ದೇವರು ಮತ್ತು ಸೈತಾನ

ದೇವರು ಮತ್ತು ಸೈತಾನ

ದೇವರು ಯಾವಾಗ ಹುಟ್ಟದನೋ ಯಾರಿಗೂ ಗೊತ್ತಿಲ್ಲ; ಎಲ್ಲರನ್ನೂ ಹುಟ್ಟಿಸಿದ ದೇವರನ್ನು ಯಾರೂ ಹುಟ್ಟಿಸಲಿಲ್ಲ. ಅಥವಾ ಆತ ಸ್ವಯಂಭೂ. ಹುಟ್ಟದ ದೇವರಿಗೆ ಮರಣವೂ ಇಲ್ಲ. ಆದ್ದರಿಂದ ದೇವರು ಅನಾದಿ, ಅನಂತ್ಯ ಎನ್ನುತ್ತೇವೆ. ದೇವರು prime mover; ಆತನೇ ಮುಖ್ಯ ಚಾಲಕ; ಆತನನ್ನು ಚಲಾಯಿಸುವವರು ಯಾರೂ ಇಲ್ಲ. ಆತನು ಸರ್ವಶಕ್ತ, ಸರ್‍ವಜ್ಞ್,ಅ ಇಡೀ ಲೋಕವೇ ಅವನಿಂದ ಮೊದಲಾಗಿ ಅವನಲ್ಲಿ ಕೊನೆಗೊಳ್ಳುತ್ತದೆ. ತೇನ ವಿನಾ ತೃಣಮಪಿ ನ ಚಲತಿ, ಇತ್ಯಾದಿ ಇತ್ಯಾದಿ. ಹಾಗಿದ್ದರೆ ಮತ್ತೀ ಲೋಕವ್ಯಾಪಾರಗಳಿಗೆ ಏನರ್ಥ? ಒತ್ತಾಯಿಸಿ ಕೇಳಿದರೆ, ಇದೆಲ್ಲಾ ಒಂದು ಲೀಲೆ ಎಂಬ ಉತ್ತರ ಬರುತ್ತದೆ. ದೇವರು ತನ್ನ ಅತ್ಯಂತವಾದ ಏಕಾಂತದ ಬೇಸರದಲ್ಲಿ ಸುಮ್ಮನೆ ವೇಳೆ ಕಳೆಯುವುದಕ್ಕೆಂದು ಲೋಕವನ್ನು ಸೃಷ್ಟಿಸಿ ಅದರಲ್ಲಿ ಇನ್ನೆಲ್ಲವನ್ನೂ ಒಂದೊಂದಾಗಿ ನಿರ್ಮಿಸಿದ. ಈ ದೇವರ ಆಟವೂ ಅದೆಷ್ಟೋ ಕಾಲದಿಂದ ನಡೆಯುತ್ತಿದೆ, ಇನ್ನೆಷ್ಟೋ ಕಾಲ ನಡೆಯಲಿದೆ. ದೇವರಿಗೆ ಸಾಕೆನಿಸಿದರೆ ಆತ ಇದೆಲ್ಲವನ್ನೂ ನಿಲ್ಲಿಸಿಬಿಡಬಹುದು. ಆಮೇಲೇನಿರುತ್ತದೆ? ಆಮೇಲೆ ದೇವರು ಮಾತ್ರವೇ ಇರುತ್ತಾನೆ. ಆತ ಯಾವತ್ತೂ ಇದ್ದವನು, ಯಾವತ್ತೂ ಇರುವವನು.

ಹಾಗಿದ್ದರೂ ದೇವರ ವಿರುದ್ಧ ಸೈತಾನ ಎನ್ನುವವನೊಬ್ಬ ಕೂಡಾ ಯಾವಾಗಲೂ ಇದ್ದಾನೆ. ಈತ ದೇವರನ್ನು ಸದಾಕಾಲವೂ ಸೋಲಿಸಲು ಯತ್ನಿಸುವವನು; ದೇವರ ಪ್ರತಿಪಕ್ಷ ನಾಯಕ ಸೈತಾನ. ಇವನು ಮುಖ್ಯವಾಗಿ ಮಾನವರ ಮನಸ್ಸನ್ನು ದೇವರ ವಿರುದ್ಧವಾಗಿಯೂ ತನ್ನ ಪರವಾಗಿಯೂ ಮಾಡಿಕೊಳ್ಳುವುದರ ಮೂಲಕ ದೇವರಿಗೆ ಸವಾಲೆಸೆಯುತ್ತ ಇರುತ್ತಾನೆ. ದೇವರನ್ನು ಆತನ ಪರಮೋಚ್ಚ ಸ್ಥಾನದಿಂದ ಉಚ್ಚಾಟಿಸಿ, ಆ ಸ್ಥಾನವನ್ನು ತಾನು ಆಕ್ರಮಿಸುವುದು ಸೈತಾನನ ಅಂತಿಮ ಗುರಿ. ಹೀಗೆ ಈ ‘ದೇವ ದಾನವ’ ಯುದ್ಧ ನಿಜವಾಗಿ ನಡೆಯುವುದು ಮನುಷ್ಯಲೋಕದಲ್ಲಿ-ಪ್ರತಿಯೊಬ್ಬ ಮನುಷ್ಯನಲ್ಲಿ ಹಾಗೂ ಮನುಷ್ಯ ಮನುಷ್ಯರ ನಡುವೆ. ಮೊತ್ತದಲ್ಲಿ ಇದು ಒಳಿತು ಕೆಡುಕುಗಳ ನಡುವಣ ಹೋರಾಟ. ಈ ಹೋರಾಟದಲ್ಲಿ ಒಳಿತೇ ಗೆಲ್ಲುತ್ತದೆ ಎನ್ನುವುದು ವಿಶ್ವಾಸ; ಆದರೆ, ಕೆಡುಕು ಯಾವತ್ತೂ ಪೂರ್ತಿಯಾಗಿ ನಾಶವಾಗುವುದಿಲ್ಲ. ಯಾಕೆಂದರೆ, ಅದು ನಾಶವಾದರೆ ಚರಿತ್ರೆ ಅಲ್ಲಿಗೆ ನಿಂತುಬಿಡುತ್ತದೆ.

ಇಂಗ್ಲಿಷ್ ಕವಿ ಜಾನ್ ಮಿಲ್ಟನ್‍ನ ಮಹಾಕಾವ್ಯವಾದ ‘ಪ್ಯಾರಡೈಸ್ ಲಾಸ್ಟ್’ನಲ್ಲಿ ಸೈತಾನನು ದೇವರಷ್ಟೇ ಮುಖ್ಯ ಪಾತ್ರಧಾರಿ-ಅವನ ಪಾತ್ರ ಮಾತ್ರ ಖಳನಾಯಕನದು. ಸೈತಾನ ಎನ್ನುವುದು ಅವನ ನಿಜ ನಾಮಧೇಯವಲ್ಲ; ಸೈತಾನ ಎಂದರೆ ಈ ಪದಕ್ಕೆ ಹೀಬ್ರೂ ಮೂಲದಲ್ಲಿ ‘ವಿರೋಧಿ’ (ಯಾವನು ವಿರೋಧಿಸುತ್ತಾನೋ ಅವನು ಸೈತಾನ) ಎಂದಷ್ಟೇ ಅರ್ಥ. ಆದರೆ ದೈವ ವಿರೋಧಿ ಎಂಬರ್ಥದಲ್ಲಿ ಈ ಪದ ಹಿಂದಿನಿಂದಲೂ ಉಪಯೋಗಕ್ಕೆ ಬಂದುದರಿಂದ ಸೈತಾನ ಎಂಬ ಹೆಸರಿಗೆ ಹೆಚ್ಚಿನ ಅರ್ಥ ಬಂದಿದೆ-ಎಂದರೆ, ಸೈತಾನ ಎಲ್ಲ ಕೆಡುಕಿಗೂ ಮೂಲ. ಲೂಸಿಫರನು ಮೊದಲು ದೇವಲೋಕದಲ್ಲಿ ದೇವಗಣದಲ್ಲಿ ಪ್ರಮುಖನೂ ದೇವರಿಗೆ ತುಂಬಾ ಹತ್ತಿರದವನೂ ಆಗಿದ್ದವನು. ನೋಡಲು ಸ್ಫುರದ್ರೂಪಿಯಾದ ಇವನಿಗೆ ಲೂಸಿಫರ್ ಎಂದು ಹೆಸರು (ಕೆಟ್ಟದು ಯಾವಾಗಲೂ ಆಕರ್ಷಕ!). ಲೂಸಿಫರ್ ಎಂದರೆ ಪ್ರಕಾಶವನ್ನು ತರುವವನು ಎಂದರ್ಥ. ಮುಂಜಾವದ ನಕ್ಷತ್ರವೊಂದರ ಹೆಸರು ಅದು. ಎಂದರೆ ಪದಚ್ಯುತಿಗೊಳ್ಳುವ ಮೊದಲು ಲೂಸಿಫರನಿಗಿದ್ದ ಸ್ಥಾನಮಾನವನ್ನು ಊಹಿಸಿಕೊಳ್ಳಬಹುದು. ದೇವರ ನಂತರ ಎರಡನೆಯ ಸ್ಥಾನದಲ್ಲಿ, ಒಂದು ರೀತಿಯಲ್ಲಿ ದೇವರ ಉತ್ತರಾಧಿಕಾರಿಯಂತೆ, ಅಧಿಕಾರ ವಹಿಸಿದ್ದವನು ಇವನು. ಆದರೆ ಲೂಸಿಫರನ ಅಹಂ ಹೆಚ್ಚಾಗಿ, ತನ್ನ ಕೆಲವರು ಆಪ್ತ ದೇವತೆಗಳನ್ನು ಸೇರಿಸಿಕೊಂಡು ದೇವರ ವಿರುದ್ಧ ಬಂಡೇಳುತ್ತಾನೆ. ಈ ಅತಿಕ್ರಮಕ್ಕೋಸ್ಕರ ದೇವರು ಲೂಸಿಫರನನ್ನೂ ಅವನ ಜತೆ ಸೇರಿದವರನ್ನೂ ಪಾತಾಳದಲ್ಲಿರುವ ನರಕಕ್ಕೆ ಎತ್ತಿ ಒಗೆದುಬಿಡುತ್ತಾನೆ. ಅಲ್ಲಿ ಅವರಿಗೆ ಎಂದೂ ಮುಕ್ತಿಯಿಲ್ಲದ ಘೋರ ಶಿಕ್ಷೆ. ಹೀಗೆ ದೇವಲೋಕದ ಜತೆ ಜತೆಗೆ ನರಕದ ಕಲ್ಪನೆ ಕೂಡಾ ಇರುವುದು ಸ್ವಾರಸ್ಯಕರ ಸಂಗತಿ. ಮತ್ತು ಮಿಲ್ಟನ್ ಈ ಇಡೀ ಪ್ರಸಂಗವನ್ನು ರಾಜಕೀಯ ದೃಷ್ಟಿಯಿಂದ ನೋಡುವುದು ಕೂಡಾ ಗಮನಾರ್ಹವಾದ ವಿಷಯವೇ. ಅವನ ಕಾವ್ಯದಲ್ಲಿ ನರಕಕ್ಕೆ ಬಿದ್ದು ಎಚ್ಚೆತ್ತ ಮೇಲೆ ಲೂಸಿಫರ್ ಅರ್ಥಾತ್ ಸೈತಾನ ತನ್ನ ಅನುಚರರನ್ನು ಕಲೆಹಾಕಿ ನಡೆಸುವ ಸಭೆ ಒಂದು ಪಾರ್ಲಿಮೆಂಟರಿ ಚರ್ಚೆಯ ಮಾದರಿಯಲ್ಲೇ ಇದೆ. ಇದರಲ್ಲಿ ಸೈತಾನನು ಬಂಡುಕೋರರ ಪರವಾಗಿ ದೇವರಿಂದ ತಮ್ಮೆಲ್ಲರ ಸ್ವಾತಂತ್ರ್ಯ ಘೋಷಿಸಿಕೊಳ್ಳುತ್ತ, ದೇವಲೋಕದಲ್ಲಿ ಜೀತದಾಳಾಗಿರುವುದಕ್ಕಿಂತ ನರಕದಲ್ಲಿ ಸ್ವತಂತ್ರರಾಗಿರುವುದೇ ಒಳ್ಳೆಯದು ಎನ್ನುತ್ತಾನೆ. ಹಾಗೂ ದೇವರ ವಿರುದ್ಧ ಯುದ್ಧ ಹೂಡಿ ಮರಳಿ ದೇವಲೋಕವನ್ನು ಗಳಿಸುವ ಯೋಜನೆ ರೂಪಿಸುತ್ತಾನೆ. ಇದರಲ್ಲಿ ಮುಖ್ಯವಾದದ್ದು ನಂದನವನದಲ್ಲಿ ದೇವರು ಆಗತಾನೇ ಸೃಷ್ಟಿಸಿದ ಆದಂ ಮತ್ತು ಈವ್‍ರನ್ನು ಹಾಳುಮಾಡುವುದು. ದೇವರು ಈ ಮಾನವದ್ವಯರನ್ನು ಸೃಷ್ಟಿಸಿ, ಜ್ಞಾನವೃಕ್ಷದ ಹಣ್ಣನ್ನು ತಿನ್ನಬಾರದು, ಬೇರೇನು ಬೇಕಾದರೂ ಮಾಡಿಕೊಂಡು ಸುಖವಾಗಿರಿ ಎಂದು ಹರಸಿರುತ್ತಾನೆ. ಜ್ಞಾನವೃಕ್ಷದ ಹಣ್ಣನ್ನು ತಿನ್ನುವುದೆಂದರೆ, ಇಲ್ಲಿ ಲೈಂಗಿಕ ಕ್ರಿಯೆಗೆ ಸಂಕೇತ. ಸೈತಾನ ಒಂದು ಸರ್ಪವಾಗಿ ಬಂದು ಈವಳನ್ನು ಪ್ರೇರೇಪಿಸುವುದು ಈ ಹಣ್ಣನ್ನು ತಿನ್ನುವುದಕ್ಕೆಯೇ; ಅವಳು ತಾನು ತಿನ್ನುವುದು ಮಾತ್ರವಲ್ಲ, ಆದಮನಿಗೂ ಅದನ್ನು ತಿನ್ನಿಸುತ್ತಾಳೆ. ಇದೇ ಆದಿಮ ಪಾಪ. ಇದರಿಂದ ದೇವರಿಗೆ ಕೋಪ ಬಂದು ಈ ತನ್ನ ಮಕ್ಕಳನ್ನು ನಂದನವನದಿಂದ ಹೊರಹಾಕುತ್ತಾನೆ. ಇದು ಸೈತಾನನ ಮೊದಲ ಗೆಲುವು. ಹಾಗಾದರೆ ಈ ದೇವರ ಮಕ್ಕಳಾದ ಮಾನವರಿಗೆ ಮುಕ್ತಿಯಿಲ್ಲವೇ? ಇದೆ. ಮುಂದೆ ಯೇಸುವೆಂಬ ತನ್ನ ಮಗನನ್ನು ಮನುಷ್ಯಲೋಕಕ್ಕೆ ದೇವರು ಕಳಿಸುವುದು ಈ ಮುಕ್ತಿಸಂದೇಶವನ್ನು ಸಾರುವುದಕ್ಕೆಂದೇ. ಮನುಷ್ಯ ತನ್ನ ಮೂಲಭೂತ ಪಾಪವನ್ನು ಒಪ್ಪಿಕೊಂಡು ದೇವರಿಗೆ ಶರಣಾಗುವುದೇ ಮುಕ್ತಿಗಿರುವ ಏಕೈಕ ದಾರಿ. ಆದ್ದರಿಂದ ಯೇಸುವಿನ ಮಾತುಗಳನ್ನು ಪಾಲಿಸಬೇಕು, ಹಾಗೂ ಆತನ ಜೀವನವನ್ನು ಅನುಕರಿಸಬೇಕು. ಮಿಲ್ಟನ್ ತನ್ನ ಮಹಾಕಾವ್ಯದ ಆರಂಭದಲ್ಲೇ ಅದನ್ನು ಬರೆದ ಉದ್ದೇಶವನ್ನೂ ತಿಳಿಸುತ್ತಾನೆ: ಅದೆಂದರೆ, ದೇವರ ದಾರಿಗಳನ್ನು ಮನುಷ್ಯರಿಗೆ ಸಮರ್ಥಿಸಿ ಹೇಳುವುದು. ಈ ದಾರಿಗಳನ್ನು ಅನುಸರಿಸಿದವರು ದೇವರ ಕ್ಷಮೆಗೆ ಪಾತ್ರರಾಗಿ ಸ್ವರ್ಗವನ್ನು ಮರಳಿಗಳಿಸುತ್ತಾರೆ; ಇಲ್ಲದವರು ಅದರ ಹೊರಗೇ ಉಳಿಯುತ್ತಾರೆ, ಅರ್ಥಾತ್ ನರಕದಲ್ಲಿ ನರಳುತ್ತಾರೆ.

ಸನಾತನ ಹಿಂದೂ ನಂಬಿಕೆಗಳ ಪ್ರಕಾರ, ದೇವ ದಾನವರೂ, ಮಾನವರೂ, ಇನ್ನಿತರ ಹಲವಾರು ಪ್ರಾಣಿವರ್ಗಗಳೂ ಸಪ್ತರ್ಷಿಗಳಲ್ಲಿ ಪಮುಖನಾದ ಕಶ್ಯಪನಿಗೆ ಅವನ ಅನೇಕ ಹೆಂಡಿರಲ್ಲಿ ಜನಿಸಿದ ಸಂತತಿ. ಮುಖ್ಯವಾಗಿ, ದೇವ ದಾನವರು ದಾಯಾದಿಗಳು ಎನ್ನುವುದು ಕುತೂಹಲದ ವಿಷಯ; ಇಲ್ಲಿ ದೇವತೆಗಳು ಒಳ್ಳೆಯತನಕ್ಕೂ ದಾನವರು ಕೆಟ್ಟತನಕ್ಕೂ ಮಾದರಿಗಳೂ ಆಗಿದ್ದಾರೆ. ರಾಕ್ಷಸರೇ ಮುಂತಾದ ಇತರರೂ ಕೆಟ್ಟವರ್ಗದವರೇ. ಹಾಗೂ ದೇವತೆಗಳೂ ಕೆಲವೊಮ್ಮೆ ಯಾವುದೋ ಶಾಪಕ್ಕೆ ಒಳಗಾಗಿ ರಾಕ್ಷಸರಾಗಿ ಅವತರಿಸುವುದೂ ಇದೆ. ಈ ಒಳಿತು, ಕೆಡುಕಿನ ಮಧ್ಯೆ ಮಾನವರ ಸ್ಥಾನವನ್ನು ಗಮನಿಸಿದರೆ, ಅವರಿಗೆ ಅವರವರ ಕರ್ಮಗಳಿಗೆ ಅನುಗುಣವಾಗಿ ದೇವತೆಗಳಂತೆ ಒಳ್ಳೆಯವರೂ, ರಾಕ್ಷಸರಂತೆ ಕೆಟ್ಟವರೂ ಆಗುವ ಎರಡೂ ಸಾಧ್ಯತೆಗಳಿವೆಯೆನ್ನುವುದು ತಿಳಿದುಬರುತ್ತದೆ. ಆದ್ದರಿಂದ, ನಿಜವಾದ ಮಾನಸಿಕ ಯುದ್ದ ನಡೆಯುವುದು ಮಾನವರಲ್ಲೇ. ದೈವ ವಿಶ್ವಾಸವಿಲ್ಲದ ಬೌದ್ಧ ಜೈನ ಧರ್ಮಗಳಲ್ಲಿ ಕೂಡಾ ಈ ಒಳಿತು-ಕೆಡುಕುಗಳ ಕಲ್ಪನೆಯಿದೆ. ಸಿದ್ಧಾರ್ಥ ಗೌತಮನು ಬುದ್ಧನಾಗುವ ತನ್ನ ಹಾದಿಯಲ್ಲಿ ಅನೇಕ ಆಮಿಷಗಳನ್ನು, ಉಪಟಳಗಳನ್ನು ಗೆಲ್ಲಬೇಕಾಯಿತು- ಮುಖ್ಯವಾಗಿ ಮಾರನ ಕೈಯಿಂದ. ಯೇಸು ಕ್ರಿಸ್ತ ಕೂಡಾ ಇಂಥ ಪರೀಕ್ಷೆಗಳನ್ನು ಎದುರಿಸಿದ.

ಇದೆಲ್ಲ ಮತಧರ್ಮಗಳ ವಿಷಯವಾಯಿತು. ಹತ್ತೊಂಬತ್ತನೆಯ ಶತಮಾನದಲ್ಲಿ ಫ್ರೆಡ್ರಿಕ್ ನೀತ್ಸೆ ‘ದೇವರು ಸತ್ತ’ ಎಂಬುದಾಗಿ ತನ್ನ ಪ್ರವಾದಿ ಜರಾತೂಷ್ಟ್ರನ ಮೂಲಕ ಹೇಳಿಸಿದ. ‘ದೇವರ ಮರಣ’ವೆಂದರೆ ರ್‍ಯಾಶನಲಿಸಂ ಅರ್ಥಾತ್ ವಿಚಾರವಾದದ ಜನನ ಎಂದು ಅರ್ಥ. ವಾಸ್ತವದಲ್ಲಿ ದೇವರ ಅಸ್ತಿತ್ವವನ್ನು ಪಶ್ನಿಸುವವರು ಎಲ್ಲಾ ಕಾಲದಲ್ಲೂ ಇದ್ದರು. ಆದರೂ ಹತ್ತೊಂಬತ್ತನೆ ಶತಮಾನವೆಂದರೆ ಅದು ವಿಚಾರವಾದಿ ಯುಗದ ಆರಂಭವೆಂದು ಅರ್ಥ. ಡಾರ್ವಿನ್‍ನ ವಿಕಸನವಾದ, ಫ್ರಾಯ್ಡನ ಮನೋವಿಶ್ಲೇಷಣೆ, ಮಾರ್ಕ್ಸ್‌ ಆರ್ಥಿಕ ಸಿದ್ಧಾಂತ-ಇವೆಲ್ಲವೂ ಈ ಕಾಲಘಟ್ಟದಲ್ಲೇ ಮೊದಲಾದುವು. ಹೀಗೆ, ‘ದೇವರ ಮರಣ’ದೊಂದಿಗೆ ದೇವರು ಮತ್ತು ಸೈತಾನ ಎಂಬ ಯುಗ್ಮಗಳೂ ಕೊನೆಗೊಳ್ಳಬೇಕು. ಆದರೆ ಹಾಗಾಗಿದೆಯೇ? ವಿಚಾರಬದ್ಧವಾದ ತತ್ವಜ್ಞಾನ ವಿಜ್ಞಾನ ಮುಂತಾದ ಬೇರೆ ದೃಷ್ಟಿಕೋನಗಳಿಂದ ನೋಡಿದರೂ, ಪರಸ್ಪರ ವಿರುದ್ಧವಾದ ಕನಿಷ್ಠ ಎರಡು ಶಕ್ತಿಗಳಿಲ್ಲದೆ ಯಾವ ಪಕ್ರಿಯೆಯೂ ಸಾಧ್ಯವಾಗುವುದಿಲ್ಲ. ಹೆಗೆಲ್ ಪ್ರಚುರಪಡಿಸಿದ ಥೀಸಿಸ್ ಮತ್ತು ಆಂಟಿ ಥೀಸಿಸ್ (ತತ್ವ ಮತ್ತು ಪ್ರತಿತತ್ವ), ಮತ್ತು ಮಾರ್ಕ್ಸ್ ಪ್ರಚುರಪಡಿಸಿದ ಡಯಲೆಕ್ಟಿಕ್ಸ್ (ಪ್ರತಿವಾದ ತತ್ವ) ಕೂಡಾ ಈ ತರದವು. ಯಾವ ವಾದಕ್ಕೂ ಪೂರ್ವಪಕ್ಷ ಮತ್ತು ಉತ್ತರಪಕ್ಷಗಳೆಂಬ ಎರಡು ನಿಲುವುಗಳು ಬೇಕಾಗುತ್ತವೆ. ಈ ವಾದದಲ್ಲಿ ಒಂದು ಜಯಗಳಿಸಬಹುದು; ಆಗ ಇನ್ನೊಂದು ಸೋಲುತ್ತದೆ. ಆದರೆ ನಾಶವಾಗುತ್ತದೆಯೇ? ಹೆಗೆಲ್ ಥೀಸಿಸ್ ಜತೆಗೇ ಸಿಂಥೆಸಿಸ್ ಅರ್ಥಾತ್ ಸಮ್ಮಿಲನ ಎಂಬ ಕಲ್ಪನೆಯನ್ನೂ ಮುಂದೊತ್ತಿದ. ಇದರ ಪ್ರಕಾರ, ಥೀಸಿಸ್ ಮತ್ತು ಸಂಘರ್ಷದಲ್ಲಿ ಕ್ರಮೇಣ ಎರಡೂ ಸಮ್ಮಿಲನಗೊಳ್ಳಬಹುದು. ಆದರೂ ಈ ಸಮ್ಮಿಲನಗೊಂಡ ಘಟಕ ಮತ್ತೆ ಬೇರೆ ರೂಪದಲ್ಲಿ ಇನ್ನೊಂದು ಥೀಸಿಸ್ ಮತ್ತು ಆಂಟಿಥೀಸಿಸ್ ಆಗಿ ಒಡೆಯುವ ಸಾಧ್ಯತೆಯನ್ನು ಅರ್ಥಾತ್ ವೈರುಧ್ಯವನ್ನು ಬೀಜರೂಪದಲ್ಲಿ ಯಾವಾಗಲೂ ಒಳಗೊಂಡಿರುತ್ತದೆ. ಇದೇ ಇತಿಹಾಸದ ಮುನ್ನಡೆ. ಎಂದರೆ, ವೈರುಧ್ಯವಿಲ್ಲದ ಸಿಂಥೆಸಿಸ್ ಇಲ್ಲ. ಮಾರ್ಕ್ಸ್ ಹೆಗೆಲ್‍ನ ಈ ಮೂಲಭೂತ ಸಿದ್ಧಾಂತವನ್ನು ಸ್ವೀಕರಿಸುತ್ತಾನೆ. ಇಬ್ಬರ ಅಭಿಪ್ರಾಯದಲ್ಲೂ ಈ ತರದ ಪ್ರತಿವಾದ ಕ್ರಮ ಇತಿಹಾಸದ ಪರಿಪೂರ್ಣತೆಯಲ್ಲಿ ಕೊನೆಗೊಳ್ಳಬೇಕು. ಮಾರ್ಕ್ಸ್‌ ಪ್ರಕಾರ ಇದು ಕಮ್ಯೂನಿಸಮಿನ ವಿಕ್ರಮ, ಹಾಗೂ ಇದರ ತುರ್ಯಾವಸ್ಥೆಯಲ್ಲಿ ಸರಕಾರ (ಸ್ಟೇಟ್) ಎಂಬುದು ತಾನಾಗಿಯೆ ಉದುರಿಹೋಗಿ ಮನುಷ್ಯರಿಗೆ ಸಂಪೂರ್ಣ ಸ್ವಾತಂತ್ರ್ಯ ಲಭಿಸುತ್ತದೆ. ಆದರೆ, ಒಂದು ಕ್ಷಣ ಈ ಕುರಿತು ಯೋಚಿಸಿದರೆ, ಗೊತ್ತಾಗುತ್ತದೆ ಇಂಥ ಸ್ಥಿತಿ ಎಂದಿಗೂ ಸಾಧ್ಯವೇ ಇಲ್ಲ ಎಂಬುದು. ಯಾಕೆಂದರೆ, ಯಾವ ಸಂಘರ್ಷವೂ ಇಲ್ಲದ ಸ್ಥಿತಿ, ಅರ್ಥಾತ್ ಪೂರ್ತಿ ಈಕ್ವಿಲಿಬ್ರಿಯಂ (ಸಮಸ್ಥಿತಿ) ಎಂದರೆ ಮರಣವೊಂದೇ! ಇಲ್ಲಿ ಕೂಡಾ ನಾವು ಭೌತ ವಿಜ್ಞಾನವನ್ನು ಪ್ರವೇಶಿಸಿ ಅಣುಜಗತ್ತನ್ನು ನೋಡಿದರೆ, ಈ ಲೋಕದಲ್ಲಿ ಪ್ರತಿಯೊಂದೂ ಚಲಿಸುತ್ತಲೇ, ಬದಲಾವಣೆಗೊಳ್ಳುತ್ತಲೇ ಇರುತ್ತದೆ. ಚಲನಶೀಲತೆಯಿಲ್ಲದ ಲೋಕವನ್ನು ಊಹಿಸುವುದು ಕೂಡೂ ಅಸಾಧ್ಯ. ಒಂದು ಕಳೇಬರ ಕೂಡಾ ಜೀರ್ಣಗೊಳ್ಳುವುದರ ಮೂಲಕ ಬದಲಾಗುತ್ತಲೇ ಇರುತ್ತದೆ. ಪರಮ ತಾಟಸ್ಥ್ಯ (ಪರ್ಫೆಕ್ಟ್ ಈಕ್ವಿಲಿಬ್ರಿಯಂ) ಇರುವ ಲೋಕವೆಂದರೆ ಲೋಕವನ್ನು ಇಲ್ಲದೆ ಮಾಡಿದ ಹಾಗೆ!

ಈ ಚಲನಶೀಲತೆಯಾದರೂ ಹೇಗೆ ಬರಬೇಕು? ಇದಕ್ಕೆ ಗುಣ ಮತ್ತು ಋಣವೆಂದು ನಾವು ಸಾಮಾನ್ಯವಾಗಿ ವಿದ್ಯುನ್ಮಾನ ಭಾಷೆಯಲ್ಲಿ ಹೇಳುವ ಎರಡು ಶಕ್ತಿಗಳು ಅತ್ಯಗತ್ಯ. ಒಂದು ಇನ್ನೊಂದರ ವಿರುದ್ಧ-ಉತ್ತರ ಧುವ, ದಕ್ಷಿಣ ಧ್ರುವದ ಹಾಗೆ. ವಿರುದ್ಧ ಗುಣಗಳು ಪರಸ್ಪರ ಆಕರ್ಷಿಸಿದರೆ, ಸಮ ಗುಣದವು ಒಂದನ್ನೊಂದು ವಿಕರ್ಷಿಸುತ್ತವೆ. ಜಗತ್ತಿನ ಸಕಲ ವಿದ್ಯಮಾನಗಳೂ ಈ ಮೂಲಭೂತ ಧರ್ಮವನ್ನು ಅನುಸರಿಸುತ್ತವೆ. ಅಣುಶಕ್ತಿ ಕೂಡಾ ಆಕರ್ಷಣ ವಿಕರ್ಷಣಗಳ ಮೂಲಕವೇ ಪಡೆಯಬಹುದಂಥದು. ಹೆಚ್ಚೇಕೆ, ನಾವು ನೆಲದ ಮೇಲೆ ನಡೆಯುವುದಕ್ಕಾದರೂ ಗುರುತ್ವಾಕರ್ಷಣ ಶಕ್ತಿಯ ತಡೆಯ ಅಗತ್ಯವಿದೆ. ಇದಿಲ್ಲದಿರುತ್ತಿದ್ದರೆ ನಾವು ನಿರ್ವಾತದಲ್ಲಿ ತೇಲುತ್ತಿದ್ದೆವು. ನಮ್ಮಿಂದ ಯಾವ ನಿರ್ದೇಶಿತ ಚಲನೆಯೂ ಅಸಾಧ್ಯವಾಗುತ್ತಿತ್ತು. ಗುರುತ್ವಾಕರ್ಷಣ ಶಕ್ತಿ ನಮ್ಮ ಚಲನಕ್ರಿಯೆಗೆ ಹದವಾದ ತಡೆಯನ್ನು ಒಡ್ಡುವುದರಿಂದಲೇ ನಮಗೀ ಚಲನಕ್ರಿಯೆಯ ಮೇಲೆ ನಿಯಂತ್ರಣ ಸಿಗುವುದು. ಗಾಳಿಪಟ ಹಾರಬೇಕಾದರೆ ಪಟ ಮತ್ತು ಗಾಳಿಯ ನಡುವೆ ಒಂದು ಅನುಸಂಧಾನದ ಅಗತ್ಯವಿದೆ. ಗಾಳಿಪಟ ಹಾರಿಸುವವರಿಗೆ ಗೊತ್ತು ದಾರವನ್ನು ಯಾವಾಗ ಹೇಗೆ ಜಗ್ಗಬೇಕು, ಹೇಗೆ ಬಿಟ್ಟುಕೊಡಬೇಕು ಎನ್ನುವುದು. ಆಗಾಗ ಜಗ್ಗದೆ ಬರೇ ಬಿಟ್ಟುಕೊಡುತ್ತ ಹೋದರೂ ಗಾಳಿಪಟ ಮೇಲಕ್ಕೇರುವುದಿಲ್ಲ. ಹೀಗೆ ಈ ಲೋಕದ ಪ್ರತಿಯೊಂದು ಸಂಗತಿಗಳಲ್ಲೂ ಪರ-ವಿರೋಧ ಶಕ್ತಿಗಳು ಕೆಲಸ ಮಾಡುತ್ತಲೇ ಇರುತ್ತವೆ.

ಇದು ಹೀಗಿರುವಾಗ ನಮ್ಮ ಸಾಮಾಜಿಕ ಜಗತ್ತಿನಲ್ಲೂ ಎಲ್ಲವೂ ಎಲ್ಲ ಕಾಲಕ್ಕೂ ಯಾವುದೇ ಸಂಘರ್ಷವಿಲ್ಲದೆ ಇರಬೇಕೆಂದು ಬಯಸುವುದು ಅವಾಸ್ತವಿಕವಾಗುತ್ತದೆ. ಒಂದು ರೀತಿಯಲ್ಲಿ ನೋಡುವುದಿದ್ದರೆ, ವಾಸ್ತವ ಮತ್ತು ಆದರ್ಶ ಎನ್ನುವ ಕಲ್ಪನೆಗಳೇ ಪರಸ್ಪರ ವಿರೋಧಿಯಾದುವು. ಆದರ್ಶವಿಲ್ಲದಿದ್ದರೆ, ಮನುಷ್ಯನಿಗೆ ಬದುಕುವುದಕ್ಕೆ ಕಾರಣವಿಲ್ಲದಾಗುತ್ತದೆ; ಆದರೆ ವಾಸ್ತವದ ಅರಿವಿಲ್ಲದಿದ್ದರೆ ಆತ ಅದನ್ನು ಬದಲಿಸಲೂ ಆರ. ಎಷ್ಟೇ ಬದಲಿಸಿದರೂ, ಆದರ್ಶವನ್ನು ನಾವು ಎಂದೂ ತಲುಪುವುದು ಸಹಾ ಅಸಾಧ್ಯವೇ. ಯಾಕೆಂದರೆ, ಆದರ್ಶವೆನ್ನುವುದು ನಡೆದಂತೆ ದೂರ ಹೋಗುವ ಕ್ಷಿತಿಜವಿದ್ದ ಹಾಗೆ-ಅದೊಂದು ಕಲ್ಪನೆ. ಮನುಷ್ಯ ಆದರ್ಶ ಮತ್ತು ವಾಸ್ತವಿಕತೆಯನ್ನು ಒಟ್ಟಿಗೇ ಇಟ್ಟುಕೊಂಡು ಬದುಕುವ ವಿಚಿತ್ರ ಪ್ರಾಣಿ. ಇದೊಂದು ವೈರುಧ್ಯದ ಹಾಗೆ ಅನಿಸಬಹುದಾದರೂ, ಇಂಥ ವೈರುಧ್ಯಗಳೇ ನಮ್ಮ ಜಗತ್ತನ್ನು ನಿಜಕ್ಕೂ ನಿರ್ಮಿಸುವ, ವಿವರಿಸುವ ಹಾಗೂ ಮುನ್ನಡೆಸುವ ಸಂಗತಿಗಳು.

ಒಂದು ಕತೆ ಬರೆಯುತ್ತೇವೆ ಎಂದುಕೊಳ್ಳೋಣ. ಕತೆ ಸುರುವಾಗುವುದೇ ಏನಾದರೊಂದು ಘರ್ಷಣೆಯಲ್ಲಿ. ಉದಾಹರಣೆಗೆ, ಒಬ್ಬ ರಾಜನಿಗೆ ಒಬ್ಬಳು ಮಗಳಿರುತ್ತಾಳೆ. ಅವಳು ಅಪೂರ್ವ ಸುಂದರಿ. ತನ್ನ ಮಗಳನ್ನು ಯಾರಾದರೂ ಒಬ್ಬ ವೀರ ಪುರುಷನಿಗೆ ವಿವಾಹ ಮಾಡಿಕೊಡಬೇಕೆನ್ನುವುದು ರಾಜನ ಆಸೆ. ಆದರೆ ಅವನಿಗೊಬ್ಬ ದುಷ್ಟ ಮಂತ್ರಿಯಿರುತ್ತಾನೆ. ಈ ಮಂತ್ರಿಗೆ ಅಷ್ಟೇ ದುಷ್ಟನಾದ ಒಬ್ಬ ಮಗನಿರುತ್ತಾನೆ. ಹೇಗಾದರೂ ಮಾಡಿ ರಾಜಕುಮಾರಿಯನ್ನು ತನ್ನ ಮಗನಿಗೆ ಮದುವೆಮಾಡಿಸಬೇಕು ಎಂಬುದಾಗಿ ಮಂತ್ರಿ ಕುಟಿಲ ಯೋಚನೆ ಮಾಡುತ್ತಿರುತ್ತಾನೆ- ಇತ್ಯಾದಿ. ಇಂಥ ಹಿಂದಣ ಕತೆಗಳಲ್ಲಾದರೆ ಇಂಥ ಸಂಘರ್ಷಗಳು ಕೊನೆಯಲ್ಲಿ ಕೆಟ್ಟವರ ಸೋಲು ಮತ್ತು ಒಳ್ಳೆಯವರ ಗೆಲುವಿನೊಂದಿಗೆ ಮುಕ್ತಾಯವಾಗಿ, ಆಮೇಲೆ ಎಲ್ಲರೂ ಸುಖವಾಗಿರುತ್ತಾರೆ. ಕತೆ ಅಲ್ಲಿಗೆ ಮುಗಿಯುವುದು. ಕತೆ ಮುಂದರಿಯುತ್ತಲೇ ಇರಬೇಕಾದರೆ, ಒಳ್ಳೆಯವರ ಜತೆ ಜತೆಗೇ ಈ ಕೆಟ್ಟವರೂ ನಿರಂತರವಾಗಿ ಇರಬೇಕಾಗುತ್ತದೆ. ಆಧುನಿಕ ಕತೆಗಳಲ್ಲಿ ಒಳ್ಳೆಯವರು ಕೆಟ್ಟವರು ಎಂಬ ಈ ವರ್ಗೀಕರಣ ಮೊದಲಿನಷ್ಟು ಸುಲಭವಲ್ಲ; ಮಾತ್ರವಲ್ಲ, ಒಬ್ಬನೇ ವ್ಯಕ್ತಿಯಲ್ಲಿನ ಇಂಥ ಒಳಿತು ಕೆಡುಕುಗಳ ತಾಕಲಾಟವೇ ಹಲವರಿಗೆ ಸ್ವಾರಸ್ಯಕರವಾಗಿ ಕಾಣಿಸುವುದು. ಹಾಗೂ ಕತೆ ಕೊನೆಯಾಗುವಾಗಲೂ ಈ ಸಂಘರ್ಷಕ್ಕೆ ಪೂರ್ಣವಿರಾಮ ದೊರಕುವುದೆಂದಿಲ್ಲ. ಯಾಕೆಂದರೆ, ಆಧುನಿಕ ದೃಷ್ಟಿಕೋನದ ಪ್ರಕಾರ ಇಂಥ ಸಂಘರ್ಷಗಳು ನಿರಂತರವಾಗಿರುತ್ತವೆ-ಟೀವಿಗಳಲ್ಲಿ ನಾವು ದಿನವೂ ಕಾಣುವ ಸೋಪ್ ಆಪೆರಾಗಳ ತರ. ಕೆಟ್ಟದು ಮುಗಿದರೆ, ಕತೆ ಅಲ್ಲಿಗೆ ನಿಂತುಹೋಗುತ್ತದೆ. ಆದ್ದರಿಂದ ಕತೆಗಾರ ಎರಡೂ ಬದಿಗಳಿಗೆ ಸಮನಾದ ಗಮನ ಕೊಡಬೇಕಾಗುತ್ತದೆ. ಇದು ವಾಸ್ತವತೆಯಾದರೂ, ಇದನ್ನು ಸ್ವೀಕರಿಸಿಕೊಳ್ಳುವುದೆಂದರೆ ಯಥಾಸ್ಥಿತಿಯನ್ನು ಮುಂದರಿಸಿಕೊಂಡಂತೆ ಅಲ್ಲವೇ ಎಂದು ಕೇಳಬಹುದು. ಅಲ್ಲ, ಮನುಷ್ಯನ ಕ್ರತುಶಕ್ತಿಯಿದೆ. ಇದು ಒಳಿತಿಗೂ ಕೆಡುಕಿಗೂ ಸಮನಾಗಿ ಒದಗುವಂಥದು. ಎಂದಾದರೊಂದು ದಿನ ನಾವು ಕೆಡುಕಿನ ಮೇಲೆ ಪೂರ್ತಿ ಗೆಲುವನ್ನು ಗಳಿಸುತ್ತೇವೆ ಎಂಬ ನಂಬಿಕೆ ಒಂದು ಆದರ್ಶ. ಆದರ್ಶ ಮತ್ತು ವಾಸ್ತವತೆ-ಎರಡರ ಅರಿವೂ ನಮಗೆ ಬೇಕಾಗುತ್ತದೆ. ಒಳಿತು ಯಾವುದು ಕೆಡುಕು ಯಾವುದು ಎಂದು ತಿಳಿಯದ ಸಂದರ್ಭಗಳೂ ಇವೆ. ಇದು ಇನ್ನೊಂದೇ ಸಮಸ್ಯೆಗೆ ಕಾರಣವಾಗುತ್ತದೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೂಡಿದರೆ ನನ್ನನ್ನು
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೨

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…