ಮೊನ್ನೆ ನಾನು ಬೇಸಿಗೆಯಲ್ಲಿ ರಜಕ್ಕೆ ಊರಿಗೆ ಬಂದಾಗ ಭೀಮಣ್ಣ ತೀರಿಕೊಂಡ ಸುದ್ದಿಯನ್ನು ಅಮ್ಮ ಹೇಳಿದಳು. ಊಟ ರುಚಿಸಲಿಲ್ಲ. ಭೀಮಣ್ಣ ಗಟ್ಟಿ ಮುಟ್ಟಾಗೇ ಇದ್ದ. ನಮ್ಮಂತವರಿಗೆ ಅಮರಿಕೊಳ್ಳುವ ಡಯೊಬಿಟೀಸ್, ಬಿಪಿ ಆತನ ಬಳಿಯೂ ಸುಳಿದಿರಲಿಲ್ಲ ಆತನ ಜೀವನ ಶೈಲಿಯೇ ಅಂತದ್ದು, ಶ್ರಮಜೀವಿ ಸಾಯುವ ವಯಸ್ಸೇ ಆತನದಾದರು ಆತನ ಸಾವು ನನ್ನನ್ನು ಕ್ಷಣ ಗಲಿಬಿಲಿಗೊಳಿಸದಿರಲಿಲ್ಲ. ‘ಆರೋಗ್ಯವಾಗಿದ್ದನಲ್ಲ’ ಗೊಣಗಿದೆ. ಇತ್ತೀಚೆಗೆ ನೆಲಹಿಡಿದಿದ್ದ, ನೋಡಿಕೊಳ್ಳೋರು ಬೇರೆ ಇರಲಿಲ್ಲ ಮಲಗಿದ್ದಲ್ಲೇ ಸತ್ತು ಹೋದ. ಬೆಳಿಗ್ಗೆ ಪೂಜಾರಿ ಗುಡಿಗೆ ಬಂದಾಗಲೇ ವಿಷಯ ತಿಳಿದದ್ದು’ ಅಮ್ಮ ಅಂದಳು. ಆತನಿಗೆ ಆರು ಮಕ್ಕಳಿದ್ದೂ ಕಡೆ ದಿನಗಳಲ್ಲಿ ಯಾರು ನೋಡಿಕೊಳ್ಳಲಿಲ್ಲವೆಂಬುದಕ್ಕೆ ಅಮ್ಮ ನೀಡಿದ ಕಾರಣಗಳು ಸಕಾರಣವೆನಿಸಲಿಲ್ಲ. ಅದೇಕೋ ಹೃದಯ ಹಿಂಡಿದಂತಾಯಿತು.
ಹಾಸಿಗೆಯಲ್ಲುರುಳಿದೆ. ಗುಲ್ಬರ್ಗದ ಸುದೀರ್ಘ ಪ್ರಯಾಣದಿಂದಾಗಿ ದೇಹ ದಣಿದಿದ್ದರೂ ನಿದ್ರೆ ಹತ್ತಿರ ಸುಳಿಯಲಿಲ್ಲ. ಭೀಮಣ್ಣನನ್ನು ಮರೆತು ತುರ್ತಾಗಿ ನಿದ್ರೆ ಮಾಡಬೇಕು. ಬೆಳಿಗ್ಗೆ ಆಫೀಸೊಂದಕ್ಕೆ ಇನ್ಸ್ಪೆಕ್ಷನ್ಗೆ ಹೊಗೋದಿದೆ ಎಂದು ಕಣ್ಣು ಮುಚ್ಚಿದರೂ ಭೀಮಣ್ಣನೇ ಕಂಡು ಕಾಡಿದ. ಈ ಭೀಮ್ಮಣ್ಣ ಮತ್ತು ನನ್ನ ನಡುವೆ ಗುರುಶಿಷ್ಯರ, ಗೆಳೆಯನ, ಹಿತೈಷಿಯ, ಮಾರ್ಗದರ್ಶಿಯ ನಾನಾ ನಮೂನೆ ಸಂಬಂಧಗಳಿದ್ದವು. ಆಗ ನಾನಿದ್ದ ಕರುವಿನಕಟ್ಟೆಯಲ್ಲಿ ಒಂತರಾ ಹಳ್ಳಿಯ ವಾತಾವರಣ. ಹೆಚ್ಚಾಗಿ ಹಸುಕರು ಎಮ್ಮೆಗಳು ಬೀದಿಯಲ್ಲಿ ಅಡ್ಡಾಡುವುದು ಸಗಣಿ ಗಂಜಲ ಎಲ್ಲೆಂದರಲ್ಲಿ ಮಲಗಿರೋದು ಸಾಮಾನ್ಯ ದೃಶ್ಯ. ಅಲ್ಲಿದ್ದವು ಸಾಧಾರಣ ಮನೆಗಳೆ. ಈಗಿನಂತೆ ಆಗ ಮನೆಗಳು ಟೈಲ್ಸ್ ಭಾಗ್ಯ ಕಂಡಿರಲಿಲ್ಲ ಸಗಣಿ ಸಾರಣಿ ಮಾಡುತ್ತಿದ್ದುದೇ ಹೆಚ್ಚು. ಹೀಗಾಗಿ ಹೊರಗೂ ಒಳಗೂ ಗಂಜಲ ಪರಿಮಳ. ನೆಲಕ್ಕೆ ಕಡಪಕಲ್ಲು ಹಾಸಿದ ಮನೆಯವರೇ ಸ್ಥಿತಿವಂತರೆಂಬ ಕಾಲ. ಮನೆಯಲ್ಲೊಂದು ಸೈಕಲ್ ಇಟ್ಟಿವನೇ ಸಾಹುಕಾರ. ಆತ ರಾತ್ರಿ ಸೈಕಲ್ ಏರಿ ಹೊರಟರೆ ಅದನ್ನು ನೋಡಿ ನಮ್ಮಂತಹ ಹುಡುಗರು ಖುಷಿಪಟ್ಟರೆ ಹಳೆ ತಲೆಗಳ ಮೂತಿಯಲ್ಲಿ ಅಸೂಯೆ. ಹೀಗಾಗಿ ಕರುವಿನಕಟ್ಟೆ ಹೆಸರಿಗೆ ಸರಿಯಾಗಿ ದನಕರುಗಳ ದನಗಾಯಿಗಳ ಆವಾಸಸ್ಥಾನ. ಊರಿನ ದನಗಳೆಲ್ಲಾ ಕರುವಿನಕಟ್ಟೆ ಮುಖಾಂತರವೇ ಮೇವನ್ನರಸಿ ಕಾಡಿಗೆ
ಹೋಗಬೇಕಿತ್ತು. ಹಿಂದಿರುಗಿ ಬರುವ ಹಾದಿಯೂ ಅದೆ. ಕರುವಿನಕಟ್ಟೆ ವೃತ್ತದಲ್ಲಿ ದೊಡ್ಡದೊಂದು ಕಲ್ಲುತೊಟ್ಟಿ ಅದರಲ್ಲಿ ಸದಾ ನೀರು. ದನಕರು ಎಮ್ಮೆಗಳು ಹೋಗುವಾಗ ಬರುವಾಗ ನೀರಡಿಕೆ ನೀಗಿಸಿಕೊಳ್ಳುತ್ತಿದ್ದವು. ಬಳಿಯಲ್ಲಿ ಮುನ್ಸಿಪಾಲಿಟಿ ನಳ ಇದ್ದುದರಿಂದ ಅಲ್ಲಿ ನೀರು ಹಿಡಿವ ಪುರುಷರು ಮಹಿಳೆಯರು ಮನೆಗೆ ನೀರು ಅಡುಕುವಾಗ ಒಂದೆರೆಡು ಬಿಂದಿಗೆ ನೀರು ಹಿಡಿದು ಕಲ್ಲಿನ ತೊಟ್ಟಿಗೂ ಹಾಕುತ್ತಿದ್ದರು. ಆಗೆಲ್ಲಾ ಮನೆಗೊಂದು ನಳವೂ ಇರಲಿಲ್ಲ. ಬೀದಿ ನಳದಲ್ಲಿಯೇ ನೀರು. ಭೀಮಣ್ಣನೂ ನಾಲ್ಕಾರು ಹಸುಗಳ ಒಡೆಯ. ಅವುಗಳನ್ನು ಗುಡ್ಡಕ್ಕೆ ಹೊಡೆದುಕೂಂಡು ಹೊರಟವ ಸಂಜೆಗೆ ಹುಲ್ಲು ಹೊರೆಯನ್ನು ಹೊತ್ತು ಹಿಂದಿರುಗುತ್ತಿದ್ದ. ಮನೆತುಂಬಾ ಮಕ್ಕಳು. ಮೈ ಮುರಿದು ದುಡಿವ ಆತನಿಗೆ ಸಾಕುವುದು ಭಾರವೆನಿಸಲಿಲ್ಲ. ಹೊಲದಲ್ಲಿ ಜೋಳ ಮೆಣಸಿನಕಾಯಿ ಸೀಸನ್ ನಲ್ಲಿ ಸೇಂಗಾ ನಿತ್ಯ ತರಕಾರಿ ಬೆಳೆಯುತ್ತಿದ್ದ. ಹಾಲು ಮಾರುತ್ತಿದ್ದ. ಭೀಮಣ್ಣ ಪರರ ಬಳಿ ಕೈ ಚಾಚುವ ಜಾತಿಗೆ ಸೇರಿದವ. ಆ ಕಾಲದಲ್ಲಿಯೇ ಮೆಟ್ರಿಕ್ ಪಾಸ್ ಮಾಡಿದ್ದು ಚೆನ್ನಾಗಿ ಇಂಗ್ಲಿಷ್ ಬಲ್ಲವ. ಮನಸ್ಸುಮಾಡಿದ್ದರೆ ಯಾವುದಾದರು ತಾಲ್ಲೂಕ್ ಕಛೇರಿಯಲ್ಲಿ ಗುಮಾಸ್ತಿಕೆ ದರ್ಬಾರು ನಡೆಸಬಹುದಿತ್ತು. ಆದರೆ ಆತನಿಗೆ ಹತ್ತರಿಂದ ಸಂಜೆ ಐದೂವರೆವರೆಗೆ ಒಂದೆಡೆ ಗೂಟಕ್ಕೆ ಕಟ್ಟಿದಂತೆ ಕುಳಿತು ದುಡಿದು ಗುಲಾಮ ಗಿರಿ ಹಿಡಿಸಲಿಲ್ಲವೋ ಏನೋ. ಭೂಮಿ ಕಾಣಿ ಇದ್ದವ ತಾಲ್ಲೂಕ್ ಕಛೇರಿ ಮೆಟ್ಟಿಲು ತುಳಿಯಲಿಲ್ಲ.
ಮೆಟ್ರಿಕ್ ಪಾಸ್ ಮಾಡಿದವನಾದುದರಿಂದ ಎಸ್‌ಎಸ್‌ಎಲ್ ಸಿ ಓದುವ ನಮ್ಮಂತಹ ಹುಡುಗರಿಗೆ ತನ್ನ ಮಕ್ಕಳ ಜೊತೆಗೇ ಕೂರಿಸಿಕೊಂಡು ಪಾಠ ಹೇಳುತ್ತಿದ್ದ. ಆತ ಸಂಜೆ ಕಳೆಯುತ್ತಿದ್ದುದೇ ಹಾಗೆ. ನಾನೂ ಆತನ ಬಳಿ ಕಲಿಯಬೇಕೆಂದರೆ ಪೆಟ್ಟು ತಿನ್ನಲೇಬೇಕು. ಹೈಸ್ಕೂಲ್ ಉಪಾಧ್ಯಾಯರಿಗಿಂತ ಅಚ್ಚುಕಟ್ಟಾಗಿ ಪಾಠ ಮಾಡುತ್ತಿದ್ದನಾದ್ದರಿಂದ ಮಕ್ಕಳನ್ನು ಹೊಡೆದು ಬಡಿದರೂ ಕೇರಿ ಜನ, ಆತನ ಬಳಿ ಪಾಠಕ್ಕೆ ಹೋಗಲು ಹಿಂಜರಿದರೂ ತಾವು ನಾಕು ಏಟು ಹಾಕಿ ಆತನಲ್ಲಿಗೇ ಸಾಗು ಹಾಕುತ್ತಿದ್ದರು. ಭೀಮಣ್ಣನಲ್ಲಿ ಕಲಿತವರು ಫೇಲಾದ ಉದಾಹರಣೆಗಳಿರಲಿಲ್ಲ. ಪ್ರಮುಖ ಆಕರ್ಷಣೆ ಎಂದರೆ ಆತನದು ಫ್ರೀ ಟೂಶನ್. ಹೀಗಾಗಿ ಸಂಜೆ ಆತನ ಮನೆಯ ದನದ ಕೂಟ್ಟಿಗೆಯೇ ಟ್ಟುಟೊರಿಯಲ್ ಆಗಿ ರೂಪಾಂತರ ಹೊಂದುತ್ತಿತ್ತು. ಚಿತ್ರದುರ್ಗ ಈಗಿನಷ್ಟು ಬೆಳದಿರಲಿಲ್ಲದ ಕಾರಣವಾಗಿಯೋ ಎಂತದೋ ಭೀಮಣ್ಣ ಒಂದಿಷ್ಟು ಪ್ರಸಿದ್ಧನೆ. ಕರುವಿನಕಟ್ಟೆ ಭೀಮಣ್ಣನೆಂದರೆ ಯಾರಾದರೂ ತಟ್ಟನೆ ‘ಗೊತ್ತು ಬಿಡ್ರಿ’ ಅಂದು ಬಿಡುತ್ತಿದ್ದರು. ಹೂವು ಮಾರುವ ಮಾಲಕ್ಷ್ಮಜ್ಜಿಯಿಂದ ಹಿಡಿದು ಬೇವಿನಹಳ್ಳಿ ಪಂಡಿತರವರೆಗೂ ಭೀಮಣ್ಣನ ಖ್ಯಾತಿ ಹಬ್ಬಿತ್ತು.
ಖ್ಯಾತಿ ಎಂಬುದು ಪುಗಸಟ್ಟೆ ಬರುವುದಿಲ್ಲವೆಂಬ ಸತ್ಯ ಖ್ಯಾತಿ ಪಡೆದವರಿಗೂ ಸತ್ಯವಾಗಲೂ ಗೊತ್ತಿರುವ ಸಂಗತಿಯೆ. ದುರ್ಗದಲ್ಲಿ ಭೇಟಿ ಜಾತ್ರೆ ಉತ್ಸವ. ವರ್ಷದಲ್ಲೊಮ್ಮೆ ಆಕ್ಕ ತಂಗಿಯರಾದ ಬರಗೇರಮ್ಮ ತಿಪ್ಪಲಗಟ್ಟಮ್ಮ ಸಂಧಿಸುವುದು ವಾಡಿಕೆ. ಆ ದಿನ ಕುರಿ ಕೋಳಿಗಳು ದೇವಿಯರಿಗೆ ಬಲಿಯಾಗಿ ಭಕ್ತರ ಹೊಟ್ಟೆ ಸೇರುತ್ತವೆ. ನೆಂಟರಿಷ್ಟರ ದಾಳಿ. ರಾತ್ರಿ ಇಡೀ ಬಯಲು ನಾಟಕದ ಮೋಜು ಬೇರೆ. ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾಕನದ ಮಾದರಿ ನಡೆವ ಕುಣಿತಕ್ಕೆ ಮಹಾಭಾರತ ಪ್ರಸಂಗಗಳನ್ನೆ ಆರಿಸಿಕೊಳ್ಳುತ್ತಾರೆ. ಬಯಲಾಟ ಆಡುವ ಪಾತ್ರದಾರಿಗಳೆಲ್ಲ ಅನಕ್ಷರಸ್ಥರು. ಎಲ್ಲರದೂ ಕಂಠಪಾಠವೇ. ‘ದ್ರೌಪದಿ ವಸ್ತ್ರಾಪಹರಣ’ ಕರುವಿನ ಕಟ್ಟೆಯವರ ಮಾಸ್ಟರ್ ಪೀಸ್ ನಾಟಕ. ಅದರಲ್ಲಿ ಭೀಮಣ್ಣನದು ಭೀಮನ ಪಾತ್ರ. ತಲೆಗೆ ಭರ್ಜರಿ ಕಿರೀಟ. ಭಾರಿ ಗಾತ್ರದ ರೆಕ್ಕೆಗಳಂತಹ ಭುಜಕೀರ್ತಿಗಳು, ಕೈಗೆ ಕಪ್ಪ ತೋಳಬಂದಿ, ಕಾಲಿಗೆ ಗಗ್ಗರ ಗೆಜ್ಜೆ ಜಿರ್ಕಿ ಚಡಾವು.
ಮೋರೆಗೆ ಗಾಢವಾದ ಕೆಂಪು ಹಳದಿ ನೀಲಿ ಬಣ್ಣಗಳ ಚಿತ್ತಾರ ಗಲ್ಲಿ ಮೀಸೆ ಬಿಟ್ಟುಕೂಂಡು ಗಧೆ ಹಿಡಿದು ಭೀಮಣ್ಣ ರಂಗಕ್ಕೆ ಬಂದನಂದರೆ ಸೀಟಿ ಚಪ್ಪಾಳೆಗಳ ಮೊರೆತ. ಆತನ ಕುಣಿತ ಇಳಿವಯನಸಿನಲ್ಲು ಸೂರಗದೆ ಬೆರಗು ಹುಟ್ಟಿಸುವಂತದ್ದು. ಹರೆಯದಲ್ಲಿ ಹೇಗೆ ಕುಣಿಯುತ್ತಿದ್ದನೋ ನೆನೆಯಲೂ ಭಯವಾಗುತ್ತೆ. ಆತನ ಕುಣಿತಕ್ಕೆ ಹಿಮ್ಮೇಳ ಸರಿಸಾಥಿ ನೀಡದಿದ್ದರೆ ಗಧೆಯಲ್ಲೇ ಬಾರಿಸ ಬಿಡಲೂ ಹೇಸದವ. ಭೀಮಣ್ಣ ಮಂಥ್ ಹೇರಿದರೆ ಹಲಗೆ ಮುರಿಯಲೇಬೇಕೆಂಬ ಹೆಮ್ಮಯೊ ನಂಬಿಕೆಯೊ ಜನಗಳಲ್ಲಿತ್ತು. ಈ ಬಗ್ಗೆ ಸೋಡಿ ಕಟ್ಟುತ್ತಿದ್ದುದೂ ಉಂಟು. ಭೀಮಣ್ಣನೂ ಅಭಿಮಾನಿಗಳಿಗೆ ಎಂದೂ ನಿರಾಶೆ ಮಾಡಿದವನಲ್ಲ.
ಆತನ ಅಬ್ಬರ ಅರಚಾಟ ವಾಗ್ಝರೀಗೆ ಎದುರಾಳಿ ಘನಾ. ನೆಪಮಾತ್ರಕ್ಕೆ ನಾಟಕ ನೋಡಲು ಬಂದ ತಹಶೀಲ್ಪಾರ್ ಚಂದ್ರಯ್ಯ ಇತರ ಸಿನಿಕರೂ ಹೋಗದಂತೆ ಹಿಡಿದಿಡುವ ಪ್ರಭಾವಿ ಅಭಿನಯಪಟು ಭೀಮಣ್ಣನಲ್ಲಿ ಅಡಗಿದ್ದ. ಮಂದಿ ಎದ್ದು ಬಂದು ಭೀಮನ ವೇಷದಾರಿಗೆ ನೋಟುಗಳನ್ನು ಪಿನ್ ಮಾಡಿ ಆಯಿರು ಮಾಡುವಾಗ ತಹಶೀದ್ದಾರ ಸಾಹೇಬರೂ ಸಹ ಸರದಿ ಸಾಲಿನಲ್ಲಿ ನಿಂತು ಬಿಡುತ್ತಿದ್ದರು.
ಪ್ರತಿ ಭಾನುವಾರದಂದು ಭೀಮಣ್ಣ ಮನೆಗೆ ಸೌದೆ ತರಲು ಕಾಡಿಗೆ ಹೊರಡುತ್ತಿದ್ದ. ಆರು ಮೈಲಿ ದೂರವಾದರೂ ಹೋಗಬೇಕಿತ್ತು ಕೆಲವು ಹುಡುಗರೂ ಆತನೊಂದಿಗೆ ಹೊಗುತ್ತಿದ್ದರು. ಅವರಲ್ಲಿ ನಾನೂ ಒಬ್ಬ. ಬಡತನ, ಸೌದೆ ಕೊಳ್ಳುವುದು ಕಷ್ಟವಾಗುತ್ತಿತ್ತು. ‘ಮನೆಯಾಗೆ ಕುಂತೇನು ಮೊಟ್ಟೆ ಇಕ್ತಿಯಾ? ಬಾರ್ಲೆ ಕಾಡಿಗೆ ಸೌದೆ
ತಗೊಂಡು ಬರೋಣ. ನಿಮ್ಮವ್ವ ಹಗಲು ರಾತ್ರಿ ನಿಮ್ಮನ್ನು ಸಾಕೋಕೆ ಕಷ್ಟಪಡಾದು ಕಾಣಕಿಲ್ವಾ ಕಣ್ಣಗೇನ್ ಇಟ್ಕಂಡಿದ್ದೀ’ ಅಂತ ಗದರಿದ್ದ ನನಗೂ ಕಾಡು ಮೇಡು ಸುತ್ತುವ ಚಟ. ಆರೇಳು ಮೈಲಿ ಕಾಡುದಾರಿ ಸವೆಸಿದರೆ ಅಲ್ಲಿ ದಿ೦ಡಗ ಬನ್ನಿ ಲಂಟಾನ – ಮರಗಳ ಸಾಮ್ರಾಜ್ಯ. ಈಗಿನ ಹಾಗೆ ಅರಣ್ಯ ಸಂರಕ್ಷಣೆಯ ಕಾನೂನು ಜಾರಿಗೆ ಬಾರದ ದಿನಗಳವು. ಅಲ್ಲಿನ ಸಣ್ಣ ಪುಟ್ಟ ಮರಗಳನ್ನು ಕಡಿದು ಒಟ್ಟುಗೂಡಿಸಿ ಬಳ್ಳಿಯಿಂದ ಕಟ್ಟಿ ತಲೆಯ ಮೇಲೆ ಸಿಂಬಿ ಇಟ್ಟು ಹೊತ್ತು ತರಬೇಕು. ಹೋಗುವಾಗ ಪಿಕ್ನಿಕ್ ಮಾದರಿ. ಹೊರೆಹೊತ್ತು ಓಡಿ ಬರುವಾಗ ಪೀಕಲಾಟ, ಬೆವರು ಧಾರಾಕಾರ. ಎಷ್ಟೋ ಸಲ ಬಿಸಿಲು ಮಳೆಯಲ್ಲೇ ಕಾಡ ಪ್ರವಾಸ, ಸೌದೆ ಹೊರೆ ಪ್ರಯಾಸ, ಮೂರು ಕಡೆ ಮಾತ್ರ ವಿರಮಿಸಲು ಭೀಮಣ್ಣನ ಅನುಮತಿಯಿತ್ತು. ಮೊದಲಿಗೆ ಅಡವಿ ಮಲ್ಲೇಶ್ವರ ದೇವಸ್ಥಾನದ ಬಳಿ. ಅಲ್ಲಿನ ಪುಷ್ಕರಣಿಯಲ್ಲಿ ಈಜಾಡಿ ದೇವರಿಗೆ ಕಣ್ಣು ಮಾಡಿ ತಂದಿದ್ದ ಬುತ್ತಿ ಖಾಲಿ ಮಾಡಿ ಹೊರೆ ಹೊತ್ತೆವೆಂದರೆ ಸೆಕೆಂಡ ಸ್ಟಾಪ್ ತಿಮ್ಮಣ್ಣ ನಾಯಕನ ಕೆರೆ ಮುಂದುಲ ಚೌಡಮ್ಮನ ಬಂಡೆ. ಅಲ್ಲಿ ಕಾಲು ಗಂಟೆ ಕುಳಿತು ನೀರು ಕುಡಿದು ದಣಿವಾರಿಸಿಕೊಂಡು ಜಾಗಿಂಗ್ ತರಹೆ ಹೊರ ಹೊತ್ತು ಬೆವರುತ್ತಾ ನಡೆದರೆ ಮೂರನೆ ಮತ್ತು ಲಾಸ್ಟ್ ಸ್ಟಾಪ್ ಎಂದರೆ ನನಗೆ ಪ್ರಾಣ ಭಯ. ಕಾರಣ ಗುಡಿಯ ಎದುರು ಸ್ಮಶಾನ. ಎಷ್ಟೋ ಸಲ ನಾವು ಅಲ್ಲಿದ್ದಾಗಲೇ ಹೆಣಗಳು ಬರುತ್ತಿದ್ದವು ಕೆಲವು ಅರ್ಧಂಬರ್ಧ ಸುಟ್ಟಿರುತ್ತಿದ್ದವು, ಭೀಮಣ್ಣನಿಗಿಂತ ಮೊದಲೆ ಬಂದರೆ ಒಂಟಿಯಾಗಿ ಬಿಡುತ್ತೇನಲ್ಲ ಎಂದ ಹಿಂದುಳಿಯುತ್ತಿದ್ದೆ. ನನ್ನ ಪುಕ್ಕಲುತನ ಆತನಿಗೆ ಅರ್ಥವಾಗಲು ಬಹಳ ಸಮಯವೇನು ಹಿಡಿಯಲಿಲ್ಲ. ‘ಯಾಕಲೆ ತಮ್ಮಾ ಹಂಗೆ ಹೆದ್ರಿ ಸಾಯ್ತಿ! ಸತ್ತ ಮನುಷ್ಯನಿಂದ ಏನ್ ಕೇಡು ಮಾಡೋಕೆ ಆದಿತಲೆ! ಬದುಕಿರೋನ ಕಂಡ್ರೆ ಅಂಜಬೇಕು…. ಎಲ್ಲಾವನೂ ಒಂದಲ್ಲ ಒಂದಿನ ಇಲ್ಲಿ ಬಂದು ಮಕ್ಕಳಿಕ್ಕೇ ಬೇಕು’ ಸಿಡುಕುತ್ತಿದ್ದ. ನನಗೆ ಈಜು ಕಲಿಸಿದ್ದು ಆತನೆ. ಹೆದರಿ ಹೋಗಲೆಂದು, ಈಜುವ ನನ್ನ ತಲೆ ಹಿಡಿದು ಅದುಮಿ ಕಾಲಲ್ಲಿ ತುಳಿದು ನೀರಿನ ಥಳ ಕಾಣಿಸಿ ಬಿಡುತ್ತಿದ್ದ. ಈತನಿಂದಾಗಿಯೇ ನಾನು ಒಳ್ಳೆ ಈಜುಪಟು ಅನಿಸಿಕೊಂಡಿದ್ದು ಕಾಲೇಜು ಸ್ವಿಮಿಂಗ್ ಕಾಂಪಿಟೇಷನ್ನಿನಲ್ಲಿ ಫಸ್ಟ್ಪ್ರೈಜ್ ಗಿಟ್ಟಿಸಿದ್ದು ನೆನಪಿನಾಳದಿಂದ ಜಿಗಿಯುತ್ತದೆ. ಅಂತೆಯೇ ಒಮ್ಮೆ ಕೆಂಚಪ್ಪನ ಗುಡಿ ಸ್ಮಶಾನದ ಬಳಿ ಕೂತು ಸುಡುವ ಹೆಣದತ್ತ ನೋಡಲಾರದೆ ಬೇರೆತ್ತಲೋ ನೋಡುತ್ತಿದ್ದ ನನ್ನನ್ನು ಭೀಮಣ್ಣ ನೋಡಿ ನಕ್ಕ. ‘ನೋಡ್ಲಾ ತಮ್ಮಾ, ಯಾವಂದೋ ಹೆಣ ಪಾಪ ಹೆಂಗೆ ಅರೆಬರೆ ಸುಟ್ಟೈತೆ. ಕೆಳಗೆ ಬಿದ್ದಿರೋ ಕಟ್ಟಿಗೆ ಸರಿಯಾಗಿ ಹಾಕೋಣ್ಬಾ’ ಅಂದ ನನಗೆ ಇದೆಲ್ಲಾ ಉಸಾಬರಿ ಅನಿಸಿತು. ಆತ ಬಿಡಬೇಕಲ್ಲ. ಎಳೆದೋಯ್ದು ಆ ಕೆಲಸ ಮಾಡಿಸಿದ. ಪಕ್ಕದಲ್ಲಿ ಹೆಣ ಸುಡಲೆಂದೇ ನಿರ್ಮಿಸಿದ್ದ ಕಟ್ಟೆಯ ಮೇಲೆ ಕೂತ. ‘ಬಾರಯ್ಯಾ ಕುಂತ್ಕಾ’ ಎಂದು ಬಲವಂತವಾಗಿ ಕೂರಿಸಿಕೊಂಡ. ‘ಇದು… ಈ ಕಟ್ಟೆ’ ತೊದಲಿದೆ. ‘ಇದು ಶಿವನ ಪೀಠ… ಬದುಕಿದ್ದಂಗೆ ಕುಂತು ಮಜಾ ತಗಬೇಕು ಕಣಾ’ ಎಂದು ಮಷ್ಗಿರಿ ಮಾಡಿದ. ಆಮೇಲೆ ದಿನವೂ ಅಲ್ಲೇ ಕೂರೋಣ ಅನ್ನುತ್ತಿದ್ದ. ಯಾರ ಮನೆಯಲ್ಲಿ ಸಾವಾಗಲಿ ಅಲ್ಲಿಗೆ ಭೀಮಣ್ಣ ಆತನ ತಂಡ ಹೆಣ ಹೊರಲು ಹಾಜರ್. ನನ್ನನ್ನು ಬರಲೂ ಕಾಡುತ್ತಿದ್ದ ‘ಶಿವನ ಬಿಟ್ಟಿ ಕಣ್ಲಾ…. ದೇವರ ಕಾರ್ಯ. ಮದುವೆ ಮುಂಜಿಗೆ ಯಾರಾರು ಬತ್ತಾರೆ ಆದರೆ ಇಂಥ ಕೆಲಸಕ್ಕೆ ಹಿಂಜರಿಕೆ ಬಡ್ಡೆತ್ತೋವ್ಕೆ… ಬಾರ್ಲಾ ಗಂಡ್ಸೆ’ ಹಂಗಿಸುತ್ತಿದ್ದ. ಅಂಜುತ್ತಲೇ ಆತನೊಡನೆ ಹೋಗಿ ಹೆಣ ಹೊರಲು ಹೆಗಲು ಕೊಡುತ್ತಿದ್ದೆ. ಅದೇ ಅಭ್ಯಾಸವಾಗಿ ಹೆಣಕ್ಕೆ ಸ್ನಾನ ಮಾಡಿಸುವುದು ಪೇಟ ಸುತ್ತಿ ತಲೆಗೆ ಇಡುವುದು ಹಣೆಗೆ ಈಬತ್ತಿ ಬಳಿದು ಕುಂಕುಮ ಇಟ್ಟು ಹೂ ಮುಡಿಸಿ ಸಿಂಗಾರ ಮಾಡೋದರಲ್ಲೂ ಎಕ್ಸ್ಪರ್ಟ್ ಆಗಿ ಹೋದೆ. ಭಯ ಎಲ್ಲಿ ಯಾವಾಗ ಓಡಿ ಹೋಯಿತೋ!
ಹೀಗೆ ಊರಿನ ಏಕನಾಥಿ ಉಚ್ಚಂಗಿಯರ ಉತ್ಸವದಿಂದ ಮನುಷ್ಯನ ಕಟ್ಟ ಕಡೆಯ ಉತ್ಸವದವರೆಗೂ ಜೊತೆಗೂಡುತ್ತಿದ್ದ ಭೀಮಣ್ಣ ಕುಡುಕರ ಜೊತೆ ಕುಣಿದರೂ ಕುಡಿತಕ್ಕೆ ದಾಸನಾದವನಲ್ಲ. ಯಾರಲ್ಲೂ ಎಂದೂ ಸಲಿಗೆ ತೋರಿದವನಲ್ಲ. ಮೈ ಕೈ ನೋವು ಜಡ್ಡು ಅಂತ ಎಂದೂ ಕಂಬಳಿ ಹೊದೆಯದ ಕಡಕ್ ಮನುಷ್ಯ. ಆದರೆ ಜಡ್ಡಾದವರಿಗೆ ಕಾಡಿನಿಂದ ಸೊಪ್ಪು ತಂದು ಕಷಾಯ ಮಾಡಿಕೊಡುವಷ್ಟು ಉದಾರಿ. ಅಮೃತ ಬಳ್ಳಿ ಸಿಕ್ಕರೆ ಜೋಪಾನವಾಗಿ ಕಿತ್ತು ತಂದು ಮನೆ ಅಂಗಳದಲ್ಲಿ ಅರಳಿಸುತ್ತಿದ್ದ. ಯಾವ ಮದ್ದಿಗೆ ಯಾವ ಬಳ್ಳಿ ಎಂದು ಅರಿವಿದ್ದ ಅಂವಾ ಬೇವಿನಹಳ್ಳಿ ಪಂಡಿತರಿಗೂ ಬೇಕು. ಅವರಿಗೆ ಬೇಕಾದ ಬಳ್ಳಿ ಗಿಡ ತೊಪ್ಪಲು ತರಿದು ತಂದು ಕೊಟ್ಟಾಗಲು ಅಷ್ಟೇ, ಬಿಡಿಗಾಸು ಮುಟ್ಟುತ್ತಿರಲಿಲ್ಲ. ಯಲಕ್ಷನ್ ಬಂದೊಡನೆ ರಾಜಕೀಯ ಮುಖಂಡರೂ ಭೀಮಣ್ಣನ ನೆರವು ಕೋರುತ್ತಿದ್ದರು. ಆತ ಒಳಗೆ ಕಾಂಗ್ರೆಸ್ ಪಕ್ಷಪಾತಿ ಎಂದು ತಿಳಿದಿದ್ದರೂ ಆತನನ್ನು ಎಲ್ಲಾ ಪಕ್ಷದವರು ಓಲೈಸುತ್ತಿದ್ದದು ಅಚ್ಚರಿ.
ವೈರುದ್ದ್ಯವೆಂದರೆ ಇಷ್ಟೊಂದು ಜನಾರನುರಾಗಿಯಾಗಿದ್ದ ಭೀಮಣ್ಣ ಮಾತ್ರ ವೈಯಕ್ತಿಕ ಸಂಸಾರಿಕ ಜೀವನದಲ್ಲಿ ಅಸುಖಿ. ಆತನ ಹೆಂಡತಿ ಮಕ್ಕಳೀಗೆ ಆತನೆಂದರೇನೇ ವಿಪರೀತ ಭಯ. ಭಯದ ಹಿನ್ನೆಲೆಯಲ್ಲಿ ಅಸಡ್ಡೆ ತಿರಸ್ಕಾರ ಎಲ್ಲಕ್ಕಿಂತ ಹೆಚ್ಚಾಗಿ ಮತ್ಸರ! ಇಂತದ್ದಕ್ಕೆ ಅದರದೇ ಆದ ಕಾರಣವೂ ಇತ್ತು. ತನ್ನ ಮಕ್ಕಳು ವಿದ್ಯಾವಂತರಾಗಲಿ ಎಂಬ ಹಪಹಪಿಕೆಯಲ್ಲಿ ಮಕ್ಕಳನ್ನು ಕಠೋರವಾಗಿ ಶಿಕ್ಷಿಸುವ ಭೀಮಣ್ಣನೆಂದರೆ ಎಂಥವರಿಗೂ ಭಯ. ನಾವಾದರೂ ಪಾಠಕ್ಕೆ ಚಕ್ಕರ್ ಹಾಕಬಹುದು, ಆತನ ಮಕ್ಕಳೆಲ್ಲಿಗೆ ಹೋದಾರು? ಸಿಟ್ಟು ಬಂದರೆ ಕೈಗೆ ಸಿಕ್ಕಿದ್ದರಲ್ಲಿ ಬಡಿದೇ ಬಿಡುತ್ತಿದ್ದ. ರೈತನ ಮನೆಯಲ್ಲಿ ಬಾರ್ಕೋಲು ಕಣ್ಣಿ ದೊಣ್ಣೆಗಳಿಗೇನು ಬರ. ಅನೇಕ ಸಲ ಆತನ ಮಕ್ಕಳ ತಲೆ ಒಡೆದು ರಕ್ತ ಬಂದರೂ ಕೋಪ ಶಮನವಾಗದು. ಇಷ್ಟಾಗಿ ಒಬ್ಬ ಮಗನನ್ನು ಬಿಟ್ಟರೆ ಉಳೀದವರೆಲ್ಲಾ ಮರಗೆಲಸ ಗಾರೆಕೆಲಸ ಪೇಂಟಿಂಗ್ ಮೊರೆ ಹೋದರೆನ್ನಿ. ಒಬ್ಬ ಇಂಜಿನೀರಿಂಗ್ ಓದಲು ದಾವಣಗೆರೆ ಸೇರಿ ಭೀಮಣ್ಣ ಶಿಕ್ಷಯಿಂದ ಪಾರಾದ. ಓದದ ದಡ್ಡ ಮಕ್ಕಳೆಂದರೆ ಭೀಮಣ್ಣನಿಗೆ ಕಸಕ್ಕಿಂತ ಕಡೆ. ದುಡಿಯದ ಮಗನೊಬ್ಬನಿದ್ದ ನಿಂಗ ಅಂತ. ಅವನನನ್ನು ನೋಡಿದರೆ ಈತನಿಗೆ ಅಂಗಳಿನಿಂದ ನೆತ್ತಿಯವರೆಗೂ ಕಡುಕೋಪ. ಒಂದಿಷ್ಟು ತಪ್ಪು ಮಾಡಿದರು ಗೋಣಿಚೀಲದಲ್ಲಿ ತುಂಬಿ ಬಾಯಿ ಕಟ್ಟಿ ಇಲಿ ಹೆಗ್ಗಣಗಳಿಗೆ ಹೊಡೆವಂತೆ ದೊಣ್ಣೆಯಿಂದ ಬಾರಿಸುತ್ತಿದ್ದ. ನಿಂಗನ ಅರಚಾಟ ಕೇಳಿ ನೆರೆಯವರು ಬಂದು ದಮ್ಮಯ್ಯ ಗುಡ್ಡೆ ಹಾಕಿ ಬಿಡಿಸುತ್ತಿದ್ದುದುಂಟು. ಮನೆ ತುಂಬಾ ಮಕ್ಕಳು ದುಡಿಯುವವನು ಒಬ್ಬನೆ ಹೀಗಾಗಿ ಊಟ ಉಪಚಾರದಲ್ಲೂ ಸದಾ ಕಿರಿಕಿರಿ. ನೆಂಟರಿಷ್ಟರಿಂದ ದೂರದೂರ. ‘ಹೊಟ್ಟೆ ತುಂಬಾ ಮುದ್ದೆ ಬಾಯಿ ತುಂಬಾ ಅನ್ನ ಕಣ್ರಲಾ’ ಎಂದು ತಾಕೀತು ಮಾಡುತ್ತಿದ್ದ. ನಂಬಿದರೆ ನಂಬಿ ಬಿಟ್ಟರೆ ಬಿಡಿ ಹೊಲಕ್ಕೆ ಹೊರಟಾಗ ರಾಗಿ ಮುದ್ದೆ ಲೆಕ್ಕ ಮಾಡಿಸುತ್ತಿದ್ದ. ನೆಲ್ಲಕ್ಕಿ ಬನದಲ್ಲಿ ಕಡ್ಡಿ ಸಿಕ್ಕಿಸಿ ಅಳತೆ ಮಾಡಿ ಕಡ್ಡಿ ಮುರಿದು ಜೇಬಲ್ಲಿ ಇಟ್ಟುಕೊಂಡು ಹೋಗುವ. ಹೊಲದಿಂದ ಬಂದೊಡನೆ ಮುದ್ದೆ ಲೆಕ್ಕ ಅನ್ನದ ಅಳತೆ ತೆಗೆದುಕೊಳ್ಳುವಷ್ಟು ಶಿಸ್ತು ಅಥವ ಮನೆಯವರ ಪಾಲಿಗದು ಕ್ರೌರ್ಯ.
ಇದರ ಜೊತೆಗೆ ಹೆಂಡತಿ ಬಗ್ಗೆ ಕೊಂಚ ಅನುಮಾನ. ಆರೇಳು ಮಕ್ಕಳ ತಾಯಿ ಎಲುಬಿನ ಹಂದರದಂತಿದ್ದ ತಿಪ್ಪಮ್ಮನ ಬಳಿ ಭೀಮಣ್ಣನೇ ಮಲಗುವುದನ್ನು ಬಿಟ್ಟಿದ್ದಾನೆಂದು ಆಕೆಯೇ ನಮ್ಮಜ್ಜಿ ಎದುರು ಹೇಳಿಕೊಳ್ಳುತ್ತಿದ್ದುದುಂಟು. ಗಂಡ ಹೆಂಡರಿಬ್ಬರೂ ಹಂದಿ ನಾಯಿಯಂತೆ ಕಿತ್ತಾಡುತ್ತಾ ನಮ್ಮ ಮನೆಗೆ ದೂರು ತರುತ್ತಿದ್ದರು. ನಮ್ಮ ಅಜ್ಜಿ ಇವರ ಪಾಲಿನ ಜಡ್ಜ್. ಯಾವ ಗಂಡಸಿನ ಬಳಿಯಾದರೂ ನಿಂತು ಮಾತನಾಡಿದ್ದನ್ನು ಭೀಮಣ್ಣನೇನಾದರು ಕಂಡನೋ ತಿಪ್ಪಮ್ಮನ ಮೂಳೆಗಳಿಗೆ ನರಕಯಾತನೆ ತಪ್ಪಿದ್ದಲ್ಲ. ಸದಾ ತಿಪ್ಪಮ್ಮನ ವಕಾಲತ್ತು ವಹಿಸಿ ಭೀಮಣ್ಣನ ಮೇಲೆ ಹಲ್ಲೆಗೆ ಬರುತ್ತಿದ್ದ ತಿಪ್ಪಮ್ಮನ ತಮ್ಮ ಗೋವಿಂದನ ಬಗ್ಗೆಯೂ ಈತನಿಗೆ ಸಂಶಯ. ‘ತಮ್ಮನನ್ನೇ ಇಟ್ಕಂಡಿದಾಳ್ರಿ ರಂಡೆ’ ಎಂದು ಹರಿಹಾಯುತ್ತಿದ್ದ ‘ಕತ್ತೆಗೆ ಹೊಡ್ದಂಗೆ ಹೊಡಿತಿಯಲ್ಲೋ ರಾಕ್ಷಸ ನಿನ್ನ ಕೈ ಸೇದೋಗ…. ಏನ್ ಪಾಪ ಮಾಡಿ ನಿನ್ ಕಟ್ಕಂಡ್ಳೋ ಪಾಪಿ’ ನಮ್ಮ ಅಜ್ಜಿ ಬಯ್ಯುವಾಗ ಅಪರಾಧಿಭಾವವೋ ತನ್ನ ತೀರ್ಮಾನಗಳ ಬಗ್ಗೆ ತನಗೇ ಅಪನಂಬಿಕೆಯೋ ಅಜ್ಜಿಗೆ ಎದುರಾಡದೆ ಬೈಸಿಕೊಳ್ಳುತ್ತಿದ್ದ. ಆಗ ನಾವೆಲ್ಲ ಮಲಗಿದವರಂತೆ ನಟಿಸಿ ಅಜ್ಜಿಯ ಪಂಚಾಯಿತಿಯನ್ನು ಕೇಳಿಸಿಕೊಂಡು ಖುಷಿ ಪಡುತ್ತಿದ್ದೆವು. ಪ್ರಾಯಶಃ ಭೀಮಣ್ಣನಿಗೆ ಬೈಯುತ್ತಿದ್ದ ಏಕೈಕ ಗಟಾವಾಣಿಯೆಂದರೆ ನಮ್ಮ ಅಜ್ಜಿ ಎಂಬ ಹೆಮ್ಮೆ ಕೂಡ ನನ್ನ ಮತ್ತು ನನ್ನ ತಂಗಿಯಲ್ಲಿತ್ತು. ಭೀಮಣ್ಣನ ತೀವ್ರ ಒದೆತಕ್ಕೆ ತಿಪ್ಪಮ್ಮನ ಬಳೆಗಳೆಲ್ಲಾ ಒಡೆದು ಕೈಗೆ ಚುಚ್ಚಿಕೊಂಡು ರಾಣಾರಕ್ತ. ತಲೆಯನ್ನು ಗೋಡೆಗೆ ಘಟ್ಟಿಸಿದ್ದರಿಂದಾಗಿ ತಲೆಯಲ್ಲಿಯೂ ರಕ್ತ ಹೆಪ್ಪುಗಟ್ಟಿರುತ್ತಿತ್ತು. ಈತನ ಸಂಶಯ ಬುದ್ಧಿಯನ್ನು ಮಾತ್ರ ಕೇರಿಯ ಜನ ಸುತ್ರಾಂ ಒಪ್ಪಲಿಲ್ಲ, ಬುದ್ಧಿ ಹೇಳಲೂ ಹೋಗಲಿಲ್ಲ. ಹೀಗೆ ಭೀಮಣ್ಣನಿಗೆ ಭೀಮಣ್ಣನೇ ಸಾಟಿ. ಆತ ನಡೆದಿದ್ದೇ ದಾರಿ. ಒಬ್ಬ ಮಗ ಇಂಜಿನೀರ್ ಆಗಿ ಓಡಾಡುವಾಗ ಭೀಮಣ್ಣ ಮೀಸೆ ತೀಡಿ ಸಂಭ್ರಮಿಸಿದ್ದುಂಟು. ಮಂಡಿ ಮುಟ್ಟುವ ಪಂಚೆ, ದೊಗಲೆ ಅಂಗಿ, ತಲೆಗೊಂದು ತೆಳ್ಳನೆಯ ಪೇಟ ಸುತ್ತಿ ಹೆಗಲ ಮೇಲೊಂದು ಟವೆಲ್ ಹಾಕಿ ಆನೆ ಗಾಲಿನ ಭೀಮಣ್ಣ ಸ್ವಲ್ಪ ಕುಂಟುವನಂತೆ ನಡೆದು ಬಂದಂತೆ ಭಾಸವಾಯಿತು. ಎದ್ದು ಕೂತು ಸಿಗರೇಟ್ ಹಚ್ಚಿದೆ. ಅಟ್ಟ ಏರಿ ಯಾರೋ ಬರುವ ಸದ್ದು. ‘ಇನ್ನು ನಿದ್ದೆ ಬರಲಿಲ್ಲವೇನೋ? ಎನ್ನುತ್ತಲೇ ಅಮ್ಮ ಬಂದಳು ಸಿಗರೇಟ್ ಆರಿಸಿದ ಹೊಗೆ ಹೋಗಲಾಡಿಸಲಿಲ್ಲ. ನಾನಾಗಿಯೇ ಭೀಮಣ್ಣನ ಬಗ್ಗೆ ಪ್ರಸ್ತಾಪಿಸಿದೆ. ‘ಎಲ್ಲಾ ಚೆನ್ನಾಗಿತ್ತಲಮ್ಮ ಕೊನೆಗೆ ಹೀಗೇಕಾಯ್ತು?’ ಅಮ್ಮ ಹೇಳಿದ್ದು ಇಷ್ಟು.
ಮಕ್ಕಳೆಲ್ಲಾ ದೊಡ್ಡವರಾಗಿದ್ದರು ದುಡಿಮೆ ದಾರಿಯನ್ನೂ ಕಂಡುಕೊಂಡಿದ್ದರು. ಹೆಣ್ಣು ಮಕ್ಕಳಿಬ್ಬರ ಮದುವೆ ಮಾಡಿ ಮುಗಿಸಿದ್ದ. ಆದರೆ ಮೂಲೆ ಹಿಡಿವ ದಿನಗಳಲ್ಲೂ ಮಕ್ಕಳ ಮೇಲೆ ಸೊಸೆಯಂದಿರ ಮೇಲೆ ಹಿಡಿತ ಸಾಧಿಸುವ ಚಪಲವೇ ಆತನ ಕೊನೆಯ ದಿನಗಳ ದುರಂತಕ್ಕೆ ಕಾರಣವಾಗಿರಬಹುದು. ತಂದೆಯನ್ನು ಒಳಗೇ ದ್ವೇಷಿಸುತ್ತಾ ಬೆಳೆದ ಮಕ್ಕಳು, ತಿರಸ್ಕಾರ ಬೆಳೆಸಿಕೊಂಡ ಹೆಂಡತಿ ಭೀಮಣ್ಣನನ್ನು ಅಕ್ಷರಶಃ ಮೂಲೆಗುಂಪು ಮಾಡಿದರು. ತಮಗಿಷ್ಟ ಬಂದ ಕಡೆ ಸಂಬಂಧ ಬೆಳೆಸಿದರು. ಮದುವೆ ಮುಂಜಿಗಳಾದವು. ಹೆಸರಿಗಷ್ಟೇ ಭೀಮಣ್ಣ ಯಜಮಾನ. ಯಜಮಾನಿಕೆಯೆಲ್ಲಾ ತಿಪ್ಪಮ್ಮನ ಕೈವಶ. ಮಕ್ಕಳು ತಿರುಗಿಬಿದ್ದರೂ ಗಂಡನ ಪರಕ್ಕೆ ಹೆಂಡತಿ ನಿಲ್ಲಲಿಲ್ಲ. ನೆರೆಯವರು ತಲೆ ಹಾಕಲಿಲ್ಲ. ಭೀಮಣ್ಣನ ರೋಷಕ್ಕೆ ಮಾತ್ರ ಮುಪ್ಪು ಬರಲೇ ಇಲ್ಲ. ‘ಮಕ್ಕಳಿಗೆ ನನ್ನ ಮೇಲೆ ಚಾಡಿ ಹೇಳ್ತಿ ಏನೇ ಬೋಸುಡಿ’ ಎಂದು ಹೆಂಡತಿಯತ್ತ ಬಾರ್ಕೊಲ್ ಬೀಸುವಾಗ ನಿಂಗ ಅದನ್ನೇ ಕಿತ್ತುಕೊಂಡು ಭೀಮಣ್ಣನಿಗೆ ಜಾಡಿಸಿದ. ಆಮೇಲೂ ಒಂದೆರಡು ಸಲ ಹೊಡೆದ. ಎಂಜಿನೀರ್ ಮಗನೂ ಬೆಂಬಲಕ್ಕೆ ಬರಲಿಲ್ಲ. ಜೊತೆಗೆ ಕರೆದೊಯ್ದು ಇಟ್ಟುಕೊಳ್ಳಲಿಲ್ಲ. ‘ಮನೆ ಬಿಟ್ಟು ಹೋಗ್ತಿನ್ರೋ ಬೇವಾರ್ಸಿಗಳಾ. ನಿಮ್ಮ ಅನ್ನ ನಾಯಿ ತಿನ್ಲಿ.’ ಅಂದವನೇ ಒಂದು ದಿನ ಮನೆ ಬಿಟ್ಟು ಪಾದದೇವರ ಗುಡಿ ಸೇರಿದ. ಯಾರೂ ಬಾರಪ್ಪ ಎನ್ನಲಿಲ್ಲ. ಯಾರಾದರೂ ನಮ್ಮಂತವರು ಕರುಣೆ ತೋರಿ ಒಯ್ದಿಟ್ಟರೆ ಊಟ. ಅದಕ್ಕೂ ಮನೆಯವರು ಅಡ್ಡ ಬಂದರು. ‘ಅವನಿಗೇನ್ ನಿಮ್ಮ ಸಪೋರ್ಟು? ಯಾರು ಕೂಳು ಹಾಕದೆ ಹೋದ್ರೆ ನಾಯಿ ಹಂಗೆ ಮನೆಗೆ ಬಂದು ಬಿದ್ದಿರ್ತಾನೆ’ ಅಂತ ಜಗಳಕ್ಕೆ ನಿಂತರು. ಅನ್ಯರು ಎಷ್ಟು ದಿನ ತಾನೆ ನೋಡಿಕೊಂಡಾರು. ಕುಣಿದು ಕುಪ್ಪಳಿಸಿ ಹಲಗೆ ಮುರಿಯುವ ಭೀಮಣ್ಣ ಗುಡಿ ಮೆಟ್ಟಿಲುಗಳನ್ನು ಇಳಿಯುವಾಗ ಊರುಗೋಲು ಜಾರಿ ಉರುಳಿ ಬಿದ್ದ. ನಡೆದಾಡದಂತಾದ. ಮೂಳೆ ಗೀಳೆ ಮುರಿದಿತ್ತೋ ಏನೋ. ಆತನನ್ನು ವಿಚಾರಿಸಲು ಹೋದರೆ ಮನೆಯವರ ಆಕ್ಷೇಪಣೆ. ನೆಲಹಿಡಿದ ಭೀಮಣ್ಣ ಮಲಗಿದ್ದಲ್ಲೇ ಎಲ್ಲಾ ಮಾಡಿಕೊಳ್ಳುವಾಗ ಪೂಜಾರಿಯು ತಕರಾರು ತೆಗೆದ ‘ಬೇರೆ ಜಾಗ ನೋಡ್ಕೊಳಯ್ಯಾ’ ಎಂದು ರೇಗಾಡಿದ. ಮಕ್ಕಳಿಗೂ ಕರೆಸಿ ಬೈದ. ಪೂಜಾರಿಯ ಮಾತನ್ನು ಮಕ್ಕಳು ಕಿವಿಗೆ ಹಾಕಿಕೊಳ್ಳಲಿಲ್ಲ. ಭೀಮಣ್ಣನು ಅಷ್ಟೇ. ಆತನ ನರಳಾಟ ಅರಚಾಟ ರಾತ್ರಿ ಕೇರಿಗೆಲ್ಲಾ ಕೇಳುವಂತಾಯಿತು. ಒಂದು ದಿನ ಇದ್ದಕ್ಕಿದ್ದಂತೆ ಆರ್ತನಾದ ಕೇಳಲಿಲ್ಲ. ಕೇರಿ ಜನಕ್ಕೆ ನೆಮ್ಮದಿಯ ನಿದ್ರೆ. ಪೂಜಾರಿ ಆತನನ್ನು ಬೀದಿಗಟ್ಟುವ ಮೊದಲೇ ಭೀಮಣ್ಣ ಸಂತೆ ಮುಗಿಸಿ ಕಂತೆ ಒಗೆದಿದ್ದ. ಆಮೇಲೆ ಮಕ್ಕಳೆಲ್ಲಾ ಸೇರಿ ಹೆಣ ಸಿಂಗಾರ ಮಾಡಿ ಮೆರವಣಿಗೆ ಬಾಜಾ ಭಜಂತ್ರಿ ತರಿಸಿ ಕೆಂಚಪ್ಪನ ಗುಡಿ ಸ್ಮಶಾನ ಸೇರಿಸಿದರು. ಕೇರಿ ಜನ ಬೆರಗಾಗುವಂತೆ ಎರಡು ಕುರಿ ಕಡಿಸಿ ತಿಥಿ ಮಾಡಿ ಊರಿಗೆಲ್ಲಾ ಊಟ ಹಾಕಿಸಿದರು. ಹೇಳುತ್ತಾ ಅಮ್ಮ ಕಣ್ಣೊರೆಸಿಕೊಂಡಳು. ನನ್ನ ಕಣ್ಣುಗಳಲ್ಲೂ ನೀರಾಡಿತು.
ವರ್ಷಗಳಲ್ಲಿ ಒಂದೆರಡು ಸಲ ಬಂದಾಗ ಭೀಮಣ್ಣನನ್ನು ಹಾದಿಯಲ್ಲಿ ಕಂಡಾಗ ಮಾತನಾಡಿಸಿದೆ. ಆತ ನನ್ನ ಬಳಿ ಮಾತನಾಡುವ ಉಮೇದು ತೋರಲಿಲ್ಲ. ಸ್ವಭಾವವೇ ಹಾಗೆ ಮುಲಾಜಿಲ್ಲದವ. ಕಳೆದ ವರ್ಷ ಬಂದಾಗ ಎದುರು ಸಿಕ್ಕರೂ ಆತನಾಗಲಿ ನಾನಾಗಲಿ ಮಾತನಾಡಿಸುವ ಗೊಡೆವೆಗೇ ಹೋಗಿರಲಿಲ್ಲ. ಈಗ ಕರುಳು ಹೊಯ್ದಾಡುತ್ತೆ ಹೀಗೆಲ್ಲಾ ಏಕಾಯ್ತೋ! ಆತ ತೀರಿಕೊಂಡು ವಾರವಷ್ಟೇ ಆಗಿದ್ದರೂ ಕೇರಿ ಜನ ಯಾರೂ ನನ್ನ ಬಳಿ ಆತನ ಪ್ರಸ್ತಾಪವನ್ನೇ ಮಾಡದಿದ್ದಾಗ ಮಾನವನ ಅಂತಃಕರಣದ ಬಗ್ಗೆಯೇ ಸಂಶಯಿಸುವಂತಾಯಿತು.
ಬೆಳಿಗ್ಗೆ ಸ್ವಲ್ಪ ಬೇಗನೆ ಎದ್ದು ನಾನು ತುರುವನೂರು ಕಡೆ ಎಂದಿನಂತೆ ವಾಕ್ ಹೋಗದೆ ಕೆಂಚಪ್ಪನ ಗುಡಿ ಸ್ಮಶಾನದತ್ತ ಕಾಲು ಹಾಕಿದೆ. ಸ್ಮಶಾನದ ಮೂಲ ರೂಪವೇ ಬದಲಾಗಿತ್ತು! ಸಿಲಿಕಾನ್ ಒಲೆಗಳು ಕಂಡವು ಆಳೆತ್ತೆರದ ಕಾಂಪೌಂಡ್ ಶಿವಾಲಯ ಉದ್ಯಾನವನ ಬೇರೆ. ‘ಮುಕ್ತಿ ಧಾಮ’ ಎಂಬ ನಾಮಫಲಕ! ಬದಲಾಗದೇ ಹೋದದ್ದು ಭೀಮಣ್ಣ ಮಾತ್ರ ಅನಿಸಿತು. ಅರಳಿ ಮರದ ಕೆಳಗೆ ಕೂತು ಸಿಗರೇಟ್ ಹಚ್ಚಿದೆ.
*****