ಕೂಸ ಕೂಸೆಂದೇನ ಕುಂದಽಲದ್ಹರಳಿಽಗಿ|
ಮಂಡಲದಾಗಾಡೊ ಮಗನ ಗೋವಿಂದಾ||
ಕೂಸ ಕಂಡೀಽರೆ| ಅವ್ವ್ ನನ್ನ|
ಬಾಲಽನ ಕಂಡಿಽರೆ ||೧||
ಸಣ್ಣಾಗಿ ಬೀಸಿಽದ ಸಂಣ್ಹಲ್ಲಿ ಮಾಡಿಽದ|
ಬೆಣ್ಹೆಚ್ಚಿ ರೊಟ್ಟೀ ನಾ ಕುಡುವೆನವ್ವಾ||
ಕೂಸ ಕಂಡಿಽರೇ| ಅವ್ ನನ್ನ|
ಬಾಲಽನ ಕಂಡಿಽರೆ ||೨||
ಹೆಸರಂಗಿ ತೊಡೆಸಿಽದ ಹಾಲಗಡಗ ಇಡಸಿಽದ|
ಕುಸಲದ ಟಿಪ್ಪಿಽಗಿ ತೆಲಿಮ್ಯಾಲಿತ್ತವ್ವಾ||
ಕೂಸ ಕಂಡೀಽರೇ| ಅವ್ವ್ ನನ್ನ|
ಬಾಲಽನ ಕಂಡಿಽರೆ ||೩||
ಭಾಂಯಿ ಮ್ಯಾಲ ನಿಂತಿತ್ತು ಬಾಯಿ ಮಾಡಿ ಅಳತಿತ್ತು|
ಕಂಡ ಬಾಲ್ಯಾರಿಗಿಽ ಕೈಮಾಡಿತವ್ವಾ ||
ಕೂಸ ಕಂಡೀಽರೇ| ಅವ್ವ್ ನನ್ನ|
ಬಾಲಽನ ಕಂಡಿಽರೆ ||೪||
ಬಿಳಿ ಅಂಗಿ ತೊಡಸಿಽದ ಬಿಳಿಮುತ್ತ ನಿಡಸಿಽದ
ಅಂಗಳದಾಗ ಕೂಸಾ ಮಾಯಾಯಿತವ್ವಾ||
ಕೂಸ ಕಂಡೀಽರೇ| ಅವ್ವ್ ನನ್ನ|
ಬಾಲಽನ ಕಂಡಿಽರೆ ||೫||
ಗಂಡೆಹೆಂಡರು ಕೂಡಿ ಖಂಡಗ ಹರಕೀ ಮಾಡಿ|
ನಾ ಗಂಡಸಮಗನಽ ಹೆಡೆದಿದ್ದ ನವ್ವಾ|| ಕೂಸ ಕಂಡೀಽರೇ| ಅವ್ವ್ ನನ್ನ|
ಬಾಲಽನ ಕಂಡಿಽರೆ ||೬||
ಜನವ ಜಾತ್ರಿಽಗ್ಹೊಯ್ತ ನಾನೂ ಜಾತ್ರಿಽಗ್ಹ್ವಾದ|
ಜನಕಿಲ್ಲದ ಕೇಡಾ ನನಗಾಯಿತವ್ವಾ ||
ಕೂಸ ಕಂಡೀಽರೇ| ಅವ್ವ್ ನನ್ನ|
ಬಾಲಽನ ಕಂಡಿಽರೆ ||೭||
*****
ಭಾವಗೀತಗಳು
ಹೃದಯೋದ್ರೇಕಕ್ಕೆ ಕಾರಣವಾಗುವ ಯಾವುದೊಂದು ಒಂಟಿ ಸಂಗತಿಯನ್ನು ಕುರಿತು ಅದರ ಬೇರೆಬೇರೆ ಮಗ್ಗಲುಗಳನ್ನು ಒಂದೊಂದಾಗಿ ಬಣ್ಣಿಸುತ್ತ ಬಂದ ಹಾಗೆಲ್ಲ ಶ್ರೋತೃವಿನ ಅಂತರಂಗದಲ್ಲಿ ಭಾವಾವೇಗವು ಏಳುತ್ತದೆ. ಇಂತಹ ಹಾಡುಗಳಿಗೆ “ಭಾವಗೀತಗಳೆ”ಂದು ನಾಮಕರಣ ಮಾಡಲಾಗಿದೆ. ಈ ಹಾಡುಗಳಲ್ಲಿ ಒಂದೇ ಪಾತ್ರವು ತನ್ನ ಸ್ವಗತವನ್ನು ಕಲ್ಲು ಕರಗುವಂತೆ ಬಣ್ಣಿ ಸುತ್ತಿರುವುದುಂಟು.
ಕೂಸಿನ ಹಾಡು
ಜಾತ್ರೆಗೆ ಹೋದ ಒಬ್ಬ ಹೆಣ್ಣುಮಗಳು ಬಾವಿಯ ದಂಡೆಯ ಮೇಲೆ ನೀರು ಕುಡಿಯುವಾಗ ಜನರ ದಟ್ಟಣೆಯಲ್ಲಿ ಅವಳ ಕೂಸು ತಪ್ಪಿಸಿಕೊಂಡು ಬಿಟ್ಟಿದೆ. ಎಷ್ಟು ಹುಡುಕಿದರೂ ಸಿಗದಂತಾಗಲು ಅವಳು ನೆನೆನೆನೆಸಿ ಅಳುತ್ತಾಳೆ.
ಛಂದಸ್ಸು:— ತ್ರಿಪದಿಗೆ ಸಮೀಪವಾಗಿದೆ.
ಶಬ್ದಪ್ರಯೋಗಗಳು:- ಕುಂದಲ=ಕುಂದಣ. ಮಂಡಲ=ಬರಿದಾದ ಸ್ಥಳ. ಹಲ್ಲಿ=ಚಿಕ್ಕ ರೊಟ್ಟಿ. ಇಡಸೀದ=ಇಡಿಸಿರುವೆನು. ತೆಲಿ=ತಲೆ. ಹ್ವಾದ=ಹೋದೆನು.