ಆ ಘಟನೆ ನನ್ನನ್ನು ಕಾಡುತ್ತಲೇ ಇದೆ. ಘಟನೆಯೊಂದು ನಿಮಿತ್ತ ಮಾತ್ರವಾಗಿ ಎಷ್ಟೆಲ್ಲ ಪ್ರಶ್ನೆಗಳನ್ನು ಎತ್ತಬಹುದೆಂದು ಗೊತ್ತಾಗುತ್ತಿದೆ. ನಡೆದದ್ದು ಇಷ್ಟು: ಮಾರ್ಚ್ ಮೂರರಂದು ಚಳ್ಳಕೆರೆ ತಾಲ್ಲೂಕಿನ ಪರಶುರಾಮಪುರಕ್ಕೆ ಹೊರಟಿದ್ದೆ. ಅಲ್ಲಿ ಬೆಳಗ್ಗೆ ೧೦-೩೦ ಕ್ಕೆ ಸಾಹಿತ್ಯ ಸಮ್ಮೇಳನ, ಗಡಿಭಾಗದ ಸಮ್ಮೇಳನವಾದ್ದರಿಂದ ನನಗೆ ವಿಶೇಷ ಆಸಕ್ತಿಯಿತ್ತು. ನಾನು ಪ್ರಯಾಣಿಸುತ್ತಿದ್ದ ಕಾರು ತುಮಕೂರನ್ನು ಬಿಟ್ಟು ಏಳೆಂಟು ಕಿಲೋಮೀಟರ್ ಹೋಗಿತ್ತೆಂದು ಕಾಣುತ್ತದೆ. ಚತುಷ್ಪಥ ರಸ್ತೆಯಲ್ಲಿ ಎದುರುಗಡೆಯಿಂದ ಬರುವ ಮಾರ್ಗದಲ್ಲಿ ಒಂದು ಮಾರುತಿ ವ್ಯಾನ್ ಅಪಘಾತಕ್ಕೀಡಾದಂತೆ ಕಾಣಿಸಿತ್ತು. ನಮ್ಮ ಕಾರು ಒಂದು ಕಿ.ಮೀ. ಮುಂದೆ ಹೋಗಿ ತಾದರೂ ಡೈವರ್‌ಗೆ ಹಿಂದಕ್ಕೆ ಹೋಗಲು ಹೇಳಿದೆ.
ನಿಜ; ಆಕ್ಸಿಡೆಂಟಾಗಿತ್ತು. ಡ್ರೈವರ್‌ಗೆ ಗಾಯವಾಗಿ ರಕ್ತ ಸೋರುತ್ತಿದೆ. ಆತ ಕೆಳಗೆ ಇಳಿದು ಒದ್ದಾಡುತ್ತ ನಿಂತಿದ್ದಾನೆ. ಒಬ್ಬ ಗಂಡಸು ಡ್ರೈವರ್ ಪಕ್ಕದ ಸೀಟಿನಲ್ಲಿ ರಕ್ತ ಚಿಮ್ಮುವ ಹಣೆ ಹಿಡಿದು ಕೂತಿದ್ದಾರೆ. ವಯಸ್ಸಾದ ಹೆಂಗಸೊಬ್ಬರು ಸುಸ್ತಾಗಿ ನೆಲದ ಮೇಲೆ ನರಳುತ್ತ ಕೂತಿದ್ದಾರೆ. ಒಬ್ಬ ಯುವತಿ ಬಹುಶಃ ಮುಂದಿನ ಸೀಟಿನಲ್ಲಿದ್ದವರ ಪತ್ನಿ ಕಂಕುಳಲ್ಲಿ ಮಗುವನ್ನು ಎತ್ತಿಕೊಂಡು ಕಿರುಚುತ್ತಿದ್ದಾರೆ. ಆದರೂ ಆ ಕಡೆಯ ವಾಹನಗಳು ತಮ್ಮಷ್ಟಕ್ಕೆ ತಾವು ದೌಡಾಯಿಸುತ್ತಿವೆ. ನಮ್ಮ ಕಾರು ಹಿಂದು ಹಿಂದಕ್ಕೆ ಚಲಿಸುತ್ತ ಅಪಘಾತದ ಜಾಗಕ್ಕೆ ಬಂತು. ನಾನು ಕಾರಿನಿಂದ ಇಳಿದದ್ದೇ ತಡ, ರೋಡ್ ಡಿವೈಡರ್‌ನ ಆ ಕಡೆಗಿದ್ದ ಯುವತಿ ನನ್ನತ್ತ ನೋಡಿ ಅಕ್ಷರಶಃ ಬೇಡಿಕೊಂಡರು: ‘ಏನಾದ್ರೂ ಮಾಡಿ; ಕಾರು ಲಾರೀಗ್ ಹೊಡೀತು. ನಮ್ ಅತ್ತೇನ ಆಸ್ಪತ್ರೆಗೆ ಕರ್‍ಕೊಂಡು ಹೋಗ್ತಾ ಇದ್ವಿ. ನಮಿಗ್ ಸಹಾಯ ಮಾಡಿ. ಬೇಗ ನಿಮ್ ಕಾರಲ್ ನಮ್ಮನ್ ಕರ್‍ಕೊಂಡೋಗಿ’-ಹೀಗೆ ಒಂದೇ ಸಮ ಹೇಳಿದ ಮಾತನ್ನೇ ಹತ್ತಾರು ಬಾರಿ ಹೇಳತೊಡಗಿದರು.
ಆಕ್ರಂದನ ಆ ಕಡೆ; ನಾವು ಈ ಕಡೆ; ನಡುವೆ ರೋಡ್ ಡಿವೈಡರ್! ನಾನು ಡ್ರೈವರ್‌ಗೆ ಹೇಳಿದೆ: ‘ಡಿವೈಡರ್ ದಾಟಿ ಅವರಿಗೆ ಸಹಾಯ ಮಾಡಿ’ ಆಕೆಗೆ ಹೇಳಿದೆ: ‘ಸ್ವಲ್ಪ ಸಮಾಧಾನ ಮಾಡ್ಕೊಳ್ಳಿ. ಯಾರ್‍ಗೂ ಏನೂ ಆಗೊಲ್ಲ.’ ಆದರೆ ಆಕೆಗೆ ನನ್ನ ಮಾತು ಕೇಳಿಸುವ ಸ್ಥಿತಿಯಲ್ಲಿರಲಿಲ್ಲ. ಆಕೆಯದು ಅದೇ ಮಾತುಗಳು ! ಕಂಕುಳಲ್ಲಿ ಕೂತಿದ್ದ ಕೂಸು ಕಂಗಾಲಾಗಿ ಪಿಳಿಪಿಳಿಯೆನ್ನುತ್ತಿತ್ತು. ಅಮ್ಮನ ಆಕ್ರಂದನದ ಎದುರು ಆ ಮಗುವಿನ ಅಳು ಹೆದರಿ ಹೋಗಿತ್ತು. ನಿಜವಾದ ಅರ್ಥದಲ್ಲಿ ಆ ಮಗು ಮೂಕಸಾಕ್ಷಿಯಾಗಿತ್ತು.
ನನ್ನನ್ನು ಗುರುತಿಸಿದ ಕೆಲವರು ತಂತಮ್ಮ ದ್ವಿಚಕ್ರವಾಹನಗಳನ್ನು ನಿಲ್ಲಿಸಿ ಹತ್ತಿರ ಬಂದರು. ನಾನು ಪರಿಸ್ಥಿತಿಯನ್ನು ಅವರಿಗೆ ವಿವರಿಸಿದೆ. ಒಂದಿಬ್ಬರು ಗೆಳೆಯರು ಕರವಸ್ತಗಳಿಂದ ರಕ್ತ ಸೋರುವ ಜಾಗವನ್ನು ಬಿಗಿದು ಆರೈಕೆ ಮಾಡಿದರು. ಆ ವೇಳೆಗೆ ಬಸ್ಸೊಂದು ನಿಂತಿತು. ಕೆಲವು ಪ್ರಯಾಣಿಕರು ಇಳಿದು ಬಂದರು. ನನ್ನನ್ನು ಮಾತಾಡಿಸಿ ಸಹಾಯಕ್ಕೆ ಮುಂದಾದರು. ವಾಸ್ತವವಾಗಿ ಅಪಘಾತಕ್ಕೀಡಾದ ಯಾರಿಗೂ ಪ್ರಾಣಾಪಾಯದ ಭಯ ಇರಲಿಲ್ಲ. ಗಾಯವಾದರೂ ಓಡಾಡುವಷ್ಟು ಶಕ್ತರಾಗಿದ್ದರು. ಆದರೂ ಆಕೆಯ ಆಕ್ರಂದನ ಹಾಗೇ ಇತ್ತು! ‘ಸಹಾಯ ಮಾಡ್ರಿ. ನಿಮ್ ಕಾರಲ್ಲಿ ನಮ್ಮನ್ ಕರ್‍ಕೊಂಡ್ ಹೋಗಿ’.
ನಮ್ಮ ಡ್ರೈವರ್ ಹೇಳಿದ: ‘ನಾವು ಸಮಾರಂಭಕ್ಕೆ ಹೋಗ್ತಾ ಇದ್ದೀವಿ. ನಿಮ್ಮನ್ ಕರ್‍ಕೋಂಡ್ ಹೋಗಿ-ಬಿಟ್ಟು ಮತ್ತೆ ನಾವು ವಾಪಸ್ ಬರಬೇಕು ಅಂದ್ರೆ ತುಂಬಾ ತಡ ಆಗುತ್ತೆ’ ಎಂದು ನನ್ನ ಮುಖ ನೋಡಿದ. ಅದು ಬಾಡಿಗೆ ಕಾರು. ಅವರನ್ನು ಹತ್ತಿಸಿಕೊಂಡು ವಾಪಸ್ ತುಮಕೂರಿಗೆ ಹೋಗಿ ಆಸ್ಪತ್ರೆಗೆ ಸೇರಿಸಿ ಬರಲು ಆತನಿಗೆ ಆಸಕ್ತಿಯಿದ್ದಂತೆ ಕಾಣಲಿಲ್ಲ. ಕೂಡಲೇ ತುಮಕೂರು ಪೊಲೀಸರನ್ನು ಸಂಪರ್ಕಿಸಲಾಯಿತು. ತಕ್ಷಣ ಆಂಬುಲೆನ್ಸ್ ಕಳಿಸಲು ಅವರು ಒಪ್ಪಿದರು. ‘ಇನ್ನು ಹತ್ತು ನಿಮಿಷದಲ್ಲಿ ಆಂಬುಲೆನ್ಸ್ ಬರುತ್ತೆ, ಗಾಬರಿ ಬೇಡ. ಇಷ್ಟಕ್ಕೂ ಯಾರಿಗೂ ಪ್ರಾಣಾಪಾಯದ ಪೆಟ್ಟು ಆಗಿಲ್ಲ’ ಎಂದು ನಾನು ಆಕೆಯನ್ನು ಸಂತೈಸಿದೆ. ಆದರೆ ಡಿವೈಡರ್‌ನ ಆ ಕಡೆಗಿದ್ದ ಆಕೆ ಮೊದಲಿನ ಮಾತನ್ನೇ ಹೇಳುತ್ತಿದ್ದರು. ಡಿವೈಡರ್‌ನ ಕಂಬಿಗಳನ್ನು ಹಿಡಿದು ನಿಂತಿದ್ದ ನಾನು ಅವರನ್ನು ಸಮಾಧಾನಿಸುತ್ತಲೇ ಇದ್ದೆ. ಆಗ ಅಲ್ಲಿದ್ದ ನನ್ನ ಸ್ನೇಹಿತರು ‘ನೀವು ಹೋಗಿ ಸಾರ್ ನಾವೆಲ್ಲ ವ್ಯವಸ್ಥೆ ಮಾಡ್ತೇವೆ’ ಎಂದು ನನ್ನನ್ನು ಕಳಿಸಿದರು.
ನನಗ್ಯಾಕೊ ನಾನು ಅಲ್ಲಿಂದ ಹೊರಟು ಬಂದದ್ದು ಸರಿಯಲ್ಲ ಎನ್ನಿಸಿತು. ಆಗ ಡ್ರೈವರ್ ‘ಅವ್ರನ್ ಕರ್‍ಕಂಡ್ ಹೋಗೋದು, ಆ ಪೋಲೀಸ್ನೋರ್ ಕೇಳಿದ್ದಕ್ಕೆಲ್ಲ ಉತ್ತರ ಕೊಡೋದು. ಸಹಾಯ ಮಾಡಿದ್ದಕ್ಕೆ ನಾವೇ ಕೋರ್ಟಿಗಲೆಯೋದು ಯಾಕ್ ಸಾರ್?’ ಎಂದು ಪ್ರಶ್ನಾರ್ಥಕವಾಗಿ ಮಾತು ಮುಗಿಸಿದ. ಆತನ ಮಾತು ನಮ್ಮ ಕಾನೂನು ವ್ಯವಸ್ಥೆಯ ಒಂದು ವ್ಯಾಖ್ಯಾನವೂ ಆಗಿತ್ತು. ಆದರೆ ನನ್ನನ್ನು ಕಾಡಿಸುತ್ತಿದ್ದ ಪ್ರಶ್ನೆ ಬೇರೆಯೇ ಆಗಿತ್ತು. ಆಂಬುಲೆನ್ಸ್‌ಗೆ ಹೇಳುವ ಬದಲು ನಾವೇ ಯಾಕೆ ಅವರನ್ನು ಕರೆದುಕೊಂಡು ಹೋಗಬಾರದಿತ್ತು -ಎಂದು ನನ್ನ ಆತ್ಮಸಾಕ್ಷಿ ಕೇಳುತ್ತಿತ್ತು. ಆಕೆಯ ಕಂಕುಳಲ್ಲಿದ್ದ ಮೂಕಸಾಕ್ಷಿ ಮಗುವಿನ ಪಿಳಿಪಿಳಿ ಕಣ್ಣು ಕಾಡಿಸುತ್ತಿತ್ತು. ಪರಶುರಾಮಪುರದಲ್ಲಿ ಸಾವಿರಾರು ಜನ ಸೇರಿದ್ದ ಸಮ್ಮೇಳನದ ಸಂಭ್ರಮ ಮುಗಿಸಿ ಬರುತ್ತಿರುವಾಗ ಸಂಕಟ ಸುಡತೊಡಗಿತ್ತು. ನಾನು ಮಾಡಿದ್ದು ಸರಿಯೆ? ಡ್ರೈವರ್ ಮೇಲೆ ಒತ್ತಾಯ ತಂದು ನಾವೇ ಅವರನ್ನು ಆಸ್ಪತ್ರೆಗೆ ಸೇರಿಸಬೇಕಿತ್ತಲ್ಲವೆ? ಸಾಹಿತ್ಯ ನನಗೆ ಏನನ್ನು ಕಲಿಸಿತು? ಕಡೆಗೂ ಈ ದೇಶದಲ್ಲಿ ರೋಡ್ ಡಿವೈಡರ್‌ಗಳೇ ವಾಸ್ತವವಾಗಬೇಕೆ ? ನಾನೂ ಈ ವಾಸ್ತವದ ಒಂದು ವ್ಯಂಗ್ಯವಾಗಬೇಕೆ? ನನ್ನ ಆತ್ಮಸಾಕ್ಷಿ ಬೆವರೊಡೆಯಿತು! ರಾತ್ರಿ ನಿದ್ದೆಗೆಟ್ಟು ಮಾರನೇ ದಿನ ಆತ್ಮೀಯರಲ್ಲಿ ಹಂಚಿಕೊಂಡಾಗ ಅವರು ಹೇಳಿದರು: ‘ಪ್ರಾಣಾಪಾಯವಿಲ್ಲದ ಸನ್ನಿವೇಶದಲ್ಲಿ ನೀವು ಮಾಡಿದ್ದು ಸರಿಯಾಗಿಯೇ ಇದೆ. ಹೇಗಿದ್ದರೂ ಆಂಬುಲೆನ್ಸ್‌ಗೆ ಹೇಳಿದ್ದೀರಲ್ಲ’. ನಿಜ; ಆಂಬುಲೆನ್ಸ್‌ಗೆ ಹೇಳಿದ್ದೆ. ಅದು ಬಂದು ಹೋದದ್ದನ್ನೂ ಖಾತ್ರಿ ಮಾಡಿಕೊಂಡಿದ್ದೆ. ಆದರೆ ಆಂಬುಲೆನ್ಸ್ ಆತ್ಮಸಾಕ್ಷಿಯಾಗಬಲ್ಲದೆ?
ನನ್ನ ಪ್ರಶ್ನೆಯಿಂದ ಆತ್ಮಸಾಕ್ಷಿಯ ಅನೇಕ ಪ್ರಕರಣಗಳು ತೇಲಿ ಬಂದವು. ನನಗೆ ಚೆನ್ನಾಗಿ ನೆನಪಿದೆ; ಶ್ರೀ ವಿ.ವಿ. ಗಿರಿಯವರು ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಿದ್ದ ಸಂದರ್ಭ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಶ್ರೀ ಎಸ್. ನಿಜಲಿಂಗಪ್ಪನವರಾದಿಯಾಗಿ ಕೆಲವು ಹಿರಿಯ ತಲೆಗಳು ಶ್ರೀ ಸಂಜೀವರೆಡ್ಡಿಯವರನ್ನು ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿಸಿದ್ದರು. ಶ್ರೀಮತಿ ಇಂದಿರಾಗಾಂಧಿಯವರಿಗೆ ಇದು ಇಷ್ಟವಿರಲಿಲ್ಲ. ಹೀಗಾಗಿ ಅವರು ವಿ.ವಿ. ಗಿರಿಯವರ ಬೆಂಬಲಕ್ಕೆ ನಿಂತರು. ಆಗ ಅವರು ಮತ್ತೆ ಮತ್ತೆ ಬಳಸಿದ ಪದ-‘ಆತ್ಮಸಾಕ್ಷಿ’. ಎಲ್ಲರೂ ಆತ್ಮಸಾಕ್ಷಿಗನುಗುಣವಾಗಿ ಮತ ಚಲಾಯಿಸಿ ಎಂದು ಕರೆಕೊಟ್ಟರು. ಇಲ್ಲಿ ಆತ್ಮಸಾಕ್ಷಿಯೆನ್ನುವುದು ಕಾಂಗ್ರೆಸ್ ಪಕ್ಷದ ವಿಪ್ ಅನ್ನು ಉಲ್ಲಂಘಿಸುವ ಹಾದಿಯಾಗಿತ್ತು. ವಿಪ್ ಅನ್ನು ಉಲ್ಲಂಘಿಸಿ ಎಂದು ಹೇಳುವ ಬದಲು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಪ್ರಧಾನಿ ಇಂದಿರಾಗಾಂಧಿಯವರು ‘ಆತ್ಮಸಾಕ್ಷಿ’ಯ ಮೊರೆ ಹೋಗಿದ್ದರು. ಹೀಗಾಗಿ ಇಲ್ಲಿ ಆತ್ಮಸಾಕ್ಷಿಯೆನ್ನುವುದು ಉಲ್ಲಂಘನೆಯ ಒಂದು ಉಪಾಯವಾಗಿತ್ತು. ಪಕ್ಷದ ನಿಯಮಕ್ಕೆ ನಿಷ್ಠರಾಗದೆ ಆತ್ಮಸಾಕ್ಷಿಗನುಗುಣವಾಗಿ ಮತ ಚಲಾಯಿಸುವುದು ನೈತಿಕವೆ? ಪಕ್ಷದೊಳಗಿದ್ದು ಪಕ್ಷದ ಆದೇಶವನ್ನು ಉಲ್ಲಂಘಿಸುವುದು ಸರಿಯೆ? ಆತ್ಮಸಾಕ್ಷಿಯೆನ್ನುವುದು ನಿರ್ದಿಷ್ಟ ನಿಯಮಗಳಿಗೆ ಬದ್ಧವಾಗಿರಬೇಡವೆ? ಇಂಥ ಪ್ರಶ್ನೆಗಳು ಸಹಜವಾಗಿಯೇ ಏಳುತ್ತವೆ. ಆದರೆ ಚಾಲ್ತಿಯಲ್ಲಿರುವ ನೀತಿ-ನಿಯಮಕ್ಕೆ ಮಾತ್ರ ನಿಷ್ಠವಾಗಿರಬೇಕೆಂದಾದರೆ ಆತ್ಮಸಾಕ್ಷಿಯೆಂಬ ಪರಿಕಲ್ಪನೆಗೆ ಯಾವ ಅರ್ಥ ? ಎಂಬ ಪ್ರಶ್ನೆಯೂ ಇಲ್ಲಿ ಮುಖ್ಯ. ಹೀಗಾಗಿ ಆತ್ಮಸಾಕ್ಷಿಯೆನ್ನುವುದು ಹೆಚ್ಚೆಂದರೆ ತಾತ್ವಿಕವಾಗಬಹುದೇ ಹೊರತು ತಾಂತ್ರಿಕವಾಗಿರುವುದಿಲ್ಲ. ತಾಂತ್ರಿಕವಾದದ್ದನ್ನು ಸದಾ ಮೀರುತ್ತಲೇ ಇದ್ದರೆ ರಾಜಕೀಯ ಪಕ್ಷದ ಅಸ್ತಿತ್ವಕ್ಕೆ ಅಪಾಯವಾಗುವ ಸಂಭವವೇ ಹೆಚ್ಚು. ಆದರೆ ತಾತ್ವಿಕ ಗಟ್ಟಿತನ ಮತ್ತು ಸಾಚಾತನವಿಲ್ಲದೆ ತಾಂತ್ರಿಕತೆ ಶುಷ್ಕ ಹಾಗೂ ಜಡಗೊಂಡ ನೆಲೆಯಾಗುತ್ತದೆ. ಆದ್ದರಿಂದ ‘ಆತ್ಮಸಾಕ್ಷಿ’ಯು ಆಯಾ ಸಂದರ್ಭದಲ್ಲೇ ಪರೀಕ್ಷೆಗೊಳಗಾಗುತ್ತದೆ.
ಈಗ ಇಂದಿರಾಗಾಂಧಿಯವರ ಸಂದರ್ಭವನ್ನು ತೆಗೆದುಕೊಳ್ಳಿ. ಆತ್ಮಸಾಕ್ಷಿಯ ಹೆಸರಿನಲ್ಲಿ ಅವರು ವಿ.ವಿ. ಗಿರಿಯವರನ್ನು ಗೆಲ್ಲಿಸಿದರು. ಬ್ಯಾಂಕ್ ರಾಷ್ಟ್ರೀಕರಣ, ಜೀತ ವಿಮುಕ್ತಿ ಕಾಯಿದೆ, ರಾಜಧನ ರದ್ದತಿ ಇಂತಹ ಪ್ರಗತಿಪರ ದಿಟ್ಟ ಹೆಜ್ಜೆಗಳ ಮೂಲಕ ಅವರು ಆತ್ಮಸಾಕ್ಷಿಗೊಂದು ಸಮರ್ಥನೆ ಒದಗಿಸಿದರು. ಈ ಕ್ರಮಗಳನ್ನು ಇಚ್ಚಿಸದೆ, ಇಂದಿರಾ ಅವರನ್ನು ಓಲೈಸದೆ ತಮ್ಮ ಆತ್ಮಸಾಕ್ಷಿಯಂತೆ ‘ಸಂಸ್ಥಾ ಕಾಂಗ್ರೆಸ್’ ಪಕ್ಷ ರಚಿಸಿಕೊಂಡು ಹಿರಿಯರು ‘ಸಾಂಸ್ಥಿಕ ಧರ್ಮ’ ದಂತೆ ಸ್ಥಾವರವಾದರು. ಇಂದಿರಾಗಾಂಧಿ ಚಲನಶೀಲವಾದರು. ಮುಂದೆ ತುರ್ತು ಪರಿಸ್ಥಿತಿ ಹೇರಿ ಸಾಕ್ಷಿಯಿಲ್ಲದ ಆತ್ಮವಾಗಿ ಹೋದರು! ಅದು ಬೇರೆಯದೇ ಚರ್ಚೆ.
ಆತ್ಮಸಾಕ್ಷಿಯ ವಿರಳ ಉದಾಹರಣೆಯೆಂದರೆ ರೈಲು ಅಪಘಾತವೊಂದು ಸಂಭವಿಸಿದಾಗ ಅಂದಿನ ರೈಲ್ವೆ ಸಚಿವರಾಗಿದ್ದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರು ಆತ್ಮಸಾಕ್ಷಿಗನುಗುಣವಾಗಿ ರಾಜೀನಾಮೆ ಕೊಟ್ಟರು. ಇಂದು ಸಂಭವಿಸುತ್ತಿರುವ ಅಪಘಾತ-ಅವಘಡಗಳನ್ನು ನೋಡಿದಾಗ ರಾಜಿನಾಮೆಯೂ ಯಾಂತ್ರಿಕವಾದೀತು. ಈ ಹಿನ್ನೆಲೆಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಆತ್ಮಸಾಕ್ಷಿ ಅತಿಯಾಯಿತು ಎನ್ನುವವರೂ ಇದ್ದಾರೆ.
ಕರ್ನಾಟಕದ ಈಗಿನ ಮುಖ್ಯಮಂತ್ರಿ ಶ್ರೀ ಕುಮಾರಸ್ವಾಮಿಯವರು ವಿಶ್ವಾಸಮತ ಯಾಚಿಸುವಾಗ ಆತ್ಮಸಾಕ್ಷಿಗನುಗುಣವಾಗಿ ಮತ ಚಲಾಯಿಸಲು ಕರೆಕೊಟ್ಟರು. ಜಾತ್ಯತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ದೇವೇಗೌಡರು ಯಾರಿಗೂ ವಿಪ್ ಕೊಡದೆ ತಂದೆಸ್ಥಾನದ ‘ಆತ್ಮಸಾಕ್ಷಿ’ಯನ್ನು ಕಾಪಾಡಿಕೊಂಡರು. ಅಧ್ಯಕ್ಷ ಮತ್ತು ತಂದೆಯ ನಡುವಿನ ತಳಮಳವನ್ನು ಆತ್ಮಸಾಕ್ಷಿ ಅನುಭವಿಸಿತು. ಆ ಸಂದರ್ಭದ ವಿಶಿಷ್ಟ ಆತ್ಮಸಾಕ್ಷಿಯೆಂದರೆ ಸಾಂಸ್ಕೃತಿಕ ಕ್ಷೇತ್ರದ ಮಿತ್ರ ಶ್ರೀ ಎಂ.ಪಿ. ಪ್ರಕಾಶ್ ಅವರದ್ದು. ಕುಮಾರಸ್ವಾಮಿಯವರಿಗೆ ನನ್ನ ಬೆಂಬಲ, ಅವರೇ ನಮ್ಮ ನಾಯಕ ಎಂದು ಎರಡು ವಾಕ್ಯ ಹೇಳಲು ತಮ್ಮ ಸಾಂಸ್ಕೃತಿಕ ತಿಳುವಳಿಕೆಯನ್ನೆಲ್ಲ ತಿರುಗಾಮುರುಗಾ ಬಳಸುತ್ತ ಅವರು ತೆಗೆದುಕೊಂಡ ಶ್ರಮ ಆತ್ಮಸಾಕ್ಷಿಯ ಅಸಹಾಯಕತೆಯಂತೆ ಕಾಣಿಸಿತು. ಅವರೂ ಅದನ್ನೇ ಹೇಳಿದ್ದು ಸ್ವಾಭಾವಿಕವಾಗಿತ್ತು! ಆದರೆ ಶ್ರೀ ಪಿ.ಜಿ.ಆರ್. ಸಿಂಧ್ಯಾ ಅವರ ಆತ್ಮಸಾಕ್ಷಿಗೆ ಈ ‘ಸಾಂಸ್ಕೃತಿಕ ತಿಳುವಳಿಕೆ’ಯ ತಳಮಳ ಇರಲಿಲ್ಲ. ಸಾಫ್ ಸೀದಾ ಸಾಕ್ಷಿಪ್ರಜ್ಞೆಯಿಂದ ಕುಮಾರಸ್ವಾಮಿಯವರ ನಾಯಕತ್ವವನ್ನು ಅವರು ಒಪ್ಪಲಿಲ್ಲ. ಬಿ.ಜೆ.ಪಿ ಜೊತೆಗಿನ ಮೈತ್ರಿಯನ್ನು ಬೆಂಬಲಿಸಲಿಲ್ಲ. ‘ಎಂ.ಪಿ. ಪ್ರಕಾಶ್ ನಮ್ಮ ಶಾಸಕಾಂಗ ಪಕ್ಷದ ನಾಯಕರು’ ಎಂದು ಇವರು ಹೇಳಿದ್ದಾದ ಮೇಲೆ ಅನೇಕರು ಪ್ರಕಾಶ್ ಅವರ ಸಾಂಸ್ಕೃತಿಕ ಭಾಷಣವನ್ನು ಕೇಳಿ ಬೆಚ್ಚಿಬಿದ್ದರು.
ಅವರಷ್ಟೇ ಏಕೆ, ಸಾಂಸ್ಕೃತಿಕ ಕ್ಷೇತ್ರದ ಎಷ್ಟು ಜನಕ್ಕೆ ಆತ್ಮಸಾಕ್ಷಿಯಿದೆ? ‘ಮನುಷ್ಯಜಾತಿ ತಾನೊಂದೆ ವಲಂ’ ಎಂಬ ಪಂಪ ಮಹಾಕವಿಯ ಮಾತನ್ನು ಹೇಳುತ್ತಲೇ ಜಾತಿವಾದ ಮಾಡುವ ಮತ್ತು ತಂತಮ್ಮ ಜಾತಿಸಂಘಟನೆಗಳ ಜೊತೆ ನಿಕಟ ಸಂಬಂಧವಿಟ್ಟುಕೊಂಡಿರುವ ಅನೇಕರು ಸಾಹಿತ್ಯಾದಿ ಕಲೆಗಳ ಮೂಲಕ ಏನು ಕಲಿತಿದ್ದಾರೆ? ಪಂಪನಿಂದ ಪ್ರಾರಂಭಿಸಿ ವಚನ ಸಾಹಿತ್ಯ, ದಾಸಸಾಹಿತ್ಯಗಳನ್ನು ಪುಂಖಾನುಪುಂಖವಾಗಿ ಉಲ್ಲೇಖಿಸುವ ‘ಸಂಸ್ಕೃತಿ ಸಂಪನ್ನರು’ ಜಾತಿ-ವರ್ಣ-ವರ್ಗದ ವಾಸನೆಗಳಲ್ಲಿ ಆತ್ಮಸಾಕ್ಷಿಯ ಹತ್ಯೆ ಮಾಡುತ್ತಿರುವಾಗ ರಾಜಕಾರಣಿಗಳತ್ತ ಮಾತ್ರ ಬೊಟ್ಟು ಮಾಡಿ ಅರ್ಧಸತ್ಯಕ್ಕೆ ಬದ್ಧರಾಗುವುದೇಕೆ? ಆ ಯುವತಿಯ ಕಂಕುಳಲ್ಲಿದ್ದ ‘ಮೂಕಸಾಕ್ಷಿ ಮಗು’ ಕಾಡಿಸುತ್ತಿದೆ. ಅನ್ಯರಿಂದ ಹತ್ಯೆಗೀಡಾಗುವ ಬದಲು, ಆತ್ಮಸಾಕ್ಷಿಯು ಆತ್ಮಹತ್ಯೆಗೆ ಯತ್ನಿಸುತ್ತಿರುವಂತೆ ಕಾಣುತ್ತಿದೆ.
‘ಮಗುವೇ ನನ್ನನ್ನು ಮನ್ನಿಸು’ ಎಂದೆ.
*****
೧೯.೩.೨೦೦೬