ಒಳ್ಳೆಯ ಸಾಹಿತ್ಯ ನಮ್ಮನ್ನು ಮತ್ತೆ ನಮ್ಮ ಜಗತ್ತಿಗೇ ಮರಳಿಸುತ್ತದೆ

ಒಳ್ಳೆಯ ಸಾಹಿತ್ಯ ನಮ್ಮನ್ನು ಮತ್ತೆ ನಮ್ಮ ಜಗತ್ತಿಗೇ ಮರಳಿಸುತ್ತದೆ

ಇಂಗ್ಲಿಷ್ ಕವಿ ವಿಲಿಯಮ್ ವರ್ಡ್ಸ್‌ವರ್ತ್‌ ನಿಸರ್ಗದ ಕವಿ ಎಂದು ಪ್ರಸಿದ್ಧ. ಆದರೆ ಆವನು ಮನುಷ್ಯರ ಕುರಿತಾಗಿ, ಅದೂ ಮುದುಕರ, ಮಕ್ಕಳ, ಅನಾಥರ ಕುರಿತಾಗಿ ಬರೆದಷ್ಟು ಕವಿತೆಗಳನ್ನು ಬಹುಶಃ ಅವನ ಕಾಲದ ಇತರರು ಯಾರೂ ಬರೆದಿರಲಾರರು. ನಿಸರ್ಗದಲ್ಲಿ ದೈವಿಕತೆಯನ್ನು ಕಂಡಂತೆಯೇ ಮನುಷ್ಯರಲ್ಲೂ ಕಂಡವನು ವರ್ಡ್ಸ್‌ವರ್ತ್‌. `Resolution and Independence’ (‘ಸಂಕಲ್ಪ ಮತ್ತು ಸ್ವಾತಂತ್ರ್ಯ) ಎಂಬ ಅವನದೊಂದು ಪ್ರಸಿದ್ಧವಾದ ಕವಿತೆಯಿದೆ. ವರ್ಡ್ಸ್‌ವರ್ತ್‌ ಕವಿತೆಗೆ ಇಷ್ಟೊಂದು ಅಮೂರ್ತವೂ ಅಕಾವ್ಯಮಯವೂ ಆದ ಹೆಸರೇ ಎಂದು ಅಚ್ಚರಿಯಾಗಬಹುದು. ಇದಕ್ಕೆ `Leech-gatherer’ (ಜಿಗಣೆ ಸಂಗ್ರಾಹಕ) ಎಂಬ ಇನ್ನೊಂದು ಶೀರ್ಷಿಕೆಯೂ ಇದೆ. ಯಾಕೆಂದರೆ ಇದು ಜಿಗಣೆ ಸಂಗ್ರಹಿಸಿ ಮಾರಿ ಜೀವನ ಸಾಗಿಸುವ ಒಬ್ಬ ಮುದುಕನ ಮನೋನಿರ್ಧಾರ ಮತ್ತು ಸ್ವಾತಂತ್ರಾಕಾಂಕ್ಷೆಗೆ ಸಂಬಂಧಿಸಿದ ಕವಿತೆ. ಜಿಗಣೆಗೆ ಹವ್ಯಕ ಮಾತಿನಲ್ಲಿ ಒಂದು ಸುಂದರವಾದ ಪದವಿದೆ: ಉಂಬುಳು!

ಒಂದು ಮುಂಜಾನೆ ಕವಿ ಕೊಳಚೆ ಬಯಲೊಂದರಲ್ಲಿ ಸುಮ್ಮನೆ ಪ್ರಕೃತಿ ವೀಕ್ಷಣೆಗೆಂದು ಸಾಗುತ್ತಿದ್ದಾನೆ. ಹಿಂದಿನ ದಿನ ಭಾರೀ ಮಳೆಗಾಳಿ ಬಂದು ನೆಲವೆಲ್ಲ ನೀರು ತುಂಬಿದೆ. ಆದರೆ ಈಗ ಸೂರ್ಯೋದಯದ ಕಾಲ ಎಲ್ಲವೂ ಪ್ರಶಾಂತವೂ ಪ್ರಕಾಶಮಾನವೂ ಆಗಿದೆ. ಇಂಥ ಸಮಯದಲ್ಲಿ ನಡೆಯುವ ನಿಸರ್ಗದ ಹಲವು ಸುಂದರ ವಿದ್ಯಮಾನಗಳ ವರ್ಣನೆಯೊಂದಿಗೆ ಕವಿತೆ ಆರಂಭವಾಗುತ್ತದೆ. ಇಡೀ ವರ್ಡ್ಸ್‌ವರ್ತ್‌ ಕಾವ್ಯದಲ್ಲೇ ಪ್ರಸಿದ್ಧವಾದ ಮೊಲವೊಂದರ ಓಟದ ವರ್ಣನೆ ಬರುವುದು ಇದೇ ಕವಿತೆಯಲ್ಲಿ: ಮೊಲ ಆಟದ ಸರ್ಧೆಯಲ್ಲಿ ಓಡುವಂತೆ ಓಡುತ್ತಿದೆ; ಅದರ ಕಾಲುಗಳು ಎಬ್ಬಿಸುವ ನೀರ ಹನಿಗಳು ಮಂಜಿನಂತೆ ಕಾಣಿಸುತ್ತವೆ. ಫಳ ಫಳನೆ ಹೊಳೆಯುವ ಸೂರ್ಯನ ಬೆಳಕಿನಲ್ಲಿ ಮೊಲ ಹೋದಲ್ಲೆಲ್ಲ ಈ ಮಂಜು ಅದನ್ನು ಹಿಂಬಾಲಿಸುತ್ತದೆ.

ಕವಿ ದಾರಿಯಲ್ಲಿ ಒಬ್ಬ ಹಣ್ಣು ಹಣ್ಣು ಮುದುಕನನ್ನು ಕಾಣುತ್ತಾನೆ. ಆ ಇಡೀ ಪದೇಶದಲ್ಲಿ ಇನ್ನು ಯಾರೂ ಇಲ್ಲ. ಮುದುಕನೊಬ್ಬನೇ ಒಂದು ಹೊಂಡದ ಬದಿಯಲ್ಲಿ ನಿಂತಿದ್ದಾನೆ, bare to the eye of heaven ‘ಬಾನಿನ ಕಣ್ಣಿಗೆ (ಸೂರ್ಯನಿಗೆ) ಬೆತ್ತಲಾಗಿ.’ ಅವನಿಗೆ ಬೇರೆಯವರ ಪರಿವೆಯೂ ಇದ್ದಂತಿಲ್ಲ. ಅವನಷ್ಟು ವೃದ್ಧ ಇನ್ನೊಬ್ಬನಿಲ್ಲ ಎನಿಸುವಷ್ಟು ವೃದ್ಧ ಇಲ್ಲಿ ಹೇಗೆ ಬಂದ? ಅರ್ಥಾರ್ಥ ಸಂಬಂಧವಿಲ್ಲದಂತೆ? ಇದನ್ನು ಕವಿ ಎರಡು ಉಪಮೆಗಳಿಂದ ವರ್‍ಣಿಸುತ್ತಾನೆ. ಬೆಟ್ಟದ ಬೋಳು ತಲೆ ಮೇಲೆ ಕುಳಿತ ದೊಡ್ಡದೊಂದು ಬಂಡೆಯ ಹಾಗೆ, ಎನ್ನುತ್ತಾನೆ. ಅದು ಹೇಗೆ ಅಲ್ಲಿಗೆ ಬಂತು? ಅಥವಾ ಸಮುದಪ್ರಾಣಿಯೊಂದು ಬಿಸಿಲು ಕಾಯಿಸುವುದಕ್ಕೆಂದು ಕಿನಾರೆಯ ಕಲ್ಲರಾಸಿಗಳ ಮೇಲೆ ವಿರಮಿಸಿದ ಹಾಗೆ. ಈ ತರ ಕಾಣಿಸುತ್ತಿದ್ದ ಮನುಷ್ಯ-ಪೂರ್‍ತಿ ಬದುಕಿಯೂ ಇರದೆ, ಸತ್ತೂ ಇರದೆ, ತನ್ನ ಅತಿ ವೃದ್ಧಾಪ್ಯದಲ್ಲಿ. ಅವನ ದೇಹ ಬಾಗಿದೆ, ಜೀವನದ ತೀರ್ಥಯಾತ್ರೆಯಲ್ಲಿ ಕಾಲೂ ತಲೆಯೂ ಒಟ್ಟಾಗುವಂತೆ, ಎಂದೋ ಅನುಭವಿಸಿದ ಯಾವುದೋ ತಾಳಲಾರದ ಒಂದು ನೋವು ಅಥವಾ ಬಾಧಿಸಿದ ರೋಗ ಅವನ ಒಡಲ ಮೇಲೆ ಅಸಾಧಾರಣ ಭಾರವನ್ನು ಪೇರಿಸಿದೆ.

ಸಪಾಯಿ ಮಾಡಿದ ಮರದ ಊರುಗೋಲನ್ನು ಆಧರಿಸಿ ನಿಂತುಕೊಂಡಿದ್ದಾನೆ, ಕವಿ ಸಮೀಪಿಸುವುದನ್ನೂ ಗಮನಿಸದೆ, ಗಾಳಿಗೂ ಸುಮ್ಮನಿರುವ ಮೋಡದ ಹಾಗೆ. ಆಮೇಲೆ ತನ್ನ ಊರುಗೋಲಿಂದ ನೀರನ್ನು ಕದಡಿ, ಆ ಕೆಸರುನೀರನ್ನು ಒಂದೇ ತರ ದಿಟ್ಟಿಸುತ್ತಾನೆ. ಅವನನ್ನು ಮಾತಾಡಿಸಿ ಕವಿ ತಿಳಿದುಕೊಳ್ಳುವುದೆಂದರೆ, ಈ ವೃದ್ಧ ಜಿಗಣೆ (ಉಂಬುಳು) ಹಿಡಿಯುವುದಕ್ಕೆ ಇಲ್ಲಿಗೆ ಬಂದಿದ್ದಾನೆ. ಯಾಕೆಂದರೆ ಅದೇ ಅವನ ಜೀವನೋಪಾಯ. (ವೈದ್ಯರು ರೋಗಿಗಳಿಗೆ ಉಂಬುಳು ಕಡಿಸಿ ಚಿಕಿತ್ಸೆ ನಡೆಸುತ್ತಿದ್ದ ಕಾಲ ಅದು.) ಈಗ ಈ ಹುಳಗಳ ಸಂಖ್ಯೆ ಕಡಿಮೆಯಾಗಿದೆ ಎನ್ನುವುದೊಂದೇ ಮುದುಕನ ಗೋಳು. ಆದರೆ ತಾನು ಅವುಗಳಿದ್ದಲ್ಲಿಗೆ ಹೋಗಿ ಹುಡುಕುತ್ತೇನೆ, ಎನ್ನುತ್ತಾನೆ ಆತ. ಅವನು ಹೀಗೆ ಮಾತಾಡುತ್ತಿದ್ದಂತೆ, ಆ ನಿರ್ಜನ ಸ್ಥಳ, ವೃದ್ಧನ ಆಕೃತಿ ಮತ್ತು ಮಾತು-ಎಲ್ಲಾ ನನ್ನನ್ನು ಬಾಧಿಸಿತು ಎನ್ನುತ್ತಾನೆ ವರ್‍ಡ್ಸ್‌ವರ್‍ತ್. ಸ್ವಲ್ಪ ತಡೆದ ವೃದ್ಧ ಮತ್ತೆ ಮಾತು ಮುಂದರಿಸುತ್ತ, ಇತರ ಸಂಗತಿಗಳನ್ನೂ ಮಾತಿನಲ್ಲಿ ತರುತ್ತಾನೆ, ಸಂತೋಷ ಉಲ್ಲಾಸಗಳಿಂದ. ಈತನ ಗಟ್ಟಿ ಮನಸ್ಸು ಕಂಡು ಕವಿಗೆ ತನ್ನ ಬಗ್ಗೆಯೇ ನಾಚಿಕೆಯೆನಿಸುತ್ತದೆ. ಯಾಕೆಂದರೆ, ಇವನನ್ನು ಕಾಣುವುದಕ್ಕೆ ತುಸು ಮುಂಚೆ, ಕವಿಯ ಮನಸ್ಸು ನಿಸರ್ಗದ ಸಂತೋಷದಲ್ಲಿದ್ದರೂ ಖಿನ್ನತೆಯನ್ನೂ ತುಂಬಿಕೊಂಡಿತ್ತು. ‘ಇನ್ನೊಂದು ದಿನ ಬರಬಹುದು ನನಗೆ-ಒಂಟಿತನ, ಹೃದಯ ವೇದನೆ, ಪರಿತಾಪ, ಮತ್ತು ದಾರಿದ್ರ್ಯ’ ಎಂಬ ಯೋಚನೆ ಅವನನ್ನು ಕಾಡುತ್ತಿತ್ತು. ಈ ಉಂಬುಳು ಸಂಗ್ರಾಹಕ ವೃದ್ಧನ ಭೇಟಿ ಅದನ್ನೆಲ್ಲ ತೊಡೆದುಹಾಕುತ್ತದೆ. ಈತನ ಮನೋನಿರ್ಧಾರ ಮತ್ತು ಅದು ನೀಡುವ ಸ್ವಾತಂತ್ರ್ಯದ ಮುಂದೆ ತನ್ನದು ಏನೂ ಅಲ್ಲ ಎನಿಸಿಬಿಡುತ್ತದೆ.

ಇಡೀ ಕವಿತೆಯಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ದುಗುಡ ಕವಿಯದ್ದಲ್ಲದೆ ಮುದುಕನದ್ದಲ್ಲ ಎನ್ನುವುದು. ಮುದುಕ ದೇವರಿಗೆ ಮೊರೆ ಹೊಗುವುದಿಲ್ಲ, ದೇವರನ್ನು ಸುಮ್ಮನೆ ಮಾತಿಗೂ ತರುವುದಿಲ್ಲ; ಯಾರನ್ನೂ ದೂರುವುದಿಲ್ಲ, ಕರುಬುವುದಿಲ್ಲ. ಅವನಿಗಿರುವ ಒಂದೇ ಒಂದು ಅಸಮಾಧಾನವೆಂದರೆ, ಉಂಬುಳಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವುದು! ಆದರೂ ಅವು ಇರುವಲ್ಲಿಗೆ ಹೋಗಿ ಹಿಡಿಯುವ ಸಂಕಲ್ಪ ಅವನದು. ಹೀಗೆ ಇತರರ ಮೇಲೆ ಅವಲಂಬಿಸದೆ ಬದುಕುವ ಸಂಕಲ್ಪವೇ ಅವನ ಸ್ವಾತಂತ್ರ್ಯ ಕೂಡಾ.

ವಿಶ್ವಸಾಹಿತ್ಕದಲ್ಲಿ ಇಂಥ ಇನ್ನೊಬ್ಬ ಮುದುಕನೆಂದರೆ ಹೆಮಿಂಗ್ವೇಯ The Old Man and the Sea (ವೃದ್ಧ ಮತ್ತು ಸಮುದ್ರ) ಎಂಬ ಕಾದಂಬರಿಯ ಪ್ರಧಾನ ಪಾತ್ರವಾದ ಸಾಂಟಿಯಾಗೋ. ಇವನೂ ಹಣ್ಣು ಹಣ್ಣು ಮುದುಕನೇ. ಕಾದಂಬರಿಯ ಆರಂಭದಲ್ಲೇ ಇವನ ವೃದ್ಧಾಪ್ಯದ ವಿವರ ಬರುತ್ತದೆ. ‘ಅವನ ಎಲ್ಲವೂ ಮುದಿಯಾಗಿತ್ತು, ಕಣ್ಣುಗಳ ಹೊರತು, ಆ ಕಣ್ಣುಗಳ ಬಣ್ಣ ಸಮುದ್ರದ ಬಣ್ಣದಂತೆಯೇ ಇತ್ತು. ಅವು ಉಲ್ಲಾಸಭರಿತವೂ ಅಜೇಯವೂ ಆಗಿದ್ದುವು,’ ಎನ್ನುತ್ತಾನೆ ಹೆಮಿಂಗ್ವೇ. ಈ ಕಣ್ಣುಗಳ ಹೊಳಪು, ಉಲ್ಲಾಸ, ಅಜೇಯತೆ ವರ್ಡ್ಸ್‌ವರ್ತ್‌ ಮುದುಕನ ಗುಣಗಳೂ ಹೌದು ಎಂಬುದನ್ನು ನೆನೆದುಕೊಂಡರೆ ಈ ಮುದುಕರ ಮಧ್ಯದ ಹೋಲಿಕೆ ಸ್ಪಷ್ಟವಾಗುತ್ತದೆ. ಹೆಮಿಂಗ್ವೇಯ ಕಥಾನಾಯಕ ಒಬ್ಬ ಬೆಸ್ತ. ಚಿಕ್ಕದೊಂದು ದೋಣಿ ಅವನಿಗೆ. ಕತೆ ಮೊದಲಾಗುವುದಕ್ಕೆ ಹಲವು ದಿನಗಳಿಂದ ಅವನಿಗೆ ಒಂದು ಮೀನೂ ಸಿಕ್ಕಿರುವುದಿಲ್ಲ. ಇಂದಾದರೂ ಸಿಗುತ್ತದೆ ಎಂಬ ಆಸೆ ಅವನಿಗೆ. ಅವಕಾಶ ಬಂದೇ ಬರುತ್ತದೆ. ಆದರೆ ಅವಕಾಶಕ್ಕೆ ನಾವು ತಯಾರಾಗಿರಬೇಕು ಎನ್ನುವುದು ಅವನ ಫಿಲಾಸಫಿ. ಸಾಮಾನ್ಯವಾಗಿ ಅವನಿಗೆ ಸಹಾಯಮಾಡಲು ಒಬ್ಬ ಹುಡುಗ ಇರುತ್ತಾನೆ. ಆದರೆ ಇಂದು ಹುಡುಗ ಬಂದಿಲ್ಲ. ಆದರೂ ಸಾಂಟಿಯಾಗೋ ದೋಣಿಯನ್ನು ಸಮುದ್ರಕ್ಕೆ ಇಳಿಸುತ್ತಾನೆ. ಗಾಳ ಹಾಕಿ ದೂರ ದೂರ ಸಾಗುತ್ತಾನೆ. ಅಷ್ಟು ದೂರ ಅವನು ಈ ತನಕ ಹೋದದ್ದೇ ಇಲ್ಲ. ಆದರೂ ಮೀನು ಹಿಡಿಯಲೇಬೇಕೆಂಬ ಹಠ ಅವನಿಗೆ. ಕೊನೆಗೂ ಭಾರೀ ಗಾತ್ರದ ಮೀನೊಂದು ಗಾಳಕ್ಕೆ ಸಿಗುತ್ತದೆ. ಇಡೀ ಕತೆ ಸಾಂಟಿಯಾಗೋ ಏಕಾಂಗಿಯಾಗಿ ಆ ಮೀನನ್ನು ದಂಡೆಗೆ ಎಳೆದುತರುವ ಸಾಹಸವನ್ನು ಚಿತ್ರಿಸುತ್ತದೆ. ದಾರಿಯಲ್ಲಿ ಶಾರ್ಕ್ ಮೀನುಗಳು ಅಟ್ಟಿಸಿಕೊಂಡು ಬರುತ್ತವೆ. ಸಾಂಟಿಯಾಗೋನ ಮೀನನ್ನು ಅವು ಆಕ್ರಮಿಸುತ್ತವೆ. ಅಂತೂ ಮೂರು ಹಗಲು ಮೂರು ರಾತ್ರಿ ಸಮುದ್ರದಲ್ಲಿ ಹೋರಾಡಿ ಅಂತೂ ಅವನು ಮೀನನ್ನು ದಂಡೆಗೆ ತರುತ್ತಾನೆ. ಆದರೆ ಎಂಥಾ ಮೀನು ಅದು? ಶಾರ್ಕ್ಗಳು ಅದರ ಮಾಂಸವನ್ನೆಲ್ಲಾ ತಿಂದು ಮುಗಿಸಿದ್ದರಿಂದ ಕೇವಲ ಎಲುಬಿನ ಹಂದರ ಮಾತ್ರವೇ ಉಳಿದಿರುತ್ತದೆ! ಸಾಂಟಿಯಾಗೋ ಸೋತನೇ ಗೆದ್ದನೇ? A man can be destroyed but not defeated (‘ಮನುಷ್ಯನನ್ನು ನಾಶಪಡಿಸಬಹುದು ಆದರೆ ಸೋಲಿಸಲು ಸಾಧ್ಯವಿಲ್ಲ’) ಎಂಬ, ಈಗ ಪ್ರಸಿದ್ಧವಾಗಿರುವ, ಮಾತು ಈ ಕಾದಂಬರಿಯಲ್ಲಿ ಬರುತ್ತದೆ. ಎಲ್ಲಿಯವರೆಗೆ ಮನಸ್ಸು ಸೋಲುವುದಿಲ್ಲವೋ ಅಲ್ಲಿಯವರೆಗೆ ಮನುಷ್ಯ ಸೋಲುವುದಿಲ್ಲ ಎನ್ನುವುದು ಈ ಮಾತಿನ ಆಶಯ. ದೇಹಬಲ ಕುಗ್ಗಿದರೂ ಮನೋಬಲ ಕುಗ್ಗಬೇಕೆಂದಿಲ್ಲ ಎನ್ನುವುದನ್ನು ವರ್ಡ್ಸ್‌ವರ್ತ್‌ ಮತ್ತು ಹೆಮಿಂಗ್ವೇಯ ಈ ಮುದುಕರು ತೋರಿಸಿಕೊಡುತ್ತಾರೆ. ಈ ಕಾದಂಬರಿ ಬರೆಯುವಲ್ಲಿ ಹೆಮಿಂಗ್ವೇಯ ಮೇಲೆ ಅನೇಕರ ಪ್ರಭಾವ ಇದ್ದಿರಬಹುದು; ಆದರೆ ವರ್ಡ್ಸ್‌ವರ್ತ್‌ ಕವಿತೆಯ ಪ್ರಭಾವ ಇರುವುದರಲ್ಲಿ ಸಂದೇಹವೇ ಇಲ್ಲ. `I have resolution’ ಎಂಬ ಮಾತನ್ನು ಹೆಮಿಂಗ್ವೇ ಸಾಂಟಿಯಾಗೋನ ಬಾಯಿಂದ ಕಾದಂಬರಿಯ ಆರಂಭದ ಭಾಗದಲ್ಲೇ ಹೇಳಿಸುತ್ತಾನೆ! ಇದು ಬಹುಶಃ ಹೆಮಿಂಗ್ವೇ ವರ್ಡ್ಸ್‌ವರ್ತ್‌ಗೆ ಕೃತಜ್ಞತೆ ಅರ್ಪಿಸುವ ವಿಧಾನ.

ಇಂಥೆ ಪಾತ್ರಗಳು ಸಾಹಿತ್ಯದಲ್ಲೇನೋ ನಮಗೆ ಸಾಕಷ್ಟು ಕಾಣಸಿಗುತ್ತವೆ. ಆದರೆ ನಿಜ ಜೀವನದಲ್ಲಿ ಇಂಥವರು ಇದ್ದಾರೆಯ ಎಂದು ಕೇಳಬಹುದು. ವಾಸ್ತವದಲ್ಲಿ, ವರ್ಡ್ಸ್‌ವರ್ತ್‌ ಸಾಧಾರಣವಾಗಿ ತಾನು ಕಂಡ ಅಥವಾ ಕೇಳಿದ ವ್ಯಕ್ತಿಗಳ ಬಗ್ಗೆಯೇ ಬರೆಯುತ್ತಿದ್ದುದು. ಆದ್ದರಿಂದ ಅವನು ಚಿತ್ರಿಸಿದ ಉಂಬುಳು ಸಂಗ್ರಾಹಿ ಮುದುಕನ ಪಾತ್ರ ನೈಜವೆನ್ನಬಹುದು. ಅದೇ ರೀತಿ, ಹೆಮಿಂಗ್ವೇಯ ಕಾದಂಬರಿಯ ಸ್ಫೂರ್ತಿ ಒಂದು ಪತ್ರಿಕಾವರದಿ: ಕ್ಯೂಬಾದ ಒಂದು ಹಳ್ಳಿಯಲ್ಲಿ ಒಬ್ಬ ಮುದಿ ಬೆಸ್ತ ಈ ರೀತಿ ಮೂರು ದಿನ ಸಮುದ್ರದಲ್ಲಿ ತಪ್ಪಿ ಹೋಗಿ ಮರಳಿದ ಕುರಿತು ಪತ್ರಿಕೆಯೊಂದರಲ್ಲಿ ವರದಿಯಾದ್ದನ್ನು ಆಗ ಅದೇ ದೇಶದಲ್ಲಿ ವಾಸವಾಗಿದ್ದ ಹೆಮಿಂಗ್ವೇ ಓದಿದ್ದ. ಆದರೆ ವರ್ಡ್ಸ್‌ವರ್ತ್‌ ಉಂಬುಳು ಸಂಗ್ರಾಹಕನಾಗಲಿ ಹೆಮಿಂಗ್ವೇಯ ಬೆಸ್ತನಾಗಲಿ ವಾಸ್ತವದಲ್ಲಿ ಈ ಲೇಖಕರು ಹೇಳುವಂತೆಯೇ ಚಿಂತಿಸುತ್ತಿದ್ದರು ಎಂದು ಹೇಳುವುದಕ್ಕಾಗುವುದಿಲ್ಲ. ವಾಸ್ತವ ಮನಸ್ಸು ಎಷ್ಟೇ ದೃಢವಾಗಿದ್ದರೂ ಕೆಲವೊಮ್ಮೆ ಹತಾಶೆಗೆ ಒಳಗಾಗುತ್ತದೆ. ಒಂದೇ ಗಳಿಗೆಯಲ್ಲಿ ಮನುಷ್ಯ ಮನಸ್ಸು ಆಕಾಶದಲ್ಲೂ ವಿಹರಿಸುತ್ತದೆ, ಪಾತಾಳಕ್ಕೂ ಬೀಳುತ್ತದೆ. ಆದರೆ ಇಂಥ ಮನಸ್ಸು ಹೊತ್ತ ಮನುಷ್ಯರು ಯಾವ ರೀತಿ ಜೀವಿಸುತ್ತಾರೆ ಎನ್ನುವುದು ಮುಖ್ಯ. ವರ್ಡ್ಸ್‌ವರ್ತ್‌ ಮತ್ತು ಹೆಮಿಂಗ್ವೇಯಲ್ಲಿ ನಾವು ಕಾಣುವುದು ಇವರ ಆದರ್ಶರೂಪಗಳನ್ನು. ನಿಜ ಜೀವನದಲ್ಲಿ ನಮಗೆ ಗೋಚರಿಸುವುದು ಇವರ ಕಚ್ಚಾ ರೂಪಗಳು ಮಾತ್ರ. ಆದರೆ ಕಚ್ಚಾ ರೂಪದಲ್ಲಾದರೂ ನಾವಿವರನ್ನು ಕಾಣುವುದರಿಂದಲೇ ಸಾಹಿತ್ಯದಲ್ಲಿ ನಮಗಿವರ ಗುರುತು ತಟ್ಟನೆ ಹತ್ತುವುದು!

ನಾನಿರುವ ಬಹು ಅಂತಸ್ತಿನ ಕಟ್ಟಡದ ಕೆಳಗಿನ ಮಾರ್ಗದ ಬದಿಗೆ ಒಬ್ಬಳು ಸಮಗಾರ ಹೆಂಗಸಿದ್ದಾಳೆ. ಇವಳು ಪ್ರತಿದಿನವೂ ತನ್ನ ಸಾಮಾನು ಸರಂಜಾಮುಗಳೊಂದಿಗೆ ಬಂದು ತನ್ನ ಸ್ಥಳದಲ್ಲಿ ಕೂತುಕೊಳ್ಳುತ್ತಾಳೆ. ದಾರಿ ಹೋಕರ ಪಾದರಕ್ಷೆಗಳನ್ನು ರಿಪೇರಿ ಮಾಡುವುದು ಅವಳ ಕಸುಬು. ಮುಂಜಾನೆಯಿಂದ ಸಂಜೆಯ ತನಕ ಅವಳು ತನ್ನ ಕೆಲಸದಲ್ಲಿ ನಿರತಳಾಗಿರುತ್ತಾಳೆ. ಈಗ ಅವಳಿಗೆ ಇಳಿವಯಸ್ಸು. ಆದರೂ ಕೆಲಸ ಮಾಡುತ್ತಾಳೆ. ಬೇಸಿಗೆಯ ಉರಿಬಿಸಿಲಲ್ಲೂ ಮಳೆಯಲ್ಲೂ ಅವಳು ಇರುತ್ತಾಳೆ. ಅವಳ ರಕ್ಷಣೆಗೆ ಅವಳಷ್ಟೇ ಹಳತಾದ ಒಂದು ಕೊಡೆ ಮಾತ್ರ ಇದೆ. ಈ ವಠಾರಕ್ಕೆ ಇವಳೇನೂ ಹೇಳುವಂತೆಯೂ ಇಲ್ಲ. ಕಾರಣ ಇಲ್ಲೆಲ್ಲಾ ಇಂಥವರೇ ಇರುವುದು -ತರಕಾರಿ, ಹಣ್ಣು ಮಾರುವವರು, ಹೂಮಾಲೆ ಕಟ್ಟಿ ಮಾರುವವರು, ಹಳೆ ಪೇಪರು ಕೊಳ್ಳುವವರು, ಮನೆಕೆಲಸಕ್ಕೆ ಹೋಗುವವರು, ಎಣ್ಣೆ ತಿಂಡಿ ಕರಿಯುವವರು, ಚಹಾ ಮಾಡುವವರು, ರದ್ದಿಯಲ್ಲಿ ಹುಡುಕುವವರು. ಒಬ್ಬೊಬ್ಬರದೂ ಒಂದೊಂದು ವಿಶಿಷ್ಪತೆ. ನಮ್ಮ ಮನೆಗೆಲಸಕ್ಕೆ ವಾರಕ್ಕೊಮ್ಮೆ ಬರುವ ಒಬ್ಬ ಮುಸ್ಲಿಂ ಹೆಂಗಸಿದ್ದಾಳೆ. ಇವಳು ಅದೆಷ್ಟೋ ಮನೆಗಳಲ್ಲಿ ದುಡಿಯುತ್ತಾಳೆ. ಸಂಪಾದಿಸುತ್ತಾಳೆ. ಆದರೆ ಇವಳ ಗಂಡ ಇವಳನ್ನು ಹೊಡೆದು ಬಡಿದು ಮಾಡುತ್ತಾನೆ. ಇವಳಿಂದ ದುಡ್ಡು ಕಸಿಯುತ್ತಾನೆ. ಇವನ ಹಿಂಸೆ ತಡೆಯಲಾರದೆ ಬೇರೆ ಬಿಡಾರ ಮಾಡಿಕೊಂಡಿದ್ದಾಳೆ. ಆದರೂ ಆತ ಇವಳನ್ನು ಪೀಡಿಸುವುದು ಬಿಟ್ಟಿಲ್ಲ. ಕೆಲವು ಸಲ ಇವಳ ಮುಖದಲ್ಲಿ ಗಾಯಗಳಿರುತ್ತವೆ. ಮಕ್ಕಳಿರುವ ಕಾರಣ ಇವಳು ಎಲ್ಲವನ್ನೂ ಸಹಿಸಿಕೊಂಡಿದ್ದಾಳೆ. ಜೀವನದಲ್ಲಿ ಯಾವ ಭದ್ರತೆಯೂ ಇವಳಿಗಿಲ್ಲ. ಇಳಿವಯಸ್ಸಿನಲ್ಲಿ ಇವಳ ಗತಿ ಏನೋ ದೇವರೇ ಬಲ್ಲ!

ಒಂದು ದಿನ ನನಗೆ ಸಂಜೆ ವೇಳೆ ಒಬ್ಬ ಮುದುಕ ದಾರಿಯಲ್ಲಿ ಕಾಣಸಿಕ್ಕಿದ. ಕೊಳಕಾದ ಒಂದು ಅಂಗಿಯನ್ನು ಹಾಕಿಕೊಂಡಿದ್ದ. ಹೆಗಲಲ್ಲಿ ಬಟ್ಟೆಗಳಿಂದ ತುಂಬಿದ್ದ ಒಂದು ಸಂಚಿ. ಊರುಗೋಲಿನ ಆಧಾರದ ಮೇಲೆ ಮೆಲ್ಲ ಮೆಲ್ಲನೆ ಹೆಜ್ಜೆಯಿಡುತ್ತಿದ್ದ. ಹಾಗೆ ಹೆಜ್ಜೆಯಿಡುತ್ತಿದ್ದಾಗ ಅವನು ಆಚೀಚೆ ತೊನೆದಾಡುತ್ತಿದ್ದ. ಕಾರಣ ಅವನಿಗೆ ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ. ದಪ್ಪ ಗಾಜಿನ ಕನ್ನಡಕವೊಂದು ಇತ್ತು. ಬಗಲಲ್ಲಿ ಕೆಲವು ರಟ್ಟಿನ ಹಾಳೆಗಳನ್ನು ಬಹುಜೋಪಾನವಾಗಿ ಒತ್ತಿಕೊಂಡಿದ್ದ. ಇವು ಯಾವುದೇ ಅಂಗಡಿಯ ಮುಂದೆ ಸಾಮಾನು ಇಳಿಸಿ ತೆಗೆದು ಬಿಸಾಕುವಂಥ ರಟ್ಟಿನ ಪೆಟ್ಟಿಗೆಯ ಹಾಳಗಳಾಗಿದ್ದವು. ನಾನು ಕುತೂಹಲದಿಂದ ಅವನನ್ನು ಮಾತಾಡಿಸಿದಾಗ ತಿಳಿದದ್ದು: ಈತ ಯಾವುದೋ ಹಳ್ಳಿಯಿಂದ ನಿರ್ಗತಿಕನಾಗಿ ಪೇಟೆಗೆ ಬಂದು ದೇವಸ್ಥಾನವೊಂದರ ಮುಂದೆ ಭಿಕ್ಷೆ ಬೇಡುತ್ತಿದ್ದಾನೆ. ದುಡಿತಕ್ಕೆ ದೇಹದಲ್ಲಿ ಚೈತನ್ಯವೇ ಇಲ್ಲ. ಕಣ್ಣಿನ ದೃಷ್ಟಿ ತೀರಾ ಕೆಟ್ತಿತೆಂದು ಸರಕಾರಿ ಆಸ್ತತ್ರೆಯೊಂದರಲ್ಲಿ ಎರಡು ವಾರ ಇದ್ದು ಈಗ ತನ್ನ ಯಥಾಸ್ಥಾನಕ್ಕೆ ಮರಳುತ್ತಿದ್ದಾನೆ. ಈ ರಟ್ಟಿನ ಹಾಳೆಗಳು ಅವನಿಗೆ ದಾರಿಯಲ್ಲಿ ಬಿದ್ದು ಸಿಕ್ಕಿದುವು. ರಾತ್ರಿ ಮಲಗಲು ಉಪಯೋಗವಾಗುತ್ತವೆಯೆಂದು ಅವನ್ನು ತೆಗೆದುಕೊಂಡಿದ್ದಾನೆ. ಅವನು ಉಪಯೋಗಿಸುತ್ತಿದ್ದ ಚಾದರವೊಂದನ್ನು ಕೆಲವು ದಿನಗಳ ಹಿಂದೆ ಯಾರೋ ಅಪಹರಿಸಿದ್ದರು! ರಟ್ಟಿನ ಹಾಳೆಗಳು ದೊರೆತದ್ದು ಅವನಿಗೆ ತುಂಬಾ ಸಂತೋಷ ತಂದಿದೆ.

ನಾನು ಅವನಿಗೆ ಸ್ವಲ್ಪ ಹಣವಿತ್ತೆ. ಅದಕ್ಕೂ ಮುಖ್ಯವಾಗಿ ಅವನ ಬೆನ್ನ ಮೇಲೆ ಕೈಯಿರಿಸಿ ಸಾಂತ್ವನ ಹೇಳಿದೆ. ಈ ಸಹಚರ್ಯೆ ಅವನಿಗಿಂತಲೂ ನನಗೇ ಹೆಚ್ಚು ಅಗತ್ಯೆವನಿಸಿದ್ದರಿಂದ ನಾನು ಹಾಗೆ ಮಾಡಿದೆನೇ? ತಿಳಿಯದು. ನಾವು ಯಾವುದೇ ಒಳ್ಳೆಯ ಸಾಹಿತ್ಯವನ್ನು ಓದಿದಾಗಲೂ ಅದು ಇಂಥ ಪರಿಚಿತ ವ್ಯಕ್ತಿಗಳಿಂದ ತುಂಬಿಕೊಂಡಹಾಗೆ ನಮಗೆ ಯಾಕೆ ಅನಿಸುತ್ತದೆ? ಯಾಕೆಂದರೆ ಒಳ್ಳೆಯ ಸಾಹಿತ್ಯ ನಮ್ಮನ್ನು ಮತ್ತೆ ನಮ್ಮ ಜಗತ್ತಿಗೇ ಮರಳಿಸುತ್ತದೆ. ಇದಕ್ಕಿಂತ ಹೆಚ್ಚಿನದನ್ನು ಯಾರೂ ಸಾಹಿತ್ಯದಿಂದ ಬಹುಶಃ ಬಯಸಲೂಬಾರದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೯
Next post ನಾಟಕ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…