ಊರಿಗೆ ಬಂದಾರೆ ಚೆಲುವೆಯರು
ಪಲ್ಲಂಗದಲವರ ಕುಳ್ಳಿರಿಸಿ ತನ್ನಿ
ನಾಕು ಜನ ಅವರ ಮುಂದಕ್ಕೆ ಬನ್ನಿ
ನಾಕು ಜನ ಅವರ ಹಿಂದಕ್ಕೆ ಬನ್ನಿ
ಪಲ್ಲಂಗದಲ್ಲವರ ಎತ್ತಿಕೊಂಡು ಬನ್ನಿ
ಊರಿಗೆ ಬಂದಾರ ಚೆಲುವೆಯರು
ಲಾವಂಚದ ಬೀಸಣಿಗೆ ಬೀಳ್ಕೊಂಡು ತನ್ನಿ
ನಾಕು ಜನ ಅವರ ಆಚೆಗೆ ಬನ್ನಿ
ನಾಕು ಮಂದಿ ಅವರ ಈಚೆಗೆ ಬನ್ನಿ
ಬೀಸಣಿಗೆಯಲವರ ಬೀಸ್ಕೊಂಡು ಬನ್ನಿ
ಊರಿಗೆ ಬಂದಾರೆ ಚೆಲುವೆಯರು
ಕಾಲಿಗೆ ಮಣ್ಣಾಗದಂತವರ ತನ್ನಿ
ರನ್ನಗಂಬಳಿ ಅವರ ಆ ಕಡೆ ಹಾಸಿ
ಚೆನ್ನಗಂಬಳಿ ಅವರ ಈ ಕಡೆ ಹಾಸಿ
ಮುಂದಕ್ಕೆ ಸುರುಳಿ ಬಿಚ್ಚಿಕೊಂಡು ಬನ್ನಿ
ಊರಿಗೆ ಬಂದಾರೆ ಚೆಲುವೆಯರು
ಬಿಸಿಲಿಗೆ ಅವರ ಬಾಡಿಸದೆ ತನ್ನಿ
ಛತ್ರಿಯ ತಲೆ ಮೇಲೆ ಹಿಡಿದು ಬನ್ನಿ
ಕುಂಕುಮ ನೀರನು ಎರಕೊಂಡು ಬನ್ನಿ
ಪನ್ನೀರ ನೀರನು ಸಿಂಪಡ್ಸ್ಕೊಂಡು ಬನ್ನಿ
ಮಾವಿನ ಹಣ್ಣನು ಹಚ್ಕೊಂಡು ಬನ್ನಿ
ಗೋವಿನ ಹಾಲನು ಕೇಳ್ಕೊಂಡು ಬನ್ನಿ
ಮಖಮಲು ಬಟ್ಟೆಯ ಹಿಡಕೊಂಡು ಬನ್ನಿ
ಮಲ್ಲಿಗೆ ಹೂವನು ಚೆಲ್ಕೊಂಡು ಬನ್ನಿ
ಊರಿಗೆ ಬಂದಾರೆ ಚೆಲುವೆಯರು
ದೇವಿಯರೆ ಬಂದಂತೆ ಬಂದಾರೆ ಅವರು
*****