ಎಂಥ ಚೆಂದ ನಿನ್ನ ರೂಪು ಭುವನೇಶ್ವರಿ
ಕಣ್ಣು ತುಂಬಿ ತುಳುಕುತೈತೆ ನಿನ್ನೈಸಿರಿ /ಪ//
ಹಸಿರು ಬಳ್ಳಿ ಮುಡಿಯಲ್ಲಿರೊ ದುಂಡು ಮಲ್ಲಿಗೆ
ಚಿಗುರು ಎಲೆಯ ಮರೆಯಲ್ಲಿರೊ ಕೆಂಡ ಸಂಪಿಗೆ
ನಿನ್ನ ರೂಪು ತೋರುತೈತೆ ಗಂಧ ಬೀರುತ್ತ
ಹೇಗೊ ಮೋಡಿ ಮಾಡುತೈತೆ ರಂಗು ತಾಳುತ್ತ
ಗೆಜ್ಜೆ ಇಲ್ದೆ ಹೆಜ್ಜೆ ಹಾಕಿ ನಾಟ್ಯ ನವಿಲು
ತಾಳ ತಂತಿ ಇಲ್ಲದೇನೆ ಗಿಳಿಯ ಕೊರಳು
ಸೋಜಿಗವ ಸೂಸುತೈತೆ ಬಿಂಕ ಬೀರುತ್ತ
ನಿನ್ನ ಸತ್ಯ ಸಾರುತೈತೆ ಸದ್ದು ಮಾಡುತ್ತ
ಬೆಟ್ಟ ಗುಡ್ಡ ಬಯಲು ಸಾಲು ನೀಲಿ ಸಾಗರ
ಕಾಣದಂತೆ ಬೀಸಿ ಬರುವ ಗಾಳಿ ಚಾಮರ
ನಿನ್ನ ಲೀಲೆ ಹಾಡುತೈತೆ ಮೌನ ತಾಳುತ್ತ
ಸೃಷ್ಟಿ ಗುಟ್ಟು ರಟ್ಮಾಡೈತೆ ನಿನ್ನ ತೋರುತ್ತ
*****