ಕಳ್ಳನ ಹೃದಯಸ್ಪಂದನ

ಕಳ್ಳನ ಹೃದಯಸ್ಪಂದನ

ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ ಕೆಳಗೆ ಗೃಹಪ್ರವೇಶ ಮಾಡಿ ಗೌರಮ್ಮ ಶಿವಪ್ಪನವರು ತಮ್ಮ ಭಾವಮೈದುನ ಬಾಲು ಜೊತ ಆ ಮನೆಯಲ್ಲಿ ವಾಸಿಸುತ್ತಿದ್ದರು. ಕಳ್ಳ ಕಾಕರ ಭಯವಿದ್ದರೂ ಬಾಳು ಇಷ್ಟರವರೆಗೆ ನಿರಾತಂಕವಾಗಿಯೇ ಸಾಗಿತ್ತು.

ಇಂದು ಹಠಾತ್ತನೆ-ಮಧ್ಯರಾತ್ರಿಯಲ್ಲಿ ಚಾಕು, ಪಿಸ್ತೂಲು ಕೈಯಲ್ಲಿ ಹಿಡಿದು ಬಾಲುವನ್ನು ಮೊದಲು ಹೆದರಿಸಿ ಅವನ ಕೈಗಡಿಯಾರ, ಮೊಬೈಲ್ ಮತ್ತು ನಗದು ಸಾವಿರ ರೂ. ತನ್ನ ಜೇಬಿನಲ್ಲಿಡಲು ಹೇಳಿದ ನಂತರ ಗೌರಮ್ಮ ಶಿವಪ್ಪನವರನ್ನು ಬಾಲುಗೆ ಹೆದರಿಸಿ ಅವನನ್ನು ಎಬ್ಬಿಸಲು ಹೇಳಿದ ಆ ಕ್ಷಣದಲ್ಲಿ ಪ್ರತಿಭಟನೆ ಮಾರಕವಾದೀತೆಂದು ಬಾಲು ಹೇಳಿದಂತೆ ಅಕ್ಕಭಾವರನ್ನು ಎಬ್ಬಿಸಿದ.

ಮಧ್ಯವಯಸ್ಸಿನ ದಂಪತಿಗಳಿಗೆ ಎದುರಿಗೆ ಮೈದುನ ಮತ್ತೊಬ್ಬ ಅಪರಿಚಿತನನ್ನು ನೋಡಿ ದಿಗ್ಭ್ರಾಂತವಾಯಿತು. ಕೈಯಲ್ಲಿ ಚಾಕು ಪಿಸ್ತೂಲು ನೋಡಿ ಅವನು ಕಳ್ಳನೇ ಎಂದು ಎದೆ ಝಗ್ ಎಂದಿತು. ಪ್ರಾಣದ ಭಯ ಕಾಡಿತು. ಯಮನಂತೆ ಎದುರಿಗೆ ನಿಂತಿದ್ದ ಕಳ್ಳನ ಆಜ್ಞೆಯನ್ನು ಪಾಲಿಸಲು ಸಿದ್ಧರಾದರು.

“ನೀನು ಏನು ಕೇಳಿದರೂ ಕೊಡುತ್ತೇವೆ. ಆ ನಿನ್ನ ಪಿಸ್ತೂಲು, ಚಾಕು ನಮ್ಮ ಮೇಲೆ ಉಪಯೋಗಿಸಬೇಡ” ಅಂದರು.

“ಕಳ್ಳರು ಅಂದರೆ ಕೆಟ್ಟವರು ಎಂದು ತಿಳಿದಿದ್ದೀರಾ? ನಿಮ್ಮ ಒಳ್ಳೆಯತನದಿಂದ ನನಗೆ ಬೇಕಾದುದು ಕೊಟ್ಟರೆ ನಾನು ದೋಚಿಕೊಂಡು ಸುಮ್ಮನೆ ಹೋಗುತ್ತೇನೆ” ಎಂದ.

“ನೋಡಿ, ಈ ಪಿಸ್ತೂಲು, ಚಾಕುಗಳನ್ನು ನನ್ನ ಜೇಬಿನೊಳಗಿಟ್ಟು ನಾನು ಈ ಕುರ್ಚಿಯಲ್ಲಿ ಕೂಡುತ್ತೇನೆ. ನೀವು ನಿಧಾನವಾಗಿ ನಿಮ್ಮ ಒಡವೆ ವಸ್ತ್ರ, ನಗದು ಹಣ ಕೊಟ್ಟುಬಿಡಿ” ಎಂದ ಬಹಳ ನಿರಾತಂಕವಾಗಿ.

ಕಳ್ಳ, ಪ್ಯಾಂಟು, ಶರ್ಟು ಧರಿಸಿದ್ದ. ಅವನು ಮಧ್ಯೆ ಮಧ್ಯೆ “Take Your time please. No need to be afraid of me” ಎಂದು ಇಂಗ್ಲೀಷಿನಲ್ಲಿ ಆಶ್ವಾಸನೆ ನೀಡುತ್ತಿದ್ದ.

ನಮ್ಮ ಕೈಕಾಲು ಆಡದೆ ಬೀಗದ ಕೈ ಹುಡುಕುವಾಗ ನಮಗೆ ಒಂದು ಭಾಷಣವನ್ನು ಬಿಗಿದ. ನಾನು ಪದವೀಧರ, ನನಗೆ ೨ ವರ್ಷದಿಂದ ಕೆಲಸ ಎಲ್ಲೂ ಸಿಕ್ಕಿಲ್ಲ. ನನಗೆ ವಯಸ್ಸಾದ ತಾಯಿ ಇದ್ದಾಳೆ. ನಾನು ಅವಳ ಒಬ್ಬನೇ ಮಗ. ನಾವು ಎಷ್ಟೋ ಹಗಲು ರಾತ್ರಿಗಳು ನೀರು ಕುಡಿದು ಮಲಗಿದ್ದೇವೆ. ನಾನು ಯಾವ ಮಾರ್ಗದಲ್ಲಿ ಹೋದರೂ ಕೆಲಸ ಸಿಗದಿದ್ದಾಗ ನಾನು ಈ ಮಾರ್ಗ ಹಿಡಿದಿದ್ದೇನೆ. ನನ್ನ ಕಳ್ಳ ಅಂತ ತಿಳಿಯಬೇಡಿ. ನನಗೂ ನಿಮ್ಮನ್ನು ಸುಲಿಗೆ ಮಾಡುತ್ತಿರುವುದು ಬೇಸರವೆನಿಸುತ್ತಿದೆ. You must all exuse me, ನಿಮಗೆ ಹಸಿದ ಮನುಷ್ಯರ ಕಷ್ಟ ಅರ್ಥವಾಗಬಹುದು. ನಾವು ಬದುಕ ಬೇಡವೇ? ನೀವು ಇವನು ಎಂತಹ ಸುಸಂಸ್ಕೃತ ಕಳ್ಳನೆಂದುಕೊಳ್ಳುವಿರೇನೋ? ಹಾಗೇನೂ ಯೋಚಿಸಬೇಡಿ. “I am a perfect gentleman. I will certainly one day repay what all I have stolen from your house today. This is only a sort of forced loan from you people” ಎನ್ನುತ್ತಿದ್ದ.

ಅವನ ಮಾತುಗಳನ್ನು ನಂಬಬೇಕೋ ಬಿಡಬೇಕೋ ಎಂಬ ವಿವೇಚನೆ ನಮ್ಮನ್ನು ಕಾಡಲಿಲ್ಲ. ನಾವು ಅವನ ಕೈಗೊಂಬೆಗಳಂತೆ ಅವನು ಹೇಳಿದ್ದನ್ನು ಮಾಡಿ ನಮ್ಮ ಒಡವೆ ವಸ್ತ್ರ, ನಗದು ದುಡ್ಡು ತೆಗೆದು ಅವನ ಮುಂದಿಟ್ಟೆವು.

“Thanks for Co-operation” ಎಂದು ನಗದು ಬೇರೆ, ಒಡವೆ ಬೇರೆ ಕಟ್ಟಿಕೊಟ್ಟ ಎರಡು ಗಂಟನ್ನು ಬಿಚ್ಚಿ ನೋಡಿದ “O! What do you think of me. I do not want to take this” ಎಂದ.

ಗೌರಮ್ಮ ಅದೇನೆಂದು ಕಣ್ಣು ಬಿಟ್ಟು ನೋಡಿದರು. ಅದು ಅವರ ಮಾಂಗಲ್ಯ ಸರ, ಅದನ್ನು ತೆಗೆದು ಕಳ್ಳ ಶಿವಪ್ಪನವರಿಗೆ ಕೊಟ್ಟು ನಿಮ್ಮ ಹೆಂಡತಿಯ ಕೊರಳಿಗೆ ಹಾಕಿ. ನನಗೆ ಅದರ ಮೌಲ್ಯ ಗೊತ್ತಿದೆ. ನಿಮಗೆ ಅದು ಎಷ್ಟು sentimental and sacred ಅನ್ನುವುದು ಗೊತ್ತಿದೆ. ಅದನ್ನು ತೆಗೆದುಕೊಂಡು ನಿಮ್ಮ ಮನಸ್ಸು ನೋಯಿಸಲಾರೆ. ನಾನು ಅಷ್ಟು ಕಟುಕನಲ್ಲ. ನನ್ನಲ್ಲಿ ಮನುಷ್ಯತ್ವವಿದೆ. ನನ್ನ ಹೃದಯದಲ್ಲಿ ಕರುಣೆ, ಪ್ರೀತಿಯು ಇದೆ. ನಾನು ಬಡತನ, ನಿರುದ್ಯೋಗದ ಅಸಹಾಯಕ ಸಂದರ್ಭದಲ್ಲಿ ಸಿಲುಕಿದ್ದೇನೆ. ನಾನು ಮೊದಲೇ ಹೇಳಿದಂತೆ ಕೆಲಸ ಸಿಕ್ಕ ಮೇಲೆ ಒಂದಲ್ಲ ಒಂದು ದಿನ ನಿಮಗೆ ನಾನು ನಿಮ್ಮ ಸಂಪತ್ತನ್ನು ಹಿಂತಿರುಗಿಸುತ್ತೇನೆ” ಎಂದ.

ನಾವು ಒಂದೂ ಮಾತನಾಡದೆ ಮೌನವಾಗಿ ಅವನು ಹೇಳಿದ್ದೆಲ್ಲಾ ಕೇಳಿಸಿಕೊಳ್ಳುತಿದ್ದೆವು. ನಮಗೆ ಒಂದು ಕಡೆ ಭಯ, ಒಂದು ಕಡೆ ವಿಚಿತ್ರ ಭಾವನೆಗಳು, ಇವನೆಂತಹ ಕಳ್ಳನೆಂಬ ಸಂಶಯ ಎಲ್ಲವೂ ನಮ್ಮ ಮನವನ್ನು ಆವರಿಸಿದ್ದವು. ಅವನು ಹೆದರಿಸಲು ತಂದ ಚಾಕು, ಪಿಸ್ತೂಲು ಅವನು ಮರತೇಬಿಟ್ಟಿದ್ದ. ಅವನು ಆದರಿಸಿ ಕರೆದ ಅತಿಥಿಯಂತೆ ವರ್ತಿಸುತ್ತಿದ್ದ. ಕೊನೆಗೆ ಹೋಗುವಾಗ “ನಿಮ್ಮ ಹೆಸರೇನು?” ಎಂದು ಕೇಳಿದ “ಗೌರಮ್ಮ ಶಿವಪ್ಪ” ಎಂದರು.

“ನೋಡಿ ಶಿವಪ್ಪ ಗೌರಮ್ಮ, ನಾನು ಹೋಗಿ ಒಂದು ದಿನ ಬಂದೇ ಬರುತ್ತೇನೆ. ಮತ್ತೆ ದೋಚಲು ಅಲ್ಲ, ನಿಮ್ಮ ಹಣ, ಒಡವೆ ವಾಪಸ್ಸು ಮಾಡಲು” ಎಂದ.

“ಇಷ್ಟು ನಾನು ಹೇಳಿದ ಮೇಲೆ ನೀವು Police complaint ಕೊಡುವುದಿಲ್ಲವೆಂದು ನಂಬಿದ್ದೇನೆ. ನೀವು ನನ್ನ ಕ್ಷಮಿಸಬೇಕು. ಮನುಷ್ಯರು ಒಬ್ಬರ ಕಷ್ಟ ಒಬ್ಬರು ಅರಿತು ಕೊಳ್ಳಬೇಕು. ನೀವು ನನ್ನ, ನನ್ನ ತಾಯಿಯ ಹಸಿವು ಸಂಕಟಗಳ ಬಗ್ಗೆ ಕರುಣೆ ತೋರುವಿರೆಂದುಕೊಂಡಿದ್ದೇನೆ;

“ಇನ್ನು ಬರ್‍ತೇನೆ bye” ಎನ್ನುತ್ತಾ ಹೊರಟೇಬಿಟ್ಟ. ಅವನನ್ನು ಕಳ್ಳನೆಂದು ಕರೆಯಬೇಕೋ ಇಲ್ಲವೋ ನಮಗೆ ತಿಳಿಯಲಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಂಕ
Next post ಕಾಲ

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…