“ಅಯ್ಯೋ! ಅಮ್ಮ!… ನೋವು… ನೋವು… ಸಂಕಟ…. ಅಮ್ಮ!-”
ಒಂದೇ ಸಮನಾಗಿ ನರಳಾಟ. ಹೊಟ್ಟೆಯನ್ನು ಕಡೆಗೋಲಿನಿಂದ ಕಡದಂತಾಗುತ್ತಿತ್ತು. ಈ ಕಲಕಾಟದಿಂದ ನರ ನರವೂ ಕಿತ್ತು ಹೋದಂತಾಗಿ ಮೈಕೈಯೆಲ್ಲಾ ನೋವಿನಿಂದ ತುಂಬಿತ್ತು. ಆ ನೋವಿನಲ್ಲಿ ಮತ್ತಾವ ಜ್ಞಾನವೂ ಇರಲಿಲ್ಲ. ನೋವು! ನೋವು! ಬರಿಯ ನೋವಿನದಷ್ಟೇ ಜ್ಞಾನ!
ನರಳಾಡುತ್ತಿದ್ದ ವೈದೇಹಿಯ ಮೈಗೆ ಕೊಂಚ ಬಿಸಿ ತಾಗಿದಂತಾಯಿತು. ಆ ಬಿಸಿಯಿಂದ ನೋವು ಕೊಂಚ ತಗ್ಗಿ ಮನಸ್ಸಿಗೆ ಒಂದು ಬಗೆಯ ಸಮಾಧಾನ, ನೆಮ್ಮದಿ ಬಂದಂತಾಯಿತು. ಅರೆ ಮರೆವಿನಲ್ಲಿ ಸಂಕಟದ ಕೂಗಾಟ, ನರಳಾಟ ತಗ್ಗಿತು. ಮೆಲ್ಲನೆ ಕಣ್ಣು ತೆರೆದು ಪಕ್ಕದಲ್ಲಿ ನಿಂತಿದ್ದ ಆಸ್ಪತ್ರೆಯ ನರ್‍ಸನ್ನು ನೋಡಿದಳು. ನರ್‍ಸಿನ ಮುಖ ನಗುನಗುತ್ತಿತ್ತು. ಆ ನಗೆ!-ತನ್ನ ನೋವನ್ನು ಕಂಡು ಆಕೆ ಸುಖ ಪಡುತ್ತಿರಬಹುದು ಎನಿಸಿತು ಒಂದು ಕ್ಷಣ. ಆದರೆ ಮರುನಿಮಿಷವೇ ಆ ಚಿಂತೆ ಮರಳಿತು. ಹಾಗಿಲ್ಲ! ಆ ನಗು ಮೋಹಕ ನಗು. ಯಾವ ನೊಂದ ಮನಸ್ಸಿಗಾದರೂ ಸಮಾಧಾನ ಕೊಡುವಂತಹುದು. ಗಾಯಕ್ಕೆ ಔಷಧಿಯಂತಿತ್ತು ಆ ನಗು. ಆ ನಗೆಯ ಬೆಳುದಿಂಗಳಲ್ಲಿ ವೈದೇಹಿಯ ನೊಂದ ಜೀವಕ್ಕೆ ತುಸು ನೆಮ್ಮದಿ ಸಿಕ್ಕಿದಂತಾಯಿತು. ನೋವು ಮುಕ್ಕಾಲು ಮಾಯವಾಯಿತು.
ನರ್‍ಸ್ ವೈದೇಹಿಯ ಮೈಮೇಲೆ ಇದ್ದ ಬಿಸಿನೀರಿನ ಚೀಲವನ್ನು ತೆಗೆದಳು. ಒಡನೆಯೇ ನೋವು ಚಿಮ್ಮಿತು, ಆದರೆ ನರ್‍ಸ್ ಮರು ನಿಮಿಷವೇ ಮತ್ತೊಂದು ಚೀಲವನ್ನಿಟ್ಟಳು.
“ಅಬ್ಬಾ!”
“ಈಗ ನೋವು ಹೇಗಿದೆಯಮ್ಮ?” ನಗುನಗುತ್ತಾ ಶಾಂತವಾಗಿ ಸಮಾಧಾನ ನೀಡುವ ಧ್ವನಿಯಲ್ಲಿ ನರ್‍ಸ್ ಕೇಳಿದಳು. ವೈದೇಹಿಗೆ ತನ್ನ ತಾಯಿಯೇ ಆ ಮಾತನಾಡಿದಳೋ ಏನೋ ಎನ್ನಿಸಿತು. ಆ ರೀತಿಯ ಮಾತು ಕೇಳಿ ಎಷ್ಟೋ ಯುಗಗಳಾದಂತಾಗಿತ್ತು. ಮೆಲ್ಲಗೆ ಕತ್ತನ್ನು ಬಹು ಕಷ್ಟದಿಂದ ಆ ಕಡೆ ತಿರುಗಿಸಿಕೊಂಡು ನರ್‍ಸನ್ನೇ ನೋಡುತ್ತಿದ್ದಳು. ಮನಸ್ಸಿಗೆ ಏನೋ ಒಂದು ಬಗೆಯ ಸಮಾಧಾನ. ಆ ಸಮಾಧಾನದಿಂದ ಕಣ್ಣಿನಲ್ಲಿ ಒಂದು ಹನಿ ನೀರು.
“ಈಗ ವಾಸಿಯೇನಮ್ಮ?” ಎಂದಳು ನರ್‍ಸ್ ಮತ್ತೊಮ್ಮೆ.
“ಹುಂ, ಕೊಂಚ ವಾಸಿ!”
“ಸದ್ಯ!”
“ಏನೋಮ್ಮ!” ಎಂದು ವೈದೇಹಿ ಬೇಸರದ ನಿಟ್ಟುಸಿರೊಂದನಿಟ್ಟಳು.
“ಯಾಕಮ್ಮ ಇಷ್ಟು ಬೇಸರ?” ಎಂದಳು ನರ್‍ಸ್. ಅವಳ ತಲೆ ಗೂದಲನ್ನು ನೇವರಿಸುತ್ತಾ, ವೈದೇಹಿ ಕಣ್ಣೆತ್ತಿ ನೋಡಿದಳು. ನರ್‍ಸಿನ ಕಣ್ಣಿನಲ್ಲಿದ್ದ ಮಮತೆ ಅವಳ ಹೃದಯದಲ್ಲಿದ್ದ ತಾಯ್ತನವನ್ನೆಲ್ಲಾ ಒಮ್ಮೆಗೇ ಕೆರಳಿಸಿತು. ಮನಸ್ಸಿನ ಸಮಾಧಾನ ಇದ್ದಕ್ಕಿದ್ದಂತೆ ಮಾಯವಾದಂತಾಯಿತು. ಎದೆಯಲ್ಲಿ ಏನೋ ಒಂದು ರೀತಿಯ ಕಲಕಾಟ. ಹೇಳಲಾರದ ಸಂಕಟ, ತಾಳಲಾರದ ನೋವು. ಇಂತಹುದೇ, ಹೀಗೆಯೇ ಎಂದು ರೂಪಿಸಲಾಗದ ತೋಳಲು.
“ಹೌದಮ್ಮ, ಈಗ ಬೇಸರ. ಆದರೆ ಕೈಯಲ್ಲಿ ಮುದ್ದು ಕೂಸನ್ನೆತ್ತಿಕೊಂಡು ಆಡಿಸುವಾಗ!” ಎನ್ನುತ್ತಾ ನರ್‍ಸ್ ಕೆನ್ನೆಯನ್ನು ನೇವರಿಸಿದಳು.
ಆ ಮಾತಿನಿಂದ ವೈದೇಹಿಯ ತಾಯ್ತನದ ದುಃಖವೆಲ್ಲಾ ಮರುಕಳಿಸಿತು. ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು, ದುಃಖ ಒತ್ತಿಕೊಂಡು ಬಂತು. “ಮುದ್ದು ಕೂಸು! ಹುಂ!-ಮುದ್ದು ಕೂಸು!” ಅದು ತನ್ನ ಹಣೆಯಲ್ಲಿ ಬರೆದಿಲ್ಲ. ಇದುವರೆಗೂ ತನ್ನ ಕೂಸನ್ನೆತ್ತಿಕೊಂಡು ಆಡಿಸುವ ಸೌಭಾಗ್ಯವನ್ನು ದೇವರು ತನಗೆ ಕೊಟ್ಟಿರಲಿಲ್ಲ. ಮತ್ತೆ-ಕೊಡುವನೋ ಇಲ್ಲವೋ?-ತನ್ನ ಹಣೆಯ ಬರಹ ಹೇಗಿದೆಯೋ ಏನೋ ಯಾರಿಗೆ ಗೊತ್ತು!-ವೈದೇಹಿಗೆ ಹಿಂದಿನ ದಿನಗಳ ನೆನಪೆಲ್ಲಾ ಒಂದೊಂದಾಗಿ ಬರಲಾರಂಭವಾಯಿತು. ಆ ನೆನಪಿನಲ್ಲಿ ತನ್ನ ಸುತ್ತಿನ ವಾತಾವರಣವನ್ನು, ನರ್‍ಸನ್ನು ಮತ್ತು ತನ್ನ ನೋವನ್ನೂ ಅವಳು ಮರೆತು ಬಿಟ್ಟಳು. ಆದರೆ ಕಣ್ಣಿನಲ್ಲಿ ಮಾತ್ರ ನೀರು ಒಂದೇ ಸಮನಾಗಿ ಹರಿಯುತ್ತಿತ್ತು.
ಮುದ್ದು ಕೂಸು!-ಅದು ತನ್ನ ಬಹುದಿನಗಳ ಕನಸು. ಅದು ಎಲ್ಲ ಹೆಂಗಸರ ಕನಸು. ಚಿಕ್ಕ ಹುಡುಗಿಯಾದಾಗಿನಿಂದಲೂ ಪ್ರತಿ ಹೆಣ್ಣಿಗೂ ತಾನು ಕೂಸಿನ ತಾಯಿಯಾಗುವ ಕನಸು. ಅದು ನಿಜವಾಗಿಯೇ ಹೆಂಗಸಿನಲ್ಲಿ ಕೂಡಿಬಂದ ಭಾವನೆ, ಪ್ರವೃತ್ತಿ. ಗೊಂಬೆಯಾಟದಲ್ಲಿ ದಿನವೂ ತನ್ನ ಕೈಮುರಿದ ಗೊಂಬೆಗೆ ತಾನೇ ತಾಯಿಯಾಗಿ ಮಡಿಯುಡಿಸಿ, ಲಂಗ ಹಾಕಿ-ಅದೇಕೋ ಏನೋ ಯಾವಾಗಲೂ ಆ ಬೊಂಬೆ ಹೆಣ್ಣೆಂದೇ ಅವಳ ಭಾವನೆ-ಊಟಮಾಡಿಸಿ, ಪುಟ್ಟ ತೊಟ್ಟಿಲಿನಲ್ಲಿ ಮಲಗಿಸಿ, ಜೋಗುಳ ಹಾಡಿ ನಿದ್ರೆ ಮಾಡಿಸಿದ ಮೇಲೆಯೇ ವೈದೇಹಿಯ ಊಟ. ಇದು ದಿನದ ಪರಿಪಾಟ. ಒಂದು ದಿನ ಗೊಂಬೆಯ ಅವಶ್ಯಕತೆ ನೋಡಿಕೊಳ್ಳದಿದ್ದರೆ ಆ ದಿನ ವೈದೇಹಿಗೆ ಊಟವೇ ಸೇರುತ್ತಿರಲಿಲ್ಲ. ತಾನು ಅದರ ತಾಯಿ; ಅದನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಮತ್ತೆ ಯಾರು ನೋಡಿಕೊಳ್ಳುವವರು-ಎನ್ನುವ ತಾಯ್ತನದ ಮಮತೆ ಇನ್ನೂ ಚಿಕ್ಕತನದಲ್ಲಿಯೇ ವೈದೇಹಿಯಲ್ಲಿ ಮೂಡಿತ್ತು. ಒಂದು ದಿನ ತನ್ನ ಕರ್‍ಪೂರದ ಗೊಂಬೆಗೆ ಎಣ್ಣೆ ನೀರು ಹಾಕುವ ಸಂಭ್ರಮದಲ್ಲಿ ಬಚ್ಚಲು ಮನೆಯ ಒಲೆಯ ಹತ್ತಿರ ಕುಳಿತಿದ್ದಾಗ, ಕಿಡಿಯೊಂದು ಹಾರಿ ತನ್ನ ಕೈ ಮೇಲೆ ಬಿದ್ದುದು, ಆ ಗಾಬರಿಯಲ್ಲಿ ತಾನು ಗೊಂಬೆಯನ್ನು ಕೈಯಿಂದ ಬಿಟ್ಟುದು, ಗೊಂಬೆಗೆ ಬೆಂಕಿ ಹತ್ತಿ ಅದು ಉರಿದು ಹೊಗೆಯಾದುದು ತಾನು ಅದಕ್ಕಾಗಿ ಅತ್ತು ಹಟ ಮಾಡಿದಾಗ ತಂದೆ ಬಂದು “ಹಟಮಾರಿ” ಎಂದು ತನ್ನನ್ನು ಹೊಡೆದುದು ಇದೆಲ್ಲಾ ಅವಳ ಮನಸ್ಸಿನಲ್ಲಿ ಇನ್ನೂ ಹಸುರಾಗಿತ್ತು. ಕೊನೆಗೂ ಆ ದಿನ ಕೈಗೆ ಬೇರೆ ಗೊಂಬೆ ಬರುವವರೆಗೂ ಅವಳು ಊಟ ಮಾಡಲೇ ಇಲ್ಲ.
ಅದಾದ ಮೇಲೆ-ಲಂಗಬಿಟ್ಟು ಸೀರೆ ಉಡುವ ವಯಸ್ಸಾದಾಗ ಆಗ ಗೊಂಬೆಗಳೊಂದಿಗೆ ಆಡುವುದೆಂದರೆ ಹೇಗೆ? ವೈದೇಹಿಗೆ ಆಗಂತೂ ಮಕ್ಕಳೆಂದರೆ ಪಂಚಪ್ರಾಣ. ಮೊದಲು ಗೊಂಬೆಗಳಲ್ಲಿ ಎಷ್ಟು ಪ್ರೇಮ, ಮಮತೆ ತೋರುತ್ತಿದ್ದಳೋ ಅದರ ನೂರರಷ್ಟು ಮಮತೆ ಈಗ ಮಕ್ಕಳ ಮೇಲೆ ಯಾವ ಮಗು ಕಂಡರೂ ಅದನ್ನು ಮುದ್ದಾಡದೆ ಇರುತ್ತಿರಲಿಲ್ಲ. ತನ್ನ ಸಹಪಾಠಿ ಸೀತಾಲಕ್ಷ್ಮಿಯ ಅಕ್ಕ ತವರುಮನೆಗೆ ಬಂದಿದ್ದಾಗ ಅವಳ ಮೊದಲ ಕೂಸು ಉಷೆಯೊಂದಿಗೆ ಆಡಲೆಂದು ಸಂಜೆ ಅವರ ಮನೆಗೆ ಓಡಿ ಬಿಡುತಿದ್ದಳು. ಉಷಾ ಮುದ್ದು ಮುದ್ದು ಹುಡುಗಿ, ಅವಳು ತೊದಲುತ್ತಾ ತೊದಲುತ್ತಾ ವೈದೇಹಿಯನ್ನು “ಚಿಕ್ಕಮ್ಮ” ಎಂದರೆ ವೈದೇಹಿಯ ಮನಸ್ಸಿಗೆ ಸ್ವರ್‍ಗ ಸುಖ. ಕೂಡಲೇ ಉಷೆಯನ್ನೆತ್ತಿಕೊಂಡು ಮುತ್ತುಗಳ ಸುರಿ ಮಳೆ ನಡೆಸಿಬಿಡುತ್ತಿದ್ದಳು. ಒಂದೊಂದು ದಿನ ಉಷೆಯನ್ನೆತ್ತಿಕೊಂಡು ತಮ್ಮ ಮನೆಗೆ ಹೊರಟುಬಿಡುವಳು. ತಾನೇ ಅವಳಿಗೆ ಅನ್ನ ಕಲಸಿ ತಿನ್ನಿಸುವಳು. ಒಂದು ನಿಮಿಷವಾಗಲೀ ಅವಳನ್ನು ಕಂಕುಳಿನಿಂದ ಇಳಿಸುತ್ತಿರಲಿಲ್ಲ. ವೈದೇಹಿಯ ತಾಯಿಯೇನೋ ಎಷ್ಟೋಬಾರಿ ಅವಳನ್ನು ಗದರಿಕೊಂಡರು : “ಮಗುವಿಗೆ ಇಷ್ಟು ಮುದ್ದು ಮಾಡಬೇಡ, ಮಗು ಆಮೇಲೆ ನಿನ್ನ ಹಾಗೆಯೇ ಹಟಮಾರಿಯಾಗಿಬಿಡುತ್ತದೆ” ಎನ್ನುತ್ತಿದ್ದರು. ಆದರೆ ವೈದೇಹಿ ಈ ಮಾತನ್ನು ಹುಚ್ಚುನಗೆಯಲ್ಲಿ ತೇಲಿಸಿಬಿಡುತ್ತಿದ್ದಳು. ಅವಳ ಹೃದಯದ ಯಾವುದೋ ಕನಸಿಗೆ ಇದರಿಂದ ನೀರೆರೆದಂತಾಗುತ್ತಿತ್ತು.
ಸೀತಾಲಕ್ಷ್ಮಿಯ ಅಕ್ಕ ಮಗುವನ್ನು ಕರೆದುಕೊಂಡು ಹೊರಟು ಹೋದಾಗ ವೈದೇಹಿಗೆ ಆದಷ್ಟು ನೋವು ಮತ್ತಾರಿಗೂ ಆಗಿರಲಿಲ್ಲ. ಎರಡು ದಿವಸ ಅನ್ನ ನೀರನ್ನೊಲ್ಲದೆ ಮೂಲೆಯಲ್ಲಿ ಕುಳಿತುಬಿಟ್ಟಿದ್ದಳು ವೈದೇಹಿ, ಉಷೆ ಅವಳಿಗೆ ಅಷ್ಟೊಂದು ಒಗ್ಗಿ ಹೋಗಿದ್ದಳು. ಇದಾದ ನಂತರ ಅವರ ಎದುರುಮನೆಯ ಶಾರದಮ್ಮನವರ ಎರಡು ವರ್‍ಷದ ಕೂಸು ವಾಸು! ಶಾರದಮ್ಮನವರು ಹೊಸದಾಗಿ ಆ ಮನೆಗೆ ಬಾಡಿಗೆಗೆ ಬಂದಿದ್ದರು. ಅವರ ಮಗು ವಾಸು, ದುಂಡುದುಂಡಾಗಿ, ಮುದ್ದಾಗಿ, ನಗುನಗುತ್ತಿದ್ದ. ಅವನು ಅಳುವುದನ್ನು ಕಂಡುದೇ ಅಪರೂಪ. ವೈದೇಹಿಗೆ ಅವನು ಅಚ್ಚು ಮೆಚ್ಚಾದ. ವಾಸುವಿಗೆ ದ್ರಾಕ್ಷಿ ಬೇಕು. ವೈದೇಹಿಗೆ ವಾಸು ಬೇಕು. ಹೀಗಾಗಿ ವೈದೇಹಿಯ ವುಲ್ಲನ್‌ದಾರದ ಡಬ್ಬಿಯ ಕಾಸೆಲ್ಲಾ ದ್ರಾಕ್ಷಿಗೇ ಮೀಸಲಾಯಿತು. ವಾಸುವಿಗೆ ನಡೆಯಲು ಬರುತ್ತಿದ್ದರೂ ಅವನನ್ನೆತ್ತಿಕೊಂಡೇ ತೀರಬೇಕು. ತನಗೆಷ್ಟೇ ಆಯಾಸವಾದರೂ ಅವನನ್ನು ಕೆಳಕ್ಕಿಳಿಸುತ್ತಲೂ ಇರಲಿಲ್ಲ. ಉಳಿದವರ ಕೈಗೆ ಕೊಡುತ್ತಲೂ ಇರಲಿಲ್ಲ. ಅವನನ್ನೆತ್ತಿಕೊಂಡು ತನ್ನ ಸ್ನೇಹಿತೆಯರ ಮನೆಗೆಲ್ಲಾ ಹೋಗಿ ಬರುತ್ತಿದ್ದಳು. ಸ್ಕೂಲಿಗೆ ಹೋಗುವಾಗಲ್ಲದೆ ಇನ್ನು ಮೂರು ಕಾಲವೂ ವಾಸು ವೈದೇಹಿಯ ಕಂಕುಳಲ್ಲಿ, ಇಲ್ಲ ಜತೆಯಲ್ಲಿ. ಇಷ್ಟೊಂದು ಪ್ರೀತಿಯನ್ನು ಕಂಡವರ ಮಗುವಿನಲ್ಲಿ ತೋರುವಾಗ ಜತೆಯ ಹುಡುಗಿಯರು ಹಾಸ್ಯಮಾಡದೆ ಇರುವರೆ? ಅದರಲ್ಲಿಯೂ ಹಾಸ್ಯವೇ ಅವರ ಜೀವಮಂತ್ರ ಆ ಕಾಲದಲ್ಲಿ. ಸರಿ, ಎಲ್ಲರೂ ವೈದೇಹಿಯನ್ನು ಗೇಲಿಮಾಡುವವರೇ “ಏನೇ? ಕಂಡವರ ಮನೆ ಮಗುವಿಗೇ ಇಷ್ಟು ಒದ್ದಾಡೋಳು ಇನ್ನೇನು ನಿನಗೇ ಒಂದು ಆದರೆ ಪ್ರಾಣಾನೇ ಬಿಟ್ಟು ಬಿಡ್ತೀಯ, ಅಲ್ಲವೇನೇ?”
“ನಮ್ಮ ವೈದೇಹಿಗೆ ಒಂದು ಹತ್ತು ಮಕ್ಕಳಾಗಲಿ ಅಂತ ದೇವರಿಗೆ ನಾನು ದಿನಾಲು ಪ್ರಾರ್‍ಥನೆ ಮಾಡ್ಕೊಳ್ತೇನಮ್ಮ!”
“ಹತ್ತು ಸಾಲದು ಕಣೇ. ಗಾಂಧಾರಿಗೆ ನೂರು ಆಯಿತು. ನಮ್ಮ ವೈದೇಹಿಗೆ ಏನಿಲ್ಲಾಂದರೂ ಅದರಲ್ಲಿ ಅರ್ಧ-”
“ಏ-ಸುಮ್ಮನಿರ್ರೇಮ್ಮ, ಹಾಸ್ಯಮಾಡ್ಬೇಡಿ” ಎಂದು ವೈದೇಹಿ ಕೋಪಗೊಳ್ಳುತ್ತಿದ್ದಳು. ನಿಜ, ಆದರೆ ಅದೆಲ್ಲಾ ಹುಸಿಮುನಿಸು ಅಷ್ಟೇ-ಅವರ ಆ ಮಾತಿನಿಂದ ಅವಳ ಮನಸ್ಸಿಗೆ ನಿಜವಾಗಿಯೂ ಬಹಳ ಸಂತೋಷವಾಗಿತ್ತು. ತನಗೂ ಒಂದುಗೂಸು-ನಿಜ! ತನಗೂ ಒಂದು ಮುದ್ದು ಕೂಸು ಬೇಕು ಎಂದು ಅವಳ ಹೃದಯಾಂತರಾಳ ಮಿಡಿಯುತ್ತಿತ್ತು.
ಆಮೇಲೆ ವೈದೇಹಿಗೆ ಮದುವೆಯಾಯಿತು. ಮದುವೆಯಾದಾಗ ಅವಳ ಕಿವಿಗೆ ಬಿದ್ದ “ದಶಾಸ್ಯಾಂಪುತ್ರಾನಾಧೇಹಿ”-ಎಂಬ ಆಶೀರ್‍ವಾದ ಎಂದೂ ಮರೆಯುವಂತಹುದಲ್ಲ. ಯಾವಾಗಲೂ ಅದು ಕಿವಿಯಲ್ಲಿ ಮಧುರ ಸಂಗೀತದ ನೆನಪಿನಂತೆ ತುಡಿಯುತ್ತಿತ್ತು. ಬ್ರಾಹ್ಮಣರ ಆಶೀರ್‍ವಾದ ನಿಜವಾಗಲಿ ಎಂದು ದೇವರನ್ನು ನೂರುಬಾರಿ ಪ್ರಾರ್‍ಥಿಸಿ ಕೊಂಡಳು.
ಕೊನೆಗೊಮ್ಮೆ ಈ ಆಸೆ ಪೂರೈಸುವ ದಿನ ಬಂದಿತ್ತು. ಮದುವೆಯಾಗಿ ಗಂಡನ ಮನೆಗೆ ಹೋದಾಗಿನಿಂದ ಅವಳ ಮನಸ್ಸಿನಲ್ಲಿ ಈ ಆಸೆ ಕೊರೆಯುತ್ತಿತ್ತು. ಬಾಯಿಬಿಟ್ಟು ಹೇಳುವಂತಿಲ್ಲ. ಹೆಂಗಸಿನ ಸಂಕಟ ಹೆಂಗಸಿಗೇ ಗೊತ್ತು. ಎಷ್ಟೋ ಆಸೆಗಳು, ಬಯಕೆಗಳು, ಆಕಾಂಕ್ಷೆಗಳು ಮನಸ್ಸಿನಲ್ಲಿ ಬೇರುಬಿಟ್ಟು ಬಲಿತಿರುತ್ತವೆ. ಅವುಗಳನ್ನು ಬೇರೆಯವರಿಗೆ ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಗಂಡಸಿಗೆ ಹೇಳುವುದಂತೂ ಆಗದ ಮಾತು, ಇನ್ನು ಸರಿಯವರೊಂದಿಗೆ ಹೇಳಿಕೊಳ್ಳೋಣವೆಂದರೆ ಏನನ್ನುವರೋ ಎನ್ನುವ ಹೆದರಿಕೆ. ಜತೆಗೆ ಸಹಜವಾದ ನಾಚಿಕೆ. ಹೀಗಾಗಿ ಹೆಂಗಸಿನ ನೂರು ಆಸೆಗಳಲ್ಲಿ ತೊಂಬತ್ತೊಂಬತ್ತು ಮನಸ್ಸಿನಲ್ಲೇ, ಹೃದಯದ ಕಾವಿನಲ್ಲಿ ಅಡೆ ಹಾಕಿದಂತೆ ಕಳಿತು ಹಣ್ಣಾದರೆ ಉಳಿದವರಿಗೆ ಅದು ತಿಳಿಯುವುದು. ಇಲ್ಲವಾದರೆ ಅದರ ಸುಳಿವೂ ಇತರರಿಗಿಲ್ಲ. ಅಂತಹುದೇ ಈ ಆಸೆ, ತಾಯ್ತನದ ಆಸೆ ಗೊಂಬೆಯೊಂದಿಗೆ ಆಡುವ ಕಾಲ ಹೋಯಿತು. ಮತ್ತೊಬ್ಬರ ಮಕ್ಕಳನ್ನು ಮುದ್ದಿಡುವಾಗಲೆಲ್ಲಾ ತಾಯ್ತನ ಕೆರಳಿ ತಾನು ಬಂಜೆಯೇ ಎಂದು ಪ್ರಶ್ನೆ ಹಾಕುತ್ತಿತ್ತು. ಅದಕ್ಕೆ ಉತ್ತರ ಕೊಡುವಂತಿರಲಿಲ್ಲ. ಕೊಡಲು ಹೆದರಿಕೆ, ಸಂಶಯ.
ಮದುವೆಯಾದ ಮೂರು ವರುಷದವರೆಗೂ ಆ ಆಸೆ ಪೂರ್‍ಣವಾಗುವ ಸೂಚನೆ ತೋರಲಿಲ್ಲ. ಮೊದಲನೆಯ ವರುಷವೆಲ್ಲಾ ಸುಖವಾಗಿ, ಸಂತೋಷವಾಗಿ ಕಳೆಯಿತು. ವೈದೇಹಿಯ ಅತ್ತೆ, ಅವಳ ಯಜಮಾನರು ಇಬ್ಬರೂ ಅವಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಯಜಮಾನರಂತೂ ಅವಳನ್ನು ತಮ್ಮ ಕಣ್ಣಿನ ಆಲಿಯಷ್ಟು ಮಮತೆಯಿಂದ ಕಾಪಾಡಿಕೊಂಡು ಬಂದರು. ಆದರೆ ಅವರಿಗೂ ಒಳಗೆ ಆಸೆ, ಅತ್ತೆಗೂ ಆಸೆ ಮೂವರಿಗೂ ಒಂದೇ ಆಸೆ. ವೈದೇಹಿಗೊಂದು ಕೂಸಾದರೆ! ತಾವು ಸಾಯುವ ಮುನ್ನ ಮೊಮ್ಮಗನನ್ನು ಎತ್ತಿ ಆಡಿಸುವ ಆಸೆ ಅತ್ತೆಗೆ ತಮ್ಮಿಬ್ಬರ ಪ್ರೇಮದ ಮೂರ್‍ತಿ ಬೇಕೆನ್ನುವ ಆಸೆ ವೈದೇಹಿಯ ಗಂಡನಿಗೆ ವೈದೇಹಿಗಂತೂ ಹೇಳಬೇಕಾದುದೇ ಇಲ್ಲ. ಅವಳ ಅತ್ತೆಯಂತೂ ಸೊಸೆಗೆ ಎಂದು ಸೀಮಂತ ಮಾಡುವೆನೋ ಮೊಮ್ಮಗನನ್ನು ಎಂದು ಆಡಿಸುವೆನೋ ಎನ್ನುವ ತವಕ ಈ ತವಕ ದಿನ ಕಳೆದಂತೆ ಹೆಚ್ಚುತ್ತಾ ಬಂತು. ತವಕ ಹೆಚ್ಚಾದಂತೆ ಮನಸ್ಸಿನ ಅಸಮಾಧಾನವೂ ಹೆಚ್ಚುತ್ತಾ ಬಂತು. ವೈದೇಹಿಯ ಕಡೆಗಿದ್ದ ಒಲವು ತಗ್ಗುತ್ತಾ ಬಂತು. ಒಂದು ದಿನ ವೈದೇಹಿ ಕೋಣೆಯಲ್ಲಿ ಮಲಗಿದ್ದಾಗ ಹೊರಗೆ ತಾಯಿ-ಮಗ ಮಾತನಾಡಿಕೊಳ್ಳುವುದು ಕೇಳಿಸಿತು-
“ಮದುವೆಗೆ ಮುಂಚೆಯೇ ನಾವೂ ಯೋಚನೆ ಮಾಡಬೇಕಾಗಿತ್ತು, ಅವರ ಮನೆಯಲ್ಲಿ ಇವಳೊಬ್ಬಳೇ ಮಗಳು. ತಂಗಿಯಿಲ್ಲ, ಅವಳಿಗೂ ಆಗುತ್ತೋ ಇಲ್ಲವೋ? ತಮ್ಮನಿಲ್ಲ!”
“ಇನ್ನೂ ಏನಮ್ಮ-ಅವಳಿಗಿನ್ನೂ ಮಹಾ ವಯಸ್ಸಾಗಿ ಹೋಯಿತೇ?-ಮನೆಗೆ ಬಂದು ಇನ್ನೂ ಒಂದು ವರ್‍ಷ ಆಯಿತು. ಅಷ್ಟೇ ತಾನೇ? ನಮ್ಮ ಕಾಲೇಜಿನಲ್ಲಿ ಶಾಮಣ್ಣ ಇಲ್ಲವೇ-ಶಾಮಣ್ಣ ನಿನಗೆ ತಿಳಿಯದೇನಮ್ಮ-ಅವನಿಗೆ ಮದುವೆಯಾಗಿ ಎಷ್ಟು ವರ್ಷದ ಮೇಲೆ ಮಕ್ಕಳಾದ್ದು-”
“ಸರಿಯಪ್ಪ, ಅಷ್ಟರ ತನಕ ಯಮ ಕಾಯತಾನೇನೋ? ನಾನು ಇನ್ನು ಅಬ್ಬಾ ಅಂದರೆ ಎರಡು ವರ್‍ಷ ಇರಬಹುದು ಅಷ್ಟರೊಳಗೆ ಮೊಮ್ಮಗನನ್ನ ಆಡಿಸೋ ಆಸೆ”
ವೈದೇಹಿ ಆ ಮಾತನ್ನು ಕೇಳಿ ಆವತ್ತು ತುಂಬಾ ಅತ್ತಿದ್ದಳು. ಅದು ತುಂಬು ಅಳು, ಅತ್ತೆಯವರ ಆಸೆ, ತನ್ನ ಆಸೆ, ತನ್ನ ಗಂಡನ ಆಸೆ ಯಾವುದನ್ನೂ ತಾನು ಪೂರ್‍ಣಗೊಳಿಸಲಿಲ್ಲವಲ್ಲಾ ಎಂದು ಅತ್ತಳು. ಜತೆಗೆ ತನಗೆ ಚಿಕ್ಕಂದಿನಲ್ಲಿ ಆಡಲು ತಂಗಿ, ತಮ್ಮ ಯಾರೂ ಇರಲಿಲ್ಲವಲ್ಲಾ ಎನ್ನುವ ಗುಪ್ತದುಃಖವೂ ಕೂಡಿಕೊಂಡಿರಬಹುದು. ಅದಕ್ಕೂ ಮಿಗಿಲಾಗಿ ತನ್ನ ಗಂಡ ತನ್ನ ಪರವಾಗಿ ಮಾತನಾಡಿದ ಸಂತೋಷ. ಇವುಗಳ ನಡುವೆ ಅತ್ತೆಯ ಅಸಮಾಧಾನ ಯಾವ ರೂಪವನ್ನು ತಾಳುವುದೋ ಎನ್ನುವ ಹೆದರಿಕೆ. ಇದೆಲ್ಲಾ ಅವಳ ಅಳುವಿನಲ್ಲಿ ಸೇರಿಕೊಂಡಿದ್ದುವು.
ಅತ್ತೆಯೇನೋ ಸೊಸೆಯ ಮನಸ್ಸು ನೊಂದುಕೊಳ್ಳಬಹುದೆಂದು ಬಾಯಲ್ಲಿ ಏನನ್ನೂ ಹೇಳುತ್ತಿರಲಿಲ್ಲ. ಆದರೆ ಒಳಗೆ ಬೆಂಕಿಯಿರುವಾಗ ಕಾವನ್ನು ಬಚ್ಚಿಡಲಾದೀತೇ ? ಒಂದಲ್ಲ ಒಂದುರೀತಿಯಲ್ಲಿ ಅಸಮಾಧಾನ ತೋರಿಹೋಗುತ್ತಿತ್ತು. ಒಂದು ನಡೆಯಲ್ಲಿ, ಇಲ್ಲವೇ ಒಂದು ಹುಬ್ಬು ಚಿಮ್ಮಿನಲ್ಲಿ ವೈದೇಹಿಗೆ ಅವರ ಮನಸ್ಸಿನ ಅಸಮಾಧಾನ ಗೊತ್ತಾಗಿ ಹೋಗುತ್ತಿತ್ತು. ಅವಳಿಗೂ ಮನಸ್ಸಿಗೆ ಅಸಮಾಧಾನವಾಗುತ್ತಿತ್ತು. ಆದರೆ-ವೈದೇಹಿಯ ಗಂಡನಿಗೂ ದಿನೇದಿನೇ, ಮನಸ್ಸು ವಿಹ್ವಲವಾಗುತಿತ್ತು. ವೈದೇಹಿಗೆ ಅದು ಚೆನ್ನಾಗಿ ಗೊತ್ತು, ಗಂಡನ ಹೃದಯದ ನಾಡಿಯ ಬಡಿತ ಅವಳಿಗೆ ಗೊತ್ತಿತ್ತು. ಗಂಡನ ಒಂದೊಂದು ನಡವಳಿಕೆಯಲ್ಲಿ ಅವಳಿಗೆ ಉದಾಸೀನದ ಛಾಯೆ ತೋರಿಬರುತ್ತಿತ್ತು. ಮದುವೆಯಾದ ಹೊಸದರಲ್ಲಿ ಅವಳನ್ನು ತನ್ನ ಜತೆಗೆ ಬೃಂದಾವನಕ್ಕೆ ವಾರಕ್ಕೊಮ್ಮೆ ಕರೆದುಕೊಂಡು ಹೋಗುತ್ತಿದ್ದ. ಆದರೆ ಈಗ ಬಹಳ ಅಪರೂಪ. ಅದೂ ಅವಳಾಗಿಯೇ ಕೇಳಿಕೊಳ್ಳಬೇಕು. ಆಗಲೇ ಒಂದು ದಿನ ಗಂಡ ಹೆಂಡತಿ ಇಬ್ಬರೂ ಸಿನಿಮಾಕ್ಕೆ ಹೋಗಿದ್ದರು. ಆಗ-ಯಾವುದೋ ಚಿತ್ರ-ಚಿತ್ರದಲ್ಲಿ ಒಬ್ಬ ಸನ್ಯಾಸಿ ಭಿಕ್ಷೆ ಬೇಡುವನು, ಮನೆಯವಳಿಗೆ ಮಕ್ಕಳಿಲ್ಲವೆಂದು ತಿಳಿದು ಭಿಕ್ಷವನ್ನೊಲ್ಲದೆ ಹೊರಟು ಹೋಗುತ್ತಾನೆ. ಮಕ್ಕಳಿದ್ದ ಮನೆ ಬೃಂದಾವನ, ಮಕ್ಕಳಿಲ್ಲದ ಮನೆ ಮಸಣ” ಎಂದು ಅವನು ಅಂದಾಗ ವೈದೇಹಿಯ ಹೃದಯಕ್ಕೆ ಒನಕೆಯ ಪೆಟ್ಟು ಕೊಟ್ಟಂತಾಯಿತು. ಜತೆಗೆ ಪಕ್ಕದಲ್ಲಿದ್ದ ಗಂಡ ಬೇರೆ ದೈನ್ಯವಾಗಿ ಅವಳ ಕಡೆಗೆ ಮುಖ ತಿರುವಿದ. ಇದರಿಂದ ವೈದೇಹಿಯ ಮನಸ್ಸು ಕೊಂಚ ಕಹಿಯಾಗಲು ಕಾರಣವಾಯಿತು. ದುಃಖ ಮಿತಿಮೀರಿದರೆ ಹೃದಯ ಕಹಿಯಾಗುವುದೇನೂ ಆಶ್ಚರ್‍ಯವಲ್ಲ!
ಉಳಿದವರ ಮಕ್ಕಳನ್ನೆತ್ತಿಕೊಳ್ಳುವುದರಲ್ಲಿ ಈಗ ಮೊದಲಿನ ಸುಖವಿರಲಿಲ್ಲ. “ಈ ಮಗು ಚೆನ್ನಾಗಿದೆ. ಎಷ್ಟು ಸೊಗಸಾಗಿ ಆಡುತ್ತದೆ. ಇದರ ತೊದಲು ಮಾತೇ ವೀಣೆಯ ಸಂಗೀತಕ್ಕಿಂತ ಇಂಪಾಗಿದೆ” ಎನ್ನುವ ಮಾತು ಮರೆಯಿತು. ” ಈ ಮಗು ಚೆನ್ನಾಗಿದೆ. ಆದರೆ ಇದು ನನ್ನದಲ್ಲ! ನನ್ನದಲ್ಲದುದು ಹೇಗಿದ್ದರೆ ನನಗೇನು ಬಂತು ಭಾಗ್ಯ?” ಎಂಬ ಭಾವನೆ ಮೆಲ್ಲನೆ ಬೆಳೆಯಲಾರಂಭವಾಯಿತು. ಅಂದರೆ ಉಳಿದವರ ಮಕ್ಕಳಲ್ಲಿ ವಿಶ್ವಾಸ ತಗ್ಗಿತೆಂದಲ್ಲ. ತನಗೆ ಆಗದೇ ಇದ್ದ ಮಗುವಿನ ಪ್ರೇಮ ಅದನ್ನು ಮರೆಮಾಡಿತ್ತು ಅಷ್ಟೇ! ಅವುಗಳನ್ನು ಎಂದಿನಂತೆಯೇ ಮುದ್ದಾಡುತ್ತಿದ್ದಳು. ಆದರೆ ಆ ಮುದ್ದಾಟದಲ್ಲಿ ಮೊದಲಿನ ಸಂಪೂರ್‍ಣ ಆನಂದವಿರಲಿಲ್ಲ. ಆನಂದಕ್ಕೆ ಇಲ್ಲಿ ಕಹಿಯೂ ಕೂಡಿ ಕೊಂಡು ಬೇವುಬೆಲ್ಲವಾಗಿತ್ತು.
ಒಂದು ಬಾರಿ ಅವಳ ಪಕ್ಕದ ಮನೆಯವರ ಮಗು-ಒಂದೂವರೆ ವರ್ಷದ ಮಗು-ತಪ್ಪಿಸಿಕೊಂಡು ಬಿಟ್ಟಿತ್ತು, ಆ ದಿನ ಬೆಳಿಗ್ಗೆ ಎಲ್ಲರೂ ಬೆಟ್ಟಕ್ಕೆ ಹೋಗಬೇಕೆಂದು ಅಷ್ಟು ದೂರ ನಡೆದುಕೊಂಡು ಹೋಗಿದ್ದರು. ಆದರೆ ಆ ದಿನ ಬಸ್ಸು ಸಿಗದೆ ಹಾಗೆಯೇ ಹಿಂತಿರುಗಿದ್ದರು. ಮಗು ಆ ದಾರಿಯನ್ನೇ ನೆನಪಿನಲ್ಲಿಟ್ಟುಕೊಂಡು ಯಾರಿಗೂ ಕಾಣದಂತೆ ಅಷ್ಟು ದೂರ ಹೊರಟುಹೋಗಿತ್ತು. ಮಗು ಎಲ್ಲೋ ಕಾಣದಾಯಿತಲ್ಲಾ ಏನಾಯಿತೋ ಎಂದು ಮನೆಯವರೆಲ್ಲ ಗಾಬರಿಪಡುತ್ತಿದ್ದರು. ಎಲ್ಲರೂ ಹಾರಾಡುತ್ತಿದ್ದರು. ಮಗು ಎಲ್ಲಿ, ಎಲ್ಲಿ ಎಂದು ಹುಡುಕಲು ಹೊರಟರು. ಅವರ ಮನೆಯಲ್ಲಿ ಅವರ ತಮ್ಮ ಇದ್ದವನು ಅಕ್ಕನ ಮೇಲೆ ರೇಗಾಡುತಿದ್ದ. “ಮಕ್ಕಳನ್ನು ನೋಡಿಕೊಳ್ಳಲಾಗದ ಇಂತಹವರಿಗೆ ಮಕ್ಕಳೇಕಾಗಬೇಕೋ ಕಾಣೆ!” ಎಂದು ಗುಡುಗಿದ. ಈ ಮಾತನ್ನು ಕೇಳಿದೊಡನೆಯೇ ವೈದೇಹಿಯ ಕಣ್ಣುಗಳಲ್ಲಿ ನೀರು ತಾನೇ ತಾನಾಗಿ ಉಕ್ಕಿತ್ತು. ತಾಯ್ತನದ ಸವಿ, ನೋವು, ಗಂಡಸಿಗೆ ಹೇಗೆ ತಿಳಿಯಬೇಕು?
ವೈದೇಹಿ ಅತ್ತೆಯ ಮನೆಗೆ ಬಂದು ಎರಡು ವರ್‍ಷ ಕಳೆಯಿತು. ಆದರೂ ಮೊಮ್ಮಗನನ್ನು ಆಡಿಸುವ ಅತ್ತೆಯ ಆಸೆ ಪೂರೈಸುವ ಸೂಚನೆಯೇ ಕಾಣಲಿಲ್ಲ. ದಿನ ಕಳೆದಂತೆ ಅತ್ತೆ ಗಡುಸಾಗುತ್ತ ಬಂದರು. ಮೊದಲಿನ ಮಮತೆ, ಮೃದುತಯೆಲ್ಲ ಇಳಿಮುಖವಾಗಿ ಅಸಮಾಧಾನ
ಮುಖಹಾಕಿತು. ಮೊದಲು ಬರಿಯ ಒಂದು ನೋಟದಲ್ಲಿದ್ದುದು ಈಗ ಮಾತಿಗೂ ಇಳಿದಿತ್ತು. ಮಾತು ಮಾತಿಗೂ ಅತ್ತೆ ವೈದೇಹಿಯನ್ನು ಹೀಯಾಳಿಸಲಾರಂಭಿಸಿದರು. ಯಾವುದೋ ಸಾಮಾನ್ಯ ಸಂಗತಿಗೆ ಗೊಣಗಲು ಆರಂಭಿಸಿ ಕೊನೆಗೆ “ಈ ಬಂಜೆ ಸೊಸೆಯನ್ನು ಕಟ್ಟಿ ಕೊಂಡುದು ನನ್ನ ಹಣೆಯ ಬರೆಹ” ಎಂದುಬಿಡುತ್ತಿದ್ದರು. ಆ ಮಾತು ಕೇಳಿದೊಡನೆಯೇ ವೈದೇಹಿಗೆ ವಿಷಸರ್‍ಪ ಕಚ್ಚಿದಂತಾಗುತ್ತಿತ್ತು. ಹೃದಯಾಂತರಾಳದಿಂದ ದುಃಖ ಚಿಮ್ಮಿ ಬರುತ್ತಿತ್ತು. ಆಗ ಮನಸ್ಸಿಗೆ ಸಮಾಧಾನವಾಗುವವರೆಗೂ ಕುಳಿತು ಅತ್ತುಬಿಡುತ್ತಿದ್ದಳು. ಆದರೆ ಅತ್ತೆಯ ಮೇಲೆ ಅವಳಿಗೆ ಕೊಂಚವಾದರೂ ಕೋಪ ಬರುತ್ತಿರಲಿಲ್ಲ. ತನ್ನದು ಹೇಗೆ ಒಡೆದ ಆಸೆಯೋ, ಅತ್ತೆಯದೂ ಹಾಗೆಯೇ ಎಂದು ಅವಳಿಗೆ ಗೊತ್ತು, ಹೃದಯದ ಆಸೆ ಚೂರಾದಾಗ ಒಡಕು ಧ್ವನಿ ಬರುವುದು ಸಹಜ. ಅದು ಅತ್ತೆಯ ತಪ್ಪಲ್ಲ, ತನ್ನದೇ ಎಂದು ತನ್ನ ಮೇಲೆಯೇ ತಪ್ಪು ಹೊರಿಸಿಕೊಳ್ಳುತ್ತಿದ್ದಳು.
ಕೊನೆಗೂ ಒಮ್ಮೆ ಅವರೆಲ್ಲರ ಆಸೆ ಪೂರ್‍ಣವಾಗುವಂತೆ ತೋರಿತು. ಆರು ತಿಂಗಳಿಂದ ತಾನು ದಿನವೂ ಬೆಳಿಗ್ಗೆ ಮಾಡುತ್ತಿದ್ದ ಅಶ್ವತ್ಥ ಪ್ರದಕ್ಷಿಣೆಯ ಫಲವೆಂದು ವೈದೇಹಿಯ ನಂಬಿಕೆ. ಚಾಮುಂಡೇಶ್ವರಿಗೆ ತಾವು ಸಹಸ್ರನಾಮು ಮಾಡಿಸುವುದಾಗಿಯೂ, ಮುತ್ತೈದೆಯರನ್ನು ಕರೆಸಿ ಹೂವೀಳ್ಯ ಮಾಡಿಸುವುದಾಗಿಯೂ ಮಾಡಿಸಿಕೊಂಡಿದ್ದ ಹರಕೆಯ ಫಲವೆಂದು ವೈದೇಹಿಯ ಅತ್ತೆಯ ವಿಶ್ವಾಸ ಗುಟ್ಟಾಗಿ ತನ್ನಲ್ಲಿಯೇ ಬಚ್ಚಿಟ್ಟುಕೊಂಡು, ಅರೆನಂಬಿಕೆಯಿಂದ, ಅರೆಸಂಶಯದಿಂದ ತಾನು ನಾಗರ ಪ್ರತಿಷ್ಠೆಗೆ ಹಣ ಕೊಟ್ಟುದರ ಫಲವೆಂದು ವೈದೇಹಿಯ ಗಂಡ, ಅಂತೂ ಮೂವರಿಗೂ ಅತಿ ಸಂತೋಷದ ಸುದ್ದಿ. ಮೂವರ ಏಕಮುಖ ಆಸೆ ಪೂರ್‍ಣವಾಗುವ ಆನಂದ ಮನೆಯಲ್ಲಿ ಮತ್ತೆ ಹಿಂದಿನ ನಗೆ ಮೂಡಿತು. ಎಲ್ಲರ ಮುಖವೂ ಅರಳಿತು ಅತ್ತೆಯಂತೂ ವೈದೇಹಿಯನ್ನು ಯಾವ ಕೆಲಸ ಮಾಡಲೂ ಬಿಡುತ್ತಿರಲಿಲ್ಲ. ತಮ್ಮ ಮಗಳಿದ್ದಿದ್ದರೆ ಎಷ್ಟು ಮುಚ್ಚಟೆಯಿಂದ ನೋಡಿಕೊಳ್ಳುತ್ತಿದ್ದರೋ ಅಷ್ಟೇ ಎಚ್ಚರಿಕೆಯಿಂದ, ಮಮತೆಯಿಂದ ವೈದೇಹಿಯನ್ನು ನೋಡಿಕೊಳ್ಳುತ್ತಿದ್ದರು. ಬಸುರಿಗೆ ಮೂರು ತಿಂಗಳಾಗುವ ಮೊದಲೇ ಬಯಕೆ ಸಂಕಟಗಳು ತೋರಿಕೊಂಡವು. ಆಗಂತೂ ವೈದೇಹಿಯ ಅತ್ತೆ ಸದಾ ಅವಳ ಹತ್ತಿರದಲ್ಲೇ ಇರುತ್ತಿದ್ದರು. ತಮ್ಮ ಸೊಸೆ ಸುಖವಾಗಿ ಹೆತ್ತು ಕಳೆದುಕೊಳ್ಳಲೆಂದು ನಿತ್ಯವೂ ತುಪ್ಪದ ದೀಪ ಹೊತ್ತಿಸುತ್ತಿದ್ದರು. ಶನಿವಾರವಂತೂ ಮನೆಯಲ್ಲಿ ಶನಿದೀಪ ಹೊತ್ತಿಸಿ, ಆಂಜನೇಯನ ಗುಡಿಗೆ ಹೋಗಿ ಅಲ್ಲಿ ಎಳ್ಳು ದೀಪ ಹೊತ್ತಿಸಿ ಸೊಸೆಗೆ ರಕ್ಷೆಯಿಟ್ಟ ಹೊರತು ಅವರಿಗೆ ಸಮಾಧಾನವಿಲ್ಲ.
ಮೂರನೆಯ ತಿಂಗಳಲ್ಲಿ ಮೊಗ್ಗು ಮುಡಿಸುವ ಶಾಸ್ತ್ರವೊಂದಿದೆ. ಇದು ಹೆಸರಿಗೆ ಅಷ್ಟೇ, ಸಾಮಾನ್ಯವಾಗಿ ಇದನ್ನು ಯಾರೂ ಸರಿಯಾಗಿ ಆಚರಿಸುವುದೇ ಇಲ್ಲ. ವೈದೇಹಿಯ ಅತ್ತೆ ಮಾತ್ರ ಅದನ್ನು ವಿಜೃಂಭಣೆಯಿಂದಲೇ ನಡೆಸಿಬಿಟ್ಟರು. ಆಗ ಹೊಲಿಸಲೇಬೇಕಾದ ಹಸುರು ಕುಪ್ಪಸಕ್ಕೆ ಸುಮಾರು ೪೦ ರೂಪಾಯಿ ಆಗಿರಬಹುದೆಂದು ಆರತಿಗೆ ಬಂದ ಹೆಂಗಸರ ಅಂದಾಜು. ಆರತಿಗಂತೂ ಸುತ್ತಲೂ ಹೂಬಿಟ್ಟ ಹೂಕುಂಡಗಳನ್ನಿಟ್ಟು ಮಗನಿಂದ ಮಂಟಪದಂತೆ ಕಟ್ಟಿಸಿ, ಒಳಗೆ ಕುರ್‍ಚಿಯನ್ನೇ ಸಿಂಹಾಸನವಾಗಿ ಮಾರ್‍ಪಡಿಸಿ ಶ್ರೀ ಶಾರದೆಯ ಅಲಂಕಾರ ಮಾಡಿ ಸೊಸೆಯನ್ನು ಕೂರಿಸಿದ್ದರು. ಅಂದಿನ ವೈದೇಹಿ ನಿಜವಾಗಿಯೂ ಜನಕನ ಮಗಳು ಸೀತೆಯಂತೆಯೇ! ಕಣ್ಣೆಸರು ಆಗುವಷ್ಟು ಸುಂದರವಾಗಿ ತೋರುತಿದ್ದಳು. ಅಂದಿನ ಆರತಿಸಾಮಾನು ಬಾಗಿನಕ್ಕೆ ಏನಿಲ್ಲೆಂದರೂ ೧೦೦ ರೂಪಾಯಿ ಖರ್‍ಚಾಗಿರಬೇಕು.
ಇದಾದ ಮೇಲೆ ಬಳೆ ತೊಡಿಸುವುದು. ತಾಯಿಯ ಮನೆಯಲ್ಲಾಗ ಬೇಕಾದುದನ್ನು ಅತ್ತೆಯ ಮನೆಯಲ್ಲೇ ಮಾಡಿಬಿಟ್ಟರು. ಗುರುತಿನ ಹೆಂಗಸರೆಲ್ಲಾ ಮತ್ತೆ ನಾಲ್ಕು ತಿಂಗಳು ಬಳೆಗಳನ್ನೇ ಕೊಂಡುಕೊಳ್ಳಲಿಲ್ಲ. ಅದಾದ ಮೇಲೆ ಸೀಮಂತೋತ್ಸವ. ಯಾವ ಶಾಸ್ತ್ರವನ್ನೂ ಚಾಚೂ ತಪ್ಪದ ವೈದೇಹಿಯ ಅತ್ತೆ ನೆರವೇರಿಸಿಕೊಂಡು ಬಂದರು. ಈ ಮಧ್ಯೆ ಅವರು ತಮ್ಮ ಹರಕೆಯನ್ನು ಮರೆಯಲಿಲ್ಲ. ಒಂದು ಶುಕ್ರವಾರ ಸೊಸೆಯನ್ನು ಕರೆದುಕೊಂಡು ಹೋಗಿ ಚಾಮುಂಡೇಶ್ವರಿಗೆ ಸಹಸ್ರನಾಮ ಕುಂಕುಮಾರ್‍ಚನೆ ಮಾಡಿಸಿ, ಸುಖವಾಗಿ ಹೆತ್ತು ಕಳೆದುಕೊಂಡರೆ ಮತ್ತೊಂದು ಸಹಸ್ರನಾಮ ಮಾಡಿಸುವುದಾಗಿ ಹರಕೆ ಹೊತ್ತು ಹಿಂತಿರುಗಿದರು.
ಗಂಡುಮಗುವಾಗುವುದೋ ಹೆಣ್ಣಾಗುವದೋ ಎಂದೊಂದು ಕಾತರ. ತಾಯಿಯಾಗುವ ಹೆಂಗಸಿಗೆ ತನ್ನ ಕೂಸು ಹೇಗಿದ್ದೀತೆಂಬ ಯೋಚನೆ ಮೊದಲಿನಿಂದಲೇ. ವೈದೇಹಿ ಎಷ್ಟೋ ಬಾರಿ ಸುಮ್ಮನೆ ಕಣ್ಣು ಮುಚ್ಚಿ ಕುಳಿತು ತನ್ನ ಮಗುವಿನ ಚಿತ್ರವನ್ನು ಕಲ್ಪನೆಯಲ್ಲೇ ಚಿತ್ರಿಸಿಕೊಳ್ಳುತಿದ್ದಳು. ಅದೇಕೋ ಏನೋ ಅವಳ ಮನಸ್ಸಿಗೆ ಮಗು ಹೆಣ್ಣು ಎನಿಸುತಿತ್ತು. ಆದರೆ ಅವಳ ಗಂಡನಿಗೆ, ಅತ್ತೆಗೆ ಬೇಕಾಗಿದ್ದುದು ಹೆಣ್ಣಲ್ಲ, ಗಂಡು. ಕೂಡಲೇ ವೈದೇಹಿ ಮನಸ್ಸನ್ನು ಹರಿಬಿಡುತ್ತಿದ್ದಳು. ಕೂಸು ಗಂಡು, ಅದಕ್ಕೆ ಏನು ಹೆಸರಿಡುವುದು. ಎಂತಹ ಉಡುಪು ತೊಡಿಸುವುದು-ತಕ್ಷಣ ಜರಿಯ ಲಂಗದ ಚಿತ್ರ. ಇದರ ಜತೆಗೆ ಮತ್ತೆ ಮತ್ತೊಂದು ಯೋಚನೆ-ಮಗುವಿನ ಬಣ್ಣ ಕಪ್ಪುಬಣ್ಣವಾದರೆ ಚೆನ್ನಾಗಿರುವುದಿಲ್ಲ. ಶ್ರೀಕೃಷ್ಣನೇನೋ ನೀಲಮೇಘಶ್ಯಾಮನಾದರೂ ಅವನ ಬಣ್ಣ ಭೂಮಿಯ ಮಕ್ಕಳಿಗೆ ಒಗ್ಗದು. ಯಾವ ತಾಯಿಯೂ ತನ್ನ ಮಗುವಿಗೆ ಶ್ರೀಕೃಷ್ಣನ ಮೈ ಬಣ್ಣ ಬೇಕೆನ್ನಲಾರಳು. ಅಂದರೆ ಬಿಳುಪಾಗಿರಬೇಕೇ ಕೂಸು? ಅಚ್ಚ ಬಿಳುಪು ಬಯಸುವುದು ಹುಚ್ಚುತನ, ಮಗು ಗುಲಾಬಿಯ ಮುಖ ಪಡೆದಿರಬೇಕು. ಆದರೆ-ಕಪ್ಪಾಗಿಬಿಟ್ಟರೆ ಅದೊಂದು ಹೆದರಿಕೆ. ತನ್ನ ಮತ್ತು ತನ್ನ ಯಜಮಾನರ ಬಣ್ಣವೇನೂ ಕಪ್ಪಲ್ಲ. ಆದರೂ ಹೇಗೆ ಹೇಳಲು ಸಾಧ್ಯ? ಮೂರನೆಯ ಮನೆಯ ಬಾಲಸುಂದರಮ್ಮನ ಮಗು ಕಾಡಿಗೆಗಪ್ಪು, ಬಾಲಸುಂದರಮ್ಮನೂ ಅವಳ ಯಜಮಾನರೂ ಒಳ್ಳೆಯ ಬಿಳುಪು. ಅದಕ್ಕೆಂದೇ ವೈದೇಹಿ ಮನಸ್ಸಿನಲ್ಲಿ ಚಿಂತಿಸಿದಳು. ತನ್ನ ಪಕ್ಕದ ಮನೆಯ ಮಲೆಯಾಳಿ ಆಂಡಾಳಮ್ಮನ ಮಾತನ್ನು ಕೇಳುವುದೇ ಎಂದು. ಬಸುರಿಯಾದಾಗ ಅಕ್ಕಿಯನ್ನು ಹಾಗೆಯೇ ಮುಕ್ಕಿದರೆ ಮಗು ಬಿಳುಪಾಗುತ್ತದೆಂದು ಆಂಡಾಳಮ್ಮನ ಉಪದೇಶವಾಗಿತ್ತು, ಅದನ್ನು ಕೇಳಿದಾಗಲೇನೋ ವೈದೇಹಿಗೆ ಹೊಟ್ಟೆ ತುಂಬ ನಗುಬಂತು. ಆದರೆ ಮಗುವಿನ ರೂಪದರ್ಶನದ ಬಯಕೆ ಹೆಚ್ಚಿದಂತೆ ಅದರಲ್ಲಿ ಅರ್ಧನಂಬಿಕೆ ಬಂದಿತು. ಆದರೆ ಬರಿಯ ಅಕ್ಕಿಯನ್ನು ಮುಕ್ಕುವುದಾದರೂ ಹೇಗೆ? ಆದರೆ ಈ ಎಲ್ಲ ಆಸೆಗಳಿಗೂ ಒಂದು ದಿನ ಕೊಡಲಿ ಪೆಟ್ಟು ಬಿತ್ತು, ಅದು
ಸಹಿಸಲಾರದ ಕೆಟ್ಟು, ಅನಿರೀಕ್ಷಿತವಾದ ಪೆಟ್ಟು-ಸೀಮಂತವಾದ ಮೂರು ನಾಲ್ಕು ದಿನದನಂತರ ವೈದೇಹಿ ಊಟಮಾಡಿ ಮಲಗಿಕೊಳ್ಳಲೆಂದು ಹಾಸಿಗೆಯ ಹತ್ತಿರ ಹೋದಳು. ಹೊಟ್ಟೆಯಲ್ಲಿ ತೊಳಸು ಆರಂಭ ವಾಯಿತು. ಒಂದೆರಡು ನಿಮಿಷದಲ್ಲೇ ವಾಂತಿ-ಅಂದಿನಿಂದ ವೈದೇಹಿಯ ಸಂಕಟ ಹೇಳತೀರದು. ಮೈಯಿಳಿದು ಕಾಯಿಲೆ ಬಿದ್ದು ಅವಳು ಬದುಕಿ ಕೊಳ್ಳುವುದೇ ಕಷ್ಟವಾಯಿತು. ಆಗ ಆಸೆಗಳೆಲ್ಲಕ್ಕು ಬೆಂಕಿಬಿದ್ದು ಉರಿದು ಹೋದರೂ ಅದನ್ನು ಬಹು ಕಷ್ಟದಿಂದ ಸಹಿಸಿಕೊಂಡರು. ಅಷ್ಟೇ ಅಲ್ಲ. ಕಾಯಿಲೆ ಬಿದ್ದ ವೈದೇಹಿಗೆ ಶುಶ್ರೂಷೆ ಮಾಡಿದರು. ಆಗ ಅವರು ಅವಳಿಗೆ ಸಹಾನುಭೂತಿ, ಮಮತೆ ತೋರಿಸದಿದ್ದರೆ ವೈದೇಹಿ ಖಂಡಿತವಾಗಿ ಉಳಿಯುತ್ತಿರಲಿಲ್ಲ. ವೈದೇಹಿಗೆ ಒಂದು ಕಡೆ ಕಾಯಿಲೆಯ ಕಿತ್ತಾಟ, ಮತ್ತೊಂದು ಕಡೆ ಮನಸ್ಸಿನ ನೋವು, ಅಯ್ಯೋ! ತನ್ನ ಜನ್ಮ ಕೆಟ್ಟುದು ಎಲ್ಲರ ಬಯಕೆಯ ಸಸಿಯನ್ನು ಮುರುಟಿ ಹಾಕಿದ ತನ್ನ ಹಣೆಯಬರಹ ಕೆಟ್ಟುದೆಂದು ತನ್ನನ್ನು ತಾನೇ ಹಳಿದುಕೊಳ್ಳುತ್ತಿದ್ದಳು. ಇಷ್ಟು ದಿನವೂ ಕಾಣುತ್ತಿದ್ದ ತಾಯ್ತನದ ಸ್ವಪ್ನ ಕಣ್ಣು ಮುಂದೆಯೇ ಚೂರಾಗಿತ್ತು, ಆ ರಭಸಕ್ಕೆ ಮೈ ಬಾಡಿತ್ತು. ಆ ಸುಸ್ತಿನಿಂದ ಸುಧಾರಿಸಿಕೊಂಡು ಹಾಸಿಗೆ ಬಿಟ್ಟೇಳಬೇಕಾದರೆ ವೈದೇಹಿಗೆ ಮೂರು ತಿಂಗಳು ಬೇಕಾಯಿತು.
ತನ್ನ ದುರವಸ್ಥೆಯಿಂದ ಅತ್ತೆಗೂ, ಗಂಡನಿಗೂ ಎಷ್ಟು ನೋವೆಂಬುದು ಅವಳಿಗೆ ಗೊತ್ತು. ಅವಳ ಗಂಡ ಯಾವುದನ್ನೂ ಬಿಚ್ಚಿ ಹೇಳದಿದ್ದರೂ ಅವರ ಹೃದಯ ಚೂರಾಗಿದೆಯೆಂದೂ ಅವಳಿಗೆ ತಿಳಿದಿತ್ತು. ಆ ನೋವನ್ನೆಲ್ಲಾ ಒಳಗೆ ಹುದುಗಿಸಿಟ್ಟು ಕೊರಗನ್ನು ಕೊಂಚವಾದರೂ ಕಾಣಬಿಡದೆ, ತನಗೆ ಸಮಾಧಾನ ನೀಡುವ ಅವರಿಬ್ಬರ ಸ್ಥೈರ್‍ಯವನ್ನು ವೈದೇಹಿ ಬಹಳ ಮೆಚ್ಚಿದಳು. ಏಳೇಳು ಜನ್ಮಕ್ಕೂ ಇವರೇ ನನ್ನವರಾಗಲಿ ಎಂದು ದೇವರಲ್ಲಿ ಮೊರೆಯಿಟ್ಟಳು. ಅವರ ಸಹಾನುಭೂತಿ, ಮಮತೆಯಲ್ಲಿ ಮಲ್ಲನೆ ಮೊದಲಿನಂತೆಯೇ ಆದಳು.
ವೈದೇಹಿ ಎರಡನೆಯ ಬಾರಿ ಬಸುರಾದಾಗ ಮನೆಯ ಎಲ್ಲರ ಮುಖದಮೇಲೂ ಯಾವುದೋ ನೆರಳು ಬಿದ್ದಂತಿತ್ತು. ಹೊರಗೆ ಯಾರೂ ತೋರ್‍ಪಡಿಸದಿದ್ದರೂ ಒಳಗೇ ಎಲ್ಲರ ಮನಸ್ಸು ಕುದಿಯುತ್ತಿತ್ತು. ಕಳೆದಬಾರಿ ದುರಂತವಾಗಿ ಹೋಯಿತು. ಈ ಬಾರಿ ಏನಾಗಿ ಹೋಗುವುದೋ ಎಂದು ಎಲ್ಲರಿಗೂ ಮಿಡುಕು, ವೈದೇಹಿಯ ಮನಸ್ಸಿನ ತಾಕಲಾಟವಂತೂ ಹೇಳತೀರದು. ಹೇಗೋ, ಏನೋ, ಏನುಗತಿ ಇದೇ ಯೋಚನೆ. ಈ ಬಾರಿಯೂ ಅತ್ತೆಯವರಿಂದ ಉಪಚಾರ ಕಡಿಮೆಯಾಗಲಿಲ್ಲ. ಸೊಸೆಗೆ ನಿಶ್ಯಕ್ತಿ, ಆ ನಿಶ್ಯಕ್ತಿಯಿದ್ದರೆ ಕೂಸಿಗೆ ಕೆಡುಕೆಂದು ಅನುಭವಿಯಾದ ಅತ್ತೆಗೆ ಗೊತ್ತಿತ್ತು. ಅದರಿಂದಲೇ ವೈದೇಹಿಗೆ ಯಾವುದಕ್ಕೂ ಅವರು ಕಡಿಮೆ ಮಾಡಲಿಲ್ಲ. ಎಂದಿನಂತೆಯೇ ನೀರುನಿಡಿ, ಊಟಉಪಚಾರಗಳಾಗುತ್ತಿದ್ದುವು. ಇಷ್ಟಾದರೂ ಅವರಿಗೂ ತನಗೂ
ಮಧ್ಯೆ ಯಾವುದೋ ಒಂದು ನೆರಳು ಕಾಲು ಚಾಚಿದೆಯೆಂದು ವೈದೇಹಿಗೆ ಅನಿಸಿತು. ಅದು ಸಹಜವಾಗಿಯೇ ತೋಚಿದ ಭಾವನೆ. ಮೊದಲಬಾರಿ ತನಗಾದ ಪ್ರಕರಣದಿಂದ ಅತ್ತೆಯ ಮೃದುತೆ ಕೊಂಚ ತಗ್ಗಿದೆಯೆಂದು ಅವಳ ಹೃದಯಕ್ಕೆ ಗೊತ್ತಾಗಿತ್ತು. ಆದರೂ ಅತ್ತಗೆ ತನ್ನ ವಿಷಯಕ್ಕೆ ಸಹಾನುಭೂತಿಯಿದೆ, ಅಕ್ಕರೆಯಿದೆ ಎಂಬುದೂ ಗೊತ್ತು. ಅದೊಂದು ವಿಚಿತ್ರ ಸನ್ನಿವೇಶ!
ವೈದೇಹಿಗೆ ದಿನ ತುಂಬಿದಂತೆ ಕಳವಳವೂ ಹೆಚ್ಚುತ್ತಾ ಬಂತು. ಅತ್ತರೂ ಸಂಶಯ, ಗಂಡನಿಗೂ ಒಂದು ಬಗೆಯ ಅನಿಶ್ಚಯತೆ. ವೈದೇಹಿಗೂ ಕಳವಳ, ಕಾತರ ಒಂದೊಂದು ದಿನವೂ ಒಂದೊಂದು ಯುಗವಾಗಿ ಪರಿಣಮಿಸುವಂತಿತ್ತು. ಅತ್ತೆಯಂತೂ ವೈದೇಹಿಯ ವಿಷಯ ಕೊರಗಿ ಕೊರಗಿ ತರಗಾಗಿಬಿಟ್ಟಿದ್ದರು. ಈ ಬಾರಿಯಾದರೂ ಸುಖವಾಗಿ ಹೆರಿಗೆಯಾಗಲೆಂದು ಆತ ಕಂಡಕಂಡ ದೇವರಿಗೆಲ್ಲಾ ಕೈಮುಗಿಯುತ್ತಿದ್ದರು, ಹರಕೆ ಹೊತ್ತಿದ್ದರು. ವೈದೇಹಿಯ ಜಾತಕವನ್ನು ತೆಗೆದುಕೊಂಡು ಹೋಗಿ ತಮಗೆ ಗುರುತಾಗಿದ್ದ ಜೋಯಿಸರಿಗೆಲ್ಲಾ ತೋರಿಸಿತಂದಿದ್ದರು. ಕಣ್ಣಿನಲ್ಲಿ ಕಣ್ಣಿಟ್ಟು ಸೊಸೆಯನ್ನು ನೋಡಿಕೊಳ್ಳುತ್ತಿದ್ದರು. ಇಷ್ಟೆಲ್ಲಾ ಆದರೂ ಮನಸ್ಸಿನೊಳಗೆ ಅವಲಕ್ಕಿ ಕುಟ್ಟುತ್ತಿತ್ತು. ವೈದೇಹಿಗೆ ಹೇಗೋ ಏನೋ ಎಂದು ಯೋಚಿಸುತ್ತಾ ತಲೆಯ ಮೇಲೆ ಕೈಯಿಟ್ಟು ಕುಳಿತು ಬಿಡುತ್ತಿದ್ದರು. ಒಂದೊಂದುಬಾರಿ ಅವರಿಗೂ ಯೋಚನೆ ಬರುತ್ತಿತ್ತು, ಇದೂ ಹಾಗೆಯೇ ಆಗಿಬಿಟ್ಟರೆ ಆಗೇನು? ಈ ಪ್ರಶ್ನೆಗೆ ಉತ್ತರಕೊಡುವುದು ಕಷ್ಟ. ಹೇಗೆತಾನೇ ಅದಕ್ಕೆ ಉತ್ತರ ಕೊಡಲು ಸಾಧ್ಯ? ಆ ಯೋಚನೆ ಬಿಡುವುದೇ ಒಳ್ಳೆಯದು ಎಂದುಕೊಳ್ಳುತ್ತಿದ್ದರು. ಆದರೆ ಬಿಡುವೆನೆಂದರೂ ಅದೂ ಬಿಡಬೇಕಲ್ಲ! ಬೃಂದಾವನದಲ್ಲಿ ದೋಣಿಯಲ್ಲಿ ಕುಳಿತು ಹೋಗುತ್ತಿರುವಾಗ ಅಲ್ಲಿದ್ದ ಅಂಬಿಗ_ಸುಮಾರು ಅರವತ್ತು ವರುಷದವನು-ಮಕ್ಕಳಾಗಲಿಲ್ಲವೆಂದು ಆರನೆಯ ಮದುವೆಮಾಡಿಕೊಂಡೆನೆಂದು ಹೇಳಿರಲಿಲ್ಲವೇ? ಛೇ! ತಮ್ಮ ಮಗನಿಗೆ ಹಾಗೆ ಮಾಡಲಾಗದು. ವೈದೇಹಿಗೆ ಅದು ದ್ರೋಹವಾಗುತ್ತದೆ ಎಂದುಕೊಳ್ಳುತ್ತಿದ್ದರು. ಆದರೆ ಆ ಯೋಚನೆ ಮಾತ್ರ ದಿನ ಕಳೆದಂತೆ ಕುಡಿಯಿಟ್ಟು ಸಸಿಯಾಗುತ್ತಿತ್ತು. ಈ ತಾಕಲಾಟದಲ್ಲಿ ಅವರೂ ಸಂಕಟಪಡುತ್ತಿದ್ದರು. ವೈದೇಹಿಗೂ ಅವರ ಈ ಸಂಕಟ ಚೆನ್ನಾಗಿ ಗೊತ್ತಿತ್ತು.
ವೈದೇಹಿಗೆ ಯಾವ ಉಪಚಾರಕ್ಕೂ ಕಡಿಮೆಯಿರಲಿಲ್ಲ. ಸಹಾನುಭೂತಿ, ವಿಶ್ವಾಸಗಳೆಲ್ಲ ಬೇಕಾದಷ್ಟಿತ್ತು. ಅದರ ಜತೆಗೇ ಹೃದಯದಲ್ಲಿ ಅಪಾರಭೀತಿ-ಹೆದರಿಕೆ ಮನೆ ಮಾಡಿಕೊಂಡಿತ್ತು. ಏನೋ ಕೆಡಕು ಆಗಿಹೋಗುತ್ತದೆಂದು ಅವಳಿಗೆ ಕಳವಳ. ಮೊದಲಬಾರಿ ಬಸುರಿಯಾದಾಗಿನ ಸಂತೋಷವಾಗಲಿ, ಆನಂದವಾಗಲಿ ಈಗ ಇರಲಿಲ್ಲ. ತಾಯ್ತನದ ಹಿಗ್ಗು ತಗ್ಗಿತ್ತು, ತಾಯ್ತನದ ಹೆದರಿಕೆ ಆರಂಭವಾಗಿತ್ತು ಹೃದಯ ನುಗ್ಗು ನುರಿಯಾಗುತ್ತಿತ್ತು. ಅದನ್ನು ಹೇಳಿಕೊಳ್ಳುವಂತಿಲ್ಲ ಬಿಡುವಂತಿಲ್ಲ. ಮುಖ ಕಳೆಗುಂದುತ್ತಿದ್ದುದನ್ನು ಕಂಡ ಅಕ್ಕ ಪಕ್ಕದ ಮನೆಯವರೇನೋ “ಏನೂ ಹೆದರಿಕೊಳ್ಳಬೇಡಿ-ಎಲ್ಲಾ ಸರಿಯಾಗುತ್ತದೆ” ಎಂದು ಭರವಸೆ ಕೊಡುತ್ತಿದ್ದರು. ಆದರೂ ಆ ಭರವಸೆ ಅವಳಿಗೆ ಸಾಲದು. ಅತ್ತೆ ಕೂಡ ಸಮಾಧಾನ ಹೇಳಿದ ದಿನಗಳುಂಟು, ಆ ಸಮಾಧಾನದ ಹಿಂದಿನ ಅಗಾಧ ಅಸಮಾಧಾನ ವೈದೇಹಿಯ ಹೃದಯತಾಗುತ್ತಿತ್ತು. ಆಗ-ಗುಟ್ಟಾಗಿ ಕಣ್ಣೀರು ಕರೆಯುತ್ತಿದ್ದಳು. ಮತ್ತೆ ಹೇಗೋ ಏನೋ ತನಗೆ ತಾನೇ ಸಮಾಧಾನ ತಂದುಕೊಳ್ಳುತ್ತಿದ್ದಳು.
ಅವಳ ವಿಷಯಕ್ಕೆ ಅವಳ ಗಂಡನಿಗೆ ಎಷ್ಟು ಕಳವಳವೆಂಬುದಕ್ಕೆ ಪ್ರತಿವಾರವೂ ಅವಳನ್ನು ಬಲವಂತದಿಂದ ಆಸ್ಪತ್ರೆಗೆ ಕರೆದೊಯ್ಯುತಿದ್ದುದೇ ಸಾಕ್ಷಿ. ಅದು ಕೂಡ ವೈದೇಹಿಗೆ ಬೇಸರವಾಗಹತ್ತಿತು. ಪ್ರತಿ ವಾರವೂ ತಪ್ಪದೆ ಆಸ್ಪತ್ರೆಗೆ ಹೋಗುತ್ತಿದ್ದುದೆಷ್ಟೋ ಅಷ್ಟೇ, ಲೇಡಿ ಡಾಕ್ಟರು ತಿಂಗಳಿಗೊಮ್ಮೆ ಪರೀಕ್ಷಿಸುವ ಆಟ ಹೂಡಿ ಕಳಿಸಿಬಿಡುತಿದ್ದರು. ಈ ಆಸ್ಪತ್ರೆಯ ಯಾತ್ರೆಯಿಂದ ಆದ ಫಲ-ಗಾಡಿಗೊಂದಿಷ್ಟು ಹಣ, ಗಂಡನ ಮನಸ್ಸಿಗೊಂದಿಷ್ಟು ಸಮಾಧಾನ ಅಷ್ಟೇ. ವೈದೇಹಿಗೂ ಲೇಡಿ ಡಾಕ್ಟರ ಮಾತಿನಿಂದ ಕೊಂಚ ಭರವಸೆ ಬಂದರೂ ಕಳವಳದ ಗಾಳಿಯಲ್ಲಿ ಅದು ತೂರಿಹೋಗಿರುತ್ತಿತ್ತು.
ಈ ಬಾರಿಯ ಬಾಣಂತಿತನಕ್ಕೆ ಮನೆಯಲ್ಲಿಟ್ಟುಕೊಳ್ಳುವುದು ಬೇಡ. ಆಸ್ಪತ್ರೆಗೇ ಕಳಿಸುವುದು ಸರಿಯೆಂದು ವೈದೇಹಿಯ ಅತ್ತೆ ತೀರ್‍ಮಾನಿಸಿದರು. ಮನೆಯಲ್ಲಿ ಏನಾದರೂ ಅಚಾತುರ್‍ಯ ಸಂಭವಿಸಿಬಿಟ್ಟರೆ ಎಂದು ಅವರಿಗೆ ಹೆದರಿಕೆ. ಆದರೆ ವೈದೇಹಿಗೆ ಆಸ್ಪತ್ರೆಗೆ ಹೋಗಲು ಹೆದರಿಕೆ ಅಲ್ಲಿ ಚೆನ್ನಾಗಿ ನೋಡಿಕೊಳ್ಳುವರೋ ಇಲ್ಲವೋ ಎನ್ನುವ ಸಂಶಯ. ಈ ಸಂಶಯವನ್ನು ಅತ್ತಿಗೆ ತಿಳಿಸಲು ಬಹಳ ಸಂಕೋಚ ಹಾಗೂ ಹೀಗೂ ಮಾಡಿ ಗಂಡನಿಗೆ ಹೇಳಿದಳು. ಆದರೆ ಗಂಡನೂ ಅದೇ ಮಾತು ಹೇಳಿದ. ಆಸ್ಪತ್ರೆಯೇ ವಾಸಿ, ಅಲ್ಲಿ ನರ್‍ಸುಗಳಿರುತ್ತಾರೆ. ಡಾಕ್ಟರು ಬಂದು ನೋಡಿಕೊಂಡು ಹೋಗುತ್ತಾರೆ. ಏನೂ ಕಷ್ಟವಾಗುವುದಿಲ್ಲ. ಅವಳನ್ನು ಸ್ಪೆಷಲ್ ವಾರ್‍ಡಿನಲ್ಲಿ ಇಡುವ ಏರ್‍ಪಾಡು ಮಾಡಿದರೆ ತಾವು ನಿತ್ಯವೂ ಅವಳ ಜತೆಯಲ್ಲೇ ಇರಬಹುದೆಂದು ಸಮಾಧಾನ ಹೇಳಿದ ವೈದೇಹಿ ಎದುರುಮಾತಿಲ್ಲದೆ ಒಪ್ಪಿಕೊಂಡಳು.
ಒಂಬತ್ತನೆಯ ತಿಂಗಳು ತುಂಬಿದಾಗ ಒಂದು ದಿನ ಇದ್ದಕ್ಕಿದ್ದಂತೆ ಮೊದಲಿನಂತೆಯೇ ವಾಂತಿ ಆರಂಭವಾಯಿತು. ಈ ಬಾರಿಯೂ ಅದೇ ಅಚಾತುರ್ಯವಾಗಿ ಹೋಗುವುದೆಂದು ಎಲ್ಲರಿಗೂ ಕಳವಳ. ಆದರೂ ಹಾಗಾಗಲಾರದೆಂದು ಮಿಣುಕು ಆಸೆ, ವಾಂತಿಯಾದ ಮೇಲೆ ವೈದೇಹಿಗೆ ಬಹಳ ಸುಸ್ತಾಗಿ ಮಲಗಿಕೊಂಡಳು. ಆಯಾಸದಿಂದ ಚೆನ್ನಾಗಿ ನಿದ್ರೆಯೇನೊ ಬಂತು, ಆದರೆ ಅವಳ ಅತ್ತೆ ಅವಳ ಹಾಸಿಗೆಯ ಪಕ್ಕದಲ್ಲೇ ಕಣ್ಣಿಗೆ ಎಣ್ಣೆ ಹಾಕಿಕೊಂಡು ಕುಳಿತಿದ್ದರು. ವೈದೇಹಿ ಎದ್ದಾಗ ಪಕ್ಕದಲ್ಲಿ ಇನ್ನೂ ಅತ್ತೆ ಕುಳಿತಿದ್ದುದನ್ನು ಕಂಡು ಎದೆಯಲ್ಲಿ ದುಃಖ ಒತ್ತಿ ಬಂತು. ಅತ್ತೆಗೆ ತನ್ನಲ್ಲಿ ಎಷ್ಟು ಮಮತೆಯೆಂದು ಹೃದಯ ಹಿಗ್ಗಿತು. ಈ ಬಾರಿಯಾದರೂ ಅವರ ಆಸೆ ಒಡೆಯದಿರಲೆಂದು ದೇವರಲ್ಲಿ ಬೇಡಿ ಕೊಂಡಳು.
ಅದೇ ದಿನ ರಾತ್ರಿ ವೈದೇಹಿಗೆ ಹೊಟ್ಟೆ ಕಿವುಚಿದಂತಾಯಿತು. ನೋವು ತಿನ್ನಲಾರಂಭ. ಹಿಂದಿನ ದಿನ ತಾನೇ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಬಂದಿದ್ದಳು. ಇನ್ನು ಹದಿನೈದು ದಿನದವರೆಗೂ ಏನೂ ಯೋಚನೆಯಿಲ್ಲವೆಂದು ಡಾಕ್ಟರು ಭರವಸೆ ಕೊಟ್ಟಿದ್ದರು. ಆದರೆ ಈಗ ಇದ್ದಕ್ಕಿದ್ದಂತ ನೋವು ತಿನ್ನಲಾರಂಭವಾಗಿತ್ತು. ಎಲ್ಲರಿಗೂ ಗಾಬರಿ, ಕ್ಷಣಕ್ಷಣಕ್ಕೂ ನೋವು ಹೆಚ್ಚಾಗುತ್ತಿತ್ತು. ವೈದೇಹಿ ಸಂಕಟದಲ್ಲಿ ಒದ್ದಾಡಿಬಿಟ್ಟಳು. ಗಂಡ ಹೋಗಿ ಗಾಡಿ ತಂದು, ವೈದೇಹಿಯನ್ನು ಗಾಡಿಯಲ್ಲಿ ಕೂರಿಸಿಕೊಳ್ಳುವ ಹೊತ್ತಿಗೆ ವೈದೇಹಿಗೆ ಅರ್‍ಧಜ್ಞಾನ ಆಸ್ಪತ್ರೆಯ ಹತ್ತಿರ ಹೋಗುವ ವೇಳೆಗೆ ಅವಳಿಗೆ ಜ್ಞಾನ ತಪ್ಪಿ ಹೋಗಿತ್ತು.
ಒಂದು ಹಿಂಚಾಯಿತು, ಒಂದು ಮುಂಚಾಯಿತು. ಜ್ಞಾನತಪ್ಪಿದ ವೈದೇಹಿಯನ್ನು ನರ್ಸ್‌ಗಳು ಆಪರೇಷನ್ ರೂಮಿಗೆ ಕರೆದೊಯ್ದಿದ್ದರು ವೈದೇಹಿಯ ಅತ್ತೆ, ಗಂಡ ಹೊರಗೆ ಛಳಿ ಗಾಳಿಯಲ್ಲಿ ಕಾದು ಕುಳಿತಿದ್ದರು. ಒಳಗಿನಿಂದ ಏನಾದರೂ ಮಗುವಿನ ಅಳುವಿನ ದನಿ ಕೇಳುವುದೋ ಎಂದು ಮೈಯೆಲ್ಲಾ ಕಿವಿಯಾಗಿ, ಕಾತರವಾಗಿ ಕುಳಿತಿದ್ದರು. ಕೇಳಿದುದು ನರ್ಸುಗಳ ಓಡಾಟದ ಸದ್ದು, ವೈದೇಹಿಯ ನರಳುವಿಕೆಯ ದನಿ ಮಾತ್ರ ಈಬಾರಿಯೂ ಕೂಸಿನ ಅಳು ಕೇಳುವ ಸೌಭಾಗ್ಯ ಅವರದಾಗಲಿಲ್ಲ.
ಈ ಎರಡನೆಯ ಬಾಣಂತನದನಂತರ ವೈದೇಹಿಯ ಜೀವನ ದುರ್‍ಭರವಾಗುತ್ತಾ ಬಂತು. ಮೊದಲಬಾರಿ ಮೈಯಿಳಿದಾಗ ಅತ್ತೆ ಗಂಡ ಇವರು ಅಂತಃಕರಣ ತೋರಿದರು; ವಿಶ್ವಾಸ ತೋರಿದರು. ಮಮತೆಯ ಮದ್ದಿನಿಂದ ಅವಳ ಮನಸ್ಸಿನ ಗಾಯ ಮಾಗುವಂತೆ ಮಾಡಿದರು. ಅವರ ಸಹಾನುಭೂತಿಯ ನೆರಳಿನಲ್ಲಿ ಅವಳಿಗೆ ಆಗ ಅಷ್ಟೊಂದು ಕಷ್ಟವಾಗಲಿಲ್ಲ. ಆದರೆ ಈಗ-ಅಬ್ಬಾ-ಕೂಸು ಹೊಟ್ಟೆಯಲ್ಲಿಯೇ ಸತ್ತಿದ್ದು, ಅದನ್ನು ಹೊರತೆಗೆದರೆಂದಮೇಲೆ ಅತ್ತೆ ವಿರೋಧಪಕ್ಷವಾಗಿದ್ದರು. ಮೊದಲ ಬಾರಿಯ ಸಮಾಧಾನದ ಮಾತಿಗೆ ಬದಲು ಈಗ ಬರಿಯ ಕಟುನುಡಿಗಳು, ಉಪಚಾರಕ್ಕೆ ಬದಲು ತಾತ್ಸಾರ. ಮಾತು ಮಾತಿನಲ್ಲೂ ನಡೆ ನುಡಿ ಯಲ್ಲೂ ಒಂದೊಂದು ಸಣ್ಣ ಪುಟ್ಟ ವಿಷಯದಲ್ಲೂ ಈ ತಾತ್ಸಾರ ತುಂಬಿ ಕಾಣುತ್ತಿತ್ತು. ಎರಡುಬಾರಿ ತಾವು ಕಟ್ಟಿದ ಆಸೆಯ ಅರಮನೆ ನೆಲಸಮವಾದುದು ಇವರಿಗೆ ಸಹಿಸಲಾಗಲಿಲ್ಲ. ಇದರಲ್ಲಿ ವೈದೇಹಿಯದೇನೂ ತಪ್ಪಿಲ್ಲವೆಂದು ಅವರಿಗೆ ತೋರಲಿಲ್ಲ. ಮೊಮ್ಮಗನನ್ನು ಕಾಣುವ ಮಹಾ ಆಸೆಯಲ್ಲಿ ಸೊಸೆಯ ಮೇಲಿನ ಮಮತೆಯೆಲ್ಲಾ ಕರಗಿಹೋಯಿತು. ಅವರ ಈ ತಾತ್ಸಾರದ ಜತೆಗೆ ಗಂಡನ ಮೌನವನ್ನು ಸಹಿಸಬೇಕಾಗಿತ್ತು. ಮಾತೇ ಆಡದೆ ದಿನಗಳೆಷ್ಟೊ ಹಾಗೆಯೇ ಕಳೆದುಹೋಗುತ್ತಿದ್ದುವು. ಗಂಡನ ಮುಖದ ಮೇಲೆ ನಗು ಸುಳಿದುದನ್ನು ಕಂಡು ಯುಗಗಳಾದಂತಾಗಿತ್ತು. ನೋವಿನ ಭಾರದಲ್ಲಿ ಹೃದಯವಷ್ಟೇ ಅಲ್ಲ, ಮನಸ್ಸೂ ಕುಗ್ಗಿತ್ತು. ಅವರಿಗೆ ಸಮಾಧಾನ ನೀಡಲು ಅವಳಿಂದಲಂತೂ ಸಾಗುತ್ತಿರಲಿಲ್ಲ. ಅತ್ತೆ ಯಾವಾಗಲೂ ಗೊಣಗುತ್ತಲೇ ಇರುತ್ತಿದ್ದರು. ವೈದೇಹಿಗೆ ಇದೆಲ್ಲಾ ಸೇರಿ ಯೋಚನೆಯಿಂದ ತಿಂದ ಅನ್ನ ಮೈ ಹತ್ತುತ್ತಿರಲಿಲ್ಲ. ದಿನೇ ದಿನೇ ಕೊರಗು ಅವಳನ್ನು ತಿನ್ನುತ್ತಾ ಬಂತು. ಕೃಶಳಾಗುತ್ತಾ ಬಂದಳು. ಒಳ ಕೊರಗನ್ನು ಯಾರಿಗಾದರೂ ಹೇಳಿಕೊಳ್ಳೋಣವೆಂದರೆ ಯಾರೂ ಇಲ್ಲ. ಅಕ್ಕ ಪಕ್ಕದ ಮನೆಯವರು ಸಮಾಧಾನದ ಮಾತಾಡುವರೆಂದಿದ್ದಳು. ಆದರೆ ಯಾರೂ ತುಟಿಪಿಟಕ್ಕೆನ್ನಲಿಲ್ಲ. ಒಂದು ದಿನವೇನೋ ಒಬ್ಬಾಕೆ ಬಂದು ಬಾಯಿಮಾತಿನ ಸಮಾಧಾನ ಹೇಳಿದ್ದರು. ತನ್ನ ಕೋಣೆಯಿಂದ ಹೊರಗೆ ಹೋದೊಡನೆಯೇ ಅತ್ತೆಯೊಂದಿಗೆ ಅವರು ಆಡಿದ ಮಾತು ವೈದೇಹಿಯ ಕಿವಿಗೆ ಬಿದ್ದಿತ್ತು.
“ಅಯ್ಯೋ! ಸುಮ್ಮನೆ ತವರಿಗೆ ಅಟ್ಟಿ ಬಿಟ್ಟು ಮಗನಿಗೆ ಬೇರೆ ಮದುವೆ ಮಾಡಿಸಿ ಬಿಡಿ ಅಂದ್ರೆ”
“ಹೇಗಮ್ಮ-” ಅತ್ತೆ ಒಂದರೆನಿಮಿಷ ಸಂಪ್ರದಾಯಕ್ಕೋಸ್ಕರ ತೋರಿಕೆಗೋಸ್ಕರ ಸಂಶಯ ತೋರಿದರು; ಅದೂ ವೈದೇಹಿಗೆ ಗೊತ್ತು.
“ಹೇಗಮ್ಮ ಅಂದರೆ ಹೇಗಾಗುತ್ತೆ ಹೇಳಿ-ಹೀಗೆಯೇ ಒಂದಾಗುತ್ತಲೇ ಒಂದು ಆದರೆ ನೀವು ಮೊಮ್ಮಕ್ಕಳನ್ನು ಕಾಣೋದು ಯಾವಾಗ? ಸುಮ್ಮನೆ ನಾ ಹೇಳಿದ ಹಾಗೆ ಮಾಡಿ-”
“ಏನೋಮ್ಮ”
“ಸಿಂಗಲಾಪುರದಲ್ಲಿ ನಮ್ಮ ಗುರುತಿನವರೊಬ್ಬರಿದಾರೆ. ಒಳ್ಳೆ ಜನ, ಮನೆತುಂಬಾ ಮಕ್ಕಳಿರೋವರು; ಹುಡುಗಿಯೂ ಚೆನ್ನಾಗಿದೆ- ಇನ್ನು ೧೪ ವರ್‍ಷ-ಸ್ವಸ್ಥವಾಗಿ ತಂದುಕೊಳ್ಳಿ”
ವೈದೇಹಿಗೆ ನೊಂದ ಗಾಯಕ್ಕೆ ಬರೆಹಾಕಿದಂತಾಯಿತು. ತನ್ನನ್ನು ಓಡಿಸಿ ಬಿಡುವರು-ಅಯ್ಯೋ! ತನ್ನ ಯಜಮಾನರನ್ನು ಬಿಟ್ಟು ತಾನೆಲ್ಲಿ ಹೋಗುವುದು-ಎಲ್ಲಿ ಹೋಗುವುದು ಅವರು ಬೇರೆ ಒಂದು ಮದುವೆ ಮಾಡಿಕೊಂಡರೆ! ಅಬ್ಬಾ! ಅವಳು ಕಂಡ ಕೆಟ್ಟ ಕನಸುಗಳೆಲ್ಲದರ ಭಯ ಸೇರಿಸಿದರೂ ಈಗಾದಷ್ಟು ಹೆದರಿಕೆ ಮತ್ತೆಂದೂ ಆಗಿರಲಿಲ್ಲ. ಅವರಿಗೆ ಮತ್ತೊಂದು ಮದುವೆ-ತನಗೆ-ಗೊತ್ತೇ ಇದೆ. ಸವತಿಯ ಸೇವೆ, ಇಲ್ಲವೆ ತವರುಮನೆಯ ಗೋಳಾಟ, ಹೆಣ್ಣಿನ ಜೀವನ ಇಷ್ಟು ಕಠಿಣ. ಅತ್ತದರಿ, ಇತ್ತ ಪುಲಿಯಾಗುತ್ತದೆಂದು ಅವಳಿಗೆ ಇದುವರೆಗೂ ಗೊತ್ತಿರಲಿಲ್ಲ. ಹೆಣ್ಣಿನ ಬಾಳು ಕಣ್ಣೀರು ಎಂದು ಯಾರೋ ಅಂದಿದ್ದರು. ಬಹಳ ಹಿಂದೆ ತನಗೆ ಮದುವೆಯಾದ ಹೊಸದರಲ್ಲಿ. ಆಗ ತಾನು ಆ ಮಾತನ್ನು ನಗೆಯಲ್ಲಿ ಹಾರಿಸಿಬಿಟ್ಟಿದ್ದಳು. ಆದರೆ ಈಗ ಅದರ ಸತ್ಯ ಮನವರಿಕೆಯಾಗುತ್ತ ಬಂತು. ಮನಸ್ಸಿಗೆ ಒಂದು ನಿಮಿಷವಾಗಲಿ ಸಮಾಧಾನವಿಲ್ಲ. ಮೈಗಂತೂ ಹೇಳುವಂತೆಯೇ ಇಲ್ಲ. ಮಗು ಸತ್ತಿತು. ಬಾಣಂತಿಗೆ ಮೊಲೆಹಾಲು ಬಂದರೆ ಕೆಟ್ಟುದೆಂದು ಅದನ್ನು ನಿಲ್ಲಿಸಲು ಆಸ್ಪತ್ರೆಯಲ್ಲಿ ಔಷಧಿ ಬೇರೆ ಕೊಟ್ಟಿದ್ದರು. ಕೊಡುವಾಗಲೇನೋ ಇದರಿಂದೇನೂ ಕೆಡಕಾಗುವುದಿಲ್ಲವೆಂದು ಹೇಳಿ ಕೊಟ್ಟಿದ್ದರು. ಆದರೆ ವೈದೇಹಿಗೆ ಎದೆ ನವು, ಪಕ್ಕೆ ನೋವು ಆರಂಭವಾಗಿತ್ತು. ಎದೆಗೆ ಹಾರೆ ಗಡಾರಿಗಳನ್ನು ಹಾಕಿ ತಿವಿದಂತೆ, ಪಕ್ಕೆಯ ಎಲುಬು ಎಲುಬನ್ನೂ ಸುತ್ತಿಗೆಯಿಂದ ಚಮ್ಮಟಿಗೆಯಿಂದ ಹೊಡೆದು ಪುಡಿ ಮಾಡಿದಂತೆ ತೋರುತ್ತಿತ್ತು. ತಾಯ್ತನದ ಕೊಲೆ ನಡೆಸಬೇಕಾಗಿತ್ತು. ಸಹಜವಾಗಿಯೇ ಉಕ್ಕಿ ಬರುವ ತಾಯ್ತನವನ್ನು ತಡೆಗಟ್ಟಬೇಕಾಗಿತ್ತು. ಹಿಂದೆ ತಾನು ಚಿಕ್ಕವಳಾಗಿದ್ದಾಗ ತಮ್ಮ ಮನೆಯ ಹಸುವಿನ ಕರು ಸತ್ತಾಗ ಹಸು ಒಂದೇ ಸಮನೆ ಆರ್‍ತಸ್ವರದಿಂದ ರಾತ್ರಿಯೆಲ್ಲಾ ಕೂಗಿಕೊಳ್ಳುತ್ತಿದ್ದುದನ್ನು ಕಂಡಿದ್ದಳು. ಇಷ್ಟು ಆರ್‍ಭಟ ಯಾತಕ್ಕೆ ಮಾಡುತ್ತದೆಂದು ಅವಳಿಗೆ ಆಗ ಗೊತ್ತಾಗಲಿಲ್ಲ. ಆದರೆ ಈಗ ಅದೇ ನೋವನ್ನು ತಾನೂ ಅನುಭವಿಸುತಿದ್ದಳು. ಅದೇ ಮೂಕ ಸಂಕಟ, ಅದೇ ಕೊರಗು. ಅದೇ ನೋವು! ಔಷಧಿ ಅವಳಲ್ಲಿ ಅಳಿದುಳಿದ ಅಲ್ಪ ಸ್ವಲ್ಪ ಶಕ್ತಿಯನ್ನೂ ತಿಂದುಬಿಟ್ಟಿತು. ಈಗ ವೈದೇಹಿ ಬರಿಯ ಎಲುಬಿನ ಗೊಂಬೆಯಾಗಿದ್ದಳು. ಅದಕ್ಕೆ ಕೂಡಿದಂತೆ ಮನಸ್ಸಿನ ಕೊರಗು ಬೇರೆ! ವೈದೇಹಿಯ ಸೂಕ್ಷ್ಮ ಮನಸ್ಸಿಗೆ ಅತ್ತೆಯ ಮಾತಿನ ಚಾಟಿಯ ಪೆಟ್ಟುಗಳನ್ನು ಸಹಿಸಲಾಗುತ್ತಿರಲಿಲ್ಲ. ಒಂದೊಂದು ಪೆಟ್ಟು ಬಿದ್ದಾಗಲೂ ಕಣ್ಣು ಕೆಂಡವಾಗುತ್ತಿತ್ತು ದುಃಖದಿಂದ-ಆದರೆ ದುಃಖ ಯಾರೊಂದಿಗೆ ತೋಡಿಕೊಳ್ಳುವುದು. ತನ್ನನ್ನು ಕಾಪಾಡುವ ಅತ್ತೆಯೇ ತನ್ನ ಮೇಲೆ ತಿರುಗಿಬಿದ್ದಿದ್ದರು. ಬಾಣಂತಿ ಮಗುವಿಲ್ಲದಿದ್ದರೂ ತಾನು ಬಾಣಂತಿಯಲ್ಲವೇ, ಬಾಣಂತಿಗೆ ಒಂದಾದರೂ – ಉಪಚಾರವಿಲ್ಲ. ನೀರುನಿಡಿ, ಊಟ ಉಪಚಾರ ಎಲ್ಲಾ ಕನಸಾಗಿ ಹೋಯಿತು. ಈಗ ಸಿಗುತ್ತಿದ್ದುದೆಂದರೆ ಕಟುಮಾತುಗಳು, ಬೈಗಳಿಗೇನೂ ಕಡಿಮೆಯಿರಲಿಲ್ಲ. ಅತ್ತೆ ಇದುವರೆಗೂ ಇಟ್ಟಿದ್ದ ಮಮತೆ ಈಗ ದ್ವೇಷವಾಗಿ ಹೋಗಿತ್ತು. ಒಮ್ಮೆ ಪ್ರೇಮಿಸುವ ವಸ್ತುವನ್ನು ನಾವು ದ್ವೇಷಿಸಲಾರಂಭಿಸಿದರೆ ಆ ದ್ವೇಷ- ಪ್ರೇಮಕ್ಕಿಂತಲೂ ಹೆಚ್ಚು! ಹಾಗೆಯೇ ಆಗಿತ್ತು ಅತ್ತೆಯ ವಿಷಯ-ಮಾತು ಮಾತಿಗೂ “ಬಂಜೆ ಬಂಜೆ” ಎಂದು ಬೈಯುತಿದ್ದರು. ವೈದೇಹಿಗೆ ಅಳಲು ಕೂಡ ಸಾಕಷ್ಟು ತ್ರಾಣವಿರಲಿಲ್ಲ.
ದಿನ ಬೆಳಗಾದರೆ ಮಗನಿಗೆ ಬೇರೆ ಮದುವೆ ಮಾಡುವ ಮಾತು ಹೊರತು ಬೇರೇನೂ ಇಲ್ಲ. “ಕೆಟ್ಟ ಕುಲದ ಹೆಣ್ಣು, ಕೂಸುಗಳನ್ನೆಲ್ಲಾ ತಿಂದುಕೊಳ್ಳುವ ಶಾಕಿನಿ, ಮನೆ ಹಾಳುಮಾಡಲು ಬಂದ ಡಾಕಿನಿ, ಅವಳಿಗೆಲ್ಲಿ ಮಗುವಾಗುತ್ತದೆ. ಅವಳು ನಮ್ಮ ಕುಲ ಹಾಳುಮಾಡಲೆಂದೇ ನಮ್ಮ ಮನೆ ಮೆಟ್ಟಿದುದು” ಎಂದು ಕಂಡ ಕಂಡ ಜನರೊಂದಿಗೆಲ್ಲಾ ಅತ್ತೆ ತನ್ನನ್ನು ಬೈಯುತ್ತಿದ್ದುದು ವೈದೇಹಿಗೆ ಗೊತ್ತು. ಈಗ ವೈದೇಹಿಯ ಹತ್ತಿರಕ್ಕೆ ಯಾವ ಮಗುವೂ ಬರುತ್ತಿರಲಿಲ್ಲ. ಮೊದಲು ಅವಳ ಸುತ್ತ ಮುತ್ತಿಕೊಂಡು ಕತೆ ಹಾಡು ಹೇಳಿಸಿಕೊಳ್ಳುತ್ತಿದ್ದ ಮಕ್ಕಳು ಅವಳನ್ನು ಕಾಣಲು ಹೆದರುತ್ತಿದ್ದರು. ಅವಳ ದೃಷ್ಟಿ ಬಿದ್ದರೇ ಸಾಕು ಮಕ್ಕಳಿಗೆ ಚೀಟು ಕಟ್ಟಿಸಬೇಕೆಂದು ಸುತ್ತಮುತ್ತಿನ ಹೆಂಗಸರ ಭಾವನೆ. ಅಂತಹ ವಿಷಮ ವಾತಾವರಣದಲ್ಲಿ ವೈದೇಹಿಗೆ ಸಮಾಧಾನವಾದರೂ ಎಲ್ಲಿ ಸಿಗಬೇಕು? ಹೇಗೆ ಸಿಗಬೇಕು!
ತಾಯ್ತನದ ಆಸೆ ವೈದೇಹಿಯ ಹೃದಯದಲ್ಲಿ ಹಿಂಗಿಹೋಗಲಿಲ್ಲ. ಅದು ದಿನ ಕಳೆದಂತೆ ಇನ್ನೂ ಪ್ರಖರವಾಯಿತು. ತಾನೊಮ್ಮೆ ತಾಯಿಯಾದರೆ ತನಗೆ ಈ ಕಷ್ಟಗಳೆಲ್ಲಾ ತಪ್ಪಿ ಹೋಗುತ್ತವೆ. ತಾನು ಸುಖವಾಗಿರಬಹುದು. ಸಂಸಾರ ಒಪ್ಪವಾಗುತ್ತದೆ. ಈಗಿನ ವೈಷಮ್ಯ ನೋವು, ಕೊರಗುಗಳಿರುವುದಿಲ್ಲವೆಂದು ಅವಳ ಕಲ್ಪನೆ. ಆದರೆ ತಾಯ್ತನ ತನ್ನ
ಹಣೆಯಲ್ಲಿ ಬರೆದಿಲ್ಲವೋ ಏನೋ? ತಾನು ಹಿಂದಿನ ಜನ್ಮದಲ್ಲಿ ಯಾರ ಮಕ್ಕಳಿಗೆ ಮೃತ್ಯುವಾಗಿದ್ದೆನೋ ಈಗ ತನ್ನ ಮಕ್ಕಳು ತನಗೆ ದಕ್ಕುತ್ತಿಲ್ಲ ಎಂದು ತನ್ನ ಅದೃಷ್ಟಕ್ಕಾಗಿ ಅತ್ತುಕೊಂಡಳು. ಆದರೆ ಅತ್ತರೆ ಸಮಾಧಾನಕ್ಕೆ ಬದಲು ನೋವು ಹೆಚ್ಚುತ್ತಿತ್ತು. ಅತ್ತೆಯೆಲ್ಲಾದರೂ ತಾನು ಅಳುವುದನ್ನು ಕಂಡುಬಿಡುವರೋ ಎಂಬ ದಿಗಿಲು ಬೇರೆ. ಒಂದು ದಿನ ವೈದೇಹಿ ಅಳುತ್ತಿದ್ದಾಗ ಅತ್ತೆ ನೋಡಿ “ಕಣ್ಣೀರಿನಲ್ಲಿ ನಮ್ಮ ಮನೆ ತೊಳೆದು ಹಾಕಿಬಿಡು” ಎಂದು ಅಂದಿದ್ದರು. ಅತ್ತೆ ಏನೆಂದರೂ ಗಂಡ ಸುಮ್ಮನಿರುತ್ತಿದ್ದ. ವೈದೇಹಿಯ ಪರವಾಗಿ ಒಂದು ಮಾತನ್ನೂ ಆಡುತಿರಲಿಲ್ಲ. ಮೌನವಾಗಿಯೇ ಅವಳ ಕಡೆಗೆ ತಾತ್ಸಾರ ತೋರಿ ಹೊರಟು ಹೋಗುತ್ತಿದ್ದ. ಮೂಲೆಯಲ್ಲಿದ್ದ ಪೊರಕೆಯೇ ನಿನಗಿಂತ ವಾಸಿ. ಅದು ಕೊಂಚವಾದರೂ ಉಪಯೋಗಕ್ಕೆ ಬರುತ್ತದೆ ಎನ್ನುವಂತಿತ್ತು ಅವನ ದೃಷ್ಟಿ! ಅದೊಂದು ನೋಟವೇ ಸಾಕು ವೈದೇಹಿಯ ಎಲ್ಲಾ ಆಸೆಗಳೂ ತರಗಾಗಲು!
ಕೊನೆಗೂ ವೈದೇಹಿ ಮೂರನೆಯ ಬಾರಿ ಬಸುರಾದಳು. ಅವಳಿಗೆ ಆಸೆ ನಿರಾಸೆ! ನಿರಾಸೆಯ ನೆಲಗಟ್ಟಿನ ಮೇಲೆ ಆಸೆಯ ಗುಡಿಸಲು ಕಟ್ಟಿತ್ತು ಅವಳ ಹೃದಯ. ಎಲ್ಲಾ ಆಸೆ ಆಕಾಂಕ್ಷೆಗಳೂ ಮುರಿದು ಹೋಗುವ ಕೊನೆಯ ವಿಷಮ ನಿಮಿಷದಲ್ಲ ಆಸೆ ಇದ್ದಕ್ಕಿದ್ದಂತೆ ಚಿಗುರೊಡೆದಿತ್ತು. ಈ ಬಾರಿ ಬಸುರಾದರೆ ಎಲ್ಲವೂ ಸರಿಹೋಗಬಹುದು ಬಂಜೆತನ ಕೊನೆಯಾಗಿ ತಾಯ್ತನ ಬರಬಹುದೆನ್ನುವ ಆಸೆ. ಆದರೆ ಬಸುರೆಂದರೆ ಭಯ! ಮೊದಲೆರಡು ಬಾರಿಯ ಅನುಭವ ಮನಸ್ಸಿನಲ್ಲಿ ಅಚ್ಚಳಿಯದಂತೆ ಮೂಡಿತ್ತು. ಬರೆಯ ಕರೆ ಇನ್ನೂ ಸುಡುತ್ತಿತ್ತು. ಅಂತಹುದರಲ್ಲಿ ಈಗ-ಆದರೂ ವೈದೇಹಿಗೆ ತಾಯ್ತನದ ಹುಚ್ಚು ಆಸೆ! ಹೀಗಾಗಿ ಆಸೆ ನಿರಾಸೆಗಳ ಎದುರುಗಾಳಿಗೆ ಸಿಕ್ಕಿ ಅವಳ ಹೃದಯದ ಪಟ ತೂರಾಡುತ್ತಿತ್ತು. ಈ ಬಾರಿ ಸೊಸೆ ಬಸುರಾದುದರಿಂದ ವೈದೇಹಿಯ ಅತ್ತೆಯೇನೂ ಸಂತೋಷ ಪಡಲಿಲ್ಲ. “ಹುಳುಕುಮರದಲ್ಲಿ ಹುಳುಬಿದ್ದ ಹಣ್” ಎಂದು ಅಂದರು. ಆ ಮಾತಿನಿಂದ ಸೊಸೆಯ ಮನಸ್ಸಿಗೆ ಎಷ್ಟು ನೋವಾಗಬಹುದೆಂಬುದನ್ನು ಅವರು ಯೋಚನೆ ಮಾಡಲೇ ಇಲ್ಲ. ವೈದೇಹಿ ಈಗ ಅವರ ಪಾಲಿಗೆ ಹೆಣ್ಣಲ್ಲ. ಅದೂ ಒಂದು ಪ್ರಾಣಿ ಎನ್ನುವ ತುಚ್ಛಭಾವನೆ. ತಾವು ಅವಳಿಗೆ ಸಹಾನುಭೂತಿ ನೀಡಬೇಕು. ತಾವೀಗ ತೋರುತ್ತಿರುವ ತಾತ್ಸಾರ ತಪ್ಪು ಎಂದು ಅವರಿಗೆ ತೋರಲೇ ಇಲ್ಲ. ಮೊಮ್ಮಗನನ್ನು ಕಾಣುವ ಆಸೆ, ಆತುರ ಅವರನ್ನು ಉಳಿದುದೆಲ್ಲಕ್ಕು ಕುರುಡಾಗಿಸಿತ್ತು. ವೈದೇಹಿಯ ಮೂಲಕ ಮೊಮ್ಮಗ ಆಗಲಾರನೆಂದು ಅವರಿಗೆ ಈಗ ದೃಢವಾಗಿ ಹೋಗಿತ್ತು. ಅಂದಮೇಲೆ ಅವಳಿಂದ ತಮಗಿನ್ನೇನು? ಅದರ ಪರಿಣಾಮ ವೈದೇಹಿಯ ನೊಂದ ಮನಸ್ಸಿನಮೇಲೆ ಏನಾಗಬಹುದೆಂಬುದನ್ನು ಅವರು ಸಾಮಾನ್ಯವಾಗಿ ಯೋಚಿಸುತ್ತಿರಲಿಲ್ಲ. ಯೋಚಿಸುವಷ್ಟು ಸಮಾಧಾನ ಅವರಿಗೆ ಇರುತ್ತಲೂ ಇರಲಿಲ್ಲ. ಇಷ್ಟಾದರೂ ಒಂದೊಂದು ಬಾರಿ ಆಸೆ ತೋರುತ್ತಿತ್ತು. ಮೊದಲೆರಡು ಕೆಟ್ಟರೂ ಮೂರನೆಯದೇಕೆ ಸರಿಹೋಗಬಾರದು ಎಂದೂ ಒಮ್ಮೊಮ್ಮೆ ಯೋಚನೆ ಬರುತ್ತಿತ್ತು, ಮೂರನೆಯದು ಸರಿಹೋಗಬಹುದು ಎಂದು ಅನಿಸಿದಾಗ ಕಾಠಿಣ್ಯ ಇದ್ದಕ್ಕಿದ್ದಂತೆ ಮಾಯವಾಗುತ್ತಿತ್ತು. ವೈದೇಹಿಗೆ ಆಗ ಅವರು ತಾಯಿಯಯಾಗುತ್ತಿದ್ದರು. ಆದರೆ ಆ ಭಾವನೆ ಅಪರೂಪ. ಬಂದರೂ ಕ್ಷಣಕಾಲ ಮಾತ್ರ. ಮತ್ತೆ ಅವರ ಕಟುತ್ವ ಮೇಲುಗೈಯಾಗುತ್ತಿತ್ತು. ಮೃದುತೆಯೆಲ್ಲ ಮಂಜಿನ ಹನಿಯಂತೆ ಮಾಯವಾಗುತ್ತಿತ್ತು.
ದಿನ ಕಳೆದಂತೆ ವೈದೇಹಿಯ ಮನಸ್ಸಿನ ನೋವು ಹೆಚ್ಚುತ್ತಾ ಬಂತು. ಈ ಬಾರಿ ಏನಾದರೂ ಅಚಾತುರ್‍ಯವಾಗಿ ಬಿಟ್ಟರೆ ಖಂಡಿತ ತನ್ನ ಬಾಳು ಮಣ್ಣುಗೂಡಿದಂತೆಯೇ ಎಂದು ಅವಳಿಗೆ ಸ್ಥಿರವಾಗಿ ಹೋಗಿತ್ತು. ಅತ್ತೆಯ ಮಾತು ಮಾತಿನಲ್ಲಿ ಅವಳಿಗೆ ಅದು ತೋರುತ್ತಿತ್ತು. ಒಂದೊಂದುಬಾರಿ ಅತ್ತೆ ಮಮತೆ ತೋರಿದರೂ ಅದು ಅವರ ಕಾಠಿಣ್ಯದಲ್ಲಿ ಅಳಿಸಿಹೋಗುತಿತ್ತು. ತನ್ನ ಗಂಡ ಕೂಡ ಆ ಮಾತಿಗೆ ಒಪ್ಪಿರುವುದು ಅವಳಿಗೆ ಗೊತ್ತು. ಆವತ್ತು-ಎಂದರೆ ಎರಡು ತಿಂಗಳ ಹಿಂದೆ, ವೈದೇಹಿಗೆ ಏಳು ತಿಂಗಳು ತುಂಬಿದ್ದಾಗ-ಗಂಡ ಅತ್ತೆಯೊಂದಿಗೆ ಮಾತಾಡುವುದು ಅವಳ ಕಿವಿಗೆ ಬಿದ್ದಿತ್ತು – “ಅವಳಿಗೆ ಏಳು ತಿಂಗಳಾಯಿತಲ್ಲವೇ ಅಮ್ಮ?” ನೊಂದ ದನಿಯಲ್ಲಿ ಗಂಡ ಕೇಳಿದ.
“ಹೂಂ, ಏಳಾಯಿತು. ಆದರೇನು?” ಗಡುಸಾಗಿಯೇ ಅಂದರು ಅತ್ತೆ.
“ಏನೋ ದೇವರ ದಯದಿಂದ ಈಬಾರಿಯಾದರೂ ಸರಿಯಾದರೆ…”
“ನನಗೇನೋ ನಂಬಿಕೆಯಲ್ಲಪ್ಪ-ಆದರೆ ನೋಡು-ನಾನಾಗಲೇ ಎಲ್ಲಾ ನೋಡಿದೀನಿ. ಸಿಂಗಲಾಪುರದ ಶಿರಸ್ತೇದಾರ್ ರಾಮಸ್ವಾಮಿಯ ಮಗಳು ಸರೋಜ-ಒಳ್ಳೆಯ ಹುಡುಗಿ-ಇನ್ನೂ ೧೪ ವರ್‍ಷ-”
“ಈಗ ಆ ಮಾತು ಬೇಡಮ್ಮ”
ತನ್ನ ಗಂಡನ ಈ ಮಾತು ಅರೆಮನಸ್ಸಿನದೆಂದು ವೈದೇಹಿಗೆ ಹೇಳ ಬೇಕಾಗಿರಲಿಲ್ಲ. ಅತ್ತೆ ಇನ್ನೂ ಕೊಂಚ ಬಲವಂತಮಾಡಿದರೆ ಒಪ್ಪಿಗೆ ಒಡನೆಯೇ ಎಂದು ಅವಳಿಗೆ ಗೊತ್ತು. ಮುಂದಿನಮಾತು ಕೇಳದಿರಲೆಂದು ಕಿವಿ ಮುಚ್ಚಿಕೊಂಡಿದ್ದಳು.
ನೆನಪಿನಲ್ಲಿ ಈ ಮಾತೆಲ್ಲಾ ಹಾದುಹೋದಂತೆ ವೈದೇಹಿಯ ಕಣ್ಣಿನಲ್ಲಿ ಒಂದೇ ಸಮನಾಗಿ ನೀರು ಹರಿಯುತ್ತಿತ್ತು. ನರ್ಸ್ ಮೆಲ್ಲನೆ ಕಣ್ಣನ್ನೊರಸುತ್ತಾ “ಯಾಕಮ್ಮ?” ಎಂದಳು.
ಅವಳ ಈ ಮೃದುಮಾತಿನಿಂದ ವೈದೇಹಿಯ ಹೃದಯದ ನೋವು ಮತ್ತೂ ಹೆಚ್ಚಿತು. ಬಾಳಿನ ದುಃಖವೆಲ್ಲಾ ಒಂದೇಸಾರಿಗೆ ಉಮ್ಮಳಿಸಿ ಬಂತು. ಬಿಕ್ಕಿ ಬಿಕ್ಕಿ ಅತ್ತು ಮುಖ ಮುಚ್ಚಿಕೊಂಡಳು. ನೆನಪಿನ ಅನುಭವದಿಂದ ಮನಸ್ಸಿಗೆ ಬಹಳ ಆಯಾಸವಾಗಿತ್ತು. ನೋವು ತಿಂದು ತಿಂದು ಮೈ ನಿಶ್ಯಕ್ತಿಯಿಂದ ಬಳಲಿತ್ತು, ತಲೆ ಗಿರನೆ ಸುತ್ತುವಂತಾಗಿ ಇದ್ದಕಿದ್ದಂತೆ ನೋವು ಹೆಚ್ಚಾಯಿತು.
“ಅಯ್ಯೋ!” ನೋವಿನಲ್ಲಿ ಮತ್ತೊಮ್ಮೆ ಜೋರಾಗಿ ಕಿರಿಚಿ ಕೊಂಡಳು.
ನರ್‍ಸ್ ಮೆಲ್ಲನೆ ಬಂದು ಅವಳ ಕೈ ಹಿಡಿದುಕೊಂಡಳು. ಮನಸ್ಸಿನ ಚಿಂತೆಯಿಂದ ವೈದೇಹಿಯ ಮೈ ಕಾದುಹೋಗಿತ್ತು. ಹೊಟ್ಟೆಯ ಮೇಲೆ ಭಾರವಾದ ಕಲ್ಲು ಹಾಕಿದಂತಾಗಿತ್ತು. ಏನು ಮಾಡಿದರೂ ಅವಳಿಗೆ ಸಮಾಧಾನವಾಗಲೊಲ್ಲದು. ನರ್‍ಸ್ ಮತ್ತೇನೂ ಮಾಡಲು ತೋರದೆ ಡಾಕ್ಟರಿಗೆ ಹೇಳಿಕಳಿಸಿದಳು.
ವೈದೇಹಿಯ ಮೈ ಕಾವಷ್ಟೇ ಅಲ್ಲದೆ ಮನಸ್ಸಿನ ಕಾವೂ ಮಿತಿ ಮೀರಿತ್ತು. ಈ ಅತಿಕಾವಿನಲ್ಲಿ ಪ್ರತಿಯೊಂದು ಭೂತಾಕಾರ ತಾಳುತಿತ್ತು. ಕಣ್ಣಿನ ಮುಂದಿದ್ದುದೆಲ್ಲಾ ಮಸಕಾಗಿ ಕಲ್ಪನೆಯದೆಲ್ಲಾ ಸ್ಪುಟವಾಗಿ ಕಾಣಹತ್ತಿತು. ಈ ಬಾರಿ ತಾನು ತಾಯಿಯಾಗದಿದ್ದರೆ, ಕೂಸು ಉಳಿಯದಿದ್ದರೆ, ತನಗೆ ಬೀದಿಯೇ ಗತಿ. ತನ್ನನ್ನು ಅತ್ತೆ ಇರಗೊಡುವುದಿಲ್ಲ, ಗಂಡ ಬೇರೆ ಮದುವೆಯನ್ನು ಖಂಡಿತವಾಗಿ ಮಾಡಿಕೊಳ್ಳುವನೆಂಬುದು ಮನಸ್ಸಿನಲ್ಲಿ ಕೊರೆಯುತ್ತಿತ್ತು. ಅರೆಮರೆವಿನಲ್ಲಿ ಧಿಗ್ಗನೆ ಮನಸ್ಸಿನ ಹಿನ್ನೆಲೆಯಿಂದ ಅತ್ತೆಯ ಆಕೃತಿ-ಒಂದಕ್ಕೆ ನೂರರಷ್ಟು ಆಕಾರ ತಾಳಿ ಗುಡುಗಿತು.
“ನೀನು ಸಾಯಿ-ನೀನು ಸಾಯಿ”
“ಅಯ್ಯೋ! ಅಯ್ಯೋ!” ಎಂದಳು ವೈದೇಹಿ.
“ನೀನು ಸಾಯಿ! ನನ್ನ ಮಗನಿಗೆ ಬೇರೆ ಮದುವೆ!”
ಅತ್ತೆ ಗಹಗಹಿಸಿ ನಕ್ಕಂತಾಯಿತು. ಆ ನಗೆಯ ಸಿಡಿಲು ತಲೆ ತಿರುಗುವಂತಿತ್ತು.
“ಅಯ್ಯೋ! ಅಯ್ಯೋ!”
ವೈದೇಹಿಗೆ ಹೆದರಿಕೆಯಲ್ಲಿ, ಪ್ರಾಣಭೀತಿಯಲ್ಲಿ ಮಾತೇ ಹೊರಡದು; ಕೂಗಿಕೊಳ್ಳಬೇಕೆಂದಿದ್ದುದು ಕೊರಳಿನಲ್ಲಿ ಸಿಕ್ಕಿಹಾಕಿಕೊಂಡಿತು.
ಡಾಕ್ಟರು ಅವಳಿಗೆ ಕ್ಲೋರೋಫಾರಂ ಕೊಟ್ಟರು. ತೋರಿಕೆಗೆ ವೈದೇಹಿಗೆ ಜ್ಞಾನ ತಪ್ಪಿತು. ಆದರೆ ಒಳಗೆ ಕಲ್ಪನೆ, ಮನಸ್ಸಿನ ಹಿನ್ನೆಲೆ ನಿದ್ದೆ ಮಾಡುತ್ತಿರಲಿಲ್ಲ. ಬುದ್ದಿಯ ಅಂತರಾಳ ಚುರುಕಿನಿಂದ ಕೆಲಸ ಮಾಡುತ್ತಿತ್ತು. ಆ ಅರಿವಿಲ್ಲದ ಅರಿವಿನಲ್ಲಿ ಒಂದು ಭಯಂಕರ ಸ್ವಪ್ನ ಅತ್ತೆ ರುದ್ರ ರೂಪತಾಳಿ, ಮಹಾ ಕಾಳಿಯಾಗಿ ತನ್ನನ್ನು ಮನೆಯಿಂದ ಹೊರದೂಡುತ್ತಿರುವರು. ತಾನು ಹೊಸಲಿನಲ್ಲಿ ನಿಂತು ಎಷ್ಟೇ ಬೇಡಿ ಕೊಂಡರೂ ಕೊಂಚವಾದರೂ ಕರುಣೆ ತೋರಿಸುವುದಿಲ್ಲ. ಪಕ್ಕದಲ್ಲೇ ತನ್ನ ಗಂಡ, ಸಮ್ಮತಿ ಸೂಚಿಸುವ ಅವನಿಂದಲೂ ತನ್ನ ಪರವಾಗಿ ಒಂದೇ ಒಂದು ತೊದಲು ಮಾತೂ ಇಲ್ಲ. ಆಗ ಅತ್ತೆ ತನ್ನನ್ನು ನೂಕಲು ಕಾಲಿನಿಂದ ಹೊಟ್ಟೆಯಮೇಲೊದ್ದಂತೆ ತಾನುರುಳಿದಂತೆ-ಅಬ್ಬಾ! ಅಸಾಧ್ಯ ನೋವು! ಮರು ನಿಮಿಷ ಕತ್ತಲು! ಗಂಡು ಮಗುವಿನ ಅಳುವಿನ ದನಿ ಕೋಣೆಯಲ್ಲಿ ಪ್ರತಿಧ್ವನಿತವಾಯಿತು. ಡಾಕ್ಟರು ಬಹು ಕಷ್ಟದಿಂದ ಮಗುವನ್ನು ಹೊರ ತೆಗೆದಿದ್ದರು. ಆದರೆ ಅದೇ ಕ್ಷಣದಲ್ಲಿ ತಾಯಿ ಜೀವ ನಂದಿಹೋದುದು ಅವರ ಗಮನಕ್ಕೆ ಬರಲಿಲ್ಲ. ನರ್‍ಸ್ ಕೈಗೆ ಮಗುವನ್ನು ಕೊಟ್ಟ ಮೇಲೆ ಡಾಕ್ಟರು ವೈದೇಹಿಯನ್ನು ಮುಟ್ಟಿ ನೋಡಿದರು. ವೈದೇಹಿಗೆ ತನ್ನ ಮಗುವನ್ನು ನೋಡುವ ಭಾಗ್ಯವಿರಲಿಲ್ಲ. ಡಾಕ್ಟರು ಮೆಲ್ಲನೆ ಅವಳ ಹೆಣದಮೇಲೆ ಬಿಳಿಯ ಬಟ್ಟೆ ಹೊದಿಸಿದರು.
ವೈದೇಹಿಯೋನೋ ಕೊನೆಗೂ ತಾಯಿಯಾದಳು. ಆದರೆ ಅವಳು ಸತ್ತುದು ಮಾತ್ರ ಬಂಜೆಯಾಗಿಯೇ!
*****