ತಮ್ಮ ಆಫೀಸಿನಲ್ಲಿ ಎಲ್ಲರೂ ಸೇರಿ ಶುಕ್ರವಾರ ಲಕ್ಷ್ಮಿ ಪೂಜೆ ಮಾಡಬೇಕೆಂದು ಆಚರಣೆಗೆ ತಂದವನು ಶಂಕರಯ್ಯ. ಆ ದಿನ ಲಕ್ಷ್ಮಿ ಪೂಜೆ, ಪ್ರಸಾದ ವಿನಿಯೋಗ ಇದೆಲ್ಲ ತನ್ನಿಂದಲೇ ಆಗಬೇಕು, ಲಕ್ಷ್ಮಿಯ ಮೇಲೆ ಅಂತಹ ಭಕ್ತಿ. ಬೇಸರಪಟ್ಟ ನಂಜಪ್ಪ, “ಎಂಥ ಮಂಕು ಹೈದರಿವರು!” ಎಂದು ಕೊಳ್ಳುತ್ತಾನೆ. “ಆಫೀಸಿನಲ್ಲೂ ಏತಕ್ಕೆ ಈ ಪೂಜಾದಿಗಳು?”
ಶಂಕರಯ್ಯನದೇ ಆದಿನ ತಿಂಡೀ ವ್ಯವಸ್ಥೆಯ ಯಾಜಮಾನ್ಯ. ಸರದಿ ಪ್ರಕಾರ ಗುಮಾಸ್ತೆಯೊಬ್ಬನು ಆ ದಿನ ತಿಂಡಿಯ ಭಾರವನ್ನು ವಹಿಸುವುದು. ಅದರ ವಿನಿಯೋಗ ಶಂಕರಯ್ಯನದು. ಅವನೇ ಹಂಚುವನು. ಮಿಕ್ಕಿದ್ದನ್ನು ಸಂಜೆ ಮಕ್ಕಳಿಗಾಗಿ ಕಟ್ಟಿಕೊಂಡು ಹೋಗುವನು. ಕೆಲವರು-ಶಂಕರಯ್ಯನ ಜನ-ತಮ್ಮ ಮನೆಯಲ್ಲೇ ಮಾಡಿಸಿ ತರುತ್ತಿದ್ದರು. ಅವರಿಗೆ ಹೋಟಲಿಗೆ ಕೊಡಲು ಶಕ್ತಿ ಇಲ್ಲ. ನಂಜಪ್ಪ, “ನಾನು ನನ್ನ ಸರದಿ ಬಂದಾಗ ಏನು ತರಿಸುತ್ತೇನೆ ಗೊತ್ತೆ! ರಿನೌನ್ ಹೋಟಲಿಂದ ಪಲಾವ್ ಮಾಡಿಸಿ ತರುತ್ತೇನೆ. ನಿಮಗೆಲ್ಲಾ ಪ್ರಸಾದ ಅಂತ ತಿನ್ನಿಸುತ್ತೇನೆ” ಎಂದು ಹೇಳುತ್ತಿದ್ದ. ಆದರೆ ಅವನ ಸರದಿ ಬಂದಾಗ ಸುಬ್ಬಯ್ಯನ ಹೋಟಲಿಂದಲೇ ಭಾರಿ ತಿಂಡಿಯನ್ನೆ ತರಿಸುತ್ತಿದ್ದ.
ನಂಜಪ್ಪ ಸರಸಿ ಮತ್ತು ವಿನೋದವಾಗಿ ಮಾತನಾಡುವವನು. ಒಂದೊಂದು ವೇಳೆ ಟೀಕೆ ಮಾಡಿದರೂ ಅದನ್ನು ಇವರು ಮನಸ್ಸಿಗೆ ಹಚ್ಚಿ ಕೊಳ್ಳುವಂತಿರಲಿಲ್ಲ. ಆಗ, ‘ಇರುವ ವಿಚಾರ ಹೇಳುತ್ತೇನೆ ಅಲ್ಲವೆ ?’ ಎನ್ನುವನು.
ಶಂಕರಯ್ಯ ಹೋಟಲಿನಲ್ಲಿ ತಿಂಡಿ ತಿನ್ನುತ್ತಿದ್ದರೂ ಅವನು ಒಳ್ಳೆ ಆಚಾರವಂತ. ಪ್ರಮುಖವಾಗಿ ವಿಭೂತಿ ಗಂಧ ಹಚ್ಚಿಕೊಳ್ಳುತ್ತಿದ್ದ, ತಿಥಿ ವಾರ ನೋಡದೆ ಹಜಾಮತಿಯಾಗದು. ಆಚಾರ-ಧರ್ಮನಿಷ್ಠೆಯ ವಿಷಯ ಬಂದಾಗ “ಆಚಾರ, ಅನುಷ್ಟಾನಾದಿಗಳು ನಿತ್ಯಕರ್ಮ. ಅವು ಆಗಲೇ ಬೇಕು, ಆದರೆ ಅವುಗಳಿಂದ ಫಲಾಪೇಕ್ಷೆ ಮಾಡಕೂಡದು. ಹೇಗೆಂದರೆ, ದಿನ ದಿನದ ಊಟಕ್ಕೂ ಮೈ ಪುಷ್ಟಿ ಯಾಗುವುದಿಲ್ಲ; ಅದೊಂದು ನಿತ್ಯಕರ್ಮ, ಆದರೆ ಒಂದು ದಿನ ಊಟ ಬಿಟ್ಟರೆ ಆಗಲೆ ದೇಹಕ್ಕೆ ಆಯಾಸವೆನಿಸುವುದು; ಇದರಂತೆಯೇ ಪೂಜಾದಿ ನಿತ್ಯಕರ್ಮಗಳು” ಹೀಗೆಲ್ಲ ಹೇಳುವನು. ಆದರೆ ನಂಜಪ್ಪನಿಗೆ ಈ ಮಾತನ್ನು ಕೇಳಿ ನಗು. ಅದೇಕೊ?
* * *
ಶಂಕರಯ್ಯನಿಗೆ ಮೂರನೆ ಸಂಬಂಧ. ಉಳಿದ ಎರಡು ಸಂಬಂಧಗಳಿಂದಲೂ ಮಕ್ಕಳು, ಮನುಷ್ಯ ತಾಪತ್ರಯದಲ್ಲಿದ್ದಾನೆ ಎಂದು ಎಲ್ಲರ ಸಹಾನುಭೂತಿ. ಸಾಹೇಬರೊಂದಿಗೆ ಅಚ್ಚು ಮೆಚ್ಚು. ಅವರ ಮನೆಗೆ ಹೋಗಿ ಬರುವುದೂ ವಿಶೇಷ. ಅವರೊಂದು ಸಾರಿ ಇವನ ಬೆಣ್ಣೆ ತೀಡಾಟವನ್ನು ಮೆಚ್ಚಿ, ಹೆಚ್ಚಿನ ಸಂಬಳಕ್ಕೆ ಶಿಫಾರಸು ಮಾಡಿದ್ದರು. ಅದು ಅನುಕೂಲವಾಗಿಯೇ ಬಂದಿತು ಮೇಲಿನಿಂದ.
ಒಂದು ದಿನ ನಂಜಪ್ಪ, ಶಂಕರಯ್ಯ ಯಾರೋ ಹೆಂಗಸರನ್ನು ಕರೆದು ಕೊಂಡು ಹೋಗುತ್ತಿದ್ದುದನ್ನು ನೋಡಿದ. ಆಫೀಸಿಗೆ ಬಂದಮೇಲೆ “ಏನ್ರಿ, ಸಾಹೇಬ್ರ, ಸಾಹೇಬ್ರ ಮನೆಯವರು ಕೂಡ ನಿಮ್ಮ ಮೇಲೆ ಅಷ್ಟು ವಿಶ್ವಾಸ ! ಅಮಾವ್ರನ್ನ ಎಲ್ಲಿ ಕರಕೊಂಡು ಹೋಗ್ತಿದ್ರಿ?” ಎಂದು ಕೇಳಿದ.
“ಈ ಹಾಳಾದವನಿಗೇನು ಮಾಡಬೇಕು?” ಎನ್ನುತ್ತ, “ನಮ್ಮ ಮನೆ ಹೆಂಗಸರನ್ನ ಕರಕೊಂಡು ಹೋಗ್ತಿದ್ದೆ; ಇನ್ಯಾರೂ ಅಲ್ಲ ಪ್ಪ” ಎಂದಿದ್ದ ಶಂಕರಯ್ಯ.
ಆದರೆ ನಂಜಪ್ಪನೊಬ್ಬನಿಗೇ ಅಂಧ ಭ್ರಮೆ ಆಗಿರಲಿಲ್ಲ.
ಈತ ಸ್ವಲ್ಪ ಸುತ್ತಾಡಿದವ, ಒಂದು ದಿನ ಶಂಕರಯ್ಯನ ಮನೆಗೆ ಏನೋ ಕೆಲಸಕ್ಕಾಗಿ ಬರಲು ಅವನು ಈಚೆ ಬಂದು ಮಾತನಾಡಿಸಿ, ಹೆಂಡತಿಗೆ “ಕಾಫಿ ಕೊಡು” ಎಂದು ಹೇಳಿದ.
ಹೆಂಡತಿ ಬೆಳ್ಳಿಲೋಟದಲ್ಲಿ ಕಾಫಿ ತಂದು ಇಟ್ಟು ಹೋದಳು. ಬಾಯಿ ತೆರೆದ ಒಂದು ಅತ್ತರ್ ಶೀಸೆ ಹತ್ತಿರಬಂದು ಹೋದಂತಾಯಿತು. ನಂಜಪ್ಪ ‘ಅಬ್ಬ!’ ಎಂದ; ಆ ರೇಶಿಮೆ ಸೀರೆ, ಚಿನ್ನದ ಒಡವೆ, ಪೌಡರಿನ ಮುಖ, ಕಾಫಿ ಇಟ್ಟಿರುವ ಬೆಳ್ಳಿಲೋಟ ಇವನ್ನೆಲ್ಲ ನೋಡಿ.
ನಂಜಪ್ಪ ಲೋಟದ ಕಾಫಿ ಎತ್ತಿ ಕುಡಿದು, “ಶಂಕರಯ್ಯ, ಕಾಫಿ ಕೊಟ್ಟೆ; ನಾನು ಕಚ್ಚಿ ಕುಡಿದು ನಿನ್ನ ಜಾತಿ ಹೋಗಿಸಲಿಲ್ಲ. ಎತ್ತಿ ಕುಡಿದಿದ್ದೇನೆ. ಇನ್ನೂ ಬೇಕಾದ್ರೆ ಹುಳಿಹಾಕಿ ಕೊಡ್ತೇನೆ,” ಎಂದ.
ಲೋಟ ಎತ್ತಲು ಬಂದ ಶಂಕರಯ್ಯನ ಹೆಂಡತಿಯ ಬಿಳಿ ಮುಖದಲ್ಲಿ ಈ ಮಾತಿನಿಂದ ಮುತ್ತಿನ ಛಾಯೆಯ ಹಲ್ಲುಗಳು ಕಾಣಿಸಿದವು.
ನಂಜಪ್ಪ ಮಾರನೆಯ ದಿನ ತನ್ನ ಸ್ನೇಹಿತ ದೊಡ್ಡಣ್ಣನ ಜೊತೆಗೆ ಮಾತನಾಡುತ್ತ ಕೇಳುತ್ತಾನೆ. “ಏನಯ್ಯ, ಜನ ಇಂಯ್ಹಾ ಜೋಕು ಮಾಡ್ತಾರಲ್ಲ! ನಾವಿಷ್ಟು ದುಡಿದೂ ನಮಗೆ ಎರಡು ಹೊತ್ತಿನ ಅನ್ನಕ್ಕೆ ಕಷ್ಟ! ಕೆಲವು ಜನಗಳ ಹೆಂಗಸರದೇನು ಠೀವಿ! ರೇಷ್ಮೆ ಸೀರೆ, ಬೆಳ್ಳಿ ಪಾತ್ರೆ ಇದೆಲ್ಲ ಆಶ್ಚರ್‍ಯ ಅಲ್ಲವೆ?”
“ಇವರ ಮಾವಂದಿರು ಕೊಡ್ತಾರೆ” ಎಂದು ದೊಡ್ಡಣ್ಣನ ಸಬೂಬು.
“ಮಾವಂದಿರಿಗೆ ಯಾರು ಕೊಡ್ತಾರೆ?”
“ಅವರ ಮಾವಂದಿರು.”
“ಅವರಿಗೆ?”
ನಂಜಪ್ಪನ ಪ್ರಶ್ನೆಗೆ ಬೇಸತ್ತು, “ನಿನ್ನ ತಲೆಕಾಯಿ! ಅವರನ್ನೇ ಕೇಳು,” ಎಂದ ದೊಡ್ಡಣ್ಣ.
* * *
ಆಫೀಸಿನಲ್ಲೆಲ್ಲ ಗುಲ್ಲು, ಗುಜುಗುಜು; ಯಾರೂ ಹೇಳರು, ಹೇಳದೆ ಇರರು, ಮಾತನಾಡರು, ಮಾತನಾಡದೆ ಇರರು. ಇದರಲ್ಲಿ ಯಾರ ಮೇಲೆ ಬರುವುದೊ? ಯಾರ ತಲೆ ಹೋಗುವುದೊ? ಮೇಲಿನಿಂದ ಏನೋ ಬಂದಿತಂತೆ. ಸಾಹೇಬರು ಯಾರನ್ನೂ ಕರೆಸಿ, ಏನೋ ಕೇಳಿದರಂತೆ. ಎಲ್ಲರಿಗೂ ಜಾಪಾಳ ಮಾತ್ರೆ ಕೊಟ್ಟಂತಾಗಿದೆ. ಮ್ಯಾನೇಜರ್ ಭೂಮಿಗಿಳಿದು ಹೋಗಿದ್ದಾನೆ. ಏನೇನೋ ಸುದ್ದಿ! ಏನೇನೋ ಮಾತು!
ಒಂದು ದಿನ ಕೋರ್‍ಟ್‌ನಿಂದ ವಾರೆಂಟ್ ಹುಟ್ಟಿ ಶಂಕರಯ್ಯನ ಅರೆಸ್ಟ್ ಆಯಿತು. ಕೋರ್ಟಿನಲ್ಲಿ ಕೇಸು ನಡೆಯಿತು. ಅನೇಕರು ಸಾಕ್ಷಿ ಹೇಳಿದರು. ಆಡಿಟರ್ ತಾನು ಪತ್ತೆ ಮಾಡಿದುದನ್ನು ವಿವರಿಸಿದ. ಸಾಹೇಬನನ್ನು ಕೊರ್ಟಿನಲ್ಲಿ ಪಾಟಿಸವಾಲ್ ಮಾಡಿ ಹರಿದು ಬಿಸಾಡಿಬಿಟ್ಟರು.
ಸರ್ಕಾರಕ್ಕೆ ಮೋಸ ಮಾಡಿ, ಚೆಕ್ಕು ಸೃಷ್ಟಿಸಿ ದುಡ್ಡು ಪಡೆದುದಕ್ಕಾಗಿ, ಶಂಕರಯ್ಯನಿಗೆ ಹದಿನೆಂಟು ತಿಂಗಳು ಕಠಿಣ ಶಿಕ್ಷೆ, ಸಾಹೇಬನಿಗೆ ತನ್ನ ಅಜಾಗರೂಕತೆಗೆ ಡಿಗ್ರೇಡ್ ಆಯಿತು. ಮ್ಯಾನೇಜರ್ ಸರ್ವಿಸ್ ಇದ್ದರೂ ಮನೆಗೆ ಹೋದ. ಶಂಕರಯ್ಯನ ಮನೆ ಜಾಫ್ತಾಗಿ ಇದ್ದುದೆಲ್ಲ ಬರಬೇಕಾದ ಮೊಬಲಗಿಗೆ ಸಂದಾಯವಾಯಿತು.
ಎರಡು ಮೂರು ತಿಂಗಳಲ್ಲಿ ಇದೆಲ್ಲ ನಡೆದು ಹೋಯಿತು. “ಶಂಕರಯ್ಯ ಅಂಥನಿಷ್ಠ, ದೈವಭಕ್ತ, ಅವನು ಈ ಕೆಲಸ ಮಾಡಿಯಾನೆ?” ಎಂದರು ಕೆಲವರು …. “ದೇವರ ಪೂಜೆಗೂ ಗಂಟು ಹಾಕುವುದಕ್ಕೂ ಏನು ಸಂಬಂಧ !” ಎಂದು ದೊಡ್ಡಣ್ಣ. ನಂಜಪ್ಪ ಮಾತ್ರ, “ಬಲು ತಾಪತ್ರಯಪಟ್ಟು ಕೊಂಡಿದ್ದ – ಪಾಪಿ!” ಎಂದ. ಹಾಗೆನ್ನುವಾಗ ಅವನ ಹೆಂಡತಿ, ಅವಳ ಸೊಬಗು ಎಲ್ಲ ನೆನಪಾಯಿತು ಇವನಿಗೆ. ಆದರೆ, ಈ ಮೂರ್ಖ ಇಂಥ ಕೆಲಸ ಏಕೆ ಮಾಡಿದ ?” ಎಂದು ಆಶ್ಚರ್‍ಯ.
ಅವನ ಮಕ್ಕಳು ಆಗಾಗ್ಗೆ ಆಫೀಸಿಗೆ ಬರುವುವು. ಇನ್ಶೂರೆನ್ಸ್ ಹಣ ಇತ್ಯಾದಿ ಬಾಕಿ ಬರಬಹುದೇನೋ ಎಂದು ಕೇಳುವುವು. ಆದರೆ ಅದು ಸರ್ಕಾರಕ್ಕೆ ಸೇರಿಹೋಗಿತ್ತು. ಶಂಕರಯ್ಯನ ಮೇಲಿನ ಮರುಕದಿಂದ ಆಫೀಸಿನವರು ಆ ಹುಡುಗರಿಗೆ ಕಾಸು ಕೊಟ್ಟು ಕಳಿಸುವರು. ಅವನ ಹೆಂಡತಿ ಜೀವನ ಹೇಗೆ ಸಾಗಿಸುತ್ತಾಳೆ? ಈ ಸವತಿ ಮಕ್ಕಳನ್ನು ಹೇಗೆ ಪೋಷಿಸುತ್ತಾಳೆ? ಎಂಬುದೇ ಸಮಸ್ಯೆ. ಅವುಗಳ ಪೋಷಣೆ, ಅವರ ಇರವನ್ನು ನೋಡಿದರೆ ತಿಳಿಯುತ್ತಿತ್ತು. ಆದರೆ ಅವಳ ಪೋಷಣೆಯಾದರೂ ಹೇಗೆ ? ಯಾರ ಯೋಚನೆಯನ್ನು ಯಾರು ಹಚ್ಚಿಕೊಂಡು ತಲೆ ಕೆಡಿಸಿಕೊಳ್ಳುತ್ತಾರೆ ?
ಹುಡುಗರ ಕೈಯಲ್ಲಿ ಒಂದು ಬಾರಿ ಆಕೆ ನಂಜಪ್ಪನಿಗೆ ಹೇಳಿ ಕಳಿಸಿದ್ದಳು. ಇವನು, ‘ಇದೆಲ್ಲಿಯ ಪಜೀತಿ!’ ಎಂದು ಹೋಗಲೇ ಇಲ್ಲ.
ಶಂಕರಯ್ಯ ಜೈಲಿನಲ್ಲಿ ತಾನೆ ಅಡಿಗೆ ಮಾಡಿಕೊಳ್ಳುತ್ತಿದ್ದಾನಂತೆ. ಇವನ ಹೆಂಡತಿ ಆಗಾಗ್ಗೆ ಬಂದು, ತಿಂಡಿ ಮುಂತಾದ್ದನ್ನು ತಂದುಕೊಟ್ಟು, ಕಣ್ಣೀರು ಕರೆದು ಹೋಗುತ್ತಿದ್ದಳು. ನೋಡಿದವರೆಲ್ಲ-ಎಂಥ ಗರತಿ! ಗಂಡನ ಮೇಲೆ ಎಷ್ಟು ಶ್ರದ್ದೆ ! ಎಂದು ಪ್ರಶಂಸಿಸುತ್ತಾರೆ. ಆಕೆಯನ್ನು ಅವಳ ತಂದೆ ಕರೆದರೂ, ಅವಳು ತೌರೂರಿಗೆ ಹೋಗಲು ನಿರಾಕರಿಸಿ, ‘ಗಂಡ ಜೈಲಿನಲ್ಲಿ ಕಲ್ಲು ಒಡೆದು, ರಾಗಿ ಬೀಸುವಾಗ, ನಾನು ತೌರುಮನೆಯ ಅನ್ನ ತಿನ್ನುವುದೇ?’ ಎಂದಳಂತೆ. ಇದನ್ನು ಕೇಳಿದ ಜನ, ಎಂಥ ನಿಷ್ಠೆ ! ಎಂತಹ ಪತಿ ಭಕ್ತಿ !’ ಎಂದು ಮೊದಲಾಗಿ ಸ್ತೋತ್ರ ಮಾಡಿದರು.
* * *
ನಂಜಪ್ಪ ಮತ್ತು ದೊಡ್ಡಣ್ಣ ಗೆಳೆಯರಷ್ಟೆ. ದೊಡ್ಡಣ್ಣ ಕಂಟ್ರಾಕ್ಟ್ ಮಾಡಿ ಅನುಕೂಲವಾಗಿದಾನೆ. ನಂಜಪ್ಪ ಬರಿ ಸ್ಟೆನೋಗ್ರಾಫರ್ ಮಾತ್ರ ಆಗಿಬಿಟ್ಟ. ಆದ ಮಾತ್ರಕ್ಕೆ ಸ್ನೇಹ ಹೋಯಿತೆ ? ಆಗಾಗ್ಗೆ ಸ್ನೇಹಿತರಿಬ್ಬರೂ ಕೂಡಿ ವಿನೋದವಾಗಿ, ಕಾಲ ಕಳೆಯುವುದುಂಟು.
ನಂಜಪ್ಪ ಮತ್ತು ದೊಡ್ಡಣ್ಣ ಇಬ್ಬರೂ ಒಂದು ಸಂಜೆ ಹೊರಟಿದ್ದಾಗ, ದೊಡ್ಡಣ್ಣ, ಇವತ್ತೊಂದು ಹೊಸ ಜಾಗಕ್ಕೆ ನಿನ್ನ ಕರಕೊಂಡು ಹೋಗ್ತೇನೆ’ ಎಂದ.
ಆದರೆ ಈತ, ನಂಜಪ್ಪ ಅದನ್ನು ಗಮನಿಸದೆ ಯಾವುದೋ ಬಾಕಿ ವಸೂಲಗೊ, ಕ್ರಯಪತ್ರಕ್ಕೆ ಸಾಕ್ಷಿಹಾಕುವುದಕ್ಕೆ ಇನ್ಯಾತಕೊ ಎಂದುಕೊಂಡು ಹೊರಟ.
ಗೋಪುರಂ ಎಕ್ಸ್‌ಟೆನ್ಷನ್ನಿಂದ ಮಾಯಿನಹಳ್ಳಿಗೆ ತಿರುಗುವ ಚೌಕ. ಅಲ್ಲಿಂದ ಆಚೆ ಒಂದು ದೇವರ ಗುಡಿ. ಅದರ ಪಕ್ಕದಲ್ಲಿ ಹೊಂದಿಕೊಂಡು ಸಣ್ಣ ಮನೆ. ಆ ಮನೆಯಲ್ಲಿ ದೇವಸ್ಥಾನದಲ್ಲಿ ಪೂಜೆಮಾಡುವ ಹುಡುಗ, ಆತನ ಒಡಹುಟ್ಟಿದವರು ಮತ್ತು ತಾಯಿ ಇದ್ದಾರೆ ಎಂಬ ವರದಿ. ಒಳಗಡೆ ಕೋಣೆಗೆ ಬಟ್ಟೆಗಳನ್ನು ಇಳಿಯಬಿಟ್ಟು ಎರಡುಭಾಗ ಮಾಡಿದಂತಿದೆ.
ತೆರೆದ ಬಾಗಿಲು-ದೀಪ ಹಚ್ಚಿದೆ.
ಇವರು ಒಳಕ್ಕೆ ಹೋದರು.
ನಿರೀಕ್ಷಣೆಯಲ್ಲಿಯೇ ಇದ್ದಂತೆ ತೋರಿದ ಒಬ್ಬ ಹರೆಯದ ಹೆಂಗಸು ನಗುತ್ತ, ಕುಲುಕುತ್ತ ಬಂದು, “ಬನ್ನಿ, ಕೂಡಿ” ಎನ್ನುತ್ತ ಗೋಡೆಯ ಪಕ್ಕ ದಲ್ಲಿ ರಸ್ತೆಗೆ ಕೊಂಚ ಕಾಣುವಂತೆ ಹಾಕಿದ್ದ ಒಂದು ಹಳೆಯ ಸೋಫಾ ತೋರಿಸಲು, ಇವರಿಬ್ಬರೂ ಕುಳಿತರು.
ಆಕೆ ಕೊಂಚ ಬಾಗಿಲನ್ನು ಮರೆಮಾಡಿ ಬಂದಳು. “ಇವರ್‍ಯಾರು ನಿಮ್ಮ ಸ್ನೇಹಿತರು?”
“ನಮ್ಮ ಸ್ನೇಹಿತರೇ ಸರಿ. ನಿಮಗೂ ಪರಿಚಿತರಾಗಲಿ ಎಂತಲೆ ಕರೆದು ಕೊಂಡು ಬಂದೆ,” ಎಂದನು ದೊಡ್ಡಣ್ಣ.
ನಂಜಪ್ಪನಿಗೆ ಕೊಂಚ ಗುರುತು ಹತ್ತಿತು. ಆದರೆ ಸ್ಪುಟವಾಗಲಿಲ್ಲ. ಎಲ್ಲಿಯೋ ನೋಡಿದ್ದ, ಗುಲಾಬಿ ಬಣ್ಣದ ರೇಶಿಮೆ ಸೀರೆ ಉಟ್ಟಿದ್ದಾಳೆ. ಅತಿ ತೆಳುವಾದ ಮಲ್ಲಿನ ರವಿಕೆಯ ಒಳಗಡೆ ಎದೆಗೆ ಕಟ್ಟಿದ ಒಳಕುಪ್ಪಸ, ಬಿಳಿ ಮೈ ಯ ಕೊಂಚ ಕೊಂಚ ಭಾಗ ಕಾಣಿಸುತ್ತವೆ. ಹಾಗೆ ಕೊಂಚ ಕೊಂಚವಾಗಿಯೇ ಕಾಣಬೇಕೆಂದು ಅವುಗಳನ್ನು ಹೊಲಿಸಿ ಹಾಕಿಕೊಂಡ ಹಾಗಿದೆ. ಎರಡೆಳೆಯ ಚೈನುಸರ ಬರಿಯ ಕೊರಳಿನಿಂದ ಆ ಎದೆಯ ಮೇಲೆ ಇಳಿ ಬಿದ್ದಿದೆ. ಮುಖಕ್ಕೆ ಯಥಾಪ್ರಕಾರ ಅಲಂಕಾರ ಸಾಧನ. ಎಲ್ಲಿಯೋ ನೋಡಿದ ಮುಖ-ನಂಜಪ್ಪನಿಗೆ ನೆನಪಾಗಲೊಲ್ಲದು.
‘ಇವರು ನಮ್ಮ ಮನೆಗೆ ಹಿಂದೆ ಬಂದಿದ್ದರು; ಬಹಳ ದಿನವಾಯಿತು’ ಏನೋ ನೆನೆಸಿಕೊಂಡು ಉಸಿರು ಕರೆದು, “ಆಮೇಲೆ ಹೇಳಿ ಕಳಿಸಿದರೂ ಬರಲಿಲ್ಲ. ಈಗಲಾದರೂ ಬಂದರಲ್ಲ!” ಎಂದು ಮಾತು ಮುಕ್ತಾಯ ಮಾಡಿದಳು.
“ಈಗ ಬಂದಿರೋದಕ್ಕೂ, ಆಗ ಬಂದಿದ್ದಕ್ಕೂ ಒಂದೇಯೆ?” ಎಂದ ರಸಿಕ ದೊಡ್ಡಣ್ಣ.
“ಬಿಡಿ, ನೀವು ಯಾವಾಗಲೂ ಹೀಗೆ!” ಎಂದು ಇಬ್ಬರ ಮೇಲೂ ನೋಟವೊಂದನ್ನು ಎಸೆದು, “ತಾಂಬೂಲ ತರುತ್ತೇನೆ,” ಎಂದು ಬಳಕುತ್ತ, ಮೈ ಅಲುಗಿಸುತ್ತ, ಇವರ ಮನಸ್ಸನ್ನು ಅಲುಗಿಸಿ ಒಳಕ್ಕೆ ಹೋದಳು. ದೊಡ್ಡಣ್ಣ, “ಕೊಂಚ ಹೊತ್ತಿಗೆ ಬರುತ್ತೇನೆ,” ಎಂದು ಹೊರಕ್ಕೆ ಹೋದ. “ಏಕೆ ಹೊರಟೆ? ನಾನೂ ಬರುತ್ತೇನೆ” ಎಂದು ನಂಜಪ್ಪ ಹೇಳಿದರೂ ಆತ ಹೋಗಿಯೆ ಬಿಟ್ಟ.
ತಾಂಬೂಲವನ್ನು ಆಕೆ ತರುವ ತನಕ ನಂಜಪ್ಪ ಒಬ್ಬನೆ. ಆಕೆ ಒಳಗಿ ನಿಂದ ತಾಂಬೂಲದ ತಟ್ಟೆ ತೆಗೆದುಕೊಂಡು ಬಂದಳು. ಉಟ್ಟ ಸೀರೆ ಆಗಲೆ ಬದಲಾಯಿಸಿ ಒಂದು ತೆಳುವಾದ ಸೀರೆಯುಟ್ಟು, ಬರಿತೋಳು ಕಾಣಿಸುವ ಒಳಕುಪ್ಪಸ ಮಾತ್ರ ತೊಟ್ಟು, ಇಲ್ಲದ ಸಲಿಗೆ ಸ್ನೇಹ ತೋರಿಸುತ್ತ, ಅಕಾರಣವಾಗಿ ನಗುತ್ತ, ನಲಿದಾಡಿಕೊಂಡು ಬಂದಳು.
ನಂಜಪ್ಪ ಆಗಲೆ ನಿಂತಿದ್ದ. ನೋಡಿದಳು. ಅವಳಿಗೆ ತಿಳಿಯಲಿಲ್ಲ. “ಯಾಕೆ, ನಮ್ಮ ಮನೇಲಿ ನಿಮಗೆ ಸಂಕೋಚ ?”
ಈತ ಹೇಗೋ ನಕ್ಕ.
“ತಕ್ಕೊಳ್ಳಿ, ತಾಂಬೂಲ ಹಾಕಿಕೊಳ್ಳಿ.” ತಟ್ಟೆ ಇಡುವಾಗ ಮೊದಲೆ ಅಲ್ಲಿ ಮಡಿಸಿ ಇಟ್ಟಿದ್ದ ಕಾಗದ ನೋಡಿದಳು. ಈತ ಹೇಳಬೇಕೆಂದಿದ್ದ ಉತ್ತರವನ್ನು ಅವಳು ನಿರೀಕ್ಷಿಸದೆ, “ಇಷ್ಟು ದಿವಸದ ಮೇಲೆ ಬಂದ್ರಿ!” ಎಂದು ಕೇಳಿದಳು.
“ಶಂಕರಯ್ಯ ಚೆನ್ನಾಗಿದ್ದಾರೊ?” ನಿಮ್ಮ ‘ಯಜಮಾನರು’ ಎನ್ನಲಿಲ್ಲ.
“ಬಿಡಿ, ಆ ಮಾತೆಲ್ಲ ಯಾಕೆ ? ತಮಾಷೆಯಾಗಿ, ಸಂತೋಷದಿಂದ ಇರಬೇಕು ಅಂತ ಬಂದಾಗ?”
“ಶಂಕರಯ್ಯ ಇದ್ದಿದ್ದರೆ ಆತನೊಂದಿಗೆ ತಮಾಷೆಯಾಗಿ ಇರಬಹುದಾಗಿತ್ತು”
“ಸುಮ್ಮನೆ ಹಾಸ್ಯಮಾಡಿ ನನ್ನ ಗೋಳುಹೊಯ್ದು ಕೊಳ್ತಿರ,” ಎನ್ನುತ್ತಿರುವಾಗ ಸೆರಗು ತಾನೆ ಸರಿಯಿತು ಅವಳ ಮೈ ಚಳಕಕ್ಕೆ.
ಆದರೆ ನಂಜಪ್ಪ ಹಿಂದಕ್ಕೆ ಸರಿದ. ಆಕೆ ಇವನನ್ನೆ ನೋಡಿದಳು. ನೋಡಲಾರದೆ ನೋಡಿದಳು.
“ನಾನಿನ್ನು ಹೊರಡುತ್ತೇನೆ”
“ಆಗಲೇ ಹೊರಟುಬಿಟ್ಟರ?…. ಕಾಫಿ ಮಾಡುತ್ತಿದ್ದೆ….”
“ಬೇಡ; ಹೋಗಬೇಕು.”
“ಇನ್ನು ಯಾವಾಗ ಬರುತ್ತೀರಿ? ಅಭ್ಯಾಸ ಬಲದಿಂದ ಎಂದಿನಂತೆಯೆ ಇಂದೂ, ಇವನನ್ನೂ ಕೇಳಿದಳು. ನಂಜಪ್ಪ ಮಾತನಾಡದೆ ಹೊರಟ. ಇವನು ಹೊರಡುವಾಗ ಆಕೆಗೆ ಮೊದಲಿನ ಕಳೆ ಇರಲಿಲ್ಲ.
ದೊಡ್ಡಣ್ಣನ ಕಾರು ಹೊರಗಡೆ ಇದ್ದರೂ ಅವನಿಗೆ ಕಾಣಿಸಿಕೊಳ್ಳದೆ ಹೊರಟು ರಾತ್ರಿ ಮನೆ ಸೇರಿದಾಗ ನಂಜಪ್ಪನ ಹೆಂಡತಿ ಗಂಡನನ್ನು ಕೇಳಿದಳು- “ಔಷಧಿ ತಂದಿರಾ ?”
“ನನ್ನಲ್ಲಿ ದುಡ್ಡು ಇರಲಿಲ್ಲ”
“ಬೆಳಗ್ಗೆ ಹೋಗುವಾಗ ಇತ್ತಲ್ಲ?”
“ಇತ್ತು, ಏನೀಗ?”
ಬಟ್ಟೆ ಕಳಚಿ, ಹಾಸಿಗೆಯ ಮೇಲೆ ಮಲಗಿದ್ದ ಮೂರು ವರ್ಷದ ಮಗುವನ್ನು ಕಂಡು ಅದರ ಮೇಲೆ ಬಾಗಿ ಅದನ್ನಪ್ಪಿಕೊಂಡು ಮುತ್ತಿಕ್ಕಿದ.
ಆ ಮಗು ತಂದೆಯ ಬರವನ್ನೆ ಕಾದಿತ್ತು.
“ಅಪ್ಪಾ ! ಓಚದಿ ಎಲ್ಲಿ?”
“ಅದ್ಯಾರಿಗೊ ಬಹಳ ಕಷ್ಟವಾಗಿತ್ತು; ಅದಕ್ಕಾಗಿ ಅವರಿಗೆ ದುಡ್ಡು ಕೊಟ್ಟೆ. ನಾಳೆ ಖಂಡಿತ ತರುತ್ತೇನೆ.”
“ಕಷ್ಟ ಅಂದ್ರೆ ಏನಪ್ಪ?”
“ಕಷ್ಟ ಅಂದ್ರೆ……. ಕಷ್ಟ ಅಂದ್ರೆ…….ಬಹಳ ತೊಂದರೆ-ಅನಾನುಕೂಲ………. ಹಾಲು ಕುಡಿದೆಯಾ…….. ಸುಮ್ಮನೆ ಮಲಗಿಕೊ ಅಪ್ಪ ………..”
*****