ಜಿಹ್ವೆ

ಜಿಹ್ವೆ

ಚಿತ್ರ: ಜುನಿತ ಮುಲ್ಡರ್‍
ಚಿತ್ರ: ಜುನಿತ ಮುಲ್ಡರ್‍

“ಅನು, ಅನು” ಹೊರಗಿನಿಂದಲೇ ಕೂಗುತ್ತ ಒಳಬಂದ ಸದಾನಂದ ಏದುಸಿರು ಬಿಡುತ್ತ ಅನುವನ್ನು ಹುಡುಕಿಕೊಂಡು ಹಿತ್ತಿಲಿನವರೆಗೂ ಬಂದ. ಬಟ್ಟೆ
ತೆಗೆಯುತ್ತಿದ್ದವಳನ್ನು ಕಂಡವನೇ “ಅನು ಕೇಳಿದ್ಯಾ, ಚಂದ್ರು ಅಮ್ಮನ್ನ ನಾಲಿಗೇನಾ ಯಾರೋ ಕತ್ತರಿಸಿಬಿಟ್ಟಿದ್ದಾರಂತೆ.”

‘ಹಾಂ’ ಎಂದವಳೇ ಶಿಲೆಯಂತೆ ನಿಂತುಬಿಟ್ಟಳು. ಮನದೊಳಗಿನ ಕೋಲಾಹಲ ಸ್ತಬ್ಧವಾದಂತಾಯಿತು. ನೂರೆಂಟು ಭಾವಗಳು ಮಿಂಚಿ ಮರೆಯಾದವು. ಕಂಗಳು
ಅನುಮಾನದಿಂದ ತನ್ನ ಗಂಡ ಸದಾನಂದನನ್ನೆ ನೋಡಿದವು.

“ಯಾಕೆ ಅನು, ಈ ಸುದ್ದಿ ನಿಂಗೆ ಸಂತೋಷ ತತಾ ಇಲ್ವಾ” ಕ್ಷಣ ಜೀವ ತಳೆದ ಕಣ್ಣುಗಳಲ್ಲಿ ತಟ್ಟನೆ ಜಿಗುಪ್ಸೆ, ನಿಶ್ಚಿಂತೆ, ಸಮಾಧಾನ, ಆಕ್ಷೇಪ ಇಣುಕಿದವು.

“ಅನು, ನನ್ನ ಮೇಲೆ ನಿನ್ನ ಅನುಮಾನ” ನಿಧಾನವಾಗಿ ಪದ ಪದಗಳಲ್ಲಿ ನುಡಿದ ಚಕಿತನಾಗಿ.

“ಛೇ, ಏನಾಗಿ ಹೋಯ್ತು. ನೆನ್ನೆ ತಾನು ಕೂಗಾಡಿದ್ದು ನಿಜ. ಆವೇಶದ ಭರದಲ್ಲಿ ನಾಲಿಗೆ ಕತ್ತರಿಸಿ ಹಾಕುತ್ತೇನೆ ಅಂದಿದ್ದೆ, ಹಾಗಂತ…. ಹಾಗಂತ ತನ್ನಿಂದ ಅದು ಸಾಧ್ಯವಿತ್ತೇ, ಅನುವಿನ ಅನುಮಾನದ ಕಂಗಳು ಇರಿಯುವತನಕ, ತಾನು ನೆನ್ನೆ ಅಡಿದ್ದೆಲ್ಲವೂ ತನ್ನ ಮನದಿಂದ ಮರೆಯಾಗಿಬಿಟ್ಟಿದ್ದವು. ಈಗ ಎಲ್ಲವೂ ನೆನಪಾಗುತ್ತಿವೆ. ನಾನು ನುಡಿದಂತೆಯೇ ನಡೆದು ಬಿಟ್ಟಿದ್ದೇನೆ ಎಂದು ಅನು ಭಾವಿಸಿಬಿಟ್ಟಳೆ?” ಗಾಬರಿಗೊಂಡ,
‘ಅಯ್ಯೋ! ಹಾಗಾಗಕೂಡದು.’

“ಅನು, ಅನು” ಎನ್ನುತ್ತ ಓಡಿದ.

ಬೋರಲಾಗಿ ಮಲಗಿದ್ದವಳನ್ನು ತಿರುಗಿಸುತ್ತ “ಅನು, ಏನಾದ್ರೂ ಮಾತಾಡೇ, ನೀ ಹೀಗೆ ಮೌನವಾಗಿಬಿಟ್ಟ್ರೆ ನಾ ಏನೂ ಅಂತ ತಿಳ್ಕೊಳ್ಳಿ”

ಕ್ರೂರವಾಗಿ ಅವನನ್ನೆ ದಿಟ್ಟಿಸುತ್ತ “ಇನ್ನೆಷ್ಟು ಜನರ ನಾಲಿಗೆ ಕತ್ತರಿಸಿದರೆ ನಾನು ಕೇಳಬಾರದನ್ನು ಕೇಳದಿರಲು ಸಾಧ್ಯ? ಈಗಾಗಲೇ ಮಾತಾಡ್ತ ಇರೋ ಎಲ್ಲಾ ನಾಲಿಗೆಗಳನ್ನು ಕತ್ತರಿಸಿ ಬಿಡಲು ಸಾಧ್ಯನಾ”

“ಅನು, ಅನು ಏನು ಮಾತಾಡ್ತ ಇದ್ದೀಯಾ, ನಿನ್ನ ಹೇಗೆ ನಂಬಿಸಲಿ” ಅಸಹಾಯಕತೆಯಿಂದ ಕೈ ಚೆಲ್ಲಿ ನುಡಿದ ಸದಾನಂದ.

“ಈ ಪರಿಹಾರವನ್ನಲ್ಲ ನಾನು ಬಯಸಿದ್ದು. ನನಗೆ ಬೇಕಾಗಿದ್ದು ನ್ಯಾಯ. ಆ ನ್ಯಾಯ ಈ ರೀತಿ ನಂಗೆ ಬೇಕಾಗಿರಲಿಲ್ಲ. ನಾಲಿಗೆಯಿಂದ ನುಡಿಯದೆ ಇರಬಹುದು. ಆದರೆ ಆ ಕಣ್ಣುಗಳ ಬೆಂಕಿಯನ್ನ ನಾ ಹೇಗೆ ಸಹಿಸಲಿ? ಅ ಬೆಂಕಿ ನನ್ನ ಸುಟ್ಟು ಬಿಡುವುದಿಲ್ಲವೇ? ನೀವು ತಪ್ಪು ಮಾಡಿದ್ರಿ. ತಪ್ಪು ಮಾಡಿಬಿಟ್ಟಿರಿ. ಮುಂದಿನ ಪರಿಣಾಮ ಕಾನೂನು ನಿಮ್ಮನ್ನ ಸುಮ್ಮನೆ ಬಿಡುತ್ತಾ? ಅಯ್ಯೋ ದೇವರೆ, ಎಂಥ ಕೆಲ್ಸ ಮಾಡಿ ಬಿಟ್ಟಿರಿ” ಬಡಬಡಿಸಿದಳು ಅನು.

“ಸ್ಟಾಪ್ ಇಟ್” ತಾಳ್ಮೆ ಕಳೆದುಕೊಂಡ ಸದಾನಂದ ಕೂಗಿದ.

“ನಿನ್ನ ಗಂಡನ ಮೇಲೆ ನಿಂಗೇ ನಂಬ್ಕೆ ಇಲ್ವಾ? ಒಂದು ಹೆಣ್ಣಿನ ಬಗ್ಗೆ ಅದು ತನ್ನ ತಾಯಿ ವಯಸ್ಸಿನ ಹೆಣ್ಣಿನ ಬಗ್ಗೆ ನಾನು ಹಾಗೆ ನಡ್ಕೊಂಡಿರೋಕೆ ಸಾಧ್ಯನಾ? ನನ್ನ ಬಗ್ಗೆ ಗೊತ್ತಿದ್ದೂ ಹೀಗೆ ಮಾತಾಡ್ತೀಯ” ಬೇಸರದಿಂದ ಅಲ್ಲಿಯೇ ಕುಕ್ಕರಿಸಿದ.

“ಅನೂ, ನಿನ್ನ ಮೇಲೆ ಆಣೆ ಮಾಡಿ ಹೇಳ್ತೀನಿ, ಆ ಕೆಟ್ಟ ಹೆಂಗಸಿನ ಸುದ್ದಿಗೆ ನಾ ಹೋಗಿಲ್ಲ. ಅವಳ ಮೇಲೆ ಕೋಪ ಇರೋದು ನಿಜ. ಆ ಕ್ಷಣದಲ್ಲಿ ಅವಳನ್ನು ಕತ್ತರಿಸಿ ಹಾಕಬೇಕು ಅನ್ನೋ ರೋಷ ಬಂದಿದ್ದೂ ನಿಜ. ಕೊಚ್ಚೆ ಅಂತಾ ಗೊತ್ತಿದ್ದೂ ನಾನು ಅದಕ್ಕೆ ಕಲ್ಲೆಸೆಯುತ್ತೀನಾ? ನನ್ನ ನಂಬು ಅನೂ, ನಾನು ಅಂಥ ಕೆಲ್ಸ ಮಾಡಿಲ್ಲ. ಆ ಹೆಂಗಸು ತನ್ನ ಕೆಟ್ಟ ನಾಲಿಗೆಯಿಂದ ಅದೆಷ್ಟು ಜನರ ಶತ್ರುತ್ವ ಗಳಿಸಿಕೊಂಡಿದ್ದಾಳೋ! ಯಾರೋ ಮನಸ್ಸು ಕೆಡಿಸಿಕೊಂಡವರು ಅವಳಿಗೆ ಬುದ್ಧಿ ಕಲಿಸಿದ್ದಾರೆ. ಕಂಟಕ ತೊಲಗಿತು ಅಂತಾ ಖುಷಿ ಪಡೋದು ಬಿಟ್ಟು, ಏನೇನೋ ಕಲ್ಪಿಸಿಕೊಂಡು ತಲೆ ಕೆಡಿಸಿಕೊಳ್ಳಬೇಡ, ನಾ ಸ್ವಲ್ಪ ಹೊರಗೆ ಹೋಗಿ ಬರ್ತೀನಿ” ಎಂದವನೇ ದಡಗಡನೆ ಹೊರ ಹೋಗಿಬಿಟ್ಟ.

ಅನು ಅವನ ಮಾತಿನಲ್ಲಿ ವಿಶ್ವಾಸವಿಡದಾದಳು. ಗಂಡನ ದುಡುಕು ಸ್ವಭಾವ ಗೊತ್ತಿತ್ತವಳಿಗೆ. ‘ಅಯ್ಯೋ, ತಾನು ಏಕಾದರೂ ಇವರೊಂದಿಗೆ ಬಾಯಿ ಬಿಟ್ಟೆನೊ, ಮನದ ನೋವು ಶಮನಗೊಳಿಸುವ ಯತ್ನದಲ್ಲಿ ಎಲ್ಲವನ್ನು ಹೇಳಿಬಿಟ್ಟಿದ್ದೆ. ಅದರ ಪರಿಣಾಮ ಈಗ ಕಾಣಿಸುತ್ತ ಇದೆ. ಇವರ್ಯಾಕೆ ಹೀಗೆ ದುಡುಕಿಬಿಟ್ಟರು’ ಆತಂಕದಿಂದ ಹೊರಳಾಡಿದಳು.

‘ಸದೂ ಯಾವಾಗಲೂ ಹೀಗೆಯೇ. ಎಲ್ಲವನ್ನೂ ಎಲ್ಲರನ್ನೂ ಅತಿಯಾಗಿ ಹಚ್ಚಿಕೊಳ್ಳುವುದು. ಆ ಚಂದ್ರುವನ್ನೇಕೆ ಇವರು ಅಷ್ಟೊಂದು ಹಚ್ಚಿಕೊಳ್ಳಬೇಕಿತ್ತು.
ವಿಶ್ವಾಸವನ್ನು ವಿಶ್ವಾಸವಾಗಿಯೇ ಉಳಿಸಿಕೊಳ್ಳಬೇಕಾಗಿತ್ತು. ಚಂದ್ರು ಒಳ್ಳೆಯ ಹುಡುಗನೇ, ಹಾಗಂತ ಮನೆಯ ಸದಸ್ಯನಂತೆ ಏಕೆ ಟ್ರೀಟ್ ಮಾಡಬೇಕಿತ್ತು. ಚಂದ್ರುವಿಗೆ ಅವನ ಅಣ್ಣಂದಿರಿಂದ ಅನ್ಯಾಯವಾಗಿದ್ದು ನಿಜ. ಅವನಿಗೆ ನ್ಯಾಯ ದೊರಕಿಸಿ ಕೊಡುವ ಭರದಲ್ಲಿ ಮುಂದೇನಾಗಬಹುದು ಎಂಬುದನ್ನೇ ಆಲೋಚಿಸಲಿಲ್ಲ. ಎಲ್ಲರಿಂದ ಬೇಸರಗೊಂಡ ಚಂದ್ರು ಹೆಚ್ಚಾಗಿ ಸದುವನ್ನೇ ಅವಲಂಬಿಸಿದ. ವಾಸ್ತವ್ಯ ಅಷ್ಟೇ ಬೇರೆ ಕಡೆ. ಊಟ, ತಿಂಡಿ ಎಲ್ಲವೂ ನಮ್ಮ ಮನೆಯೆಲ್ಲಿಯೇ. ನಾನೂ ಕೂಡ ಪಾಪ ಎಂದ ಉದಾರವಾಗಿಬಿಟ್ಟೆ. ಅವನಿಗೊಂದು ಬದುಕು ಕಲ್ಪಿಸುವತ್ತ ನಾನೂ ಆಸಕ್ತಿ ವಹಿಸಿದೆ. ಅದೇ ತಪ್ಪಾಗಿ ಹೋಯ್ತು.

‘ಅಬ್ಬಾ! ಆ ಹೆಂಗಸು ಹೆಂಗಸೇ ಅಲ್ಲ, ರಾಕ್ಷಸಿ. ಅಂತಹ ಹೆಣ್ಣೊಬ್ಬಳು ಚಂದ್ರುವಿನ ತಾಯಿಯಾಗಿರಬಹುದೆನ್ನುವ ಕಲ್ಪನೆ ಕೂಡ ನನಗಿರಲಿಲ್ಲ. ಇದ್ದಿದ್ದರೆ ಚಂದ್ರುವನ್ನು ದೂರವೇ ಇಡುತ್ತಿದ್ದೆವೇನೋ. ನನ್ನ ಗ್ರಹಚಾರ. ಅವಳ ಬಾಯಿಗೆ ಸುಲಭವಾಗಿ ಬಿದ್ದೆ. ಮಗ ಅದೆಷ್ಟು ಕರೆದರೂ ಊರಿಗೆ ಬಾರದಿರಲು, ಯಾವ ಹೆಣ್ಣನ್ನು ಮದುವೆಗೆ ಒಪ್ಪದಿರಲು ನಾವೇ ಕಾರಣವೆಂದು ಆ ಕೆಟ್ಟ ಹೆಂಗಸು ಇಡೀ ಬೀದಿಗೆ ಕೇಳುವಂತೆ ದೂಷಿಸುತ್ತಿದ್ದರೆ
ಥರಥರವೇ ನಡುಗಿದ್ದೆ.

ಆಕೆಯ ವಾಗ್ದಾಳಿಗೆ ಉತ್ತರಿಸಲು ನನ್ನಿಂದಾಗಿರಲಿಲ್ಲ. ನಾಚಿಕೆಯಿಂದ, ಅಪಮಾನದಿಂದ ಸಾಯುವಂತಾಗಿತ್ತು. ಮಗನ ತಲೆಕೆಡಿಸಿ ಸದೂ ಅವನಿಂದ ಹಣ
ಲಪಟಾಯಿಸಲು ಯತ್ನಿಸಿದ್ದಾನೆ. ಗಂಡ ಹೆಂಡತಿಯರಿಬ್ಬರೂ ಮಗನನ್ನು ಹಾಳು ಮಾಡುತ್ತಿದ್ದಾರೆ ಎಂದೆಲ್ಲ ದೂರಿ ಮಣ್ಣು ತೂರಿದಾಗ ಭೂಮಿ ಬಾಯಿಬಿಡಬಾರದೆ ಎನಿಸಿತ್ತು. ಇಷ್ಟೇ ಸಾಲದು ಎಂಬಂತೆ ‘ಗಂಡ ಒಬ್ಬ ಸಾಲದೇನೇ ನಿನಗೆ, ನನ್ನ ಮಗನೂ ಬೇಕಾ’ ಎಂದ ಕೂಡಲೇ ರೋಷದಿಂದ ಕಂಪಿಸಿದ್ದೆ. ಅವಳು ಹೋದ ಎಷ್ಟೋ ಹೊತ್ತಿನವರೆಗೂ ಆ ಮಾತುಗಳು ನನ್ನ ಕಿವಿಯಲ್ಲಿ ಗೊಯ್ಗುಡುತ್ತಿತ್ತು. ಇದಾವುದನ್ನೂ ಸದೂನ ಕಿವಿಗೆ ಹಾಕಬಾರದೆಂದು ನಿರ್ಧರಿಸಿದ್ದೆ. ಒಂದೇ ಕ್ಷಣದಲ್ಲಿ ನನ್ನ ಶೀಲವನ್ನು ಗಾಳಿಗೆ ತೂರಿದ್ದ ಅ ಕೆಟ್ಟ ಹೆಂಗಸಿನ ಸುದ್ದಿಯನ್ನು ಎತ್ತಬಾರದೆಂದು ಆ ಕ್ಷಣವೇ
ನಿರ್ಧರಿಸಿದ್ದೆ. ಆದರೆ ಮತ್ತೆ ಆ ಹೆಂಗಸು ಈ ಮನೆಯತ್ತ ಸುಳಿಯಬಾರದೆಂದರೆ, ಸದೂ ಚಂದ್ರುವಿನಿಂದ ದೂರವಾಗಲೇಬೇಕು. ಅದೇ ಉಳಿದಿರುವ ದಾರಿ ಎಂದುಕೊಂಡೆ.

ಅಂದೇ ರಾತ್ರಿ ಸದೂವಿನಲ್ಲಿ ಬೇಡಿಕೊಂಡೆ “ಚಂದ್ರೂ ಈ ಮನೆಗೆ ಬರಬಾರದು. ಅವನ ಸ್ನೇಹ ಬಿಟ್ಟು ಬಿಡಬೇಕು” ಎಂದ ಕೂಡಲೇ ಸದೂ ದಂಗಾಗಿದ್ದರು. ಅದೇಕೊ ಅಂದು ಸುಮ್ಮನಾಗಿ ಬಿಟ್ಟಿದ್ದರು. ಒಂದು ವಾರವಾದರೂ ಚಂದ್ರು ಮನೆಯತ್ತ ಬಾರದಿದ್ದಾಗ ಸಮಾಧಾನದ ಉಸಿರುಬಿಟ್ಟಿದ್ದೆ. ಆದರೆ ಆ ಸಮಾಧಾನ ಹೆಚ್ಚು ದಿನ ಉಳಿಯಲಿಲ್ಲ. ಸದೂವಿನೊಂದಿಗೆ ಚಂದ್ರು ಬಂದೇ ಬಿಟ್ಟ. ಸಿಡುಕಿನಿಂದ ಮುಖ ಬಿಗಿದುಕೊಂಡು ಅವನ ನಗುವಿಗೆ ಪ್ರತಿಕ್ರಿಯೆ ತೋರದೆ ದಡಕ್ಕನೇ ಎದ್ದು ಹೋದಾಗ ಚಂದ್ರು ಪೆಚ್ಚಾಗಿದ್ದ. ಅವನು ಹೆಚ್ಚು ಹೊತ್ತು ಕೂರಲಿಚ್ಛಿಸದೆ ಹೊರಟೇ ಬಿಟ್ಟಿದ್ದ. ಅವನನ್ನು ತಡೆಯಲು ಶಕ್ತಿ ಸಾಲದೆ ಸದೂ ಸುಮ್ಮನೆ ಕುಳಿತೇ ಇದ್ದರು.

“ಅನು, ಏನಾಯ್ತು ನಿಂಗೆ? ಮನೆಗೆ ಬಂದವರನ್ನ ಈ ರೀತಿ ಅವಮಾನ ಮಾಡ್ತಾರಾ? ಪಾಪ, ಚಂದ್ರು ಅದೆಷ್ಟು ಬೇಸರಿಸಿಕೊಂಡಾ ಗೊತ್ತಾ” ಆಕ್ಷೇಪಿಸಿದ್ದರು.

“ಬೇರೆಯವರ ಬೇಸರ ನೋಡ್ಕೋತ ಕುಳಿತುಕೊಂಡರೆ ನಮ್ಮ ಬೇಸರ ಯಾರು ಕೇಳ್ತಾರೆ?” ತಟ್ಟನೆ ಉತ್ತರಿಸಿದ್ದೆ.

“ಛೇ! ಏನಾಯ್ತು ನಿಂಗೆ, ನಿನ್ನ ವರ್ತನೆಯೇ ಅರ್ಥ ಆಗ್ತಾ ಇಲ್ಲ” ಬೇಸರಿಸಿಕೊಂಡಿದ್ದರು.

ಉಕ್ಕಿ ಬರುತ್ತಿದ್ದ ಕಣ್ಣೀರನ್ನು ತಡೆದುಕೊಳ್ಳುತ್ತ “ನಿಮ್ಗೆ ಆ ಚಂದ್ರು ಬೇಕೋ, ಈ ಹೆಂಡತಿ ಬೇಕೋ ಅಂತಾ ನೀವೇ ನಿರ್ಧರಿಸಿ” ಕಟುವಾಗಿ ನುಡಿದಿದ್ದೆ.

ನನ್ನ ವರ್ತನೆ ಅವರಿಗೆ ಒಗಟಾಗಿತ್ತು. ಆದರೆ ನಾನು ಏನನ್ನೂ ಹೇಳೊ ಸ್ಥಿತಿಯಲ್ಲಿರಲಿಲ್ಲ. ನನ್ನ ಒರಟುತನ ಅವರನ್ನು ಅಸ್ವಸ್ಥರನ್ನಾಗಿ ಮಾಡಿತ್ತು. ಕಣ್ಣು ನೂರೆಂಟು ಪ್ರಶ್ನೆ ಕೇಳುತ್ತಿತ್ತು. ಉತ್ತರ ಸಿಗದೆ ಸಿಟ್ಟಾಗಿದ್ದರು. ಅದಾವುದನ್ನು ಲೆಕ್ಕಿಸುವ ಸ್ಥಿತಿಯಲ್ಲಿಲ್ಲದ ನಾನು ಕಠಿಣಳಾಗಿದ್ದೆ.

ಮತ್ತೆರಡು ದಿನ ಕಳೆಯುವುದರೊಳಗಾಗಿ ಮತ್ತೆ ಬಂದ ಚಂದ್ರುವಿನ ಬಗ್ಗೆ ಆಕ್ರೋಶಗೊಂಡೆ. “ಚಂದ್ರೂ, ನೀವು ಯಾವ ಕಾರಣಕ್ಕೂ ನಮ್ಮ ಮನೆಗೆ ಬರಕೂಡದು. ಸದೂನ ಸ್ನೇಹ ನೀವು ಬಿಟ್ಟು ಬಿಡಿ. ನಿಮ್ಮ ಕೈಮುಗಿದು ಬೇಡಿಕೊಳ್ಳುತ್ತೇನೆ”.

ಮೊದಮೊದಲು ಕಟುವಾಗಿದ್ದ ನುಡಿಗಳು ಕೊನೆಗೆ ದೈನ್ಯತೆ ತಾಳಿದ್ದವು. ದಿಗ್ಭ್ರಾಂತನಾದ ಚಂದ್ರು ಸಾವರಿಸಿಕೊಳ್ಳಲು ಕ್ಷಣಗಳೇ ಬೇಕಾದವು. ನಿಧಾನವಾಗಿ ಎದ್ದು ನಿಂತ ಚಂದ್ರು “ಅಕ್ಕ, ನೀವು ಹೀಗೆ ನನ್ನ ಬೇಡ್ಕೋಬೇಕಾ? ನೀವು ಬರಬೇಡ ಅಂದ್ರೆ ಖಂಡಿತಾ ಬರಲ್ಲ” ಸೋತ ನಡಿಗೆಯಲ್ಲಿ ಹೆಜ್ಜೆ ಹಾಕುತ್ತಿದ್ದರೆ ಅಯ್ಯೋ ಎನಿಸುತ್ತಿತ್ತು. ಮನ ಕಲ್ಲು ಮಾಡಿಕೊಂಡೆ. ಹೃದಯದ ಒಂದು ಭಾಗವೇ ಕಳಚಿದಂತಾಗಿತ್ತು. ಸದೂವಿಗೆ ಅಪಘಾತವಾದಾಗ ರಕ್ತ ಕೊಟ್ಟು ಕಾಪಾಡಿದ್ದ ಬಂಧುವನ್ನು, ಚಿನ್ನು ಕಳೆದುಹೋಗಿದ್ದಾಗ ಊಟ ನಿದ್ರೆ ಬಿಟ್ಟು ಹುಡುಕಿ ತಂದು ನನ್ನ ಕಣ್ಮುಂದೆ ನಿಲ್ಲಿಸಿದ್ದ. ಸಹೋದರನಂತಿದ್ದ
ಚಂದ್ರುವನ್ನು ಈ ಮನೆಯ ಎಲ್ಲ ಕಷ್ಟಸುಖಗಳಲ್ಲಿ ಮನೆಯವನಂತೆ ಪಾಲ್ಗೊಂಡಿದ್ದ ಚಂದ್ರುವನ್ನು ಕತ್ತು ಹಿಡಿದು ಹೊರತಳ್ಳಿದ್ದೆ. ದುಃಖ ತಡೆಯಲಾರದೆ ಬಿಕ್ಕಿ ಬಿಕ್ಕಿ ಅತ್ತಿದ್ದೆ. ನನ್ನ ಕಠಿಣ ವರ್ತನೆಯಿಂದ ಕೋಪಗೊಂಡು ಉದ್ವೇಗದಿಂದ ಚಡಪಡಿಸುತ್ತಿದ್ದ ಸದೂ ತಾಳ್ಮೆ ಕಳೆದುಕೊಂಡು ನನ್ನ ಕೆನ್ನೆಗೆ ಬಿರುಸಾಗಿ ಭಾರಿಸಿದ್ದರು.

ಚಂದ್ರುವನ್ನು ಹೊರಗಟ್ಟಿದ್ದ ನೋವು, ಆ ಹೆಂಗಸು ಮಾಡಿದ ಅಪಮಾನ, ಎಂದೂ ಕೈಮಾಡದ ಸದೂ ಅಂದು ಕೊಟ್ಟ ಪೆಟ್ಟು ಎಲ್ಲವೂ ನನ್ನ ನಿರ್ಧಾರವನ್ನು ಸಡಿಲಿಸಿತ್ತು. ಸದುವಿಗೆ ಎಲ್ಲ ವಿಷಯವನ್ನು ಹೇಳಿಬಿಟ್ಟಿದ್ದೆ. ನನ್ನೆದೆಯಲ್ಲಿ ಕುದಿಯುತ್ತಿದ್ದ ಲಾವಾರಸವನ್ನು ಹರಿಯಬಿಟ್ಟಿದ್ದೆ. ಸದೂವಿನಿಂದಾದರೂ ನನಗೆ ನ್ಯಾಯ ದೊರಕಬಹುದೆಂದು ಆಶಿಸಿದ್ದೆ. ಆದರೆ ಆದದ್ದೇ ಬೇರೆ. ನನ್ನನ್ನು ದರದರನೇ ಎಳೆದುಕೊಂಡೇ ಕಾರಿಗೆ ತಳ್ಳಿದರು. ತಮ್ಮ ಮನದ ರೋಷವನ್ನೆಲ್ಲ ಕಾರಿನ ಮೇಲೆ ತೋರಿಸುತ್ತ ಚಂದ್ರುವಿನ ಮನೆ ಮುಂದೆ ನಿಲ್ಲಿಸಿದ್ದರು ನಿಮಿಷಾರ್ಧದಲ್ಲಿ.

“ಚಂದ್ರು, ಕೇಳಿದ್ಯಾ ನಿನ್ನ ತಾಯಿ ಏನಂತ ಹೇಳಿದ್ದಾಳೆ ಅಂತಾ” ಅನ್ನುವಷ್ಟರಲ್ಲಿ ಆ ಹೆಂಗಸೇ ಹೊರ ಬಂದಳು. ನಮ್ಮಿಬ್ಬರನ್ನು ಕಂಡ ಕೂಡಲೇ ಅಂದಾಡಿದ್ದನ್ನೆಲ್ಲ ಮತ್ತೆ ಆಡಿಬಿಟ್ಟಳು. ಆಕ್ರೋಶದಿಂದ ಬುಸುಗುಡುತ್ತಿದ್ದ ಸದೂ ಈ ಹೆಂಗಸಿನ ನಾಲಿಗೆ ಕತ್ತರಿಸುವೆನೆಂದು ಪ್ರತಿಜ್ಞೆ ಮಾಡಿದರು. ನಾನು ಏನಾಗಬಾರದೆಂದು ಅಂದುಕೊಂಡಿದ್ದೆನೋ ಸದೂ ಅದನ್ನು ಮಾಡಿಬಿಟ್ಟರು. ಜನರೆಲ್ಲರೂ ನಮ್ಮನ್ನ ನೋಡುತ್ತಿದ್ದರೆ ತಲೆ ತಗ್ಗಿಸಿ ಬಿಟ್ಟಿದ್ದೆ. ನಾನೊಬ್ಬಳೇ ಕೇಳಿದ್ದ ಆ ಹೊಲಸು ಮಾತುಗಳನ್ನು ಎಲ್ಲರೂ ಕೇಳುವಂತಾಗಿತ್ತು. ಅಪಮಾನದಿಂದ ಮತ್ತೊಮ್ಮೆ ಕುಸಿದಿದ್ದೆ.

ಅದಾದ ಬೆಳಿಗ್ಗೆಯೇ ಆ ಹೆಂಗಸಿನ ನಾಲಿಗೆ ಕತ್ತರಿಸಲಾಗಿತ್ತು. ಸದೂವಲ್ಲದೆ ಇನ್ಯಾರು ಅದನ್ನು ಮಾಡಲು ಸಾಧ್ಯ? ಅಯ್ಯೋ ಇದೇನಾಗಿ ಹೋಯ್ತು. ಮನಸ್ಸನ್ನೆಲ್ಲ ಶೂನ್ಯ ಆವರಿಸಿತ್ತು. ‌ಈ ಘಟನೆಯಿಂದ ನಾನು ಮಾಡಿಲ್ಲದ ತಪ್ಪನ್ನು ಒಪ್ಪಿಕೊಂಡಂತಾಗಿತ್ತು. ಜನರ ಬಾಯಿ ಮುಚ್ಚಿಸುವುದು ಹೇಗೆ? ದೇವಾ, ಇವರಿಗೇಕೆ ಇಂಥ ಬುದ್ಧಿ ಕೊಟ್ಟೆ? ಕೊನೆಗೂ ನಾನು ಶೀಲಗೆಟ್ಟವಳೆಂದೂ ನಿರೂಪಿಸಿದಂತಾಯಿತಲ್ಲ?

‘ಅಕ್ಕಾ’ ಎನ್ನುವ ಶಬ್ದ ಕೇಳಿ ತಲೆ ಎತ್ತಿದಳು. ಎದುರು ಚಂದ್ರೂ! “ಅಕ್ಕಾ ನನ್ನ ಕ್ಷಮ್ಸಿ. ನನ್ನಿಂದ ನಿಮಗೆ ಅದೆಷ್ಟು ನೋವಾಗಿದೆ ಅಂತಾ ನಂಗೊತ್ತು. ಆ ನೋವನ್ನು ನಾನು ಪಡೆಯೋಕೆ ಆಗಲ್ಲ ಅಂತಾನೂ ಗೊತ್ತು. ಅದಕ್ಕೆ….. ಅದಕ್ಕೆ ನಿಮ್ಮ ಬಗ್ಗೆ ಹೊಲಸು ಮಾತನಾಡಿದ ನಾಲಿಗೇನಾ ಇದೇ ಕೈಯಿಂದ ಕತ್ತರಿಸಿಬಿಟ್ಟಿದ್ದೇನೆ. ಇನ್ನಾರೂ ನಿಮ್ಮ ಬಗ್ಗೆ ಮಾತಾಡಬಾರದು ಅನ್ನೋ ಎಚ್ಚರಿಕೆ ಇದು. ನಾನೇ ಕತ್ತರಿಸಿದ್ದು ಅಂತಾ ಪೊಲೀಸರಿಗೆ ಹೇಳ್ತೀನಿ. ನಾ ಬತ್ತೀನಿ ಅಕ್ಕಾ” ಎನ್ನುತ್ತಾ ಹೋದ ಅವನನ್ನು ನೋಡುತ್ತಾ ದಿಙ್ಮೂಢಳಾಗಿ ಕುಳಿತುಬಿಟ್ಟಳು. ತಟ್ಟನೆ ‘ಚಂದ್ರೂ’ ಎಂದು ಕೂಗುತ್ತಾ ಅವನ ಹಿಂದೆಯೇ
ಓಡಿದಳು.

ಒಳಬಂದು ಕುಳಿತವನನ್ನು ಜಿಗುಪ್ಸೆಯಿಂದ ದಿಟ್ಟಿಸಿ “ನೀವು ಮಾಡಿರುವುದು ಸರೀನಾ? ವಿದ್ಯಾವಂತರಾಗಿ, ಬುದ್ಧಿವಂತರಾಗಿ ನೀವು ಹೀಗೆ ಮಾಡಬಹುದು ಅಂತ ನಾನು ಖಂಡಿತಾ ತಿಳಿದಿರಲಿಲ್ಲ. ನಿಮ್ಮ ತಾಯಿಗೆ ಶಿಕ್ಷೆ ಕೊಡೋಕೆ ನಿಮಗೇನು ಹಕ್ಕಿದೆ? ಎಂದು ಕೇಳಿದಳು.

“ಅಕ್ಕ, ನಿಮಗೆ ಗೊತ್ತಿಲ್ಲ, ನನ್ನ ತಾಯಿ ಅದೆಷ್ಟು ಕ್ರೂರಿ ಅಂತ. ಸವತಿಯ ಮಗಳು ಅಂತ ನನ್ನ ಅಕ್ಕನ ಕುಕ್ಕಿ ಉಕ್ಕಿ ತಿಂದುಹಾಕಿದಳು. ಮನೆ ಬೆಳಗೋಕೆ ಬಂದ ಸೊಸೆಯನ್ನು ತನ್ನ ಬಾಯಿಂದ, ತನ್ನ ಕ್ರೂರ ನಡತೆಯಿಂದ ಆತ್ಮಹತ್ಯೆ ಮಾಡ್ಕೊಳ್ಳೋ ಹಾಗೆ ಮಾಡಿದಳು. ಅವತ್ತೇ ನಾನು ಆ ಕೆಲಸ ಮಾಡಬೇಕಿತ್ತು. ನಾನು ಮನೆ ಬಿಟ್ಟು ಬರೋಕೆ ಆ ಮಹಾತಾಯಿನೇ ಕಾರಣ. ನನ್ನ ಅತ್ತಿಗೆಯರ ಜೊತೆ ನನ್ನ ಸಂಬಂಧ ಕಟ್ಟಿ, ಎಲ್ಲರ ಎದುರೂ ನನ್ನ ಮರ್ಯಾದೆ ಕಳೀತಿದ್ದಳು. ಅದನ್ನ ನಂಬಿದ ನನ್ನ ಅಣ್ಣಂದಿರು ನನ್ನ ದ್ವೇಷಿಸೋಕೆ ಶುರು ಮಾಡಿದ್ರು. ಯಾರ ಸಹವಾಸವೂ ಬೇಡ ಅಂತ ಇಷ್ಟು ದೂರ
ಬಂದು ನೆಮ್ಮದಿಯಾರೋಣ ಅಂದ್ರೆ ಇಲ್ಲಿಗೂ ಬಂದು ನನ್ನ ನೆಮ್ಮದಿ ಹಾಳು ಮಾಡಿದಳು, ನಿಮ್ಮ ಮರ್ಯಾದೆನೂ ತೆಗೆದಳು. ಆ ಕೃಷ್ಣ ಕೂಡ ಶಿಶುಪಾಲ ನೂರು
ಮಾಡುವರೆಗೂ ಸಹಿಸಿ ಕೊನೆಗೆ ಅವನನ್ನೆ ಮುಗಿಸಲಿಲ್ಲವೇ? ತಾಯಿ ಅದ ಮಾತ್ರಕ್ಕೆ ಏನು ಬೇಕಾದ್ರೂ ಮಾಡಬಹುದಾ? ನಾನು ಸಹಿಸಿದ್ದೇನೆ. ಇನ್ನು ಸಹಿಸೋಕೆ ನನ್ನಿಂದ ಸಾಧ್ಯವಾಗಲಿಲ್ಲ. ಅಕ್ಕ ನಾನು ಮಾಡಿದ್ದು ಖಂಡಿತಾ ಸರಿ. ಇದಕ್ಕಾಗಿ ನಂಗೆ ಪಶ್ಚಾತ್ತಾಪ ಇಲ್ಲ. ಈ ಕೆಲ್ಸ ಮಾಡಿ ಒಳ್ಳೆಯದನ್ನೆ ಮಾಡಿದ್ದೇನೆ. ನಿಮಗೋಸ್ಕರ ಮಾತ್ರ ಅಲ್ಲಾ ನಾನು ಆ ಕೆಲ್ಸ ಮಾಡಿರೋದು, ನಿಮಗೆ ನೋವಾಗಿದ್ರೆ ನನ್ನ ಕ್ಷಮ್ಸಿ ಅಕ್ಕ”

ಚಂದ್ರುವಿನ ಎಲ್ಲಾ ಮಾತನ್ನು ಕೇಳುತ್ತಿದ್ದರೆ ಮನ ಯೋಚಿಸುವುದನ್ನೇ ಮರೆಯಿತು. ಅರೆಕ್ಷಣ, ಆಚಾರ್ಯ ಶಂಕರರ ‘ಕೆಟ್ಟ ಮಗನಿರಬಹುದು ಆದರೆ ಕೆಟ್ಟ ತಾಯಿ ಇರುವುದಿಲ್ಲ’ ಎನ್ನುವ ನುಡಿಯ ಬಗ್ಗೆ ಏಕೋ ಸಂದೇಹ ಮೂಡಿತು.
*****
ಪುಸ್ತಕ: ದರ್ಪಣ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೧೦
Next post ನಿಜ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…