ ಸಲ್ಲಿಸು, ಬೇಡವೇಕೆ?” ಎಂದು ಪ್ರೇಮಚಂದ ನಂದನು. “ಆಹಹ! ಈ ಸುದ್ದಿ ತಗಲಿದ ಕೂಡಲೆ ಅವನು ಹೆರೆಯುಚ್ಚಿದ ಹಾವಿನಂತಾಗುವದೇ ನಿಜ, ಇದು ಎಂಟುಸಾವಿರಮಟ್ಟಿಗೇಕಿಲ್ಲಂಬುದಾಗಿ ಅವನು ಬಳಲುವದೇನೂ ಬಿಡನು.”

“ಹೇಗೇ ಆಗಲಿ, ಅವನನ್ನಿದೊಂದು ಸಾರೆ ತಡೆಯೋಣ. ಈ ಗಾಳಿಯು ಬೀಸಿ ತೀರಿದ ನಂತರವಾದರೆ, ಅವನು ಎಚ್ಚರಗೊಂಡಾನು. ಏನೇ ಇರಲಿ, ಈಗ ಐದು ನಿಮಿಷಗಳಾಚೆ ಅವನ ಉದ್ದಟತನವನ್ನು ಕಂಡು, ಅವನ ಪರಲು ಕಡಿದುಕೊಳ್ಳಬೇಕೆಂದೆನಿಸಿತ್ತು. ಇವನ ಅರ್ಧ ಪಾಂಡಿತ್ಯದ ಅಹಂಕಾರದ ಬಿರಿನುಡಿಗಳಿಗಿಂತಲೂ ಅಜ್ಞಾನಾಂಧಕಾರದಲ್ಲಿದ್ದ ನಮ್ಮ ಕೂಲಿಗಾರರು ಕುರಿಗಳಂತಾಚರಿಸುವದೇ ಒಳಿತೆನಿಸಿತು. ಕೈಲಾದಷ್ಟು ಕೈ ಕೆಳಗಿನವರ ಕಲ್ಯಾಣ ಚಿಂತನೆಯೇ ನನ್ನ ಜೀವನ ಸರ್ವಸ್ವವೆಂದು ನಾನು ತಿಳಿಯುತ್ತೇನೆ.” ಎಂದು ಕರ್ತವ್ಯಪರಾಯಣನಾದ ಪ್ರೇಮಚಂದನಂದನು.

“ಆಗಲಿ, ಧನಿಯರ ಇಚ್ಛೆ! ಉಳಿದ ಕೆಲಸವನ್ನು ನೋಡಿಕೊಳ್ಳಬೇಕು” ಎಂದು ಇನ್ನೂ ಎಷ್ಟೋ ಕಾಗದಗಳನ್ನು ಗುಲಾಬಚಂದನು ಅವನ ಮುಂದಿಟ್ಟು, ಬಾಗಿಲತನಕ ಹೋಗಿ, ಇನ್ನೊಂದು ಮಾತು ಕೇಳತಕ್ಕದ್ದಿದೆ. ಯಶೋಧರನಿಗೆ ಸಲ್ಲತಕ್ಕ ಸ್ವಾಮಿತ್ವದ ಹಣವನ್ನೆಲ್ಲ ಅವನ ಹೆಂಡತಿಯಾದ ಶಾಂತಾದೇವಿಗೆ ಕೊಟ್ಟರೆ ಒಳಿತಾಗಲಿಕ್ಕಿಲ್ಲವೆ? ಪಾಪ, ಚಿಕ್ಕವಳಾದ ಸುಕುಮಾರಿಯು, ಕೂಳುನೀರೆಂದು ಬಳಲುತ್ತಾಳೆಂದು ಮೊನ್ನೆಯೇ ನಮ್ಮಕ್ಕನು ಹೇಳುತ್ತಿದ್ದಳು. ಮನೆಯಲ್ಲಿ ಕಣ್ಣಿಗೆ ಹಚ್ಚೇನೆಂದರೆ ಕಾಳು ಧಾನ್ಯವಿಲ್ಲವಂತೆ. ಉಡುಗೆತೊಡಿಗೆಗಳಂತೂ, ಅದನ್ನೇ ಒಗೆದು ಉಡಬೇಕಂತೆ!” ಎಂದು ಒಳ್ಳೇ ಆಲ್ಪರೆದು ಗುಲಾಬಚಂದನು ಹೇಳಿದನು.

“ಇಂಥ ಸ್ಥಿತಿಯಾಗಲಿಕ್ಕೇನು ಕಾರಣ?”

“ಎಂಥದಾದರೊಂದು ಅನಿಷ್ಟವಾದ ಸಂಗತಿಯೇ ಇದಕ್ಕೆಲ್ಲ ಕಾರಣವಾಗಿರಬೇಕಲ್ಲದೆ, ಮತ್ತಿನ್ನೇನು?”

ಪ್ರೇಮಚಂದನು ಆ ಅಂದಾಜು ಪತ್ರಿಕೆಯನ್ನು ಕೈಯ್ಯಲ್ಲಿ ಹಿಡಿದು ಅಂದದ್ದು : “ಗುಲಾಬಜೀ, ನೀವು ಮಾತ್ರ ಯಶೋಧರನ ಬೆನ್ನು ಕೈ ತೊಳೆದುಕೊಂಡು ಹತ್ತಿದಿರಿ; ಇದರಲ್ಲಿ ತಿಲಮಾತ್ರ ಸಂದೇಹವಿಲ್ಲ. ಆದರೆ ಅವನ ಗೃಹಕೃತ್ಯಗಳಲ್ಲಿ ಕೈ ಹಾಕುವದು ನಮ್ಮದಲ್ಲ. ನಮ್ಮಲ್ಲಿ ಬಂದಾಗ ಅವನು ತೀರ ಬಡಸ್ಥಿತಿಯಲ್ಲಿದ್ದದ್ದೂ ನಿಮಗೆ ಗೊತ್ತಿದೆ. ಹಿಂದೆ ಮಾಡಿದ ಸಾಲಸುದ್ದಿಗಳನ್ನು ತೀರಿಸುವದರಲ್ಲಿ ಅವನಿಗೆ ಹಣದ ಕೊರತೆಯಾಗುತ್ತಿದ್ದೀತು. ಯಶೋಧರನ ಹೆಂಡತಿಯೂ ಇದ್ದದ್ದರಲ್ಲಿಯೇ ಸುಖ ಹಂಚ್ಚಿಕೊಂಡು ಇದ್ದಿರುವಳಾದೀತು. ತನ್ನ ಗಂಡನ ಸಲುವಾಗಿ ಅವಳಿಗೆ ಒಳ್ಳೆ ಅಭಿಮಾನವಿದ್ದಂತೆ ಕಾಣುತ್ತದೆ. ಗುಣಗಳನ್ನೇ ಪೂಜೆ ಮಾಡುತ್ತಿರುವವಳಾದೀತು. ಗುಣಕ್ಕೆ ಬೆಲೆಯದೆಯಲ್ಲವೆ?” ಇಷ್ಟೆಂದು ಪ್ರೇಮಚಂದನು ಗಹಗಹಿಸಿ ನಕ್ಕನು.

“ನಿನ್ನ ಸಮಾಧಾನಕ್ಕೆ ಬೆಲೆಯಿಲ್ಲ” ವೆಂದು ಗುಲಾಬಚಂದನು ಮೆಲ್ಲನೇ ನುಡಿದು ಹೊರಬಿದ್ದನು.

ಪ್ರೇಮಚಂದನು ಘನವಾದ ವ್ಯಾಪಾರಸ್ತನೆಂಬದನ್ನು ಈ ಮೊದಲೇ ಹೇಳಿದ್ದೇವೆ. ಈ ಘನವಾದ ವ್ಯಾಪಾರವೈಭವಕ್ಕೆ ಒಪ್ಪುವಂಥ ಗೃಹಸೌಖ್ಯವು ಅವನಿಗಿದ್ದಿಲ್ಲವೆಂಬದನ್ನು ಹೇಳಲಾರೆವು. ಮದುವೆಯಾದ ಒಂದೆರಡು ವರುಷಗಳಲ್ಲಿಯೇ, ಅವನ ಅರ್‍ಧಾಂಗಿಯಾದ ಲಲಿತಾದೇವಿಯು ಪರಲೋಕವನ್ನು ಪಡೆದಳು. ಮುಂದೆ ಒಂದು ವರುಷ ಹೋಗಲಿ; ಇಷ್ಟು ಧನವನ್ನು ಸಂಪಾದಿಸಿ ಮಗನ ಸೌಭಾಗ್ಯವನ್ನು ನಿರೀಕ್ಷಿಸಿ ಆನಂದಗೊಳ್ಳುತ್ತಲಿದ್ದ ತಂದೆಯು ತೀರಿಕೊಂಡನು. ಇವೆರಡೇ ಅನಾಹುತಳಿಂದ ಪ್ರೇಮಚಂದನಿಗೆ ಜಗತ್ತಿನಲ್ಲಿಯ ಬಾಳ್ವೆಯೇ ಇಲ್ಲದಾಗಿತ್ತು. ಆದರೂ ದಿನಗಳೆದಂತೆ ದುಃಖವನ್ನು ನುಂಗಿ ಮರೆಮಾಡುತ್ತ ಬಂದಿದ್ದನು.

ನಂತರ ಕೆಲವು ದಿನಗಳಲ್ಲಿಯೇ ಇವರ ವಶಕ್ಕಿದ್ದ ಕಾರಖಾನೆಗಳಲ್ಲಿ ಒಂದರೊಳಗೆ, ಒಂದು ದಿನ ಒಂದು ಅಪಘಾತವಾದದ್ದೇ ಪ್ರೇಮಚಂದನ ಸ್ಥಿತಿಯು ಹೆಚ್ಚೆಚ್ಚು ಸುಧಾರಿಸಿ, ಅವನಲ್ಲಿ ಪ್ರಸ್ತುತಕ್ಕಿದ್ದ ಭೂತದಯೆ, ಕಾರುಣ್ಯ, ಕೈಕೆಳಗಿನವರ ಮೇಲೆ ಮಮತೆ, ವ್ಯಾಪಾರ ವ್ಯವಹಾರಗಳಲ್ಲಿ ಅಳುಕದಂಥ ಧೈರ್ಯ ಮುಂತಾದ ಗುಣಗಳ ವಿಕಾಸವಾಗಲಿಕ್ಕೆ ಕಾರಣವಾಯಿತೆಂದು ಅನ್ನಲಿಕ್ಕೆ ಅಡ್ಡಿಯಿಲ್ಲ. ಗಿರಣಿಗೆ ಆದಿಶಕ್ತಿಯಾದಂಥ ಪ್ರಧಾನ-ಗತಿ- ಚಕ್ರವೇ ಒಂದು ದಿವಸ ಒಡೆದು ಚಿಪ್ಪಾಡಿಯಾಗಿ, ಇವನ ಕಣ್ಣೆದುರಿನಲ್ಲಿ ಇಬ್ಬರು ನಿಂತಲ್ಲಿಯೇ ನುಚ್ಚು ನೂರಾದರು. ಎಷ್ಟೋ ಜನರಿಗೆ ಗಾಯತಗಲಿ ಮಿತಿಮೀರಿದ ನಷ್ಟವಾಯಿತು. ದುಃಖದ ಪೆಟ್ಟು ತಿಂದವನಾದ ಪ್ರೇಮಚಂದನಿಗೆ ಇಷ್ಟೇ ಹಣದ ನಷ್ಟವು ಇದಕ್ಕೂ ಒಂದು ವರುಷ ಮಟ್ಟಿಗೆ ಮೊದಲು ತಗಲಿದ್ದಾದರೆ, ಅವನು ನೆಲಹಿಡಿದು ಮಲಗಿಕೊಳ್ಳುತ್ತಿದ್ದನು. ಆದರೆ ಈಗ ಈ ಅಪಘಾತದಲ್ಲಿ ಮಡಿದು ಗಾಯಗೊಂದಿ, ಅನೇಕ ಅನರ್ಥಗಳಿಗೊಳಗಾದ ತನ್ನ ಸೇವಕ ಜನರ ಗೋಳಾಟವು, ಇವನನ್ನು ಪೂರ್ಣವಾಗಿ ಎಚ್ಚರಗೊಳಿಸಿ ಜಗತ್ತಿನಲ್ಲಿಯ ಬಾಳುವೆ ಎಂದರೇನೆಂಬುದರ ಪಾಠವನ್ನು ಕಲಿಸಿತು. ಇದುವರೆಗೆ, ಏನೋ ಒಂದು ದೊಡ್ಡ ಚಕ್ರದ ಸಣ್ಣ ಸಣ್ಣ ಭಾಗಗಳೆಂದು ತನ್ನ ಜನರನ್ನು ಸ್ವಲ್ಪ ಅಲಕ್ಷದಿಂದ ನಡೆಯಿಸುತ್ತಿದ್ದವನು, ತನ್ನ ಜೀವನದಷ್ಟೇ ಮಹತ್ವವು ಕಡಿಮೆ ಬೆಲೆಬಾಳುವ ಪ್ರಾಣಿಗಳಿಗೂ ಇರುವದೆಂದು ಇವನಿಗೆ ತತ್‌ಕ್ಷಣಕ್ಕೆ ತಿಳಿಯಬಂದಿತು. ತನ್ನ ನೌಕರರ ಜೀವನವೇ ತನ್ನ ಮುಖ್ಯಾಧಾರವೆಂಬದು ಅವನ ಮನವರಿಕೆಯಾಯಿತು. ವ್ಯಾಪಾರ ವ್ಯವಹಾರಗಳಲ್ಲಿ ಕೇವಲ ದ್ರವ್ಯ ಸಂಪಾದನೆಯ ಭರದಲ್ಲಿ, ಆ ದ್ರವ್ಯಾರ್ಜನೆಯ ಸಾಧನಗಳಾದ ತನ್ನ ಆಳುಗಳನ್ನು ಒಂದೇ ದಿನ ರಕ್ತ ಹಿಂಡುವಂತೆ ದುಡಿಸಿಕೊಂಡು ಜೀರ್ಣ ಮಾಡಬಾರದೆಂಬದು ಅವನಿಗೆ ಕಂಡಿತು. ಅಂದಿನಿಂದ ಅವನು ಯಥಾಯೋಗ್ಯನಾದ ಯಜಮಾನನ ಗುಣಗಳನ್ನು ಹೊಂದಿದನು. ದಡ್ಡತನವೆಂದರೆ ಸಂಭಾವಿತರ ಲಕ್ಷಣವೆಂದು ತಿಳಿದುಕೊಳ್ಳದೆ, ಜಾಣರಲ್ಲಿ ತಪ್ಪುಗಾರರನ್ನು ತಡವಿಲ್ಲದೆ ಕ್ಷಮಿಸಹತ್ತಿದನು ಮನಮುಟ್ಟಿ ಕೆಲಸ ಮಾಡುವವನು ಕೆಲಸದಲ್ಲಿ ತಡ ಮಾಡಿದರೂ, ತಿವ್ರವೇ ಏಕಾಗಲಿಲ್ಲವೆಂದು ತಲ್ಲಣಿಸುತ್ತಿರಲಿಲ್ಲ. ಪ್ರತಿಯೊಬ್ಬನಿಗೂ ತನ್ನ ಜಾಣತನವನ್ನು ತೋರಿಸಿಕೊಳ್ಳುವ ಸಮಯಗಳನ್ನು ಆಗಾಗ ತಂದುಕೊಡುತ್ತಿದ್ದನು. ಒಮ್ಮೆಯಲ್ಲದೆ ನೂರಾರು ಸಾರೆ, ಅವರ ಪ್ರಯತ್ನಗಳ ಪ್ರಯೋಜನವು ಎಲ್ಲರ ನಿದರ್ಶನಕ್ಕೆ ಬರುವಂತೆ, ವೇಳೆಯನ್ನರಿತು ಇಂಥವರ ಬೆನ್ನು ಚಪ್ಪರಿಸುವನು. ಇದರಿಂದ ಒಳ್ಳೆಯವನೆಂದು ಹಗಲೆಲ್ಲ ತಪ್ಪುಮಾಡುತ್ತ, ಕೆಲಸಕ್ಕೆ ತಪ್ಪಿಸುವ ಮೈಗಳ್ಳರನ್ನು ಮೇಯಿಸಿ ಪುಷ್ಟ ಮಾಡುತ್ತಿದ್ದನೆಂಬದನ್ನು ಮಾತ್ರ ತಿಳಿಯಕೂಡದು.

ಒಂದು ರೀತಿಯಿಂದ ಪ್ರೇಮಚಂದನು ನಿರಂಕುಶ ಪ್ರಭುವು, ಎಲ್ಲ ಮಾತುಗಳು ತನ್ನ ಕಿವಿಮುಟ್ಟದೆ ತನ್ನ ನಿರ್ಣಯಕ್ಕೊಳಪಡದೆ, ತನ್ನ ಕೈಲೇಖವಿಲ್ಲದೆ ಹೊರಬೀಳಬಾರದೆಂದು ಅವನು ಆಗ್ರಹ ತೊಡುತ್ತಿದ್ದನು. ತಾನು ಒಳ್ಳೆ ನ್ಯಾಯವಂತನೆಂಬ ಬಗ್ಗೆ ಅವನಿಗೆ ಒಳ್ಳೆ ಅಭಿಮಾನವಿತ್ತು. ವಾರದಲ್ಲಿ ಕೆಲವೊಂದು ವೇಳೆಯನ್ನು ಗೊತ್ತುಪಡಿಸಿ, ಆಗ ತಮಗೇನೆಂದು ತಿಳಿಸುವದಿದ್ದರೆ ತಿಳಿಸತಕ್ಕದ್ದೆಂದು ಸಣ್ಣ ದೊಡ್ಡ ಕೆಲಸಗಾರರಿಗೆ ಹೇಳಿಟ್ಟಿದ್ದನು. ಈ ಕಾಲಕ್ಕೆ ಪ್ರೇಮಚಂದನಿಗೆ ತಮಗೆ ಬೇಕಾದ ಬೇಡಿಕೆಗಳನ್ನಾಗಲಿ, ಹೇಳಿಕೆ ಕೇಳಿಕೆಗಳನ್ನಾಗಲಿ ಹೇಳಿಕೊಳ್ಳುವ ಸ್ವಾತಂತ್ರವು ಎಲ್ಲರಿಗೂ ಇತ್ತು. ಅಂದರೆ ಈಗ ಎಲ್ಲರೂ ತಮ್ಮ ‘ತಕರಾರು’ಗಳನ್ನು ಹೇಳಿಕೊಳ್ಳಬಹುದು. ಹೀಗಾದುದರಿಂದ ಸುಮ್ಮನೇ ತಮಗೆ ನ್ಯಾಯವಾಗಿದೆಯೆಂಬ ಕಲ್ಪನೆಗೆ ಬಲಿಬಿದ್ದು ದುಮುದುಮು ಉರಿಯುತ್ತಿದ್ದು ಈ ತಕರಾರುಗಳ ಜ್ವಾಲೆಯು ದಿನವೊಂದಕ್ಕೆ ದಬ್ಬಿ ಕೊಂಡಿದ್ದರಿಂದ ಹೆಚ್ಚೆಚ್ಚು ಪ್ರಖರವಾಗುತ್ತ ಸಾಗಿ, ಒಮ್ಮೆಲೆ ವಡವಾಗ್ನಿಯಂತೆ ಪ್ರಜ್ವಲಿಸಿ, ಸುತ್ತು ಮುತ್ತುಲಿನ ಪ್ರದೇಶವನ್ನೆಲ್ಲ ಸುಟ್ಟು ಬೂದಿಮಾಡಲವಕಾಶವು ಈ ಪ್ರೇಮಚಂದನ ಕಾರಖಾನೆಗಳಲ್ಲಿ ಇದ್ದಿಲ್ಲ. ಮೂರು ನಾಲ್ಕು ಸಾವಿರ ನೌಕರರಲ್ಲಿ ಅನ್ಯಾಯದ ಭ್ರಾಂತಿಗೆ ಬಿದ್ದವರು ತೀರ ತುಸು ಜನರು. ಈ ಬಗೆಯ ಜನರೆಂದರೆ ಪ್ರೇಮಚಂದನನ್ನು ಸುಳ್ಳು ಸೋಗಿನಿಂದ ಠಕ್ಕಿಸಲಿಕ್ಕೆ ಹೋಗಿ, ತಮ್ಮ ತಗಲು ಬೈಲಿಗೆ ಬಿದ್ದದ್ದರಿಂದ ಮಾನಹಾನಿಯಾದಂತಾಗಿ ಮನಸ್ಸು ನೋಯಿಸಿಕೊಂಡಂಥವರು ಕೆಲ ಜನರಿದ್ದರು. ಇನ್ನೂ ಕೆಲವರೆಂದರೆ ಅವನನ್ನು ಠಕ್ಕಿಸಿ ಜಯಹೊಂದಿದ್ದರು. ತಮಗೆ ಜಯಸಿಕ್ಕಿದ್ದರೂ ಅವರ ಠಕ್ಕತನವು ಅವರ ಮನಸ್ಸನ್ನು ಸಣ್ಣಾಗಿ ತಿನ್ನುತ್ತಿತ್ತೆಂಬದರಲ್ಲಿ ಸಂದೇಹವಿಲ್ಲ. ಆದರೆ ಬೆದರಿಕೆ ಹಾಕಿ, ಕೆಲಸ ನಿಲ್ಲಿಸುತ್ತೇವೆಂದು ಹೇಳಿ, ಜುಲುಮೆಮಾಡಿ ಒತ್ತಾಯದಿಂದ ಜಿಗಿದು ಹಾರಾಡಿದವರಿಗೆ ಪ್ರೇಮಚಂದನಿಂದ ಒಂದು ಕಾಸು ಕಪರ್ದಿಯಷ್ಟು ಲಾಭವಾಗುತ್ತಿದಿಲ್ಲ. ಒಣ ಬೆದರಿಕೆಗೆ ಬೆದರಿ ಬೇಲಿ ಸೇರುವ ಬಂಟನಿವನಲ್ಲ.

ಇರಲಿ; ಇದೆಲ್ಲದರಿಂದ ಇವನಿಗೆ ಲಾಭವಾಗುತ್ತಿತೋ? ನಿಜವಾಗಿ ಆಗತಕ್ಕಷ್ಟು ಆಗುತ್ತಿದ್ದಿಲ್ಲ. ಗುಮಾಸ್ತನಾದ ವೃದ್ದ ಗುಲಾಬಚಂದನನ್ನು ಕೇಳಿದರೆ, ಅವನಾದರೂ ಇದನ್ನೇ ಹೇಳುವನು. ಈ ಸಂಘವು ಸಾವಕಾಶವಾಗಿ, ಎಚ್ಚರದಿಂದ ನಾಲ್ಕೂ ಕಡೆಗೂ ಕಣ್ಣಿಟ್ಟು ಕೆಲಸ ಮಾಡುತ್ತಿದ್ದ ಕಾರಣ ಗಪಗಪನೆ ಕೈಗೆ ಬಂದಷ್ಟು ಬಳಿದುಕೊಳ್ಳುವಂಥ ಕಂಪನಿಗಳು ಲಾಭಹೊಂದುವಷ್ಟು ಇವರಿಗೆ ಆಗುತ್ತಿದ್ದಿಲ್ಲ. ಕಳೆದ ಹತ್ತು ವರುಷಗಳಿಂದಲಂತೂ ಈ ಕಂಪನಿಯ ಲಾಭದ ಪ್ರಮಾಣವು ನೂರಕ್ಕೆ ಐವತ್ತರಿಂದ ಕಡಿಮೆಯಾಗಿತ್ತು. ಕೂಲಿಯ ದರವನ್ನು ಕೇಳಿದ್ದರೆ ಇವನ ತಂದೆಯಾದ ರಾಯಚಂದನು ಕೈಲಾಸದಲ್ಲಿಯೇ ಎದೆ ಎದೆ ಬಡಿದುಕೊಳ್ಳುವಂತಿತ್ತು. ಆಳುಗಳಲ್ಲಿ ಬೇನೆ ಬೇಸರಿಕೆಯಾದರೆ, ಕಂಪನಿಯ ವೆಚ್ಚ; ಮುಪ್ಪಿನಿಂದ ಕೆಲಸ ಬಿಟ್ಟವರಿಗೆ, ಕಂಪನಿಯ ಪೆನಶನ ರೂಪದ ಉಂಬಳಿಯು; ಇಂಥವೇ ಇನ್ನೂ ಕೆಲವು ವೆಚ್ಚದ ಬಾಬುಗಳಂತೂ ಹೆಚ್ಚಾಗಿದ್ದವು. ಪ್ರೇಮಚಂದನಿಗೆ ಲಾಭವಾಗುತ್ತದೆಂದೆಯೇ ಇವೆಲ್ಲ ಔದಾರ್ಯದ ಸೋಗುಗಳು; ಇಲ್ಲದಿದ್ದರೆ ಹೇಗೆಂದು ಕೀಳು ಮನಸಿನ ಕೆತ್ತಿಗರಲ್ಲಿಯ ಭಾಷಣವು. ವರುಷದ ಕೊನೆಯಲ್ಲಿ ಶಿಲುಕಿನ ಪತ್ರಿಕೆಯನ್ನು ಓದಲಿಕ್ಕೆ ಪ್ರೇಮಚಂದನಂಥ ಧೈರ್ಯಸ್ತನೇ ಬೇಕೆಂಬದನ್ನು ನಾವು ಹೇಳುತ್ತೇವೆ. ವರುಷದ ಕೊನೆಯಲ್ಲಿಯ ಲಾಭದ ಆದಾರವನ್ನು ನಾವೆಷ್ಟು ಔದಾರ್ಯದಿಂದ ವೆಚ್ಚ ಮಾಡಿಕೊಂಡರೂ, ಇದಕ್ಕೂ ಹೆಚ್ಚಿನ ಲಾಭವನ್ನು ನಾಳಿನ ವರುಷ ದೊರಕಿಸಲಿಕ್ಕೇ ಬೇಕೆಂದು ನಮ್ಮಲ್ಲಿ ಎಷ್ಟು ಜನರು ಪಂಥತೊಡುವದಿಲ್ಲ? ಇಡೀ ಜಗತ್ತನ್ನೇ ಸಲುಹಿ, ಬೆಟ್ಟಿಯಾದವರನ್ನೆಲ್ಲ ಸಂತೋಷಪಡಿಸಬೇಕೆಂಬ ಲವಲವಿಕೆಯಿಂದ ಹೊರಟ ಯಾತ್ರಸ್ಥರಲ್ಲಿ ಇದುವರೆಗೆ ಎಷ್ಟು ಜನರು ಜಯಶಾಲಿಗಳಾದರು? ಪ್ರೇಮಚಂದನಂತೆ ಪರಾಜಯಪಟ್ಟವರೇ ಬಹು ಜನರೆಂದು ಧಾರಾಳವಾಗಿ ಹೇಳಬಹುದು. ಇಡೀ ಜಗತ್ತಿನ ಪ್ರೀತಿಯನ್ನು ಸುಪಾ ಸಂಪಾದಿಸಿಕೊಂಡವನೊಬ್ಬನು ಸರ್ವೇಶ್ವರನಾದರೂ ಅಹುದೆ?

ನಿತ್ಯಶಃ ‘ನ್ಯಾಯ, ನ್ಯಾಯ’ವೆಂದು ಕನಕರಿಸುತ್ತಿರುವ ಜನರೆಲ್ಲರೂ ಮನಸಿನಲ್ಲಿ ‘ಸೇಡು’ ತೀರಿಸಿಕೊಳ್ಳಬೇಕೆಂಬ ಭಯಂಕರವಾದ ವಿಚಾರವನ್ನೆ ಮಾಡುತ್ತಿರುವರೆಂಬುದು ಹೆಜ್ಜೆಜ್ಜೆಗೆ ಕಂಡು ಬರುವದು. ನ್ಯಾಯವೆಂದರೆಯೇ ಸೇಡು, ಫಿರ್ಯಾದು ಮಾಡಿ ನ್ಯಾಯ ಬೇಡುವೆನೆಂದವನು, ಪ್ರತಿಪಕ್ಷಿಯ ಮೇಲೆ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿರುವನೆಂದೇ ತಿಳಿಯತಕ್ಕದ್ದು. ಯಶೋಧರನು ಇದೇ ‘ನ್ಯಾಯ’ ಶಬ್ದವನ್ನೇ ಉಚ್ಚರಿಸುತ್ತ ಮನೆಯ ಹಾದೀ ಹಿಡಿದನು. ಊಟಕ್ಕೆ ಕೂತಾಗಲು ‘ನ್ಯಾಯ’ ದ ಧ್ಯಾನವೇ. ಅದೇ ಜಪವೇ. ಪ್ರಾಣಿಯು ಪಾತ್ರೆಯಲ್ಲಿ ಏನು ಇರುವದೆಂಬದನ್ನು ಕೂಡಾ ಕಣ್ಣಾರೆ ಕಂಡನೋ ಇಲ್ಲವೋ? ಊಟದ ರುಚಿ ಯಾರಿಗೆ? ಹೆಂಡತಿಯನ್ನು ಕರೆಯುವದಾದರೂ ‘ನ್ಯಾಯ’ವೆಂದೇ, ಶಾಂತಾದೇವಿಯೂ ಈ ಶಬ್ದವನ್ನು ಈಗ ಮರು ನಾಲ್ಕು ತಿಂಗಳುಗಳಿಂದ ಕೇಳುತ್ತ ಬಂದವಳಾದ್ದರಿಂದ ಪ್ರತ್ಯುತ್ತರ ಕೊಡದೆ ಮೂಕಭಾವವನ್ನು ತಾಳಿದಳು.

“ಅಯ್ಯೋ ದೈವವೆ!” ಕಡೆಗೆ ಬೇಸತ್ತು ಅವಳಂದದ್ದು “ಹೀಗೆಯೇ ಮಾಡುತ್ತ ಹೋದಲ್ಲಿ ಯಾವ ಪ್ರಯೋಜನ? ನೀವೂ ಹುಚ್ಚರಾಗಿ ನನ್ನನ್ನೂ ಹಾಳುಮಾಡುವಿರಿ, ಒಮ್ಮೆ ಮುಗಿದ ವ್ಯವಹಾರ….”

“ಆದರೆ ಆ ವ್ಯವಹಾರವು ಅನ್ಯಾಯದ್ದು ಕೇಳಿದಿಯಾ? ಅವನು ನನ್ನ ಉಪಯೋಗವನ್ನು ….”

“ಇರಲಿರಲಿ. ಈಗ ಅದಕ್ಕೆ ಯಾವ ಉಪಾಯವಿದೆ? ಆದದ್ದು ಆಯಿತು. ಆದನ್ನೆಲ್ಲ ಮರೆತುಬಿಡಿರಿ. ನಿಮಗೆ ಅದರಿಂದ ನಷ್ಟವಂತೂ ಆಗಿಲ್ಲವಲ್ಲ. ಸ್ವಲ್ಪಿಲ್ಲ ಸ್ವಲ್ಪು ಹಣ ಬಂದೀತೋ ಇಲ್ಲವೋ? ಇನ್ನು ಮುಂದೆ ನೀವೇನೂ ಮಾಡಬೇಡಿರಿ.”

“ಅದನ್ನು ಪ್ರೇಮಚಂದನ ಎದೆಯೊಳಗಿನ ರಕ್ತಹೀರಿ ತೆಗೆದುಕೊಳ್ಳುವೆನಂತೆ, ಅನ್ಯಾಯದಿಂದ ಧನವಂತನಾಗುವನೇ ಅವನು?” ಎಂದು ಯಶೋಧರನು ಹಲ್ಲು ತುಟಿ ಕಚ್ಚುತ್ತ ನುಡಿದನು.

“ಛೇ! ಆ ಮಾತು ಹಾಳಾಗಲಿ! ಇನ್ನೂ ನಾಲ್ಕು ವರುಷಗಳವರೆಗಂತೂ ಗೊತ್ತು ಮಾಡಿದಂತೆ ಹಣವು ಬರುತ್ತದಲ್ಲ?” ಎಂದು ಅವಳು ಬಿರಿನಗಿ ನಕ್ಕಳು. “ಆದರೆ, ರಾಯರೆ, ಅದರೊಳಗಿನದೊಂದು ಭಾಗವಾದರೂ ಮನೆಯ ಕಡೆಗೆ ಬರಲಿನ್ನು.”

“ಏನೆನ್ನುವಿಯೇ? ಇನ್ನೊಮ್ಮೆ ಅನ್ನು ನೋಡೋ-”

“ಏನಂದರೆ?” ಶಾಂತೆಯು ತುಸು ಧೈರ್ಯತಾಳಿ ಅಂದದ್ದು: “ಮನೆಯಲ್ಲಿ ಈಗ ಒಂದು ಹಿಡಿಯಷ್ಟು ಕಾಳಿಲ್ಲ. ಉಟ್ಟೇನಂದರೆ ಬಟ್ಟೆಯ ಬರವು. ನಿಮ್ಮ ಗಳಿಕೆ ನೋಡಿದರೆ, ನಾಲ್ಕು ಜನರಲ್ಲಿ ಒಳ್ಳೇ ಮೇಲಾಗಿ ಇರುವಂಥ ಭಾಗ್ಯ. ಒಬ್ಬಿಬ್ಬ ಕೂಲಿಯವರನ್ನಿಟ್ಟು ಕೊಂಡಿರುವಷ್ಟು ದೊರಕಣೆ….”

“ಇಲ್ಲಿ ಕೇಳಿಲ್ಲೆ” ಯಶೋಧರನು ತನ್ನನ್ನು ಬಿಗಿಹಿಡಿದುಕೊಳ್ಳುತ್ತ ಅಂದದ್ದು: “ಇದಿಷ್ಟೇ ಯಾಕೆ, ಮೇಲುಪ್ಪರಿಗೆಯ ಮನೆಯಲ್ಲಿ ಕೂಡ್ರುವಿಯಂತೆ! ಸ್ವಲ್ಪ ತಾಳು. ಈಗ ಸಿಕ್ಕುತ್ತಿದ್ದದ್ದರಲ್ಲಿಯದೊಂದೊಂದು ‘ಕಾಸೆ’ಂದರೆ ನನಗೀಗ ದೊಡ್ಡ ಖಜೀನೆ ಇದ್ದಂತೆ.”

“ನಿಮ್ಮ ಖಜಾನೆಯೆಲ್ಲ ಬ್ಯಾಂಕಿನಲ್ಲಿ, ಅಹುದಲ್ಲೋ?”

“ಅಲ್ಲ ಬಿಡು! ಒಂದಕ್ಕೆ ನೂರು-ಒಂದಕ್ಕೆ ಸಾವಿರ ಬರುವಂಥದೊಂದು ಹೊಸ ಯುಕ್ತಿಯಲ್ಲಿ ಹಾಕಿದ ದುಡ್ಡು ಹಾಳಾಗಿ ಹೋಗುವದೆ? ಬಹಾದ್ದೂರನ (ಎದೆಗೆ ಕೈಹಚ್ಚಿಕೊಂಡು) ಶೋಧಕ್ಕೆ-ಜಾಣತನಕ್ಕೆ ಏನಾದರೂ ಬೆಲೆ ಇರುವದೋ ಇಲ್ಲವೋ? ನೀನೆ ಹೇಳು.”

“ಈಗ ಮಾಡಿದಷ್ಟು ಶೋಧದಿಂದಲೇ ಮಣೆಯ ಮೇಲೆ ಕೂತು ಉಣ್ಣುವಷ್ಟು ದೇವರು ಕೊಟ್ಟಿದ್ದಾನೆ. ಹೆಚ್ಚಿನ ಹಣದ ಸುದ್ದಿ ನಮಗೆ ಬೇಡವೇ ಬೇಡ. ಹಿಂದೆ ಮಾಡಿದಷ್ಟೇ ಮುಂದೆ ಮಾಡುವದು. ನಿಮ್ಮ ಮೊದಲನೇ ಶೋಧವೇನು ಕಡಿಮೆ ಮಾಡಿತೆ? ಅದರಿಂದಲೇ ಮನೆಮಾರು ಹಾಳಾಗಿ ಕೂಳು ಕೂಳೆಂದು ತಿರುಗಿ, ನಾಲ್ಕು ಜನರಿಗೆ ಹಾಕುವಂಥ ಕೈಯಿಂದಲೇ ಎರಡನೆಯವರಿಗೆ ಬೇಡಬೇಕಾದದ್ದು, ಹೂವು ಮಾರಿದ ಊರಲ್ಲಿ ಹುಲ್ಲು ಮಾರಬಾರದೆಂಬವರಿಂದಲೇ ಈ ಮುಂಬಯಿ ಸೇರಲಿಲ್ಲವೇ? ಪ್ರೇಮಚಂದ ಶೇಟಜಿಯವರಲ್ಲಿ ಮೊದಲು ಹೋದಾಗ ನಿಮ್ಮ ಮೈಮೇಲೆ ಬಟ್ಟೆಗಳಾದರೂ ಗಟ್ಟಿಯಾದಂಥವಿದ್ದವೆ? ಪ್ರೇಮಚಂದರು “ನಿನ್ನನ್ನು ಕೆಲಸಕ್ಕೆ ಬಾ ಎಂದು ಹೇಳಿದ ದಿವಸ ನೀವೇ ಅಲ್ಲವೆ, ಅವರನ್ನು ದೇವರ ಸಮಾನರೆಂದು ಕರೆದು ಹಾರೈಸಿದವರು?”

“ನಿನ್ನ ಹಳೇ ರಗಳೆ ಸಾಕು ತೆಗಿ! ಒಮ್ಮೆ ಯಾದರೂ ಉತ್ತೇಜನದ ಮಾತು! ಈ ಹೆಂಗಸರನ್ನು ಯಾವ ದೇವರು ಹುಟ್ಟಿಸಿದ್ದಾನು? ಸಹಾನುಭೂತಿಯ ಸುದ್ದಿಯೇ ಇಲ್ಲ. ಇದಿಕೋ, ಈ ಸಾರೆ ಮಾತ್ರ ನನ್ನ ಕೆಲಸ ನನಗೆ ಚ-ನ್ನಾ- ಗಿ ಗೊತ್ತಿದೆ. ಈ ಹೊಸ ಶೋಧದಿಂದ ಹಣ ಬಂದ ಕೂಡಲೆ ಮೊದಲು ಕಟ್ಟಿಸುವದು ಮೂರುಪ್ಪರಿಗೆಯ ಮಹಾಲು!” ಶಾಂತಾದೇವಿಯು ತಲೆದೂಗಿದಳು.

“ಈಕೋ, ಈ ಸಂಗತಿಯು ನಮ್ಮಿಬ್ಬರಿಗೇ ಗೊತ್ತಿರಲಿ. ಇಲ್ಲದಿದ್ದರೆ ನೆರೆಯವರನ್ನು ಮುಂದೆ ಕೂಡಿಸಿಕೊಂಡು ಚಂದಾಗಿ ಮಾತಾಡಿ ಬಿಟ್ಟೀ! ಈ ಹಣ ಬಂದ ದಿನವೇ, ಒಂದು ‘ಎಂಜನೀಯರಿಂಗ’ದ ಭವ್ಯವಾದ ‘ಶಾಪ್’ ತೆಗೆದುಬಿಟ್ಟೆನೆಂದೇ ತಿಳಿ. ಅಲ್ಲಿಂದ ದಿನಕ್ಕೊಂದರಂತೆ ಶೋಧವನ್ನು ತೆಗೆದುಕೊ, ರೊಕ್ಕದ ಸುರಿಮಳೆ!… ಯಾಕೆ ಮಾತಾಡಲೊಲ್ಲಿ?”

“ಆದಷ್ಟು ಉಲ್ಲಾಸವೃತ್ತಿಯನ್ನು ತಾಳಿ ನಗೆಮೋರೆಯನ್ನು ಮಾಡಿಕೊಂಡು ಶಾಂತೆಯು ಅಂದದ್ದು: “ಆಮೇಲೆ ಬಂದ ಲಾಭವೆಲ್ಲವೂ ನಿಮ್ಮದೇ ಅಲ್ಲವೆ?”

“ಅರ್ಥಾತ್!” ತುಸು ಕಾಲೂರಿ ನಿಂತ ಕೂಡಲೆ, “ಈ ಪ್ರೇಮಚಂದನ ಸಮಾಚಾರವನ್ನು ತೆಗೆದುಕೊಳ್ಳೋಣಂತೆ. ಇವನು ಅರಿವೆ ಕಚ್ಚಿಕೊಂಡು ಬಿಕ್ಕೆ ಬೇಡದಿದ್ದರೆ ನನ್ನ ಹೆಸರೇ ಅಲ್ಲ!”

“ಛೇ, ಆ ಮಾತೇ ಸಾಕು! ಮಾತಾಡಿದಂತೆ ನೀವು ಎಂದಿಗೂ ಮಾಡಲಿಕ್ಕಿಲ್ಲ. ಇಷ್ಟು ಸೇಡು ತೀರಿಸಿಕೊಳ್ಳುವ ಬುದ್ದಿಯು ನಿಮ್ಮಲ್ಲಿ ಹುಟ್ಟುವಂತೆ ಅವನೇನು ಮಾಡಿಯೂ ಇಲ್ಲ…. ”

“ನೀನೂ ಅವನ ಕೈವಾರ ತೆಗೆದುಕೋ ಬೇಕಾದರೆ!”

“ನಿಜವೆಂದಾರು ಯಾರದರೂ! ಅವನ ಉಚ್ಛ್ರೇಯವೇ. ನಿಮ್ಮ ಮನಸ್ತಾಪಕ್ಕೆ ಕಾರಣವಾದ್ದರಿಂದ ನನ್ನ ನಷ್ಟವನ್ನು ಕಂಡು ಮಾತ್ರ ನಾನು ಅವನನ್ನು ಹಳಿಯುವೆನಲ್ಲದೆ, ನಿಮ್ಮ ಕೂಡ ಅವನು ಅನ್ನುವಷ್ಟು, ಅನ್ಯಥಾಚರಣೆಯ ಬಳಿಸಿಲ್ಲವೆಂಬುದನ್ನು ನಾನು ಬೇಕಾದಲ್ಲಿ ಹೇಳೇನು. ಇಡೀ ನಷ್ಟದ ಭಾರವನ್ನೇ ಅವನು ಹೊತ್ತು ಕೊಂಡನಲ್ಲ…” ಅವಳು ನಡುವೇ ಸ್ವರ ತಗ್ಗಿಸಿದಳು. “ಹೀಗ್ಯಾಕೆ ನೋಡುವದದು? ನೋಡಿದರೆ ಅಂಜಿಕೆಯೇ ಬರುತ್ತದಲ್ಲ!” ಎಂದು ಶಾಂತೆಯು ಚಟ್ಟನೆ ಚೀರಿದಳು.

ಯಶೋಧರನು ಅಡಬಡಿಸಿಕೊಂಡೆದ್ದು ಕಾಲು ಅಪ್ಪಳಿಸುತ್ತ ಬಾಗಿಲದ ಕಡೆಗೆ ಹೋದನು. ಇವನ ಈ ಗದ್ದರಿಕೆಯನ್ನು ಕಂಡು ಶಾಂತೆಯು ತನ್ನ ಎರಡೂ ಕೈಗಳಿಂದ ಕಣ್ಣೇ ಮುಚ್ಚಿಕೊಂಡಳು. ಬಾಗಿಲ ಚಿಲಕವನ್ನು ಅವನು ಹೇಗೋ ತೆಗೆದನು, ಬಾಗಿಲಿಂದ ಹಿಂದಿರುಗಿ ಅವನಂದದ್ದು “ಇನ್ನೊಮ್ಮೆ ಹೀಗೆ ಮಾತಾಡು ಅಂದರೆ ಹೇರುತ್ತೇನೆ! ತಿಳಿಯಿತೆ, ಪೂರಾ ಬುದ್ಧಿಗಲಿಸಿಬಿಟ್ಟೇನು. ಪ್ರೇಮಚಂದನಿಂದ ನನಗೆ ‘ನ್ಯಾಯ’ ದೊರೆಯಲಿಕ್ಕೇ ಬೇಕು. ನಿನ್ನ ಮನಸಿಗೆ ಬರಲಿ, ಬರದಿರಲಿ ನಾಲಿಗೆಗೆ ಕೀಲಿ ಮಾತ್ರ ಕೊಡುತ್ತಿರಬೇಡ!” ಎಂದವನೇ ಆ ತಾಮಸಿಯು ಉರಿಗಣ್ಣಿನಿಂದ ಬೆಂಕಿಯನ್ನೆ ಬೀರುತ್ತ ಬೀದಿಬಿದ್ದು ನಡೆದನು.

ಅವನು ಹೋದ ಎಷ್ಟೋ ಹೊತ್ತಿನವರೆಗೂ ಶಾಂತೆಯ ನಿಶ್ಚೇಷ್ಟಳಂತೆ ಕೂತಲ್ಲಿಯೇ ಕೂತಿದ್ದಳು. ಅವಳು ಕಣ್ಣೀರು ಸುರಿಸಲಿಲ್ಲ; ಅಳುತ್ತ ಕೂಡುವ ಹಾದಿ ಹಿಂದಾಗಿತ್ತು. ಅವಳ ಪ್ರಾಯ ಸೌಂದರ್ಯಗಳು ಕಂದಿ ಹೋಗಿದ್ದವು. ಶರೀರವು ಉಪವಾಸ ವನವಾಸಗಳಿಂದ ಸೊರಗಿ ಬೆಂಡಾಗಿತ್ತು. ಮನಸ್ತಾಪಕ್ಕಂತೂ ಮೇರೆಯೇ ಇಲ್ಲದಾಗಿತ್ತು. ಪ್ರೀತಿತರುವಿನಲ್ಲಿದ್ದ ಆಶಾತಂತುವು ಈಗೋ ಇನ್ನೊಂದು ಗಳಿಗೆಗೊ, ಎಂಬಂತೆ ಕಾಣಿಸಹತ್ತಿತು. ಈ ಸ್ಥಿತಿಯಲ್ಲಿ ಎಲ್ಲ ಸಂಕಟಗಳಿಗೂ ಆದ್ಯಮಾಂತ್ರಿಕನಾದ ಪರಮೇಶನನ್ನೇ ಎಲ್ಲರೂ ಮೊರೆ ಹೋಗುವಂತೆ ಇವಳೂ ಅವನನ್ನೇ ‘ರಕ್ಷ ರಕ್ಷ’ ಎಂದು ಧಾವಿಸಿ ಶರಣುಹೋದಲ್ಲಿ ಆಶ್ಚರ್ಯವೇನು? ತನ್ನ ಪ್ರೀತಿಯ ಪತಿಯನ್ನು ಈ ಸಂಕಟಪರಂಪರೆಯಲ್ಲಿ ಕಾಯ್ದು ತನ್ನನ್ನು ಸಲುಹಿಕೊಳ್ಳಬೇಕೆಂದು ಅವಳು ಪ್ರಾರ್ಥಿಸಿದಳು. ಕೈ ಮೀರಿದ ಕಾಲಕ್ಕೆ ಇಂಥ ಪ್ರಾರ್ಥನೆಗಳ ಫಲವು ಎಷ್ಟು ಜನರಿಗೆ ದೊರತಿರುವದು? ತಮ್ಮ ಪತಿಗಳ ಆಯುಷ್ಯವನ್ನು, ಅಂತ್ಯ ಕಾಲದಲ್ಲಿ ಅನ್ಯೋನ್ಯಭಾವದಿಂದ ಬೇಡಿಕೊಂಡವರೆಷ್ಟು ಯುವತಿಯರು ಸುವಾಸಿನಿಯರಾಗಿ ಉಳಿದರು? ಈ ಪ್ರಾರ್ಥನೆಯಲ್ಲಿಯೇ ದೋಷವೋ? ಇಲ್ಲವೆ ಆ ಕೊಡಗೈ ದೊರೆಯೇ ಅಸಮರ್ಥನೋ?
* * *

ಆ ದಿವಸ ಮಧ್ಯಾನ್ಹದ ನಂತರ ಯಶೋಧರನು ಕಾರಖಾನೆಗೆ ಹೋಗಲಿಲ್ಲ. ಪಟ್ಟಣದಲ್ಲಿ ಭ್ರಮಿಷ್ಟನಂತೆ ಒಂದೆರಡು ಮೈಲುಗಳ ವರೆಗೆ ತಿರುಗಾಡಿ ಸಮುದ್ರ ದಂಡೆಯ ಮೇಲೆ ಕುಳಿತು ಸದ್ಯಕ್ಕೆ ತಾನು ಕೂಳುಗೇಡಿಯಾದದ್ದು. ಕೇವಲ ಪ್ರೇಮಚಂದನ ಕಪಟಾಚರಣೆಗಳಿಂದಲೇ ಅಲ್ಲದೆ, ಹೀಗಾಗುವದಕ್ಕೆ ತಾನು ಯತ್ಕಿಂಚಿತ್ತಾದರೂ ತಪ್ಪುಗಾರನಲ್ಲವೆಂದು ನಿಶ್ಚಯಿಸಿಕೊಂಡನು. ಈ ನಿಶ್ಚಯವಾದನಂತರ ಭವಿಷ್ಯತ್ಕಾಲದ ಭವಿಷ್ಯದ ಭವಣಿಯನ್ನು ಏನು ಹೇಳಬೇಕು? ‘ನ್ಯಾಯ ನ್ಯಾಯ’ ವೆಂಬ ಕನವರಿಕೆಯನ್ನು ಬಿಟ್ಟು ಇನ್ನೊಂದನ್ನು ಇವನು ಹಿಂಬಾಲಿಸುವ ಜಂಬರಕ್ಕೆ ಬಿದ್ದಾನೆಂಬ ಆಶೆಯೇ ಉಳಿಯಲಿಲ್ಲ. ಸಂಧ್ಯಾಕಾಲವಾಗುತ್ತಲೇ ಅರನಿದ್ದೆಯೊಳಗಿದ್ದವನಂತೆ ಕುಳಿತಿದ್ದ ಯಶೋಧರನು ತಟ್ಟನೇ ಎದ್ದು ಮತ್ತೆ ಹಾದೀ ಹಿಡಿದನು. ಅತ್ತಿತ್ತ ತಿರುಗಾಡುವಷ್ಟರಲ್ಲಿ ಫಕ್ಕನೆ ನೆನಪಾಗಿ-ತಾನು ದಿನಾಲು ‘ಆಡ್‌ವ್ಹೊಕೇಟ’ ವನ್ನು ಸಂಜೆಗೆ ತಪ್ಪದೆ ತೆಗೆದುಕೊಳ್ಳುವ ಪ್ರಘಾತವು ಇಂದೇಕೆ ಮುರಿದೆನೆಂಬದಾಗಿಯೋ ಏನೋ,- ಆ ವೃತ್ತ ಪತ್ರದ ಆಫೀಸಿನ ಕಡೆಗೆ ನಡೆದನು, ಹೋದವನೇ ಒಂದಾಣೆ ಕೊಟ್ಟು, ಆಡ್‌ವ್ಹೋಕೇಟನ್ನು ತೆಗೆದುಕೊಂಡು, ಆತ ಎಲ್ಲಿಯೂ ಹೋಗದೆ ‘ಬ್ಯಾಂಕುಗಳ’ ಸುದ್ದಿಯನ್ನು ಓದಹತ್ತಿದನು. ಒಂದೆರಡು ನಿಮಿಷಗಳಲ್ಲಿ ………… ಬ್ಯಾಂಕಿನ ನಷ್ಟಚರ್ಯವು ………… ಕೋಟಿ ರೂಪಾಯಿಗಳಷ್ಟು! ಬ್ಯಾಂಕಿನಲ್ಲಿ ಹಣವಿಟ್ಟವರಿಗೆ ರೂಪಾಯಿಯಲ್ಲಿ ನಾಲ್ಕಾಣೆಯಂತೆ ಸಿಗುವದು! ಇದೆಲ್ಲವನ್ನೂ ಒಂದೇ ಒಂದು ನಿಮಿಷದಲ್ಲಿ ಓದಿಕೊಂಡವನೇ ಗಕ್ಕನೆ ನೆಲಕ್ಕೆ ಕೂತನು, ಇನ್ನೆಲ್ಲಿಯ ಶೋಧ? ಇನ್ನೆಲ್ಲಿಯ ಲಾಭದಾಸೆ? ಎಂದು ನುಡಿಯಲ್ಲಿಯೇ ನುಡಿದದ್ದಷ್ಟೇ ಮಾತ್ರ. ಹಾಗೆಯೇ ತೊಡಕಾಲು ಹಾಕುತ್ತ ಹತ್ತರದಲ್ಲಿಯೇ ಇದ್ದ ‘ಶಕ್ತಿ- ಶಾಂತಿಗೃಹ’ ವನ್ನು ಹೊಕ್ಕನು. ಹಗಲೆಲ್ಲ ಶ್ರಮಪಟ್ಟು ಸಾಯಂಕಾಲಕ್ಕೆ ಶ್ರಮನಿವಾರಣಾರ್ಥವಾಗಿ ಮಾದಕ ಪದಾರ್ಥಗಳನ್ನು ಸೇವಿಸುವದು ಕಾರಖಾನೆಗಳಲ್ಲಿಯ ಸಾಧಾರಣ ತರಗತಿಯ ಜನರ ಪರಿಪಾಠವು. ಅದರ ದುಷ್ಪರಿಣಾಮದಲ್ಲಿ ಲಕ್ಷ್ಯವಿಟ್ಟು ಅದರಿಂದ ದೂರಿರುವ ಜನರು ತೀರ ಕಡಿಮೆಯೆಂದರೂ ಸಲ್ಲುವದು. ಇರಲಿ, ಯಶೋಧರನು ಈ ಜನರ ಕೂಡಾಗಲೀ, ತಾನೊಬ್ಬನೆಯಾಗಲೀ ಇದುವರೆಗೆ ಈ ‘ಗೃಹ’ಗಳನ್ನಾಶ್ರಯಿಸಿದವನಲ್ಲ. ಆದರೆ ವಿಪರೀತ ಕಾಲಕ್ಕೆ ವಿನಾಶಬುದ್ದಿಯೇ ಮೇಲು. ಅಲ್ಲಿ ಒಂದೆರಡು ಪಾತ್ರೆ ತುಂಬ ಹಾಕಿಕೊಂಡವನೇ ಮೂರು ತಾಸು ರಾತ್ರೆಯ ಸುಮಾರಕ್ಕೆ ಮನೆಗೆ ಬಂದನು. ಬಂದಕೂಡಲೆ ದೊಡ್ಡ ಧ್ವನಿ ತೆಗೆದು ಅಳಹತ್ತಿ ‘ನಾವು ಪುಟ್ಟಪೂರಾ ಮುಳುಗಿದೆ’ವೆಂದು ಹೆಂಡತಿಗೆ ಹೇಳಿದನು. ಮತ್ತೆ ಅಳುವದು; ಮತ್ತೆ ಅದೇ ಸುದ್ದಿ. ಯಾಕೆಂದರೆ ಉತ್ತರವಿಲ್ಲ. ಹಿಂದೆ ಆದದ್ದನ್ನೆಲ್ಲ ಮರೆತು, ಇಲ್ಲವೆ ಅದನ್ನು ಪ್ರಸ್ತುತಕ್ಕೆ ಮುಚ್ಚಿಕೊಂಡು, ಶಾಂತೆಯು ಮಮತೆಯಿಂದ, ಏನೂ ಚಿಂತೆಯಿಲ್ಲೆಂದು ಹೇಳಿ ಅವನನ್ನು ಸಮಾಧಾನಗೊಳಿಸಬೇಕೆಂದು ಪರಿಪರಿಯಿಂದ ಯತ್ನಿಸಿದಳು. ಮೊದಲಿನಂತೆ ಮಾಡದೆ ಇನ್ನು ಮುಂದೆ ಜಾಗ್ರತೆಯಿಂದ ಕೆಲಸ ಮಾಡಿದರೆ ತಮಗೇನೂ ಕೊರತೆಯಿಲ್ಲೆಂದೂ ಮತ್ತಿನ್ನೂ ಎಷ್ಟೋ ಬಗೆಯಿಂದ ಅವನಿಗೆ ಉತ್ತೇಜನ ಬರಲೆಂದು ಸಾಯಾಸಪಟ್ಟಳು. ಬರಬರುತ್ತ ಯಶೋಧರನು, ಪ್ರೇಮಚಂದನನ್ನು ಶಾಪಿಸುವದಕ್ಕೂ, ಅವನನ್ನು ನುಚ್ಚುನೂರಾಗಿ ಕಡಿದುಹಾಕುವನೆಂದೂ, ತನ್ನ ನಾಶಕ್ಕೆ ಅವನೇ ಕಾರಣನೆಂದೂ ನಾನಾಪರಿಯಿಂದ ಬೈದಾಡಿ ತಾಳಬಿಟ್ಟನು. ಈ ಆಕ್ರೋಶವನ್ನು ಕಂಡು, ಮನೆಯಲ್ಲಿ ಒಬ್ಬಳೇ ಒಬ್ಬಳಾದ ಶಾಂತೆಯ ಗತಿ ಏನಾಗಿದ್ದೀತೆಂಬದು ಇಂಥ ಪ್ರಸಂಗಗಳನ್ನು ಕಂಡು, ಕೇಳಿ, ಅನುಭವಿಸಿದವರಿಗೇ ಗೊತ್ತು.

ಕೊನೆಯಲ್ಲಿ ಶಾಂತೆಯು ಸಾಮೋಪಚಾರಗಳಿಂದ ತನ್ನ ಗಂಡನು ಹಾದಿಗೆ ಬರುವದಿಲ್ಲೆಂದು ಪತಿವ್ರತೆಯರ ಪರಮ ಸಾಧನವಾದ ಮೌನವ್ರತವನ್ನವಲಂಬಿಸಿ ಒಟ್ಟಿಗೆ ಸ್ವಸ್ಥ ಕುಳಿತುಬಿಟ್ಟಳು. ಸುಮ್ಮನೇ ಕೂತದ್ದು ಸಹನವಾಗದೆ ಯಶೋಧರನು “ನಾನು ಸತ್ತ ಮೇಲೆ ಹೀಗೆ ಕೂಡ್ರುವದು ನಿನ್ನ ಪಾಲಿಗೆ ಇಟ್ಟಿದ್ದೇ, ಜೀವದಿಂದಿರುವಾಗಲೇ ಹೀಗೆ ಅಪಶಕುನಗಳನ್ನು ಬಗೆಯುವಿಯಾ?” ಎಂದವನೇ ಕೈಲೊಂದು ಕಾಲಿಲೆರಡು ಕೊಟ್ಟು, “ಪ್ರೇಮಚಂದ, ಇದೆಲ್ಲ ನಿನ್ನ ಸಲುವಾಗಿ! ನಾನು ಮನೆಮುರುಕೊಂಡದ್ದು ನಿನ್ನ ದೆಸೆಯಿಂದ! ನೀವು ಧನವಂತರೆಲ್ಲರೂ ಗಂಟಿಚೋರರಕಿಂತಲೂ ಠಕ್ಕರು! ನಾನು ದುಡಿಯಬೇಕಂತೆ, ನನ್ನ ಶ್ರಮದ ಫಲವು ಕೇವಲ ಹಣವಂತನೆಂದೇ ಇವನ ಮನೆ ಸೇರಬೇಕಂತೆ! ತಲೆಯಲ್ಲಿ ನೋಡಿದರೆ ಮರು ಬೊಗಸೆ ಮಣ್ಣು! ಯಶೋಧರಾ, ನೀನಂತೂ ಎಲ್ಲ ನಾಚಿಕೆಯನ್ನೂ ಬಿಟ್ಟಿ” ಎಂದು ಅಂದುಕೊಂಡವನೇ ಮತ್ತೆ ಮನೆಯ ಹೊರಗೆ ಬಿದ್ದನು.

-೪-

ಮರುದಿನ, ಮಾರನೆಯ ದಿನ, ಕಾರಖಾನೆಗಳಲ್ಲಿ ನೌಕರರು ಒಮ್ಮೆಲೆ ಕೆಲಸ ಬಿಟ್ಟು ಕೊಡುತ್ತಾರೆಂಬ ಸುದ್ದಿಯೇ ಘನ ಸುದ್ದಿ, ಯಶೋಧರನ ಪಂಗಡಕ್ಕೆ ಈ ಕಾಲದಲ್ಲಿ ಕೆಲವರು ಸೇರಿಕೊಳ್ಳುವದೇನೂ ದೊಡ್ಡ ಮಾತಲ್ಲ. ಕೆಲವರು, ಇದೇನೋ ಮೋಜಿನ ಸುಗ್ಗಿಯೆಂದು, ಕೆಲವರು ಆತ್ಮಪ್ರೌಢಿಗಾಗಿ, ಇನ್ನುಳಿದವರು ಹಲವೊಂದು ಕಾರಣದಿಂದ ಮನಸಿಲ್ಲದಿದ್ದರೂ ಬೆಂಕಿಬಿದ್ದಲ್ಲಿಗೆ ಜನವು ಓಡಿ ನೆರೆಯುವಂತೆ ಯಶೋಧರನ ಬೆನ್ನು ಹತ್ತಿರುವರೆಂಬ ವಾರ್ತೆಯು ಪ್ರೇಮಚಂದನ ಕಿವಿಮುಟ್ಟಿತು. ತಕ್ಕಡಿಯ ಹೊಯಿಲು ತಿಳಿದು ಕೆಲಸ ಸಾಧಿಸುವದಂತೂ ಮಾನವರ ಸ್ವಭಾವವು. ಕಡೆತನಕ ಯಶೋಧರನ ಬೆನ್ನು ಕಟ್ಟಿ ಬಾಳುವವರು ತೀರ ಕಡಿಮೆ ಜನ. ‘ಈ ವಾರ್ತೆಯನ್ನು ಕೇಳಿ, ಪ್ರೇಮಚಂದನು ಯಶೋಧರನನ್ನು ಹೇಗಿದ್ದಂತೆ ತನ್ನಲ್ಲಿಗೆ ತರಹೇಳಿ ಕೆಲವು ಆಳುಗಳನ್ನೂ ವೃದ್ದ ಗುಲಾಬಚಂದನನ್ನೂ ಕಳುಹಿಸಿದನು. ಗುಲಾಬಚಂದನು – “ಧನಿಯರೇ, ಅವನಿಂದೇನೂ ಆಗುವಂತಿಲ್ಲ, ಸುಮ್ಮನೆ ಯಾಕೆ ಅವನ ಪ್ರಸ್ಥ ಬೆಳಿಸುವಿರಿ?” ಎಂದು ಗುಣಗುಡುತ್ತಲೇ ಒಳ್ಳೇದೆಂದು ಅವನನ್ನು ಹಿಡಿದು ತಂದನು.
* * * *

ಯಶೋಧರನು ಪರಮೋದಾರನಾದ ಪ್ರೇಮಚಂದನೆದುರಿಗೆ ಬಂದು ನಿಂತಾಗ ಆ ಉಚ್ಛವ ಮೂರ್ತಿಯ ಸ್ವರೂಪವನ್ನು ಬಣ್ಣಿಸಲು ಬಾಣಕವಿಯಷ್ಟು ಚಾತುರ್ಯವೂ ಶಬ್ದ ಸಂಗ್ರಹವೂ ಬೇಕು. ಯಶೋಧರನನ್ನು ಕಂಡ ಕೂಡಲೆ, ಪ್ರೇಮಚಂದನು, ಹೊಟ್ಟೆಯ ಮಕ್ಕಳು ಅಡ್ಡದಾರಿ ಹಿಡಿದರೆ ತಂದೆಯು-ತಾಯಿಯು-ವಾತ್ಸಲ್ಯದಿಂದ ಪುನಶ್ಚ ಅವರನ್ನು ತೀಡಿತಿದ್ದಿ ಹಾದಿಗೆ ತರುವದಕ್ಕಾಗಿ ಶ್ರಮಪಡುವಂತೆ ಉತ್ಸುಕತೆಯಿಂದ ಯಶೋಧರನನ್ನು ಪ್ರೇಮದಿಂದ ಹತ್ತರ ಕುಳ್ಳಿರಿಸಿಕೊಂಡು ಅಂದದ್ದು: “ಯಶೋಧರಾ, ನೀನು ನಿಜವಾಗಿಯೇ ಯಶಸ್ಸನ್ನು ಹೊಂದತಕ್ಕವನು. ನೀನು ಸಾಮಾನ್ಯನಲ್ಲ. ನಿನ್ನ ತಲೆಯಲ್ಲಿ ಈ ದುರಾಶೆ ಯಾಕೆ ಸೇರಿತು? ಇದರಿಂದ ಯಾರೂ ಮುಂದಾಗಿಲ್ಲ. ಬುದ್ದಿವಂತರಿಗೆ ಈ ಪರಿಯ ಶಾಪವೋ ಹೇಗೆ? ಈಗ ಈ ನಾಲ್ಕು ಸಾವಿರದ ಹುಂಡಿಯು ನಿನ್ನದು, ನಿನ್ನ ಶೋಧದ ಸ್ವಾಮಿತ್ವವು ಎಂದೋ ನಿನ್ನ ಲೆಕ್ಕಕ್ಕೆ ಬರೆಯಿಸಿದ್ದೇನೆ. ಇದನ್ನು ತಕ್ಕೊಂಡು, ನೀನು ನನ್ನಲ್ಲಿ ಬಂದಾಗ ಯಾವ ಬಗೆಯಿಂದ ಕೆಲಸ ಮಾಡುತ್ತಿದ್ದಿಯೋ ಹಾಗೆಯೇ ಸಾಗಿಸು, ನಿನ್ನಿಂದ ನನಗೆ ನಿಜವಾಗಿಯೇ ಲಾಭವಿದೆ. ಆದರೂ ಲಾಭಕ್ಕೆ ಪಾಲುಗಾರರು ಬಹುಜನರು, ನೀವೆಲ್ಲರೂ ನನ್ನ ಪಾಲುಗಾರರಲ್ಲವೆ?” ಎಂದು ಯಶೋಧರನ ಗದ್ದ ಮುದ್ದಾಡಿ ಹೇಳಿದರೂ ಮದ್ದುತಿಂದ ಜನಕ್ಕೆ ಮೂರು ಬುದ್ದಿಯೆಂಬದು ಸುಳ್ಳಾದೀತೆ? “ಈ ನಾಲ್ಕು ಸಾವಿರವನ್ನು ನಿಮಿಷದಲ್ಲಿಗಳಿಸುವ ಸಾಮರ್ಥ್ಯವು ನನ್ನಲ್ಲಿ ಇಲ್ಲವೆಂದು ತಿಳಿದು ಬಿಕ್ಕೆ ಬೇಡುವವನಿಗೆ ಬೊಗಸೆ ಕಾಳು ನೀಡುವಂತೆ ಮಾಡುವಿಯಲ್ಲ!” ಎಂದು ಯಶೋಧರನು ಆ ಹುಂಡಿಯನ್ನು ಚರಚರನೆ ಹರಿದು ಕಾಲಿಲೊದ್ದು ಈಡಾಡಿ ಬಿಟ್ಟನು. ಪ್ರೇಮಚಂದನು ಮತ್ತೆ ಸಮಾಧಾನದಿಂದ “ನಾನು ಈಗಿಂದೀಗ ಡಾಕ್ಟರನನ್ನು ಕರೆಯಿಸುವೆನು; ನಿನಗೇನೋ ಆಗಿದೆ” ಎಂದು ಅನ್ನುವಷ್ಟರಲ್ಲಿಯೇ, ಯಶೋಧರನು ಕಿಸೆಯೊಳಗಿನ ರಿವಾಲ್ವರನ್ನು ಹಾರಿಸಿದನು. ತಿಳಿಗೇಡಿಯು ಎಲ್ಲಿ ಹಾರಿಸಿದನೋ, ಅದರಿಂದ ಅಪಾಯವೇನೂ ಆಗಲಿಲ್ಲ. ಆದರೆ ಆ ಸಪ್ಪಳವನ್ನು ಕೇಳಿ ಕಾರಖಾನೆಯೊಳಗಿನ ಜನರು ಒಟ್ಟಾಗಿ ಅವನನ್ನೇನು ಮಾಡಿದರೋ, ಇಲ್ಲವೆ ಅವನೇ ಸುಕುಮಾರಿಯಾದ ಶಾಂತೆಯ ಚಿಂತೆಯಿಲ್ಲದೆ ವಿಧಿವಶನಾದನೋ ನಾವೇತಕ್ಕೆ ಹೇಳುವ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವರ್‍ಗ – ನರಕ
Next post ಬಾರೆ ಹುಡುಗಿ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…