ಅಗೊ ಅಗೊ ಬಂದ
ಓ ಹೊತ್ತಗೆಯನೆ ತಂದ!
ನಾಚುತ ನಿಂದ
“ಬಿಡುವಿಹುದೇ?” ಎಂದ.
ಬಿಡುವಿಲ್ಲದೆ ಏನು?-
ಇದು ಈತನ ಜಾಣು.
ಬಾ ಇನ್ನೇನು,
ಆಡಿಸು ಗೋಣು.
ಕಟತಟಕಟವೆನುತ
ಏನೀ ನುಡಿಸಿಡಿತ!
ಇದೆ ಈತನ ಬೆರಗು,
ಎನ್ನ ಯ ಕೊರಗು.
“ಚೆನ್ನ ವೆ ಎಂತು?”-
ಅಯ್ಯೋ ಬಡ ಜಂತು,
ನನ್ನೊಪ್ಪಿಗೆ ಬೇಕೆ?
ಇವಗೀ ಚಟವೇಕೆ?
ಏನೋ ಆಸೆ
ಹವಣಿಲ್ಲದ ಭಾಷೆ
ಭಾವವೂ ಕುರುಡು
ಮಾತಿಗೊ ಹುರುಡು.
“ಕಲ್ಪನೆ ಉತ್ಕೃಷ್ಟ
ನುಡಿ ತುಸ ಕ್ಲಿಷ್ಟ
ಅರ್ಥವಿದಸ್ಪಷ್ಟ
ಅರಿಯಲು ಕಷ್ಟ”
ಇಂತೆನೆ ನಾನು
ಈ ಸರಸತಿಸೂನು,
ನಂಬುವನೇನು,
ಬಿದ್ದರು ಬಾನು!
ಎಲ್ಲದರೊಳು ಜಾಣ
ಕಬ್ಬದಿ ಕೋಣ-
ಎನೆ, ನೇಹವೆ ಊನ!
ಒಳ್ಳಿತು ಮೌನ
*****