ಯುದ್ಧ ದಾಳಿಗಳಿಗೆ ತತ್ತರಿಸಿದ್ದಾರೆ ನನ್ನ ಜನ.
ರಂಜಾನ ಹಬ್ಬದ ಈದೀಯಾಗಿ ಕೇಳುತ್ತಿದ್ದೇನೆ
ಒಂದು ಚುಟುಕು ನೆಮ್ಮದಿಯ ಚೂರು
ದಯಾಮಯ ಅಲ್ಲಾಹ್‌ನಲಿ ಕೈಯತ್ತಿ ಬೇಡುತ್ತಿರುವೆ
ನಮಗೆ ಮನುಷ್ಯತ್ವದ ವರವ ನೀಡೆಂದು.
ಜಗತ್ತು ಎಷ್ಟೇ ಹೊತ್ತಿ ಉರಿದರೂ ಏನಂತೆ
ನಂದಿಸುವ ಶಕ್ತಿ ನನ್ನ ಮಮತೆಗಿದೆ.
ಅವರೆಂತಹ ಕ್ರೂರ ಪ್ರಾಣಿಗಳಾಗಿದ್ದರೂ
ಮನುಷ್ಯರನ್ನಾಗಿಸುವ ಶಕ್ತಿ
ನಾನು ಕುಡಿಸಿದ ಆ ಎದೆ ಹಾಲಿಗಿದೆ.
ಎಷ್ಟಾದರೂ ಈ ಲೋಕ ನನ್ನ ಮಡಿಲ ಕೂಸಲ್ಲವೇ?
ಪೈಗಂಬರರ ಪಡಿಯಚ್ಚನು ಸಂತೆಯಲಿ
ಕಾಬಾದಲ್ಲಿ, ಆರಾಫಾತ್ ಮೈದಾನದಲ್ಲಿ
ಹುಡುಕುತ್ತಿರುವ ತಾಯಿ ನಾನು,
ಏಕಾಂಗಿಯಾಗಿ ನಿಂತಿದ್ದೇನೆ ಧೃತಿಗೆಡದೆ ಕೇಳುತ್ತಿದ್ದೇನೆ,
ಯುದ್ಧಗಳೇ ಅದೆಷ್ಟು ಕಂದಮ್ಮಗಳ ಬಲಿ ಕೇಳುವಿರಿ.
ಹಿಂಸೆಯ ಆಯುಷ್ಯ ಅತ್ಯಲ್ಪ.
ರಚ್ಚೇ ಹಿಡಿದ ಮಗುವನು ತಟ್ಟಿ ಮಲಗಿಸುವ
ಕಲೆ ಗೊತ್ತಿದೆ ನನಗೆ.
ಅವರೂ ನನ್ನದೇ ಕುಡಿಗಳು ತಾನೆ?
ಯುದ್ಧ ಮಾರಿಗೆ ಜೀವಗಳ ಬಲಿ ನೀಡಿದ
ಬಸವಳಿದ ತಾಯಿ ನಾನು
ಮನುಕುಲ ನಾಶವಾಗುವುದಕ್ಕೆ ಮುನ್ನ
ಅಳಿದುಳಿದ ಮನುಷ್ಯತ್ವ ಮಾಯವಾಗುವ ಮುನ್ನ
ರಂಜಾನ್ ಹಬ್ಬದ ಈದೀಯಾಗಿ*
ಚುಟುಕು ನೆಮ್ಮದಿ ಕೇಳುತ್ತಿರುವೆನು
ಯುದ್ಧಗಳ ವಿರೋಧಿಸುತ್ತಿರುವೆ
*****
* ಹಣ, ವಸ್ತುವಿನ ರೂಪದಲ್ಲಿ ಹಿರಿಯರು ಕಿರಿಯರಿಗೆ ನೀಡುವ ಹಬ್ಬದ ಖುಷಿ