ಬೆಳಕನು ಅರಸಿ ಹೊರಟೆ ನಾ
ಕತ್ತಲ ಮನೆಯಿಂದ
ಕಂಡಿತು ಕೊನೆಗೂ ಬೆಳಕು ಅಲ್ಲಿ
ಬುದ್ಧನ ಹೆಸರಿಂದ
ಬುದ್ಧನ ಹೆಸರಿಂದ;
ಅರಿವಿನ ಉಸಿರಿಂದ /ಪ//
ದೇವರ ಬಗ್ಗೆ ಒಂದೂ
ಆಡಲಿಲ್ಲ ಮಾತು
ಗಾಳಿಯೊಡನೆ ಗುದ್ದಾಡಿ
ಕೂರಲಿಲ್ಲ ಬೆವೆತು
ನನ್ನ ಕುರಿತು ಮಾತಾಡಿದ;
ಅದರಲ್ಲೆ ಜಗ ತೋರಿದ
ಮೊಲದ ಕೊಂಬನು ಕುರಿತು
ನಡೆಯುತಿಹುದು ಚರ್ಚೆ
ಅದರಲ್ಲೇ ಬಣ ನೂರು
ಕಡೆಗೋ ನನಗೆ ಮೂರ್ಛೆ
ಬುದ್ಧ ಅಲ್ಲಿ ಎಚ್ಚರಿಸಿದ;
ಮೊಲಕೆ ಕೊಂಬು ಉಂಟೆ?
ಮೊಲಕೆ ಕೊಂಬು ಉಂಟೆ??
ಹುಟ್ಟಿದ ಮಾನವನಾಗಿ – ಬುದ್ಧ
ಸತ್ತನು ಮಾನವನಾಗಿ
ಆಡಿದ ಮಾನವನಾಗಿ – ದೀಪ
ಹಚ್ಚಿದ ಮಾನವನಾಗಿ
ಅದಕೆ ಈತ ಮಿಗಿಲು;
ಬುವಿಗೆ ಬೇಕು ಮುಗಿಲು
(ಅಗತ್ಯವಿದ್ದರೆ ಹಾಡುಗಾರಿಕೆಯಲ್ಲಿ ಈ ಕೆಳಗಿನ ಎರಡು ಸಾಲುಗಳನ್ನು ಪಲ್ಲವಿಗೆ ಮೊದಲು ಹಾಡಿಕೊಳ್ಳಬಹುದು –
ಬುದ್ಧ…. ಪ್ರಬುದ್ಧ….
ಬುದ್ಧ…. ಬೆಳಕಿಗೆ ಬದ್ಧ….)
*****