ಬಂತು; ನಾಗರಪಂಚಮಿಯು ಬಂತು. ಮಳೆಗಾಲ-
ವುಯ್ಯಾಲೆಯಾಡುತಿದೆ; ಜಿದ್ದಿನಲಿ ಹೂಬಿಸಿಲು
ಎದ್ದು ಬಿದ್ದೇಳುತಿದೆ. ಸುತ್ತು ಹಚ್ಚನೆ ಹಸಿರು
ನಿಂತು ತಲೆದೂಗುತಿದೆ, ಸವಿಸವಿದು ನೊರೆವಾಲ
ಮಿಡಿನಾಗರವು ತೂಗುವಂದದಲಿ. ಇದು ಸಾಲ-
ದೆನುವಂತೆ ಹಸುಮಕ್ಕಳೊಡನೆ ಹಿರಿಯರು ಬಹರು
ಉಯಾಲೆಯಾಡಲಿಕೆ. ಸಂತಸದ ಅರೆಮೊಹರು
ಅರಳಿಸಿದೆ ಮನಗಳನು. ಕಾಲ ಲೀಲಾಲೋಲ!
ಪಂಚಮಿಯ ದಿನ ನಾಗ ಕಚ್ಚಿ ಕೊಲ್ಲುವ ನರನು
ನೃಪತಿಯಾಗುವನೆಂದು ತಿಳಿದ ಹಳ್ಳಿಗನೊಬ್ಬ
ಒಂದು ಹುತ್ತನು ಸಾರಿ ಶ್ರದ್ಧೆಯಲಿ ಹಿರಿದೆಳೆದ
ಕೈಯೆಲ್ಲ ರಕ್ತಮಯವಾಗಿಸುವ ನಾಗವನು.
ಜನರೆಲ್ಲ ಮರುಗಿದರು. ಗೋಳಿಟ್ಟು ಅವನಳಿದ.
ಸಂಜೆಗಾಯ್ತಂತ್ಯವಿಧಿ. ಇಂತು ಮುಗಿದಿತು ಹಬ್ಬ.
*****