“ಹಲ್ಲೋ ಪ್ರಶಾಂತ್ ಕಂಗ್ರಾಟ್ಸ್”
“ಕಂಗ್ರಾಟ್ಸ ಮಿ. ಪ್ರಶಾಂತ್”
“ಕಂಗ್ರಾಜ್ಯುಲೇಶನ್ ಡಾ || ಪ್ರಶಾಂತ್”
“ಕಂಗ್ರಾಟ್ಸ್, ಮಿ. ಪ್ರಶಾಂತ್” ಎಂದು ಎಲ್ಲಾ ಸ್ನೇಹಿತರು ಕೈ ಕುಲುಕಿ ಅಭಿನಂದಿಸುವವರೇ. ಅಪ್ಪಿಕೊಳ್ಳುವವರೇ.
ಧಾರವಾಡದ ಕೆ.ಎಂ.ಸಿ. ಘಟಕೋತ್ಸವದಲ್ಲಿ ಎಲ್ಲರೂ ಭಾಗವಹಿಸಿದ್ದಾರೆ. ಅಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ವೈದ್ಯಕೀಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿದ್ದಾರೆ. ಅವರಲ್ಲಿ ಪ್ರಶಾಂತನೂ ಒಬ್ಬ, ಅಗಲವಾದ, ಸುಂದರ ಮುಖ, ನೀಳವಾದ ದೇಹ, ಮೋಹಕ ನಗೆ, ಮಿಂಚಿನ ಕಣ್ಣುಗಳ ಚತುರ, ಯಾರಾದರೂ ಮೋಹಗೊಳ್ಳಬೇಕು. ಪ್ರಶಾಂತತೆಯ ತಾಳ್ಮೆಯ ಪ್ರತೀಕವಾಗಿದ್ದಾನೆ. ಆ ನಗುವಿನ ಹಿಂದೆ ಕಳವಳ, ನೋವು ಇರುವುದು ಅವನ ಮುಖಭಾವದಿಂದ ತೋರುತ್ತಿತ್ತು. ಒಂದು ರೀತಿ ಏನೋ ಯೋಚನೆ, ಅಪ್ಪಾಜಿ ಇದ್ದಿದ್ದರೆ ಎಷ್ಟು ಸಂತೋಷ ಪಡುತ್ತಿದ್ದರೋ ಏನೋ ಎಂದು ತನ್ನ ತಂದೆಯನ್ನು ನೆನಪಿಸಿಕೊಂಡ. ತಟ್ಟನೆ ಕಣ್ಣೀರು ಕೆನ್ನೆಯ ಮೇಲೆ ಹರಿದವು. ಯಾರಾದರೂ ನೋಡಿಯಾರೆಂದು ಕೂಡಲೇ ಕರವಸ್ತ್ರದಿಂದ ಒರೆಸಿಕೊಂಡ.
ಸಭಿಕರಲ್ಲಿ ಕುಳಿತಿದ್ದ ತಾಯಿ ಪ್ರಶಾಂತನನ್ನು ಗಮನಿಸುತ್ತಿದ್ದಾಳೆ. ಅವನನ್ನು ಎಲ್ಲರೂ ಅಭಿನಂದಿಸುತ್ತಿದ್ದಾರೆ. ಸಂತೋಷ ಸಡಗರದಿಂದ ಈ ಜನ್ಮ ಸಾರ್ಥಕವಾಯಿತು ಎಂದು ಹರ್ಷದಿಂದ ಉಬ್ಬಿ ಹೋಗಿದ್ದಳು. ಇದ್ದಕ್ಕಿದ್ದ ಹಾಗೆ ಪ್ರಶಾಂತನು ಕಣ್ಣೀರು ಒರೆಸಿಕೊಂಡಿದ್ದು ತಾಯಿಯ ದೃಷ್ಟಿಗೆ ಬಿತ್ತು. ಆಕೆಗೆ ನೆನಪು ಒಮ್ಮೆಲೇ ಕಣ್ಣು ಮುಂದೆ ಬಂದು ನಿಂತವು, ತಡೆಯದೆ ಕಣ್ಣೀರಿನ ಕೋಡಿ ಹರಿಸಿದಳು. ಆದರೇನು ಮಾಡುವುದು. ನನ್ನಂತಹ ನತದೃಷ್ಟ ಹೆಣ್ಣು ಭೂಮಿಯ ಮೇಲೆ ಇರಲಾರರು ಎಂದುಕೊಂಡಳು. ತನ್ನ ಮಗನಿಗೋಸ್ಕರ ಬದುಕಲೇ ಬೇಕೆಂಬ ಛಲ ಆಕೆಯ ಮನದಲ್ಲಿತ್ತು. ಆ ಛಲದಿಂದ ತನ್ನ ಹಿಂದಿನ ಘಟನೆಗಳ ನೆನಪನ್ನು ಹತ್ತಿಕ್ಕಿ ಅಲ್ಲಿ, ಇಲ್ಲಿ ಕೆಲಸ ಮಾಡಿಕೊಂಡಿದ್ದಳು. ಏನೇ ಆಗಲಿ ಮಗನನ್ನು ವೈದ್ಯನನ್ನಾಗಿ ಮಾಡಿ ಸಮಾಜಕ್ಕೆ ಅರ್ಪಿಸಿದ್ದೇನೆ ಎಂದು ಸಮಾಧಾನದಿಂದ ನಿಟ್ಟುಸಿರು ಬಿಟ್ಟಳು.
ಸಮಾರಂಭದಲ್ಲಿ ಪ್ರಶಾಂತನಿಗೆ ಬಂಗಾರದ ಪದಕವನ್ನು ರಾಜ್ಯಪಾಲರು ಕೊರಳಿಗೆ ಹಾಕಿ ಶಾಲನ್ನು ಹೊದಿಸಿದರು. ಸ್ನೇಹಿತರೆಲ್ಲರೂ ಕರತಾಡನದೊಂದಿಗೆ ಕೇಕೆ ಹಾಕಿ ಕುಣಿದಾಡಿದರು. ಇದೆಲ್ಲಾ ಕಂಡು ಪ್ರಶಾಂತನು ಎಷ್ಟೊಂದು ಪ್ರೀತಿ ವಿಶ್ವಾಸವನ್ನು ತನ್ನ ಸಹಪಾಠಿಗಳಿಂದ ಗಳಿಸಿದ್ದಾನೆ ಎಂದು ಸಂತೋಷಗೊಂಡಳು. ಆ ಸಂತೋಷವನ್ನು ತಡೆಯಲಾರದೇ ಆಕೆಯ ಕಣ್ಣಿನಿಂದ ಆನಂದ ಭಾಷ್ಪ ಹರಿಯುತ್ತಿತ್ತು. ಸಮಾರಂಭವನ್ನು ಮುಗಿಸಿ ತನ್ನ ಸಹಪಾಠಿಗಳಿಂದ ತಪ್ಪಿಸಿಕೊಂಡು ಬರಬೇಕಾದರೆ ಆತನಿಗೆ ಸಾಕುಬೇಕಾಯಿತು.
ಅಂತೂ ಕೊನೆಗೆ ತಾಯಿಯ ಜೊತೆಗೆ ಪ್ರಶಾಂತನು ಮನೆಯನ್ನು ತಲುಪಿದ. ತನ್ನ ಮನಸ್ಸಿನಲ್ಲಿ ಹೊಯ್ದಾಡುತ್ತಿದ್ದ ಪ್ರಶ್ನೆಗಳನ್ನು ತಡೆಯಲಾರದೆ-
“ಅಮ್ಮಾ!”
“ಏನಪ್ಪಾ?”
“ಅಪ್ಪಾ ಎಲ್ಲಿದ್ದಾರಮ್ಮಾ? ಹೇಗಿದ್ದಾರಮ್ಮಾ?” ಎಂದು ತಕ್ಷಣ ಕೇಳಿಯೇ ಬಿಟ್ಟ. “ಇಂದು ನೀನು ನನ್ನ ಪ್ರಶ್ನೆಗಳಿಗೆ ಉತ್ತರಿಸದಿದ್ದರೆ ನನ್ನ ಜೊತೆಗೆ ಮಾತನಾಡಬೇಡ. “ನಾನು ಊಟವನ್ನು ಮಾಡುವುದಿಲ್ಲಾ” ಎಂದು ಹಟ ಹಿಡಿದ. ಎಂತಹ ನಿಷ್ಟೂರ ಪ್ರಶ್ನೆಗಳು, ಉತ್ತರಿಸದಿದ್ದರೆ ಎಲ್ಲಿ ಮಾತು ಬಿಡುವನೋ, ಉಪವಾಸ ಮಲಗುವನೋ, ಎಂದು ಹೆದರಿ ಮಮತೆಯಿಂದ ತಲೆಯನ್ನು ನೇವರಿಸುತ್ತಾ ಮಗು ಹೇಳುತ್ತೇನೆ, ಕೇಳು ಎಂದು ಅವನನ್ನು ಸಮಾಧಾನ ಪಡಿಸುತ್ತಾ ತನ್ನ ಹಳೆಯ ನೆನಪನ್ನು ನೆನಪಿಸಿಕೊಂಡಳು.
* * *
“ಅಮ್ಮಾ, ಅಮ್ಮಾ, ಪದ್ಮ ಇದ್ದಾಳ”
“ಹೂನಮ್ಮಾ, ಪದ್ಮಾ, ಏ ಪದ್ಮಾ, ಬಾ ಇಲ್ಲಿ, ಯಾರು ಬಂದಿದ್ದಾರೆ ನೋಡು” ಎಂದು ತಾಯಿ ಒಳಗಿದ್ದ ಮಗಳನ್ನು ಜೋರಾಗಿ ಕರೆದಳು.
ಕೈ ಒರೆಸಿಕೊಳ್ಳುತ್ತಾ ಒಳಗಿನಿಂದ ಬಂದ ಪದ್ಮಾ –
“ಬಾರೇ ಸುನಂದಾ, ಕುತ್ಕೋ ಹೇಗಿದ್ದೀಯಾ”
“ನೀನು ಹೇಗಿದ್ದೀಯ”
“ಹೀಗಿದ್ದೇನೆ ನೋಡು” ಎಂದಳು ಸುನಂದ.
ಇಬ್ಬರೂ ಸ್ನೇಹಿತರು ಬಿ.ಎಡ್. ಪರೀಕ್ಷೆ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದರು. ಮುಂದೇನು ಮಾಡುವುದೆಂದು ಮಾತಾಡಿಕೊಳ್ಳುತ್ತಿದ್ದರು. ಅಷ್ಟರಲ್ಲಿಯೇ ಪದ್ಮಾಳ ಅಣ್ಣ ಬಂದು ನೋಡೇ, ಪಕ್ಕದ ಹಳ್ಳಿ ಮರೋಳದ ಜನತಾ ಪ್ರೌಢಶಾಲೆಯಲ್ಲಿ ಶಿಕ್ಷಕರ ಹುದ್ದೆಗೆ ಅರ್ಜಿ ಕರೆದಿದ್ದಾರೆ. ನೀವಿಬ್ಬರೂ ಅರ್ಜಿ ಹಾಕಿರಿ ಎಂದು ಜಾಹೀರಾತು ಇರುವ ಪತ್ರಿಕೆಯನ್ನು ಅವರಿಗೆ ಕೊಟ್ಟ.
ಪದ್ಮಳ ಕುಟುಂಬ ತುಂಬಾ ಬಡತನದಿಂದ ಬಸವಳಿದಿತ್ತು. ಆ ಸಂಸಾರಕ್ಕೆ ಒಪ್ಪತ್ತಿನ ಜೀವನ ನಡೆಸುವುದು ತುಂಬಾ ಕಷ್ಟಕರವಾಗಿತ್ತು. ಪದ್ಮ ಆ ಶಾಲೆಗೆ ಅರ್ಜಿ ಹಾಕಿರುವ ವಿಷಯದಿಂದ ಆಕೆಯ ತಂದೆ, ತಾಯಿಗಳಿಗೆ ಹರ್ಷವಾಗಿತ್ತು. ಕಮಿಟಿಯಲ್ಲಿನ ಪರಿಚಯವಿರುವ ಸದಸ್ಯರ ಸಿಫಾರಸ್ಸಿನಿಂದ ಹೇಗಾದರೂ ಮಾಡಿ ಕೆಲಸ ಗಿಟ್ಟಿಸಬೇಕೆಂದು ಅವರಿಬ್ಬರೂ ಹಂಬಲಿಸಿದ್ದರು.
ಅವರ ಅದೃಷ್ಟವೋ ಏನೋ ಅವರಿಬ್ಬರಿಗೂ ಒಂದು ದಿನ ಆ ಶಾಲೆಯ ಸಂದರ್ಶನ ಪತ್ರವು ಬಂದಿತು. ಆ ಪತ್ರವನ್ನು ತೆಗೆದುಕೊಂಡು ಅದೇ ಊರಿನ ಹೆಸರಾಂತ ವಕೀಲ ಶಿವಾನಂದರಾಯರ ಮನೆಗೆ ಹೋಗಿದ್ದರು. ಅವರು ಪರಿಚಯದವರೂ ಆಗಿದ್ದರು. ಇವರ ಸ್ಥಿತಿಗತಿಯನ್ನು ಅರಿತಿದ್ದರು. ಇವರು ಅವರ ಮನೆಗೆ ಹೋದಾಗ ವಕೀಲರು ಮನೆಯಲ್ಲಿಯೇ ಇದ್ದಾರೆಂದು ತಿಳಿದು,
“ಸಾರ್”
“ಸಾರ್”
ಒಳಗಿನಿಂದ ಬಂದ ಶಿವಾನಂದರಾಯರು
“ಏನ್ರಮ್ಮಾ”
“ನಮಸ್ಕಾರ ಸಾರ್” ಎಂದಳು ಸುನಂದಾ.
“ನಮಸ್ಕಾರ ಸಾರ್” ಎಂದಳು ಪದ್ಮ.
“ನಮಸ್ಕಾರ, ಬನ್ನಿ ಬನ್ನಿ ಕುಳಿತುಕೊಳ್ಳಿ” ಎಂದರು ಶಿವಾನಂದರಾಯರು. “ನಾವಿಬ್ಬರೂ ನಿಮ್ಮ ಹೈಸ್ಕೂಲಿಗೆ ಅರ್ಜಿ ಹಾಕಿದ್ವಿ, ನಮಗೆ ಈಗ ಸಂದರ್ಶನಕ್ಕೂ ಬಂದಿದೆ ಸಾರ್” ಎಂದು ಒಂದೇ ಉಸಿರಿನಲ್ಲಿ ಇಬ್ಬರೂ ಹೇಳಿದರು.
ನಂತರ
“ನಮ್ಮ ವಿಚಾರ ನಿಮಗೊತ್ತಿದೆ. ಹೇಗಾದರೂ ಮಾಡಿ ನಮ್ಮಿಬ್ಬರಿಗೂ ಅಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕು” ಎಂದು ಇಬ್ಬರೂ ವಿನಂತಿಸಿಕೊಂಡರು. ಶಿಕ್ಷಕರ ಹುದ್ದೆಗೆ ತಮ್ಮಿಬ್ಬರನ್ನೂ ತೆಗೆದುಕೊಳ್ಳುವ ಆಶ್ವಾಸನೆಯೊಂದಿಗೆ ಹಿಂತಿರುಗಿದರು. ನೌಕರಿ ಸಿಕ್ಕಷ್ಟು ಸಂತೋಷಗೊಂಡು ಕುಣಿದಾಡಿದ್ದರು.
ಸಂದರ್ಶನಕ್ಕೆ ಇಬ್ಬರೂ ಹೋಗಿದ್ದರು. ಪದ್ಮಳಿಗೆ ಮಾತ್ರ ಕೆಲಸಕ್ಕೆ ಆದೇಶ ಬಂದಿತ್ತು. ಆ ಶಾಲೆಯಲ್ಲಿ ಅವಳಿಗೆ ನೌಕರಿ ಸಿಕ್ಕಿತು. ಆದರೆ ಸುನಂದಳಿಗೆ ಮಾತ್ರ ಅದು ಲಭಿಸಲಿಲ್ಲ. ಇದಕ್ಕೆ ಆಕೆಯ ಒರಟು ದಿಟ್ಟತನವೇ ಕಾರಣವಾಯಿತು. ಮತ್ತೊಮ್ಮೆ ಶಿವಾನಂದರಾಯರನ್ನು ಕಂಡಳು. ನಿನಗೆ ಬೇರೆ ಎಲ್ಲಾದರೂ ನೌಕರಿ ಕೊಡಿಸುವೆ ಎಂದು ಬರವಸೆ ಇತ್ತರು. ಅವಳು ಮಾತ್ರ ನೌಕರಿಯ ಆಸೆ ಹೊತ್ತು ಆಗಾಗ್ಗೆ ಅವರನ್ನು ಭೇಟಿಯಾಗುತ್ತಿದ್ದಳು. ತಿಂಗಳು ಕಳೆದವು. ಅವರು ಅವಳಿಗೆ ನೌಕರಿಯನ್ನು ಅದೇ ಶಾಲೆಯಲ್ಲಿ ಕೊಡಿಸುವೆನೆಂದು ಹೇಳಿ ಪುನಃ ಅದೇ ಶಾಲೆಗೆ ಅರ್ಜಿಯನ್ನು ಹಾಕಿಸಿದ್ದರು.
ಒಂದು ದಿನ ಆಕೆಗೂ ಸಂದರ್ಶನಕ್ಕೆ ಆದೇಶ ಬಂದಿತ್ತು. ಸಂದರ್ಶನಕ್ಕೆ ಹೊರಟಿದ್ದಳು. ಅವರೂ ಸಹ ಅದೇ ವೇಳೆಗೆ ಶಾಲೆಯ ಕಡೆಗೆ ಹೊರಟಿದ್ದರು. ಅವರ ಕಾರಿನಲ್ಲಿಯೇ ಆಕೆಯನ್ನು ಕರೆದುಕೊಂಡು ಹೋದರು. ಅದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತೆ ಪದ್ಮಳನ್ನು ಮಾತನಾಡಿಸಿದಳು. ನಂತರ ಸಂದರ್ಶನ ಮುಗಿಸಿಕೊಂಡು ಅದೇ ಕಾರಿನಲ್ಲಿ ವಾಪಸ್ಸು ಬರುವಾಗ ಸಂಜೆಯಾಗಿತ್ತು. ಸ್ವಲ್ಪದೂರ ಹೋದಮೇಲೆ ಕಾರು ನಿಲ್ಲಿಸಿ, “ಸುನಂದ, ನಿನ್ನ ಹತ್ತಿರ ಸ್ವಲ್ಪ ಮಾತನಾಡಬೇಕು
ಮುಂದೆ ಬಂದು ಕುಕ್ತೋ” ಎಂದರು. ಅದಕ್ಕೆ ಹಿಂದೆ ಕುಳಿತ ಅವಳು ಮುಂದೆ ಬಂದು ಅವರ ಪಕ್ಕದಲ್ಲಿ ಕುಳಿತುಕೊಂಡಳು. ನಿಧಾನವಾಗಿ “ಸಂದರ್ಶನ ಹೇಗೆ ಮಾಡಿದ್ದೀಯೆ?” “ಚನ್ನಾಗಿ ಮಾಡಿದ್ದೇನೆ, ನೀವಿರೋವರೆಗೂ ನನಗೆ ಭಯವಿಲ್ಲ” ಎಂದಳು. “ನೀನು ಎಷ್ಟು ಅಂತ ಕೆಲಸಕ್ಕೆ ಅಲಿತೀಯ, ನೀನು ಅಲಿಯೋದು ಬೇಡ, ನಿನಗೆ ನೌಕರಿಯೂ ಬೇಡ” ಎಂದು ಸುಮ್ಮನಾದರು. ಒಂದು ಕ್ಷಣ ಬಿಟ್ಟು! “ನಿನ್ನ ಹತ್ತಿರ ಒಂದು ಮಾತು ಕೇಳ್ತೀನಿ, ಬೇಜಾರು ಪಡ್ಕೊಬೇಡ. ಕೇಳಲಾ” ಎಂದರು. ಅವಳು ಗಟ್ಟಿ ಮನಸ್ಸು ಮಾಡಿ “ಕೇಳಿರಿ” ಎಂದಳು.
“ಸುನಂದಾ, ನಿನ್ನನ್ನು ನಾನು ಮನಸಾರೆ ಪ್ರೀತಿಸ್ತೀನಿ. ನೀನು ಇಲ್ಲ ಎನ್ನಬೇಡ. ನಿನ್ನನ್ನು ಮದುವೆಯಾಗ್ತಿನಿ” ಎಂದು ಆಕೆಯ ಕೈಯನ್ನು ಅದುಮಿ, ಕೆನ್ನೆಯ ಮೇಲೆ ಕೈಯಾಡಿಸುತ್ತಾ ಹೇಳಿದರು. ಕೆಲಸಕ್ಕಾಗಿ ಅಲೆದಾಡಿ ಸಾಕಾಗಿ ಹೋಗಿತ್ತು ಅವಳಿಗೆ. ಮನಸ್ಸಿನಲ್ಲಿ ಏನು ಹೊಳೀತಾ ಇತ್ತೋ ಏನೋ ದಿಕ್ಕುತೋಚದಂತಾಗಿ ತನ್ನನ್ನು ತಾನೇ ಮರೆತು ಅವರಿಗೆ ತನ್ನನ್ನು ಅರ್ಪಿಸಿ “ನೀವು ನನ್ನ ಕೈ ಬಿಡಬೇಡಿರಿ. ಆದಷ್ಟು ಬೇಗ ಮದುವೆ ಮಾಡಿಕೊಳ್ಳಿರಿ” ಎಂದಳು.
ಅವಳ ದೇಹದ ರುಚಿಯುಂಡ ಬಳಿಕ ಅವರು ಕಾಣದಾದರು. ಆ ಶಾಲೆಯ ನೌಕರಿಯೂ ಸಹ ಆಕೆಗೆ ಸಿಗಲಿಲ್ಲ. ಆಕೆಗೆ ಸಿಕ್ಕಿದ್ದು ಕಾಮದ ಫಲವೇ ಹೊರತು ಬೇರೇನೂ ಸಿಗಲಿಲ್ಲ. ಸಿರಿವಂತರಿಗೆ ಬಡ ಹೆಣ್ಣಿನ ಶೀಲವನ್ನು ಹರಣ ಮಾಡುವುದೆಂದರೆ ತುಂಬಾ ಸಂತೋಷ, ಚಿನ್ನಾಟವೂ ಕೂಡ. ಎಂದು ಪ್ರತಿದಿನವೂ ಹರಿಯುತ್ತಿದ್ದ ಕಂಬನಿಯಲ್ಲಿ ತನ್ನ ಕೈಗಳನ್ನು ತೊಳೆಯುತ್ತಿದ್ದಳು. ಅವರ ಪಾಪದ ಫಲಹೊತ್ತ ಅವಳು ಎಷ್ಟು ದಿನಗಳ ಕಾಲ ಹಾಗೆ ಇರುತ್ತಾಳೆ. ತನ್ನ ದೇಹದಲ್ಲಾದ ಬದಲಾವಣೆಯನ್ನು ಅವರಿಗೆ ತಿಳಿಸಲು ಸಾಕಷ್ಟು ಹುಡುಕಾಡಿದಳು. ಆದರೆ ಅವರು ಸಿಗಲಿಲ್ಲ. ದಿನದಿಂದ ದಿನಕ್ಕೆ ದೇಹದ ಬದಲಾವಣೆಯೂ ಹೆಚ್ಚತೊಡಗಿತು. ಆದರೂ ಒಂದು ದಿನ ಪ್ರಯಾಸ ಪಟ್ಟು ಅವರನ್ನು ಪತ್ತೆ ಹಚ್ಚಿದಳು. ತನ್ನ ಕಷ್ಟವನ್ನು ಅವರ ಮುಂದೆ ತೋಡಿಕೊಂಡಳು ಅದಕ್ಕೆ ಅವರು “ನೀನು ಹೆದರಬೇಡ. ಸದ್ಯದಲ್ಲಿಯೇ ನಿನ್ನನ್ನು ಮದುವೆಯಾಗ್ತಿನಿ. ನಿನಗೊಂದು ಬೇರೆ ಮನೆ ಮಾಡ್ತೀನಿ” ಎಂದು ಮತ್ತೊಮ್ಮೆ ಹೇಳಿದರು. ಅವರ ಮಾತಿಗೆ ಮರುಳಾಗಿ ಆಶಾ ಭಾವನೆಯನ್ನು ಹೊತ್ತು ಸಂತೋಷದಿಂದ ಮನೆಗೆ ಹಿಂದಿರುಗಿದಳು.
ಆದರೆ ಅವರು ಆಕೆಯನ್ನು ಮದುವೆಯಾಗುವುದು ಅಷ್ಟು ಸುಲಭವಾಗಿರಲಿಲ್ಲ. ಅವರದು ಪ್ರತಿಷ್ಠಿತ ಕುಟುಂಬವಾಗಿತ್ತು. ಅಲ್ಲದೇ ಅವರು ಎರಡು ಮಕ್ಕಳ ತಂದೆಯಾಗಿದ್ದರು. ಆದರೂ ಅವರ ಭರವಸೆಯ ಮೇಲೆ ದಿನವನ್ನು ನೂಕ್ತಾ ಇದ್ದಳು. ಆದರೇನು ಮಾಡುವುದು, ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಪ್ರಪಂಚಕ್ಕೆ ಗೊತ್ತಾಗುವುದಿಲ್ಲವೇ? ಹಾಗಾಯ್ತು ಅವಳ ಸ್ಥಿತಿ, ತನ್ನ ಸ್ನೇಹಿತೆ ಪದ್ಮಳ ಮನೆಗೆ ಹೋಗುವುದು ಕಠಿಣವಾಯಿತು. ಹೋಗುವ ಮಾರ್ಗದಲ್ಲಿ ಜನರಿಂದ ಕೆಟ್ಟ ಮಾತುಗಳನ್ನು ಕೇಳುವಂತಾಯಿತು. “ಏ ಅಲ್ಲಿ ನೋಡೋ ಶಿವಾನಂದರ ಸೂಳೆ- ಬಂದಳು.” “ಗಂಡನಿಲ್ಲದೆ ಚಟಕ್ಕೆ ಬಸರಾದವಳು”, “ಏನು ಹೇಳ್ತಿಯಾ, ರೋಗಿ ಬಯಸಿದ್ದು ಹಾಲು ಅನ್ನ ಡಾಕ್ಟರು ಹೇಳಿದ್ದು ಹಾಲು ಅನ್ನ” ಮುಂತಾದ ಮಾತುಗಳಿಂದ ಅವಳ ಹೃದಯ ಚುಚ್ಚಿದಂತಾಗಿ ತನ್ನನ್ನು ತಾನೇ ಹಪಹಪಿಸುತ್ತಾ ರಸ್ತೆಯಲ್ಲಿ ತಿರುಗಾಡಲಾರದೆ ಕಣ್ಣೀರು ಸುರಿಸುತ್ತಾ ಮನೆಯಲ್ಲಿಯೇ ಇರತೊಡಗಿದಳು.
ತನ್ನಿಂದ ತಂದೆ, ತಾಯಿ, ಅಣ್ಣ, ತಮ್ಮ, ತಂಗಿಯರ ಮನಸ್ಸು ಕೆಟ್ಟ ಮೊಸರು ಗಡಿಗೆಯಂತಾಯಿತು. ಆಕೆಯನ್ನು ತುಚ್ಚವಾಗಿ ಕಾಣಲಾರಂಭಿಸಿದರು. “ನೀತಿಗೆಟ್ಟವಳು ನೀನು, ಗೌರವದಿಂದ ಬಂದ ನಮ್ಮ ಕುಟುಂಬಕ್ಕೆ ಮಸಿ ಬಳಿದಿದ್ದೀಯಾ, ನಿನ್ನಂಥವರು ಇದ್ದರೆಷ್ಟು ಬಿಟ್ಟರೆಷ್ಟು?” ಎಂದು ಕೆಟ್ಟದಾಗಿ ದಿನನಿತ್ಯ ಬೈಯಲು ಶುರುಮಾಡಿದರು. ಮನೆಯಲ್ಲಿಯೇ ಆಕೆಗೆ ರಕ್ಷಣೆ ಇಲ್ಲದಂತಾಯಿತು. ಹೊರಗಡೆ ಹೋಗುವುದು ದುಸ್ಸಾಹಸದ ಮಾತಾಯಿತು. ಇನ್ನು ಪದ್ಮ ಆಗಾಗ್ಗೆ ಮನೆಗೆ ಬಂದು ಸಾಂತ್ವನ ನೀಡುತ್ತಿದ್ದಳು. ಕೊನೆ ಕೊನೆಗೆ ಆಕೆ ಬರುವುದೂ ಸಹ ನಿಂತು ಹೋಯಿತು. ಆಕೆಯು ಬರದಾದಾಗ ಅವಳ ಮನಸ್ಸಿಗೆ ನೋವುಂಟಾದದ್ದು ಅಷ್ಟಿಷ್ಟಲ್ಲ. ಅವಳು ಸ್ನೇಹಿತೆಯನ್ನು ಕಳೆದುಕೊಂಡಳು. ಆಕೆಗೆ ಇನ್ನಾರು ಗತಿ. ನನ್ನ ಪರಿಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಯಿತಲ್ಲ, ನನ್ನ ಬಾಳು ನಾಯಿ ಮುಟ್ಟಿದ ಮಡಿಕೆಯಂತಾಯಿತಲ್ಲಾ ನನ್ನ ಗೋಳಿನ ಕಥೆಯನ್ನು ಕೇಳುವವರಾರು? ನಾಯಿ, ನರಿ ಪ್ರೀತಿ ಮಾಡುವ ಜನ ತನ್ನನ್ನು ಪ್ರೀತಿಸದಾದರು ಎಂದು ಪರಿತಪಿಸುತ್ತಿದ್ದಳು. ಒಂದೊಂದು ದಿನವೂ ವರ್ಷವಾಗತೊಡಗಿತು.
ದಿನಗಳು ನಿಲ್ಲದೆ ಉರುಳ ತೊಡಗಿದವು. ಆಕೆ ತುಂಬು ಗರ್ಭಿಣಿಯಾದಳು. ಮನೆಯಲ್ಲಿ ಕೊಡುವ ಕಿರುಕುಳದಿಂದ ತಾಳಲಾರದೆ ಯಾರಿಗೂ ಹೇಳದೆ ಕೇಳದ ಒಂದು ದಿನ ರಾತ್ರಿ ಮನೆಯನ್ನು ಬಿಟ್ಟು ಹೊರಟಳು. ಎಲ್ಲಿಗೆ ಹೋಗುವುದು? ಈ ಪ್ರಶ್ನೆಗೆ ಸಾವೇ ಆಕೆಗೆ ಹಿತವೆನಿಸಿತು. ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದಳು. ಸರಿ ರಾತ್ರಿಯಾಗಿದೆ. ಎಲ್ಲಿಗೆ ಹೋಗ್ತಾ ಇದ್ದೀನಿ ಎನ್ನುವ ಕಲ್ಪನೆಯೂ ಆಕೆಗೆ ಇರಲಿಲ್ಲ. ಕತ್ತಲಲ್ಲಿ ಏನೂ ಸರಿಯಾಗಿ ಕಾಣುತ್ತಿರಲಿಲ್ಲ. ಯಾವುದೋ ಹಳ್ಳಿಯಾಗಿರಬೇಕು. ಆಕೆ ಹುಡುಕುತ್ತಿದ್ದ ಬಾವಿಯೂ ಸಿಕ್ಕಿತು. ಇಣಿಕಿ ನೋಡಿ ಇನ್ನೇನು ಬೀಳಬೇಕು ಎನ್ನುವಷ್ಟರಲ್ಲಿಯೇ ಯಾರೋ ಓಡಿ ಬಂದು ಮೇಲುಸಿರು ಬಿಡುತ್ತಾ ಆಕೆಯ ರಟ್ಟೆಯನ್ನು ಹಿಡಿದಿದ್ದರು. ಕೊನೆಗೆ ಗೊತ್ತಾಯಿತು, ಆ ಊರಿನ ಗೌಡರೆಂದು. ಅವರು “ಏನಮ್ಮಾ, ತುಂಬು ಗರ್ಭಿಣಿಯಾದ ನೀನು ಆತ್ಮಹತ್ಯೆಗೆ ಯೋಚನೆ ಮಾಡಿದ್ದೀಯಾ? ನಿನಗೇನು ತೊಂದರೆ” ಎಂದು ಕೇಳಿದರು. ಕೊನೆಗೆ ದುಃಖ ತಡೆಯಲಾರದೆ ನಡೆದ ಎಲ್ಲಾ ವಿಚಾರವನ್ನೂ ಭಿಕ್ಕಿಸಿ, ಭಿಕ್ಕಿಸಿ ಹೇಳಿ ಅತ್ತು ಬಿಟ್ಟಳು. “ಸರಿಯಮ್ಮಾ, ನೀನು ಇಂತಹ ಕೆಲಸಕ್ಕೆ ಕೈ ಹಾಕಬಾರದಮ್ಮಾ, ನೋಡು ಹೆರಿಗೆ ಆಗುವವರೆಗೂ ನಮ್ಮ ಮನೆಯಲ್ಲೇ ಇರು” ಎಂದು ಹೇಳಿ ತಮ್ಮ ಮನೆಗೆ ಕರೆದೊಯ್ದರು.
“ಗೌಡತಿ, ಅವರ ದೊಡ್ಡಮಗಳು ದೇವರಂತಹ ಮನುಷ್ಯರು. ಅವರು ನನ್ನ ಮರ್‍ಯಾದೆ ಉಳಿಸಿದರು. ಅವರು ಇಲ್ಲದೆ ಹೋಗಿದ್ದರೆ ನಿನ್ನ ಜನ್ಮ ಆಗುತ್ತಿರಲಿಲ್ಲ. ನಾನು ಉಳಿಯುತ್ತಿರಲಿಲ್ಲ. ನನ್ನ ಅದೃಷ್ಟ ಚೆನ್ನಾಗಿತ್ತು. ಹದಿನೈದು ದಿವಸಗಳಲ್ಲಿಯೇ ಗೌಡರ ಮನೆಯಲ್ಲಿಯೇ ಮುದ್ದು ಮುಖದ ಗಂಡುಮಗುವನ್ನು ಹಡೆದೆ ಆ ಮಗುವಿನ ಜನನವು ಅಕ್ಷಯ ತದಿಗೆಯ ಶುಭದಿನದಂದು ಆಗಿದ್ದರಿಂದ ಅದು ಮುಂದೆ ವಿದ್ಯಾವಂತನಾಗುತ್ತಾನೆ, ದೊಡ್ಡ ಮನುಷ್ಯನಾಗುತ್ತಾನೆ, ಜನಾನುರಾಗಿಯೂ ಆಗ್ತಾನೆ ಎಂದು ಗೌಡರು ಪಂಚಾಂಗ ನೋಡಿ ಹೇಳಿದ್ದರು.” ಆಕೆಯ ಮನಸ್ಸು ಆನಂದವಾಗಿತ್ತು. ಎಷ್ಟು ದಿನ ಅಂತ ಎರಡು ಜೀವ ಗೌಡರ ಮನೆಯಲ್ಲಿರುವುದು, ಅವರಿಗೂ ತೊಂದರೆ, ಅಲ್ಲಿಯೂ ಹೆಚ್ಚು ದಿನ ಇರಲಾರದೆ ಯೋಚಿಸಿ ಹಸುಗೂಸಿನೊಂದಿಗೆ ಹೊರಟಳು. ಕೊನೆಗೆ ಹಾವೇರಿ ಪಟ್ಟಣ ಸೇರಿದಳು. ಅಲ್ಲಿನ ಹೆಣ್ಣುಮಕ್ಕಳ ಹಾಸ್ಟೇಲಿನಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವ ಕೆಲಸ ಅವಳಿಗೆ ಸಿಕ್ಕಿತು.
ತಿಂಗಳುಗಳು ಕಳೆದಿದ್ದವು. ಗಂಡನಿಲ್ಲದ ಹೆಣ್ಣು ಹೇಗೆ ತಾನೇ ಬಾಳಿಯಾಳು? ಅಲ್ಲಿಯೂ ಸಹ ಕಾಮುಕರ ಹಾವಳಿಯು ಆರಂಭವಾಯಿತು. ಅದಕ್ಕೆ ಅವಳ ತುಂಬುದೇಹದ ಸುಂದರವಾದ ಕುಣಿಯುವ ಎದೆಗಳೇ ಕಾರಣವಾದವು, ಹೆಣ್ಣು ಸುಂದರಳಾಗಿ ಹುಟ್ಟಲೇ ಬಾರದೆಂದೆನಿಸಿತು. ಅವಳಿಗೆ ರಸ್ತೆಯಲ್ಲಿ ಓಡಾಡುವುದು ಬರ್ಬರವೆನಿಸಿತು. ಅಲ್ಲಿಯೂ ಇರಲಾರದೇ ಸಾಗರಕ್ಕೆ ಬಂದು ಸೇರಿದಳು. ನನ್ನಂತಹ ತಾಳಿ ಇಲ್ಲದ ಹೆಣ್ಣು ಇದ್ದರೆ ಜನರ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲಾದೀತೆ? ನನ್ನ ಶೀಲವನ್ನು ತಾತ್ಕಾಲಿಕ ತಾಳಿಯಿಂದಲಾದರೂ ಉಳಿದೀತೆ? ಎಂದು ಯೋಚಿಸಿ ಒಂದು ತಾಳಿ ರೂಪದ ಕರಿಮಣಿ ಸರವನ್ನು ಕೊಂಡು ಕೊರಳಿಗೆ ಹಾಕಿಕೊಂಡಳು. ಅದು ತಿರುಗಾಡಲು ಸ್ವಲ್ಪ ಧೈರ್ಯ ತಂದಿತು. ಆದರೆ ಹೊಟ್ಟೆಗೇನು ಮಾಡುವುದು? ಕೆಲವು ಶ್ರೀಮಂತ ವರ್ಗದ ಮನೆ ಕೆಲಸಕ್ಕೆ ಹೋಗಲಾರಂಭೀಸಿದಳು. ಜೊತೆಯಲ್ಲಿ ಅವರ ಮಕ್ಕಳಿಗೂ ಪಾಠ ಹೇಳಿ ಅಲ್ಪ ಸ್ವಲ್ಪ ಹಣ ಸಂಪಾದಿಸುತ್ತಿದ್ದಳು. ಆ ಹಣದಿಂದ ತನ್ನ ಮಗನನ್ನು ಓದಿಸಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಮಾಡಿಸಿದಳು. ಅವನು ಎಲ್ಲದರಲ್ಲೂ ಜಾಣನಿದ್ದ, ಎಲ್ಲಾ ಪರೀಕ್ಷೆಗಳಲ್ಲೂ ಪ್ರಥಮ ದರ್ಜೆಯಲ್ಲಿ ಪಾಸಾಗುತ್ತಿದ್ದ, ಆ ಸಂತೋಷದಲ್ಲಿ ಅವಳು ತನ್ನೆಲ್ಲಾ ಕಷ್ಟಗಳನ್ನು ಮರೆಯುತ್ತಿದ್ದಳು.
ಅಮವಾಸ್ಯೆ ಕಳೆದು ಹುಣ್ಣಿಮೆ ಚಂದಿರನಂತೆ ನೀನು ನಿನ್ನ ಬಾಲ್ಯವನ್ನು ಕಳೆದು ಈಗ ವೈದ್ಯಕೀಯ ಪರೀಕ್ಷೆಯನ್ನು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದೀಯ ಕಂದಾ… ಈ ಸಂತೋಷದ ಕಡಲಲ್ಲಿ ನಾನು ಮುಳುಗಿ ನನ್ನ ಕಷ್ಟದ ಜೀವನವನ್ನು ಮರೆತಿದ್ದೇನೆ ಕಣೋ, ಇನ್ನು ನನಗೆ ಗಂಡ ಎಂದು ಅನ್ನಿಸಿಕೊಂಡವರು ಆ ನಿನ್ನ ತಂದೆ ಕುಡಿತದ ಅಭ್ಯಾಸದಿಂದ ಕೃಶಕರಾಗಿದ್ದರು. ತನ್ನ ಸ್ವಂತ ಹೆಂಡತಿಯನ್ನು ಬಿಟ್ಟು ಬೇರೆ ಇನ್ನಾವುದೋ ಮತ್ತೊಂದು ಹೆಂಗಸಿನೊಂದಿಗೆ ಇದ್ದರಂತೆ. ಮೊನ್ನೆ ತಾನೇ ತೀರಿಕೊಂಡರಂತೆ ಎಂದು ಹೇಳಿ ಧಾರಾಕಾರವಾಗಿ ಹರಿಯುತ್ತಿದ್ದ ಕಣ್ಣೀರನ್ನು ಒರೆಸಿಕೊಂಡಳು.
ಇದನ್ನು ಕೇಳಿದ ಮಗ ಡಾ|| ಪ್ರಶಾಂತನು ನೀಳವಾದ ನಿಟ್ಟುಸಿರೊಂದನ್ನು ಬಿಟ್ಟು ಊಟಕ್ಕೆದ್ದಾಗ ರಾತ್ರಿ ೧೨ ಆಗಿತ್ತು.
*****