ಕಾಡುತಾವ ನೆನಪುಗಳು – ೨೮

ಕಾಡುತಾವ ನೆನಪುಗಳು – ೨೮

ಹಾಗೆಯೇ… ಸಂಗೀತವೆಂದರೆ ನನಗೆ ಪ್ರಾಣ. ಅದೂ ಹಳೆಯ Sorrowfull ಹಾಡುಗಳೆಂದರೆ ನನಗೆ ಇಷ್ಟವಾಗುತ್ತಿತ್ತು. ಅವುಗಳಲ್ಲಿ ಎಲ್ಲವನ್ನೂ ಸೆಳೆಯುವ ಮಾಧುರ್ಯವಿರುತ್ತದೆ. ಹಗಲು ನಾನು ಹಾಡು ಕೇಳುವ ಹಾಗಿರಲಿಲ್ಲ. ಅದು ಅವನಿಗೆ ಸಹ್ಯವಾಗುತ್ತಿರಲಿಲ್ಲ. ಒಂದು ಸೂಟ್‌ಕೇಸ್ Audio Cassete ಗಳು, ಸಿ.ಡಿ., ಗಳನ್ನು ತುಂಬಿಸಿಟ್ಟಿದ್ದೆ. ಎಲ್ಲವನ್ನೂ ರಾತ್ರಿಯೇ ಕೇಳಬೇಕಾಗುತ್ತಿತ್ತು. ಹಾಡುಗಳನ್ನು ಕೇಳುತ್ತಿದ್ದರೆ ನನ್ನನ್ನು ಮರೆತುಬಿಡುತ್ತಿದ್ದೆ. ಸಂಗೀತ, ಸಾಹಿತ್ಯದ ಹುಚ್ಚು ಒಂದು ವಿಧವಾಗಿ ಅಮಲಿನಂತಿರುತ್ತದೆ ಎಂದರೆ ನಂಬುತ್ತೀಯಾ? ಹಿಂದೂಸ್ಥಾನಿ Classicals ಎಂದರೆ ನನಗಿಷ್ಟ. ಅಂದಿನ Rashid Khan, ಭೀಮಸೇನ್ ಜೋಷಿ, ಸಂಗೀತಾ ಕಟ್ಟಿ, ಪರ್ವಿನ್ ಅವರ ಸಿ.ಡಿ.ಗಳಿರುತ್ತಿದ್ದವು. ಈಗಲೂ ಇವೆ.

ಹಾಗೆಯೇ ಕೊಂಡು ತಂದು ಓದುತ್ತಿದ್ದ ಪುಸ್ತಕಗಳಿಂದ ನನ್ನದೊಂದು ಲೈಬ್ರರಿ ಸ್ಥಾಪಿತವಾಗಿತ್ತು. ಪುಸ್ತಕಗಳನ್ನು ನೇವರಿಸಿ ಆನಂದಪಡುತ್ತಿದ್ದೆ. ಶೇಕ್ಸ್‌ಪಿಯ‌ರ್, ಬರ್ನಾಡ್ ಷಾ, ಈಲಿಯಟ್, ಚಾರ್ಲ್ಸ್ ಡಿಕೆನ್ಸ್, ಡಿ.ಎಚ್. ಲಾರೆನ್ಸ್, ಥಾಮಸ್ ಹಾರ್ಡಿ, ಎಮಿಲಿ ಸಹೋದರಿಯರ ಆ ಎರಡು ಪುಸ್ತಕಗಳು ನನ್ನ ಮೆಚ್ಚಿನವು. ಅದರಲ್ಲೂ ‘ಹುದರಿಂಗ್ ಹೈಟ್ಸ್’ ನನ್ನ ಮೆಚ್ಚಿನ ಪುಸ್ತಕ. ಹಾಗೆಯೇ ಕನ್ನಡದ ಎಲ್ಲಾ ಪ್ರಮುಖ ಸಾಹಿತಿಗಳ ಎಲ್ಲಾ ಪುಸ್ತಕಗಳಿವೆ. ಅಂದಿನ ಸಾನೆ ಗುರೂಜಿಯವರ ಶ್ಯಾಮನ ತಾಯಿಯಿಂದ ಹಿಡಿದು ಇಂದಿನ ಅಮೀಷ್ ಪಟೇಲ್‌ರ ಪುಸ್ತಕಗಳು ನನ್ನ ಲೈಬ್ರರಿಯಲ್ಲಿವೆ. ‘ಥಾವೋ ಪಿಸಿಕ್ಸ್’ ಎಂಬ ಕಾಪ್ರ ಬರೆದ ಪುಸ್ತಕ ಓದಿ ನನಗೆ ಝನ್ ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿತ್ತು. ಹೀಗಾಗಿ ಝನ್ ಬಗ್ಗೆಯೂ ಓದಿದ್ದೆ. ಬುದ್ದನ ಚರಿತ್ರೆಯಿಂದ ಪ್ರಭಾವಿತಳಾಗಿದ್ದೆ. ಗ್ರೀಕ್ ಪುರಾಣದ ಕತೆಗಳು, ಅರೇಬಿಯನ್ ನೈಟ್ಸ್, ಜಾತಕ ಕತೆಗಳೂ ಇವೆ. ಎಲ್ಲವನ್ನೂ ಓದಿದ ನಂತರ ಲೈಬ್ರರಿಗೆ ಸೇರುತ್ತದೆ. ಹಾಗೆಯೇ ‘ಲಿಯೋ ಟಾಲ್‌ಸ್ಟಾಯ್’ ಅನ್ನಾಕೆರೆನೀನಾ ಅಂದಿನ ದಿನಗಳಲ್ಲಿ ಬಿರುಗಾಳಿ ಎಬ್ಬಿಸಿದ ಕಾದಂಬರಿಯಂತೆ! ಸಣ್ಣಕತೆಗಳೂ ಅಷ್ಟು ಅದ್ಭುತವಾಗಿವೆ. ಟಾಲ್‌ಸ್ಟಾಯ್ ಅವರ ಸಣ್ಣ ಕತೆಗಳಲ್ಲಿ Philosophy ನನ್ನನ್ನು ಮೌನಿಯಾಗುವಂತೆ ಮಾಡಿತ್ತು.

ಕ್ರೈಮ್, ಥ್ರಿಲ್ಲರ್, ಕಾದಂಬರಿಗಳನ್ನು ಓದಲು ನನಗಿಷ್ಟವಾಗುತ್ತಿತ್ತು. ಅದೂ ನನ್ನ ವೈದ್ಯಕೀಯ ವೃತ್ತಿಯ ಹಿನ್ನಲೆಯಾಗಿರುವುದರಿದ ವೈದ್ಯಕೀಯಕ್ಕೆ ಸಂಬಂಧಪಟ್ಟಂತೆ ಬರೆಯುತ್ತಿದ್ದ ರಾಬಿನ್ ಕುಕ್, ಹೆನ್ರಿಡೆಂಕರ್, ಸಿಡ್ನಿ ಷೆಲ್ದಾನ್, ಎ.ಜಿ. ಕ್ರೋನಿನ್, ಆರ್ಥರ್ ಹೇಲಿಯ ಪುಸ್ತಕಗಳೂ ಇವೆ. ನನಗೆ ಡಿ.ವಿ.ಜಿ. ಯವರ ‘ಮಂಕು ತಿಮ್ಮನ ಕಗ್ಗ’ ತುಂಬಾ ಇಷ್ಟ. ವಾರಕ್ಕೊಂದು ಬಾರಿಯಾದರೂ ಪುಟಗಳಲ್ಲಿ ಕಣ್ಣಾಡಿಸುತ್ತೇನೆ. ಅದು ಯಾವಾಗಲೂ ನನ್ನ ದಿಂಬಿನ ಬಳಿಯೇ ಇರುತ್ತದೆ. ಮಹಾಭಾರತವನ್ನು ವಿವಿಧ ಲೇಖಕರು ಬರೆದಿದ್ದ ಪುಸ್ತಕಗಳ ಸಂಗ್ರಹವಿದೆ. ರಾಮಾಯಣ ಭಾಗವತವು ಕೂಡಾ ವಿಮರ್ಶೆಯನ್ನು ಬರೆದವರ ಪುಸ್ತಕಗಳೂ ಇವೆ. ಓಶೋ ಪುಸ್ತಕಗಳು, ಸಿ.ಡಿ.ಗಳು, ವಿವೇಕಾನಂದ, ಪರಮಹಂಸರ ಭಕ್ತ ನಾನು ಮೈಸೂರಿನಲ್ಲಿ ನಾನು ಎಂ.ಬಿ.ಬಿ.ಎಸ್. ಓದುತ್ತಿರುವಾಗ ವಾರಕ್ಕೊಮ್ಮೆ ಒಂಟಿ ಕೊಪ್ಪಲಿನಲ್ಲಿರುವ ರಾಮಕೃಷ್ಣಾಶ್ರಮಕ್ಕೆ ಬಿಡದೇ ಹೋಗುತ್ತಿದ್ದೆ.

ಈ ಎಲ್ಲಾ, ಓದು, ಅಧ್ಯಯನದಿಂದ, ಪ್ರಭಾವದಿಂದ ನಾನು ಬಂದ ಸಮಸ್ಯೆಗಳನ್ನು ನಿರ್ಲಿಪ್ತಳಾಗಿ ಎದುರಿಸುವುದನ್ನು ಕಲಿತಿದ್ದೆ. ಪ್ರಬುದ್ಧತೆಯನ್ನು ತಂದುಕೊಟ್ಟಿತ್ತೋ ಇಲ್ಲವೋ ನಾನರಿಯೆ. ಆದರೆ ಭಾವುಕತೆಯನ್ನು ಹದ್ದು ಬಸ್ತಿನಲ್ಲಿಡುವುದನ್ನು ಕಲಿತಿದ್ದೆ. ಅಷ್ಟಕ್ಕೂ ನಾನೇನು ಸನ್ಯಾಸಿಯಾಗಿರಲಿಲ್ಲವಲ್ಲ. ಹುಳಿ, ಉಪ್ಪು, ಖಾರ ತಿಂದ ದೇಹ ಪ್ರೀತಿಸಲು, ಪ್ರೀತಿಸಲ್ಪಡಲು ಮನಸ್ಸು ಹಾತೊರೆಯುತ್ತಿತ್ತು. ಅಷ್ಟಕ್ಕೂ ‘Love is Eternal’ ಅಲ್ಲವಾ ಚಿನ್ನು?

ಇಷ್ಟೆಲ್ಲಾ ಓದು ನನ್ನ ಮನಸ್ಸಿಗೆ ಪ್ರಶಾಂತತೆಯನ್ನು ತಂದುಕೊಟ್ಟರೂ ಸಾಹಿತಿಯನ್ನಾಗಿ ಮಾಡಿರಲಿಲ್ಲ. ಅಂತೂ-ಇಂತೂ ಲೇಖಕಿಯಾಗಿ ಗುರುತಿಸಿ ಕೊಂಡಿದ್ದೆ. ಎಲ್ಲಾ ವಿಧದ ವಿಷಯಗಳನ್ನು ಕುರಿತಂತೆ, ಕತೆ, ಕಾದಂಬರಿ, ನೀಳ್ಗತೆಗಳನ್ನು ಬರೆಯುತ್ತಿದ್ದೆ. ತರಂಗ, ಸುಧಾ, ಮಯೂರ, ಪತ್ರಿಕೆಯಲ್ಲಿ ಮಾತ್ರ ಪ್ರಕಟವಾಗುವಂತೆ ಕಳುಹಿಸುತ್ತಿದ್ದೆ. ಶ್ರೀ ಎಂ.ಬಿ. ಸಿಂಗ್, ಸದಾಶಿವ, ಶರತ್ ಕಲ್ನೋಡ್, ವಿಜಯ ಶ್ರೀ, ಶ್ರೀ ಚಿರಂಜೀವಿರನ್ನು ನಾನು ಸ್ಮರಿಸಲೇಬೇಕಾಗುತ್ತದೆ. ಅವರ ಪ್ರೋತ್ಸಾಹದಿಂದಲೇ ನಾನಿಂದು ಲೇಖಕಿಯಾಗಿದ್ದು, ಲೇಖನಿ ಹಿಡಿದಿರುವುದು. ಹೆಚ್ಚು ವೈದ್ಯಕೀಯ ಶಾಸ್ತ್ರದ ಬಗ್ಗೆ ಪುಸ್ತಕ ಬರೆಯತೊಡಗಿದ್ದೆ. ಅವುಗಳ ಅಗತ್ಯವೂ ಇತ್ತು. ವಾರ ಪತ್ರಿಕೆಗಳಿಗೆ, ದಿನಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದೆ… ಜನಪ್ರಿಯವಾಗಿದ್ದವು.

ದಾವಣಗೆರೆಯಿಂದ ಅಳುತ್ತಾ, ನೆಲೆಯಿಲ್ಲದೆ, ನೆಲೆಗಾಗಿ ಚಡಪಡಿಸುತ್ತಾ ಬೆಂಗಳೂರಿಗೆ ಬಂದವಳಿಗೆ ಆ ಇಪ್ಪತ್ಮೂರು ವರ್ಷಗಳಲ್ಲಿ ನೆಲೆಕಂಡುಕೊಂಡಿದ್ದೆ. ಗಟ್ಟಿಯಾಗಿದ್ದೆ. ಈ ನೆನಪುಗಳು ನನಗೆ ಒಳ್ಳೆಯ ನೆನಪುಗಳು ನನ್ನನ್ನು, ನನ್ನ ಬದುಕನ್ನು ಬದಲಾಯಿಸಿದ ವರ್ಷಗಳು, ಒಳ್ಳೆಯ ಸ್ನೇಹಿತರು ಸಜ್ಜನರೊಂದಿಗೆ ಸ್ನೇಹದಿಂದ ಕಳೆದ ದಿನಗಳನ್ನು ನೆನಪಿಸಿಕೊಂಡು ಸಂತೋಷ, ಸಮಾಧಾನಪಡುವ ಬದಲು ಹೆಣಗಳಂತೆ ಬೆದರಿಸುತ್ತಿದ್ದ ನೆನಪುಗಳೇಕೆ ಕಾಡುತ್ತವೆ? ಕೆಟ್ಟ ನೆನಪುಗಳನ್ನು, ಹೆಣಗಳನ್ನು ಹೂಳುವಂತೆ ಹೂತುಬಿಟ್ಟಿದ್ದೇನೆಂದುಕೊಳ್ಳುತ್ತಿದ್ದೆ. ಆದರೂ ಹೂತು ಹಾಕಿದ್ದ ಹೆಣಗಳನ್ನು ಹೊರತೆಗೆದು, ಪರಿಸರವನ್ನು, ನನ್ನನ್ನು ಪ್ರೀತಿಯಿಂದ ಕಾಣುವವರನ್ನು ಅಸಹ್ಯಪಡಿಸುತ್ತಿದ್ದೇನಾ? ಊಹೂಂ… ಇನ್ನೆಂದೂ ಹಾಗೆ ಮಾಡೋದಿಲ್ಲ. ಒಳ್ಳೆಯ ನೆನಪುಗಳೊಂದಿಗೆ ನೆಮ್ಮದಿಯಿಂದ ಬದುಕುತ್ತೇನೆಂದು ನಿರ್ಧಾರ ತೆಗೆದುಕೊಳ್ಳುತ್ತಿದ್ದ ಹಾಗೆಯೇ ಕೆಲವರು, ಅಂದರೆ ನನ್ನವರು, ನನ್ನ ಬಂಧುಗಳೆಂದು ಎನ್ನಿಸಿಕೊಂಡವರು, ಹಾರೆ, ಗುದ್ದಲಿ ಹಿಡಿದು ನಿಂತಿರುವುದು ಕಂಡುಬರುತ್ತಿತ್ತು. ಅವರಿಗೆ ನನ್ನ ನೆಮ್ಮದಿ, ಸಂತೋಷ ಬೇಕಿರಲಿಲ್ಲ. ಒಂಟಿಯಾಗಿಯೇ ನರಳುತ್ತಾ ಬದುಕಬೇಕು… ಬೇಯುತ್ತಿರಬೇಕು, ಬೇಯುತ್ತಿರುವ ಮನೆಯಲ್ಲಿ ತಾನೇ ಲೂಟಿ ಮಾಡಲು ಸಾಧ್ಯ! ಕೆಲವೊಮ್ಮೆ ನಾನೇ ಅವರುಗಳಿಗೆ ಆ ಅವಕಾಶಗಳನ್ನು ನನ್ನ ಭಾವುಕತೆಯ ಅತಿರೇಕದಿಂದ ಕಲ್ಪಿಸಿಕೊಡುತ್ತಿದ್ದೇನಾ? ಎಂದೂ ಅನ್ನಿಸುತ್ತಿತ್ತು.

ಅದೇ ಅವ್ವನ ಬಳಿಗೆ ಹೋಗಿ ದಾವಣಗೆರೆಯಲ್ಲಿಯೇ ನೆಲಸುವ ಯೋಚನೆ!

ಒಂಟಿಯಾಗಿದ್ದ ಅವ್ವನನ್ನು ನೆನೆಪಿಸಿಕೊಂಡರೇ ನನಗೆ ಎದೆಯೊಡೆದಂತಾಗುತ್ತಿತ್ತು. ನಾನು ಹಿಂತಿರುಗಿ ದಾವಣಗೆರೆಗೇ ಹೋಗುವುದಾದರೆ, ಕೆಲವು ಏರ್ಪಾಟುಗಳನ್ನು ಮಾಡಿಕೊಂಡೇ ಹೋಗಬೇಕಿತ್ತು. ನನ್ನ ತಂಗಿಗೇ ಆ ಎರಡು ಮನೆಗಳು ಸೇರಿದ್ದವು. ನಾನು ಒಂದು ಕ್ಷಣ ಹೋದರೇನೇ ಅಲ್ಲೋಲ ಕಲ್ಲೋಲವಾದವರಂತಾಡುತ್ತಿದ್ದ ಅವರ ಮನೆಯಲ್ಲಿದ್ದುಕೊಂಡು ಅವ್ವನ ಜೊತೆ ಇದ್ದೀನೀಂತ ಅಂದುಕೊಂಡು ಹೋಗುವ ಹಾಗಿರಲಿಲ್ಲ. ಅಲ್ಲಿ ನಮಗಾಗಿ ಪ್ರತ್ಯೇಕ ಮನೆಯೊಂದು ಬೇಕಾಗಿತ್ತು.

ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆಯವರ ಪತ್ನಿ ನನಗೆ ಆಪ್ತರಾಗಿದ್ದರು. ತುಂಬಾ ಒಳ್ಳೆಯ ಹೆಣ್ಣು ಮಗಳು. ರವಿ ಬೆಳಗೆರೆಯವರೂ ನನಗೆ ಸ್ವಂತ ತಮ್ಮನಿಗಿಂತಲೂ ಹೆಚ್ಚಾಗಿದ್ದರು. ನನ್ನ ಎಷ್ಟೋ ಸಮಸ್ಯೆಗಳಿಗೆ ನನಗೆ ಸಮಾಧಾನ ಸಿಗುವಂತಿತ್ತು ಅವರುಗಳ ಸ್ನೇಹ.

ಬೆಂಗಳೂರಿಗೆ ಬಂದ ನಂತರ ಒಂಟಿಯಾಗಿರಲು, ಬದುಕು ಸಾಗಿಸಲು, ಅಪವಾದಗಳಿಂದ ತಪ್ಪಿಸಿಕೊಳ್ಳಲು ನಾನು ತೆಗೆದುಕೊಂಡ ಆ ನಿರ್ಧಾರ, ಅವರ ಮನೆಯವರ ಚರಿತ್ರೆ ಗೊತ್ತಿದ್ದರೂ ಏನನ್ನೋ ಸಾಧಿಸುವವಳಂತೆ ಅವನನ್ನು ಮದುವೆ ಮಾಡಿಕೊಂಡಿದ್ದು ನಾನು ಮಾಡಿಕೊಂಡ ದೊಡ್ಡ ತಪ್ಪಾಗಿತ್ತು. ಮುಂದಿನ ದಿನಗಳಲ್ಲಿ ಅವನು ನನ್ನ ಬದುಕಿಗೆ ಕಂಟಕವಾಗುತ್ತಾನೆಂದುಕೊಂಡಿರಲಿಲ್ಲ!

ಇದೆಲ್ಲವೂ ಲಲಿತಾ ಅವರ ಬಳಿ ಹೇಳಿಕೊಂಡಿದ್ದೆ. ‘ಅದೆಲ್ಲಾ ಹಣೆಬರಹ, ಋಣಾನುಬಂಧ, ಒಂದು ಹಂತದಲ್ಲಿ ನಮ್ಮ ನಿರ್ಧಾರವೇ ಸರಿಯೆಂದು ಮಾಡಿಕೊಳ್ಳುವ ಕೆಲವು ನಿರ್ಧಾರಗಳೇ ತಪ್ಪಾಗಿ ಹೋಗಿರುತ್ತವೆ. ಈಗ ಅದೆಲ್ಲಾ ಮುಗಿದು ಹೋದ ವಿಷಯ… ಎಲ್ಲಾ ಮರೆತು ಹೊಸ ಬದುಕು ಕಟ್ಟಿಕೊಳ್ಳಿ. ಇನ್ನೂ ಸಮಯವಿದೆ, ಒಳ್ಳೆಯ ವೃತ್ತಿ, ಹೆಸರೂ ಇದೆ…” ಎಂದು ಸಾಂತ್ವನ ಗೊಳಿಸಿದ್ದರು.

ಆದ್ದರಿಂದ ಹಿಂತಿರುಗಿ ದಾವಣಗೆರೆಗೇ ಹೋಗಿ ಅವ್ವನೊಂದಿಗೆ ಇರಲು ಬಯಸಿದ್ದನ್ನು ಹೋಗಿ ಹೇಳಿಕೊಂಡಿದ್ದೆ. ಆಕೆಯೂ ಯೋಚಿಸಿದ್ದರು. ಅವ್ವನ ಮೇಲಿರುವ ನನ್ನ ಪ್ರೀತಿ ಎಷ್ಟಿತ್ತೆಂದು ಗೊತ್ತಿತ್ತು.

“ಬೆಂಗಳೂರಿನಲ್ಲಿ ಎಂತೆಂತಹವರು ಬದುಕು ಕಟ್ಟಿಕೊಂಡಿದ್ದಾರೆ. ಈಗಾಗಲೇ ನೀವು ಬೆಂಗಳೂರಿನವರೇ ಆಗಿದ್ದೀರಿ. ಒಳ್ಳೆಯ ಕೆಲಸಗಳಲ್ಲೂ ತೊಡಗಿಸಿ ಕೊಂಡಿದ್ದೀರಿ. ಮತ್ತೆ ಅಲ್ಲಿಗೆ ಹೋದ ಮೇಲೆ ಏನ್ಮಾಡ್ತೀರಾ? ಇಲ್ಲಿ ಸಿಕ್ಕಿರುವ, ಸಿಗುವ ಅವಕಾಶಗಳು ನಿಮಗೆ ಅಲ್ಲಿ ಸಿಗಲಾರದು. ಯೋಚಿಸಿ…” ಎಂದೂ ಹೇಳಿದ್ದರು.

“…..”

“ದಾವಣೆಗೆರೆಗೆ ಹೋದರೆ ಮತ್ತೆ ಬರೋಕಾಗೋಲ್ಲ. ಯೋಚಿಸಿ ನೋಡಿ. ನಿಮ್ಮ ಅಂತರಾಳದ ಭಾವನೆಗಳ ತೊಳಲಾಟವನ್ನು ಸ್ನೇಹಿತರಾಗಿ ಕೇಳಿಸಿಕೊಂಡು ಸಲಹೆಗಳನ್ನು ನೀಡಬಹುದು. ಆದರೆ ಕೊನೆಗೆ ನಿರ್ಧಾರ ನಿಮ್ಮದೇ ಆಗಿರುತ್ತದೆ. ಆ ಕ್ಷಣದ ಭಾವನೆಗಳ ತೊಳಲಾಟಕ್ಕೆ ಮತ್ತೆ ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ…” ಎಂದೂ ಹೇಳಿದ್ದರು.

ಅವ್ವನನ್ನು ನೋಡಲು ದಾವಣಗೆರೆಗೆ ಹೋಗಿಬರುತ್ತಿದ್ದ ನನಗೆ, ಅವ್ವನನ್ನು ಒಂಟಿಯಾಗಿ ಅನಾಥೆಯಂತೆ ಬಿಟ್ಟಿರಲು ಸಾಧ್ಯವಾಗಲಿಲ್ಲ. ನನ್ನ ನಿರ್ಧಾರವನ್ನೇ ಗಟ್ಟಿ ಮಾಡಿಕೊಂಡುಬಿಟ್ಟೆ. ನನ್ನ ತಂಗಿಯನ್ನು ಯಾವುದೇ ಕಾರಣಕ್ಕಾಗಿ ದೂಷಿಸುವಂತಿರಲಿಲ್ಲ. ಅವಳು ತನ್ನ ಗಂಡನ ಮನೆಯಲ್ಲಿ ಒಳ್ಳೆಯ ಹೆಂಡತಿ, ಸೊಸೆ, ಮಕ್ಕಳಿಗೂ ತಾಯಿಯಾಗಿದ್ದಳು. ಎಲ್ಲಾ ಹೆಣ್ಣುಗಳಂತೆ ಅವಳೂ ತನ್ನನ್ನು ತನ್ನ ಕುಟುಂಬದ ಒಳ್ಳೆಯದಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡಿದ್ದಳು. ಮೊದಲೇ ನಿನಗೆ ಹೇಳಿದ್ದೆನಲ್ಲವಾ? ಅವಳು Submissive ಅಂತಾ. ಹಾಗೆಯೇ ಇದ್ದಳು. ಹಾಗೇ ಗಂಡನ ಮನಸ್ಸಿನಂತೆ ಬದುಕಿ, ತನ್ನ ಸಂಸಾರದ ಹೊಣೆಯನ್ನು ಹೊತ್ತುಕೊಂಡಿದ್ದಳು. ಅಲ್ಲಿ ಅವಳ ದನಿಯಿರಲಿಲ್ಲ!

ಸ್ನೇಹಿತರನ್ನು ಕೇಳಿದರೆ ಲಲಿತಾ ಅವರಂತೆಯೇ ಹೇಳುತ್ತಾರೆ, ನಾನು ಬೆಂಗಳೂರನ್ನು ತೊರೆದು ಹೋಗದಂತೆ ಹೇಳಬಹುದು, ತಡೆಯಬಹುದು. ಎಂದು ಯಾರ ಬಳಿಯೂ ಹೇಳಿಕೊಳ್ಳಲೂ ಹೋಗಲಿಲ್ಲ! ನನ್ನ ಬಂಧು- ಬಳಗದ ಜೊತೆ, ಅವ್ವನ ಜೊತೆ ಮೊದಲಿನಂತೆ ಕಲೆತು ಹಾಯಾಗಿರಬಹುದೆಂಬ ಭಾವುಕತನದ ಭ್ರಮೆಯ ಪೊರೆ ನನ್ನನ್ನು ಆವರಿಸಿತ್ತು… ಮನೆಯವರೊಂದಿಗೆ ಸಂತೋಷ ಸಮಾಧಾನದಿಂದ ಮುಂದಿನ ದಿನಗಳನ್ನು ನೆಮ್ಮದಿಯಿಂದ ಬದುಕು ಸಾಗಿಸಬಹುದೆಂಬ ನಿರೀಕ್ಷೆ ನನ್ನನ್ನು ನಿರ್ಧಾರಕ್ಕೆ ರೆಕ್ಕೆ ಪುಕ್ಕ ತಂದುಕೊಟ್ಟಿತ್ತು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೋಳ
Next post ಕ್ರಾಂತಿಗೆ ಜಯ

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…