ಈ ಮಧ್ಯೆ ನನ್ನ ಬದುಕಿನಲ್ಲಿ ಮತ್ತೊಂದು ಜೀವದ ಪ್ರವೇಶವಾಗಿತ್ತು. ಅದು ಯಾರು ಗೊತ್ತಾ? ನೀನೇ ಚಿನ್ನೂ… ನಿನ್ನ ತಾಯಿಗೆ ಮದುವೆಯಾಗಿ ಹತ್ತು ವರ್ಷಗಳಾದರೂ ಮಕ್ಕಳಾಗಿರಲಿಲ್ಲಾಂತ ಚಿಕಿತ್ಸೆಗಾಗಿ ನನ್ನ ಬಳಿಗೆ ಬಂದಿದ್ದಳು. ನಾನು ಚಿಕಿತ್ಸೆ ನೀಡಿದ ನಂತರವೇ ನೀನು ಅವಳ ಗರ್ಭಾಶಯದಲ್ಲಿ ಅಂಕುರಿಸತೊಡಗಿದ್ದೆ. ನಿನ್ನ ತಾಯಿ-ತಂದೆಯರ ಆನಂದ ಹೇಳತೀರದು. ಅವರಿಗೆ ನನ್ನ ಮೇಲೆ ಪ್ರೀತಿಯಲ್ಲ ನಂಬಿಕೆ, ವಿಶ್ವಾಸ ಮೂಡಿತ್ತು. ಜೊತೆಗೆ ಗೌರವವೂ ಕೂಡಾ. ನಿನ್ನ ತಾಯಿಯ ಗರ್ಭದಿಂದ ನಿನ್ನನ್ನು ಹೊರಗೆ ತಂದವಳು ನಾನೇ ಆಗಿದ್ದೆ. ಎಷ್ಟು ಮುದ್ದಾಗಿದ್ದೆ ನೀನು!
ಎಷ್ಟು ಶಸ್ತ್ರ ಕ್ರಿಯೆಗಳನ್ನು, ರೋಗಿಗಳನ್ನು ನಾವು ನೋಡಿದವರನ್ನೆಲ್ಲಾ ನೆನಪಿಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಆರು ತಿಂಗಳ ಅವಧಿಯ ಬಾಣಂತಿತನವನ್ನು ಮುಗಿಸಿಕೊಂಡು ಬೆಂಗಳೂರಿಗೆ ಬಂದಿದ್ದ ನಿನ್ನನ್ನು ತೋರಿಸಲು ಧನ್ಯವಾದಗಳನ್ನು ತಿಳಿಸಲು ನಿನ್ನ ಅಮ್ಮ ನಿನ್ನನ್ನು ಎತ್ತಿಕೊಂಡು ಆಸ್ಪತ್ರೆಗೆ ಬಂದಿದ್ದರು. ಯಾರು ಕರೆದು ಮಾತನಾಡಿಸಿದರೂ ನೀನು ಮುದ್ದು ಮುದ್ದಾಗಿ ನಗುತ್ತಿದ್ದೆ. ಆ ನಗು ನಿನ್ನ ಮುಖದ ತುಂಬ ಹರಡಿ ಕಣ್ಣುಗಳಲ್ಲಿ ಮಿನುಗುತ್ತಿತ್ತು. ನಾನು ನಿನ್ನನ್ನು ಎತ್ತಿಕೊಳ್ಳಲು ಕೈಗಳನ್ನು ಚಾಚಿದ್ದೆ. ನೀನು ನಗುತ್ತಲೇ ನನ್ನ ತೋಳುಗಳಿಗೆ ಬಂದಿದ್ದೆ. ದುಂಡು ದುಂಡಾಗಿದ್ದ ನೀನು ಥೇಟ್ ನಿನ್ನ ಅಪ್ಪನ ತರಹಾವೇ ಇದ್ದೆ.
“ಏನಾದ್ರೂ ಪ್ರಾಬ್ಲೆಮ್ ಇದೆಯಾ?” ನಿನ್ನ ತಾಯಿಯನ್ನು ಕೇಳಿದ್ದೆ.
“ಊಹೂಂ… ಏನೂ ಇಲ್ಲ. ಮಗೂನ ತೋರಿಸ್ಕೊಂಡ್ ಹೋಗೋಣಾಂತ ಬಂದಿದ್ದೆ. ನೀವೇ ತಾನೆ ಇವಳು ಖಾಲಿಯಿದ್ದ ನಮ್ಮ ಮನೆಗೆ ಬರುವಂತೆ ಮಾಡಿದ್ದು? ನಿಮಗೆ ಏನೂ ಕೊಟ್ಟರೂ ಸಾಲದು” ಎಂದು ಕೃತಜ್ಞತೆಯನ್ನು ತಿಳಿಸಲು ಬಂದಿದ್ದಳು.
“ಏನು ಕೊಡೋಕೂಂತ ಅಂಡ್ಕೊಂಡಿದ್ದೀರಾ?”
“ಏನಾದ್ರೂ ಕೇಳಿ…”
“ಈ ಮಗೂನಾ ನಂಗೆ ಕೊಡ್ತೀರಾ?”
“ತಗೊಳ್ಳಿ… ನೀವೇ ಕೊಟ್ಟಿದ್ದು. ನೀವೆ ಇಟ್ಕೊಳ್ಳಿ…”
-ಅವಳ ಮಾತಿಗೆ ಚಕಿತಳಾಗಿದ್ದೆ. ಅವಳ ಕಣ್ಣುಗಳನ್ನೇ ನೋಡಿದ್ದೆ. ಅವಳು ತಮಾಷೆಗಾಗಿ ಹೇಳಿದ್ದಾಳೆಂದು ಅನ್ನಿಸಿರಲಿಲ್ಲ.
“ಅಯ್ಯೋ… ತಮಾಷೆ… ಮಾಡಿದೆ. ಹತ್ತು ವರ್ಷಗಳ ತಪಸ್ಸಿನ ಫಲ ಇದು. ನಿಮ್ಮಲ್ಲೇ ಇರಲಿ…” ಎಂದು ಹೇಳಿದ್ದೆ.
ಬೌರಿಂಗ್ ಆಸ್ಪತ್ರೆಯ ಆಸುಪಾಸಿನಲ್ಲೇ ನಿಮ್ಮ ಮನೆಯಿತ್ತು. ನಿನ್ನಪ್ಪ ಪೊಲೀಸ್ ಇಲಾಖೆಯಲ್ಲಿದ್ದುದರಿಂದ ಅಲ್ಲಿಯೇ ವಸತಿ ಗೃಹಗಳಲ್ಲಿ ನಿಮ್ಮ ಮನೆ. ಆಗಾಗ್ಗೆ ನಿನ್ನ ತಾಯಿ ಕಲ್ಪನಾ ನಿನ್ನನ್ನು ಕರೆದುಕೊಂಡು ಬರುತ್ತಿದ್ದಳು. ನಿನ್ನ ಆ ನಗುಮುಖ,ಗುಂಡು ಕೆನ್ನೆಗಳು ನನ್ನ ಹೃದಯವನ್ನು ಕದ್ದಿತ್ತು. ನನ್ನ ಪಕ್ಕದಲ್ಲಿಯೇ ಚೆನ್ನಾಗಿ ನಿದ್ದೆ ಮಾಡಿಬಿಡುತ್ತಿದ್ದೆ. ಆಸ್ಪತ್ರೆಗೆ ಹೋಗುವುದಾಗಿ ಹೇಳುತ್ತಿದ್ದರೆ ನಿನ್ನ ತಾಯಿ ಬಂದು ಕರೆದುಕೊಂಡು ಹೋಗುತ್ತಿದ್ದಳು. ಎಷ್ಟು ಬೇಗನೆ ಬೆಳೆದುಬಿಟ್ಟೆ ನೀನು! ನೀನು ಬಂದಿದ್ದು ನನ್ನ ಬದುಕಿನಲ್ಲಿ ಬೆಳದಿಂಗಳಾಗಿ ಬಂದಿದ್ದೆ. ಅವರ್ಣನೀಯ ಆನಂದವನ್ನು ನೀಡಿದ್ದೆ. ಅವನನ್ನು ‘ಅಪ್ಪಾ…’ ಎಂದು ನೀನು ಕರೆದರೆ ನನ್ನನ್ನು ‘ಅವ್ವಾ…’ ಎನ್ನುತ್ತಿದ್ದೆ. ನೀನು ನನ್ನ ಮನೆಗೆ ಅಲ್ಲ ನಿನ್ನ ಮನೆಗೂ ಲಕ್ಷ್ಮಿಯ ಹಾಗೆ ಬಂದಿದ್ದೆ. ನಾನು ಜಯನಗರದಲ್ಲಿ ಅಪಾರ್ಟಮೆಂಟೊಂದನ್ನು ಖರೀದಿಸಿದೆ. ಉಳಿದ ಹಣ ಕಂತಿನಲ್ಲಿ ಕೊಡುವಂತೆ ಹೇಳಿದ್ದರು. ಆ ಮನೆಗಳ ಒಡೆಯ Ranks Groups Builder ಆಗಿದ್ದರು. ಅವರ ಮಗನ ಹೆಂಡತಿ ನಮ್ಮಲ್ಲಿ ಕೆಲಸ ಮಾಡುತ್ತಿದ್ದ ಡಾಕ್ಟರ್ ಅರ್ಚನಾ. ಅವಳ Recಚomendation ಪ್ರಭಾವದಿಂದ ನನಗೆ ಆ ಮನೆ ಸಿಕ್ಕು ಉಳಿದ ಹಣವನ್ನು ಕಂತುಗಳಲ್ಲಿ ಕಟ್ಟುವ ಹಾಗೆ ಆಗಿತ್ತು. ನಿನಗೆ ಮೂರು ವರ್ಷಗಳು ತುಂಬುತ್ತಿದ್ದಂತೆಯೇ ಜಯನಗರದ Kindergarten School ಗೆ ಸೇರಿಸಿದೆವು. ನಿನ್ನ ಮನೆಯವರ ಸಂಭ್ರಮ ನೋಡಬೇಕಿತ್ತು. ನಿನ್ನನ್ನು ಸ್ಕೂಲಿಗೆ ಕಳುಹಿಸಲು ನನ್ನ ಗಂಡ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದ. ಮುಂದಿನ ಸೀಟು ಯಾವಾಗಲೂ ನಿನ್ನದೇ ಆಗಿರುತ್ತಿತ್ತು. ಅವನೂ ನಿನ್ನನ್ನು ಎದೆಯ ಮೇಲೆ ಮಲಗಿಸಿಕೊಂಡು ಮುದ್ದು ಮಾಡುತ್ತಿದ್ದ. ನನಗೆ ಮಕ್ಕಳೆಂದರೆ ತುಂಬಾ ಇಷ್ಟವಿತ್ತು. ಆದರೆ ಈ ಕುಡುಕನ ಹಾವಳಿಯಲ್ಲಿ ನನ್ನ ಮಕ್ಕಳು ಬೆಳೆಯುವುದು ನನಗಿಷ್ಟವಿರಲಿಲ್ಲ. ಆದರೆ ಅವನು ನಿನ್ನನ್ನು ಪ್ರೀತಿಸುವುದು ಮುದ್ದು ಮಾಡುವುದನ್ನು ಕಂಡಾಗ ನಾನು ತಪ್ಪು ಮಾಡಿಬಿಟ್ಟೆನಾ? ಎಂದೆನ್ನಿಸಿತ್ತು. ಆದರೆ ಅವನು ಕುಡಿಯುವುದನ್ನು ಬಿಟ್ಟಿರಲೇ ಇಲ್ಲ. ಅದು ಅವನ ‘ಕೆಲಸ…’ವೆಂದು ತಿಳಿದುಕೊಂಡಿದ್ದೆ. ನೀನು ಬೇಗ ಮಾತು ಕಲಿತುಬಿಟ್ಟಿದ್ದೆ ಮಗಳೇ. ಸ್ವಲ್ಪವೂ ತೊದಲುತ್ತಿರಲಿಲ್ಲ. ಅಸ್ಪಷ್ಟವಾಗಿದ್ದರೂ ನೀನು ಮಾತನಾಡಲು ಪ್ರಯತ್ನಿಸುತ್ತಿದ್ದೆ. ನನ್ನ ಅನುಕರಣೆ ಮಾಡಿಬಿಡುತ್ತಿದ್ದೆ. ನಾನು ಅಡಿಗೆ ಮಾಡಲು ಹೋದರೆ ನೀನೂ ಅಡಿಗೆ ಮಾಡಲು ಬರುತ್ತಿದ್ದೆ. ಸಂಗೀತವೆಂದರೆ ನಿನಗಿಷ್ಟ. ನಿನ್ನದೇ ರೀತಿಯಲ್ಲಿ ಸಂತಸದಿಂದ ಕುಣಿಯುತ್ತಿದ್ದೆ. Sorry… ಡ್ಯಾನ್ಸ್ ಮಾಡುತ್ತಿದ್ದೆ. ಎಂದೂ ರಗಳೆ ಮಾಡಲಿಲ್ಲ. ಅತ್ತಿದ್ದಂತೂ ನೆನಪೇ ಇಲ್ಲ…!
ನಾನು ನಿನಗೆ ಮಕ್ಕಳ ಮನೋವಿಜ್ಞಾನದ ಪುಸ್ತಕ ತಂದಿಟ್ಟುಕೊಂಡು ಹಾಗೆಯೇ ಬೆಳೆಸುವ ಪ್ರಯತ್ನ ಮಾಡುತ್ತಿದ್ದೆ. ರಾತ್ರಿಯೂ ನನ್ನ ಬಳಿ ಇರತೊಡಗಿದ್ದೆ…
ನನ್ನ ಮನೆ ನಿನ್ನ ಸ್ಕೂಲಿಗೆ ಹತ್ತಿರವಾಗಿತ್ತು ಹಾಗಾಗಿ… ನಿನ್ನನ್ನು ಶಿವಾಜಿನಗರದ ಮನೆಗೆ ರಜೆ ದಿನದಂದು ಕರೆದುಕೊಂಡು ಹೋಗುವಂತಾಗಿತ್ತು. ಪಂಚತಂತ್ರದ ಕತೆಗಳನ್ನು ಹೇಳುತ್ತಿದ್ದರೆ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದೆ. ತುಂಬಾ Creativityಯಿದ್ದ ಮಗುವಾಗಿದ್ದೆ. ಜಾಣೆಯಾಗಿದ್ದೆ. ಬೇಗನೆ ಅರ್ಥ ಮಾಡಿಕೊಂಡು ಬಿಡುತ್ತಿದ್ದೆ. ನೀನು ಪ್ರತಿಭಾವಂತೆಯೂ ಆಗಿದ್ದೆ ಮಗಳೇ.
ಒಂದು ದಿನ ಸ್ಕೂಲಿನಿಂದ ಬಂದವಳೇ,
“ಅವ್ವಾ… ಇವತ್ತು ಏನಾಯ್ತು ಗೊತ್ತಾ…?” ಎಂದು ಕಣ್ಣರಳಿಸಿ ಉದ್ವೇಗದಿಂದ ಕೇಳಿದ್ದೆ.
“ಊಹೂಂ…”
“ಇವತ್ತು ಸ್ಕೂಲಿಗೆ… ಹುಲಿ ಬಂದಿತ್ತು ಗೊತ್ತಾ?”
“ಆಂ…? ಹೌದಾ…?”
“ಎಲ್ರೂ ಹೆದರ್ಕೊಂಡ್ ಕ್ಲಾಸ್ ರೂಂ ಒಳಗೆ ಹೋಗಿ ಬಾಗಿಲು ಹಾಕ್ಕೊಂಡು ಬಿಟ್ರು…”
ಮುದ್ದುಮುದ್ದಾಗಿ ತಿರುಗುತ್ತಿದ್ದ ನಿನ್ನ ತುಟಿಗಳನ್ನೇ ನೋಡುತ್ತಿದ್ದೆ. ನಗುವನ್ನು ತಡೆಯಲು ಪ್ರಯತ್ನಿಸಿದ್ದೆ.
“ಆಮೇಲೆ?”
“ನಾನು ಹೋಗಿ… ಗೇಟಿನ ಮೇಲೆ ಕುಳಿತಿದ್ದ ಆ ಹುಲಿಯನ್ನೇ… ಹೀಗೆ ನೋಡಿದೆ…” ಕಣ್ಣು ಕಿರಿದುಗೊಳಿಸಿ ಸಿಟ್ಟಿನ ಮುಖಭಾವವನ್ನು ತೋರಿಸುತ್ತಿದ್ದೆ. ಪುಟ್ಟ ಕೈಗಳನ್ನು ಬೇರೆ ಸೊಂಟದ ಮೇಲಿಟ್ಟುಕೊಂಡಿದ್ದೆ…
“ಆಮೇಲೆ…?”
“ಹುಲಿ ಹೆದರ್ಕೊಂಡ್ ಓಡಿ ಹೋಯ್ತು…”
ನೀನು ಸುಳ್ಳು ಹೇಳುತ್ತಿದ್ದೆ. ಆದರೆ ನನಗದು, ಬೇಸರವಾಗಿರಲಿಲ್ಲ. ಹಿಂದಿನ ರಾತ್ರಿ ಪುಟ್ಟ ಮೊಲ ಮತ್ತು ಸಿಂಹದ ಕತೆ ಹೇಳಿದ್ದೆ. ಹೇಗೆ ಜಾಣ ಮೊಲ ಸಿಂಹವನ್ನು ಬಾವಿಗೆ ಅದರ ಪ್ರತಿಬಿಂಬ ತೋರಿಸಿ ಬಾವಿಯೊಳಗೆ ಬೀಳುವಂತೆ ಮಾಡಿತ್ತೆಂದು ಹೇಳಿದ್ದೆ. ನಿನ್ನ ಸೃಜನಶೀಲತೆ ಕಂಡು ಆಶ್ಚರ್ಯ ಆನಂದ… ನೀನು ಆ ಜಾಣ ಮೊಲವನ್ನು ನಿನ್ನಲ್ಲಿ ಆವಾಹಾನೆ ಮಾಡಿಕೊಂಡಿದ್ದೆ…!
ನಿನ್ನನ್ನು ಎತ್ತಿಕೊಂಡು ಮುದ್ದಾಡಿದ್ದೆ. ನಂತರ ನಿನ್ನ ಮುಖ ನೋಡುತ್ತಾ, “ಸುಳ್ಳು ಹೇಳಿದೆ ಅಲ್ವಾ?” – ಮೃದುವಾಗಿ ಕೇಳಿದ್ದೆ.
“ಹೂಂ…” ಎಂದಿದ್ದೆ ನೀನು ಪೆಚ್ಚು ಪೆಚ್ಚಾಗಿ…
“ಸುಳ್ಳು ಹೇಳಬಾರದು ಬಂಗಾರಿ… ಸುಳ್ಳು ಹೇಳಿದ್ರೇನು ಆಗುತ್ತೆ ಗೊತ್ತಾ?”
“ಊಹೂಂ…”
ನಿನಗಿಷ್ಟವಾದ ಬಿರಿಯಾನಿ ತಿನ್ನಿಸುತ್ತಾ ಮತ್ತೊಂದು ಕತೆ ಹೇಳಿದ್ದೆ. ಗಾಂಧೀಜಿಯವರ ಬಗ್ಗೆಯೂ ತಿಳಿಸಿದ್ದೆ. ನಿನಗಿನ್ನು ಆಗ ನಾಲ್ಕು ವರ್ಷಗಳು. ಹೇಗೆ ನೆನಪಿರಲು ಸಾಧ್ಯ…?
ಆದರೆ ಆ ನೆನಪುಗಳು ನಿನ್ನೆ ಮೊನ್ನೆ ನಡೆದ ಹಾಗಿದೆ ನನಗೆ…!
ಹೀಗೆ ನಿನ್ನಿಂದ ನನಗೊಂದು ‘ಕುಟುಂಬ’ ‘ಕುಟುಂಬದ ಪ್ರೀತಿ’ ದೊರಕಿತ್ತು. ನಿನ್ನ ತಂದೆ-ತಾಯಿಯವರ ಸ್ನೇಹ, ಪ್ರೀತಿ, ನನ್ನ ಮನೆಯವರಿಲ್ಲದ ಖಾಲಿ ಜಾಗವನ್ನು ತುಂಬಿತ್ತು. ಹೌದು ಮಗಳೇ… ಬೆಂಗಳೂರು ಮಹಾನಗರ ಬದುಕುವುದು ಅಷ್ಟು ಸುಲಭದ ಮಾತಲ್ಲವೆಂದು ಹೆದರಿಕೊಂಡು ಸಣ್ಣ ಊರೊಂದರಿಂದ ಬಂದಿದ್ದ ನನಗೆ ಎಲ್ಲವನ್ನು ಕೊಟ್ಟಿತ್ತು… ಸಣ್ಣ ಊರಿನ ಸಣ್ಣ ಕೆಲಸವು ಜನರಿಂದ ನನ್ನ ಎಲ್ಲಾ ಭಾವನೆಗಳು ಸತ್ತು ಹೋಗಿದ್ದವೆಂದುಕೊಂಡಿದ್ದೆ. ಆ ಮಹಾನಗರವೇ ಎಲ್ಲವನ್ನು ಕೊಟ್ಟಿತ್ತು. ಸತ್ತು ಹೋಗಿದ್ದ ಭಾವನೆಗಳನ್ನು ಬದುಕಿಸಿತ್ತು. ನನ್ನನ್ನು ಲೇಖಕಿಯನ್ನಾಗಿ ಮಾಡಿತ್ತು. ನನ್ನ ಭಾವನೆ ಪ್ರಕಟಿಸಲು ಇನ್ನೇನು ನನಗೆ? ನನ್ನೊಳಗೇ ಹುದುಗಿ ಹೋಗಿದ್ದ ನನ್ನ ಮಾತೃತ್ವದ ಸಂತೃಪ್ತಿಯನ್ನು ನೀನು ಕೊಟ್ಟಿದ್ದೆ ಮಗಳೇ.
ಇವೆಲ್ಲವೂ ಒಬ್ಬ ಕುಡುಕನ ವಿಕೃತ ಮನುಷ್ಯನನ್ನು ನಿರ್ಲಕ್ಷಿಸುವಂತೆ ಮಾಡಿತ್ತು. ಊಹೂಂ… ನಿರ್ಲಕ್ಷ್ಯ ಆಗಿರಲಿಲ್ಲ, ಕಲ್ಲಿನ ಮೇಲೆ ಮಳೆಯು ಸುರಿಯುವಂತೆ, ನಾನು ಕಲ್ಲಾಗಿಬಿಟ್ಟಿದ್ದೆ..
*****
ಮುಂದುವರೆಯುವುದು