“ಬಾಗಿಲು!ಬಾಗಿಲು!”
ಬಾಗಿಲು ತೆರೆಯಲಿಲ್ಲ.
ಕೋಣೆಯಲ್ಲಿ ಗಡಿಯಾರ ಟಿಂಗ್ ಎಂದು ಒಂದು ಗಂಟೆ ಬಡಿಯಿತು.
“ಎಷ್ಟು ತಡ ಮಾಡಿದ್ದೇನೆ? ಬುದ್ಧಿ ಕೆಟ್ಟುಹೋಗಿದೆ. ನಾಳೆಯಿಂದ ಜಾಗ್ರತೆಯಾಗಿರುತ್ತೇನೆ. ‘ಯಾಂಟಿನಾಚ್’ ಎಲ್ಲಾಹೋಗಿ ಸೊಳೆಯ ಹಾಡಿನ ಮೋಜಿನಲ್ಲಿ ಮನ ಮಗ್ನವಾಗಿ ಬಿಟ್ಟಿತು. ಒಂದು ಹಾಡಿನ ಮೋಜಿನೊಂದಿಗೆ ತಡೆಯಲಿಲ್ಲ. ಹಾಡುವವಳ ಮೇಲೆಯೂ ಮನ ಓಡುತ್ತಿದೆ. ಇಲ್ಲದಿದ್ದರೆ, ನಾನು ಪೋಲಿ ಮನುಷ್ಯನಂತೆ ಹಾಡು ಮುಗಿಯುವ ತನಕ ಕುಳಿತುಕೊಳ್ಳುವುದೆಂದರೇನು? ಯಾವದೋ ಒಂದು ಅವಕಾಶ ಕಲ್ಪಿಸಿಕೊಂಡು ಅವಳೊಂದಿಗೆ ನಾಲ್ಕುಮಾತನ್ನಾಡುವ ಆಸಕ್ತಿ ಏನು? ಆಯಿತು, ಕೆನ್ನೆ ಬಡಿದುಕೊಳ್ಳುತ್ತಿದ್ದೇನೆ. ನಾಳೆಯಿಂದ ಹಾಡಿಗಾಗಿ ಹೋದರೆ ನನ್ನಾಣೆ. (ಆಣೆ ಹಾಕಿಕೊಳ್ಳಬಾರದು. ಅದೊಂದು ನಿಯಮ ಬಂದಿದೆಯಲ್ಲಾ) ಇನ್ನು ಹೋಗುವುದಿಲ್ಲ. ನಿಶ್ಚಿತ. ನಿಶ್ಚಿತ. ಗಟ್ಟಿಯಾಗಿ ಕೂಗಿದರೆ ಕಮಲಿನಿ ಎದ್ದುಬಿಡಬಹುದು. ನಿಧಾನ ಬಾಗಿಲು ಬಡಿದು ರಾಮಣ್ಣನ ಎಬ್ಬಿಸಿದರೆ ಸದ್ದಾಗದಂತೆ ಹಾಸಿಗೆ ಸೇರಿ ದೊಡ್ಡಮನುಷ್ಯನ ವೇಷವನ್ನು ಹಾಕಬಹುದು.
ಗೋಪಾಲ್ರಾವು ಬಾಗಿಲು ಕೈಯಿಂದ ತಾಕಿದ ಕೂಡಲೇ ಬಾಗಿಲಿನ ಒಂದು ರೆಕ್ಕೆ ತೆರೆದುಕೊಂಡಿತು. “ಅರೆ! ಇದೇನು ಹೀಗೆ” ಎಂದುಕೊಂಡು ಬಾಗಿಲು ಮೆಲ್ಲಗೆ ತೆರೆದ ಕೂಡಲೇ, ನಡುಮನೆ ಯಲ್ಲಿ ದೀಪವಿಲ್ಲ. ನಾಲ್ಕುಕೋಣೆಯ ಬಾಗಿಲು ದಾಟಿ, ಮಲಗುವ ಕೋಣೆಯ ಬಾಗಿಲು ತೆರೆದು ನೋಡಿದರೆ ಅದರೊಳಗೂ ದೀಪವಿಲ್ಲ. ಸದ್ದಾಗದಂತೆ ಹೆಜ್ಜೆ ಹಾಕುತ್ತಾ ಮಂಚದ ಹತ್ತಿರ ಹೋಗಿ ಕಮಲಿನಿ ಎದ್ದಿರುವಳೇ, ಅಥವಾ ನಿದ್ರಿಸುತ್ತಿರುವಳೇ ಎಂದು ಕಂಡು ಹಿಡಿಯಲು ಪ್ರಯತ್ನಿಸಿದನಾದರೂ, ತಿಳಿಯದವನಾದ. ಮೇಜಿನ ಮೇಲೆ ತಡಕಾಡಿ ಬೆಂಕಿಪೆಟ್ಟಿಗೆ ತೆಗೆದು ಒಂದು ಕಡ್ಡಿ ಬೆಳಗಿಸಿದ. ಮಂಚದ ಮೇಲೆ ಕಮಲಿನಿ ಇಲ್ಲ. ನಿಶ್ಚೇಷ್ಟನಾದ. ಕೈಯಿಂದ ಬೆಂಕಿಕಡ್ಡಿ ಕೆಳಗೆಬಿತ್ತು. ಕೋಣೆಯನ್ನು, ಅವನ ಮನವನ್ನು ಕತ್ತಲು ಕವಿಯಿತು. ಹುಚ್ಚು ಶಂಕೆಗಳೂ, ಅದಕ್ಕೆ ಮಿಗಿಲಾಗಿ ಹುಚ್ಚು ಸಮಾಧಾನಗಳೂ ಮನದಲ್ಲಿ ಹುಟ್ಟುತ್ತಾ, ಸಾಯುತ್ತಾ ವ್ಯಾಕುಲವನ್ನೂ ಉಂಟುಮಾಡಿದವು. ಬುದ್ಧಿಯಿಲ್ಲದ ಕೆಲಸ ಮಾಡಿರುವುದರಿಂದ ತನ್ನ ಮೇಲೆಯೋ, ಕಾಣದಾಗದ ಕಮಲಿನಿ ಮೇಲೆಯೋ ಹೇಳಲಾರದಂಥ ಕೋಪಾವೇಶ ಉಂಟಾಯಿತು. ನಡುಬಾಗಿಲಿಗೆ ಬಂದು ನಿಂತ. ತಾರೆಗಳ ಬೆಳಕಿನಲ್ಲಿ ನೌಕರರಾಗಲೀ, ದಾಸಿಯಾಗಲೀ ಕಾಣಲಿಲ್ಲ.
ಮತ್ತೆ ತಿರುಗಿ ಕೋಣೆಯೊಳಗೆ ಹೋಗಿ ದೀಪ ಬೆಳಗಿಸಿ, ಕೋಣೆಯ ನಾಲ್ಕು ಮುಖಗಳೂ ಪರಿಕಿಸಿ ನೋಡಿದ. ಕಮಲಿನಿ ಎಲ್ಲೂ ಕಾಣಬರಲಿಲ್ಲ. ಬೀದಿ ಬಾಗಿಲ ಹತ್ತಿರ ಹೋಗಿ, ಬಾಗಿಲು ತೆರೆದು ನೋಡಿದರೆ, ಬೀದಿಯ ನಡುವೆ ಚುಟ್ಟ ಸೇದುತ್ತಾ ತಲೆಯೆತ್ತಿ ಆಗಸದಲ್ಲಿರುವ ಚುಕ್ಕೆಗಳನ್ನು ನೋಡುತ್ತಾ ರಾಮಣ್ಣನು ಕಾಣಿಸಿಕೊಂಡ. “ರಾಮಣ್ಣಾ!” ಎಂದು ಗೋಪಾಲ್ರಾವು ಕರೆದ. ರಾಮಣ್ಣನ ಎದೆ ತತ್ತರಿಸಿತು. ಬಾಯಲ್ಲಿರುವ ಚುಟ್ಟ ಜಾರಿ ಕೆಳಗೆ ಬಿತ್ತು.
“ಬಾರೋ ಕತ್ತೇ”
ಕಾಲೆಳೆಯುತ್ತಾ ರಾಮಣ್ಣ ಹತ್ತಿರ ಬಂದ.
“ನಿಮ್ಮಮ್ಮ ಎಲ್ಲೋ?”
“ನಮ್ಮಮ್ಮಾ ಧಣಿ? ನಮ್ಮನೇಲಿದ್ದಾಳೆ”
“ನಿಮ್ಮಮ್ಮ ಅಲ್ಲೋ, ತಿಳಿಗೇಡಿಯೇ! ನನ್ನ ಹೆಂಡತೀ”
ಆ ಮಾತಿನಿಂದ ರಾಮಣ್ಣನಿಗೆ ಮತಿ ಹೋದಂತಾಯಿತು. ಯೋಚಿಸುಕೊಂಡು ಹೇಳಿದ-
“ಎಲ್ಲಿರುತ್ತಾರೆ ಧಣಿ, ಅಮ್ಮಾವ್ರು ಕೋಣೆಯಲ್ಲಿ ಮಲಗಿದ್ದಾರೆ ಧಣಿ”
“ಮನೇಲಿ ಎಲ್ಲೂ ಇಲ್ಲೋ ಕತ್ತೇ! ಮನೆಬಿಟ್ಟು ನೀನೆಲ್ಲಿಗೆ ಹೋಗಿದ್ದೀಯೋ?”
ರಾಮಣ್ಣ ಮುಖ ಮರೆಮಾಡಿಕೊಂಡು “ನೌಕರವನಿಗೆ ಕಾಲ್ಬೇನೆ, ಹೊಟ್ಟೆನೋವು ಧಣೀ. ದೊಡ್ಡಧಣೀರು ಮತ್ತೆಮತ್ತೆ ಒಪ್ಪಿಸಿ ಹೋಗಿದ್ದಾರಲ್ಲಾ, ಅಮ್ಮಾವ್ರನ್ನು ಒಬ್ಬರನ್ನೇ ಬಿಟ್ಟು ನಿಶಿರಾತ್ರಿಯಲ್ಲಿ ಸೂಳೆಯವರ……”
ರಾಮಣ್ಣನ ಬೆನ್ನಿನ ಮೇಲೆ ಎರೆಡು ಗುದ್ದು ಬಿದ್ದವು.
“ಸಾಯಿಸಿದಿರಿ ಧಣೀ” ಎನ್ನುತ್ತಾ ರಾಮಣ್ನ ನೆಲದ ಮೇಲೆ ಕುಸಿದಬಿದ್ದ.
ಗೋಪಾಲ್ರಾವು ಕನಿಕರವುಳ್ಳವನು, ಕೂಡಲೆ ಸಿಟ್ಟು ಇಳಿದು, ಪಶ್ಚಾತ್ತಾಪ ಉಂಟಾಯಿತು. ರಾಮಣ್ಣನ ಕೈಹಿಡಿದು ಎಬ್ಬಿಸಿ, ಬೆನ್ನು ಸವರಿ, “ಸಿಟ್ಟನ್ನು ತಡೆಯಲಾಗದೆ ದನದಂತೆ ನಡೆದುಕೊಂಡಿದ್ದೇನೆ.” ಎಂದುಕೊಳ್ಳುತ್ತಾ ಕೋಣೆಯೊಳಗೆ ಕರೆದುಕೊಂಡು ಹೋದ.
ಕುರ್ಚಿಯ ಮೇಲೆ ತಾನು ಕುಳಿತು “ರಾಮಣ್ಣಾ, ಏನಾಯಿತೋ!” ಎಂದು ದೀನವಾಗಿ ಕೇಳಿದ.
ರಾಮಣ್ಣ ಆ ಕಡೆ, ಈ ಕಡೆ ನೋಡಿ;
“ಏನೋ ಗಾರುಡಿಯಂತಿದೆ ಧಣೀ” ಎಂದ.
“ತವರು ಮನೆಗೇನಾದರೂ ಹೋಗಿರುವಳೇ?”
“ಅಂಥೋರು ಅಲ್ಲವೇ, ಧಣೀ? ಸಿಟ್ಟಿಗೆದ್ದರೆ ಹೇಳಲಾರೆನಾಗಲೀ, ಹೆಂಗಸರು ಓದಿಕೊಂಡರೆ ಏನಾಗ್ತದೆ ಧಣೀ?”
“ಓದಿನ ಬೆಲೆ ನಿನಗೇನು ಗೊತ್ತು ರಾಮಣ್ಣಾ,” ಎಂದು ಗೋಪಾಲ್ರಾವು ಮೊಣ ಕೈಗಳನ್ನು ಮೇಜಿನ ಮೇಲಿಟ್ಟು ಅವುಗಳ ನಡುವೆ ತಲೆಯಿಟ್ಟು ಯೋಚಿಸುತ್ತಿರುವುದರೊಳಗೆ, ಮುದ್ದಾದ ಕಮಲಿನಿಯ ಕೈಬರಹದ ಪತ್ರವೊಂದು ಮೇಜಿನ ಮೇಲೆ ಕಾಣಿಸಿತು. ಗಟ್ಟಿಯಾಗಿ ಓದಿದ;
“ಯಜಮಾನರೇ!”
“ಪ್ರಿಯತಮನೇ ಹೋಗಿ ‘ಯಜಮಾನರೇ’ ವರೆಗೆ ಬಂದಿರುವುದೆ?”
“ಹಸು ಹೋಯಿತೇನು ಧಣೀ”
“ಮೂರ್ಖನೇ! ಸುಮ್ಮನಿರು”
“ಯಜಮಾನರೇ! ಹತ್ತು ದಿನಗಳಾಯ್ತು, ರಾತ್ರಿಯಲ್ಲಿ ನೀವು ಮನೆಗೆ ಬಂದಿರೋದೇ ನಾನು ನೋಡಲಿಲ್ಲ. ಮೀಟಿಂಗ್ ಗಳಿಗೆ ಹೋಗುತ್ತಿರುವೆನೆಂದು ಹೇಳಿರುವಿರಿ. ಲೋಕೋಪಕಾರಕ್ಕಾಗಿ ನಿದ್ದೆಗೆಟ್ಟು ಉದ್ಯಮಗಳನ್ನು ಮಾಡುತ್ತಿರುವೆನೆಂದು ಹೇಳುತ್ತಿರುವಿರಿ. ನನ್ನ ಗೆಳತಿಯರಿಂದ ಸತ್ಯವೇನೆಂದು ತಿಳಿದಿದ್ದೇನೆ. ನಾನು ಮನೆ ಯಲ್ಲಿರುವುದರಿಂದಲೇ ಅಲ್ಲವೇ ನೀವು ಅಷ್ಟಾಗಿ ಅಸತ್ಯಗಳನ್ನು ಹೇಳಬೇಕಾಗಿ ಬಂದಿದೆ. ನಾನು ತವರು ಮನೆಯಲ್ಲಿದ್ದರೆ ನಿಮ್ಮ ಸ್ವೇಚ್ಚಗೆ ನಿರ್ಬಂಧ, ಅಸತ್ಯಗಳಿಗೆ ಅವಕಾಶ ಇರುವುದಿಲ್ಲ. ನಿಮ್ಮೊಡನೆ ದಿನದಿನವೂ ಅಸತ್ಯಗಳನ್ನು ಹೇಳಿಸುವುದಕ್ಕಿಂತಲೂ ನಿಮ್ಮದಾರಿಗೆ ಅಡ್ಡಿಯಾಗದಂತಿರುವುದೇ, ಗಂಡನ ಒಳಿತನ್ನು ಕೋರುವ ಹೆಂಡತಿಗೆ ಕರ್ತವ್ಯವಲ್ಲವೇ? ನಾನೀರಾತ್ರಿಗೆ ತವರುಮನೆಗೆ ಹೊರಡುವೆ. ಸಂತೋಷವಾಗಿದ್ದುಬಿಡಿ.”
ಪತ್ರವನ್ನು ಮುಗಿಸಿ, “ನಾನು ಹೆಡ್ಡ” ಎಂದುಕೊಂಡ ಗೂಪಾಲ್ರಾವು.
“ಅದೇನು ಧಣೀ! ಹಾಗೆ ಹೇಳ್ತಿರಿ?”
“ಶುದ್ಧ ಹೆಡ್ಡ ನಾನು”
ರಾಮಣ್ಣ ಅತಿ ಪ್ರಯತ್ನಪಟ್ಟು ನಗೆಯನ್ನು ತಡೆದುಕೊಂಡ.
“ಗುಣವತಿ, ವಿದ್ಯಾವತಿ, ವಿನಯಸಂಪನ್ನಳು ನನ್ನ ಕೆಟ್ಟಬುದ್ಧಿಗೆ ತಕ್ಕ ಶಾಸ್ತಿ ಮಾಡಿದ್ದಾಳೆ.”
“ಅಮ್ಮಾವ್ರು, ಏನು ಮಾಡಿದ್ದಾರೆ ಧಣೀ?”
“ತವರು ಮನೆಗೆ ಹೋಗಿದ್ದಾಳೆ. ಆದರೆ ನಿನಗೆ ತಿಳಿಯದಂತೆ ಹೇಗೆ ಹೋಗಿದ್ದಾಳೆ?”
ರಾಮಣ್ಣ ಎರಡು ಹೆಜ್ಜೆ ಹಿಂದಕ್ಕೆ ಸರಿದು. “ನಾನು ಮಲಗಿದ್ದರಬೇಕು ಧಣೀ, ಮುನಿಸಿಕೊಂಡರೆ ಹೇಳೋದಕ್ಕೆ ಆಗಲ್ಲವಾಗಲಿ, ಹೆಂಗಸು ಹೇಳದೇ ತವರು ಮನೆಗೆ ಹೊರಟರೆ ಎರಡೇಟು ಹಾಕಿ ಕೂರಿಸಬೇಕೇ ಹೊರತು ಗಂಡಸರಂತೆ ಬರೆಯುವದು, ಸುಲಿಯುವುದು ಮಾಡಿದರೆ ವಿಡ್ಡೂರ ಹುಟ್ಟುವುದಿಲ್ಲವೇನು ಧಣೀ?”
“ಎಲೇ ಮೂರ್ಖನೇ! ದೇವರ ಸೃಷ್ಟಿಯಲ್ಲಿ ಉತ್ಕೃಷ್ಟವಾದ ವಸ್ತುವಿದ್ಯ ಕಲಿತ ಹೆಣ್ಣು ರತ್ನವೇ. ಶಿವನು ಪಾರ್ವತಿಗೆ ಅರ್ಧದೇಹವನ್ನು ಹಂಚಿ ಕೊಟ್ಟಿರಲಿಲ್ಲವೇ. ಆಂಗ್ಲೇಯನು ಹೆಂಡತಿಯನ್ನು ‘ಬೆಟರ್ ಹಾಫ್’ ಎನ್ನುತ್ತಾನೆ. ಅಂದರೆ ಹೆಂಡತಿ ಗಂಡನಿಗಿಂತಲೂ ಹೆಚ್ಚು ಎಂದರ್ಥ, ತಿಳಿಯಿತೇನು?”
“ನನಗೇನು ಅರ್ಥ ಆಗ್ಲಿಲ್ಲ ಧಣೀ!” ರಾಮಣ್ಣನಿಗೆ ನಗೆಯನ್ನು ತಡೆಯುವದು ಅಸಾಧ್ಯವಾಗತೊಡಗಿತು.
“ನಿನ್ನ ಮಗಳನ್ನು ಶಾಲಿಗೆ ಕಳಿಸುತ್ತಿದ್ದೇವೇ ಅಲ್ಲವೇ. ವಿದ್ಯಯ ಬೆಲೆ ನಿನಗೇ ತಿಳಿಯುತ್ತದೆ. ನಿಮ್ಮೆಲ್ಲರಿಗಿಂತಲೂ ಆಗಲೇ ಅವಳಿಗೆ ಎಷ್ಟು ನಾಗರಿಕತೆ ಬಂದಿರುವುದೋ ನೋಡು. ಆ ಮಾತು ಹಾಗಿರಲಿ, ಈಗ ನೀನೋ, ನಾನೋ ಕೂಡಲೇ ಹೊರಟು ಚಂದ್ರಾವರ ಹೋಗಬೇಕು. ನಾನು ಹೋಗಲು ರಜಾ ಸಿಗುವುದಿಲ್ಲ. ನೀನು ಅಜ್ಜನ ಕಾಲದ ನೌಕರ. ನಿನ್ನ ಮೇಲೆ ಕಮಲಿನಿಗೆ ಇಷ್ಟ. ಅದಕ್ಕಾಗಿ ನೀನೇ ಹೋಗುವುದು ಒಳ್ಳೆಯದು. ಹೋಗಿ ಕಮಲಿನಿಯನ್ನು ಕರೆದುಕೊಂಡು ಬಾ.”
“ಅಪ್ಪಣೆಯಾದರೆ ಹೋಗೋದಿಲ್ಲವೇನು, ಹೋಗ್ತಿನಿ. ಅವರು ಬರೋದಿಲ್ಲಾಂದ್ರೇ.”
ತಗೋ ಹತ್ತು ರೂಪಾಯಿ. ಹೇಗಾದರೂ ಮಾಡಿ ಕರೆದುಕೊಂಡು ಬಂದರೆ ಇನ್ನೂ ಹತ್ತು ರೂಪಾಯಿ ಕೊಡುತ್ತೇನೆ.”
“ಆಯಿತು”
“ಆದರೆ ಏನು ಹೇಳಬೇಕು ಗೊತ್ತಾ?”
“ಏನು ಧಣೀ, ಹೇಳದೇ ಕೇಳದೇ ಓಡಿಬರೋದಾ? ಬಹಳ ಒಳ್ಳೆ ಕೆಲಸ ಮಾಡೀರಮ್ಮಾ. ಧಣೀ ನನ್ನ ಬೆನ್ನು ಮುರಿದುಬಿಟ್ಟಿದ್ದಾರೆ. ಬರ್ರಿ ಬರ್ರಮ್ಮಾ ಅಂತ ಹೇಳ್ತಿನಿ.”
“ನನ್ನನ್ನು ಕ್ಷಮಿಸಿ ಏಟಿನ ಸುದ್ದಿ ಮರೆತುಬಿಡು. ಕಮಲಿನಿ ಮುಂದೆ ಎಂದೂ ಏಟಿನ ಮಾತು ಎತ್ತಬೇಡ. ಈ ಮಾತು ನೆನಪಿನಲ್ಲಿಟ್ಟುಕೊಳ್ಳುತ್ತಿಯಲ್ಲವೇ?”
“ಆಯಿತು.”
“ನೀನು ಕಮಲಿನಿ ಮುಂದೆ ಹೇಳಬೇಕಾದ ಮಾತು ಏನೆಂದು ಹೇಳುತ್ತೇನೆ. ಚೆನ್ನಾಗಿ ಕಿವಿಯಿಟ್ಟು ಕೇಳು….ಧಣೀಯವರಿಗೆ ಬುದ್ಧಿ ಬಂದಿದೆ ಎಂದು ಹೇಳು…..”
“ಅದೇನು ಧಣೀ!”
“ನಿನಗೇಕೆ? ನಾನು ಹೇಳಿರುವ ಮಾತು ಚೆನ್ನಾಗಿ ನೆನಪಿನಲ್ಲಿಟ್ಟುಕೊಂಡು ಹೇಳು. ಧಣಿಯವರಿಗೆ ಬುದ್ಧಿಬಂದಿದೆ ಅನ್ನು. ಇನ್ನೆಂದಿಗೂ ಸೊಳೆಯರ ಹಾಡು ಕೇಳುವುದಿಲ್ಲ, ಆಣೆ ಮಾಡಿದ್ದಾರೆ….(ಮರೆತುಹೋಗಿ ಹೇಳಿದ್ದೇನೆ; ಆ ಮಾತು ಹೇಳಬೇಡ) ಇನ್ನು ಮೇಲೆ ಎಂದು ರಾತ್ರಿಯಲ್ಲಿ ಮನೆ ಬಿಟ್ಟು ಹೋಗುವುದಿಲ್ಲ. ಇದು ಖಚಿತ. ತಿಳೀತಾ?”
ರಾಮಣ್ಣ ತಲೆದೂಗಿದ.
“ಇನ್ನೂ ಏನೆಂದರೆ, ಗಲ್ಲ ಹಿಡಿದು ಬೇಡಿಕೊಂಡಿದ್ದೇನೆಂದು ಹೇಳು. ದಯವಿಟ್ಟು ಧಣಿಯವರ ಲೋಪವನ್ನು ಹೊರಗೆ ಹೇಳಬೇಡವೆಂದರು. (ಇದು ಮುಖ್ಯವಾದ ಮಾತು ಕೇಳಿದ್ದಿಯಾ?) ಎರಡು ಮೂರು ದಿನಗಳಲ್ಲಿ ತಪ್ಪದೆ ಹೋಗಿ ಬರಬೇಕೆಂದಿದ್ದಾರೆ. ನೀವು ಹತ್ತಿರವಿಲ್ಲದ ಕಾರಣದಿಂದ ಹುಚ್ಚನಂತಾಗಿದ್ದಾರೆ. ಕ್ಷಣವೊಂದು ಯುಗವಾಗಿ ಕಳೆಯುತ್ತಿದ್ದಾರೆ. (ಈ ಮಾತು ಮರೆಯಬಾರದು. ಜಾಗ್ರತೆ) ಏನು ಹೇಳಬೇಕೆಂದು ತಿಳಿಯಿತಲ್ಲವೇ? ಒಂದು ಮಾತೂ ಮರೆಯಬೇಡ”
“ಗೊತ್ತಾಯಿತು ಧಣೀ”
“ಏನು ಹೇಳುತ್ತಿಯೋ ನನಗೊಂದು ಸಲ ಹೇಳು.”
ರಾಮಣ್ಣ ತಲೆ ಕೆರೆದುಕೊಳ್ಳುತ್ತಾ ” ಏನೂ ಏನೂ ಅದೆಲ್ಲಾ ನಂಗೇನು ಗೊತ್ತಿಲ್ಲ ಧಣೀ, ನಾನು ಹೇಳ್ತೀನಿ….. ಅವ್ವಾ ನನ್ನ ಮಾತು ಕೇಳಿಕೋ. ಕಾಲವನ್ನು ಕಳೆದವನು. ಚಿಕ್ಕವರನ್ನು ನೋಡಿದ್ದೇನೆ. ದೊಡ್ಡವರನ್ನು ನೋಡಿದ್ದೇನೆ. ಕೇಳಿದ್ದಿರಾ? ಹೆಂಗಸರು ಯಜಮಾನ ಹೇಳಿದ್ದನ್ನು ಕೇಳಿಕೊಂಡು ನಡೀಬೇಕು. ಇಲ್ಲಾಂದ್ರೆ ದೊಡ್ಡಧಣೀಯಂತೆ ಸಣ್ಣಧಣೀನೂ ಕೆಟ್ಟುಹೋಗುತ್ತಾರೆ. ನಿಮ್ಮ ಕಿವಿಯಲ್ಲಿ ಒಂದು ಮಾತು. ಪಟ್ಟಣದೊಳಗೆ ಚಿನ್ನದ ಗೊಂಬೆ ಹಾಗಿರೋ ಸೂಳೆ ಬಂದಿದ್ದಾಳೆ. ಆಕೆಯನ್ನು ನೋಡಿದ ಕ್ಷಣದಿಂದ ಧಣಿಯವರ ಮನ, ಮನದಂತೆ ಇಲ್ಲ. ನನ್ನ ಮಾತು ಕೇಳಿ ಬಂದು ಬಿಡ್ರಿ. ಇಲ್ಲಾಂದ್ರೆ ನಿಮ್ಮಿಷ್ಟ ಅಂತ ಹೇಳ್ತಿನಿ.”
“ಅಯ್ಯೋ ದಡ್ಡಾ!” ಎಂದು ಗೋಪಾಲ್ರಾವು ಸಿಟ್ಟಿನಿಂದ ಕುರ್ಚಿಯಿಂದ ಜಿಗಿದ. ತಪ್ಪಿಸಿಕೊಂಡು ರಾಮಣ್ಣ ಕೋಣೆಯಿಂದ ಪಾರಾದ.
ಅಷ್ಟರಲ್ಲಿ ಮಂಚದ ಕೆಳಗಿನಿಂದ ಅಮೃತ ತುಳುಕುವ ಕಲಕಲ ನಗು, ಮನೋಹರವಾದ ನೂಪುರಗಳ ಧ್ವನಿ ಕೇಳಿಬಂತು.
*****
ಕನ್ನಡಕ್ಕೆ: ಶ್ರೀಮತಿ ರಂಗನಾಥ ಲಕ್ಷ್ಮೀಕುಮಾರಿ