ಹುಡುಗ: ಬಾರೆ ಹುಡುಗಿ ಜಾಲಿಯಾಗಿ
ಬೆಟ್ಟ ಹತ್ತುವ
ಬೆಟ್ಟ ಹತ್ತಿ ಮೋಡ ಮುತ್ತಿ
ಹಕ್ಕಿ ಆಗುವ – ಬೆ-
ಳ್ಳಕ್ಕಿ ಆಗುವ
ಹುಡುಗಿ: ಬೆಟ್ಟ ಯಾಕೆ ಮಲ್ಟಿ ಸ್ಟೋರ್‍ಡ್
ಬಿಲ್ಡಿಂಗ್ ಇರುವಾಗ
ಹತ್ತೋದ್ಯಾಕೆ ನೋಯೋದ್ಯಾಕೆ
ಲಿಫ್ಟು ಇರುವಾಗ – ಸಲೀಸ್
ಲಿಫ್ಟು ಇರುವಾಗ /ಪ//
ಹುಡುಗ: ನೀನೆ ಗಂಗೆ ನಾನೆ ಶಿವನು
ಹೊತ್ತು ತಿರುಗುವೆ – ನಿನ್ನ
ಹೊತ್ತು ತಿರುಗುವೆ
ಹುಡುಗಿ: ಹಾಗಿದ್ಮೇಲೆ ಗೌರಿ ಕೂಡ
ಇರ್‍ಬೋದು ತಾನೆ – ನಿಂಗೆ
ಇರ್‍ಬೋದು ತಾನೆ
ಹುಡುಗ: ಗರಡಿಯಾಳು ನಾನು ಕಣೇ
ರಾಮ ನನಗಿಷ್ಟ
ಹುಡುಗಿ: ಹಾಗಿದ್ಮೇಲೆ ಬೇಡ ಬೇಡ
ವನವಾಸ ಕಷ್ಟ! ||೧||
ಹುಡುಗಿ: ಕಟ್ಟಿಕೊಂಡ್ರೆ ಎನ್ನಾರೈನ
ಫೀಜಾ ಬರ್ಗರ್ರು
ಅಪ್ಪಿ ತಪ್ಪಿ ನಿನ್ಕಟ್ಕಂಡ್ರೆ
ಮುದ್ದೆ ಉಪ್ಸಾರು – ರಾಗಿ
ಮುದ್ದೆ ಉಪ್ಸಾರು
ಹುಡುಗ: ಎನ್ನಾರೈಯಿ ಫೀಜಾ ಬರ್ಗರ್
ಮಕಾಡೆ ಮಲಗೈತೆ
ಹೊಟ್ಟೇಗ್ ತಂಪು ರಟ್ಟೇಗ್ ಬಲ
ಮುದ್ದೆ ಎನಿಸೈತೆ – ರಾಗಿ
ಮುದ್ದೆ ಎನಿಸೈತೆ
ಹುಡುಗಿ: ಮುದ್ದೆ ತಿನ್ನು ನಿದ್ದೆ ಮಾಡು
ಬೇಡ ಹಳ್ಳಿ ಬೇಡ
ಹುಡುಗ: ಹಳ್ಳಿಯಿಂದ್ಲೆ ದಿಳ್ಳಿ ಐತೆ
ಮಣ್ಣು ಮುಕ್ಕಬೇಡ ||೨||
*****