ಚಿನ್ನೂ,
ಹಿತೈಷಿಗಳು, ಸ್ನೇಹಿತರು, ಹತ್ತಿರದಿಂದ ಬಲ್ಲವರು ನನ್ನ ಬದುಕು, ನಾನು ಬದುಕಿದ ರೀತಿಗೆ ಹೋರಾಟವೆಂದುಕೊಂಡಿದ್ದರು. ಅಂತಹುದ್ದೇನು ಇರಲಿಲ್ಲ. ಅವರವರ ಬದುಕು ಅವರವರಿಗೆ ಹೋರಾಟವೆಂದೇ ಭಾಸವಾಗುತ್ತದೆ. ನಾನು ಯುದ್ಧ ಮಾಡಿದ ವೀರಳಲ್ಲ, ಯಾವ ಸೆಲಿಬ್ರಿಟಿಯೂ ಅಲ್ಲ, ಕ್ರಾಂತಿಕಾರಿಯೂ ಅಲ್ಲ. ನನ್ನ ವೈದ್ಯಕೀಯ ವೃತ್ತಿಯನ್ನು ಪ್ರೀತಿಸಿ, ಪ್ರೀತಿಯಿಂದ ವೃತ್ತಿಯನ್ನು ನಿಭಾಯಿಸಿದ್ದೆ, ನಿರ್ವಹಿಸಿದ್ದೆ ಅಷ್ಟೇ. ನನ್ನ ಹೃದಯದಲ್ಲಿ ಬುಗ್ಗೆಯಂತೇಳುತ್ತಿದ್ದ ಪ್ರೀತಿ, ಭಾವುಕತೆಯನ್ನು ಹಂಚಿಕೊಳ್ಳಬೇಕಿತ್ತು. ಪ್ರೀತಿಯನ್ನು ಕೊಟ್ಟು ಪ್ರೀತಿಯನ್ನು ಪಡೆಯಬೇಕಿತ್ತು. ಎಂದೂ ಬತ್ತದ ತೊರೆಯಂತಿತ್ತು. ಆದರೆ ನನ್ನ ಮನೆಯವರಿಗೆ, ನನ್ನ ಹತ್ತಿರವಿದ್ದವರಿಗದರ ಬೆಲೆ ಅರ್ಥವಾಗಲಿಲ್ಲ. ಅದು ನನ್ನ ದೌರ್ಬಲ್ಯವೆಂದು ಕೊಂಡು ದಬ್ಬಾಳಿಕೆ ನಡೆಸಿದರು. ಭಾವುಕತೆ, ಭಾವನೆಗಳೇ ಅವರಲ್ಲಿರಲಿಲ್ಲ. ಎಲ್ಲಾ ಬರೀ ಲೆಕ್ಕಾಚಾರ…! ಯಾರೂ ನನ್ನೆದೆಯ ಎಲುಬುಗಳನ್ನು ಸೀಳಿ, ಹೃದಯವನ್ನು ಮೃದುವಾಗಿ ನೇವರಿಸಲೇ ಇಲ್ಲ. ಎಲ್ಲಾ Superficial… ಬರಿ Superficial… ಬೂಟಾಟಿಕೆ… ನಾಟಕ.
ಯೋಚಿಸುತ್ತಾ ಕುಳಿತಿದ್ದ ನನಗೆ ಕನಕಪುರ ಬಂದು ತಲುಪಿದ್ದು ಗೊತ್ತೇ ಆಗಿರಲಿಲ್ಲ. ನಾನು ಕೆಲಸ ಮಾಡುತ್ತಿದ್ದ ಸರ್ಕಾರಿ ಆಸ್ಪತ್ರೆ ಮತ್ತು ವಸತಿ ಗೃಹ ಹತ್ತಿರದಲ್ಲೇ ಇತ್ತು. ಬಸ್ ಸ್ಟಾಪಿಗೆ ತೀರಾ ಹತ್ತಿರದಲ್ಲಿತ್ತು. ಹೋಗಿ ಸೇರಿಕೊಂಡೆ.
ಅಂದು ರೋಗಿಗಳು ರಾತ್ರಿ ಕಡಿಮೆಯಿದ್ದುದರಿಂದ, ಅವ್ವನಿಗೆ ಫೋನು ಮಾಡಿದೆ. ವಿಚ್ಛೇದನ ಸುದ್ದಿ ಅವ್ವನಿಗೆ ತಿಳಿಸಬೇಕಿತ್ತು. ಫೋನ್ ಮಾಡಿದ್ದೆ. ಅವ್ವ ನನ್ನ ತಂಗಿ ಮಗಳ ಮನೆಯಲ್ಲಿ ಎಲ್ಲರೂ ಒಟ್ಟಾಗಿ ಸೇರಿದ್ದರು.
“ಹಲೋ…”
“ನಾನು ಅವ್ವ ಎಲ್ಲಿ?” ಕೇಳಿದ್ದೆ.
“ಎಲ್ರೂ ಊಟ ಮಾಡ್ತಾಯಿದ್ದಾರೆ…”
“ಹೌದಾ…? ಏನು ವಿಶೇಷ?”
“ಇವತ್ತು ಹುಣ್ಣಿಮೆ ಅಲ್ಲಾ? ಹೋಳಿಗೆ ಮಾಡಿದ್ದೇನೆ. ಹೀಗಾಗಿ ಎಲ್ಲರೂ ಒಟ್ಟಿಗೆ ಸೇರಿದ್ದೇವೆ… ತಡೀರಿ ಅವ್ವಂಗೆ ಫೋನ್ ಕೊಡ್ತೀನಿ…” ಎಂದವಳು ಹೇಳುತ್ತಿದ್ದ ಹಾಗೆಯೇ,
“ನೀನೇ ಮಾತಾಡಿ ಕಟ್ ಮಾಡೇ… ನಾನೇನಂತ ಅವಳ ಹತ್ರ ಮಾತಾಡ್ಲಿ…” ಎಂಬ ಅವ್ವನ ಮಾತುಗಳು ನನ್ನ ತಂಗಿ ‘ಆನ್’ ಮಾಡಿ ಹಿಡಿದಿದ್ದ ಫೋನಿನಿಂದ ಕೇಳಿಸಿತ್ತು.
“ಮಾತಾಡು… ಅಷ್ಟು ದೂರದಿಂದ ಮಾತಾಡ್ತಾ ಇದ್ದಾರೆ…” ಎಂದವಳು ಹೇಳಿದ್ದು ಕೇಳಿಸಿತ್ತು.
“ಹೇಳಿದಷ್ಟು ಮಾಡು… ಅವಳು ಯಾರಿಗೇನು ಮಾಡಿದ್ದಾಳೇಂತ ನಾನು ನೆನಪಿಸಿಕೊಳ್ಳಬೇಕು? ಅವಳಿಲ್ಲಿಗೆ ಯಾಕೆ ಬರ್ತಾಳಂತೆ? ಯಾಕ್ ಫೋನ್ ಮಾಡ್ತಾಳಂತೆ…” ನನ್ನ ಅವ್ವನ ನುಡಿಗಳು.
ಮುಂದೆ ಕೇಳಿಸಿಕೊಳ್ಳುವಷ್ಟು ಧೈರ್ಯ, ತಾಳ್ಮೆ ನನ್ನಲ್ಲಿರಲಿಲ್ಲ. ನನ್ನ ಮೊಬೈಲ್ ಫೋನ್ ನನ್ನ ಕೈಯಿಂದ ಜಾರಿ ಕೆಳಗೆ ಬಿದ್ದಿತ್ತು. ಬ್ಯಾಟರಿ, ಸಿಮ್ ಕಾರ್ಡ್‌ಗಳು ಚೆಲ್ಲಿದಂತೆ ಹರಡಿ ಬಿದ್ದಿದ್ದವು.
ಮೈಮೇಲೆ ಮಂಜು ಸುರಿದಂತಾಗಿತ್ತು…!
ಯಾವುದೋ ಕಂಡರಿಯದ ದೊಡ್ಡ ಬಯಲಿನಲ್ಲಿ ಒಬ್ಬಳನ್ನೇ ಎಲ್ಲರೂ ತಳ್ಳಿ ನಿಲ್ಲಿಸಿ ಹೋಗಿಬಿಟ್ಟರೆಂಬ ಭಯಾನಕ ಭ್ರಮೆಯಿಂದ ನಡುಗತೊಡಗಿದ್ದೆ. ಚಿನ್ನೂ, ನಾನಿನ್ನೇನು ಮಾಡಬೇಕಿತ್ತು? ಮನೆಯವರೆಲ್ಲರ ನೋವು-ನಲಿವುಗಳಿಗೆ, ಕಷ್ಟ-ಸುಖಗಳಿಗೆ, ಆರ್ಥಿಕವಾಗಿ, ಮಾನಸಿಕವಾಗಿಯೂ ಸ್ಪಂದಿಸುತ್ತಿದ್ದೆ. ಅವರೊಟ್ಟಿಗಿರಲಿಲ್ಲ ಅಷ್ಟೇ… ದೂರದ ಬೆಂಗಳೂರಿನಲ್ಲಿದ್ದೆ. ಅವರಿಗೆ ಬೇಕಾದರೆ ಸಮಯ ಬಂದಾಗ ಅವರಿಗೂ ಬೆಂಗಳೂರು ದೂರವೆನ್ನಿಸುತ್ತಿರಲಿಲ್ಲ. ವಾರಗಟ್ಟಲೆ, ತಿಂಗಳುಗಟ್ಟಲೇ ಇದ್ದು, ಉಂಡು-ತಿಂದುಕೊಂಡು ಹೋಗುವಾಗ ನನಗೆ ಸಮಾಧಾನವಾಗುತ್ತಿತ್ತು. ಆದರೆ ಬೆಂಗಳೂರಿನಿಂದ ಊರಿಗೆ ಹೋದ ಕೆಲವು ದಿನಗಳಲ್ಲಿಯೇ ಅವರಿಗೆ ಅದು ಮರೆತು ಹೋಗುತ್ತಿತ್ತು. ಕಾಯಿಲೆಗಳು ಬಂದಾಗ ತಿಂಗಳುಗಟ್ಟಲೇ ಉಳಿದು ಚಿಕಿತ್ಸೆ ಪಡೆದುಕೊಂಡಿದ್ದು, ಉಂಡಿದ್ದು, ತಿಂದಿದ್ದು ಕೊಂಡು ಹೋಯ್ದಿದ್ದು ಎಲ್ಲವನ್ನೂ ಮರೆತುಬಿಡುತ್ತಿದ್ದರು. ಬೇಕಾದಾಗ ಬಳಸಿ ಬೇಡವಾದಾಗ ತಿಂದು ಎಸೆಯುವ ಬಾಳೆ ಎಲೆಯಂತಾಗಿತ್ತು ನನ್ನ ಸ್ಥಿತಿ. ನಾನು ಮಾಡುತ್ತಿದ್ದುದು ತೋರಿಕೆಯದಲಲ್ಲ ಸಂಬಂಧ, ಪ್ರೀತಿಗಳಿಗಾಗಿ ಎಂದವರಿಗೆ ಅವರಿಗರ್ಥವಾಗಲೇ ಇಲ್ಲ. ನಾನಿರುವುದೇ ಅವರಿಗಾಗಿ ಎಂಬಂತೆ ವರ್ತಿಸುತ್ತಿದ್ದರು. ಅವರವರ ಭಾವಕ್ಕೆ ತಕ್ಕ ಹಾಗೆ ಬದಲಾಗುತ್ತಿದ್ದರು.
ಮನೆಗೆ ಹಿರಿಯ ಮಗಳಾಗಿ, ಮನೆಗೆ ಮುಂಬಾಗಿಲಾಗಿ ಇರಬಾರದು. ಎಲ್ಲರೂ ಒದ್ದು ಬರುವುದೇ ಧರ್ಮವೆಂದುಕೊಂಡುಬಿಡುತ್ತಾರೆ. ಊರು ತುಂಬಾ ಅವರೇ ಅಪಪ್ರಚಾರ ಮಾಡಿ ತಾವು ಮಾತ್ರ ಸಭ್ಯರೆಂದು ಎನ್ನಿಸಿಕೊಳ್ಳುತ್ತಿದ್ದರು. ನಾನು ಊರಿಗೆ ಹೋದರೆ ನನ್ನ ತಂಗಿಯ ಗಂಡ ಕೂಡಲೇ ಬ್ರೀಫ್‌ಕೇಸಿನಲ್ಲಿ ಬಟ್ಟೆ ತುಂಬಿಸಿಕೊಂಡು ಕೂಡಲೇ ಹೊರಟುಬಿಡುತ್ತಿದ್ದರು. ನಾನು ಹೋದರೆ ಅದು ಅವರಿಗೆ ಅಪಮಾನವಾಗುತ್ತಿತ್ತಂತೆ. ರಾತ್ರಿ ಗಂಡ ಬಾರದಿದ್ದಾಗ ನನ್ನ ತಂಗಿ ಕಂಗಾಲಾಗುತ್ತಾಳೆ. ಆದ್ದರಿಂದ ನಾನು ಅಲ್ಲಿಗೆ ಹೋಗಲೇಬಾರದಂತೆ!
ನಾನು ಹೋಗುತ್ತಿದ್ದುದು ನನ್ನ ತಾಯಿಯನ್ನು ನೋಡಲು, ಮಾತನಾಡಿಸಲು. ಆದರೆ ಆಕೆಯೇ ಹಾಗೆ ಹೇಳಿದ ಮೇಲೆ ನಾನೇನು ಮಾಡಬೇಕಿತ್ತು? ಹೌದು… ನಾನು ತಪ್ಪು ಮಾಡಿದ್ದೆ. ಅದು ನನ್ನ ವೈಯಕ್ತಿಕ ಜೀವನ ಹಾಳು ಮಾಡಿತ್ತು. ಯಾರೂ ಮಾಡದ ತಪ್ಪಾಗಿತ್ತಾ? ಹೆತ್ತ ತಾಯಿ ದ್ವೇಷ ಮಾಡುತ್ತಾಳೆಂದರೆ ಯಾರೂ ನಂಬಲ್ಲ. ನಾನು ಈಗಲೂ ನಂಬಿಲ್ಲ. ಸಿಟ್ಟು, ಆಕ್ರೋಶ ಅವ್ವನಿಗಿತ್ತು. ತಂಗಿಯ ಮೇಲಿನ ಮೊಮ್ಮಕ್ಕಳ ಮೇಲಿನ ವ್ಯಾಮೋಹ ಆಕೆಗೆ ಹಾಗೆ ಮಾಡಿಸಿತ್ತಾ. ನಾನು ಮಗಳೇ ಆಗಿರಲಿಲ್ಲವೇ? ಯಾಕೆ ಹೀಗಾಗ್ತಿದೆ. ನನಗೆ ಏನೂ ತೋಚದಂತಾಗಿತ್ತು. ಆ ರಾತ್ರಿಯಿಡಿ ಡ್ಯೂಟಿ ರೂಮಿನಲ್ಲಿ ಕುಳಿತು ಅತ್ತುಬಿಟ್ಟೆ.
ನಾನು ಹೋದರೆ ಅವರುಗಳಿಗೆ ಇಷ್ಟು ಸಂಕಟವಾದರೆ ನಾನಿನ್ನು ಹೋಗಲೇಬಾರದು ಎಂಬ ನಿರ್ಧಾರಕ್ಕೆ ಬಂದುಬಿಟ್ಟೆ. ಹಾಗಾದರೆ ಹಗಲು- ರಾತ್ರಿಯೆನ್ನದೇ ದುಡಿದು ದಣಿಯುವುದಾದರೂ ಯಾಕೆ? ಎಲ್ಲರನ್ನೂ ಎಲ್ಲವನ್ನೂ ಕಳೆದುಕೊಂಡುಬಿಟ್ಟಿದ್ದೆ. ದುಃಖ, ಅಳುವೊಂದನ್ನು ಬಿಟ್ಟು ಮರುದಿನ ಬೆಳಿಗ್ಗೆ ಆಫೀಸಿಗೆ ಹೋಗಿ ಕೆಲಸಕ್ಕೆ ರಾಜೀನಾಮೆ ಬರೆದುಕೊಟ್ಟುಬಿಟ್ಟೆ. ನಾನೆಲ್ಲಿದ್ದೇನೆ. ಏನು ಮಾಡುತ್ತಿದ್ದೇನೆಂದು ಅವರಿಗಿರಲಿ ಯಾರಿಗೂ ತಿಳಿಯಬಾರದೆಂದು ತೀರ್ಮಾನಿಸಿದ್ದೆ.
ರಾಜೀನಾಮೆ ಬರೆದುಕೊಟ್ಟೇನೋ ಬಂದಾಗಿತ್ತು. ಆದರೆ ಬದುಕು ಸಾಗಿಸಲು ಹಣ ಬೇಡವೆ? ನಿವೃತ್ತಿ ಸ್ವೀಕಾರವಾಗಿ, ನಿವೃತ್ತಿ ವೇತನ ಬರಲು ಇನ್ನೂ ತಿಂಗಳುಗಟ್ಟಲೇ ಕಾಯಬೇಕಾಗಿತ್ತು. ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ಕೆಲಸಕ್ಕೆ ಸೇರಿದ್ದೆ. ದಿನಾ ದಿನಾ ಓಡಾಟ, ಬೇಸರ, ಆಯಾಸ ತರಿಸಿತ್ತು. ಆ ಕೆಲಸವನ್ನು ಬಿಟ್ಟುಬಿಟ್ಟೆ, ನಂತರ ಭಟ್ಕಳ, ಶಿರಸಿ ಎಂದೂ ಆರು ತಿಂಗಳು ಅಲೆದಾಡಿದ್ದೆ ಹುಚ್ಚಿಯಂತಾಗಿದ್ದೆ. ನಂತರ ನನಗೆ ತಿಳಿದಿದ್ದು ನನ್ನ ರಾಜೀನಾಮೆ ಸ್ವೀಕೃತವಾಗಿರಲಿಲ್ಲ. ವೃತ್ತಿಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆಯಿರಲಿಲ್ಲ. ಆದಾಗ್ಯೂ ರಾಜೀನಾಮೆ ತಡೆಹಿಡಿದಿದ್ದರು. ನಾನಿನ್ನು ಕೆಲಸ ನಿರ್ವಹಿಸುತ್ತಿದ್ದ ವೇಳೆಯಲ್ಲಿ ರಾಜೀನಾಮೆ ಸ್ವೀಕೃತವಾಗಬೇಕಿತ್ತಂತೆ. ಮತ್ತೆ ಕನಕಪುರಕ್ಕೆ ಹೋಗಿ ಕೆಲಸ ನಿರ್ವಹಿಸತೊಡಗಿ ಮತ್ತೆ ರಾಜೀನಾಮೆ ಬರೆದುಕೊಟ್ಟು ಬೆಂಗಳೂರಿನ ಮನೆಗೆ ಬಂದೆ. ಮುಂದೇನು? ಊರಿಂದಲೂ ಯಾರೂ ನನ್ನನ್ನು ಸಂಪರ್ಕಿಸಿರಲಿಲ್ಲ. ನಾನೂ ಪ್ರಯತ್ನ ಮಾಡಿರಲಿಲ್ಲ. ನನ್ನ ಬದುಕು ನನ್ನದು, ಅವರದ್ದು ಅವರದು ಎಂಬ ತೀರ್ಮಾನಕ್ಕೆ ಬಂದಿದ್ದೆ. ಒಂಟಿಯಾಗಿ ಬಿಟ್ಟಿದ್ದೆ. ಖಿನ್ನತೆಗೊಳಗಾಗ ತೊಡಗಿದ್ದೆ. ಆಗೆಲ್ಲಾ ನನ್ನ ದುಃಖ ಹಂಚಿಕೊಳ್ಳುತ್ತಿದ್ದುದು ನಾನು ದಿನವೂ ಬರೆಯುತ್ತಿದ್ದ ದಿನಚರಿಯ ಪುಸ್ತಕ. ನನ್ನ ನೋವನ್ನೆಲ್ಲಾ ಬರೆದುಕೊಳ್ಳುತ್ತಿದ್ದೆ. ಹಂಚಿಕೊಳ್ಳುವುದರಲ್ಲಿ ನನಗೆ ನಂಬಿಕೆಯಿರಲಿಲ್ಲ.
ಆಗ ನನ್ನ ನೆರವಿಗೆ ಬಂದಿದ್ದು, ಸಿಹಿ-ಕಹಿ ಗೀತಾ ಮತ್ತು ಅವರ ಪತಿ ಚಂದ್ರು, ಅವರು ದೈನಿಕ ಧಾರಾವಾಹಿಯೊಂದನ್ನು ನಿರ್ಮಿಸುವ ಹಂತದಲ್ಲಿದ್ದರು. ಆ ಧಾರಾವಾಹಿಗಾಗಿ ಸಂಭಾಷಣೆ ಬರೆದುಕೊಡಲು ಕೇಳಿದ್ದರು. ನಾನು ಒಪ್ಪಿಕೊಂಡೆ. ಅದು ನನ್ನ ಒಂಟಿತನ ಖಿನ್ನತೆಯನ್ನು ಓಡಿಸಲು ನೆರವಾಗಿತ್ತು. ಅದಕ್ಕಿಂತ ಹೆಚ್ಚಾಗಿ ಅವರ ಸ್ನೇಹ, ಪ್ರೀತಿ, ಆತ್ಮೀಯತೆ ನನ್ನನ್ನು ಹೊಸಬಳನ್ನಾಗಿ ಮಾಡಿತ್ತು. ಎಂದೆಂದಿಗೂ ಅವರಿಗೆ ಋಣಿಯಾಗಿರುತ್ತೇನೆ. ಅವರುಗಳ ಜೊತೆ ಕೆಲಸ, ಸ್ನೇಹ ಎಲ್ಲವೂ ನನ್ನನ್ನು, ನನ್ನ ಏಕಾಂಗಿತನವನ್ನು ಹೋಗಲಾಡಿಸಿತ್ತು. ಆರ್ಥಿಕವಾಗಿ ಮಾನಸಿಕವಾಗಿ ನಾನು ಮೊದಲಿನಂತೆ ಲವಲವಿಕೆಯಿಂದ ಇರುವಂತಾಗಿಬಿಟ್ಟಿದ್ದೆ. ಸಾಹಿತ್ಯ ಸಭೆ-ಸಮಾರಂಭಗಳಿಗೆ ಮುಂಚಿನಂತೆ ಹೋಗತೊಡಗಿದ್ದೆ. ಎರಡು ವರ್ಷಗಳ ಕಾಲ ಬರೆದುಕೊಟ್ಟಿದ್ದೆ.
*****
ಮುಂದುವರೆಯುವುದು