ಬರೆದವರು: Thomas Hardy / Tess of the d’Urbervilles
ಇವೊತ್ತು ದಿವಾನಂಗೆ ನಾಯಕನ ಅರಮನೆಯಲ್ಲಿ ಔತಣ. ಒಳತೊಟ್ಟಿಯಲ್ಲಿ ಎಲೆಗಳನ್ನು ಹಾಕಿದೆ. ಊರಿನ ಪ್ರಮುಖರೆಲ್ಲ ಬಂದಿದ್ದಾರೆ. ದಿವಾನರಿಗೆ ಚಿನ್ನದ ಹರಿನಾಣ: ಆದರ ಸುತ್ತಲೂ ಅಂಗೈಯಗಲದ ಬೆಳ್ಳಿಯ ಆಲದೆಲೆಗಳು. ಆದರಸುತ್ತ ಹನ್ನೆರಡು ಬೆಳ್ಳಿಯ ಬಟ್ಟಲು. ಕುಳಿತುಕೊಳ್ಳುವುದಕ್ಕೆ ಮೃದುವಾದ ಕೃಷ್ಣಾಜಿನ ದಿಂದ ಮಾಡಿರುವ ಮೆತ್ತೆ: ಒರಗಿಕೊಳ್ಳುವುದಕ್ಕೂ ಅಂತಹುದೇ ಮೆತ್ತೆ. ದೂರದಲ್ಲಿರುವ ಪದಾರ್ಥಗಳನ್ನು ತೆಗೆದುಕೊಳ್ಳಲು ಒಂದು ಬೆಳ್ಳಿಯ ಸೌಟು. ನಾಯಕರಿಗೂ ಹಾಗೆಯೇ ಎಡೆ.
ಹನ್ನೆರಡೂವರೆಗೆ ಸರಿಯಾಗಿ ಊಟವು ಆರಂಭವಾಯಿತು. ಮಲ್ಲಣ್ಣ ಶಂಭುರಾಮಯ್ಯ ಇಬ್ಬರೂ ನಾಯಕನ ಎಡಗಡೆ ಕುಳಿತಿ ದ್ದರು. ರಜಾಕ್ ಸಾಹೇಬರು ಶಂಭುರಾಮಯ್ಯನನ್ನು ಗುರ್ತುಹಿಡಿದು, ಇವನೇ ಎಂದಮೇಲೆ, ನಾಯಕನಿಗೆ ಅವರ ವಿಚಾರದಲ್ಲಿ ಗೌರವ ಅಗೌ ರವಗಳೆರಡೂ ತಲೆದೋರಿದ್ದುವು. ಆದರೆ ಮೊದಲನೆಯದಕ್ಕೆ ಪ್ರಾಧಾನ್ಯ ಕೊಟ್ಟು ಎರಡನೆಯದನ್ನು ತುಳಿಯುವುದು ಆತನ ಸ್ವಭಾವ,
ಆ ಊರಿನವರು ನಾಯಕನ ಎದುರಿಗೇ ಮಾತನಾಡುವವರಲ್ಲ : ಇನ್ನು ದಿವಾನರು ಬಂದಿರುವಾಗ ಕೇಳಬೇಕೆ ? ಇನ್ನು ಮಾತನಾಡುವವರು ಯಾರು? ಸಹಜವಾಗಿ ಶುಂಭುರಾಮಯ್ಯನೇ ಮಾತನಾಡ ಬೇಕಾಗಿಬಂತು : ಆಮಾತು ಈಮಾತು ಆಡುತ್ತ ವಿವೇಕಾನಂದರು ಆನ್ನಿಬೆಸೆಂಟರು, ತಿಲಕರು, ಗೋಖಲೆ ಮೊದಲಾದವರ ಮಾತು ಬಂತು.
“ನೀವು ವಿವೇಕಾನಂದರ ಮಾತು ಹೇಳುತ್ತೀರಿ, ಅವರು ಅಮೇರಿಕಕ್ಕೆ ಹೋಗದೆ ಇದ್ದರೆ ಅವರಮಾತು ಕೇಳುವವರು ಯಾರು ಇರುತ್ತಿದ್ದರು? ಆನ್ನಿಬೆಸೆಂಟರು ಯೂರೋಪಿಯನ್ರು ಎಂದು ನಮ್ಮವರು ಅವರ ಮಾತಿಗೆ ಅಷ್ಟು ಗೌರವ ಕೊಡುವುದು: ತಿಲಕರು ಮಹಾ ವಿದ್ವಾಂಸರು. ದೇಶದೇಶದಲ್ಲೆಲ್ಲಾ ಪ್ರಸಿದ್ಧರಾದವರು. ಎಲ್ಲಾ ಸರಿ. ಆದರೂ ಮುಷ್ಟಿಕಟ್ಟಿ ಮೇಲೆಬೀಳುವುದಕ್ಕೆ ಸಿದ್ಧರಾದವರು. ಗೋಖಲೆಯವರು ಅವರ ಪರಮಮಿತ್ರರಾಗಿದ್ದವರು. ಅವರೇ ತಿಲಕರ ಮಾತಿಗೆ ಒಪ್ಪದೆ ಸರ್ವೆಂಟ್ಸ್ ಆಫ್ ಇಂಡಿಯ ಸೊಸೈಟಿ ಮಾಡಿಕೊಂಡು ಮುಂದಿ ಬರುವ ಯುದ್ಧಕ್ಕೆ ಸಿಸಾಯಿಗಳನ್ನು ಸಿದ್ಧಮಾಡುತ್ತಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ನಾಲ್ಕು ಜನರಿದ್ದ ಕಡೆ ಹತ್ತು ಅಭಿ ಪ್ರಾಯ. ಯಾರಿಗೂ ಇದೇ ಸರಿ ಎನ್ನುವ ಖಚಿತವಾದ ಅಭಿಪ್ರಾಯ ವಿಲ್ಲ. ಬ್ರಿಟಿಷರನ್ನು ನೂಕಿಬಿಡೋಣ. ಅವರ ಬದಲು ಜರ್ಮನಿ ಬಂದರೆ ? ಅವರನ್ನು ತಡೆದೇವೆ? ನಮ್ಮ ಕೈಲಾಗುವುದೇ ? ಅಲ್ಲದೆ, ಯೂರೋಪಿನ ರಾಷ್ಟ್ರಗಳಲ್ಲೆಲ್ಲಾ ಬುದ್ಧಿವಂತರೂ ಧರ್ಮಿಷ್ಟರೂ ಇವರೇ! ಇನ್ನು ಯಾರು ಇಂಡಿಯ ಹಿಡಿದುಕೊಂಡರೂ ಇಂಡಿಯ ಇದಕ್ಕಿಂತಲೂ, ಕಡೆಯಾಗುತ್ತಿತ್ತು. ಅಲ್ಲದೆ, ಇಂಡಿಯದಲ್ಲಿ ಆಯುಧ ಗಳಿಲ್ಲ: ಇರುವ ಆಯುಧಗಳನ್ನೂ ಉಪಯೋಗಿಸಬಲ್ಲವರಿಲ್ಲ : ಅದ ರಿಂದ ಇಂಡಿಯ ಬಂಧಮುಕ್ತವಾಗುವುದು ಸಧ್ಯದಲ್ಲಿ ಸಾಧ್ಯವಿಲ್ಲ. ಇನ್ನು ಏನೋ ಒಂದು ಹೊಸ ಉಪಾಯ, ಹೊಸ ಸನ್ನಿವೇಶ, ಬಂದರೆ ಏನಾಗುವುದೋ ಅದು ಹೇಳಲಾಗುವುದಿಲ್ಲ.
“ಈಗ ಏನೋ ಯೂರೋಪಿನಲ್ಲಿ ಯುದ್ದವಾಗುವ ಸೂಚನೆ ಗಳಿವೆ; ಜರ್ಮನಿಗೆ ರಾಷ್ಟ್ರದಾಹ ಹೆಚ್ಚಿದೆ : ಬ್ರಿಟನ್ನಿನ ಮೇಲೆ ಅಸೂಯೆ ಹೆಚ್ಚಿದೆ. ಹಾಗೆ ಯುದ್ಧ ಬಂದರೆ, ಆಗ ಬ್ರಿಟನ್ ತಪ್ಪದೆ ಸಾಮ್ರಾಜ್ಯದ ಸೇನೆಯನ್ನು ಉಪಯೋಗಿಸುವುದು. ಆಗ ಇಷ್ಟವಿರಲಿ, ಇಲ್ಲದಿರಲಿ ಇಂಡಿಯದ ಸೇನೆಯನ್ನು ಉಪಯೋಗಿಸಬೇಕು ಆಗ ಈ ಮಜಲ್ ಲೋಡರ್ಸ್ ಕೊಟ್ಟು ಯುದ್ಧಕ್ಕೆ ಕಳುಹಿಸುವುದು ಆಗದ ಮಾತು. ಅಂಥಾ ಸಂದರ್ಭ ಬಂದರೆ ಇಂಡಿಯನ್ ಸೈನ್ಯದಲ್ಲಿ ಹೆಚ್ಚು ಅಧಿಕಾರಗಳೂ ಇಂಡಿಯನ್ರಿಗೆ ಸಿಕ್ಕಬಹುದು: ಸೈನಿಕರಿಗೆ ಆಯುಧಗಳನ್ನು ಉಪಯೋಗಿಸುವುದನ್ನು ಕಲಿಸಬಹುದು. ಆದರೆ ಅದೆಲ್ಲಾ ವಿಶೇಷ ಸಂದರ್ಭ. ಅಲ್ಲದೆ ನೂರಕ್ಕೆ ಸುಮಾರು ೪-೫ ಮಾತ್ರ ಓದು ಬಲ್ಲವರು. ಇವರಲ್ಲಿ ಐಕಮತ್ಯ ಬಂದು, ಇವರು ಸೇರಿ, ನೋಡಿಕೊಳ್ಳೋಣ.”
ಊಟಕ್ಕೆ ಒಂದು ಗಂಟೆ ಎಂದು ನಿಗದಿಯಾಗಿತ್ತು. ಆಗಂಟೆ ಹೊಡೆಯುತ್ತಲೂ ದಿವಾನರು ಎದ್ದು ಬಿಟ್ಟರು. ಅವರು ಏಳುವ ವೇಳೆಗೆ ಅಲ್ಲಿಯೇ ಸುಖೋಷ್ಣವಾದ ನೀರು ಸಿದ್ಧವಾಗಿತ್ತು.
ದಿವಾನರು ಸಂತೋಷದಿಂದ “ಏನು ನಾಯಕರೆ, ಅರಮನೆ ಅನ್ನೋ ಹೆಸರಿಗೆ ತಕ್ಕಂತೆ ಖಾಸ್ ಆರೋಗಣೆ ಮಾಡಿಸಿಬಿಟ್ಟಿರಿ ?”
” ಎಲ್ಲಾ ಹಿರೀಕರ ಪುಣ್ಯ ಬುದ್ಧಿ ”
” ನೀವು ಹೇಳಿದ್ದು ಬಹಳಸರಿ. ಇಂಡಿಯ ಬದುಕಿರೋದು ಹಿಂದಿನ ಹಿರೀಕರ ಪುಣ್ಯದಿಂದ. ಅದನ್ನು ಉಳಿಸಿ ರೂಢಿಸಿಕೊಳ್ಳಲು ನಾವು ಪ್ರಯತ್ನಪಡಬೇಕು. ಅಲ್ಲವೇ?”
“ಸತ್ಯ ಬುದ್ಧಿ, ತಾವು ಹೇಳೋದು ಬಹಳ ಸರಿ.”
ದಿವಾನರು ವಿಶ್ರಾಂತಿಗೆ ತೆರಳಿದರು. ಬಂದಿದ್ದವರೆಲ್ಲರೂ ತಾಂಬೂಲಗಳನ್ನು ತೆಗೆದುಕೊಂಡು ಹೊರಟರು, ದಿವಾನರ ಸೆಕ್ರೆಟರಿ ಗಳು ಬಂದು, ” ಮೂರೂವರೆಗೆ ಪ್ರೋಗ್ರಾಂ, ನೆನಪಿರಲಿ. ಈಗ ಒಂದೂವರೆ ” ಎಂದರು. ನಾಯಕನು ‘ಸರಿ’ ಎಂದನು.
ನಾಯಕನು ಅಡಕೆಲೆ ಹಾಕಿಕೊಂಡು ಒಚ್ಚ ಮಗ್ಗುಲಾಗಿ ಕಣ್ಮುಚ್ಚುವುದಕೊಳಗಾಗಿ ಮೂರುಗಂಟೆ ಹೊಡೆಯಿತು. ಎದ್ದು ಕೈಕಾಲು ತೊಳೆದುಕೊಂಡು ದಿರಸು ಹಾಕಿಕೊಂಡು ಬರುವ ವೇಳೆಗೆ ಮೂರೂ ಇಪ್ಪತ್ತೈದು. ಆ ವೇಳೆಗಾಗಲೇ ದಿವಾನರ ಕೋಣೆಯಲ್ಲಿ ಸದ್ದಾಗುತ್ತಿದೆ. ಅವರು ಸಿದ್ಧವಾಗಿದ್ದಾರೆ.
ಮೊದಲೇ ಗೊತ್ತಿದ್ದ೦ತೆ. ಹರಿಜನರ ಪಾಳ್ಯಕ್ಕೆ ಹೋದರು. ದಿವಾನರು ಹೋಗುವಾಗ ದಾರಿಯಲ್ಲಿಯೇ ಕೇಳಿದರು: ನಾಯಕರೇ, ತಾವು ಇವರಿಗೆ ಏನೇನು ಮಾಡಿದ್ದೀರಿ?”
“ಇತರರು ಐದುರೂಪಾಯಿ ಸಂಬಳ ಕೊಡುವ ಕಡೆ, ನಾನು ಎಂಟುರೂಪಾಯಿ ಕೊಡುತ್ತೇನೆ. ಅವರಿಗೆಲ್ಲ ಮನೆಗಳು ಕೊಟ್ಟಿದ್ದೇವೆ. ಹಬ್ಬ ಹುಣ್ಣಿಮೆ ಅಂದರೆ “ಅದಕ್ಕಾಗಿ ಬೇರೆ ತಸ್ತೀಕು ಕೊಡುತ್ತೇವೆ. ಅವರಿಗೆ ಮಾನ್ಯಗಳು ಇವೆ.”
“ಆಯಿತು ಅವರಿಗೆ ವಿದ್ಯೆ ಕಲಿಸುವ ಏರ್ಪಾಡು ಮಾಡಿದ್ದೀರಾ ?”
“ಅದೇನೂ ಬೇಕಿದ್ದಂತೆ ತೋರಲಿಲ್ಲ ಬುದ್ಧಿ. ಅವರೂ ಕೇಳ ಲಿಲ್ಲ. ನಮಗೂ ಹೊಳೀಲಿಲ್ಲ.
” ಅವರಿಗೆ ಏನಾದರೂ ವಿದ್ಯೆಗೆ ಒಂದು ದಾರೀಮಾಡಿ.”
“ನೋಡೋಣ, ಬುದ್ದಿ. ಉತ್ತಮರು, ಅವರು ಬಂದರೆ ಸ್ಕೂಲಿಗೆ ಬರುವುದಲ್ಲ. ಇನ್ನು ಅವರಿಗೇ ಬೇರೇ ಸ್ಟೂಲು ಮಾಡ ಬೇಕು.”
“ಅವರಿಗೆ ಕುಡಿಯೋ ನೀರಿನ ಬಾವಿ ಇದೆಯೋ ?”
“ಒಂದು ಕೊಟ್ಟಿದೆ ಬುದ್ಧಿ .?
ಪಾಳೆಯ ಬಂತು: ದಿವಾನರು ಕುದುರೆಯ ಮೇಲೇ ಎಲ್ಲವನ್ನೂ ಸುತ್ತಿಕೊಂಡು ಬಂದರು. ಅಲ್ಲಿ ಮತ್ತೆ ಪ್ರಶ್ನೆಗಳ ಸುರಿಮಳೆ.
“ಏನಯ್ಯಾ, ನಿಮಗೇನೇನಾಗಬೇಕಯ್ಯ? ”
” ಅಂಗಂದ್ರೆ ಏನನ್ನೋವಾ ಪಾದ. ಈ ತನಕ ಏನೋ ಖಾವಂದ ರು ನಮ್ನ ಕಾಪಾಡಿಕೊಂಡು ಬಂದವ್ರೆ.”
“ನಿಮಗೆ ಓದುಗೀದು ಬೇಡವೇನಯ್ಯ ?”
” ನಮಗ್ಯಾಕಾ ಬುದ್ದಿ. ನಾವೇನು ಸರಕಾರದ ಚಾಕರಿಮಾಡ ಬೇಕಾ? ಈಗಿರೋಅಂಗೆ ನಾವು ಸುಖವಾಗಿದ್ದಕೆ ಸಾಕು.”
“ಮೈಸೂರಿನಲ್ಲಿ ವೀಳ್ಯದೆಲೆ ತೋಟದವರು ಇರೋ ಹಾಗೆ ನೀವು ಶುಚಿಯಾಗಿರಬಾರದೇನಯ್ಯ ? ಅವರ ಹಾಗೆ ನೀವೂ ಮಹಡೀ ಮನೆ ಕಟ್ಟಿಕೊಂಡು ಚೆನ್ನಾಗಿ ಬಟ್ಟೆಬರೆ ಹಾಕ್ಕೊಂಡು ಇರಬಾರ ದೇನಯ್ಯ ?”
“ಬುದ್ದಿ, ಅವರು ಷಹರಿನೋರು. ಪುಣ್ಯಮಾಡವ್ರೆ. ನಿಜ ವಾಗಿ ನುಡಿಬೇಕೂಂದ್ರೆ, ಬುದ್ದಿ, ಸುತ್ತಮುತ್ತಲೂ ಇರೋರಲ್ಲಿ ನಾವೇ ಪುಣ್ಯವಂತಕುಳ ಬುದ್ದಿ. ಮಿಕ್ಕೂರುಗಳಲ್ಲಿ ಕುಡಿಯೋಕೆ ನೀರಿಲ್ಲ: ಇರೋಕೆ ಮನೇ ಇಲ್ಲ. ತಿನ್ನೋಕೇನೋ ಬಿಡಿ, ನಿಮ್ಮಪಾದ, ಗೌಡ ಗಳ ಮನೇಲಿರೋರು ಒದ್ದಾಡೋಕಿಲ್ಲ. ತಮ್ಮ ಪಾಡಿಗೆ ತಾವು ಇರೋರಿಗೆ ಮಾತ್ರ, ಬುದ್ದಿ, ಸುಖಇಲ್ಲ.”
” ಏಕೆ ? ”
“ಇರೋ ಭೂಮಿಯೆಲ್ಲ ಗೌಡಗಳ ಕೈಲದೆ ಬುದ್ಧಿ. ನಿಮ ಗಿಂತ ನಾವೇನು ಕಮ್ಮಿ ಅಂತ ಸೆಟತುಕೊಂಡರೆ, ಅವರೇನಾದರೂ ಇವರ ಮನೆ ಬಾಗಿಲಿಗೆ ಬಂದು ಬಾಪ್ಪ ಅನ್ನಬೇಕಾ ?”
” ಹಾಗಾದರೆ ಭೂಮಿ ಕೊಟ್ಟರೆ ಸಾಕೋ ??
“ನಿಮ್ಮ ಪಾದ ಭೂಮಿಕೊಟ್ಟರೆ ಸಾಕಾ ಬುದ್ದಿ. ಉಳಾಕೆ ಎತ್ತು ನೇಗಿಲು ಬೇಡವಾ? ಇರಾಕೆ ಮನೆ ಬಾಗಿಲು ಬೇಡವಾ? ಬಿತ್ತಿದ ಕಾಳಿನ ಬೆಳೆ ಬರೋತಂಕಾ ಹೊಟ್ಟೆಗೆ ಬೇಡವಾ? ಇದೆಲ್ಲ ಕೇಳಿದರೆ, ಈ ಹೊಲೆಸೂಳೇಮಕ್ಕಳು ಉಡಿದಾರ ಲಂಗೋಟಿ ಮೊದಲು ಎಲ್ಲಾ ಕೇಳ್ತಾರಲ್ಲ ಅಂತ ತಾವು ನೊಂದರೆ ನಾವು ಬದು ಕೇವಾ ಬುದ್ದಿ?”
“ಆಯಿತಯ್ಯ, ನೀವು ಕುಡಿಯೋದು ಬಿಡತೀರೇನಯ್ಯ ?”
“ಬುದ್ದಿ, ತಾವು ಉತ್ತಮರು, ನೀವು ನಿಮ್ಮ ಜೋಡಿನಂಗೆ ಏಳು ಅಂದ್ರೆ ನಿಜವಾಗಿ ಏಳಿಬುಡ್ತೀನಿ ಬುದ್ದಿ.”
“ಹೇಳು ಧೈರ್ಯವಾಗಿ ಹೇಳು.”
“ನೋಡಿ ಬುದ್ದಿ, ಹಗಲೆಲ್ಲ ಈ ದೊಡ್ಡ ದೊಡ್ಡೋರ್ನೆಲ್ಲ ನೋಡಿ, ಇವರ ಪುಣ್ಯ ನಮಗಿಲ್ಲವಲ್ಲಾ ಅಂತ ಮರುಗಿರ್ತದೆ, ಬುದ್ದಿ, ಮನಸು. ಸಂಜೆ ಆಗುತ್ತಲೂ ಕುಡಿದುಬಿಟ್ಟರೆ, ಮೈಮೇಲೆ ಗ್ಯಾನ ತಪ್ಪೋ ಯ್ತದೆ! ಏನೋ ಒಳ್ಳೇದೊ ಕೆಟ್ಟೋ ಕೂಗಿಕೊಳ್ತಾ ಅಷ್ಟೊತ್ತು ಒದ್ದಾಡುತ್ತಿದ್ದು ಬಿದ್ಕೊಂತೀವಿ, ಇದು ತಪ್ಪಿಸುಬುಟ್ರೇ ಈ ಚಿಂತಿ ಗರಿಗೂ ನಮಗೂ ಏನಾ ಎತ್ಯಾಸ ಬುದ್ದಿ.”
“ಚಿಂತಿಗರು ಅಂದರೆ ಯಾರಯ್ಯ?”
“ಏನೋ ಬಾಯಲ್ಲಿ ಬಂದುಬುಡುತು. ತಪ್ಪಾಯಿತು ಆಮಾತು ಬುಡಬೇಕು ಪಾದ.”
“ಇರಲಿ, ಹೇಳು, ಚಿಂತೆಯಿಲ್ಲ.”
“ಅಂಗಾದಕ್ಕೆ ಏಳ್ಳೀನಿ ಪಾದ, ಕಾಪಾಡಬೇಕು. ಚಿಂತಿಗರು ಅಂದರೆ ಉತ್ತಮರು, ಬುದ್ದಿ, ಬಾಯಲ್ಲಿ ಏದಾಂತ ಏಳ್ತಾರೆ. ದೇವರು ಅಂತಾರೆ, ದೇವರಪೂಜೆ ಅಂತಾರೆ. ಸಂಜೆ ಆದರೆ ಬಾಗಿಲು ಜಡಾಯಿಸಿ ಅಗಣಿ ಆಕ್ತಾರೆ ನಿಮ್ಮಪಾದ. ಅದ್ಯಾಕಾ ಅಂದಕ್ಕೆ ಅವರಿಗೆ ದಿಗಿಲು ಏನು ಬತ್ತದೋ ಏನು ಮಾಡ್ತದೋ, ಯಾರು ಬಂದಾರೋ, ಏನು ಒತ್ಕೊಂಡು ಓದಾರೋ ಅಂತ. ನಾವು ಪೂಜೇನೂ ಕಾಣೋ ಏನೂ ಕಾಣೋ, ಸಂಜೆಯಾದರೆ, ಶಿವಾಅಂದ, ಶಿವಕೊಟ್ಟುದ್ದು ಉಂಡಾ, ಉರುಳಿದ ಅಂದರೆ ಚಿಂತೆ ಅನ್ನೋದೇ ಇಲ್ದೆ ಬೆಳಗಾಗೋತಂಕ ತೊಲೆ ತುಂಡೇ? ಅದಕೇ ನಾನು ಉತ್ತಮರ ಚಿಂತಿಗರು ಅನ್ನೋದು ಬುದ್ಧಿ ”
“ಕುಡಿತ ತಪ್ಪಿಸಿದರೆ ನಿಮಗೊಳ್ಳೆಯದಲ್ಲವೇನಯ್ಯಾ ?”
“ಕುಡಿಯೋಕೆ ಎಂಡ ಸಿಕ್ಕದಿದ್ದರೆ ಕುಡಿಯೋ ಬುದ್ದಿ ಹೋದೀತಾ ಬುದ್ಧಿ. ಕುಡಿಯೋಕೆ ನೀವು ಕೊಡೋಕಿಲ್ಲ ಅಂದರೆ ನಿಮಗೆ ಬರೋ ದುಡ್ಡು ಓಯ್ತು. ಕುಡಿಯೋನು ಬುಡೋಕಿಲ್ಲ ಬುದ್ದಿ. ಅಲ್ಲದೆ ನೋಡಿ, ನಿಮ್ಮ ಪಾದ, ನಮ್ಮ ಗುರುಗೋಳು ಬಂದಿದ್ದರು. ಅವರು ‘ಎಲಾ! ನಮ್ಮಪಾದ ಮುಟ್ಟಿ ಆಣೆಮಾಡಿ. ನೀವೆಲ್ಲ ಉತ್ತಮ ರಾಗೋಕಾಲ ಬಂದಿದೆ. ಕುಡಿಯೋದು, ಮಡ್ಡಿ ಮಾಂಸ ತಿನ್ನೋದು ಬಿಡಬೇಕು’ ಅಂದರು. ನಾವು ಅವರ ಮಾತು ಅಂತ ಬುಟ್ಟುಬುಟ್ಟೊ. ಒಂದು ತಿಂಗಳ ತನಕ ಈ ಪಾಳೆಯದಲ್ಲಿ ಯಾರೂ ಕಡೀಲಿಲ್ಲ; ಕುಡೀ ಲಿಲ್ಲ. ಏನಾಯ್ತು ಗೊತ್ತಾ ಬುದ್ಧಿ, ಎಂಗುಸರು ನೀರು ಎಳೀನಾರ್ರು ! ಗಂಡುಸು ಗುದ್ದಲಿ ಹೊಡೆದರೆ ಹಿಡೀಮಣ್ಣು. ಆಗ ಓಗಿ ಗುರುಗಳ ಪಾದ ಮುಟ್ಟಿ, ಶಿವಪಾದಪ್ಪ, ನಮ್ಮಗತಿ ಇಂಗಾಗಡೆ ಅಂತ ಅತ್ತು ಕೊಂಡೋ. ಆಗ ಅವರು, ಅದೇ ಕಸುಬು ಮಾಡಕೋಬೇಡಿ. ಕಂಡಂಗೆ ಕಾಣದಂಗೆ ಮಾಡಿಕೊಳ್ಳಿ ಅಂದರು.”
” ಈಗ ”
ಈಗ ಶನಿವಾರ, ಸೋಮಾರ, ಗುರುವಾರ, ಆ ತಂಟೆ ಇಲ್ಲಾ ಬುದ್ದಿ ! ಮಿಕ್ಕದಿನ ಇದ್ದರೆ ಏನೋ ನಿಮ್ಮಪಾದ. ತಾವು ದೇಶಾನ್ನೆಲ್ಲ ಆಳೋರು. ಏನೋ ನಾ ಬೋ ಮಾತಾಡಬುಟ್ಟೆ. ಕಾಪಾಡಬೇಕು. ನಿಮ್ಮಪಾದ.”
“ಅಯಿತು ಕೊನೆಯದಾಗಿ ಇನ್ನೊಂದು ಮಾತು ಹೇಳಯ್ಯ. ನಿಮ್ಮಲ್ಲಿ ಯಾರನ್ನಾದರೂ ಓದಿಸಿ ಅವರಿಗೆ ಅಧಿಕಾರ ಕೊಟ್ರೆ ನಿಮಗೆ ಅನುಕೂಲವೇನಯ್ಯಾ ?”
“ನೋಡಿ ಬುದ್ದಿ ಕೆಟ್ಟದ್ದು ಬಂದರೆ ಕುಲಕೇ ಬರದೆ. ಒಳ್ಳೇದು ಬಂದರೆ, ಬಂದನ್ನಗೇ ಒರ್ತು ಇನ್ಯಾರಿಗೂ ಇಲ್ಲ ಬುದ್ದಿ. ಈಗ ಮೈಸೂರಲ್ಲಿ ಹೊಲಗೇರಿಯೋರು ಚೆನ್ನಾಗಿ ಬದುಕತವ್ರೆ. ಬಾಳತವ್ರೆ. ನಾವು ನೆಂಟರೂ ಅಂತ ಓದರೆ ಏನೋ ನೋಡ್ತಾರೆ. ಆದರೂ ಒಳಾಒಳಗೆ ಎಂಗದೆ ಬುದ್ದಿ. ಅವರೇನೋ ಉತ್ತಮರಂಗೇ ಆಡ್ತಾರೆ. ನಿಮ್ಮಪಾದ.”
“ಹಾಗಾದರೆ ಏನು ಮಾಡಬೇಕು ?”
” ಮಾಡೊದೇನು ನಿಮ್ಮ ಪಾದ, ತಲೆ ಕಡಿದು ಕಾಲುಮಾಡಿ, ಕಾಲುಕಡಿದು ತಲೆ ಮಾಡೋನು ಇನ್ನೂ ಉಟ್ಟಿಲ್ಲ. ಮುಂದೇನೋ ನಾವು ಕಾಣೋ. ಆದರೂ ನಮ್ಮ ಗುರುಗೋಳ ಮಾತು ಸುಳ್ಳಾಗೋ ಕಿಲ್ಲ. ನಮಗೂ ಒಳ್ಳೆ ದೆಸೆ ಬಂದಾತಂತೆ; ಎಂಗೆ ಬರ್ತದೋ ಅದು ಮಾತ್ರ ಕಾಣದು.”
ದಿವಾನರು ಖಿನ್ನಮನಸ್ಕರಾಗಿ ಹಿಂತಿರುಗಿದರು. ” ಆಫ್ರಿಕಾದಲ್ಲಿ ಇಂಡಿಯನ್ರನ್ನು ಕಂಡರೆ ಬೀದಿನಾಯಿಗಿಂತ ಕಡೆ. ಅಮೇರಿಕಾದಲ್ಲಿ ನೀಗ್ರೋಗಳು. ಯೂರೋಪಿನಲ್ಲಿ ಏಸಿಯಾಟಿಕ್ಸ್. ಇಂಡಿಯಾದಲ್ಲಿ ಹೊಲೆಯರು. ಎಲ್ಲೋ ಏನೋತಪ್ಪಿದೆ, ಅದು ಸರಿಯಾಗಬೇಕು. ಇವರಿಗಿನ್ನೂ ತಮ್ಮನ್ನು ಕಡೆಗಾಣುತ್ತಿದ್ದಾರೆಂಬ ಭಾವನೆ ಬಂದಿಲ್ಲ. ಅದು ಬರುವುದರೊಳಗಾಗಿ ಇವರಿಗೆ ಈ ದುಃಸ್ಥಿತಿ ತಪ್ಪಬೇಕು. ಇಲ್ಲ ವಾದರೆ, ಅಪಾಯ, ಅಪಾಯ” ಎಂದುಕೊಂಡು ಹೊರಟು ಬಂದರು.
ಎಲ್ಲರಿಗೂ ಅವರ ಇಳಿಮೊಕ ಕಾಣಿಸಿತು ಅವರ ಮಾತು ಕೇಳಿದರೂ ಅರ್ಥವಾಗಲಿಲ್ಲ, ಆ ಬಳಗದಿಂದ ಭಾರತಕ್ಕೆ ಅನರ್ಥ ವಾದೀತು ಎಂಬ ಯೋಚನೆಯೇ ಯಾರ ಮನಸ್ಸಿಗೂ ಬರಲಿಲ್ಲ. ಅರ್ಥಕ್ಕಾಗಿ ಪೂರಾ, ಕಾಮಕ್ಕಾಗಿ ಅಪ್ಪಷ್ಟು ತಾವು ಉಪಯೋಗಿಸಿ ಕೊಳ್ಳುವ ಈಗುಂಪು ಧರ್ಮದ ಹೆಸರಿನಲ್ಲಿ ಏಕೆ ಕನಿಷ್ಠವಾಗಿ ಗರ್ಭ ದಾಸರಂತೆ ಇರಬೇಕು ಎಂಬುದನ್ನು ಯಾರೂ ಯೋಚಿಸಲಿಲ್ಲ.
ಅಲ್ಲಲ್ಲಿ ಒಂದೊಂದು ಕಲ್ಯಾಣಗುಣಕ್ಕಾಗಿ ಒಬ್ಬೊಬ್ಬನಿಗೆ, ವಿಶೇಷ ಮರ್ಯಾದೆಯು ಸಲ್ಲುತ್ತಿತ್ತು ನಿಜ. ಆದರದು ವೈಯಕ್ತಿಕ ವಾಗಿ ನಿಲ್ಲುತ್ತಿತ್ತು. ಅದು ಕುಲಕ್ಕೆಲ್ಲ ವ್ಯಾಪಿಸಿ ಎಲ್ಲರನ್ನೂ ಮೇಲಕ್ಕೆ ತ್ತುತ್ತಿರಲಿಲ್ಲ.
ಕೀಳು ಕುಲದವನೇ ಮತಾಂತರವಾಗಿ ಬಂದರೆ ಮಾದನು ಮಾದನ್, ಮಾಥನ್, ಆಗಿ ಬಂದರೆ ಎಗ್ಗಿಲ್ಲದೆ ವರ್ತಿಸುವ ಜನ, ಮೂಲ ರೂಪದಲ್ಲಿ ಯಾಕೋ ಗೌರವಿಸುತ್ತಿರಲಿಲ್ಲ. ಬಹುಶಃ ಈ ಪ್ರಶ್ನೆ ಜಾಪಾಳದಂತೋ? ಶುದ್ಧವಾದ ಜಾಪಾಳವು ರೋಗಹಾರಿಯಾಗಿ ಉಪಕಾರಿಯಾದಕ್ಕೆ ಅಶುದ್ಧವಾದ ಜಾಪಾಳವು ಪ್ರಾಣಾಸಹಾರಿಯಾಗಿ ಅಪಕಾರಿಯಾಗುವುದಂತೆ. ಇದೂ ಹಾಗೇನೇನು? ಹಾಗಾದರೆ ಶುದ್ಧಿ ಬೇಕು ಎನ್ನುವುದು ಯಾರಿಗೆ? ದೇಹಕ್ಕೋ ಮನಸ್ಸಿಗೋ ಬುದ್ಧಿಗೋ? ಅಥವಾ ಮೂರಕ್ಕೂನೋ? ಅಲ್ಲದೆ ಶುದ್ಧಿಯಾಯಿತು ಇಲ್ಲ ಎಂದು ಹೇಳಬಲ್ಲವರಾರು? ಆ ಶುದ್ದಿಯಾದರೂ ಎಂಥದು ?
ಈ ತಲೆನೋವಿನ ವಿಚಾರಕ್ಕೆ ಯಾರೂ ಕೈ ಹಾಕಿರಲಿಲ್ಲ. ಆದರೂ ಕೆಲವರು ಮಹನೀಯರು ಈ ವಿಚಾರವನ್ನು ಮನಸ್ಸಿಗೆ ತಂದುಕೊಂಡು ಪರಿಹಾರವೆಂದು ತಮಗೆ ತೋರಿದುದನ್ನು ಮಾಡುವು ದಕ್ಕೆ ಆರಂಭಿಸಿದ್ದರು. ಜನ ಮಾತ್ರ ಆಗ ಅವರನ್ನು ಜಾತಿಭ್ರಷ್ಟ ರೆಂದೇ ಕರೆಯಿತು, ಬಯ್ಯಿತು, ಬಹಿಷ್ಕರಿಸಿತು.
*****