ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ‘ಬಿಸಿಯೂಟ’ ಕಾರ್ಯಕ್ರಮವನ್ನು ಆರಂಭಿಸಿದ್ದು ಕೆಲವು ನಿರ್ದಿಷ್ಟ ಉದ್ದೇಶಗಳ ಬದ್ಧತೆಯಲ್ಲಿ, ಪ್ರಾಥಮಿಕ ಶಾಲೆಗೆ ಮಕ್ಕಳು ಸೇರುವಂತೆ ಮಾಡುವುದು ಮತ್ತು ಶಾಲೆ ಸೇರಿದ ಮಕ್ಕಳು ಬಿಡದಂತೆ ನೋಡಿಕೊಳ್ಳುವುದು ಮೂಲ ಉದ್ದೇಶವಾದರೂ ಒಟ್ಟು ಯೋಜನೆಯ ಅಂತರಂಗದಲ್ಲಿ ಮುಖ್ಯ ಸಾಮಾಜಿಕ ಸಂಗತಿಗಳು ಸೇರಿಕೊಂಡಿದ್ದವು.
ಶಾಲೆ ಬಿಡುವವರ ಸಂಖ್ಯೆ ಅತಿಯಾಗಿರುವುದು ಮತ್ತು ಕಲಿಕೆಯ ಏಕಾಗ್ರತೆಗೆ ಭಂಗ ವುಂಟಾಗುತ್ತಿರುವುದು ಹಸಿವಿನಿಂದ ಮತ್ತು ಅಪೌಷ್ಠಿಕ ಆಹಾರದಿಂದ ಎಂಬುದಾಗಿ ಕೆಲವು ಶೈಕ್ಷಣಿಕ ಆಯೋಗಗಳು ಅಭಿಪ್ರಾಯಪಟ್ಟಿದ್ದನ್ನು ಆಧರಿಸಿ ಮಕ್ಕಳಿಗೆ ಕಡೇ ಪಕ್ಷ ೩೦೦ ಕ್ಯಾಲೊರಿಗಳ ಆಹಾರ ಕೊಡಬೇಕೆಂದು ನಿರ್ಧರಿಸಲಾಯಿತು. ಈ ಆಹಾರವು ಬೇಯಿಸಿದ ರೂಪದಲ್ಲಿರ ಬೇಕೆಂದು ೨೦೦೧ರಲ್ಲಿ ಸುಪ್ರೀಂಕೋರ್ಟು ನಿರ್ದೇಶನ ನೀಡಿತು. ಈ ಹಿನ್ನೆಲೆಯಲ್ಲಿ ಶ್ರೀ ಎಸ್.ಎಂ. ಕೃಷ್ಣ ನೇತೃತ್ವದ ಕರ್ನಾಟಕ ಸರ್ಕಾರವು ‘ಅಕ್ಷರ ದಾಸೋಹ’ ಎಂಬ ಹೆಸರಿನಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ಕೊಡುವ ಕಾರ್ಯಕ್ರಮವನ್ನು ೨೦೦೧ರಲ್ಲಿ ದೇವದುರ್ಗ ತಾಲ್ಲೂಕಿನ ಅರಕೇರಾ ಗ್ರಾಮದಲ್ಲಿ ವಿದ್ಯುಕ್ತವಾಗಿ ಆರಂಭಿಸಿತು. ಆಗ ಶ್ರೀ ಎಚ್. ವಿಶ್ವನಾಥ್ ಶಿಕ್ಷಣ ಸಚಿವರಾಗಿದ್ದರು. ೨೦೦೨ರ ವರೆಗೆ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಿಗೆ ಸೀಮಿತ ವಾಗಿದ್ದ ‘ಅಕ್ಷರ ದಾಸೋಹ’ ಕಾರ್ಯಕ್ರಮವು ೨೦೦೩ರಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸಲ್ಪಟ್ಟಿತು. ಮೊದಲು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರ ಲಭ್ಯವಾಗುತ್ತಿದ್ದ ಈ ಸೌಲಭ್ಯವನ್ನು ಇತ್ತೀಚೆಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ. ಈಗ ಒಟ್ಟು ಸುಮಾರು ೭೩ ಲಕ್ಷ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆಯುತ್ತಿದಾರೆ.
‘ಅಕ್ಷರ ದಾಸೋಹ’ ಯೋಜನೆಯನ್ನು ಅನುಷ್ಠಾನಕ್ಕೆ ತರುವಾಗ ಅಡುಗೆ ಮಾಡಲು ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತ ಮಹಿಳೆಯರನ್ನು ತೊಡಗಿಸಬೇಕೆಂಬ ಮಾರ್ಗ ಸೂಚಿಗನುಗುಣವಾಗಿ ಈಗ ಈ ವರ್ಗಗಳ ಶೇ. ೬೫ ರಿಂದ ೭೦ರಷ್ಟು ಹೆಣ್ಣುಮಕ್ಕಳು ಅಡುಗೆ ಕೆಲಸದಲ್ಲಿ ತೊಡಗಿದ್ದಾರೆ. ಇವರಿಗೆ ಕನಿಷ್ಠ ವೇತನ ತಿಂಗಳಿಗೆ ೪೦೦ ರಿಂದ ೮೫೦ರ ವರೆಗೆ ಇದೆ. ಅಡುಗೆಯವರು, ಅಡುಗೆ ಮುಖ್ಯಸ್ಥರು, ಸಹಾಯಕರು – ಹೀಗೆ ಶ್ರೇಣಿಗನುಗುಣವಾಗಿ ವೇತನ, ಶಾಲಾ ಮುಖ್ಯೋಪಾಧ್ಯಾಯರಿಂದ ಹಾಜರಾತಿಯ ಉಸ್ತುವಾರಿ.
ದಲಿತ ಹಾಗೂ ಕೆಲವು ‘ಕೆಳ ಜಾತಿ’ಗಳವರು ಮಾಡಿದ ಅಡುಗೆಯನ್ನು ಊಟ ಮಾಡಲು ನಿರಾಕರಿಸಿದ ಘಟನೆಗಳು ಆರಂಭದಲ್ಲಿ ನಡೆದರೂ ಅನಂತರ ಒಂದು ಒಪ್ಪಿತ ವಾತಾವರಣ ಮೂಡಿತು. ಸ್ವಲ್ಪ ದಿನಗಳ ನಂತರ ಮೊಟ್ಟೆ ಕೊಡಬೇಕೆ ಬೇಡವೆ ಎಂಬ ಪ್ರಶ್ನೆಯನ್ನು, ರಾಷ್ಟ್ರೀಯ ಸಮಸ್ಯೆಯೆಂಬಂತೆ ಚರ್ಚಿಸಲಾಯಿತು. ಮೊಟ್ಟೆ ಬೇಡ ಎಂದು ಹೇಳಿದವರಲ್ಲಿ ಅನೇಕರು ಪ್ರತಿಷ್ಠಿತ ಮಠಾಧೀಶರು, ಸರ್ಕಾರಗಳು ಪ್ರತಿಷ್ಠಿತ ಮಠಾಧೀಶರ ಮಾತು ಮೀರುವು ದುಂಟೆ? ಮೊಟ್ಟೆ ಒಡೆದು ಹೋಯಿತು! ಆನಂತರ ‘ಅಕ್ಷರ ದಾಸೋಹ’ದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಸುದ್ದಿಯಾಯಿತು. ಭಷ್ಟಾಚಾರಿಗಳಿಗೆ ಮಕ್ಕಳಾದರೇನು, ಮಹಿಳೆಯರಾದರೇನು? ಅನ್ನಕ್ಕೆ ಕನ್ನ ಹಾಕಿ ಸುಖಿಸುವ ವಿಕೃತಿಗೆ ಮನುಷ್ಯತ್ವವಾದರೂ ಎಲ್ಲಿರುತ್ತದೆ? ಭ್ರಷ್ಟಾಚಾರದ ಜೊತೆ ಜೊತೆಗೇ ಅದಕ್ಷ ನಿರ್ವಹಣೆಯ ಅಂಶವೂ ಆದ್ಯತೆ ಪಡೆಯಿತು. ಸರ್ಕಾರದ ಮಾನವೀಯ ಕಾರ್ಯಕ್ರಮವನ್ನು ಖಾಸಗಿಯವರ ಕೈಗೆ ಕೊಟ್ಟು ಕೈಮುಗಿಯಲು ಇದಕ್ಕಿಂತ ಕಾರಣಬೇಕೆ? ಜನತೆಯ ಸರ್ಕಾರ ಮಾಡಬೇಕಾದ ಕೆಲಸವೆಂದರೆ ಭ್ರಷ್ಟಾಚಾರಕ್ಕೆ ಬರೆ ಎಳೆಯುವುದು ಮತ್ತು ನೌಕರಶಾಹಿಯ ಅದಕ್ಷತೆಗೆ ಚಾಟಿ ಬೀಸುವುದು. ಇಷ್ಟಕ್ಕೂ ‘ಅಕ್ಷರ ದಾಸೋಹ’ದ ಭ್ರಷ್ಟಾಚಾರ ಮತ್ತು ಅದಕ್ಷತೆಯ ಅಂಶಗಳು ತೀರಾ ದೊಡ್ಡ ಪ್ರಮಾಣದಲ್ಲಿರಲಿಲ್ಲ. ಆದರೆ ನಮ್ಮ ‘ಉನ್ನತ’ ನೌಕರಶಾಹಿಗೆ ಮತ್ತು ಸರ್ಕಾರಕ್ಕೆ (ಯಾವುದೇ ಪಕ್ಷದ್ದಿರಲಿ) ಕೈತೊಳೆದುಕೊಳ್ಳಲು ಇಷ್ಟು ಸಾಕಾಯಿತು. ಆರಂಭಕ್ಕೆಂದು – ಹಿಂದಿನ ಸರ್ಕಾರ – ಇಸ್ಕಾನ್ ಮತ್ತು ಅದಮ್ಯಚೇತನ ಎಂಬ ಎರಡು ಸಂಸ್ಥೆಗಳಿಗೆ ‘ಅಕ್ಷರ ದಾಸೋಹ’ಕ್ಕಾಗಿ ಕೆಲವು ಶಾಲೆಗಳನ್ನು ವಹಿಸಿಕೊಟ್ಟಿತು. ಈಗಿನ ಸರ್ಕಾರ ತನ್ನ ‘ಅಜೆಂಡಾಕ್ಕನುಗುಣವಾಗಿ’ ಕೆಲವು ಮಠಮಾನ್ಯಗಳಿಗೂ ‘ಅಕ್ಷರ ದಾಸೋಹ’ದ ಹೊಣೆಯನ್ನು ವರ್ಗಾಯಿಸಿತು. ಹಾಗಂತ, ಈ ಯಾವ ಸಂಸ್ಥೆಗಳೂ ಉಚಿತವಾಗಿ ಊಟ ನೀಡುತ್ತಿಲ್ಲ. ಸರ್ಕಾರವೇ ಒಬ್ಬ ವಿದ್ಯಾರ್ಥಿ(ನಿ)ಗೆ ಒಂದು ಊಟಕ್ಕೆ ತಲಾ ಮೂರು ರೂಪಾಯಿ ಇಪ್ಪತ್ತು ಪೈಸೆಯನ್ನು ನೀಡುತ್ತಿದೆ. ಈಗ ವರ್ಷವೊಂದಕ್ಕೆ ಸರ್ಕಾರವು ೬೦೦ ಕೋಟಿ ರೂಪಾಯಿ ಗಳನ್ನು ಅಕ್ಷರ ದಾಸೋಹ ಯೋಜನೆಗಾಗಿ ಖರ್ಚು ಮಾಡುತ್ತಿದೆ. ಹಾಗಾದರೆ ಈ ‘ಸ್ವಯಂ ಸೇವಾ’ ಸಂಸ್ಥೆಗಳು ಮಾಡುತ್ತಿರುವುದೇನು? ತಾವೇ ಮಕ್ಕಳಿಗೆ ಊಟ ಕೊಡುತ್ತೇವೆಂಬ ಪ್ರಚಾರ ಮತ್ತು ಸ್ವಯಂ ಸೇವೆ. ಸರ್ಕಾರದ ಹಣದಲ್ಲಿ ತಮ್ಮ ಸಂಸ್ಥೆಗೆ ಹೆಸರು, ಮಕ್ಕಳ ಹಸಿವು ಇಂಗಿಸಿದ ಕೀರ್ತಿ. ನಿಜ; ಈ ಸಂಸ್ಥೆಗಳೂ ಸ್ವಲ್ಪ ಹಣವನ್ನು ವಿನಿಯೋಗಿಸುತ್ತಿರಬಹುದು. ಆದರೆ ಸರ್ಕಾರವು ತಾನೇ ಸೊಗಸಾಗಿ ನಿರ್ವಹಿಸಬಹುದಾಗಿದ್ದ ಯೋಜನೆಯನ್ನು ಕಂಡವರ ಕೀರ್ತಿಗೆ ಕಪ್ಪಕಾಣಿಕೆಯಂತೆ ಒಪ್ಪಿಸುವುದು ಪ್ರಜಾಪ್ರಭುತ್ವದ ಅಂತಃಶಕ್ತಿಗೆ ಮಾಡುವ ಅವಮಾನ.
ನಿಜ; ಅದಕ್ಷ ನಿರ್ವಹಣೆಯ ಕಾರಣಕ್ಕಾಗಿ ಕೆಲ ರಾಜ್ಯ ಸರ್ಕಾರಗಳು ಈ ಕಾರ್ಯಕ್ರಮವನ್ನು ಸರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ಆದ್ದರಿಂದ ದಕ್ಷತೆಯೇ ಬೇಡವೆಂದು ತೀರ್ಮಾನಿಸಲಾದೀತೆ? ತಮಿಳುನಾಡು ಕಡೆ ನೋಡಿ. ಅಲ್ಲಿನ ಸರ್ಕಾರಗಳು ಸುಮಾರು ೨೦ ವರ್ಷಗಳಿಂದ ಬಿಸಿಯೂಟ ಕಾರ್ಯಕ್ರಮವನ್ನು ದಕ್ಷವಾಗಿ ನಿರ್ವಹಿಸುತ್ತ ಬಂದಿವೆ. ತಮಿಳು ನಾಡು ಸರ್ಕಾರಕ್ಕೆ ಸಾಧ್ಯವಾದದ್ದು ಕರ್ನಾಟಕ ಸರ್ಕಾರಕ್ಕೆ ಯಾಕೆ ಸಾಧ್ಯವಿಲ್ಲ?
ಹೋಗಲಿ, ಖಾಸಗಿ ಸಂಸ್ಥೆಗಳಾದರೂ ಹೆಚ್ಚುವರಿಯಾಗಿ ಸ್ವಂತ ಹಣವನ್ನು ವಿನಿಯೋಗಿಸುತ್ತಿವೆಯೆ? ಒಂದು ಮಾಹಿತಿಯಂತೆ ಇಸ್ಕಾನ್ ಸಂಸ್ಥೆಯು ಒಬ್ಬ ವಿದ್ಯಾರ್ಥಿ(ನಿ)ಗೆ ಒಂದು ಊಟಕ್ಕೆ ತಲಾ ೬ ರೂಪಾಯಿ ಕೊಡುಗೆಯನ್ನು ದೇಶ ವಿದೇಶಗಳಿಂದ ಸಂಗ್ರಹಿಸುತ್ತಿದೆ. ಈ ಸಂಸ್ಥೆಯು ಈಗ ೫,೬೭,೬೬೨ ಮಕ್ಕಳಿಗೆ ಬಿಸಿಯೂಟ ನೀಡುವ ಹೊಣೆ ಹೊತ್ತಿದ್ದು, ಇದನ್ನೇ ಮುಂದು ಮಾಡಿ ಸುಮಾರು ೬೦ ಕೋಟಿ ರೂಪಾಯಿಗಳಷ್ಟು ಹಣ ಸಂಗ್ರಹ ಮಾಡಿ, ಅದನ್ನು ಬೇರೆ ಉದ್ದೇಶಗಳಿಗೆ (ಷೇರು ಮಾರುಕಟ್ಟೆ – ಇತ್ಯಾದಿ) ಬಳಸಿದೆಯೆಂದು ಆರೋಪಿಸಲಾಗುತ್ತಿದೆ. ಈ ಬಗ್ಗೆ ಕಳೆದ ವಿಧಾನಸಭೆಯಲ್ಲಿ ಚರ್ಚೆಯೂ ಆಗಿದೆ. ಹೀಗೆ ಹಸಿವನ್ನು ಬಂಡವಾಳ ಮಾಡಿಕೊಳ್ಳುವ ಪ್ರವೃತ್ತಿ ಒಂದು ಕಡೆಯಾದರೆ, ಆಹಾರ ಪದ್ಧತಿಯನ್ನು ತಮ್ಮ ಸಂಸ್ಥೆ ಹಾಗೂ ಮಠಮಾನ್ಯಗಳ ಪದ್ಧತಿಗೆ ಒಗ್ಗಿಸುತ್ತಿರುವುದು ಇನ್ನೊಂದು ಕಡೆ. ತಾವು ತಿನ್ನುವುದಿಲ್ಲ ಎನ್ನುವ ಕಾರಣಕ್ಕಾಗಿ ಕೆಲವು ಸಂಸ್ಥೆಗಳು ಈರುಳ್ಳಿ, ಬೆಳ್ಳುಳ್ಳಿಯನ್ನು ಅಡುಗೆಗಾಗಿ ಬಳಸುತ್ತಿಲ್ಲ. ಮೊಟ್ಟೆಯಂತೂ ಇಲ್ಲವೆಂದರೆ ಈರುಳ್ಳಿಯೂ ಬೇಡವೆ? ಆಹಾರಪದ್ಧತಿಯ ಮೇಲೆ ಆಕ್ರಮಣವೆ?
ಆಯಾ ಊರುಗಳಲ್ಲಿ ಆಯಾ ಊರಿನ ಹೆಣ್ಣು ಮಕ್ಕಳನ್ನೇ ತೊಡಗಿಸಿ ಆಯಾ ಪ್ರದೇಶದ ಆಹಾರಪದ್ಧತಿಗನುಗುಣವಾಗಿ ಬಿಸಿಯೂಟ ಕೊಟ್ಟರೆ ಅದು ಸಾಂಸ್ಕೃತಿಕ ಹಾಗೂ ಸಾಮಾಜಿಕ ನ್ಯಾಯವನ್ನೂ, ವೈವಿಧ್ಯತೆಯ ಮೌಲ್ಯವನ್ನೂ ಎತ್ತಿಹಿಡಿದುತಾಗುತ್ತದೆ. ಆದರೆ ಈಗ ಸುಮಾರು ೨೦ ಸಾವಿರ ಮಹಿಳೆಯರನ್ನು ಕೆಲಸದಿಂದ ಎತ್ತಿ ಹಾಕಲಾಗಿದೆ. ಇನ್ನೂ ಒಂದು ಲಕ್ಷ ಮಹಿಳೆಯರು ಈ ಕೆಲಸದಲ್ಲಿ ತೊಡಗಿದ್ದು ಖಾಸಗೀಕರಣವನ್ನು ವಿಸ್ತರಿಸಿ ಅವರನ್ನೂ ಎತ್ತಿ ಎಸೆಯಲು ಬಿ.ಜೆ.ಪಿ. ಸರ್ಕಾರ ಚಿಂತಿಸುತ್ತಿದೆ. ತಮ್ಮನ್ನು ಭೇಟಿ ಮಾಡಿದ ಬಿಸಿಯೂಟ ಕೆಲಸಗಾರರ ಸಂಘಟನೆಯವರಿಗೆ ಮಾನ್ಯ ಮುಖ್ಯಮಂತ್ರಿಗಳು “ಇಡೀ ರಾಜ್ಯಕ್ಕೆ ಬಿಸಿಯೂಟ ಖಾಸಗೀಕರಣ ಮಾಡುತ್ತೇವೆ” ಎಂದು ಧಮಕಿ ಹಾಕಿ ಕಳಿಸಿದ್ದಾರೆ. ಇದರಿಂದ ಅಲ್ಪ ಸಂಭಾವನೆಗೆ ಕೆಲಸ ಮಾಡುತ್ತಿದ್ದ ಒಂದು ಲಕ್ಷ ಇಪ್ಪತ್ತು ಸಾವಿರ ಮಹಿಳೆಯರು ಬೀದಿಗೆ ಬಿದ್ದಂತಾಗುತ್ತದೆ. ಒಂದು ಕಡೆ ‘ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದು ಇಂತಿಷ್ಟು ದಿನಗಳಾದರೂ ಕಡ್ಡಾಯವಾಗಿ ಕೆಲಸ ಕೊಡಬೇಕು ಇಲ್ಲವೆ ಭತ್ಯೆ ಕೊಡಬೇಕು ಎಂದು ಹೇಳುತ್ತದೆ. ಇನ್ನೊಂದು ಕಡೆ ರಾಜ್ಯ ಸರ್ಕಾರವು ಬಿಸಿಯೂಟ ನೀಡುತ್ತಿದ್ದ ಮಹಿಳೆಯರನ್ನು ಕೆಲಸದಿಂದ ತೆಗೆದು ಬಿಸಿ ಮುಟ್ಟಿಸಲು ನೋಡುತ್ತಿದೆ, ಎಂಥ ವಿಪರ್ಯಾಸ! (ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯೂ ಇಲ್ಲಿ ಸರಿಯಾಗಿ ಜಾರಿಯಾಗಿಲ್ಲವೆಂಬುದು ಬೇರೆ ವಿಷಯ.)
‘ಅಕ್ಷರ ದಾಸೋಹ’ – ಬಿಸಿಯೂಟ ಯೋಜನೆಯು ಶಾಲಾ ಮಕ್ಕಳ ಹಾಜರಾತಿ ವೃದ್ಧಿ ಮತ್ತು ಶಾಲಾ ಸೇರ್ಪಡೆಗಳ ಒತ್ತಾಸೆಯಲ್ಲಿ ಹುಟ್ಟಿದ್ದರೂ ಈ ಯೋಜನೆಗೆ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಹಾಗೂ ಎಲ್ಲ ಜಾತಿ-ವರ್ಗಗಳವರನ್ನು ಅಡುಗೆ ಕಾರ್ಯಕ್ಕೆ ತೊಡಗಿಸಿ ಕೊಳ್ಳುವ ಮೂಲಕ ಸಾಮಾಜಿಕ ಸಮಾನತೆ ಮತ್ತು ಸಾಮರಸ್ಯದ ಅಂತಃಸತ್ವವನ್ನು ಒಳಗೊಂಡಿದೆ. ಜಾತಿ-ವರ್ಗಭೇದವಿಲ್ಲದೆ ಎಲ್ಲ ಮಕ್ಕಳೂ ಸಹಪಂಕ್ತಿ ಭೋಜನ ಮಾಡುವ ಸದವಕಾಶವನ್ನು ಕಲ್ಪಿಸಿದೆ. ಖಾಸಗೀಕರಣದಿಂದ ಸಾಮಾಜಿಕ ಸಾಮರಸ್ಯದ ಆಶಯಕ್ಕೆ ಕೊಡಲಿಪೆಟ್ಟು ಬೀಳುತ್ತದೆ. ಜಾತಿ ಮತ್ತು ವರ್ಗಗಳನ್ನು ಮೀರಿದ ಮನೋಧರ್ಮವನ್ನು ಬೆಳೆಸುವ ಒಂದು ಸಾಧನವಾಗಿಯೂ ಮುಖ್ಯವಾಗಿದ್ದ ‘ಅಕ್ಷರದಾಸೋಹ’ವು ಖಾಸಗಿಯವರ ಸಾಧನವಾದರೆ ಆಯಾ ಖಾಸಗಿ ಸಂಸ್ಥೆ ಮತ್ತು ಮಠಮಾನ್ಯಗಳ ಮನೋಧರ್ಮಕ್ಕೆ ಪೂರಕವಾಗಿಬಿಡುತ್ತದೆ.
ಬಿಸಿಯೂಟ ಕಾರ್ಯಯೋಜನೆಯ ಮಾರ್ಗಸೂಚಿಯಲ್ಲಿ ಕೇಂದ್ರ ಸರ್ಕಾರವು ಯಾವುದೇ ಜಾತಿ ಹಾಗೂ ಧರ್ಮದ ಪ್ರಸಾರಕ್ಕೆ ಈ ಯೋಜನೆಯ ಬಳಕೆಯಾಗಬಾರದೆಂದು ಸ್ಪಷ್ಟವಾಗಿ ಹೇಳಿದೆ. ಇಸ್ಕಾನ್, ಮತ್ತು ಮಠಮಾನ್ಯಗಳಿಗೆ ಹಾಗೂ ನಿರ್ದಿಷ್ಟ ಜಾತಿಮತ ಪ್ರಧಾನ ಸಂಸ್ಥೆ ಗಳಿಗೆ ಈ ಯೋಜನೆಯ ನಿರ್ವಹಣೆಯನ್ನು ವಹಿಸಿಕೊಟ್ಟರೆ ಏನಾಗುತ್ತದೆ? ನೇರವಾಗಿ ಹೇಳದೆ ಇದ್ದಾಗಲೂ ಆಯಾ ಸಂಸ್ಥೆ, ಧರ್ಮ, ಜಾತಿ, ಮಠಮಾನ್ಯಗಳ ಪ್ರಚಾರವಾಗುತ್ತದೆ. ಆದ್ದರಿಂದ ಇದು ಮಾರ್ಗಸೂಚಿಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಒಂದು ವೇಳೆ ಮಾರ್ಗಸೂಚಿಯಲ್ಲಿ ಈ ಅಂಶ ಇಲ್ಲದಿದ್ದರೂ ನಿರ್ದಿಷ್ಟ ಮತಧರ್ಮ ಮತ್ತು ಪಂಥ ಪ್ರಚಾರಗಳಿಗೆ ಪೂರಕವಾಗದಂತೆ ‘ಅಕ್ಷರ ದಾಸೋಹ’ ಯೋಜನೆಯನ್ನು ಅನುಷ್ಠಾನಗೊಳಿಸುವುದು ಸಾಮಾಜಿಕ ಹಾಗೂ ನೈತಿಕ ಜವಾಬ್ದಾರಿಯಾಗಿದೆ. ಆದರೆ ಇದೇ ಮಾರ್ಗಸೂಚಿಯಲ್ಲಿ ಖಾಸಗಿಯವರಿಗೂ ವಹಿಸಬಹುದೆಂಬ ಅಂಶವಿದ್ದು ಅದನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ಒಂದು ಪೈಸೆಯನ್ನೂ ಮುಟ್ಟದೆ ಖಾಸಗಿ ಸಂಸ್ಥೆಗಳು ಅಕ್ಷರ ದಾಸೋಹ ಯೋಜನೆಯನ್ನು ಜಾತಿ-ಧರ್ಮದೂರವಾಗಿ ನಿರ್ವಹಿಸಲು ಸಿದ್ಧರಿದ್ದಾರೆಯೆ? ಇಷ್ಟಕ್ಕೂ ಸರ್ಕಾರವು ತನ್ನ ಮಹತ್ವದ ಮಾನವೀಯ ಯೋಜನೆಯನ್ನು ಖಾಸಗೀಕರಣಗೊಳಿಸಿ ಅಮಾನವೀಯವಾಗಿಸುವುದು ಸರಿಯೆ?
ಎಲ್ಲಕ್ಕೂ ಖಾಸಗೀಕರಣವೇ ಮದ್ದು ಎನ್ನುವುದಾದರೆ, ಜನಪ್ರತಿನಿಧಿಗಳನ್ನು ನಾವ್ಯಾಕೆ ಆರಿಸಬೇಕು? ವಿಧಾನಸಭೆ, ಲೋಕಸಭೆ ಯಾಕೆ ಬೇಕು? ಆಡಳಿತ ನಡೆಸಲು ಸರ್ಕಾರದ ರಚನೆ ಯಾಕೆ ? ಸರ್ಕಾರದ ಹಣದಲ್ಲಿ ಸಾಕಷ್ಟು ಸಂಬಳ ಸಾರಿಗೆ ಪಡೆಯುವ ನೌಕರ ವರ್ಗ ವಾದರೂ ಯಾಕಿರಬೇಕು? ಎಲ್ಲವನ್ನೂ ಖಾಸಗಿಯವರಿಗೆ ವಹಿಸಿ, ವ್ಯವಹಾರ ನಡೆಸಿ ಸಹಿ ಹಾಕಿದರಷ್ಟೇ ಸಾಕಲ್ಲವೆ? ಒಂದು ಮಹತ್ವದ ಯೋಜನೆಯನ್ನು ಸರಿಯಾಗಿ ನಡೆಸಲು ಸಾಧ್ಯವಾಗದಷ್ಟು ಅದಕ್ಷತೆಯಿದ್ದರೆ ಆಡಳಿತ ನಡೆಸುವುದೇ ಬೇಡ. ಅಧಿಕಾರ ಬಿಟ್ಟು ಆರಾಮವಾಗಿ ಆಡ್ಡಾಡಿಕೊಂಡಿರಲಿ.
ಈ ವಿಷಯದಲ್ಲಿ ಮೈಗಳ್ಳತನಕ್ಕೆ ಅವಕಾಶವಿರಬಾರದು. ‘ಕಳ್ಳನಿಗೊಂದು ಪಿಳ್ಳೆ ನೆವ’ ಎಂಬಂತಾಗಬಾರದು. ಇಲ್ಲಿರುವುದು ಪ್ರಜಾಪ್ರಭುತ್ವ ಪ್ರಕ್ರಿಯೆಯ ಪ್ರಶ್ನೆ; ಮಕ್ಕಳ ಮನೋಧರ್ಮದ ಪ್ರಶ್ನೆ; ಸಾಮಾಜಿಕ ಸಾಮರಸ್ಯದ ಪ್ರಶ್ನೆ. ಸಾಮುದಾಯಿಕ ಭಾಗವಹಿಸುವಿಕೆಯ ಪ್ರಶ್ನೆ. ಜೊತೆಗೆ ಲಕ್ಷಕ್ಕೂ ಹೆಚ್ಚು ಹೆಣ್ಣು ಮಕ್ಕಳ ಉದ್ಯೋಗದ ಪ್ರಶ್ನೆ. ಮಕ್ಕಳಿಗೆ ಊಟ ಬಡಿಸುವ ‘ತಾಯ್ತನ’ವನ್ನು ಕಿತ್ತುಕೊಳ್ಳುವ ಪ್ರಶ್ನೆ.
ಹಳ್ಳಿಯ ಹೆಣ್ಣು ಮಕ್ಕಳಾಗಲಿ, ಪಟ್ಟಣದ ಹೆಣ್ಣುಮಕ್ಕಳಾಗಲಿ, ಜಾತಿ-ಭೇದವಿಲ್ಲದೆ ಅಡುಗೆ ಮಾಡಿ, ಮಕ್ಕಳಿಗೆ ಉಣಬಡಿಸುವ ತಾಯಿ ಮನಸ್ಸು ಬೇರೆ ಯಾರಿಗೆ ಬಂದೀತು ? ಅಮ್ಮಂದಿರು, ಅಕ್ಕಂದಿರು, ಪ್ರೀತಿ ವಾತ್ಸಲ್ಯದಿಂದ ಉಣಬಡಿಸುವ ಆಹಾರಕ್ಕೆ ಇರುವ ತಾಯ್ತನದ ಆಯಾಮ ಇನ್ನೆಲ್ಲಿ ಸಿಕ್ಕಿತು? ಊರ ಅಮ್ಮಂದಿರು, ಅಕ್ಕಂದಿರು ಬೇಯಿಸಿದ ಭಾವನಾತ್ಮಕ ಅಡುಗೆಯ ಆನಂದ ಮತ್ತೆಲ್ಲಿ ಉಕ್ಕಿತು ? ಈ ಸಾಮಾಜಿಕ ಸಾಮರಸ್ಯಕ್ಕೆ ಬೆಲೆ ಕಟ್ಟಲು ಸಾಧ್ಯವೆ? ತಾಯ್ತನದ ಮನೋಧರ್ಮವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ‘ಅಕ್ಷರ ದಾಸೋಹ’ವನ್ನು ಸರ್ಕಾರವು ಕಟ್ಟುನಿಟ್ಟಾಗಿ ನಿರ್ವಹಿಸಿದರೆ ಆಗುವ ಸಾಮಾಜಿಕ ಲಾಭ ಆರ್ಥಿಕ ಲಾಭವನ್ನು ಮೀರಿದ್ದು. ಆದ್ದರಿಂದ ‘ಅಕ್ಷರ ದಾಸೋಹ’ವನ್ನು ಹಸಿವು ಮತ್ತು ಅಕ್ಷರದ ಸಂಬಂಧದಲ್ಲಿ ಅರ್ಥಮಾಡಿಕೊಳ್ಳುವುದರ ಜೊತೆಗೆ ತಾಯ್ತನದ ನೆಲೆಯಲ್ಲೂ ನಿರ್ವಹಿಸುವುದು ಮುಖ್ಯವೆಂದು ನಾನು ಭಾವಿಸುತ್ತೇನೆ. ಈ ಎಲ್ಲ ಕಾರಣಗಳಿಗಾಗಿ ಬಿಸಿಯೂಟ ಖಾಸಗೀಕರಣವನ್ನು ವಿರೋಧಿಸುತ್ತೇನೆ.
*****