ಮಲ್ಲಿ – ೧೮

ಮಲ್ಲಿ – ೧೮

ಬರೆದವರು: Thomas Hardy / Tess of the d’Urbervilles

ಮಲ್ಲಿಯು ಮಲ್ಲಮ್ಮಣ್ಣಿಯಾದಮೇಲೈ, ಮಲ್ಲಣ್ಣನೂ ಕೆಂಸಿಯೂ ಮಜ್ಜಿಗೆಯ ಹೆಳಿ ಯನ್ನು ಬಿಟ್ಟು, ಮ್ಲೆಸೂರಿಗೆ ಬಂದರು. ನಾಯಕನು ಈಡಿಗದಲ್ಲಿ ಹತ್ತುಸಾವಿರ ಕೊಟ್ಟು ಮನೆಯನ್ನು ಕೊಂಡುಕೊಂಡನು.

ಕಟ್ಟಡಕ್ಕಿಂತ ಕಾಂಪೌಂಡು ಹೆಚ್ಚಾಗಿತ್ತು. ಅಲ್ಲಿ ಆ ದಂಪತಿಗಳಿಗೆ ವಾಸ. ಇನ್ನು ಇಪ್ಪತ್ತು ಸಾವಿರ ಖರ್ಚುಮಾಡಿ ಮಗ್ಗುಲಲ್ಲಿ ಒಂದು ನಡುಮನೆ, ವಿಶಾಲವಾದ ಕೋಣೆಗಳೆರಡು, ಒಂದು ಆಫೀಸ್ರೂಮ್, ಒಂದು ವೆರಾಂಡಾ, ಒಂದು ಕುದುರೆಲಾಯ, ಒಂದು ದನದಕೊಟ್ಟಿಗೆ, ಇಷ್ಟನ್ನೂ ಕಟ್ಟಿಸಿದನು. ಆದು ಕಟ್ಟ ಮುಗಿದಮೇಲೆ, ಯಾರು ಬಂದರೂ, “ಭರ್ಜರಿ ಬಂಗಲೆಯಾಯಿತು. ಐವತ್ತು ಸಾವಿರಕ್ಕೆ ಮೋಸವಿಲ್ಲ” ಎನ್ನುವರು.

ಮಲ್ಲಣ್ಣನು ಮನೆಯ ಯಜಮಾನನಾದನು. ಸುತ್ತಮುತ್ತಿ ನವರು ಏನೋ ಮಲ್ಲಣ್ಣ ಎನ್ನುತ್ತಿದ್ದುದು ತಪ್ಪಿ, ಏನು ಮಲ್ಲಣ್ಣೋರೆ ಎನ್ನುವರು. ಕೆಂಪಿಯು ಕೆಂಪಮ್ಮನವರು ಆಗಿದ್ದಾಳೆ. ತಿಂಗಳಿಗೆ ಐವತ್ತು ರೂಪಾಯಿ ಎರಡನೆಯ ತಾರೀಖು ಬಂದುಬಿಡುವುದು. ಗಂಡಹೆಂಡಿರು ಹೇಗೆಹೇಗೆ ಖರ್ಚುಮಾಡಿದರೂ ತಿಂಗಳಿಗೆ ನಾಲ್ಕೈದು ರೂಪಾಯಿ ಉಳಿಯುವುದು. ಈಗ ಗಂಡಹೆಂಡರಿಗೆ ನಿತ್ಯವೂ ತುಪ್ಪ, ಮೊಸರು ಇಲ್ಲದೆ ಊಟವೇ ಇಲ್ಲ.

ಜೊತೆಗೆ ಬಾಗಿಲು ಗುಡಿಸಿ ರಂಗವಲ್ಲಿ ಇಡುವುದಕ್ಕೆ, ಕಸಮುಸರೆಗೆ ಒಬ್ಬಳು ಆಳು-ಅವಳಿಗೆ ಸಂಬಳ ತಿಂಗಳಿಗೆ ಎಂಟಾಣೆ. ಅವಳ ಗಂಡನೇ ಹೊಸ ಬಂಗಲೆಗೆ ಕಾವಲುಗಾರ. ಅವನೇ ತೋಟದ ಮಾಲಿ. ಅವನಿಗೆ ತಿಂಗಳಿಗೆ ಹತ್ತುರೂಪಾಯಿ. ಅವರಿಗೊಬ್ಬ ಮಗ ಮಗಳು. ಮಾಲಿ ಹೆಸರು ತಿಮ್ಮ: ಅವನ ಹೆಂಡತಿಯ ಹೆಸರು ರಂಗಿ. ಮಗನ ಹೆಸರು ಸುಬ್ಬ : ಮಗಳ ಹೆಸರು ಮಾದಿ.

ಅರಮನೆಯಿಂದ ಬರುವ ಸಂಬಳವೂ ಮಲ್ಲಣ್ಣನ ಕೈಗೆ ಬರು ವುದು. ನಾಯಕನು “ಅದನ್ನೂ ನೀವೆ ತಕೊಳಿ. ಖರ್ಚುಮಾಡಿ ಕೊಳ್ಳಿ. ಇಟ್ಟುಕೊಂಡಿರಿ. ಇದ್ದರೆ ಎಲ್ಲಿ ಹೋಯ್ತದೆ!” ಎಂದು ಅಪ್ಪಣೆಯನ್ನು ಕೊಟ್ಟಿದ್ದನು. ಆದರೂ ಮಲ್ಲಣ್ಣನು “ಹೆಣ್ಣು ಮಗುವಿನ ಸೊತ್ತು ” ಎಂದು ಅದನ್ನು ತಿಂಗಳೂ ಕಟ್ಟ ಹಾಕುವನು.

ಕೆಂಪಿಗೆ ಬೇಜಾರು. ಅಮ್ಮ ಅಮ್ಮ ಎಂದು ಕೊಂಡು ಕಾಲಿಗೆ ಸುತ್ತಿಕೊಂಡು ತಿರುಗುತ್ತಿದ್ದ ಮಗಳನ್ನು ಬಿಟ್ಟರುವುದು ಅವಳಿಗೆ ಕಷ್ಟವಾಯಿತು. ಮಲ್ಲಣ್ಣೊಡನೆ ತನ್ನ ಕಷ್ಟನವನ್ನು ಹೇಳಿಕೊಂಡಳು. ಒಂದು ಸಲ ಹೂಂ ಎಂದ. ಎರಡನೆಯ ಸಲ ಕೊಂಚ ಯೋಚಿಸಿ, ನೋಡೋವ ಎಂದನು. ಮೂರನೆಯ ಸಲ ಅವಳು ಊಟ ಮಾಡಿ ಬಾಯಿ ತುಂಬ ತಾಂಬೂಲ ಹಾಕಿಕೊಂಡು ಹಾಸುಗೆಯ ಮೇಲೆ ಕುಳಿತುಕೊಂಡು “ಮೊಗಾನ ಕರೆತರೋಲ್ಲವಾ ? ಯಾಕೋ ಮನ ಸ್ಸೆಲ್ಲಾ ಬಿಮ್ಮಂತದೆ ” ಎಂದು ಆರಂಭಿಸಿದಳು.

ಮಲ್ಲಣ್ಣ ಗಂಭೀರವಾಗಿ ಒಂದು ಗಳಿಗೆ ಅಡಕೆಲೆ ಅಗಿಯು ವುದನ್ನೂ ನಿಲ್ಲಿಸಿ ಹಾಗೇ ಇದ್ದು “ನೋಡು ಹೆಣ್ಣೆ, ಅದೆಲ್ಲಿಂದಲೋ ಯಾರೊ! ತಂದು ಕೊಟ್ಟರು: ಇವರು ಬಂದು ಅದರುದ್ದ ಹಣ ಸುರಿದು ಕರಕೊಂಡು ಹೋದರು ಜನ್ಮದಲ್ಲಿ ಮೈಸೂರಲ್ಲಿ ಮನೆ ಮಾಡಿ ಕೊಂಡು ಎರಡು ಹೊತ್ತು ಹೊಟ್ಟೇ ತುಂಬಾ ಉಂಡುಕೊಂಡು, ಮೈ ತುಂಬಾ ಬಟ್ಟೆ ಹಾಕಿಕೊಂಡು ಇರುತೀವಿ ಅಂತಾ ನಾವಂದು ಕೊಂಡಿದ್ದೆವಾ? ಏನೋ ಆ ಮೊಗ ಎಲ್ಲಿ ಹುಟ್ಟಿತೋ ನಮ್ಮ ಮನೆಗೆ ಮಹಾಲಕ್ಷ್ಮಿ, ಅಂಗೆ ಬಂದು ನಮ್ಮನ್ನು ಉದ್ಧಾರ ಮಾಡಿ, ತಾನೆಲ್ಲಿರ ಬೇಕೋ ಅಲ್ಲಿಗೆ ಹೋಯ್ತು. ನಾನು ಹೋಗಿ ಯಾವ ಮೊಕಾ ಇಟ್ಟು ಕೊಂಡು ಮೊಗಾನ ಕಳ್ಸಿಕೊಡಿ ಅನ್ನಲಿ! ಅಲ್ಲದೆ ನಿಜ ಹೇಳಬೇಕು ಅಂದರೆ, ನಾನು ಬುದ್ಧಿಯೋರ ಕೈಲಿ ಮಾತಾಡೋದು ಉಂಟು. ಆದರೂ ಗಾಬರೀನೇ! ಅದರಿಂದ ಆ ಮಾತು ನನ್ನ ಕೈಲಾಗೋಕಿಲ್ಲ. ಈಗ ನೋಡು, ಕಾವೇರವ್ವ ಕೊಡಗಿನಿಂದ ಬಂದು ಇನ್ನು ಮೈಸೂರಿಗೆ ಬೇಕಾದ್ದು ಮಾಡಿ ಕಣಿವೆ ಕೆಳಕ್ಕೆ ಹೋಗುವಾಗ ಧಢಂ ಅಂತ ಧುಮುಕಿ ಹೊರಟು ಹೋಗ್ತಾಳೆ. ಹಂಗಾಯ್ತು ಮಲ್ಲೀದು – ಅಲ್ಲಿ ಸುಖ ವಾಗಿರಲಿ ಬುಡು.”

ಕೆಂಪಿ ಆ ಮಾತು ಕೇಳಿ ಕಣ್ಣಲ್ಲಿ ನೀರಿಟ್ಟುಕೊಂಡಳು. ಆ ಕಣ್ಣೀರು ನೋಡಿ ಗಂಡನೇನೆಂದುಕೊಳ್ಳುವನೋ ಎಂದು ಅತ್ತ ಕಡೆ ತಿರುಗಿಕೊಂಡಳು. ಮಲ್ಲಣ್ಣನ ಕಣ್ಣಿಗೆ ಅಷ್ಟರೊಳಗಾಗಿ ಅದು ಬಿತ್ತು ; “ಛೇ! ಬುಡು. ಬುಡುತು ಅನ್ನು. ಮೋಗೀನ ಸುದ್ದಿ ಎತ್ತಿ ಕಣ್ಣೀರು ಬುಡುತಿಯಾ ! ಹೆಂಗಿದ್ದರೂ ನಾವು ತಿರುಪದೋರು. ಮನೆ ಇದ್ದೋರಿಗೆ ಒಂದು ಮನೆಯಾದರೆ ಮನೆಯಿಲ್ಲವಿದ್ದೋರಿಗೆ ಊರೆಲ್ಲಾ ಮನೆಯಂತೆ. ಇಗೋ ತಿಮ್ಮನ ಹೆಂಡತೀಗೆ ಹೇಳು. ಆ ಮಕ್ಕಳ್ನೇ ನಿನ್ನ ಮಕ್ಕಳು ಅನ್ಕೋ! ಏನು ಅವರಿಬ್ಬರ ಊಟಕ್ಕೆ ದೇವರು ಕೊಟ್ಟಿಲ್ಲವಾ? ಒಂದು ಹೆಣ್ಣಿಗೆ ಬದಲು ಒಂದು ಹೆಣ್ಣು, ಗಂಡು ಎರಡು ಬಂತು ಅನ್ನ್ಕೋ ! ದಿನಾ ಅವರಿಗೆ ತುಪ್ಪಾನ್ನ ಇಟ್ಟು ಮಲ್ಲಿ ಚೆನ್ನಾಗಿರಲಿ ದೇವ್ರೆ ಅನ್ನೂ. ಹೆಂಗಿದ್ದರೂ ಅರಮನೆಯಿಂದ ಮಲ್ಲೀಗೆ ಬರೋ ಹತ್ತು ರೂಪಾಯಿ ಇಷ್ಟೇ ಇದೆ! ಅವಳ ಹೆಸರಿ ಒಂದು ಚತ್ರಾ ನಡೆದು ಹೋಗಲೇಳು.”

ಕೆಂಪಿಯು ಯತ್ನವಿಲ್ಲದೆ ಒಪ್ಪಿಕೊಂಡಳು. ಆಗ ಸುಮಾರು ಇನ್ನೂ ಎಂಟೆಂಟೂವರೆಗಂಟಿ ಇರಬಹುದು. ತಿಮ್ಮನೂ ಊಟಮಾಡಿ ಮಲಗೋಕೆ ಮುಂಚೆ ಬಂಗಲಿ ಸುತ್ತಾ ಒಂದು ಗಸ್ತು ಬಂದಿದ್ದವನು, ” ಏನು ಬುದ್ಧಿ, ಇನ್ನೂ ಮಲಗಿಲ್ವಾ ?” ಅಂದ.

ಮಲ್ಲಣ್ಣನು ಮೊಳಕೈಲಿ ಕಂಪಿಯನ್ನು ತಿವಿದು “ಕೇಳಿದಾ ಅವನೇನಂದಾ!” ಎಂದ್ದು ನಶ್ನದ ಚಿಟಿಕೆ ಮೂಗಿನ ಕಡೆಗೆ ಹೊರಟದ್ದುದನ್ನು ಹಾಗೇ ತದೆದು “ಯಾರಯ್ಯ ಅದು? ತಿಮ್ಮ ಯ್ಯನಾ? ” ಎಂದ.

“ಹೌದು ಬುದ್ದಿ ! ದೀಪಕಂಡೆ. ಅದಕ್ಕಾಗಿ ಕೇಳಿದೆ ಬುದ್ಧಿ ”

” ಸಟೀಕೆ ಒಳಕ್ಬಾ !”

ಕೆಂಪಿಯು ಎದ್ದು ಬಾಗಿಲು ತೆಗೆದಳು. ಮಾಲಿ ತಿಮ್ಮಯ್ಯನು ಒಳಕ್ಕೆ ಬಂದನು. ಕೆಂಪಿಯು ನಡು ಮನೆಯ ಕಂಭನನ್ನು ಒರಗಿ ಕುಳಿತಳು.

ಮಲ್ಲಣ್ಣನು ತನ್ನ ಮುಂದಿದ್ದ ಅಡಕೆಲೆ ತಟ್ಟೆಯಿಂದ ಎಲೆ ಅಡಕೆ ಎತ್ತಿ ಅವನ ಕೈಲಿ ಹಾಕಿ, “ಕುಂತುಕೋ, ಮಾತಾಡಬೇಕು” ಎಂದನು.

ತಿಮ್ಮಯ್ಯನು ಬಾಗಿಲ ಹತ್ತಿರ, ಅಡಗಿಕೊಂಡು ಹೊದೆ ದಿದ್ದ ಕಂಬಳಿಯನ್ನು ಎಳೆದುಕೊಂಡು ಕುಕ್ಕುರಗಾಲಲ್ಲಿ ಕುಳಿತು ಕೊಂಡನು. ಮಲ್ಲಣ್ಣನು ಒಂದು ದೊಡ್ಡ ಚೂರು ಹೊಗೆಸೊಪ್ಪು ಅವನ ಕೈಲಿ ಹಾಕಿ, “ಏನು ಸಮಾಚಾರ ತಿಮ್ಮಯ್ಯ?” ಎಂದನು.

“ಏನು ಹೇಳಲಿ ಬುದ್ದಿ, ನೋಡಿ ತಾವು ಹೊಗೆಸೊಪ್ಪು ಕೊಟ್ಟ ರಲ್ಲಾ, ಇಲ್ಲೊಬ್ಬ ಅಯ್ಯನವರು ಹೈದರಾಬಾದಿನ ಕಡೆಯಿಂದ ಬಂದ ವರೆ ಬುದ್ದಿ, ಅವರು ನಾವು ಮಾಡುತಿರೋ ತೋಟನೋಡಿ, ಈ ದಿನ ಒಳಾಕೆಬಂದು ‘ ಏನಯ್ಯಾ ಗಿಡಎಲ್ಲಾ ನೋಡಬೋದಾ ? ಯಾರದು ಬಂಗಲಿ ?’ ಅಂತ ಎಲ್ಲಾ ಕೇಳಿದರು ನಾನು ಖಾವಂದರ ಇಚಾರ ನಂಗೊತ್ತಿರೋಷ್ಟು ಹೇಳಿ ಮಲ್ಲಣ್ಣ ಬುದ್ಧಿಯೋರು ಇಲ್ಲವರೆ. ಅವರ್ನ ಕೇಳಿ ಅಂದೆ. ‘ ಇವೊತ್ತು ಪುರಸೊತ್ತಿಲ್ಲ, ಇನ್ನೊಂದಿನ ಆಗಲಿ ‘ ಅಂತ ಹೊರಟು ‘ ಗಿಡ ಬಹು ಚೆನ್ನಾಗಿದೆ ಕಣಯ್ಯ, ತಕೋ, ನಿನ ಗೊಂದು ಅನರೂಸದ ಒಸ್ತಾ ಕೊಡುತೀವಿ ‘ ಅಂತ ಒಂದು ಡಬ್ಬೀ ತೆಗೆದು ಅಷ್ಟು ಹೊಗೇಸೊಪ್ಪು ಕೊಟ್ಟರು. ಒಂದು ಚೂರು ಬಾಯ್ಗೆ ಆಕ್ಕೊಂಡಕೆ ಅವ್ವಯ್ಯ, ಅದೇನಂತೀರಿ ಯಾರೋ ರಾಜರು ಮಾರಾಜರೂ ಆಕ್ಕೊಳ್ಳೊ ಹೊಗೇಸೊಪ್ಪು ಬುದ್ದಿ. ಅಪ್ಪಣೆ ಆದರೆ ಒಂದೀಟು ಇನ್ನು ಅದೆ. ತಂದುಕೊಡುತೀನಿ. ”

“ತತ್ತಾ, ನೋಡೋವ”

ತಿಮ್ಮನು ಹೋಗಿ ಒಂದು ಅಷ್ಟು ಸುವಾಸನೆಯ ಹೊಗೆಸೊಪ್ಪು ತಂದನು. ಮಲ್ಲಣ್ಣನು ಅದನ್ನು ಒಂದು ಕಾಸಿನಷ್ಟು ತಾನು ಬಾಯಲ್ಲಿ ಹಾಕಿಕೊಂಡು, ಇನ್ನೊಂದಿಷ್ಟು ಕೆಂಪೀಗೆ ಕೊಟ್ಟು “ನೋಡಿದೆಯಾ ಕೆಂಪಿ, ಸೀಮಂತಿಕೆ ಅಂದರೆ ಹೆಂಗದೆ ?” ಎಂದ್ರು ತಿಮ್ಮಯ್ಯನ ಕಡೆ ತಿರುಗಿ “ಇದು ಎಲ್ಲಿದಂತೆ ? ಇದಕೇನು ಹೆಸರಂತೆ ?” ಎಂದು ಕೇಳಿದನು.

“ಇದು ಹೈದರಾಬಾದಂತೆ ಬುದ್ಧಿ. ಇದರ ಹೆಸರು ಜಲ್ದಾ ಅಂತಲೋ ಬರ್ದಾ ಅಂತಲೋ ಏನೋ ಅಂದರು.?

“ಆ ಅಯ್ಯನವರು ಎಲ್ಲಿರೋದು ?”

“ಇದೇ ಬೀದೀಲಿ ಬತ್ತಾ ಇರ್ತಾರೆ.?

“ನಾಳೇ ನೋಡಿಕೊಂಡಿದ್ದು ಅವರು ಬರತ್ತಲೂ ಕರೀ !”

“ಅಪ್ಪಣೆ ಬುದ್ಧಿ”

“ಆಯಿತು. ತಿಮ್ಮಯ್ಯ, ಈಗ ನಮ್ಮ ಹೆಂಗುಸು ಒಂದು ಮಾತು ಹೇಳ್ತಾಳಲ್ಲ ಹೆಂಗೆ ?”

“ಅಪ್ಪಣೆ ಆಗಲಿ, ಬುದ್ಧಿ?

” ಇನ್ನು ಮೇಲೆ ನಿಮ್ಮೆರಡು ಮಕ್ಕಳ್ಗ ಇಲ್ಲೇ ದಿನಾ ಊಟ ಕ್ಕಳುಸರೋ ಅಂದರೆ ಏನಂತೀರಿ ?”

“ಅಂಯ್ ತಮಾಸಿ ಮಾಡ್ತೀರಾ ಬುದ್ದಿ”

ಇಲ್ಲ ತಿಮ್ಮಯ್ಯ, ದಿಟವಾಗಿಯೂ. ನೋಡು, ನಮ್ಮ ಮನೇಲಿ ಮಲ್ಲಿ ಅಂತ ಮೊಗ ಇತ್ತು. ಅದು ಖಾವಂದ್ರಿಗೆ ಕೊಟ್ಟುಬುಟ್ಟೊ. ಈಗ ನಮಗೆ ಆ ಮೊಗಾ ಮಗ್ಗುಲಲ್ಲಿ ಇಲ್ಲದೆ ಗಂಟಲಲ್ಲಿ ತುತ್ತೇ ಇಳಿಯೋಕಿಲ್ಲಾ ! ಇನ್ಯಾವುದಾದರೂ ಮಕ್ಕಳು ತಂದಿಟ್ಟುಕೋಬೇಕು. ಹೊರಗಿಂದು ಏಕೆ, ನಿಮ್ಮೋವೇ ಆಗಲಿ ಅಂತ ”

“ಅಂದರೆ ನಾವು ಬುದ್ಧಿ ?”

“ನೀವು ಇಲ್ಲೇ ಇರುತೀರಲ್ಲೋ ? ಎಲ್ಲೋಯ್ತೀರಿ ? ದಿನಾ ಮಕ್ಕಳು ಅಲ್ಲಿ ನಿಮ್ಮನೇಲಿ ಆಡಿಕೊಂಡಿರೋದು ಇಲ್ಲೆ ಆಡಿಕೊಂಡಿರಲಿ ಅಂತಾ!”

ಕೆಂಪಿಯೆ ತಿಮ್ಮಯ್ಯನೇನೆಂದಾನೋ ಅಂತ ಗಾಬರಿಯಾದಳು. ಅವನು ಆಗುವುದಿಲ್ಲ ಎಂದರೆ ಏನುಗತಿ ಎಂದು ಅವಳಿಗೆ ಎದೆ ನಡುಗಿತು. ಮಲ್ಲಣ್ಣನಿಗೆ ಅಷ್ಟು ಇಲ್ಲದಿದ್ದರೂ, ನೀರು ನುಂಗುವಷ್ಕಾದರೂ ಆಯಿತು.

ತಿಮ್ಮಯ್ಯನು ಒಂದುಗಳಿಗೆ ಯೋಚಿಸಿ “ನೀವು ಏಳಿದಂಗೇ ಆದರೆ ನಮ್ಮ ತಿಮ್ಮಪ್ಪ ಒಲಿದಾ ಅಂತಲೇ ಆಯ್ತು ಬುದ್ದಿ! ನಾನೇನೋ ನಿಮ್ಮ ಪಾದದಲ್ಲೇ ಬಿದ್ದಿವ್ನಿ. ನನ್ನದೇನಿಲ್ಲ ? ಆದರೆ, ಎತ್ತೊಟ್ಟೆ, ಕೇಳದೆ ಎಂಗೇಳ್ಲಿ “ಬುದ್ಧಿ ” ಎಂದನು.

ಕೆಂಪಿಗೆ ಅವಸರ “ಹೇಳಿಕೊಂಡೇ ಬಂದುಬುಟ್ಟರೆ ? ನಿನ್ನೆಂಡ್ತಿ ಎದ್ದಿಲ್ವಾ ?” ಎಂದಳು.

ತಿಮ್ಮಯ್ಯನು ಬಾಗಿಲಲ್ಲೇ ನಿಂತು “ಇತ್ತ ಬಂದೀಯಾ ಅಂತೀನಿ. ೫ ಅಂದನು.

“ಮಕ್ಕಳು ಮನಗಿಸ್ತೀದೀನಲ್ಲಾ ?” ಉತ್ತರ ಬಂತು.

“ಇನ್ನೂ ಎದ್ದವೆಯಾ ?”

“ಯಾಕೋ ಮಲಗಲೇ ಒಲ್ಲೋ!”

“ಒಳ್ಳೇದೇ ಆಯಿತು. ಅವರ್ಕೂ ಕರಕೊಂಡು ಜಟ್ಟನೆ ಬಾ!”

ರಂಗಿಯು ಎರಡು ಮಕ್ಕಳ್ನೂ ಕರೆತಂದಳು.

ಕೆಂಪೀಗೆ ಆ ಮಕ್ಕಳ್ನ ಹಾಗೆ ಬರಸೆಳೆದು ತಬ್ಬಿಕೊಳ್ಳಬೇಕು ಎನ್ನಿಸಿತು. ಆದರೆ ಇಷ್ಟು ದಿನವೂ ಇಲ್ಲದ ಪ್ರೇಮ ಈಗೇಕೆ ? ಎಂದು ಸುಮ್ಮನಾದಳು. ಆಗಾಗ ಮಕ್ಕಳಿಗೇ ನೇರವಾಗಿ, ಇನ್ನೊಂದೊಂದು ಸಲ ತಾಯಿಯ ಹಸ್ತ, ತಿಂಡಿ ಸಿಕ್ಕುತ್ತಿತ್ತು. ಈಗಲೂ ಏನಾದರೂ ಕೊಡಬೇಕೆಂದು ಒಳಕ್ಕೆ ಹೋಗಿ ನೋಡಿದಳು. ಒಂದಷ್ಟು ಹುರಿ ಗಾಳು ಇತ್ತು. ಇನ್ನೇನೂ ಇಲ್ಲವಲ್ಲ ಎಂದು ನೊಂದುಕೊಂಡು ತಿರು ಗಿದಳು. ಹೆಪ್ಪು ಇದ್ದ ಮಡಕೆ ನೆಲುವಿನಮೇಲೆ ಕಾಣಿಸಿತು. ಒಂದು ರೆಪ್ಪೆ ಹೊಯ್ಯುವಷ್ಟು ಹೊತ್ತು ಹಾಕಿದ ಹೆಪ್ಪು ಒಡೆಯುವುದೇ ಎನ್ನಿ ಸಿತು. ಮಕ್ಕಳಿಗಿಲ್ಲದ್ದು ಮತ್ತಿಯಾರಿಗೆ ಎಂದುಕೊಂಡು, ಆ ಹೆಪ್ಪು ಹಾಕಿದ್ದ ಹಾಲನ್ನೇ ಎರಡು ಬಟ್ಟಲಲ್ಲಿ ತೆಗೆದುಕೊಂಡು ಮಡಲಲ್ಲಿ ಹುರಿಗಾಳು ತುಂಬಿಕೊಂಡು ಬಂದಳು. ಅವರಿಬ್ಬರಿಗೂ ಒಂದೊಂದು ಹಿಡಿಕೊಟ್ಟು ಮಿಕ್ಕುದನ್ನು ರಂಗಿಯ ಮಡಲಿಗೆ ಹಾಕಿ “ನಿನ್ನ ಗಂಡನೂ ಕೊಡು” ಎಂದು, ಮಕ್ಕಳಿಗೆ ಎರಡು ಬಟ್ಟಲು ಹಾಲು ಕೊಟ್ಟಳು. ಮಕ್ಕಳು ಹಾಲು ಕುಡಿದು ಹುರಿಗಾಳು ತಿನ್ನುತ್ತಾ ಕುಳಿತರು.

ತಿಮ್ಮಯ್ಯನು “ತಾವೇ ಕೇಳಿ ಬುದ್ಧಿ? ಎಂದನು.

“ಹಾ! ಉಂಟಾ! ನೀನು ಕೇಳು ಅವಳು ಹೇಳ್ಳಿ”

“ನೋಡಮ್ಮೀ ಬುದ್ಧಿಯೋರ ಮಾತ ಕೇಳ್ದಾ.”

“ಏನು ?”

“ಇನ್ನುಮೇಲೆ ದಿನಾ ಈ ಮಕ್ಕಳು ಇಲ್ಲೇ ಉಣ್ಣೋಕೆ ಬರಲಿ ಅಂತಾಕೆ”

“ನಮ್ಮಗತಿ ?”

“ನೀವು ನಿಮ್ಮನೇಲೆ ಉಂಡುಕೊಳ್ಳಿ”

“ಮಕ್ಕಳು ಬಿಟ್ಟು ನಾವು ದೈಯ್ಯಗಳಂಗೆ ಉಂಡ್ಕೊಳ್ಳೋದಾ ?”

“ಅಲ್ಲಕಣಮ್ಮಿ ನಿಂಗೆ ಅಷ್ಟು ಕಮ್ಮಿ ಆದರೆ, ನೀನೂ ಉಣ್ಣೋ ವಾಗ ಒಂದೊಂದು ತುತ್ತಿಡು.”

“ಅದೇನು ನೀಏಳೋದು ? ನಂಗೆ ತಿಳಿಯೋಕೇ ಇಲ್ಲವಲ್ಲಾ ? ನಮ್ಮಕ್ಕಳ್ಗೆ ಇವರ್ಯಾಕೆ ಉಣ್ಣೋಕಿಡೋದು? .”

” ಏ ಮೊಂಕುಮೊಂಕಾಗಿ ಮಾತಾಡಬೇಡ, ಬುದಿಯೋರು ನಿನ್ನ ಮಕ್ಕಳು ಮಾರು ಅನ್ಲಿಲ್ಲ. ಅವರಿಗೆ ಮಕ್ಕಳು ಕೆಂಡರಾಸೆ, ಅದಕೆ ಇಲ್ಲೀಗೆ ಊಟಕ್ಕೆ ಬರಲಿ ಅಂದರು.”

” ಮೊದಲೇ ಏಳ ಬೇಡವಾ ಬುದ್ದಿ – ಇಂಗೇ ಇವರು ಇಲ್ಲದ ತೀಟೆ ಮಾಡೋದು. ಈಗದಕೇನು? ನೀವೇ ಆಗಬೋದು ಅಂದಿದ್ದರೆ ಆಗುತಿರಲಿಲ್ವಾ. ನನ್ಯಾಕ್ಕೆ ಕರೀಬೇಕಿತ್ತು ? ”

“ಸರೀ ಬುದ್ದಿ. ಇತ ಉಣ್ತಿರೋದೂ ನಿಮ್ಮ ಅನ್ನಾನೇ

ನಮ್ಮಕ್ಕಳು ಉಣ್ತಿರೋದೂ ನಿಮ್ಮ ಅನ್ನಾನೇ, ಅಲ್ಲಿ ಉಣ್ಣೋಬದಲ್ಕು ಇಲ್ಲೇ ಉಂಡ್ಕೊಳ್ಳಿ, ನಾ ಏಳಿದ್ದು ಸರಿಯಾ ಎಣ್ಣೇ?”

“ಮಲಗೋದು ಮಾತ್ರ ಅಲ್ಲೇ!”

” ಆಗಲೇಳು.?

ಮರು ದಿನದಿಂದ ಕೆಂಪಿಯು ಆ ಇಬರು ಮಕ್ಕಳಿಗೆ ಸ್ನಾನ ಮಾಡಿಸುವಳು. ತಲೆ ಬಾಚುವಳು. ಊಟಕ್ಕೆ ಬಡಿಸುವಳು. ಅಂತೂ ಒಂದು ಮಗುವಿಗೆ ಬದಲಾಗಿ ಎರಡು ಮಕ್ಕಳಿಗೆ ಸೇವೆ ಮಾಡು ವುದಕ್ಕೆ ಆರಂಭಿಸಿದಳು.

” ಅದೇ ಮನುಷ್ಯ ಸ್ವಭಾವವಿರಬೇಕು. ತನಗೆ ಬೇಕಾದ ಒಂದು ಇಲ್ಲದಿದ್ದರೆ ಅದನ್ನು ಪಡೆಯುವುದು ಅಸಾಧ್ಯವೆನ್ನಿಸಿದರೆ ಅದಕ್ಕೆ ಪ್ರತಿಯಾಗಿ ಮತ್ತೊಂದನ್ನು ಇಟ್ಟುಕೊಂಡು, ಅದೇ ಇದು ಎಂದು ಕೊಳ್ಳುವುದು.

“ನದಿಯಲ್ಲಿ ಹರಿದು ಮುಂದೆ ಹೋದ ನೀರಿನ ಎಡೆಯನ್ನು ಹಿಂದಿನಿಂದ ಬಂದ ನೀರು ಹಿಡಿಯುತ್ತದೆ. ಮೇಲಿನಿಂದ ನೋಡು ವವರಿಗೆ, ನದಿಯಲ್ಲಿಳಿದಿರುವವರಿಗೆ, ಎಲ್ಲರಿಗೂ ಹೊಸ ನೀರು ಬರುತ್ತಿ ರುವುದು ಕಾಣಿಸುತ್ತದೆ: ಗೊತ್ತಿದೆ. ಆದರೂ ಅದನ್ನು ಹಳೆಯದೆಂದೇ, ಹಳೆಯದೂ ಹೊಸದೂ, ಒಂದೇ ಎಂದೇ ಭಾವಿಸುವುದೇ ಅಭ್ಯಾಸ.

ಕೆಂಪಿಗೂ ಹಾಗೆಯೇ ಆಯಿತು. ಮಲ್ಲಿಗೆ ಬದಲಾಗಿ ಮಲ್ಲಿ ಬೇಕಾಗಿ, ಒಂದಕ್ಕೆರಡು ಬಂದಾಗ ಮನಸ್ಸಿಗೆ ಏನೋ ಒಂದಿಷ್ಟು ಆಪ್ಯಾಯನವಾಯಿತು ನಿಜ: ಮಾದಿಯನ್ನು ಚಿಕ್ಕಮಲ್ಲಿ ಎಂದು ಕರೆದಾಗ ಅವಳಿಗೆ ಇನ್ನೂ ಆಪ್ಯಾಯನನಾಯಿತು. ಅದೂ ನಿಜ. ಆದರೂ, ಚಿಕ್ಕಮಲ್ಲಿಯನ್ನು ಕರೆಯುವಾಗಲೆಲ್ಲ ಎಲ್ಲೋ ದೂರದಲ್ಲಿರುವ ಮಲ್ಲಿಯ ನೆನೆಪು ಮಾತ್ರ ಬರದೆ ಇರುತ್ತಿರಲಿಲ್ಲ.

ಮಲ್ಲಣ್ಣ ಹೆಂಡತಿಯ ಮನಸ್ಸನ್ನು ಬಲ್ಲ: ಗಾಯವಿರುವುದು ಗೊತ್ತು. ತನ್ನ ಮನಸ್ಸಿನಲ್ಲಿರುವ ನೋವೂ ಕಳೆದು ಕೊಳ್ಳಲಾರ. ಆದರೂ ತೇಪೆ ಹಾಕುವುದಕ್ಕೆ ಬಲು ಬಲು ಯತ್ನ ಮಾಡುತ್ತಿದ್ದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುನ್ನಡೆಸು ಬಾ
Next post ಬಳ್ಳೋಳ್ಳಿ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…