ಏ ಕೃಷ್ಣ ಭಿಕ್ಷೆ ಬೇಡ್ಬೇಡ್ವೋ….. ನನ್ನ ಮನೆತನದ ಮರ್ಯಾದೆ ಹರಾಜಿಗಿಡಬೇಡ….. ನಿನ್ಗೆ ಏನ್ ಬೇಕಂತಾದ್ರು ಹೇಳೋ …. ನಿನ್ನ ಕಾಲ್ಮುಗಿತೀನಿ…. ತುಂಡು ಬೀಡಿಗಾಗಿ, ಹನಿ ಸರಾಯಿಗಾಗಿ ಭಿಕ್ಷೆ ಬೇಡ್ಬೇಡ. ಮನೆಯಲ್ಲಿ ನಿನಗೇನ ಕಮ್ಮಿ ಆಗೈತಿ…. ಒಂದೇ ಸಮನೆ ಪುರುಷೋತ್ತಮ ರಾಯರು ಬಡಬಡಿಸುತ್ತಿದ್ದರು. ಪುರುಷೋತ್ತಮ ರಾಯರಿಗೆ ಕೃಷ್ಣ ಮೊದಲ ಮಗ. ತಮ್ಮ ಕಣ್ಮುಂದೆ ಮಗ ಹುಚ್ಚನಾದುದನ್ನು ಕಂಡು ಕೊರಗತೊಡಗಿದ್ದರು. ಸೆರೆ ಕುಡಿಯಲು ಹಣ ಬೇಡುವುದು, ಊರಲ್ಲಿ ಭಿಕ್ಷೆ ಕೇಳುತ್ತಾ ತಿರುಗುವುದು ಕಂಡ ರಾಯರು ಅವಮಾನದಿಂದ ಕುಂದಿಹೋಗಿದ್ದರು. ಹುಚ್ಚುತನದ ಜೊತೆಗೆ ಮಗ ತನ್ನೂರಲ್ಲಿ ಭಿಕ್ಷೆ ಬೇಡುವಂತಾಯಿತಲ್ಲ ಎಂಬ ನೋವು ಅವರನ್ನು ಸದಾ ಬಾಧಿಸುತ್ತಿತ್ತು. ಕುಳಿತುಂಡರೂ ಕರಗದಷ್ಟು ಆಸ್ತಿ ಪೇಟೆಯಲ್ಲಿ ಕಿರಾಣಿ ಅಂಗಡಿ. ಮನೆಯ ಕೂಗಳತೆಯಲ್ಲಿದ್ದ ಐವತ್ತು ಎಕರೆ ಗದ್ದೆ ತೋಟ ಯಾವುದಕ್ಕೂ ಕೊರತೆ ಇರಲಿಲ್ಲ. ತಾನು ಪ್ರೀತಿಸಿದ ಹುಡುಗಿ ಬೇರೊಬ್ಬನೊಂದಿಗೆ ಮದುವೆಯಾದಳಲ್ಲಾ ಎಂಬ ಕೊರಗಿನಿಂದಲೇ ಕೃಷ್ಣ ಹುಚ್ಚನಾಗಿದ್ದ. ಅಂತರ್ಜಾತಿ ವಿವಾಹಕ್ಕೆ ಅಪ್ಪ ಎಂದಿಗೂ ಒಪ್ಪಲಾರ ಎಂಬ ಲೆಕ್ಕಾಚಾರದಲ್ಲಿ ಕೃಷ್ಣ ಪ್ರೀತಿಸಿದ ಹುಡುಗಿಯೊಂದಿಗೆ ಮದುವೆಯಾಗಲಾರದೆ, ಓಡಿಯೂ ಹೋಗಲಾರದೆ, ಅಪ್ಪನ ನಿಲುವನ್ನು ತಿರಸ್ಕರಿಸಲಾಗದೇ ಕೃಷ್ಣ ಹಾಸಿಗೆ ಹಿಡಿದ, ಕೆಲ ದಿನಗಳಲ್ಲಿ ಹುಚ್ಚುಚ್ಚು ವರ್ತನೆ ಪ್ರಾರಂಭಿಸಿದ. ಸ್ವಲ್ಪ ದಿನದಲ್ಲೇ ಅವನ ಹುಚ್ಚು ಶಾಶ್ವತವಾಗಿ ಊರಲ್ಲಿ ಭಿಕ್ಷಾಟನೆಗೂ ಹತ್ತಿದ. ಕೃಷ್ಣನ ಗೆಳೆಯರಿಗೆ ಗೊತ್ತಿದ್ದ ಸತ್ಯ ಅವನಪ್ಪನಿಗೆ ತಿಳಿಯಲು ಬಹಳ ಸಮಯ ಹಿಡಿಯಲಿಲ್ಲ. ಆದರೆ ಸಂದರ್ಭ ಪುರುಷೋತ್ತಮ ರಾಯರ ಕೈಮೀರಿ ಹೋಗಿತ್ತು. ಐವತ್ತರ ಹರೆಯ ತಲುಪಿದ್ದ ರಾಯರು ಜೀವನದ ಏರಿಳಿತಗಳನ್ನು ಕಂಡಿದ್ದರು. ಯೌವ್ವನದ ಕಾಲದಲ್ಲಿ ತಾನು ಆಡಿದ್ದ ಆಟಗಳು…. ಹಾಲು ಮಾರುವ ಪದ್ದಕ್ಕನ ಜೊತೆಯ ರಸಘಳಿಗಳು…. ಜೀವನದ ಉದ್ದಕ್ಕೂ ಹೆಂಡತಿಯೊಂದಿಗೆ ಮಾತನಾಡದೇ ಉಳಿದಿದ್ದು ರಾಯರ ಕಣ್ಮುಂದೆ ಹಾದುಹೋದವು…..
***
ಕೃಷ್ಣನಿಗೆ ಇಪ್ಪತ್ತೆರಡರ ಹರೆಯ. ಶ್ರೀಮಂತ ಕುಟುಂಬದಲ್ಲಿ ಹುಟ್ಟಿದವನು. ಸುಂದರ ಹುಡುಗನಾಗಿದ್ದ ಆತ ಹೈಸ್ಕೂಲ್ ಹೋಗುವಾಗಲೇ ಎಲ್ಲಾ ಮೇಸ್ಟ್ರುಗಳ ಗಮನ ಸೆಳೆದಿದ್ದ. ಸೋನಾರಿಕೆಯ ಸಹನಾ ಎಳೆ ಬಾಳೆದಿಂಡಿನಂಥ ಹುಡುಗಿ. ಫಳಫಳ ಹೊಳೆವ ಕಣ್ಣುಗಳ ಆಕೆ, ಆಕರ್ಷಕ ವ್ಯಕ್ತಿತ್ವದ ಚೂಟಿ ಹುಡುಗಿ. ಕೃಷ್ಣನ ಸಹಪಾಠಿ, ಹೈಸ್ಕೂಲ್ ನಲ್ಲೇ ಕೃಷ್ಣ ಮತ್ತು ಸಹನಾರಲ್ಲಿ ಪ್ರೀತಿಯ ನವಿರು ಭಾವನೆಗಳು ಹುಟ್ಟಿಕೊಂಡಿದ್ದವು. ಆದರೆ ಪರಸ್ಪರರು ತಮ್ಮಲ್ಲಾಸುವದನ್ನು ಚರ್ಚಿಸುವಷ್ಟು ಧೈರ್ಯ ಅವರಲ್ಲಿರಲಿಲ್ಲ. ಬಾಲ್ಯದಿಂದ ಜೊತೆಗೆ ಬೆಳೆದ ಮನೆಪಕ್ಕದ ಮಕ್ಕಳಲ್ಲಿರುವ ಆತ್ಮೀಯತೆ ಅವರಲ್ಲಿತ್ತು. ಗಾಢವಾಗಿ ಒಬ್ಬರಿಗೊಬ್ಬರು ಹಚ್ಚಿಕೊಂಡದ್ದರಲ್ಲಿ ಅನುಮಾನವೇ ಇರಲಿಲ್ಲ. ಮುಂದೆ ಕಾಲೇಜು ದಿನಗಳಲ್ಲಿ ಅವರ ಪ್ರೀತಿ ಗಟ್ಟಿಯಾಗುತ್ತಲೇ ಹೋಯ್ತು. ಪ್ರತಿಯೊಂದು ಚಟುವಟಿಕೆಗಳಲ್ಲೂ ಅವರಿರುತ್ತಿದ್ದರು. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅವರು ಕಾಲೇಜಿಗೂ ಹೆಸರು ತಂದುಕೊಟ್ಟಿದ್ದರು. ಕಾಲೇಜು ದಿನಗಳ ಅಂತ್ಯ ಸಮೀಪಿಸ್ತುತ್ತಿದ್ದಂತೆ ವಿಚಿತ್ರ ತಳಮಳ ಈರ್ವರಲ್ಲಿ ಪ್ರಾರಂಭವಾಯ್ತು. ತಮಗರಿವಿಲ್ಲದಂತೆ ಒಬ್ಬರ ಜೊತೆ ಒಬ್ಬರು ಬೆರೆತು ಅಭಿಪ್ರಾಯಗಳ ವಿನಿಮಯವಾದರೂ ಸ್ಪಷ್ಟ ನಿರ್ಧಾರಕ್ಕೆ ಸಹನಾಗೆ ಬರಲಾಗಲಿಲ್ಲ… ಈ ಅಸ್ಪಷ್ಟತೆ ಕೃಷ್ಣನನ್ನು ವಿಚಿತ್ರ ತಳಮಳಕ್ಕೆ ನೂಕಿಬಿಟ್ಟಿತ್ತು. ಅಪ್ಪನಿಗೆ ಏನನ್ನೂ ಹೇಳಲಾಗದ ಕೃಷ್ಣ ಅಸಹಾಯಕನಾದ. ಅವ್ವನ ಹತ್ತಿರ ಏನು ಹೇಳಿಯೂ ಪ್ರಯೋಜನವಿಲ್ಲದ ಸ್ಥಿತಿ. ಮನೆಯ ದರ್ಬಾರು ಎಲ್ಲಾ ಅಪ್ಪನ ಕೈಯಲ್ಲಿದ್ದರಿಂದ ಕೃಷ್ಣ ನಡುಗತೊಡಗಿದ. ಒಳಗೊಳಗೆ ಹಿಂಸೆ ಪ್ರಾರಂಭವಾಯ್ತು. ಅಪ್ಪನ ರಾಸಲೀಲೆಗಳು, ಅವ್ವನ ಮೇಲಿನ ಆತನ ಕ್ರೌರ್ಯ, ಹಠಮಾರಿತನ, ಶ್ರೀಮಂತಿಕೆಯ ದರ್ಪ ಕೃಷ್ಣ ಎಂಬ ಮೃದು ಹುಡುಗನನ್ನು ನಡುಗಿಸಿಬಿಟ್ಟಿದ್ದವು. ಕೊನೆಗೆ ಸಹನಾ ಬೇರೊಬ್ಬನ ಹೆಂಡತಿಯಾದಾಗ ಕೃಷ್ಣ ಪೂರ್ಣ ಕುಸಿದ. ಹಾಸಿಗೆ ಹಿಡಿದ. ಜೀವನ ಪೂರ್ತಿ ಬೇರೆ ಹೆಣ್ಣುಗಳ ಜೊತೆ ಮಜಾ ಉಡಾಯಿಸಿದ ಪುರುಷೋತ್ತಮ ರಾಯರಿಗೆ ಮಗನ ಯೌವ್ವನದ ತಳಮಳ ಅರ್ಥ ಮಾಡಿಕೊಳ್ಳಲು ಸಮಯವಾದರೂ ಎಲ್ಲಿತ್ತು? ಮಗ ವ್ಯಾಪಾರ ವಹಿವಾಟು ನೋಡಿಕೊಳ್ಳಬೇಕು. ಪೇಟೆಯಲ್ಲಿಯ ಕಿರಾಣಿ ಅಂಗಡಿಯ ವಹಿವಾಟನ್ನು ಕೃಷ್ಣನಿಗೆ ವಹಿಸಿ ತಾನು ಅರಾಮವಾಗಿ ಗದ್ದೆ ತೋಟಗಳಲ್ಲಿ ಉಳಿದುಬಿಡಬೇಕೆಂದು ಪುರುಷೋತ್ತಮರಾಯರು ಬಯಸಿದ್ದರು. ಗದ್ದೆ, ತೋಟದ ಕೆಲಸದಲ್ಲಿ ಸಿಗುತ್ತಿದ್ದ ಮಜಾ ಪುರುಷೋತ್ತಮರಾಯರಿಗೆ ಕಿರಾಣಿ ಅಂಗಡಿಯಲ್ಲಿ ಸಿಗುತ್ತಿರಲಿಲ್ಲ. ಗದ್ದೆ ತೋಟಕ್ಕೆ ಬರುವ ಕೂಲಿಯಾಳುಗಳ ಜೊತೆ ಸರಸದಲ್ಲಿಯ ಮಜಾದಲ್ಲಿ ರಾಯರ ಅರ್ಧ ಆಯುಷ್ಯ ಕಳೆದಿದ್ದರು. ತನ್ನ ಸ್ವೇಚ್ಛಾಚಾರದ ವಿರುದ್ಧ ಧ್ವನಿ ಎತ್ತದ , ಹೊರ ಜಗತ್ತೇ ಅರಿಯದ ಪತ್ನಿ, ಮುಗ್ಧ ಮಕ್ಕಳು, ಬೇಕಾದಂತೆ ಬಳಸಿಕೊಳ್ಳಬಹುದಾದ ಕೆಳಜಾತಿಯ, ಅನಕ್ಷರಸ್ಥ ಜನ, ಗೈಯಾಳಿ ಪದ್ದಕ್ಕ ಇವೆಲ್ಲಾ ಪುರುಷೋತ್ತಮರಾಯರ ಪ್ರಪಂಚವಾಗಿತ್ತು….
*****
ಸಹ್ಯಾದ್ರಿಯ ಮಡಿಲಲ್ಲಿ ಅಡಗಿದ ಪುಟ್ಟ ಗ್ರಾಮ ಬೆಟ್ಟಳ್ಳಿ. ದಟ್ಟಕಾಡು, ಸದಾ ತುಂಬಿ ಹರಿವ ತೊರೆಗಳು, ಮಳೆಗಾಲದಲ್ಲಿ ಕಣ್ ತುಂಬುವ ಜಲಪಾತಗಳು, ಜಲಪಾತಗಳನ್ನು ನೋಡಬರುವ ಪ್ರವಾಸಿಗರು, ದಟ್ಟವಾದ ಕಾಡಲ್ಲಿಯ ಸಾಗವಾನಿ, ಸೀಸಂ, ಹಲಸು, ಭರಣಗಿ ಮರಗಳನ್ನು ರಾತ್ರೋರಾತ್ರಿ ಉರುಳಿಸಿ ಲಾರಿಯಲ್ಲಿ ಸಾಗಿಸುವ ಕಳ್ಳ ಕದೀಮರು…. ಕಳ್ಳಭಟ್ಟಿ ಸರಾಯಿ ಮಾಡಿ ಮಾರುವ ಪುಂಡರು… ದೋ ನೆಂಬರ್ ದಂಧೆಯ ವಹಿವಾಟುಗಳು…. ಹೀಗೆ ಯಾವುದಕ್ಕೂ ಕೊರತೆ ಎಂಬುದೇ ಇಲ್ಲದಂತಿತ್ತು ಬೆಟ್ಟಳ್ಳಿ. ಪುರುಷೋತ್ತಮ ರಾಯರ ಅಜ್ಜನ ಕಾಲದ ತುಳುಕುಗಳು ಈಗಲೂ ಬೆಟ್ಟಳ್ಳಿ ಜೊತೆಗಿದ್ದರೂ, ಸಹ್ಯಾದ್ರಿ ಸೆರಗಿನ ಊರಾದ ಹುಬ್ಬಳ್ಳಿ ಕಡೆಗೆ ಸಾಗುವ ಮುಖ್ಯ ರಸ್ತೆಯ ಬದಿಗಿದ್ದ ಶಿವಪುರ ಪಟ್ಟಣಕ್ಕೆ ಬಂದು ತನ್ನ ತಂದೆಯ ಕಾಲಕ್ಕೆ ರಾಯರು ನೆಲೆಸಿದ್ದರು. ಸ್ವಾತಂತ್ರ್ಯ ಹೋರಾಟದ ಕಾವನ್ನು ಹೊಂದಿದ್ದ ರಾಯರ ಮನೆತನ ಆ ಕಾಲಕ್ಕೆ ಹೆಸರಾಗಿತ್ತು. ಸ್ವಾತಂತ್ಯ ಹೋರಾಟದ ಹಿನ್ನಲೆಯ ಮನೆತನ ಪುರುಷೋತ್ತಮರಾಯರ ಅಪ್ಪನ ಕಾಲಕ್ಕೆ ವ್ಯಾಪಾರಿ ಕುಟುಂಬವಾಗಿತ್ತು. ಜೊತೆಗೆ ಕೃಷಿಯೊಂದಿಗಿನ ನಂಟು ರಾಯರಿಗೆ ಉಳಿದುಕೊಂಡು ಬರಲು ಕಾರಣಗಳೇ ಬೇರೆಯಾಗಿದ್ದವು…..
*****
ಮುಖ್ಯ ರಸ್ತೆ ಶಿವಪುರ ಪಟ್ಟಣವನ್ನು ಇಬ್ಬಾಗಿಸಿ ಸೀಳಿಕೊಂಡುಹೋಗಿತ್ತು. ರಸ್ತೆಗೆ ತಾಗಿರುವ ದೊಡ್ಡ ಕಿರಾಣಿ ಅಂಗಡಿ ಪುರುಷೋತ್ತಮರಾಯರದು. ಗದ್ದೆ ಕಡೆಯಿಂದ ಆಗತಾನೆ ಮರಳಿದ್ದ ರಾಯರು ಅಂಗಡಿಯ ಗಲ್ಲಿ ಮೇಲೆ ಕುಳಿತ ಪುರುಷೋತ್ತಮರಾಯರನ್ನು ಒಡೆದಿರಾ, ಒಂದು ಕೆ.ಜಿ. ಸಕ್ರೆ ಕೊಡ್ರಿ ಎಂದು ಸುಕ್ರಿ ಗೌಡ್ತಿ ಕೇಳಿದಾಗ ಯಾವುದೋ ಲೋಕದಲ್ಲಿದ್ದ ರಾಯರು ಬೆಚ್ಚಿಬಿದ್ದರು. ಯಾಕ್ರಿ ಒಡೆದಿರಾ, ಹಗಲೇ ಚಿಂತಿ ಮಾಡ್ತ್ರಾ? ಕೃಷ್ಣಪ್ಪನ ಚಿಂತಿನಾ. ದೇವ್ರ ಇಂವಾ ಎಂದು ಸಕ್ರಿ ಮಾತು ಮುಂದು ವರೆಸಿದಾಗ ರಾಯರು ಕಣ್ಣೊರಿಸಿಕೊಂಡು ಬೀರಾ, ಗೌಡ್ತಿಗೆ ಸಕ್ರಿ ಕೊಡು ಎಂದಾದೇಶಿಸಿದರು. ಏನೇ ಗೌಡ್ತಿ, ಮನೆ ಬದಿಗೆಲ್ಲಾ ಏನ ಸುದ್ದಿ. ಹೆಂಗೀವಾ ನಿನ್ನ ಗಂಡಾ, ಕುಡಿತಿನಾ, ಬಿಟ್ಟಿನಾ…. ಮನೆ ಕಡ್ಗೆ ಬಾ. ಅವ ಈ ಕಾಲದಲ್ಲಿ ಬಿಡ ಮನ್ಯಾ ಅಲ್ಲಾ ಒಡೆದಿರಾ ಎನ್ನುತ್ತಾ ಸಕ್ಕರೆ ಪೊಟ್ಲೆ ಹಿಡಿದು ನಡೆದಳು ಸುಕ್ರಿ. ಮತ್ತದೇ ಲೋಕ. ಯೋಚನಾಲೋಕಕ್ಕೆ ತೆರಳಿದರು ರಾಯರು. ಯೌವ್ವನದ ದಿನಗಳು ದಟ್ಟೈಸಿದವು. ತನ್ನನ್ನು ತಾನೆ ಒಳಹೊಕ್ಕು ನೋಡಿಕೊಳ್ಳತೊಡಗಿದ ರಾಯರು ಗಲ್ಲಿಯಲ್ಲಿ ಕುಳಿತೇ ಹೊಸ ಲೋಕ ಪ್ರವೇಶಿಸಿದರು. ಅಲ್ಲಿ ರಾಯರಿಗೆ ತಮ್ಮದೇ ಸ್ವಭಾವದ ಜನ ಸಿಕ್ಕರು. ರಾಯರನ್ನು ಅವರು ಆತ್ಮೀಯವಾಗಿ ಬರಮಾಡಿಕೊಂಡರು. ರಾಯರು ಇಂಥ ಲೋಕವನ್ನು ಎಂದು ಕಂಡಿರಲಿಲ್ಲ. ಜೀವಮಾನದಲ್ಲೇ ಆತ್ಮೀಯರೊಂದಿಗೆ ಯಾವ ಮುಚ್ಚು ಮರೆಯಿಲ್ಲದೇ ತಾ ಆಡಿದ್ದ ಆಟೆಗಳನ್ನೆಲ್ಲಾ ಹೇಳುವ ಹಂಬಲ ರಾಯರಲ್ಲಿ ಹುಟ್ಟತೊಡಗಿತು. ಎಲ್ಲ ಸಂಬಂಧಗಳನ್ನು, ಸಂಪ್ರದಾಯಗಳನ್ನು, ಕಟ್ಟುಪಾಡುಗಳನ್ನು ಕಿತ್ತೊಗೆಯಲು ರಾಯರು ನಿರ್ಧರಿಸಿದರು. ತಮಗೆ ಅನಿಸಿದ್ದನ್ನೆಲ್ಲಾ ಹೊಸ ಲೋಕದಲ್ಲಿ ಸಿಕ್ಕ ತಮ್ಮಂಥ ಗೆಳೆಯರೊಂದಿಗೆ ವಿವರಿಸಲು ನಿಶ್ಚಯಿಸಿದರು. ರಾಯರ ನೆನಪಿನ ಸುರುಳಿ ಬಿಚ್ಚಿಕೊಳ್ಳತೊಡಗಿತು….
*****
ಆಗತಾನೆ ಮದುವೆಯಾದ ದಿನಗಳು ಮಾತೇ ಹೊರಡದ ಪತ್ನಿ ಲಕ್ಷ್ಮೀ ನಿಜ ಅರ್ಥದಲ್ಲೂ ಲಕ್ಷ್ಮೀಯಾಗಿದ್ದಳು. ನನ್ನ ಜೊತೆ ಮಾತನಾಡಲು ಅಂಜುತ್ತಿದ್ದ ಆಕೆಗೆ ನನ್ನ ನೋಟವೇ ಇಷ್ಟವಾಗುತ್ತಿರಲಿಲ್ಲ. ಅಂತೂ ಮದುವೆಯಾಗಿತ್ತು. ಆ ಕಾಲವೇ ಹಾಗಿತ್ತು. ಗಂಡನಾಗುವವನ ಮುಖ ಸಹ ನೋಡದೇ ಮದುವೆ ನಿಶ್ಚಿತಾರ್ಥವಾಗುವ ಕಾಲ. ಮದುವೆ ದಿನ ಅಲ್ಪಸ್ವಲ್ಪ ಗಂಡನಾದವನ ಮುಖಕಂಡರೆ ಅದೇ ಪುಣ್ಯ. ಮೊದಲ ರಾತ್ರಿಯೂ ಅಷ್ಟೆ. ಕತ್ತಲಲ್ಲೇ ಎಲ್ಲಾ ಮುಗಿದುಹೋಗುತ್ತಿತ್ತು. ಮೊದಲರಾತ್ರಿಯೂ ನನ್ನ ಜೊತೆ ಒಂದು ಮಾತಾಡಿದ್ರೆ ಕಡಿಮೆ, ಎರಡು ಮಾತಾಡಿದ್ರೆ ಹೆಚ್ಚಾದೀತು ಎಂಬಂಥ ಬಿಗಿ ವಾತಾವರಣ. ಲಕ್ಷ್ಮೀಯ ಪಾಲಿಗೆ ಆ ದಿನಗಳು ಹಾಗೇ ಇದ್ದವು. ಶ್ರೀಮಂತ ಗಂಡನ ಪತ್ನಿಯಾದರೂ ಲಕ್ಷ್ಮಿ ಪಾಲಿಗೆ ನಾನು ಪ್ರೀತಿಯ ಮನದನ್ನನಾಗಲಿಲ್ಲ. ಆರಂಭದ ದಿನಗಳಲ್ಲಿ ಅಲ್ಪಸ್ವಲ್ಪ ಮಾತಾನಾಡಿದರೂ ಮೊದಲ ಮಗ ಕೃಷ್ಣ ಹುಟ್ಟಿದ ಮೇಲೆ ಮಾತು ಕಡಿಮೆಯಾಗುತ್ತಲೇ ಬಂತು. ಲಕ್ಷ್ಮೀಗೆ ನನ್ನಂಥ ಶ್ರೀಮಂತ ಗಂಡು ಬೇಕಿರಲಿಲ್ಲ. ಮದುವೆಯೇ ಬೇಡವಾಗಿದ್ದ ಆಕೆಗೆ ತಂದೆ ತಾಯಿ ಒತ್ತಾಯದಿಂದ ಮದುವೆ ಮಾಡಿದ್ದರು. ಶ್ರೀಮಂತ ಕುಟುಂಬದ ಏಕೈಕ ಮಗಳಾಗಿದ್ದ ಆಕೆಗೆ ಮದುವೆ ಬಂಧನವಾಗಬಹುದು, ಶ್ರೀಮಂತ ಹುಡುಗ ಪರಸ್ತ್ರೀಯರ ಸಹವಾಸ ಮಾಡಿರಬಹುದು ಎಂಬ ಅನುಮಾನವೇ ಮದುವೆಯನ್ನೇ ಬೇಡವೆನ್ನಿಸುವಂಥ ಮನಸ್ಥಿತಿಗೆ ಆಕೆಯನ್ನು ನೂಕಿತ್ತಂತೆ ಎಂಬ ಸತ್ಯ ನನ್ಗೆ ತಿಳಿದದ್ದು ಆಕೆಯ ಮನೆಗೆ ಒಡನಾಟವಿದ್ದ ಹಾಗೂ ನಮ್ಮ ಮದುವೆ ಸಂಬಂಧಕ್ಕೆ ಕಾರಣನಾಗಿದ್ದ ನನ್ನಪ್ಪನ ಗೆಳೆಯ ಮಾರಣ್ಣ ನಾಯಕರಿಂದ. ಎರಡನೇ ಮಗು ಹುಟ್ಟಿಆಗ ತವರು ಮನೆಗೆ ಹೋಗಿಬಂದ ಲಕ್ಷ್ಮೀ ಬದಲಾಗಿದ್ದಳು. ತವರು ಮನೆಯ ವಿಷಯದಲ್ಲಿ ಇಬ್ಬರಿಗೂ ಭಿನ್ನಾಭಿಪ್ರಾಯ ಬಂದು ಜಗಳಾವಾದ ದಿನದಿಂದ ಮುಂದೆ ಸುದೀರ್ಘ ಕಾಲದವರೆಗೆ ಲಕ್ಷ್ಮಿ ಹಾಗೂ ನಾನು ಮಾತು ಬಿಟ್ಟದ್ದು ಬಿಟ್ಟೇ ಹೋಯಿತು. ಮೌನದಿಂದ ನನ್ನ ಮೇಲೆ ಸೇಡು ತೀರಿಸಿಕೊಂಡ ಆಕೆ ಕೊನೆವರೆಗೂ ನನ್ನನ್ನು ಪ್ರೀತಿಸಲೇ ಇಲ್ಲ ಎಂದೆನಿಸತೊಡಗಿತು. ಮದುವೆಯಾಗುವ ವೇಳೆಯಲ್ಲೇ ನನ್ನ ತಲೆಗೂದಲೆಲ್ಲಾ ಉದುರಿ ಬೋಳಾಗಿತ್ತು. ಬಿಳಿವರ್ಣದ ನಾನು ಬ್ರಿಟಿಷರ ತಳಿಯಂತಿದ್ದೆ. ತಲೆ ತಾಮ್ರದ ಚೆಂಬಿನಂತೆ ಹೊಳೆಯುತ್ತಿತ್ತು. ದಷ್ಟಪುಷ್ಟವಾಗಿದ್ದ ನಾನು ಶಿವಪುರದ ಮಟ್ಟಿಗೆ ಮನ್ಮಥನಾಗಿದ್ದೆ. ನನ್ನ ಪುಂಡಾಟಿಕೆಗೆ ಮದುವೆಯ ನಂತರವೂ ಕೊನೆ ಎಂಬುದಿರಲಿಲ್ಲ. ಒಂದು ರೀತಿಯಲ್ಲಿ ಲಕ್ಷ್ಮೀಗೆ ಅನ್ಯಾಯ ಮಾಡಿದೆನೇನೋ ಅನ್ನಿಸುತ್ತಿತ್ತು ಆಗಾಗ….
********
ಹಸುಗಳ ಒಡನಾಟ ನನಗೆ ಬೆಳೆದದ್ದು ಪದ್ದಿಯ ಸ್ನೇಹದಿಂದ. ನನ್ನ ಮನೆಯ ಕೊಟ್ಟಿಗೆಯಲ್ಲಿ ದನಗಳಿದ್ದರೂ ಅವುಗಳ ಗೋಜಿಗೆ ನಾನು ಹೋಗಿರಲಿಲ್ಲ. ಪದ್ದಿಯ ಸ್ನೇಹದ ನಂತರ ಆಕೆ ಹೇಳಿದ ’ರಾಯರೇ ಹಸುಗಳ ಸ್ಯಾವೆ ದ್ಯಾವರ ಪೂಜೆಯಿದ್ದಂತೆ, ಪುಣ್ಯ ಬರುತ್ತೆ’ ಎಂಬ ಮಾತಿನ ನಂತರ ದಿನಾಲು ನಮ್ಮ ಮನೆಯ ಹಸುವೊಂದರ ಮೈತೊಳ್ದು, ಹುಲ್ಲು ಕೊಟ್ಟು ಭಕ್ತಿ ಯಿಂದ ನಮಸ್ಕರಿಸುವುದು ಪ್ರಾರಂಭಿಸಿದೆ. ಪುಣ್ಯಾ ಬರುತ್ತೆ ಎಂದು ಮಕ್ಕಳಿಲ್ಲದ ಮಾಸ್ತಿ ಮತ್ತು ಬೊಮ್ಮಿ ದನಗಳ ಪಾಲನೆಯನ್ನು ನೋಡಿಕೊಳ್ಳುತ್ತಿದ್ದರು. ಹಾಲು ಸಂಗ್ರಹಿಸಿ ಹತ್ತಿರದ ಡೈರಿಗೆ ನೀಡುವ ಹೊಣೆ ಮಾತ್ರ ನನ್ನ ಪಾಲಿಗಿತ್ತು. ಮದುವೆಯಾದ ಹೊಸದರಲ್ಲಿ ಪದ್ದಿಯ ಸ್ನೇಹ ಬೆಳೆದದ್ದೆ ವಿಚಿತ್ರ. ಆಕರ್ಷಣೆಗೆ ತಿರುಗಿತು. ನಮ್ಮೂರಿನ ಚಂಚಲೆಯಾಗಿದ್ದ ಪದ್ದಕ್ಕನ ಬಗ್ಗೆ ಇದ್ದ ರೋಚಕ ಕತೆಗಳು ನನ್ನ ತಲೆ ತಿನ್ನ ತೊಡಗಿದವು. ಆಕೆಯ ಅತ್ಯಾಕರ್ಷಕ ದೇಹ ನನ್ನ ಕಣ್ಣು ಕುಕ್ಕತೊಡಗಿತು. ಆಕೆ ಗುಂಡು ಹೊಡೆದಂತೆ ಮಾತನಾಡುವ ರೀತಿ, ಧಾಡಸಿತನ, ಗಂಡಸರೊಂದಿಗಿನ ಸಲಿಗೆ ಕಂಡು ಉದ್ರೇಕಗೊಳ್ಳದವನೇ ಇಲ್ಲಿರಲಿಲ್ಲ. ಮದುವೆಗೆ ಮುನ್ನ ಕಾಡದ ಪದ್ದಿ ಈಗೀಗ ಕಾಡತೊಡಗಿದ್ದಳು. ಸುಕ್ರಿಯ ಮಗಳು ಭಾರತಿ ನನ್ನ ಮನೆಯ ಅಂಗಳದಲ್ಲೇ ಬೆಳೆದವಳು. ಶಾಲೆಗೆ ಹೋಗುತ್ತಿದ್ದ ಆ ಹುಡ್ಗಿ ಮೂಲಕ ಪದ್ದಿಗೆ ಗಾಳ ಹಾಕಿದೆ. ಗದ್ದೆ ಕಡೆಗೆ ಬರುವಂತೆ ಮೊದಲ ಸಲ ಭಾರತಿ ಮೂಲಕ ಹೇಳಿಕಳಿಸಿದ್ದಕ್ಕೆ ಪದ್ದಿಯ ಪ್ರತಿಕ್ರಿಯ ’ಬರುತ್ತೇನೆಂದು’ ಹೇಳು ಎಂದು ಬಂದಾಗ ವಸಂತಮಾಸದ ಕೋಗಿಲೆ ಹುಟ್ಟಿಸಿದ ನೂರಾರು ರಾಗಗಳು ನನ್ನ ಮನದಲ್ಲಿ ಹರಡಿದ್ದವು. ಪದ್ದಿ ಏನೇ ಆಗಲಿ ನನ್ನ ಜೀವನದಲ್ಲಿ ನಿಜ ಅರ್ಥದಲ್ಲಿ ಅರ್ಧಾಂಗಿಯಾದಳು. ಆಕೆಯ ಹಾದರದ ಕತೆಗಳೆಷ್ಟೇ ಇರಲಿ ನನ್ನ ಪಾಲಿಗೆ ಆಕೆಯ ಸಂಬಂಧ ಗಾಢವಾಗಿತ್ತು. ಪತ್ನಿ ನೀಡದ ಸುಖವನ್ನು ಪದ್ದಿ ನೀಡಿದಳು…. ರಾಯರೇ ’ಮಗಳು ಕಾಲೇಜು ಸೇರ್ತೆನೆ ಅಂತಾಳೆ …. ಸ್ವಲ್ಪ ಹಣ ಬೇಕಿತ್ತು. ’ ಪದ್ದಿ ’ನಿನ್ನ ಮಗಳು ನನ್ನ ಮಗಳೇ ಅಲ್ವೇನೆ? ಅದೇಕೆ ನೀನು ಗೋಗರಿತಿಯಾ, ಹಣ ತಾನೆ, ನಾಳೆ ಅಂಗಡಿ ಕಡೆಗೆ ಅವಳನ್ನೇ ಕಳುಹಿಸು. ಹಣ ಕೊಡ್ತೀನಿ. ಅಲ್ಲಿಂದನೇ ಸೀದಾ ಕಾಲೇಜಿಗೆ ಹೋಗ್ಲಿ….’
ಸಂಜೆ ಸಮಯ ತೋಟದ ಹೊಬಳ್ಳಿಗಳ ಮಧ್ಯೆ ಕಪ್ಪೆಗಳಂತೆ ಬೆಸೆದುಕೊಂಡಿದ್ದವು. ಪದ್ದಿ ನನ್ನ ತೋಳಲ್ಲಿ ಒಂದಾಗಿದ್ದಳು. ಹೀಗೆ ಅದೆಷ್ಟೋ ಸಂಜೆ, ಹಗಲು, ಕೆಲಬಾರಿ ರಾತ್ರಿ ಯಾಗುವವರೆಗೂ ತೋಟದ ಮರಗಿಡಗಳು ಮರೆಯಲ್ಲಿ ಪದ್ದಿ ನನ್ನಲ್ಲಿ ಬೆರೆತಿದ್ದಳು… ಬೇರೆ ಹಣ್ಣುಗಳ ಜೊತೆ ನನ್ನದು ದೇಹಸಂಬಂಧವಾದರೂ ಪದ್ದಿ ಜೊತೆಗಿನ ಸಂಬಂಧ ಬಿಡಿಸಲಾಗದ ನಂಟಾಗಿತ್ತು…. ಮುಂದೆ ಆಗಾಗ ಭಾರತಿಯೊಡನೆ ಮೇಘ ಸಂದೇಶ ರವಾನೆ ಯಾಗತೊಡಗಿತು. ಸಣ್ಣ ಮಕ್ಕಳು ಚುರುಕು. ಒಮ್ಮೆ ಭಾರತಿ ಕೇಳಿಯೇಬಿಟ್ಟಳು ’ರಾಯಣ್ಣ ನಿಮ್ಗೆ ಆ ಪದ್ದಕ್ಕನ ಹತ್ರ ಏನ ಕೆಲ್ಸ, ಆಕಿ ನಿಮ್ಮ ಹತ್ರ ಗದ್ದೆ ಕಡೆಗೆ ಯಾಕ ಬರ್ತಾಳೆ’ ಎಂದು. ನಾನೆಂದು ಊಹಿಸದ, ನಿರೀಕ್ಷಿಸದ ಈ ಮಾತು ಭಾರತಿ ಕಡೆಯಿಂದ ಮುಗ್ಧವಾಗಿ ಜಿಗಿದದ್ದನ್ನು ಕಂಡು ದಂಗಾದೆ. ’ಮಗುವೇ ನಿಂಗೆ ಅದೆಲ್ಲಾ ತಿಳಿಯಲ್ಲಾ’ ಎನ್ನುತ್ತಾ ನಿನ್ನೆ ತಂದಿಟ್ಟಿದ್ದ ತಿಂಡಿ ಕೊಡುತ್ತ ಅವಳನ್ನ ಸಾಗುಹಾಕಿದ್ದೆ…. ಪದ್ದಿ ಕಲ್ಯಾಣ ಗುಣದವಳು. ಊರ ಹುಡುಗಿಯರಿಗೆ ಸಂಬಂಧ ಹುಡುಕುವುದರಲ್ಲಿ ಒಂದು ಹೆಜ್ಜೆ ಮುಂದೆ. ಕೆಳಗಿನ ಕೇರಿಯ ಬೊಮ್ಮಿ ಮಗಳು ಸುಬ್ಬಿಗೆ, ಭಟ್ಟರ ಮನೆಯ ಸುಂಟರಗಾಳಿಯಂಥ ಹುಡುಗಿ ಮಾಲಾಗೆ, ಯಲ್ಲಾಪುರದ ದೊಡ್ಡಣ್ಣ ಭಟ್ಟರ ಸೌಮ್ಯಳಿಗೆ ಗಂಡು ಜೋಡಿಸಿ ಕೊಟ್ಟಿದ್ದೆ ಪದ್ದಿ. ಇಂಥ ಪದ್ದಿಯ ಜೊತೆ ಮಲಗುವಾಗ ನನ್ನ ಜನಿವಾರಕ್ಕೆ ಜಾತಿ ಅಡ್ಡ ಬರಲಿಲ್ಲ ಎಂದು ಹೊಳೆಯತೊಡಗಿತು. ಜಾತಿ ಎಂಬುದು ದೊಡ್ಡ ಪೊಳ್ಳುತನ ಎಂದು ತಿಳಿದದ್ದು ಮೊದಲಬಾರಿಗೆ ಪದ್ದಿಯ ಜೊತೆ ಮಲಗಿ ದಾಗಲೇ. ವೆಂಕಟ್ರಮಣ ದೇವಸ್ಥಾನದ ಭಟ್ಟನೂ, ಮಾರಿಗುಡಿಯ ಮೊಕ್ತೇಸರನೂ ಪದ್ದಿಯ ದೇಹ ಸುಖ ಉಂಡವರೇ ಎಂಬುದು ನನ್ಗೆ ತಿಳಿದ ಮೊದಲ ಘಳಿಗೆ ಯಲ್ಲೇ ಎಲ್ಲರೂ ’ಹಡಬಿ ಮಕ್ಕಳೇ’ ಅನ್ನಿಸಿತು. ಪದ್ದಿ ನನ್ಗೆ ಹೊಸ ಜಗತ್ತು ತೋರಿಸಿದ್ದಳು. ಆಕೆಯ ಮಾತಿಗೆ ಯಾಕೆ ಈ ’ಬೊಳಿ ಮಕ್ಕಳು ಅಂಜುತ್ತಿದ್ದರು’ ಎಂಬ ಸತ್ಯ ಅರ್ಥವಾಗಹತ್ತಿತು.
***********
ಊರಿನ ಬಿಡಾಡಿ ದನಗಳು ಕಿರಾಣಿ ಅಂಗಡಿ ಮುಂದೆ ಚೆಲ್ಲಿದ ಕಾಳುಖಡಿ, ಬೆಲ್ಲ ಮತ್ತಿದ ರಟ್ಟುಗಳನ್ನು ತಿನ್ನಲು ಮುಗಿಬೀಳುತ್ತಿದ್ದುದನ್ನೇ ದುರುಪಯೋಗ ಮಾಡಿಕೊಂಡ ನಾನು ಅವುಗಳಿಗೆ ಆಸೆ ತೋರಿಸಿ ಸಾತ್ ಮಾಡಿಕೊಂಡು ರಾತ್ರಿಯಾಗುವವರೆಗೆ ಕಾದು ದನಗಳನ್ನು ಬೆಟ್ಟಳ್ಳಿಗೆ ಸಾಬಿಯೊಬ್ಬನ ಸಹಾಯದಿಂದ ಸಾಗಿಸಿದೆ. ಕೆಲ ದಿನಗಳ ಹಿಂದೆ ಯಷ್ಟೇ ಪಕ್ಕದ ಅಳ್ನಾವರಕ್ಕೆ ಮೂರು ದನಗಳನ್ನು ಸುಬ್ರಾಯ ಎಂಬ ಲೋಭಿಗೆ ಮಾರಿದ್ದೆ. ಆ ಹಣವನ್ನೇ ಪದ್ದಿಗೆ ನೀಡಿ ಹಾಲು ಕೊಡುವ ಹಸು ಕೊಂಡುಕೋ ಎಂದರಾಯಿತು ಎಂದು ಲೆಕ್ಕ ಹಾಕಿದೆ. ಲೆಕ್ಕಾಚಾರ ಕೈಗೂಡಿತು. ಪದ್ದಿಗೂ ಗಂಡ ಊರಲ್ಲಿ ಇಲ್ಲದೆ ಬೇಸರ ಮುತ್ತಿಕ್ಕುತ್ತಿದ್ದ ಕಾಲವದು. ಲಾರಿ ಟ್ರಾನ್ಸ್ಪೋರ್ಟ್ ವೊಂದರಲ್ಲಿ ಕೆಲಸಕ್ಕಿದ್ದ ಆತ ಉತ್ತರ ಪ್ರದೇಶದ ಕಡೆಗೆ ಲಾರಿ ತೆಗೆದುಕೊಂಡು ಹೋದರೆ ತಿಂಗಳುಗಟ್ಟಲೆ ಊರ ಕಡೆಗೆ ಮುಖ ಮಾಡುತ್ತಿರಲಿಲ್ಲ. ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಹಾಗೂ ಹೀಗೂ ಜೀವನ ಸಾಗಿಸುತ್ತಿದ್ದ ರತಿ ರೂಪದ ಪದ್ದಿಯ ಹಿಂದೆ ಸುತ್ತಲ ಹಳ್ಳಿಯ ಚಪಲಚೆನ್ನಿಗರಾಯರು ಮುಗಿಬೀಳುತ್ತಿದ್ದ ರೋಚಕ ಕತೆಗಳು ಆಗ ಜನಜನಿತವಾಗಿದ್ದವು. ಕಚ್ಚೇಹರುಕ ಸುಬ್ರಾಯ ಭಟ್ಟ ದನಗಳನ್ನು ಖರೀದಿಸಲು ಬಂದವನು ಪದ್ದಿಯ ರೂಪ ಕಂಡು ಬಾಯಲ್ಲಿ ನೀರೂರಿಸಿಕೊಂಡಿದ್ದ. ಮದುವೆಯ ನಂತರ ಹುಟ್ಟಿದ ನನ್ನ ಕಾಮನೆಗಳಿಗೆ ಪದ್ದಿ ಆಶ್ರಯ ನೀಡಿ ಪೋಷಿಸಿದಳು. ಕಾಮಸೂತ್ರಗಳನ್ನು ಅರದುಕುಡಿದಂತಿದ್ದ ಪದ್ದಿಯ ಮುಂದೆ ಕಪ್ಪೆಯಂತೆ ಬಿದ್ದುಕೊಳ್ಳುವ ಲಕ್ಷ್ಮಿ ಎಲ್ಲಿ? ಪದ್ದಿ ಮತ್ತು ನನ್ನ ಸಂಬಂಧ ಗಾಢವಾಗಿದ್ದರೂ ಲಕ್ಷ್ಮಿಗೆ ಈ ಸಂಬಂಧದ ಸುಳಿವು ಹತ್ತಲಿಲ್ಲ. ಮನೆಯಿಂದ ಹೊರಬರದ ಆಕೆ ನನ್ನ ಯಾವ ವ್ಯವಹಾರಗಳ ಬಗ್ಗೆ, ನನ್ನ ಮೋಸದ ಬಗ್ಗೆ ತಲೆ ಕೆಡಿಸಿಕೊಳ್ಲಲಿಲ್ಲ. ನನ್ನ ಬದುಕಿನ ಭಾಗವಾಗಿ ಆಕೆ ಬದುಕಲೇ ಇಲ್ಲ……
**********
ಇಮಾಮ್ ಸಾಬಿ ಹೆಂಡದಂಗಡಿ ಸಹ ಮರೆಯಲಾರದ ನೆನಪನ್ನು ನನ್ನಲ್ಲಿ ಉಳಿಸಿದೆ. ಅಲ್ಲಿ ನಮ್ಮೂರಿನ ಎಲ್ಲಾ ಜಾತಿಯ, ಹಡಬೆ ಮಕ್ಕಳು ಒಂದೇ ಸಮಾನರು. ಅದು ಕಳ್ಳ ನಾಟಾ ಮಾರುವವರು, ಸೂಳೆಯರ ಜೊತೆ ಕಾಲಕಳೆಯುವ ಎಲ್ಲಾ ಪಡ್ಡೆ ಹೈಕಳು. ಊರಿನ ಜನಪ್ರತಿನಿಧಿಗಳೆಂಬ ಪುಡಾರಿಗಳು. ದೇವರಗುಡಿಯ ಪುರೋಹಿತರು ಹೀಗೆ ಎಲ್ಲ ಕಚ್ಚೇಹುರುಕರು ಸೇರುತ್ತಿದ್ದ ಜಾಗೆ. ಅಲ್ಲಿ ಹುಟ್ಟುವ ಕತೆಗಳಿಗೆ ಕೊನೆಯೂ ಇರಲಿಲ್ಲ. ಪ್ರತಿ ಕತೆಗೂ ಆರಂಭ ಇರುತ್ತಿತ್ತೇ ಹೊರತು ಕೊನೆ ಕೊನೆ ಮಾತ್ರ ಇರಲಿಲ್ಲ. ಸಾಗರದಿಂದ ಬರುತ್ತಿದ್ದ ಲಾರಿ ಮಹಮ್ಮದ್ ನ ಜೊತೆ ನನ್ನ ದೋಸ್ತಿ ಕುದುರಿತು. ಮಹಮ್ಮದ್ ಒಮ್ಮೆ ನನ್ನ ಜೊತೆ ಮಾತನಾಡುತ್ತಾ ಸುಬ್ರಾಯ ಭಟ್ಟರು ನಿಮ್ದ ವಿಷ್ಯಾ ಹೇಳತಿದ್ರು. ನೀವು ಭಾರೀ ರಸಿಕರು ಬಿಡ್ರಿ ಎಂದು ನಕ್ಕ. ಯಾಕೋ ಸಾಬಿ ಏನೇನೋ ಮಾತಾಡ್ತಿದ್ದಿ ಎಂಬ ನನ್ನ ಮಾತಿನ ರೋಪು ಕೇಳಿದ ಸಾಬಿ.
’ಅಂಗಲ್ರಿ, ರಾಯರ್ರೆ ಹೀಗೆ ಕೇಳ್ದೆ’
’ಆ ಇಲ್ರಿ ಬಿಡು. ಹೇಗೆ ನಡೆದಿದೆ ನಿನ್ನ ಕಾರುಬಾರು?’
’ಏನಿಲ್ರಿ, ನಾಟಾನೇ ಸಿಗ್ತಿಲ್ಲ’ ಎಂದು ರಾಗ ಎಳೆದ.
’ಬಾರೋ ನನ್ನ ಗದ್ದೆ ಕಡೆಗೆ’ ಎಂದು ಅವನನ್ನು ಆಹ್ವಾನಿಸಿದೆ.
ನನ್ನ ಮಾತಿನಿಂದ ಉತ್ತೇಜಿತನಾದ ಸಾಬಿ.
’ನಡೀರೀ ಸ್ವಲ್ಪ ವ್ಯವಹಾರ ಮಾಡೋಣ. ನಮ್ಮದು ನಿಮ್ಮದು ಒಂದಾದರೆ ಕಾಸು ಮಾಡಬಹುದು.’ ಎಂದು ಲೋಬಿತನ ತೋರಿದ. ನನ್ನ ಲೋಬಿತನವೂ ಕಡಿಮೆ ಇರಲಿಲ್ಲ. ಸಾಬಿ ಗದ್ದೆ ಕಡೆಗೆ ಬಂದವನೇ ಗದ್ದೆಯ ಬದಿಯ ಸರಹದ್ದಿನ ಹಳ್ಳ ನೋಡಿ ’ಕಳ್ಳನಾಟಾವನ್ನು ಹುದುಲಲ್ಲಿ ಹುಗಿದಿಡಲು ಪ್ರಶಸ್ತ ಜಾಗ ಇದು’ ಎಂದ. ನಂತರ ನನ್ನ ಮಹಮ್ಮದ್ ದೋಸ್ತಿ ಕಳ್ಳನಾಟಾ ಸಾಗಿಸುವ ಮಟ್ಟಿಗೆ ಮುಂದುವರಿಯಿತು. ಕಳ್ಳನಾಟಾ ಕಡಿಸಿ ಮಾರಿದೆ. ಮಹಮ್ಮದ್ ಲಾರಿಯಲ್ಲಿ ನಾಟಾವನ್ನು ಸಾಗರಕ್ಕೆ ಸಾಗಿಸಹತ್ತಿದ. ವರ್ಷದಲ್ಲಿ ಎರಡು ಬಾರಿ ಶಿವಪುರಕ್ಕೆ ಬರುತ್ತಿದ್ದ ಮಹಮ್ಮದ್ ವರ್ಷದಲ್ಲಿ ನಾಲ್ಕಾರು ಬಾರಿ ಬರಲು ಪ್ರಾರಂಭಿಸಿದ. ಅವನ ಆಸಕ್ತಿ ಪದ್ದಿಯ ಕಡೆಗೂ ಹೊರಳಿದ್ದು ಕಂದು ಅಸೂಯೆ ಹುಟ್ಟಿಕೊಂಡಿತು. ಪದ್ದಿಯನ್ನು ಸಾಬಿ ನೋಡಿದ್ದು ನನ್ನ ತೋಟದಲ್ಲಿ. ಲಾರಿಯನ್ನು ಅರಣ್ಯ ಇಲಾಖಿಯ ಗಾರ್ಡ ತಡೆದಾಗ ಹಾಗೂ ಹೀಗೂ ತರ್ಕಿಸಿ ನನ್ನ ಹೆಸರು ಹೇಳಿ ಫಲವಾಗದೇ ಹೋದಾಗ ನನ್ನನ್ನೇ ತುರ್ತಾಗಿ ಕಾಣಲು ಎದುಸಿರು ಬಿಡುತ್ತಾ ಬಂದಿದ್ದ ಅವನು. ಆಗ ಪದ್ದಿ ಒಂದೂವರೆ ತಿಂಗಳಾದರೂ ಬಾರದ ಗಂಡನ ಬಗ್ಗೆ ಹೇಳಲು ಬಂದಿದ್ದಳು. ಗದ್ದೆಯಲ್ಲಿದ್ದ ನಾನು ಪದ್ದಿಯ ಜೊತೆ ಹರಟುತ್ತಿದ್ದೆ. ಆಗ ಸಾಬಿ ಓಡಿ ಬರುತ್ತಿದ್ದದನ್ನು ಕಂಡ ನಾನು ’ಈ ಸಾಬಿ ಹೀಗೇಕೆ ದೌಡಾಯಿಸುತ್ತಿದ್ದಾನೆ’ ಎಂದು ಕ್ಷಣ ಯೋಚಿಸಿದೆ. ಹತ್ತಿರ ಬಂದವನೇ ವಿಷ್ಯಾ ಹೇಳ್ದ. ನಾನು ’ನೋಡ್ತಿನಿ ಬಿಡೋ, ಆ ಗಾರ್ಡ ಅಲ್ಲವೇ, ನಮ್ಮ ನಾಯಕರ ಹುಡುಗ. ಹೇಳ್ತಿನಿ ಇರು. ಈಗ ಮನೆಗೆ ಬಂದೆ’ ಎಂದು ಹೇಳಿ ಮನೆಕಡೆ ಸಾಗುಹಾಕಿದ್ದೆ. ಆಗ ಪದ್ದಿಯನ್ನು ನೋಡಿದ್ದ ಸಾಬಿ ಬದಲಾಗಿ ಹೋದ. ಕದ್ದುಮುಚ್ಚಿ ಪದ್ದಿಯ ಮನೆಕಡೆ ಬರುತ್ತಿದ್ದ ಸಂಗತಿ ಭಾರತಿಯಿಂದ ತಿಳಿದೆ. ಪದ್ದಿಯ ಹತ್ತಿರ ಜಗಳ ಕಾಯುವ ಸ್ಥಿತಿಯಲ್ಲೂ ನಾನಿರಲಿಲ್ಲ. ಸಾಬಿಯ ದಗಲ್ಬಾಜಿತನ ಕಂಡು ಕುದಿದುಹೋದೆ. ಕೊನೆಗೆ ನನಗೆ ನಾನೇ ಸಮಾಧಾನಿಸಿಕೊಂಡೆ. ಪದ್ದಿ ಮಾಡಿದ್ದು ನಂಗೆ ತಪ್ಪೆನಿಸಲಿಲ್ಲ. ಆಕೆಯ ಜೀವನ ನಿರ್ವಹಣೆಯೇ ಇಂಥ ಸಂಬಂಧಗಳ ಮೇಲೆ ನಿಂತಿತ್ತು. ಅವನು ಪದ್ದಿಯ ಮೇಲೆ ಕಣ್ಣು ಹಾಕಿ ಯಶಸ್ವಿಯಾದಾಗ ನನ್ನ ಮಹಮ್ಮದ್ ನ ಸ್ನೇಹ, ವ್ಯವಹಾರ ಮುರಿದುಬಿತ್ತು. ಈ ಹಂತದಲ್ಲೇ ನನ್ನ ಮಗ ಕೃಷ್ಣನಿಗೆ ಹುಚ್ಚು ಹಿಡಿದದ್ದು. ಮಗನ ಭಾವನೆಗಳನ್ನು ಕೇಳಲು, ಅರಿಯಲು ನನ್ಗೆ ಸಮಯವಾದರೂ ಎಲ್ಲಿತ್ತು? ಅವನನ್ನು ತಿಳಿಯಲು ನನು ಪ್ರಯತ್ನಿಸಲೇ ಇಲ್ಲ. ವಿಪರೀತ ಭಯವನ್ನು ಮಾತ್ರ ನಾನು ಮಗನಲ್ಲಿ ಬಿತ್ತಿದ್ದ. ಫಲವೂ ಭಯಾನಕವಾಗಿಯೇ ಬಂತು.ರಾಸಲೀಲೆಗಳ ಲೋಕದಲ್ಲಿ ಕೃಷ್ಣನ ಕಡೆ ಗಮನಹರಿಸಲಿಲ್ಲ. ಕೃಷ್ಣನಿಗೆ ಅನಾರೋಗ್ಯದ ನಿಮಿತ್ತ ನನ್ನ ಸಂಬಂಧಿ ಪುತ್ತು ಆತನನ್ನು ವಿವಿಧೆಡೆ ಕರೆದೊಯ್ದ. ಶಿವಮೊಗ್ಗಕ್ಕೆ ಕರೆದುಕೊಂಡೊಯ್ದ ಮೇಲೆ ಆತನಿಗೆ ಹುಚ್ಚು ಹಿಡಿದಿರುವುದು ಖಚಿತವಾಯ್ತು. ಆಗ ನನಗಾದ ಆಘಾತ ನನ್ನನ್ನು ಮೇಲೇಳದಂತೆ ಮಲಗಿಸಿದೆ. ಆದರೂ ಪದ್ದಿಯ ಜೊತೆಗಿನ ಒಡನಾಟ ನಿಂತಿಲ್ಲ. ಮಗ ಕೃಷ್ಣನನ್ನು ಎಷ್ಟು ಬೇಡಿಕೊಂಡರೂ ಆತ ಭಿಕ್ಷೆ ಬೇಡುವುದು ಬಿಟ್ಟಿಲ್ಲ. ಅನಾಥನಂತೆ ಬಸ್ ಸ್ಟಾಂಡ್ ನಲ್ಲಿ ಅಲೆಯುವುದು ನನ್ನ ಕರಳು ಹಿಂಡುತ್ತದೆ. ಅಂಗಳಿಯ ಗಲ್ಲಿ ಮೇಲೆ ಕುಳಿತು ಹಾಗೇ ಯೋಚಿಸುತ್ತೇನೆ….. ಲಕ್ಷ್ಮಿ ಮೌನವಾಗಿ ಉಳಿದು ಹಲವು ವರ್ಷಗಳೇ ಗತಿಸಿವೆ. ಆಕೆ ನನಗೆ ನೀಡಿದ ಬಹುದೊಡ್ಡ ಶಿಕ್ಷೆ ಅದೆಂದು ನಾನು ಭಾವಿಸಿದ್ದೇನೆ. ಗದ್ದೆ ನಾಟಿಗೆ ಬರುತ್ತಿದ್ದ ಅನೇಕ ಹೆಣ್ಣು ಮಕ್ಕಳ ಜೊತೆ ಮಲಗಿದ್ದಕ್ಕೆ, ಕಳ್ಳನಾಟಾ ಕಡಿದದ್ದಕ್ಕೆ, ಬೀದಿ ಹಸುಗಳನ್ನು ಮಾರಿದ್ದ ಲೋಭಿತನಕ್ಕೆ ನನ್ನೊಳಗೆ ಶಿಕ್ಷಿ ಅನುಭವಿಸುವ ರೀತಿ, ವಿಚಿತ್ರ ಆತಂಕಗಳನ್ನು ನನ್ನಲ್ಲಿ ತುಂಬಿದ….
*****
ಹೊಸಲೋಕಕ್ಕೆ ತೆರಳಿದ್ದ ಪುರುಷೋತ್ತಮರಾಯರಿಗೆ ಎಚ್ಚರವಾಯ್ತು. ತಾವು ಇದುವರೆಗೆ ಇದ್ದ ಲೋಕ, ಅಲ್ಲಿಯ ಗೆಳೆಯರ ಎದುರಲ್ಲಿ ತಾನು ಬೆತ್ತಲಾದುದು…. ಇದುವರೆಗೂ ಹೇಳದ ಸತ್ಯಗಳನ್ನು ಅಲ್ಲಿ ಹೇಳಿ ನಿರಾಳನಾದ ಅನುಭವ ಅವರಿಗಾಯ್ತು. ತನ್ನ ಬದುಕನ್ನು ಬಿಟ್ಟು ತನ್ನ ಮಗ ಕೃಷ್ಣನ ಬಗ್ಗೆ, ತನ್ನ ಪತ್ನಿ ಎನಿಸಿಕೊಂಡ ಪ್ರಾಣಿ ಲಕ್ಷ್ಮೀ ಬಗ್ಗೆ ತಾನೆಂದು ತಲೆಕೆಡಿಸಿಕೊಳ್ಳದಿದ್ದುದು, ತನ್ನ ಮಗನ ಪ್ರೀತಿಯನ್ನು ತನ್ನ ಹಾದರದ ದಿನಗಳಲ್ಲಿ ಅರ್ಥ ಮಾಡಿಕೊಳ್ಳಲಾಗದಿದ್ದ ಬಗ್ಗೆ ರಾಯರು ಒಳಗೊಳಗೆ ಕರಗಿಹೋದರು. ಅವರನ್ನು ಮಗ ಬಾಧಿಸಿದ್ದು ಹಾಸಿಗೆ ಹಿಡಿದಾಗಲಲ್ಲ. ’ಮಗ ತನ್ನೂರಿನಲ್ಲೇ ತನ್ನ ಕಣ್ಣೆದುರೇ ಭಿಕ್ಷೆಗೆ ಇಳಿದಾಗ. ರಾಯರು ಮೊದಲ ಬಾರಿಗೆ ಭೂಮಿಗೆ ಕುಸಿದದ್ದು ಆಗಲೇ….’ ನಾನು ಯಾಕೆ ಬದುಕಿದ್ದೇನೆ ಎಂದೆನಿಸಿತು ರಾಯರಿಗೆ… ಶ್ರೀಮಂತಿಕೆ, ಕಾಮದ ದಾಹದಲ್ಲಿ ಇಡೀ ಬದುಕನ್ನು ದಹಿಸಿದ್ದು ’ಮುಗಿದುಹೋಗಿತ್ತು’ ಅನ್ಸಿತ್ತು ಮಗ ಹುಚ್ಚನಾದಾಗ… ರಾಯರ ಕೊರಗಿಗೆ, ಆತ್ಮಾವಲೋಕನಕ್ಕೆ ಕೊನೆಯೇ ಇಲ್ಲದಾಗಿತ್ತು…..
****
ಬೆಟ್ಟಳ್ಳಿಯ ದಟ್ಟ ಅರಣ್ಯ ಪ್ರದೇಶ, ಬೇಟೆಗೆ ತೆರಳಿದ ಕಾಡುಜನ ಅಂದು ಬೇಟೆಯಾಡದೆ ಕಹಿ ಸುದ್ದಿಹೊಂದನ್ನು ಹೊತ್ತು ತಂದರು. ಹಳ್ಳದು ಬದಿಯ ಮರವೊಂದಕ್ಕೆ ಹೆಣ ನೇತಾಡುತ್ತಿದೆ ಎಂಬ ಕಹಿ ಸುದ್ದಿ ಅದಾಗಿತ್ತು. ರಾಯರ ಹೆಣವನ್ನು ಬೆಟ್ಟಳ್ಳಿಯ ಕಾಡುಜನ ಗುರುತಿಸಿದ್ದರಾದರೂ ರಾಯರ ಹೆಸರನ್ನು ಹೇಳಲು ಬಾಯಿ ಬರಲಿಲ್ಲ, ಅಂತೂ ಸುದ್ದಿ ಗುಲ್ಲಾಯಿತು. ಜನ ಹಳ್ಳದ ಕಡೆಗೆ ನಾನು ನೆಪ ಮಾಡಿ ಹೆಣ ನೋಡಿ ಬರತೊಡಗಿದರು. ರಾಯರ ಸಂಬಂಧಿಕರಿಗೆ ಹೇಳಿಕಳಿಸಲಾಯ್ತು. ಶಿವಪುರದ ಪೊಲೀಸ್ ಠಾಣೆಗೆ ಸಹ ಸುದ್ದಿ ಹೋಯ್ತು. ನಾಲ್ವರು ಪಿ.ಸಿ. ಗಳೊಂದಿಗೆ ಇನ್ಸ್ಪೆಕ್ಟರ್ ವೆಂಕಟ ನಾಯಕ ಧಾವಿಸಿದರು. ರಾಯರು ಇಂಥ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎಂದು ಜನ ಆಡಿಕೊಳ್ಳತೊಡಗಿದರು. ಮಗನ ಕೊರಗಿನಲ್ಲಿ ರಾಯರು ಹೀಗಾದರೂ ಎಂದು ಕೆಲವರು ಹೇಳಿದ್ರೆ, ನೇಣು ಹಾಕಿಕೊಳ್ಳುವಂಥದ್ದು ಏನಾಗಿತ್ತು ಈ ಮಾರಾಯ್ಗೆ ಎಂದು ಕೆಳಗಿನ ಕೇರಿಯ ಸುಬ್ಬಿ ನೆರೆದ ಜನರ ಮುಂದೆ ತನ್ನ ಎಂದಿನ ನೇರ ಮಾತನ್ನ ಎಸೆದಳು. ಸುದ್ದಿ ತಿಳಿದ ಪದ್ದಕ್ಕ ರಾಯರನ್ನು ನೋಡಲು ಬಂದ್ಲು. ಅದಾಗಲೇ ಹೆಣವನ್ನು ಮರದಿಂದ ಇಳಿಸಿ ನೆಲದ ಮೇಲೆ ಅಂಗಾತ ಮಲಗಿಸಿದ್ದರು. ಹೆಣ ಊದಿಕೊಳ್ಳತೊಡಗಿತ್ತು. ಹೆಣ ನೋಡಿದ ಪದ್ದಕ್ಕಗೆ ಒಂದು ಕ್ಷಣ ಕರುಳು ಚುರುಕ್ ಅಂತು. ಕಂಡುಕಾಣದಂತೆ ಆಕೆಯ ಕಣ್ಣಂಚೆನಲ್ಲಿ ಹನಿಯೊಂದು ಉದುರಿತು…….
(ಸೆಪ್ಟೆಂಬರ್ ೨೦೦೩)
*****