ಹೀರುತ್ತಿರುವುದು ಇಂಧನವಲ್ಲ
ಪ್ರಕೃತಿ ಮಾತೆಯ ರಕ್ತ
ಕುಸಿದರೆ ತಾಯಿ ನಮಗಿನ್ನಾರು
ಅರಿಯಲು ಆಗೊ ನೀ ಶಕ್ತ ; ಗೆಳೆಯ
ಅರಿಯಲು ಆಗೊ ನೀ ಶಕ್ತ /ಪ//
ಸಾಲದೆ ಹೊಂಗೆ ಸಾಲದೆ ಬೇವು
ಸಾಲದೆ ಹಿಪ್ಪೆ ಸಾಲು
ಎಷ್ಟು ಬೇಕೊ ತೈಲವು ನಿನಗೆ
ಕಣ್ತೆರೆದಿಂದು ಹೇಳು
ತಾಯಿ ಉರಿದರೆ ಧಗಧಗ ಎಂದು
ನಿನ್ನಯ ಹೊಟ್ಟೆ ತಂಪೆ?
ಕೆನ್ನೆಗೆ ಬಿದ್ದ ಏಟು ಸುನಾಮಿ
ಅರಿಯದೆ ಯಾಕೆ ಕುಳಿತೆ ; ಗೆಳೆಯ
ಅರಿಯದೆ ಯಾಕೆ ಕುಳಿತೆ? /೧/
ನೂರು ಹಸಿರು ನೂರು ಉಸಿರು
ಅರಿಯೋ ಅದು ಬಂಗಾರ
ಅದರ ತಾಳಕೆ ಹಾಕು ಹೆಜ್ಜೆ
ಮಾಡಿಕೊ ಬದುಕು ಸಿಂಗಾರ
ತಾಯಿಯ ಪ್ರೀತಿ ಶಾಶ್ವತವಿರಲಿ
ಚಿಮ್ಮದಿರಲಿ ಜಠರಾಗ್ನಿ
ಗತ ಕಾಲದ ನಡೆ ಮುನ್ನಡೆಯಾಗಲಿ
ಹೊಮ್ಮಲಿಂದು ಹಸಿರಗ್ನಿ ; ಗೆಳೆಯ
ತಂಪಾಗಲಿ ಬಡಬಾಗ್ನಿ /೨/
*****