ಹಣ್ಣೆಲೆಯು ಹಾರುತಿರೆ, ನೀರಿನುಗೆಯಾಗುತಿರೆ
ದಿನದ ಬಿಸಿಲಿಗೆ ಹೂವು ಬಾಡುತಿರಲು,
ಮೈಗರೆದು ಮಿಡುಕುತಿದೆ ಮೂಕ ಶೋಕವು, ಸೃಷ್ಟಿ
ಕೋಗಿಲೆಯ ಕೊರಳಿನಲಿ ಹಾಡುತಿರಲು.
ಮನದ ಮಗಳಾದ ನುಡಿ ಹುರುಳಿನಲಿ ನರಳುತಿದೆ.
ಹಾಡು ನೆಲೆಗಾಣದಲೆ ನವೆಯುತಿಹುದು.
ಬಾಳಸಿರಿ ಎಂದಿತ್ತ ಉಸಿರು ಮಸೆದಲಗಾಗಿ,
ಮುಗಿಲ ಮೊಗವನೆ ಕವಿದು, ತಿವಿಯುತಿಹುದು.
ಹುಟ್ಟ ಬೆನ್ನಟ್ಟಿ ಬರುತಿಹುದು ಸಾವು,
ಮಾಯದಿಹ ಗಾಯದಲಿ ಮೊಳೆಯೆ ನೋವು.
ತಾಯಿ ಕರೆಯಲು ಮುಗ್ಧ ಬಾಲಸರಣಿ-
ರೋದನವು ಕೂಗುತಿದೆ ‘ಬಾರೊ ಕರುಣಿ’
*****