ಆರೋಗ್ಯ ಇಲಾಖೆ ನಿರ್ದೇಶಕರು ರೋಗಗಳ ಬಗ್ಗೆ ಅದಕ್ಕೆ ನಿವಾರಣೆಯನ್ನು ತಿಳಿಸುವ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಲು ಕೆಲವರಿಗೆ ಅನುಮತಿ ಕೊಟ್ಟಿತ್ತು. ಅದರಲ್ಲೂ ಭ್ರಷ್ಟಾಚಾರ ಕಣೆ. ಹಾಳಾಗಿ ಹೋಗಲಿ ಅದರ ಬಗ್ಗೆ ನಾನ್ಯಾಕೆ ಯೋಚಿಸಲಿ… ನಾನಂತೂ ಹಾಗಿರಲಿಲ್ಲವಲ್ಲ. ಅದು ಅವರವರ ಕರ್ಮ. ಕೊನೆಗೆ ಗಳಿಗೆಯಲ್ಲಿ ಆ ಕರ್ಮಫಲವನ್ನು ಅವರೇ ತಾನೇ ಅನುಭವಿಸುವುದು. ಹೇಳಲು ಹೋಗಿ ನಾನು ಪಟ್ಟ ಅನ್ಯಾಯಗಳನ್ನು ಅವಮಾನಗಳನ್ನು ಮರೆತಿರಲಿಲ್ಲ.
ಆ ನಿರ್ದೇಶಕರು ಚಿತ್ರ-ನಾಟಕ ಬರೆಯಲು ನನ್ನ ಬಳಿಗೇ ಬಂದಿದ್ದರು. ಮೊದಲು ನಿರಾಕರಿಸಿದರೂ ರೇಡಿಯೋ ನಾಟಕಗಳನ್ನು ಬರೆದುಕೊಟ್ಟಿದ್ದ ನನಗೆ ಕಷ್ಟವೆನ್ನಿಸಿರಲಿಲ್ಲ. ಅದೂ ಸಾಮಾನ್ಯ ಜನರಿಗೆ ತಿಳಿವಳಿಕೆಯನ್ನು ನೀಡುವಂತಹದಾದುರಿಂದ ಬರೆದುಕೊಟ್ಟಿದ್ದೆ ಯಶಸ್ವಿಯೂ ಆಗಿದ್ದೆ. ಇದು ನನ್ನ ಮುಂದಿನ ಹೆಜ್ಜೆಯಿಡುವುದಕ್ಕೆ ಸಹಾಯವಾಗಿತ್ತು.
ಚಲನಚಿತ್ರ ನಿರ್ದೇಶಕ ಸುನಿಲ್‌ಕುಮಾರ್ ದೇಸಾಯಿ ಅವರ ನಿಷ್ಕರ್ಷಕ್ಕೆ ಛಾಯಾಗ್ರಾಹಕರಾಗಿ ಕೇರಳದ ಪಿ. ರಾಜನ್ ಅವರು ಬಂದಿದ್ದರು. ಅವರು ಪತ್ನಿಯ ಚಿಕಿತ್ಸೆಗಾಗಿ ಹೆಂಡತಿಯನ್ನು ಕರೆದುಕೊಂಡು ಬಂದಿದ್ದರು. ತಾವಿಳಿದುಕೊಂಡಿದ್ದ ಹೋಟಲಿನಲ್ಲಿ ಪತ್ನಿಯನ್ನು ಬಿಟ್ಟು ಬರುತ್ತಿದ್ದರು. ಅವರ ಪರಿಚಯ ಸ್ನೇಹವಾಗಿದ್ದುದರಿಂದ ಅವರ ಹೆಂಡತಿಯನ್ನು ನನ್ನ ಮನೆಯಲ್ಲಿ ಇರುವಂತೆ ಹೇಳಿದ್ದೆ. ಹೀಗೆ ಮಾತನಾಡುತ್ತಿರುವಾಗ ಅವರು ನಾನೇ ಸ್ವತಃ ಸಾಕ್ಷ್ಯಚಿತ್ರಗಳನ್ನು ಯಾಕೆ ಮಾಡಬಾರದೆಂಬ ಸಲಹೆ ನೀಡಿದ್ದರು. ಹೀಗಾಗಿ ಕುಷ್ಠರೋಗದ ಬಗ್ಗೆ ನಾನೇ ಆ ಸಾಕ್ಷ್ಯಚಿತ್ರವೊಂದನ್ನು ಮಾಡಿದ್ದೆ. ಆಗ ನನ್ನ ಸಹಾಯಕ್ಕೆ ನಿಂತಿದ್ದು, ಸಲಹೆ ನೀಡಿದ್ದು ಖ್ಯಾತ ನಿರ್ದೇಶಕರಾಗಿದ್ದ ಶ್ರೀ ಕೆ. ವಿಜಯರಾಂ ಮತ್ತು ಶ್ರೀ ಶಿವಮಣಿಯವರು. ಆ ಅನುಭವದಿಂದ ಒಂದು ‘ಟೆಲಿ ಫಿಲಂ’ ವೊಂದನ್ನು ನಿರ್ಮಿಸಿಕೊಡಲು ನನಗೆ ಅವಕಾಶ ಕೊಟ್ಟವರು ದೂರದರ್ಶನದ ಶ್ರೀಮತಿ ನಳಿನಿ ರಾಮಣ್ಣ ಮತ್ತು ಶ್ರೀಮತಿ ಉಷಾಕಿಣಿಯವರು. ಬೆನ್ನೆಲುಬಾಗಿ ನಿಂತಿದ್ದು ಖ್ಯಾತ ಚಲನಚಿತ್ರ ಛಾಯಾಗ್ರಾಹಕ, ಪಿ. ರಾಜನ್ ಅವರು. ಖ್ಯಾತ ನಟಿ ಶ್ರೀಮತಿ ಉಮಾಶ್ರೀ ಮೊದಲ ಬಾರಿಗೆ ದೂರದರ್ಶನಕ್ಕಾಗಿ ಅಭಿನಯಿಸಿದ್ದರು. ಕತೆ ಚೆನ್ನಾಗಿದೆ ಉಮಾಶ್ರೀಯವರು ಹಾಸ್ಯನಟಿ, ನೀನಾ ಗುಪ್ತಾ ಅವರನ್ನು ಮುಂಬಯಿಯಿಂದ ಕರೆತರುವ “ಅಪೇಕ್ಷೆಯನ್ನು ರಾಜನ್ ಅವರು ವ್ಯಕ್ತಪಡಿಸಿದ್ದರು”, “ಮುಂಬಯಿಯ ನೀನಾಗುಪ್ತಾ ಅವರಿಗಿಂತ ನಮ್ಮ ಉಮಾಶ್ರೀಯವರೇ ಉತ್ತಮ” ಎಂದು ನನ್ನ ಅಭಿಪ್ರಾಯವಾಗಿತ್ತು. ಕಿರುತೆರೆಗೆ ಬರಲು ಮೊದಲು ಉಮಾಶ್ರೀಯವರು ನಿರಾಕರಿಸಿದ್ದರೂ ನನ್ನ ಒತ್ತಡಕ್ಕೆ ಮಣಿದು ನಾಯಕಿಯ ಪಾತ್ರ ನಿರ್ವಹಿಸಲು ಒಪ್ಪಿದ್ದರು. ಒಂದೂವರೆ ಗಂಟೆಯ ಆ ಟೆಲಿಫಿಲಂ ಎಲ್ಲರಿಗೂ ಹೆಸರು ತಂದುಕೊಟ್ಟಿತ್ತು. ಉಮಾಶ್ರೀಯವರು ಆಗ ಮಾಡಿದ ಸಹಕಾರ ಸ್ನೇಹವನ್ನು ನಾನೆಂದು ಮರೆಯಲಾರೆ. ನನಗೆ ಒಳ್ಳೆಯ ಸ್ನೇಹಿತೆಯಾದರು. ಅತ್ಯಂತ ಜವಾಬ್ದಾರಿಯುತ ಮಹಿಳೆ, ನೋವು-ನಲಿವುಗಳನ್ನು ಕಂಡವರು. ಪ್ರೌಢತೆ ಅವರಲ್ಲಿತ್ತು. ಹತ್ತು ದಿನಗಳ ಶೂಟಿಂಗ್‌ನಲ್ಲಿ ಆಪ್ತ ಗೆಳೆತನ ಬೆಳೆದುಬಿಟ್ಟಿತ್ತು. ‘ಹತ್ಯೆ’ ಎಂಬ ನನ್ನ ಕತೆಯೊಂದು ‘ಮಯೂರ’ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದನ್ನೆ ‘ಟೆಲಿಫಿಲ್ಮ್’ ಮಾಡಿದ್ದೆ. ಒಳ್ಳೆಯ ವಿಮರ್ಶೆ ಬಂದಿತ್ತು. ಉಮಾಶ್ರೀಯವರ ಅಭಿನಯ ಅದ್ಭುತವಾಗಿತ್ತು!
ಹೀಗೆ ನನ್ನ ದೂರದರ್ಶನದ ನಂಟು ಬೆಳೆಯಿತು. ನಳಿನಿ ರಾಮಣ್ಣ ಮತ್ತು ಉಷಾ ಕಿಣಿಯವರು ನನಗೆ ಬಹಳ ಅವಕಾಶಗಳನ್ನು ಕೊಟ್ಟು ನಿರ್ದೇಶಕಿಯನ್ನಾಗಿ ಮಾಡಿದ್ದರು! ಆರ್ಥಿಕ ಸಮಸ್ಯೆಯಿಂದ ಒಣಗಿದಂತಾಗಿದ್ದ ನನ್ನ ಕೈಗಳು ಆಗ ಒದ್ದೆಯಾಗತೊಡಗಿದ್ದವು. ವ್ಯಾಪ್ತಿ ಮತ್ತು ಪ್ರಾಪ್ತಿ ಎರಡೂ ದಕ್ಕಿದ್ದವು. ರಾತ್ರಿಯಲ್ಲಿ ಕುಳಿತು ‘ಸ್ಕ್ರಿಪ್ಟ್’ ಬರೆಯುತ್ತಿದ್ದೆ. ಎರಡು ದಿನಗಳು ರಜೆ ಸಿಕ್ಕರೆ ಶೂಟಿಂಗ್ ಮಾಡುತ್ತಿದ್ದೆ. ನನ್ನದೇ ಒಂದು ‘ಟೀಮ್’ ಇತ್ತು… ಸಹೋದ್ಯೋಗಿಗಳ ಸಹಕಾರ, ಆಸ್ಪತ್ರೆಯ ಮೇಲಾಧಿಕಾರಿಗಳ ಸಹಾಯದಿಂದ ನಾನು ಚಿತ್ರೀಕರಣ ಮಾಡುತ್ತಿದ್ದೆ. ಬೇರೆಯವರ ಟಿ.ವಿ. ಧಾರಾವಾಹಿಗಳಿಗೂ ಚಿತ್ರ, ನಾಟಕ, ಸಂಭಾಷಣೆ ಬರೆದುಕೊಡುತ್ತಿದ್ದೆ. ಒಳ್ಳೆಯ ಸಂಭಾವನೆಯೂ ಸಿಗುತ್ತಿತ್ತು. ಈ ಮಾಧ್ಯಮ ನನಗೆ ಬಿಡುವಿನ ವೇಳೆಯಲ್ಲಿನ ಉದ್ಯಮವಾಗಿತ್ತು. ನಾನು ಸುಧಾರಿಸಿಕೊಂಡಿದ್ದೆ, ಎಲ್ಲದರಲ್ಲು. ಆದರೆ ನನ್ನ ‘ಗಂಡ’ ಸುಧಾರಿಸಲಿಲ್ಲ. ನಾನು ನಿರ್ಮಾಣ ಮಾಡುವ ಎಲ್ಲಾ ಟಿ.ವಿ., ಫಿಲ್ಮಂಗಳಲ್ಲಿ ಅವನನ್ನೇ ನಾಯಕನನ್ನಾಗಿ ಮಾಡುತ್ತಿದ್ದೆ. ನೋಡಲು ಸುಂದರ ಆಕರ್ಷಕ ರೂಪವಿದ್ದ, ಇದರಲ್ಲಾದರೂ ತನ್ನನ್ನು ತೊಡಗಿಸಿಕೊಂಡಾನೆಂಬ ದೂರದ ಆಸೆಯಿತ್ತು. ಆದರೆ ಅದು ಸಾಧ್ಯವೇ ಆಗಲಿಲ್ಲ. ಅವನಲ್ಲಿ ಪ್ರತಿಭೆಯಿರಲಿಲ್ಲ. ಆಸಕ್ತಿಯಂತೂ ಮೊದಲೇ ಇರಲಿಲ್ಲ. ಅದೂ ಒಂದು ಸಮಯ ಕಳೆಯುವ ಆಟವೆಂದುಕೊಂಡಿದ್ದ. ಅವನ ಇನ್ನೊಂದು ವಿಷಯ ಬಯಲಾಗಿತ್ತು. ಎಲ್ಲಾ ಚಟಗಳಿಗಿಂತಲೂ ಅವನಿಗೆ ಹೆಣ್ಣುಗಳ ಚಟ ಅತ್ಯಧಿಕವಾಗಿತ್ತು. ಬಲೆಗೆ ಹಾಕಿಕೊಳ್ಳುವ ಮೊದಲು ತುಂಬಾ ಸಾಧು, ಒಳ್ಳೆಯವ ಎಂದೆಲ್ಲಾ ಹೆಣ್ಣು ಮಕ್ಕಳು ಭಾವಿಸುವಂತೆ ಮಾಡುತ್ತಿದ್ದ. ಶೂಟಿಂಗ್ ಮುಗಿದ ನಂತರ ಅದಕ್ಕೆಂದೇ ಇದ್ದ ವಾಹನವಿದ್ದರೂ ತಾನೇ ಸ್ವತಃ ಅವರನ್ನು ಮನೆಗೆ ಬಿಟ್ಟು ಬರಲು ನಮ್ಮ ಕಾರನ್ನು ಬಳಸುತ್ತಿದ್ದ. ನನಗೆ ಗೊತ್ತಾದ ತಕ್ಷಣ ನಮ್ಮ ಕಾರನ್ನು ಜಾಗಕ್ಕೆ ತರದಿರುವಂತೆ ಮಾಡಿ, ನಾನು ಚಿತ್ರೀಕರಣದ ಸ್ಥಳಕ್ಕೆ ತಲುಪಿದ ನಂತರ, ಅವರಿಗೆ ಶೂಟಿಂಗ್‌ಗಾಗಿ ಬಳಸುವ ಕಾರನ್ನು ಕರೆದುಕೊಂಡು ಬರಲು ಕಳುಹಿಸುತ್ತಿದ್ದ… ಶೂಟಿಂಗ್‌ಗೆ ಬರುವ ತಾಂತ್ರಿಕ ಗುಂಪಿನವರಿಗೆ ನಾನು ತಾಯಿಯಂತೆ ಇದ್ದೆನಾದುದರಿಂದ ಅವರಿಂದ ವಿಷಯ ತಿಳಿಯುತ್ತಿತ್ತು. ನಿರ್ಲಕ್ಷ್ಯ ತೋರುವಂತೆ ವರ್ತಿಸಿದರೂ ಏನು ಮಾಡಬೇಕೋ ಅದನ್ನು ಬಿಗಿ ಮಾಡುತ್ತಿದ್ದೆ. ನಟಿಯರಿಗೆ, ಅವನ ಬಗ್ಗೆ ಸಹಾನೂಭೂತಿಯಿತ್ತು.
“ಎಷ್ಟು ಚೆಂದ ಇದ್ದಾರೆ ಅವರ ಗಂಡ ಅವರು ನೋಡಲೂ ಚೆನ್ನಾಗಿಲ್ಲ. ಜೊತೆಗೆ ವಯಸ್ಸಿನಲ್ಲೂ ದೊಡ್ಡವರೂಂತ ಕಾಣುತ್ತೆ”-ಎಂಬ ಮರುಕ ಬೇರೆ.
ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಚಿತ್ರೀಕರಣದ ಸಮಯದಲ್ಲಿ ಯಾರಿಗೂ ನೋವಾಗದಂತೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯದ ಜೊತೆಗೆ ಧರ್ಮವೂ ಆಗಿತ್ತು. ಆಗವನು ಸಂಜೆಯ ಹೊತ್ತಿನಲ್ಲಿ ಕುಡಿದು ಶೂಟಿಂಗ್‌ಗೆ ಬಾರದೆ ದೂರದಲ್ಲೆಲ್ಲೋ ಕುಳಿತುಬಿಡುತ್ತಿದ್ದ. ಅವನಿದ್ದ ಭಾಗದ ಚಿತ್ರೀಕರಣವನ್ನು ಸಂಜೆಯೊಳಗೆ ಮುಗಿಸಿಬಿಡುತ್ತಿದ್ದೆ. ತುಂಬಾ ಕಷ್ಟ ಕೊಡುತ್ತಿದ್ದ ನನಗೆ ಕಷ್ಟವಾಗುತ್ತಿತ್ತು. ಮಾಧ್ಯಮದವರ ಮುಂದೆ ಅವನು ವಿಕೃತನಂತೆ ವರ್ತಿಸಿದರೂ ನನಗಾಗಿ ಅವನನ್ನು ಕ್ಷಮಿಸಿಬಿಡುತ್ತಿದ್ದರು. ಅದು ಎಷ್ಟು ದಿನ, ಎಲ್ಲಿಯವರೆಗೂ ನಡೆಯುತ್ತದೆ?
ನಾನೇನಾದರೂ Night Duty ಇದೆಯೆಂದು ಆಸ್ಪತ್ರೆಯಲ್ಲಿ ರಾತ್ರಿ ಕಳೆಯುತ್ತಿರುವಾಗ ಅವನು ನಿದ್ದೆ ಬರುವವರೆಗೂ ನನ್ನ ಶೂಟಿಂಗ್‌ಗಾಗಿ ಇಟ್ಟಿದ್ದ ಡೈರಿಯನ್ನು ತೆಗೆದು ಅದರಲ್ಲಿದ್ದ ನಟಿಯರ, ಸ್ನೇಹಿತೆಯರ ನಂಬರ್‌ಗೆ ಡಯಲ್ ಮಾಡಿ ಅಸಭ್ಯವಾಗಿ ಮಾತನಾಡುತ್ತಿದ್ದನಂತೆ. ನನ್ನ ಸ್ನೇಹಿತೆ ತುಂಗಾ ತಿಳಿಸಿದ್ದಳು. ನಾನು ಕಂಗಾಲಾಗಿಬಿಟ್ಟಿದ್ದೆ. ಮರುದಿನ ಎಲ್ಲಾ ನಂಬರುಗಳನ್ನು ತಿದ್ದಿಬಿಟ್ಟಿದ್ದೆ. ಈ ವಿಷಯ ಮಾಧ್ಯಮದವರು ಮಾತನಾಡಿಕೊಳ್ಳುವಂತಾಗಿತ್ತು.
“ಗಿರಿಜಾ… ಅವನನ್ನು ಬಿಟ್ಟುಬಿಡು. ನಿನಗೆ ಅವಮಾನ ಮಾಡಲೆಂದೇ ನಿರ್ಧರಿಸಿಬಿಟ್ಟಿದ್ದಾನೆ. ನಿನಗೆ ನಿನ್ನದೇ ನೌಕರಿಯಿದೆ. ಹೆಸರಿದೆ, ಗೌರವವಿದೆ… ಡೈವೋರ್ಸ್ ಕೊಟ್ಟು ಬಿಡು…” – ನನ್ನ ನರಕಯಾತನೆಯನ್ನು ನೋಡಲಾರದೆ ನನ್ನ ಆಪ್ತ ಗೆಳತಿ ಉಮಾಶ್ರೀ ಒಂದು ದಿನ ಹೇಳಿದ್ದರು.
ಅವರೊಬ್ಬರೇ ಅಲ್ಲ ನನ್ನ ಸ್ನೇಹ ಪರಿಚಯವಿದ್ದವರದೆಲ್ಲಾ ಅದೇ ಅಭಿಮತವಾಗಿತ್ತು. ನಾನವರಿಗೆ ಮತ್ತೊಂದು ಅವಕಾಶ ನೀಡಬೇಕೆಂದುಕೊಂಡೆ. ಹೇಗೆ ಇದ್ದರೂ ಇದು ಕೊನೆಯವರೆಗೂ ಇರುವಂತಹ ಸಂಬಂಧವಲ್ಲವೆಂಬುದನ್ನು ನಾನು ಮೊದಲೇ ತಿಳಿದಿದ್ದೆ. ಅದಕ್ಕೊಂದು ಗಡಿಯನ್ನೂ ಹಾಕಿದ್ದೆ. ನನ್ನ ಬದುಕಿಗೆ ಭದ್ರತೆಗಾಗಿ ಹಾಕಿಕೊಂಡಿದ್ದ ಬೇಲಿ ನನ್ನ ‘ಬದುಕನ್ನೆ ನುಂಗತೊಡಗಿತ್ತು. ನನಗವನ ತಪ್ಪು ಕಾಣಿಸಲಿಲ್ಲ. ಅವನಿದ್ದದ್ದೇ ಹಾಗೆ ನನ್ನದೇ ತಪ್ಪು ಎಂದು ನನಗೆ ಗೊತ್ತಿತ್ತು.
*****
ಮುಂದುವರೆಯುವುದು