ಬಣ್ಣದ ಗುಬ್ಬ್ಯಾರು ಮಳಿರಾಜಾ | ಅವರು |
ಮಣ್ಣಾಗಿ ಹೋದರು ಮಳಿರಾಜಾ ||
ಬಣ್ಣದ ಗುಬ್ಬ್ಯಾರು ಮಣ್ಣಾಗಿ ಹೋದರು
ಅನ್ಯದ ದಿನ ಬಂದು ಮಳಿರಾಜಾ ||೧||
ಒಕ್ಕಲಗೇರ್ಯಾಗ ಮಕಿರಾಜಾ | ಅವರು |
ಮಕ್ಕಳು ಮಾರ್ಯಾರ ಮಳಿರಾಜಾ ||
ಮಕ್ಕಳ ಮಾರೀಽ ರೊಕ್ಕಾ ಹಿಡಕೊಂಡು
ಭತ್ತಂಡಽ ತಿರಗ್ಯಾರ ಮಳಿರಾಜಾ ||೨||
ಸೊಲಗಿ ಹಿಟ್ಟಿನಾಗ ಮಳಿರಾಜಾ | ಅವರು |
ಸುಣ್ಣನ್ನು ಕೂಡಿಸ್ಯಾರ ಮಳಿರಾಜಾ ||
ಹಸ್ತು ಬಂದಕೇರಿ ಗಪಗಪ ತಿಂದು
ಒದ್ದಾಡಿ ಸತ್ತಾರ ಮಳಿರಾಜಾ ||೩||
ಗಿದ್ದನ ಆಕ್ಕ್ಯಾಗ ಮಳಿರಾಜಾ | ಅವರು |
ಅಪುವನ್ನು ಕೂಡ್ಯಾರ ಮಳಿರಾಜಾ ||
ಸಣ್ಣ ಕೂಸಿಗಿ ಮನ್ನಿಸಿ ಉಣಿಸ್ಯಾರ
ಕಣ್ಣನ್ನೆ ಮುಚ್ಚ್ಯಾವ ಮಳಿರಾಜಾ ||೪||
ಗಂಡುಳ್ಳ ಬಾಲ್ಯಾರು ಮಳಿರಾಜಾ | ಅವರು |
ಭಿಕ್ಷಾಕ ಹೊರಟಾರ ಮಳಿರಾಜಾ ||
ಗಂಡುಳ್ಳ ಬಾಲ್ಯಾರು ಭಿಕ್ಷಾಕ ಹೋದರು
ಅನ್ಯದ ದಿನ ಬಂದು ಮಳಿರಾಜಾ ||೫||
ಸ್ವಾತಿಽಯ ಮಳೆ ಬಂದು ಮಳಿರಾಜಾ | ಸುತ್ತ |
ದೇಶಾಕ ಆಗ್ಯಾದ ಮಳೆರಾಜಾ ||
ಹಳ್ಳ ಕೊಳ್ಳ ಹೆಣ ಹರಿದಾಡಿ ಹೋದವು
ಯಾವಾಗ ಬಂದೆಪ್ಪಾ ಮಳಿರಾಜಾ ||೬||
*****
ಬಿತ್ತಿಗೆಯ ಕಾಲದಲ್ಲಿ ಮಳೆಯು ಬರುವುದಕ್ಕೆ ಬಹೆಳ ತಡವಾಗಹತ್ತಿದರೆ ಒಕ್ಕಲಿಗರಲ್ಲಿ ಹಾಹಾಕಾರವೇ ಎದ್ದು ಹೋಗುತ್ತಿದೆ. ಪೂರ್ವಾ ಉತ್ತರಾ ಮಳೆಗಳು ಆಗಲೇಬೇಕು. ಅವು ತಪ್ಪಿದರೆ ರಂಬಾಟಕ್ಕೆ ಆರಂಭವೇ. ಹೀಗಿದ್ದು ಯಾವುದೊ ಒಂದು ವರುಷ ಸ್ವಾತಿಯ ಮಳೆಯ ವರೆಗೆ ಒಂದು ಹನಿ ಕೂಡ ಬೀಳೆಲಿಲ್ಲವಂತೆ. ಹೀಗೆ ಆದಾಗಲೆಲ್ಲ ಎಲ್ಲೆಲ್ಲಿಯೂ ಬರದ ಲಕ್ಷಣಗಳೇ ತೋರುತ್ತವೆ. ಇಂತಹೆ ಪ್ರಸಂಗದ ಒಂದು ಕರುಣಾಜನಕ ಚಿತ್ರವು ಈ ಹಾಡಿನಲ್ಲಿದೆ.
ಛಂದಸ್ಸು:- ತ್ರಿಪದಿಯ ಪೂರ್ವಾರ್ಧ.
ಶಬ್ದ ಪ್ರಯೋಗಗಳು:- ಗುಬ್ಬ್ಯಾರು=ಘೋಷಾ ಪದ್ದತಿಯ ಹೆಣ್ಣು ಮಕ್ಕಳು (ಗುಬ್ಬಿಯಂತೆ ಯಾವಾಗಲೂ ಮನೆಯಲ್ಲಿಯೆ ಇರುವವರು.) ಅನ್ಯಾದ=ಅನ್ಯಾಯದ. ಬಂದಕೇರಿ=ಬಂದುಬಿಟ್ಟು. ಉಣಿಸ್ಯಾರ=ಉಣಿಸಿದರು. ಮುಚ್ಚ್ಯಾವ=ಮುಚ್ಚಿದವು.