ಅವರು ಹೆತ್ತು ಹೆತ್ತು ನಲುಗಿದ ಹೆಣ್ಣುಗಳು
ದುಡಿದು ದುಡಿದು ಸವೆದು ಹೋದ ದೇಹಗಳು
ಸಹಿಸಿ ಸಹಿಸಿ ಸುಣ್ಣವಾದ ಅವರ ಮನಸುಗಳು
ಸುತ್ತಲೂ ಎತ್ತರೆತ್ತರದ ಪಹರೆ ಗೋಡೆಗಳು
ಉಸಿರುಗಟ್ಟಿಸುವ ನಿಯಮಗಳು
ನಡುವೆ ಸಮಾಧಿಯಾದ ಬದುಕು.
ಗೋಡೆಯಾಚೆ ತೂಗುತ್ತಿದೆ ನೋಡು
ನಿರಂತರ ತಲ್ಲಾಖಿನ ಕತ್ತಿ
ಅದು ಯಾವಾಗ ಬೇಕಾದರೂ
ಅವಳ ಕತ್ತು ಕೊಯ್ಯುತ್ತದೆ.
ಪ್ರಪಂಚದ ಓದು ಅವಳಿಗೇಕೆ?
ಖುರಾನ್ ಓದು ಸಾಕು.
ಧರ್‍ಮ ಉಸ್ತುವಾರಿಯ ನಡುವೆ
ನಲುಗಿದ ಅವಳ ಬಾಲ್ಯ,
ನಾಟಿ ಕೋಳಿಗೆ ದಕ್ಕುವ
ವಿವಿಧ ಕಾಳಿನ ವೈವಿಧ್ಯ
ಹೆಕ್ಕಿ ತಿನ್ನುವ ಅವಕಾಶ
ಫಾರಂ ಕೋಳಿಗೆ ಎಲ್ಲಿ?
ಹಾಕಿದ ಫೀಡ್ಸ್, ನಿಂತ ನೀರನ್ನೇ ಕುಡಿದು,
ಪಂಜರದಲ್ಲಿ ಬಂಧಿ ಅವಳಿಗೆ
ಹೇಗೆ ದಕ್ಕಿತು ಸ್ವಾತಂತ್ರ್ಯ
ಬೆಳ್ಳಗೆ ಫಾರಮ್ ಕೋಳಿಯಂತಹ
ಬಿಳಿ ಹೆಂಡತಿ ಅವನ ಹೆಮ್ಮೆಯ ಆಯ್ಕೆ ನಿಜ.
ಇವಳಲ್ಲ, ಇನ್ನೊಬ್ಬಳು ಇದ್ದೇ ಇದೆಯಲ್ಲ!
ನಾಲ್ಕರತನಕದ ಗಡುವು ನಿರಾಳ
ಫಾರಂ ಕೋಳಿಗೆ ಕತ್ತಲ
ಗವಿಯ ಇಕ್ಕಟ್ಟಿನ ಬದುಕು
ಸೂರ್‍ಯ ಕಿರಣ ತಾಕದೇ
ವಿದ್ಯುತ್ ಬಲ್ಬಿನ ಬೆಳಕು
ಯಾವ ವಸಂತದ ರುಚಿಯೂ ಕಾಣದಿರುವ
ಅದರ ಬದುಕು ನಿರ್‍ಬಂಧಿತ
ಸರಪಳಿಗಳು, ಸರಹದ್ದುಗಳ ಮಧ್ಯ
ಶುದ್ಧ ಗಾಳಿ, ಬೆಳಕು ನಿಶಿದ್ಧ ವಲಯದಲಿ
ಅರಳಲಾರದೇ, ಮುದುಡಿದ ಕೆಂಪು ತಾವರೆ
ಚೌಕಟ್ಟಿನಲಿ ಬಂಧಿತ
ಕಪ್ಪು ಬಿಳುಪಿನ ಭಾವಚಿತ್ರದಲ್ಲಿ
ಮೂಡಲಾರದು ವೈವಿಧ್ಯತೆಯ ಬಣ್ಣಗಳು,
ಆಯ್ಕೆಯಿಲ್ಲ, ಇಚ್ಛೆಯಿಲ್ಲ.
ಕತ್ತಲ ಗವಿಯಲ್ಲಿ ಬೇತಾಳ
ಕಿಟಕಿಯಾಚೆ ಪರದೆ ಸರಿಸಿ ಇಣುಕಿದರೆ,
ಶೂನ್ಯ ತುಂಬಿದ ಆಕಾಶದಲ್ಲಿ
ದುಃಖದ ಕಾರ್‍ಮೋಡ ಚೆಲ್ಲಾಡಿ
ಆದರೂ ರೆಕ್ಕೆ ಪುಕ್ಕ ಹಚ್ಚಿಕೊಂಡು ಆಕಾಶದಲ್ಲಿ
ಹೂರ್‌ಪರಿ’ಯಂತೆ ಹಾರುತ್ತೇನೆ.
ಬಂಧನದ ಸರಪಳಿ ಕಿತ್ತೆಸೆದು ಬೆಳ್ಳಕ್ಕಿ
ನಿರಾಂತಕ ಹಾರಾಡುತ್ತೇನೆ.
ನಾನು ಅನುಭವಿಸಿದ ಬಂಧನದ ನರಕಯಾತನೆ
ಕೆಲ ದಿನಗಳಾದರೂ ಅವನೂ ಅನುಭವಿಸಲಿ
ಆಗ ತಿಳಿಯುತ್ತದೆ ಅವನಿಗೆ
ಸ್ವಾತಂತ್ರ ಎಂದರೇನೆಂದು.
*****
(ಹೂರ್ ಪರಿ-ದೇವಕನ್ಯೆ)