ಹೂವಿನ ಮೃದುಲ ದಳಗಳು ರಂಗೇರಿದ ಬಣ್ಣದ ಸೌಂದರ್ಯದಿಂದ ಕೂಡಿ ಸೂರ್ಯನ ಕಿರಣದೊಂದಿಗೆ ಆಡುತ್ತ, ಗಂಧದ ಹಾಡನ್ನು ಹಾಡುತ್ತ ಗಿಡದಲ್ಲಿ ನಗುಮುಖದಿಂದ ನರ್ತಿಸುತ್ತಿತ್ತು. ಪಕ್ಕದಲ್ಲಿದ್ದ ಮುಳ್ಳು ಹೂವಿನ ಮಗ್ಗುಲಲ್ಲಿ ನಿಂತು ಹೇಳಿತು.
“ನಿನ್ನ ಮುಖ ಬಹಳ ಸುಂದರವಿರಬಹುದು. ಸೂರ್ಯ, ಚಂದ್ರರು ನಿನ್ನ ಸಖರಿರಬಹುದು. ನಕ್ಷತ್ರಗಳು ನಿನ್ನ ನೋಡಿ ಮೋಹಿಸಬಹುದು. ಆದರೆ ನಿನ್ನ ತಂದೆ ತಾಯಿಗಳು ಹುಟ್ಟುವ ಮುಂಚೆ ನಿನ್ನ ಮುಖ ಹೇಗಿತ್ತು ಅಂತ ತಿಳುದಿರುವಿಯಾ?”
“ನಿನ್ನ ನಿಜ ಮುಖವೇನು ಎಂದು ಎಂದಾದರೂ ಚಿಂತಿಸಿರುವೆಯಾ?” ಎಂದು ಮುಳ್ಳು ಮೊಟಕಿ ಕೇಳಿತು.
ಸಂತಸದಲ್ಲಿ ತೇಲುತ್ತಿದ್ದ ಹೂವಿಗೆ ಒಮ್ಮಿಂದೊಮ್ಮೆಲೆ ಆಲೋಚನೆಯಾಯಿತು. “ಇದೇನು ಪ್ರಶ್ನೆ? ನಾನು ಎಂದೂ ಯೋಚಿಸಿಲ್ಲವಲ್ಲ” ಎಂದು ಚಿಂತಾಕ್ರಾಂತವಾಯಿತು.
ಆಗಸಕ್ಕೆ ಮೊಗವೆತ್ತಿ ಕೇಳಿತು- “ನನ್ನ ತಂದೆ ತಾಯಿ ಹುಟ್ಟುವ ಮುಂಚೆ ನನ್ನ ಮುಖ ಹೇಗಿತ್ತು ಎಂದು ನೀನೋಡಿರುವೆಯಾ?” ಎಂದಿತು. ತಂಪಾದ ಮಳೆ ಹನಿಗಳು ಹೂವಿನ ಎದೆಯಲ್ಲಿ ಒಂದು ಕ್ಷಣ ನಿಂತು ಧ್ವನಿ ಕೇಳಿಸಿಕೊಳ್ಳದೆ ಕೆಳಗೆ ಹರಿದು ಬಿಟ್ಟಾಗ ಹೂವಿಗೆ ಉತ್ತರ ಸಿಗಲಿಲ್ಲ. ಇನ್ನು ಬೆಳಗಿನ ಜಾವದ ಇಬ್ಬನಿ ಹತ್ತಿರ ಹೋಗಿ ಮೆಲ್ಲಗೆ ಹೂ ಕೇಳಿತು ಅದೇ ಪ್ರಶ್ನೆ.
ಇಬ್ಬನಿ ಹೇಳಿತು “ನಿನ್ನ ಮುಖ ಹೇಗಿದೆ ಎಂದು ತಿಳಿಯುವುದರೊಳಗೆ ನಾನು ಇಂಗಿ ಹೋಗುತ್ತೇನೆ. ಇನ್ನು ನಿನ್ನ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ?” ಎಂದಿತು. ಹೂವಿಗೆ ಎದೆಗುದಿ. “ಇದೇನು ಮುಳ್ಳು, ಪ್ರಶ್ನೆ ಚುಚ್ಚಿ ಬಿಟ್ಟಿದೆ ನನ್ನಲ್ಲಿ, ಎಂದು ಹೂವು ಶಪಿಸಿಕೊಂಡಿತು.
ಬೀಸುವ ತಂಗಾಳಿಯನ್ನು, ಒಮ್ಮೆ ಕೇಳಿನೋಡುವೆನೆಂದು ಕೊಂಡಿತು. ಗಾಲಿಯಿಲ್ಲದೆಯೆ ನಿಲ್ಲದೆ ಸುತ್ತುವ ಈ ಗಾಳಿಯನ್ನು ನಿಲ್ಲಿಸಿ ಕೇಳುವುದುಂಟೆ ಎಂದು ಕೈ ಬಿಟ್ಟಿತು. ಅಷ್ಟರಲ್ಲಿ ತೋಟಮಾಲಿ ಅಲ್ಲಿಗೆ ಬಂದ. ಅವನಲ್ಲಿ ಕೇಳಿತು ಹೂ ಅದೇ ಪ್ರಶ್ನೆ. ಮಾಲಿ ಹೇಳಿದ- ಈಗ ತಾನೆ ನನ್ನ ಹಿಡಿಯಲ್ಲಿದ್ದ ಬೀಜಗಳನ್ನು ಭೂಮಿಗೆ ಬಿತ್ತಿ ಬಂದೆ. “ನೀನು ಭೂಮಿಯನ್ನು ಕೇಳಿದರೆ ಉತ್ತರ ಸಿಗಬಹುದು” ಎಂದ. ಅಷ್ಟು ಹೊತ್ತು ಪರಿತಪಿಸಿ, ಪರಿತಪಿಸಿದ ಹೂವಿನ ದಳವೆಲ್ಲ ಉದರಿ ಬೀಜವಾಗುತ್ತ ಕೊನೆಗೆ ಭೂಮಿಗೆ ಬಿತ್ತು. ಭೂಮಿಯ ಎದೆಯಲ್ಲಿ ಅಡಗಿದ ಬೀಜಗಳಲ್ಲ ಮೊಳೆಕೆಯ ಮುದ್ದು ಮಾತಿನಲ್ಲಿ ಹೂ ಬೀಜವನ್ನು ಮಾತನಾಡಿಸಿದವು. ಪ್ರಶ್ನೆಗೆ ಉತ್ತರ ವಿತ್ತವು, ಬೀಜ, ಮೊಳಕೆ, ಗಿಡ, ವೃಕ್ಷ ತನ್ನ ತಾಯಿತಂದೆ, ಅಜ್ಜಾ ಅಜ್ಜಿ, ಎಲ್ಲರ ಮುಖ ಬಿಂಬದಲ್ಲಿ ತನ್ನ ಮುಖದ ಪ್ರತಿಬಿಂಬ ಕಂಡು ಹೂಬೀಜ ಹಿಗ್ಗಿತ್ತು. ಮುಳ್ಳಿನ ಪ್ರಶ್ನೆಗೆ ಉತ್ತರ ಕಂಡುಕೊಂಡಿತು.
*****